ದುರ್ಯೋಧನ ಸ್ಪೀಕಿಂಗ್‌


Team Udayavani, Jan 5, 2018, 11:32 AM IST

05-22.jpg

ದರ್ಶನ್‌ ಅಷ್ಟು ಹೊತ್ತು ಮಾತಿಗೆ ಸಿಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಏಕೆಂದರೆ, ಒಂದು ಕಡೆ ಸತತವಾಗಿ ಶೂಟಿಂಗ್‌ ನಡೆಯುತ್ತಲೇ ಇತ್ತು. ನೂರಾರು ಡ್ಯಾನ್ಸರ್‌ಗಳು, ಸಹ ಕಲಾವಿದರು, ಕುದುರೆಗಳು … ಇವೆಲ್ಲದರ ಮಧ್ಯೆ ಆನೆಯ ಮೇಲೆ ಕುಳಿತು ದರ್ಶನ್‌ ಬರುವ ಒಂದು ಸನ್ನಿವೇಶವನ್ನು ಚಿತ್ರೀಕರಿಸಲಾಗುತ್ತಿತ್ತು. ಸಂಜೆಯೊಳಗೆ ಹಾಡಿನ ಶೂಟಿಂಗ್‌ ಮುಗಿಯಬೇಕಿತ್ತು. ಹಾಗಾಗಿ ದರ್ಶನ್‌ ಬಿಡುವು ಮಾಡಿಕೊಂಡು ಬಂದು “ಕುರುಕ್ಷೇತ್ರ’ ಚಿತ್ರದ ಕುರಿತಾಗಿ ಅಷ್ಟೊಂದು ಮಾತನಾಡಬಹುದು ಎಂಬ ನಿರೀಕ್ಷೆ ಹೆಚ್ಚೇನೂ ಇರಲಿಲ್ಲ. ಆದರೆ, ಒಂದಿಷ್ಟು ದೃಶ್ಯಗಳ ಚಿತ್ರೀಕರಣ ನಂತರ, ಆನೆಯಿಂದ ಕೆಳಗಿಳಿದು ಬಂದ ದರ್ಶನ್‌, ಬೆಂಗಳೂರಿನಿಂದ ಹೈದರಾಬಾದ್‌ನ ರಾಮೋಜಿ ಫಿಲ್ಮ್ಸಿಟಿಯವರೆಗೂ ಬಂದ ಪತ್ರಕರ್ತರನ್ನು ನಗುಮುಖದಿಂದಲೇ ಬರಮಾಡಿಕೊಂಡರು. ಅಷ್ಟೇ ಅಲ್ಲ, “ಕುರುಕ್ಷೇತ್ರ’ದಲ್ಲಿ ದುರ್ಯೋಧನನ ಪಾತ್ರ ಮಾಡಿರುವ ದರ್ಶನ್‌ ತಮ್ಮ ಪಾತ್ರ ಮತ್ತು ಚಿತ್ರದ  ಬಗ್ಗೆ ಮನಬಿಚ್ಚಿ ಮಾತನಾಡಿದರು. ಇನ್ನೆಲ್ಲಾ ಅವರ ಮಾತುಗಳಲ್ಲೇ ಓದಿಬಿಡಿ …

ಉಲ್ಟಾ ಓಡ್ತಿದ್ದೇವೆ
ಮಹಾಭಾರತದ ಕುರುಕ್ಷೇತ್ರ ಬಗ್ಗೆ ಎಷ್ಟು ಹೇಳಿದರೂ ಸಾಲದೋ, ಹಾಗೆಯೇ “ಕುರುಕ್ಷೇತ್ರ’ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇಲ್ಲಿ ನಿಜವಾದ ಹೀರೋ ಮತ್ತು ಕೇಂದ್ರಬಿಂದು ನಿರ್ಮಾಪಕ ಮುನಿರತ್ನ. ಅವರು ಇಂತಹ ಚಿತ್ರಕ್ಕೆ ಕೈ ಹಾಕಿರೋದೇ ದೊಡ್ಡದು. ಎಲ್ಲರೂ ಹಿಂಗೆ ಓಡ್ತಾ ಇರುವಾಗ, ನಾವು ಉಲ್ಟಾ ಓಡ್ತಾ ಇದ್ದೇವೆ. “ಸಂಗೊಳ್ಳಿ ರಾಯಣ್ಣ’ ಮಾಡಬೇಕಾದರೂ ಎಲ್ರೂ ಹಿಂಗ್‌ ಈಜುತ್ತಿದ್ದಾಗ, ನಾವು ಉಲ್ಟಾ ಈಜ್ಕೊಂಡ್‌ ಹೋದ್ವಿ. ಐತಿಹಾಸಿಕ, ಪೌರಾಣಿಕ ಚಿತ್ರ ಅಂತ ಬಂದಾಗ ನಾನು ರೆಡಿ. ನಾವೆಲ್ಲ ಪೌರಾಣಿಕ ಸಿನಿಮಾ ನೋಡಿದ್ದೇವೆ. ನಮ್ಮ ಜನರೇಷನ್‌ಗೆ ಅದು ಕೊನೆ ಇತ್ತು. ಮುಂದಿನ ಜನರೇಷನ್‌ಗೆ ಪೌರಾಣಿಕ ಟಚ್‌ ಇರೋದೇ ಇಲ್ಲ. ಈಗಿನ ಮಕ್ಕಳು ಪೌರಾಣಿಕ ಓದ್ತಾ ಇಲ್ಲ. ಯಾಕೆಂದರೆ ಸ್ಕೂಲ್‌ ಸಿಲಬಸ್‌ ಓದೋದೇ ಕಷ್ಟ. ಆ ಸಿಲಬಸ್‌, ಈ ಸಿಲಬಸ್‌ ಅಂತ ಓದ್ತಾರೆ. ಮುಂದೆ ಓದೋಕೆ ಪುಸ್ತಕನೂ ಇರೋದಿಲ್ವೇನೋ? ಮನೆಯಲ್ಲಿ ವಯಸ್ಸಾದವರು ಇದ್ದರೆ ಮಕ್ಕಳಿಗೆ  ಮಹಾಭಾರತ, ರಾಮಾಯಣ ಕಥೆ ಹೇಳ್ತಾರೆ. ಒಬ್ಬ  ಭೀಮ ಇದ್ದ, ದುರ್ಯೋಧನ ಇದ್ದ, ಪಾಂಡವರು ಅಂತ ಇದ್ದರು ಅಂತ ಹೇಳಬೇಕಿದೆ. ಇಂತಹ ಸಮಯದಲ್ಲಿ ಮುನಿರತ್ನ ಅವರು ಪೌರಾಣಿಕ ಚಿತ್ರ ಮಾಡಿದ್ದಾರೆ. ಏನೋ ಮಾಡಬೇಕು ಅಂತ ಮಾಡದೆ, ಎಲ್ಲೂ ಕಾಂಪ್ರಮೈಸ್‌ ಆಗದೆ ಅದ್ಧೂರಿಯಾಗಿ ಮಾಡಿದ್ದಾರೆ. ನನ್ನ ದುರ್ಯೋಧನ ಕಾಸ್ಟೂéಮ್ಸ್‌ಗೆ ಅವರೇ ಡಿಸೈನ್‌ ಮಾಡಿದ್ದಾರೆ. ಚಪ್ಪಲಿಯಿಂದ ಮೊದಲ್ಗೊಂಡು ಕೊರಳಿನ ಮಣಿ, ಕವಚ ಮತ್ತು ಭುಜದ ಮೇಲಿನ ಹಾವಿನ ಚಿಹ್ನೆ ಇಷ್ಟೇ ಇರಬೇಕು, ಹೀಗೇ ಬರಬೇಕು ಅಂತ ಹೇಳಿ ಮಾಡಿಸಿದವರು. ದುರ್ಯೋಧನನ ಮೊದಲ ಕಿರೀಟ ಭಾರವಿತ್ತು. ತಲೆನೋವಿನಿಂದ ಕಿರಿಕಿರಿ ಎನಿಸುತ್ತಿತ್ತು. ನಾನು ಚಿತ್ರ ಒಪ್ಪಿಕೊಂಡಾಗ, ಹತ್ತು ದಿನ ಸತತ ಚಿತ್ರೀಕರಣ ಮಾಡಿ, ಎರಡು ದಿನ ಬ್ರೇಕ್‌ ಬೇಕು ಅಂದಿದ್ದೆ. ಕಾರಣ, ಕಿರೀಟ ಭಾರದಿಂದ ಸಿಕ್ಕಾಪಟ್ಟೆ ತಲೆನೋವು  ಬರುತಿತ್ತು. ಅದನ್ನರಿತ ಮುನಿರತ್ನ, ಎರಡು ದಿನದ ಗ್ಯಾಪ್‌ನಲ್ಲೇ ಇನ್ನೊಂದು ಕಿರೀಟ ಮಾಡಿಸಿಕೊಂಡು ಬಂದರು. ಆದರೆ, ಅದರ ಭಾರವೇನೂ ಕಮ್ಮಿ ಇಲ್ಲ.

ನಮಗೊಂದು ಶಾಪ
ರಾಮೋಜಿ ಫಿಲ್ಮ್ಸಿಟಿ ನಂಗೆ ಒಂಥರಾ ಜೈಲು ಇದ್ದಂಗೆ. ಜೈಲ್‌ ಬಟ್ಟೆ ಒಂದಿಲ್ಲ ಅಷ್ಟೇ. ಎಷ್ಟೋ ಸಲ ಜಗಳ ಆಡಿದ್ದು ಉಂಟು. ಏಕೆಂದರೆ, ವಕೌìಟ್‌ ಮಾಡು, ಶೂಟಿಂಗ್‌ ಮಾಡು, ರೂಮ್‌ಗೆ ಹೋಗು … ಇದಿಷ್ಟೇ ಕೆಲಸ ಆಗುತ್ತಿತ್ತು. ಸ್ಟಾರ್‌ ಹೋಟೆಲ್‌ ರೂಮ್‌ಗೆ ಹೋದರೆ ಅಲ್ಲಿ ಕನ್ನಡದ ಯಾವ ಚಾನೆಲ್‌ಗ‌ಳೂ ಬರುತ್ತಿರಲಿಲ್ಲ. ಬರೀ ತೆಲುಗು, ತಮಿಳು, ಹಿಂದಿ ಇತರೆ ಭಾಷೆ ಬರುತ್ತಿತ್ತು. ಕನ್ನಡ ಚಾನೆಲ್‌ ಬೇಕು ಅಂತ ಜಗಳ ಮಾಡಿದೆ. ಕನ್ನಡ ಚಾನೆಲ್‌ ಬರಲ್ಲ, ಅಂತ ಹೇಳುವ ಮೂಲಕ ತಾಳ್ಮೆ ಕೆಡಿಸಿದರು. ನಮ್ಮೂರಿಗೆ ಬನ್ನಿ, ನಿಮಗೆ ಯಾವ ಭಾಷೆಯ ಚಾನೆಲ್‌ ಬೇಕು ಸಿಗುತ್ತೆ, ಇಲ್ಲೇಕೆ ಕನ್ನಡ ಚಾನೆಲ್‌ ಸಿಗೋದಿಲ್ಲ ಅಂತ ಗಲಾಟೆ ಮಾಡಿ, ಹಠ ಮಾಡಿದ್ದರಿಂದ, ಕೊನೆಗೆ ಅವರೇ ಕನ್ನಡ ಚಾನೆಲ್‌ ಹಾಕಿಸಿಕೊಟ್ಟರು. ಶೂಟಿಂಗ್‌ನಲ್ಲಿ ಮನರಂಜನೆಯಂತೂ ಇರೋದಿಲ್ಲ. ಕೆಲಸ ಮಾಡಿದ ಬಳಿಕ ರಿಲ್ಯಾಕ್ಸ್‌ ಆಗೋಕೆ ಕನ್ನಡ ಚಾನೆಲ್‌ ನೋಡುವುದು ಬೇಡವೇ?

ರಾಮೋಜಿ ಫಿಲ್ಮ್ಸಿಟಿಯಲ್ಲೇ ಬಂದು ಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆ ಬಂದಿದೆ. ನಿಜಕ್ಕೂ ಅದೊಂದು ಶಾಪವೇ ಸರಿ. ಯಾಕೆಂದರೆ, ನಮ್ಮಲ್ಲಿ ಅಂತಹ ಜಾಗವಿಲ್ಲ. ಹೇಳಿಕೊಳ್ಳೋಕೆ ಒಳ್ಳೆಯ ಸ್ಟುಡಿಯೋಗಳೂ ಇಲ್ಲ. ಇರುವ ಕಂಠೀರವ, ಅಬ್ಬಯ್ಯನಾಯ್ಡು, ರಾಕ್‌ಲೈನ್‌ ಸ್ಟುಡಿಯೋಗಳೆಲ್ಲವನ್ನೂ ಸೀರಿಯಲ್ಸ್‌, ರಿಯಾಲಿಟಿ ಶೋಗಳು ಆವರಿಸಿಕೊಂಡಿವೆ. ನಮ್ಮಲ್ಲಿ ಹೆಸರಘಟ್ಟ ಸಮೀಪ ದೊಡ್ಡ ಜಾಗ ಕೊಟ್ಟಿದ್ದರೂ, ಅದನ್ನು ಉಳಿಸಿಕೊಳ್ಳುವುದಕ್ಕೂ ಆಗಿಲ್ಲ. ಇನ್ನೋವೇಟಿವ್‌ ಸ್ಟುಡಿಯೋ ಬಿಟ್ಟರೆ, ಬೇರೇ ದೊಡ್ಡ ಜಾಗ ಎಲ್ಲಿದೆ? ಜಾಗ ಕೊಡ್ತೀವಿ ಅಂತಾರೆ, ಎಲ್ಲಿ? ಯಾವಾಗ? ಕೊಟ್ಟ ಜಾಗವನ್ನೂ ವಾಪಸ್‌ ತೆಗೆದುಕೊಂಡ್ರು. ಕೊಟ್ಟಾಗ, ಅದನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲ. ಆಗ ಹೆಸರಘಟ್ಟ ಕಾಡು ಇದ್ದಂಗಿತ್ತು. ಈಗ ಎಷ್ಟೊಂದು ಬೆಳೆದಿದೆ. ಅಲ್ಲಿಯೇ ಸ್ಟುಡಿಯೋ ಮಾಡಿದ್ದರೆ, ಎಷ್ಟೊಂದು ಚೆನ್ನಾಗಿರುತ್ತಿತ್ತು. ಅಲ್ಲಿ ಮಾಡಿದ್ದರೆ, ನಾವುಗಳು ಇಲ್ಲಿಗೆ ಬರುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಇವತ್ತು ಇಂಡಸ್ಟ್ರಿ ಬೆಳೆಸೋದು ಕಷ್ಟವಿದೆ. ಆಗೆಲ್ಲಾ ಐದು ಸಾವಿರಗೆ ಎಕರೆ ಪಡೆದು ಸ್ಟುಡಿಯೋ ಮಾಡುವ ಕಾಲವಿತ್ತು ಈಗ ಸ್ಟಾರ್‌ ನಟರು ಕೋಟಿ ಕೊಟ್ಟು ಜಾಗ ಖರೀದಿಸಿದರೂ, ಸ್ಟುಡಿಯೋ ಮಾಡೋಕ್ಕಾಗುತ್ತಾ?

ಪೂರ್ತಿ ಕ್ರೆಡಿಟ್‌ ಮುನಿರತ್ನಗೆ
ಮುನಿರತ್ನ ಅವರ ಬಗ್ಗೆ ಹೇಳಲೇಬೇಕು. ಸಿಟ್ಟಿಂಗ್‌ ಎಂಎಲ್‌ಎ ಅವರು. ಅವರಿಗೆ ನೂರೆಂಟು ಕೆಲಸ. ಬಿಜಿ ಇದ್ದರೂ, ಸಿನಿಮಾಗೆ ಅದೇಗೆ ಸಮಯ ಕೊಡುತ್ತಿದ್ದರೋ ಗೊತ್ತಿಲ್ಲ. ದುಡ್ಡು ಇದ್ದರೆ ಎಲ್ಲವೂ ಆಗಿಬಿಡುತ್ತೆ ಅಂತಲ್ಲ, ಅವರೇ ಖುದ್ದು ಸೆಟ್‌ನಲ್ಲಿದ್ದು ಕೆಲಸ ನೋಡಿಕೊಳ್ಳುತ್ತಿದ್ದದ್ದು ವಿಶೇಷ. ಎಷ್ಟೋ ಸಲ ನಾನು ಅವರಿಗೆ ಒಂದು ಚಾಪರ್‌ ತಗೊಳ್ಳಿ, ಇಲ್ಲವೇ ಫ್ಲೈಟ್‌ ಪಾಸ್‌ ಮಾಡಿಸಿಕೊಳ್ಳಿ ಅಂದಿದ್ದುಂಟು. ಯಾಕೆಂದರೆ, ಸೆಟ್‌ನಲ್ಲಿ ನನ್ನ ಜೊತೆ ಮಾತಾಡುತ್ತಾ ಕೂರೋರು, ಒಂದು ಶಾಟ್‌ ಮುಗಿಸಿ, ಹಿಂದಿರುಗುವ ಹೊತ್ತಿಗೆ ಹೊರಟು ಹೋಗಿರೋರು. ಎಲ್ಲಿ ಅಂತ ಫೋನಾಯಿಸಿದರೆ ಬೆಂಗಳೂರಿಗೆ ಬಂದೆ ಅನ್ನೋರು. ಅಲ್ಲಿ ಕೆಲಸ ಮುಗಿಸಿ, ಇಲ್ಲಿ ಪ್ಯಾಕಪ್‌ ಆಗುವ ಹೊತ್ತಿಗೆ ಬಂದಿರೋರು. ಅಲ್ಲೆಲ್ಲೋ ಇದ್ದುಕೊಂಡೇ ಕೀ ಮಾಡುತ್ತಿದ್ದರು. ನನ್ನ ಪಾತ್ರವಷ್ಟೇ ಅಲ್ಲ, ಚಿತ್ರದಲ್ಲಿರುವ ಪ್ರತಿಯೊಬ್ಬರ ಪಾತ್ರದ ಬಗ್ಗೆಯೂ ಕಾಳಜಿ ವಹಿಸಿ, ಆ ಪಾತ್ರ ಹೀಗೇ ಇರಬೇಕು ಅಂತ ಬಯಸಿದವರು. “ಕುರುಕ್ಷೇತ್ರ’ ಇಷ್ಟು ಚೆನ್ನಾಗಿ ಬರೋಕೆ ಕಾರಣ ಅವರೇ. ಯಾರು ಏನೇ ಅಂದ್ರೂ ಪೂರ್ತಿ ಕ್ರೆಡಿಟ್‌ ಮುನಿರತ್ನ ಅವರಿಗೇ ಹೋಗುತ್ತೆ. ಅದಕ್ಕೆ ಹೇಳಿದ್ದು, “ಮುನಿರತ್ನ ಕುರುಕ್ಷೇತ್ರ’ ಎಂಬುದಕ್ಕೆ ವ್ಯಾಲ್ಯು ಇದೆ ಅಂತ.

ಮೈಮೇಲಿನ ಭಾರವೇ 45 ಕೆಜಿ!
ಚಿತ್ರೀಕರಣಕ್ಕೆ ಹೊರಡುವ ಮುನ್ನ ಎರಡು ಗಂಟೆ ವಕೌìಟ್‌ ಮಾಡುತ್ತಿದ್ದೆ. ಮುಂಜಾನೆ ಐದಕ್ಕೆ ಎದ್ದು, ಎರಡು ಗಂಟೆ ವಕೌìಟ್‌ ಮಾಡಿ ಸೆಟ್‌ಗೆ ಹೋಗುತ್ತಿದ್ದೆ. ಅಲ್ಲಿ ಸುಮಾರು ಒಂದುವರೆ ತಾಸು ಮೇಕಪ್‌, ಕಾಸ್ಟೂéಮ್‌ಗೆ ಸಮಯ ಹೋಗುತ್ತಿತ್ತು. ಆ ಬಳಿಕ ಕ್ಯಾಮರಾ ಮುಂದೆ ಸಂಜೆಯವರೆಗೂ ಕೆಲಸ ಮಾಡಬೇಕಿತ್ತು. ಆ ಕಾಸ್ಟೂéಮ್‌ನಲ್ಲಿ ಕೆಲಸ ಮಾಡೋದಂದ್ರೇ ಅಬ್ಟಾ ಅದೊಂದು ದೊಡ್ಡ ಸಾಹಸ. ಇಡೀ ದೇಹಕ್ಕೆ ಆಭರಣ, ಕಿರೀಟ ಧರಿಸಿ, ಗದೆ ಹಿಡಿಯಬೇಕಿತ್ತು. ಮೈ ಮೇಲೆ ಹದಿನೈದು ಕೆಜಿಯಷ್ಟು ಭಾರದ ಆಭರಣ, 18 ಕೆಜಿ ತೂಕವಿರುವ ಗದೆ, ಸುಮಾರು 15 ಕೆಜಿ ತೂಕದ ಕಿರೀಟ ಎಲ್ಲಾ ಸೇರಿ, 45 ಕೆಜಿಗೂ ಹೆಚ್ಚು ಭಾರ ಹೊತ್ತು ನಟಿಸಬೇಕಿತ್ತು. ಆ ಕಾಸ್ಟೂéಮ್‌ನಲ್ಲಿ ಚೇರ್‌ ಮೇಲೆ ಕೂರಲು ಆಗುತ್ತಿರಲಿಲ್ಲ. ಮೈಯೆಲ್ಲಾ ಚುಚ್ಚುತ್ತಿತ್ತು. ಸ್ಟೂಲ್‌ನಲ್ಲಿ ಮಾತ್ರ ಕುಳಿತು ಸುಧಾರಿಸಿಕೊಳ್ಳಬೇಕಿತ್ತು. ಸಂಜೆ ರೂಮ್‌ಗೆ ಹೋಗಿ ಸ್ನಾನ ಮಾಡಿದಾಗ, ಅಲ್ಲಲ್ಲಿ ಚುರ್‌ ಚುರ್‌ ಅಂತ ನೋವಾದಾಗ ಮೈಯೆಲ್ಲಾ ಪರಚಿದೆ ಅಂತ ಗೊತ್ತಾಗುತ್ತಿತ್ತು. ಇಲ್ಲಿ ಯುದ್ಧ ಸನ್ನಿವೇಶಗಳಿಲ್ಲ. ಯುದ್ಧಕ್ಕೆ ಕಳಿಸೋದಷ್ಟೇ ದುರ್ಯೋಧನನ ಕೆಲಸ. ಆನೆ ಮೇಲೆ ಕೂತು ಬರುವ ಆರಂಭದ ಹಾಡೊಂದಿದೆ. ಆನೆ ಸ್ವಲ್ಪ ಆಟವಾಡುತ್ತಿತ್ತು. ಒಳಗೊಳಗೆ ಭಯ. ಕೆಲವೊಮ್ಮೆ ಮೈ ಜರ್ಕ್‌ ಹೊಡಿಸೋದು. ಜೀವ ಕೈಯಲ್ಲಿಟ್ಟುಕೊಂಡೇ ಕೂರಬೇಕು. ಆನೆ ಮೇಲಿಂದ ಎಗರುವ ಕೆಪಾಸಿಟಿಯೇನೋ ಇತ್ತು. ಆದರೂ ಒಂದು ಕಡೆ ಭಯ ಇದ್ದೇ ಇರುತ್ತಲ್ವಾ?

ತಾಂತ್ರಿಕತೆಯಲ್ಲಿ ಶ್ರೀಮಂತ
ಸೆಟ್‌ಗೆ ಹೋಗುವ ಮುನ್ನ ಎರಡು ಗಂಟೆ ವಕೌìಟ್‌ ಮಾಡುತ್ತಿದ್ದೆ. ಸಂಜೆ ಹಿಂದಿರುಗುವ ಹೊತ್ತಿಗೆ ಸುಸ್ತಾಗಿರುತ್ತಿದ್ದೆ. ಯಾವ ಮಟ್ಟಿಗೆ ಅಂದರೆ, ರೂಮ್‌ ಬಾಗಿಲು ತೆಗೆಯೋಕೂ ಆಗುತ್ತಿರಲಿಲ್ಲ. ಆಗಸ್ಟ್‌ 9 ರಿಂದ ಇಲ್ಲಿಯವರೆಗೂ ಮಾಡಿದ ಕೆಲಸ ತೃಪ್ತಿ ಕೊಟ್ಟಿದೆ. ಆಗಾಗ ಎರಡು ದಿನಗಳ ರಜೆ ಬಿಟ್ಟರೆ, ಈ ಚಿತ್ರಕ್ಕೆ ಸುಮಾರು 140 ಕ್ಕೂ ಹೆಚ್ಚು ದಿನ ಕೆಲಸ ಮಾಡಿದ್ದೇನೆ. “ಸಂಗೊಳ್ಳಿ ರಾಯಣ್ಣ’ ಮತ್ತು “ಕುರುಕ್ಷೇತ್ರ’ ಇವುಗಳಿಗೆ ಫ್ರೀ ಡೇಟ್ಸ್‌ ಇಟ್ಟುಕೊಂಡೇ ಕೆಲಸ ಮಾಡಿದ್ದೇನೆ. ಕ್ಲೈಮ್ಯಾಕ್ಸ್‌ ಹತ್ತು ದಿನ ಸಾಕು ಅಂದೊRಂಡ್ವಿ. ಅದು ಒಂದು ವಾರ ಹೆಚ್ಚಾಯ್ತು. ದಾನಿಶ್‌ಅಖ್ತರ್‌ ಭೀಮನ ಪಾತ್ರ ನಿರ್ವಹಿಸಿದ್ದಾರೆ. ಒಳ್ಳೇ ಹುಡುಗ. ಇಬ್ಬರ ಕಾಂಬಿನೇಷನ್‌ ಚೆನ್ನಾಗಿದೆ. ಇಬ್ಬರನ್ನೂ ಹಿಪ್ಪೆಕಾಯಿ ಮಾಡಿ ಹಾಕಿದ್ದಾರೆ. ಹಾಗೆ ನೋಡಿದರೆ “ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕಿಂತ ಈ ಚಿತ್ರಕ್ಕೆ ಜಾಸ್ತಿ ಡೇಟ್ಸ್‌ ಆಗಿದೆ. ಇದು 3ಡಿ ಮತ್ತು 2ಡಿನಲ್ಲಿ ತಯಾರಾಗುತ್ತಿದೆ. ದಿನಕ್ಕೆ ನಾಲ್ಕು ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನಾಲ್ಕು ಯೂನಿಟ್‌ಗಳು ಕೆಲಸ ಮಾಡುತ್ತಿದ್ದವು. ಹತ್ತಾರು ಕ್ಯಾಮೆರಾಗಳು ಓಡಾಡುತ್ತಿದ್ದವು. ಇದು ಚಿತ್ರೀಕರಣದ್ದಾದರೆ, ತಾಂತ್ರಿಕತೆಯಲ್ಲೂ ಶ್ರೀಮಂತವಾಗಿದೆ. 3ಡಿ, 2ಡಿ ಕೆಲಸಕ್ಕೆಂದೇ 120 ತಂತ್ರಜ್ಞರು ಒಂದೆಡೆ ಸೇರಿ ಕೆಲಸ ಮಾಡುತ್ತಿದ್ದಾರೆ. ಚೆನ್ನೈ, ಬೆಂಗಳೂರು, ಹೈದರಾಬಾದ್‌, ಕೇರಳ ಮತ್ತು ಮುಂಬೈನಲ್ಲಿ  ಗ್ರಾಫಿಕ್ಸ್‌ ಕೆಲಸ ನಡೆಯುತ್ತಿದೆ. ಅದು ವಿಶೇಷ. ಈಗಾಗಲೇ ಡಬ್ಬಿಂಗ್‌ ಕೂಡ ಶುರುವಾಗಿದೆ. ನನ್ನದು ಜನವರಿ 5ರ ನಂತರ ನಡೆಯಲಿದೆ. ಇಲ್ಲಿ ಎರಡು ಸಲ ಡಬ್ಬಿಂಗ್‌ ಮಾಡಬೇಕು. ಯಾಕೆಂದರೆ, 3ಡಿ, 2ಡಿ ಆಗಿರುವುದರಿಂದ ಬೇರೆ ಆ್ಯಂಗಲ್‌ನಲ್ಲೂ ಚಿತ್ರ ಶೂಟ್‌ ಆಗಿರುತ್ತೆ. ಹಾಗಾಗಿ, ಡಬ್ಬಿಂಗ್‌ ಎರಡು ಸಲ ಮಾಡಲೇಬೇಕು. ಇಲ್ಲಿ ಕಲಿತದ್ದು, ತಾಳ್ಮೆ. ಇಂತಹ ಚಿತ್ರಗಳಿಗೆ ತಾಳ್ಮೆ ಬಹುಮುಖ್ಯ. ಯಾಕೆಂದರೆ, ಆ ಕಾಸ್ಟೂéಮ್‌ ಹಾಕಿ ಕೆಲಸ ಮಾಡುತ್ತಿರುವಾಗ, ಸಖತ್‌ ಕಿರಿಕಿರಿ ಆಗುತ್ತಿತ್ತು. ಆದರೂ ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿದ್ದೇನೆ. ನಾನಷ್ಟೇ ಅಲ್ಲ, ಪ್ರತಿಯೊಬ್ಬರೂ ಹಾಗೇ ಕೆಲಸ ಮಾಡಿದ್ದಾರೆ. ಇಲ್ಲಿ ಕೆಲಸ ಮಾಡಿದ್ದಕ್ಕೆ ಹೆಮ್ಮೆ ಮತ್ತು ತೃಪ್ತಿ ಇದೆ.

ಐದು ಜನರೇಷನ್‌ ಹೀರೋಗಳನ್ನು ಕಾಣಬಹುದು
“ಕುರುಕ್ಷೇತ್ರ’ ಮೂಲಕ ಸಾಕಷ್ಟು ತಾಳ್ಮೆ ಕಲಿತಿದ್ದೇನೆ. ಯಾಕೆಂದರೆ, ಇಲ್ಲಿ ಒಮ್ಮೆ ಮೇಕಪ್‌ ಕೂತರೆ ಒಂದುವರೆ ತಾಸು ಆಗೋದು. ಮುಂಜಾನೆ ಬೇಗ ಎದ್ದು, ವಕೌìಟ್‌ ಮಾಡಿ, ಮೇಕಪ್‌ ಮಾಡಿಕೊಂಡು ಕಾಸ್ಟೂéಮ್ಸ್‌ ಹಾಕಿ, ವಿಗ್‌, ಮೀಸೆ ಎಲ್ಲವನ್ನೂ ಅಂಟಿಸಿಕೊಂಡು ಮಾಡಬೇಕು. ಇಲ್ಲಿ ದೊಡ್ಡ ಬಳಗ ಕೆಲಸ ಮಾಡಿದೆ. ಬರೀ, ಮೀಸೆ, ವಿಗ್‌ ಸೆಟ್‌ ಮಾಡಿ, ಗ್ರಾಫಿಕ್ಸ್‌ ಮಾಡೋಕೆ ಅಂತಾನೇ ಒಂದು ಸೆಟಪ್‌ ಇಟ್ಟಿದ್ದಾರೆ. 2ಡಿಯಲ್ಲಿ ಏನೂ ಗೊತ್ತಾಗಲ್ಲ. 3ಡಿಯಲ್ಲಿ ಎಲ್ಲವೂ ಗೊತ್ತಾಗುತ್ತೆ. ಕೆಲ ಜೂನಿಯರ್ ಸ್ಲಿಪ್ಪರ್‌ನಲ್ಲಿದ್ದರೆ, ಅದನ್ನೆಲ್ಲಾ ಗ್ರಾಫಿಕ್ಸ್‌ನಲ್ಲಿ ತೆಗೆಯಬೇಕು. ಹಾಗಾಗಿ ಇಂತಹ ಚಿತ್ರಗಳಲ್ಲಿ ತಾಳ್ಮೆ ಮುಖ್ಯ.  ಇಲ್ಲಿ ಎರಡೆರೆಡು ಸಲ ಡಬ್ಬಿಂಗ್‌ ಮಾಡಬೇಕು. ಯಾಕೆಂದರೆ, 3ಡಿಯಲ್ಲೂ ಇರುವುದರಿಂದ ಅದರ ಕ್ಯಾಮೆರಾ ಲೆಂಥ್‌ ಬೇರೆ ಇರುತ್ತೆ. ಲಿಪ್‌ ಸಿಂಕ್‌ ಮಾಡೋಕೆ ಎರಡು ಸಲ ಮಾಡಬೇಕು. ಆ್ಯಕ್ಷನ್‌ ಇದ್ದರೂ, ಬೇರೆ ಆ್ಯಂಗಲ್‌ನಲ್ಲೇ ಆ್ಯಕ್ಷನ್‌ ಮಾಡಬೇಕು. ಇಡೀ ಚಿತ್ರ ನನಗೆ ದಿ ಬೆಸ್ಟ್‌ ಎನಿಸಿದೆ. ಇಲ್ಲಿ 70, 80, 90, 2000, 2010ರ ಜನರೇಷನ್‌ ಹೀರೋಗಳನ್ನು ನೋಡಬಹುದು. ಹಾಗಾಗಿ “ಕುರುಕ್ಷೇತ್ರ’ ಕನ್ನಡಿಗರಿಗೆ ಹಬ್ಬ. ಯಾವುದೇ ಎಪಿಸೋಡ್‌ ನೋಡಿದರೂ, ಬೇಕಾದಷ್ಟು ಚಾಲೆಂಜ್‌ ಕಾಣಬಹುದು. ಇಲ್ಲಿ ಎಲ್ಲಾ ನಟರು ಒಪ್ಪಿ ಮಾಡಿದ್ದೇ ದೊಡ್ಡ ಚಾಲೆಂಜ್‌. “ಸಂಗೊಳ್ಳಿ ರಾಯಣ್ಣ’ ಕ್ಲೈಮ್ಯಾಕ್ಸ್‌ನಲ್ಲಿ ಜನ ಕಣ್ಣೀರು ಹಾಕಿದರು. ಇಲ್ಲೂ ಅಂತಹ ಭಾವನಾತ್ಮಕ ಸನ್ನಿವೇಶಗಳಿವೆ.  ಎಂಟು ನಿಮಿಷದ ದುರ್ಯೋಧನ-ಭೀಮ ಗದಾಯುದ್ಧ ಹೈಲೆಟ್‌. ಇಲ್ಲಿ ಪ್ರಕೃತಿ ಮೇಲೆ ಕೋಪ ತೋರಿಸುವ ಕ್ಲೈಮ್ಯಾಕ್ಸ್‌ ವಿಶೇಷವಾಗಿದೆ. ಒಂದು ಮಾತು ನಿಜ, ಇಂತಹ ಚಿತ್ರಕ್ಕೆ ಸಹಕಾರಿಯಾಗಿದ್ದು, ನೀನಾಸಂ ಕಲಿಕೆ. ರಂಗಭೂಮಿ ಕಲಾವಿದರಿಗೆ ಪೌರಾಣಿಕ ಚಿತ್ರಗಳು ಸುಲಭ ಅನ್ನುವುದಕ್ಕೆ ನಾನೇ ಸಾಕ್ಷಿ.

ಒಂದು ಮುಕ್ಕಾಲು ಪುಟದ ಡೈಲಾಗ್‌ ಒಂದೇ ಟೇಕ್‌ನಲ್ಲಿ
ಇಂತಹ ಚಿತ್ರಕ್ಕೆ ಸಾಕಷ್ಟು ತಯಾರಿ ಬೇಕು. ನಾನು ಹೋಮ್‌ವರ್ಕ್‌ ಮಾಡಿಕೊಂಡೇ ಕೆಲಸ ಶುರುಮಾಡಿದೆ. ಹಳೆಗನ್ನಡ, ಸಂಸ್ಕೃತ ಸಂಭಾಷಣೆ ಜಾಸ್ತಿ ಇದೆ. ಪೌರಾಣಿಕ ಚಿತ್ರದ ಶೈಲಿ ಬಿಟ್ಟು ಆಚೀಚೆ ಹೋಗಿಲ್ಲ. ಪುಟಗಟ್ಟಲೆ ಸಂಭಾಷಣೆ ಹೇಳಿದ್ದೇನೆ. ಒಂದು ಮುಕ್ಕಾಲು ಪುಟದ ಡೈಲಾಗ್‌ವೊಂದನ್ನು ಹೇಳಿದ್ದು ಮರೆಯಂಗಿಲ್ಲ. ಅದೊಂಥರಾ ಕಷ್ಟದ ಮಾತುಗಳು. ಅಲ್ಪ ಪ್ರಾಣ, ಮಹಾಪ್ರಾಣದ್ದೇ ಮುಖ್ಯ. “ಡಡ,ಢಢ’ ಈ ರೀತಿಯ ಮಾತುಗಳನ್ನು ಹೇಳುವಾಗ ಸಾಕಷ್ಟು ಪ್ರಿಪೇರ್‌ ಆಗಿದ್ದೆ. ಒಂದಂತೂ ನಿಜ. ಇದು ಯಾವ ರೇಂಜ್‌ನ ಸಿನಿಮಾನೋ ಗೊತ್ತಿಲ್ಲ. ನಂಗೆ ಈ ರೇಂಜ್‌ ಅನ್ನೋದು ಗೊತ್ತಿಲ್ಲ. ಇಂತಹ ಚಿತ್ರಕ್ಕೆ ತಯಾರಿ ಬೇಕಿತ್ತು. ನಾನು ಅಬ್ರಾಡ್‌ನಿಂದ ಬಂದಕೂಡಲೇ ಸ್ಕ್ರಿಪ್ಟ್ ಪಡೆದು, ಸುಮಾರು 20 ದಿನ ಆ ಸ್ಕ್ರಿಪ್ಟ್ ಓದಿಕೊಂಡು ಮೊದಲು ತಲೆಗೆ ಹಾಕಿಕೊಂಡೆ. ಏನಿದೆ, ಏನಿಲ್ಲ, ಭಾಷೆ ಬದಲಾವಣೆ ಎಷ್ಟಿದೆ ಎಂಬುದನ್ನು ಅರಿತೆ. ಸೆಟ್‌ಗೆ ಬಂದಾಗಲೂ ನಾನೇನು ಮಾಡಬೇಕು, ಹೇಗೆ ಮಾಡಬೇಕು ಅನ್ನುವುದರ ಚರ್ಚೆ ಹೊರತಾಗಿ ಬೇರೆ ಯಾವುದರ ಕಡೆಗೂ ಗಮನ ಕೊಡುತ್ತಿರಲಿಲ್ಲ. ಇಲ್ಲಿ ಮುಖ್ಯವಾಗಿ ಕಲಾ ನಿರ್ದೇಶಕ ಕಿರಣ್‌ ಬಗ್ಗೆ ಹೇಳಲೇಬೇಕು. ಇಲ್ಲಿ ಅದ್ಭುತ ಸೆಟ್‌ ಹಾಕಿದ್ದಾರೆ. ದರ್ಬಾರ್‌ ಹಾಲ್‌ ಸೆಟ್‌ನಲ್ಲಿ ಎಲ್ಲಾ ಕಲಾವಿದರು ಕೆಲಸ ಮಾಡುವಾಗ, ಮಾತಾಡಿಕೊಂಡಿದ್ದು ಒಂದೇ. ಇಷ್ಟು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇವೆ. ಈ ರೀತಿಯ ಸೆಟ್‌ ಎಲ್ಲೂ ನೋಡಿಲ್ಲ ಅನ್ನೋ ಮಾತದು. ನಿರ್ಮಾಪಕರು ಎಲ್ಲಾ ಫ್ಲೋರ್‌ಗೂ ಏಸಿ ಹಾಕಿಸಿದ್ದರು. ಯಾಕೆಂದರೆ, ಆ ಕಾಸ್ಟೂಮ್ಸ್‌ಗೆ ಬೆವರು ಕಿತ್ತು ಬರುತ್ತಿತ್ತು. ಅದೇ ಒಂಥರಾ ಕಿರಿಕಿರಿ ಆಗುತ್ತಿತ್ತು. ನಿರ್ಮಾಪಕರಿಗೆ ಆ ಕಾಳಜಿ ಇದ್ದುದರಿಂದಲೇ ಅಷ್ಟೆಲ್ಲಾ ಮಾಡಲು ಸಾಧ್ಯ. ಇಂತಹ ಚಿತ್ರಗಳಿಗೆ ಎರಡು, ಮೂರು ವರ್ಷ ಪ್ಲಾನಿಂಗ್‌ ಬೇಕು. ಆದರೆ, ಮುನಿರತ್ನ ಬಂದು ಒಂದು ಚಿತ್ರ ಮಾಡೋಣ ಅಂದ್ರು. ನಾನು ಓಕೆ ಯಾವುದು ಅಂದೆ, ಅವರು “ಕುರುಕ್ಷೇತ್ರ’ ಅಂದ್ರು. ಟೈಮ್‌ ಬೇಕಲ್ವಾ ಅಂದೆ. ನೀನು ಯೆಸ್‌ ಅನ್ನು ನಾನು ಮಾಡ್ತೀನಿ ಅಂದ್ರು. ನಾನು ಯೆಸ್‌ ಅಂದೆ, ಅವರು ಮಾಡಿ ತೋರಿಸಿದರು. ನಿಜ ಹೇಳ್ಳೋ ದಾದರೆ, ಬೇರೆಯವರು ನಮ್ಮ ಸಿನ್ಮಾ ನೋಡಿ ಕಲಿಯಬೇಕು. ಆ ಮಟ್ಟಕ್ಕೆ ಪೌರಾಣಿಕ ಚಿತ್ರದ ಪ್ಲಾನ್‌ ಮಾಡಿ ಮುಗಿಸಿದ್ದಾರೆ.ಇಲ್ಲಿ “ಬಾಹುಬಲಿ’ ರೀತಿ ದೊಡ್ಡ ಪ್ಲಾನ್‌ ಏನೂ ಇಲ್ಲ. ನಿರ್ಮಾಪಕ ಧೈರ್ಯದಿಂದ ಮಾಡ್ರಯ್ಯ ಅಂದ್ರೆ, ಇಂತಹ “ಕುರುಕ್ಷೇತ್ರ’ಗಳು ರೆಡಿಯಾಗುತ್ತವೆ.

ಪೌರಾಣಿಕ, ಐತಿಹಾಸಿಕ ಚಿತ್ರಕ್ಕೆ ಮೊದಲ ಆದ್ಯತೆ
“ಕುರುಕ್ಷೇತ್ರ’ ಮೂಲಕ ನನ್ನ ಇಮೇಜ್‌ ಏನೂ ಚೇಂಜ್‌ ಆಗೋದಿಲ್ಲ. ದರ್ಶನ್‌ ಒಂದು ಪಾತ್ರವಾಗಿ ಅಲ್ಲಿ ಕಾಣಾ¤ರೆ ಅಷ್ಟೇ. ಇಂತಹ ಚಿತ್ರದಲ್ಲಿ ಕೆಲಸ ಮಾಡಿದ್ದು ಮರೆಯದ ಅನುಭವ. ಇದು ನನ್ನ 50 ನೇ ಚಿತ್ರ. “ಕುರುಕ್ಷೇತ್ರ’ 50 ನೇ ಚಿತ್ರ ಅಂತ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ. ನನಗೆ ಸಿಕ್ಕ ಅವಕಾಶ ಚೆನ್ನಾಗಿ ಬಳಸಿಕೊಂಡ ಖುಷಿ ಇದೆ. ಇದು ನನ್ನ ಮೊದಲ ಚಿತ್ರ ಅಂತಾನೇ ಭಾವಿಸಿ ಕೆಲಸ ಮಾಡಿದ್ದೇನೆ. ಎಲ್ಲರೂ ಕೇಳ್ತಾ ಇದ್ದರು. ದರ್ಶನ್‌, ಕ್ಯೂ ಇದೆಯಲ್ಲ ಅದನ್ನೆಲ್ಲಾ ಹೇಗೆ ನಿಭಾಯಿಸ್ತೀಯ ಅಂತ. ಪೌರಾಣಿಕ, ಐತಿಹಾಸಿಕ ಸಿನಿಮಾ ಮಾಡೋಕೆ ಯಾರೇ ಬಂದ್ರೂ, ಬಂದಾಗ ಕ್ಯೂ ಇಟ್ಟುಕೊಳ್ಳಲ್ಲ. ಮಿಕ್ಕಿದವರನ್ನು ಪಕ್ಕಕ್ಕೆ ಸರಿಸಿ, ಪೌರಾಣಿಕ ಸಿನಿಮಾ ಮಾಡ್ತೀನಿ. ಯಾಕೆಂದರೆ, ಅಂತಹ ಚಿತ್ರ ಮಾಡ್ತೀನಿ ಅಂತ ಬರೋದೇ ತುಂಬಾ ದೊಡ್ಡದು. ಅದರಲ್ಲೂ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಅಂತಹವರು ಸಿಗಲ್ಲ. 

ನಾನು ಪೌರಾಣಿಕ ಚಿತ್ರಗಳನ್ನು ಮಾಡಲು ಬರುವ ನಿರ್ಮಾಪಕರಿಗೆ ಮೊದಲ ಆದ್ಯತೆ ಕೊಡ್ತೀನಿ. ನೂರು ಕಮರ್ಷಿಯಲ್‌ ಚಿತ್ರವಿದ್ದರೂ, ಪಕ್ಕಕ್ಕೆ ಸರಿಸಿ ಬರಿ¤àನಿ. ಇಂತಹ ಚಿತ್ರ ಮಾಡುವವರೇ ಇಲ್ಲ. ಅಂಥದರಲ್ಲಿ ಬಂದಾಗ ಕಮರ್ಷಿಯಲ್‌ ಚಿತ್ರ ನನಗೆ ಮುಖ್ಯ ಆಗೋದಿಲ್ಲ. ನಾನು ಇದುವರೆಗೆ ಮಾನಿಟರ್‌ ನೋಡಿಲ್ಲ. “ಕುರುಕ್ಷೇತ್ರ’ ಹೇಗೆ ಮೂಡಿಬಂದಿದೆ ಎಂಬ ಕುತೂಹಲ ನನಗೂ ಇದೆ. ಅದನ್ನು ತೆರೆಯ ಮೇಲೆ ನೋಡಿಯೇ ಖುಷಿಪಡ್ತೀನಿ. “ಸಂಗೊಳ್ಳಿ ರಾಯಣ್ಣ’ನಿಗಿಂತ ಇದಕ್ಕೆ ಹೆಚ್ಚು ದಿನಗಳಾಗಿವೆ. ಇನ್ನೂ ಹೊಸ ತರಹದ ಕಮರ್ಷಿಯಲ್‌ ಕಥೆಗಳನ್ನು ಕೇಳಿದ್ದಾಗಿದೆ. ಇದು ಮುಗಿಯೋವರೆಗೆ ಬೇರೆ ಚಿತ್ರವಿಲ್ಲ. ಇದು ಸಂಪೂರ್ಣ ಮುಗಿದ ನಂತರವೇ ಬೇರೆ ಚಿತ್ರದ ಬಗ್ಗೆ ಹೇಳ್ತೀನಿ.

ಇಲ್ಲಿ ಯಾರು ವಿಲನ್‌?
ದುರ್ಯೋಧನ ಕೆಟ್ಟವನೋ, ಒಳ್ಳೆಯವನೋ ಬೇರೆ ಪ್ರಶ್ನೆ. ಅವನು ಸೀರೆ ಎಳೆಸಿದ ನಿಜ. ಆದರೆ, ಅವನನ್ನೂ ಮೋಸದಿಂದಲೇ ಕೊಲ್ಲುತ್ತಾರೆ. ಇಲ್ಲಿ ಯಾರು ವಿಲನ್‌? ಧರ್ಮರಾಯ ಹೇಳ್ತಾನೆ, ನೀನು ಐವರಲ್ಲಿ ಯಾರ ಮೇಲಾದರೂ ಯುದ್ಧ ಮಾಡಿ ಗೆಲ್ಲು, ರಾಜ್ಯದ ಆಸ್ತಿಯಲ್ಲಿ ಪಾಲು ಪಡೆದುಕೋ ಅಂತಾರೆ. ದುರ್ಯೋಧನ ಮನಸ್ಸು ಮಾಡಿದ್ದರೆ, ನಕುಲ, ಸಹದೇವ ಅವರೊಂದಿಗೆ ಯುದ್ಧ ಮಾಡಬಹುದಿತ್ತು. ಮಾಡಲಿಲ್ಲ. ಅರ್ಜುನ ಮೇಲೆ ಯುದ್ಧ ಮಾಡೋಕೆ ಅವನ ಗದೆಯೇ ನಾಚಿಕೊಳ್ಳುತ್ತೆ ಅಂತಾನೆ. ಕೊನೆಗೆ ಭೀಮನನ್ನು ನೋಡಿ, ನನಗೆ ಭೀಮನೇ ಸರಿಯಾದ ವ್ಯಕ್ತಿ ಅಂತ ಆರಿಸಿಕೊಂಡು ಯುದ್ಧ ಮಾಡ್ತಾನೆ. ಇಲ್ಲಿ ಯಾರು ಒಳ್ಳೆಯವರು, ಕೆಟ್ಟವರು ಹೇಳಿ? ಯುದ್ಧ ವೇಳೆ ದುರ್ಯೋಧನ ಭೀಮನನ್ನು ಆಯ್ಕೆ ಮಾಡಿಕೊಂಡರೆ, ನಾನು ಈ “ಕುರುಕ್ಷೇತ್ರ’ದ ಭೀಮನ ಪಾತ್ರಕ್ಕೆ ದಾನಿಶ್‌ ಅಖ್ತರ್‌ನ ಆಯ್ಕೆ ಮಾಡಿಕೊಂಡೆ. ಆತ ನನ್ನ ಎದುರು ನಿಲ್ಲುವ ಸರಿಯಾದ ನಟ.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.