ಹೃದಯದ ಭಾಷೆಯಲ್ಲಿ ಸಂವಹನ


Team Udayavani, Jun 17, 2018, 11:16 AM IST

q-39.jpg

ನಾನು ಫ್ರಾನ್ಸ್‌ಗೆ ಹೋಗುವುದು ಬಹುಶಃ ಇದು ಮೊದಲ ಸಲವೇನಲ್ಲ. ಮೊನ್ನೆ ಈ ಅವಕಾಶ ಸಿಕ್ಕಿದ್ದೂ ನನ್ನ ಶಿಷ್ಯೆ ಅನಿತಾಳ ಕಾರಣಕ್ಕಾಗಿ. ಅನಿತಾ ಎಂದಾಗ ಇವಳು ಫ್ರಾನ್ಸ್‌ನವಳೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅವಳು ಮೂಲತಃ ಕೇರಳದವಳು. ಅನಿತಾ ಸಾವಿತ್ರಿ ಹೆರ್‌ ಅವಳ ಪೂರ್ಣ ಹೆಸರು. ಅವಳ ತಂದೆತಾಯಿ ಇನ್ನು ಹಸುಗೂಸಾಗಿರುವಾಗಲೇ ಅವಳನ್ನೂ , ಅವಳ ಅಕ್ಕನನ್ನೂ ಫ್ರಾನ್ಸ್‌ ದೇಶದ ದಂಪತಿಗೆ ಕೊಟ್ಟುಬಿಟ್ಟಿದ್ದರಂತೆ. ಅನಿತಾಳನ್ನು ಫ‌ಕ್ಕನೆ ನೋಡುವಾಗಲೂ ಮಲಯಾಳಿ ಚಹರೆಯೇ. ಆದರೆ ಮಲಯಾಳ ಭಾಷೆಯೂ ಸೇರಿದಂತೆ ಭಾರತದ ಯಾವ ಭಾಷೆಯೂ ತಿಳಿಯದು.

ಉಡುಪಿಯ ನಮ್ಮ ಯಕ್ಷಗಾನ ಕೇಂದ್ರಕ್ಕೆ ಬಂದಿದ್ದವಳು ನನ್ನಿಂದ ಯಕ್ಷಗಾನ ಕಲಿಯುವಾಗ ಅಲ್ಪಸ್ವಲ್ಪ ಕನ್ನಡ ಅರ್ಥಮಾಡಿಕೊಳ್ಳುವಲ್ಲಿ ಶಕ್ತಳಾಗಿದ್ದಳು. ಇನ್ನೇನು ಕನ್ನಡದಲ್ಲಿ ಮಾತನಾಡುತ್ತಾಳೆ ಎನ್ನುವಾಗ ಅವಳ ತವರಾದ ಫ್ರಾನ್ಸ್‌ ದೇಶಕ್ಕೆ ಮರಳುವ ಸಮಯವಾಗಿತ್ತು. ಅನಿತಾ ಮಾರ್ದವ ಮನಸ್ಸಿನ ಹೆಣ್ಣುಮಗಳು. ಉಡುಪಿಯಲ್ಲಿರುವಾಗ ನನ್ನನ್ನು, ನನ್ನ ಹೆಂಡತಿಯನ್ನು ತಂದೆ- ತಾಯಿಯಂತೆ ಕಂಡಿದ್ದಳು. ನಮಗೂ ನಮ್ಮ ಊರಿನವಳೇನೋ ಅನ್ನಿಸುವಷ್ಟರ ಮಟ್ಟಿಗೆ ನಮ್ಮೊಂದಿಗೆ ಹೊಂದಿಕೊಂಡಿದ್ದಳು. ಕೇರಳವೂ ನಮ್ಮ ಕರಾವಳಿಯ ಹತ್ತಿರದ ನಾಡೇ ಆಗಿರುವುದರಿಂದ ನಮ್ಮ ಊರಿನ ಬಗ್ಗೆ ಅವಳಿಗೆ ಭಾವನಾತ್ಮಕವಾದ ಸೆಳೆತವೂ ಇತ್ತು. ಮಧ್ಯೆ ಒಮ್ಮೆ ಕೇರಳದ ತನ್ನ ಹುಟ್ಟೂರಿಗೆ ಹೋಗಿ ತಂದೆ, ತಾಯಿಯನ್ನು ನೋಡಿಕೊಂಡು ಬಂದಿದ್ದಳು.

ತನ್ನನ್ನು ತೊರೆದ ತಂದೆ, ತಾಯಿಯನ್ನು ನೆನೆದಾಗಲೆಲ್ಲ ಅವಳ ಕಣ್ಣುಗಳು ನೀರೂಡುತ್ತವೆ. ಅವಳ ಅಕ್ಕ ಫ್ರಾನ್ಸ್‌ ಪ್ರಜೆಯನ್ನು ಮದುವೆಯಾಗಿ ಅಲ್ಲಿಯೇ ಇದ್ದಾಳೆ. ಅನಿತಾ ನನ್ನನ್ನು ಫ್ರಾನ್ಸ್‌ಗೆ ಬರುವಂತೆ ತುಂಬ ಒತ್ತಾಯಿಸುತ್ತಿದ್ದಳು. ಹಾಗೊಮ್ಮೆ ಸಂದರ್ಭವೂ ಒದಗಿಬಂತು. ಅಲ್ಲಿ ವೆಲನ್‌ಸಿಯಾನ್‌ ((Valenciennes)) ಎಂಬ ಪಟ್ಟಣದಲ್ಲಿ ದೊಡ್ಡ ಕಲಾಶಾಲೆಯೊಂದರಲ್ಲಿ ಕ್ಯಾರೇಫೋರ್‌ ಇಂಟರ್‌ನ್ಯಾಶನಲ್‌ ಫೆಸ್ಟಿವಲ್‌.  ಕೊರಿಯಾ, ಇರಾನ್‌, ಮರೋಕ್‌, ಸರ್ಬಿಯಾ, ಟರ್ಕಿ ಸೇರಿದಂತೆ ಹತ್ತು ದೇಶಗಳ ಕಲಾವಿದರು ಅಲ್ಲಿ ಬಂದು ಸೇರುವವರಿದ್ದರು. ಈ ಸಲ ಅನಿತಾಳ ಶಿಫಾರಸ್ಸಿನ ಮೇರೆಗೆ ಯಕ್ಷಗಾನವೂ ಆ ಮಹೋತ್ಸವದಲ್ಲಿ ಭಾಗವಹಿಸುವಂತಾಯಿತು. ನನ್ನ ಜೊತೆಗೆ ದುಭಾಷಿಯಾಗಿ ನನ್ನ ಹೆಂಡತಿ ವೇದಾವತಿಯನ್ನೂ ಆಹ್ವಾನಿಸಿದ್ದಳು. ನನಗೆ ಸಹಾಯಕನಾಗಿ ನನ್ನ ಶಿಷ್ಯ ಶೈಲೇಶ್‌ ತೀರ್ಥಹಳ್ಳಿ ಜೊತೆಯಾಗಿದ್ದ. 

ನಾವು ಮೂವರು ಪ್ಯಾರಿಸಿನ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅತ್ಯಂತ ಆತ್ಮೀಯವಾದ ಸ್ವಾಗತ ದೊರೆಯಿತು. ಅಲ್ಲಿಂದ ಅವರ ಥಿಯೇಟರ್‌ಗೆ ಎರಡೂವರೆ ಗಂಟೆಯ ಪಯಣ. ನಾವು ಅಲ್ಲಿಗೆ ತಲುಪಿದ ಮರುದಿನವೇ, ಉಳಿದ ದೇಶಗಳ ಕಲಾವಿದರನ್ನೂ ಜೊತೆಗಿರಿಸಿ ವಿಧ್ಯುಕ್ತವಾಗಿ ಪರಿಚಯ-ಉಭಯ ಕುಶಲೋಪರಿಯ ಸಂಪ್ರದಾಯ ನಡೆಯಿತು. ಉಳಿದ ದೇಶಗಳ ಕಲಾವಿದರು ಒಂದು ಅಥವಾ ಎರಡು ವರ್ಷಕ್ಕೊಮ್ಮೆ ಬಂದು ಹೋಗುವವರು. ನಾವು ಇದೇ ಮೊದಲಬಾರಿಗೆ ಹೋಗಿದ್ದೆವು. ಆ ಕಲಾಶಾಲೆಯ ನಿರ್ದೇಶಕ ಫಿಲಿಪ್‌ ಅವರ ಸಮಕ್ಷದಲ್ಲಿ, ಏಳೆಂಟು ದೇಶಗಳ ಸುಮಾರು ಹದಿನೈದು ಮಂದಿ ಕಲಾವಿದರ ನಡುವೆ ಯಕ್ಷಗಾನ ಕಲೆಯ ಶ್ರೇಷ್ಠತೆಯನ್ನು ಸ್ಥಾಪಿಸುವ ಹೊಣೆ ನನ್ನ ಮೇಲಿದೆ ಎಂಬುದು ಅರಿವಿಗೆ ಬಂತು. ಫಿಲಿಪ್‌ ಅತ್ಯಂತ ಸಹೃದಯ ಮನುಷ್ಯ. ಫ್ರೆಂಚ್‌ ಅವರ ಮಾತೃಭಾಷೆ. ಇಂಗ್ಲಿಶ್‌ ಅರ್ಥವಾಗುತ್ತಿತ್ತಷ್ಟೆ. ಇಂಗ್ಲಿಶ್‌ನಲ್ಲಿ ಚೆನ್ನಾಗಿ ಮಾತನಾಡಬಲ್ಲರೆಂದು ಹೇಳಲಾರೆ. ಫಿಲಿಪ್‌ ಯಕ್ಷಗಾನದ ಹಿನ್ನೆಲೆಯ ಬಗ್ಗೆ ಫ್ರೆಂಚ್‌ ಭಾಷೆಯಲ್ಲಿ ಪ್ರಶ್ನೆ ಕೇಳಿದರು. ಫ್ರೆಂಚ್‌ ಭಾಷೆಯನ್ನು ಚೆನ್ನಾಗಿ ಬಲ್ಲ ಅನಿತಾ ಅದನ್ನು ಇಂಗ್ಲಿಶ್‌ ಮತ್ತು ಅರೆಬರೆ ಕನ್ನಡಕ್ಕೆ ಅನುವಾದಿಸಿ ವೇದಾವತಿಗೆ ಹೇಳಿದಳು. ವೇದಾವತಿ ಅದನ್ನು ನನಗೆ ವಿವರಿಸಿದಳು. ನಾನಾದರೊ ಎರಡನೆಯ ತರಗತಿಯನ್ನು ಪೂರ್ಣಗೊಳಿಸದ ವಿದ್ಯಾವಂತ! ಇಂಗ್ಲಿಶ್‌ನ್ನು ಅಲ್ಪಸ್ವಲ್ಪ ಅರ್ಥಮಾಡಿಕೊಳ್ಳಬಲ್ಲೆನೇ ಹೊರತು ಮಾತನಾಡಲು ಅರಿಯೆ. ಹಾಗೆಂದು ಆ ದೇಶದಲ್ಲಿ ಇಂಗ್ಲಿಶ್‌ ಭಾಷೆಯೂ ಪೂರ್ಣ ನಡೆಯುವುದಿಲ್ಲ ! “ನಿಮ್ಮ ಭಾಷೆಯಲ್ಲಿಯೇ ಹೇಳಿ’ ಎಂದರು ಫಿಲಿಪ್‌.

“ನಿಮ್ಮ ಭಾಷೆಯಲ್ಲಿ ಹೇಳಿ’ ಎಂದದ್ದು ಸುಮ್ಮನೆ ಅಲ್ಲ. ಒಂದು ವೇಳೆ ನನಗೆ ಇಂಗ್ಲಿಶ್‌ ಬರುತ್ತಿದ್ದರೂ ಅವರು ನಾನು ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನೇ ಬಯಸಿರಬೇಕು. ನಾನು ಹಾವಭಾವ ಸಮೇತ ಕನ್ನಡದಲ್ಲಿ  ವಿವರಿಸತೊಡಗಿದೆ. ಅದನ್ನು ಎಲ್ಲ ಕಲಾವಿದರೂ ವಿನಮ್ರವಾಗಿ ಅರಿಯಲು ಪ್ರಯತ್ನಿಸಿದರು. ಯಕ್ಷಗಾನ ಇತಿಹಾಸದ ಕುರಿತು ಹೇಳಿದ ಬಳಿಕ “ಲಯಾಧಾರಿತ’ವಾದ ಯಕ್ಷಗಾನ ಸ್ವರೂಪವನ್ನು ವಿವರಿಸಿದೆ. ತಾಳ ಹಾಕಿದೆ. ಕೆಲವು ಹೆಜ್ಜೆಗಳನ್ನು ಕುಣಿದು ತೋರಿಸಿದೆ. ನನ್ನ ಮಾತುಗಳನ್ನು ಮತ್ತು ಪ್ರದರ್ಶನವನ್ನೂ ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊಂಡರು.

ಅವರು ಎಷ್ಟು ಸಂವೇದನಾಶೀಲರಾಗಿ ಗಮನಿಸುತ್ತಾರೆಂದು ಅವರ ಮುಂದಿನ ಪ್ರತಿಕ್ರಿಯೆಯನ್ನು ಕೇಳಿದಾಗ ನನ್ನ ಅರಿವಿಗೆ ಬಂತು. ಆ ಪ್ರತಿಕ್ರಿಯೆ ನನ್ನನ್ನು ಕೊಂಚ ತಲ್ಲಣಗೊಳಿಸಿತು ಕೂಡ.  ನಾನು ಪೂರ್ವರಂಗದ ಹೆಜ್ಜೆಗಳನ್ನು ಸ್ಥೂಲವಾಗಿ ಕಾಣಿಸಿದ ಬಳಿಕ ಶೂರ್ಪನಖೀಯ ಒಡ್ಡೋಲಗವನ್ನು ಪ್ರದರ್ಶಿಸಿದ್ದೆ. ಅದು ಬ್ಯಾಲೆಯ ಸ್ವರೂಪದಲ್ಲಿತ್ತು. ತತ್‌ಕ್ಷಣ ಫಿಲಿಪ್‌, “ನೀವು ಮೊದಲು ಮಾಡಿದ ಹೆಜ್ಜೆಗಾರಿಕೆ ಕ್ರಮಕ್ಕೂ, ಈಗಿನ ಅಭಿನಯ ಕ್ರಮಕ್ಕೂ ಹೊಂದಾಣಿಕೆ ಆಗುವುದಿಲ್ಲವಲ್ಲ’ ಎಂದರು.

ನಾನು ಸಂಪ್ರದಾಯಬದ್ಧ ಶೈಲಿಯನ್ನು ಬಲ್ಲೆನಾದರೂ ವಿದೇಶಗಳಿಗೆ ಹೋಗುವಾಗ ಅಲ್ಲಿನವರಿಗೆ ಸುಲಭವಾಗಿ
ಸಂವಹನಗೊಳ್ಳುತ್ತದೆ ಎಂಬ ಕಾರಣಕ್ಕೆ “ಬ್ಯಾಲೆ’ ರೀತಿಯ ಮಾತಿಲ್ಲದ ಯಕ್ಷಗಾನ ಕಥಾನಕಗಳನ್ನೇ ಸಿದ್ಧಪಡಿಸಿ ಒಯ್ಯುತ್ತಿದ್ದೆ.  ಯಕ್ಷಗಾನ ಒಂದು ರಂಗಭಾಷೆ. ಅದು ಹುಟ್ಟುವ ದೇಶದಲ್ಲಿಯೂ (ನೆಲದಲ್ಲಿಯೂ) ಒಂದು ಭಾಷೆ ಇದೆ. ಆ ಎರಡೂ ಭಾಷೆಗಳು ಜೊತೆಯಾಗಿ ವ್ಯವಹರಿಸಬೇಕೇ ಹೊರತು ಬೇರೆ ಭಾಷೆಯ ಜೊತೆ ಆ ಕಲೆಯನ್ನು ಕಷ್ಟಪಟ್ಟು ಹೊಂದಿಸುವುದಾಗಲಿ, ಆ ಕಲೆಯಲ್ಲಿ ಸಂಭಾಷಣರೂಪದಲ್ಲಿರುವ ಆಡುಮಾತಿನ ಭಾಷೆಯನ್ನು ಆ ಕಲೆಯಿಂದ ತೆಗೆದುಬಿಡುವುದಾಗಲಿ ಅವರಿಗೆ ಇಷ್ಟವಾಗುವುದಿಲ್ಲ.

ಇದನ್ನು ಅರಿತ ನಾನು ಸಾಂಪ್ರದಾಯಿಕ ಹೆಜ್ಜೆಗಳನ್ನು ಪ್ರದರ್ಶಿಸಿದೆ. ನಾನು ಮತ್ತು ನನ್ನ ಶಿಷ್ಯ ಎರಡು ಪಾತ್ರಗಳಾಗಿ ಕಲ್ಪಿಸಿಕೊಂಡು ಸಂಕ್ಷಿಪ್ತವಾದ “ಅರ್ಥ’ ಸಂಭಾಷಣೆಯನ್ನು ಮಾಡಿದೆ. ಆ ಜನ ಅದನ್ನು ಕರತಟ್ಟಿ ಸ್ವಾಗತಿಸಿದರು. “ಇನ್ನೊಮ್ಮೆ ಮಾಡಿ’ ಎಂದು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದರು.

ನಾನು ಗಮನಿಸಿದಂತೆ ಕೆಲವೇ ದೇಶಗಳ ಮಂದಿ ಅರೆಬರೆ ಇಂಗ್ಲಿಶ್‌ನಲ್ಲಿ ಮಾತನಾಡುತ್ತಿದ್ದರು. ಕೊರಿಯಾ, ಸೌತ್‌ಆಫ್ರಿಕಾ ಬಿಟ್ಟರೆ ಬೇರೆ ದೇಶಗಳ ಹೆಸರು ಕೂಡ ನೆನಪಿಡುವಂಥಾದ್ದಲ್ಲ. ಅಂಥ ಪುಟ್ಟ ದೇಶಗಳ ಮಂದಿ ಅವರವರ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದರು. ನಾನು ಕೂಡ ಅವರ ಜೊತೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ! ಕೊನೆ ಕೊನೆಗೆ ಕಲಾವಿದರಾದ ನಮ್ಮ ನಡುವೆ ಎಂಥ ಆತ್ಮೀಯತೆ ಬೆಳೆದುಬಿಟ್ಟಿàತೆಂದರೆ ನಾವು ನಮ್ಮನಮ್ಮ ಭಾಷೆಗಳಲ್ಲಿ ಮಾತನಾಡಿದರೂ ಪರಸ್ಪರ ಅರ್ಥವಾಗಿ ಬಿಡುವಷ್ಟು ! ಹೃದಯದ ಭಾಷೆ ಬೇರೆಯೇ ಇದೆ ಎನ್ನುತ್ತಾರಲ್ಲ !

ಮೊದಲ ದಿನ ಎಲ್ಲರ ಪ್ರಶಂಸೆ ಗಳಿಸಿದ ಬಳಿಕ ನೆಮ್ಮದಿಯಿಂದ ವಸತಿಗೃಹಕ್ಕೆ ಮರಳಿದೆವು. ಮರುದಿನ ನಮ್ಮ ಪರ್ಯಟನೆ ಆರಂಭ. ಬೇರೆ ಬೇರೆ ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಏರ್ಪಡಿಸಿದ್ದರು. ಒಂದೆಡೆ, ವಿವಿಧ ದೇಶಗಳ ಕಲಾವಿದರಿಂದ ವಾದ್ಯ ಗಳ ವಾದನವಿತ್ತು. ಅನಿತಾ ನಮ್ಮ ಯಕ್ಷಗಾನ ಕೇಂದ್ರಕ್ಕೆ ಬಂದಿದ್ದಾಗ ಅವಳ ಜೊತೆ ಒಂದು ಚೆಂಡೆಯನ್ನು ಕೊಟ್ಟು ಕಳಿಸಿದ್ದೆ. ಅದನ್ನು ತರಿಸಿಕೊಂಡು ಶ್ರುತಿಗೊಳಿಸಿ ಸಜ್ಜಾದೆ. ಅವರ ವಾದನಕ್ರಮ ತುಂಬಾ ಸಂಕೀರ್ಣ. ಒಬ್ಟಾತ ಮುಸ್ಲಿಂ ಕಲಾವಿದನಂತೂ ದಫ್ನಂಥ ವಾದ್ಯವನ್ನು ತರಹೇವಾರಿಯಾಗಿ ಬಾರಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ. ಮುಂದೆ ನನ್ನ ಸರದಿ. ಅವರು ನುಡಿಸಿದ ಗತಿ “ತದ್ಧೀಂ ತತ್ತಧೀಂ ತಕಿಟ ತಕಧೀಂ’ ಎಂಬ ಅಷ್ಟತಾಳದ ಲಯದಲ್ಲಿರುವುದನ್ನು ಗಮನಿಸಿದೆ. 

ಅಲ್ಲಿನ ಜನ ಮೌನ ಮತ್ತು ಮೆಲುದನಿಯನ್ನು ತುಂಬ ಇಷ್ಟಪಡುತ್ತಾರೆ. “ಬಡ ಬಡ’ ಎಂದು ಬಾರಿಸಿದರೆ ಅವರಿಗೆ ಇಷ್ಟವಾಗುವುದಿಲ್ಲ. ನಾನು ನನ್ನ ಗುರು ಕೆಮ್ಮಣ್ಣು ಆನಂದರನ್ನು ನೆನಪಿಸಿಕೊಂಡು ಕೋಲಿನ ಮೊನೆಯಲ್ಲಿ ನುಡಿಸುತ್ತ ಮೆಲ್ಲನೆ ನಾದಗತಿಯನ್ನು ಸಾಂದ್ರಗೊಳಿಸುತ್ತ ಹೋದೆ !

ಎಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿದಿನ ನಡೆಯುವ ಕಾರ್ಯಕ್ರಮಗಳಲ್ಲಿ ಫಿಲಿಪ್‌ ಅವರು ಎಲ್ಲ ದೇಶಗಳ ಕಲಾವಿದರೊಂದಿಗೆ ಚರ್ಚಿಸಿ ಸಮಾನವಾಗಿ ಸಮಯವನ್ನು ಹಂಚಿಹಾಕಿದ್ದರು. ಮೊದಲೆಲ್ಲ ನಮಗೆ ಕೇವಲ 10 ನಿಮಿಷದ ಪ್ರದರ್ಶನಕ್ಕೆ ಮಾತ್ರ ಅವಕಾಶವಿತ್ತು. ಆ ಹತ್ತೇ ನಿಮಿಷದಲ್ಲಿ ಯಕ್ಷಗಾನದ ಸಮಗ್ರ ಸೌಂದರ್ಯವನ್ನು ಸೂಕ್ಷ್ಮವಾಗಿ ಅವರ ಮುಂದಿಡಬೇಕಾಗಿತ್ತು.
ನಿರ್ದೇಶಕರಾದ ಫಿಲಿಪ್‌ ಅವರಿಗೆ ನಮ್ಮ ಮೇಲೆ ಎಂಥ ಅಭಿಮಾನ ಹುಟ್ಟಿತೆಂದರೆ ನಮ್ಮ ಹತ್ತು ನಿಮಿಷವನ್ನು ಹಿಗ್ಗಿಸಿ ಇಪ್ಪತ್ತು ನಿಮಿಷಗಳ ಅವಕಾಶ ನೀಡಿದರು. ಮುಂದೆ ಅದು ಅರ್ಧ ಗಂಟೆಯಷ್ಟು ವಿಸ್ತರಿಸಿತು.

ನಾನು, ಅನಿತಾ, ಶೈಲೇಶ್‌, ವೇದಾವತಿ ಧ್ವನಿಮುದ್ರಿತ ಹಿಮ್ಮೇಳದ ಹಿನ್ನೆಲೆಯಲ್ಲಿ ರಾಮಭದ್ರ ಗೋವಿಂದ, ಹರೇರಾಮ ಗೋವಿಂದ ಹಾಗೂ ಕಥಾಭಾಗವನ್ನು ಪ್ರದರ್ಶಿಸಿದೆವು. ನಾನು ಶೂರ್ಪನಖೆಯ ಪಾತ್ರವನ್ನು ಸಾಂಪ್ರದಾಯಿಕವಾಗಿಯೇ ಪ್ರದರ್ಶಿಸಿದೆ. ಯಕ್ಷಗಾನದಲ್ಲಿ ಸಹಜವಾಗಿರುವ ಆಂಗಿಕ ಅಭಿನಯಕ್ಕೆ ಒತ್ತು ನೀಡಿದೆ. ನಾನು ತೆರೆ ತೆರೆದು ಆರ್ಭಟಗೊಡುತ್ತ ಹೊರಬರುವಾಗಲಂತೂ ಮಕ್ಕಳು, ದೊಡ್ಡವರೆಲ್ಲ ಭಯಪಟ್ಟು ಕಿರುಚಿದ್ದರು. ಯಕ್ಷಗಾನ ಪ್ರಸ್ತುತಿಯನ್ನು ಅವರು ಎಷ್ಟು ಮೆಚ್ಚಿಕೊಂಡರೆಂದರೆ ಅಲ್ಲಿನವರು, ವಿದೇಶಗಳ ಕಲಾವಿದರು ನನ್ನ ಅಭಿಮಾನಿಗಳಾಗಿಬಿಟ್ಟರು. ಅನಿತಾ ನನ್ನನ್ನು “ಗುರೂಜಿ’ ಎಂದು ಕರೆಯುತ್ತಿದ್ದುದರಿಂದ ಅವರು ಕೂಡ “ಗುರೂಜಿ’ ಎನ್ನತೊಡಗಿದರು. “ಗುರೂಜಿ’ ಎಂಬ ಪದದ ಅರ್ಥವನ್ನು ಕೇಳಿ ತಿಳಿದುಕೊಂಡ ಮೇಲೆ ಅವರಿಗೆ ನನ್ನ ಮೇಲೆ ಇನ್ನಷ್ಟು ಗೌರವ ಉಂಟಾಯಿತು.

ಒಮ್ಮೆ ನಾವೆಲ್ಲ ಜೊತೆಯಾಗಿ ಕುಳಿತು ಊಟಕ್ಕೆ ಸಿದ್ಧರಾಗುತ್ತಿದ್ದೆವು. ಒಂದು ಪಿಂಗಾಣಿತಟ್ಟೆಯಲ್ಲಿ ಸಾಂಬಾರಿನಂಥ ಪದಾರ್ಥವಿತ್ತು. ನಾನು ತಿನ್ನಬೇಕೆಂದಿರುವಾಗ ಅನಿತಾ ಅದನ್ನು ಎಳೆದುಕೊಂಡಳು. ನಮಗೆಲ್ಲ ಆಶ್ಚರ್ಯ ! “ನಿಮಗೆ ಬೇಡ, ಅದು ಬೀಫ್’ ಎಂದಳು. ನಾನು ಬೇರೆ ಆಹಾರ ವಸ್ತುವನ್ನು ಆಯ್ದುಕೊಂಡೆ. ಅದನ್ನು ಫಿಲಿಪ್‌ ಗಮನಿಸಿದರು.  ಸನಿಹ ಬಂದು ನಾವು ಬೀಫ್ ತಿನ್ನುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡರು. “ಹಾಗಿದ್ದರೆ ಹಂದಿಮಾಂಸ ಸಿದ್ಧಗೊಳಿಸಲೆ’ ಎಂದರು. ಅದನ್ನೂ ನಯವಾಗಿ ನಿರಾಕರಿಸಿದೆವು.  ನಮ್ಮನ್ನು ಸರಿಯಾಗಿ ಸತ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರಪಟ್ಟುಕೊಳ್ಳುತ್ತಿರುವಂತೆ ಅನ್ನಿಸಿತು. “ನಾವು ಬಂದದ್ದು ಕಲಾಪ್ರದರ್ಶನಕ್ಕೆ. ಅದು ನಿಮಗೆ ಮೆಚ್ಚುಗೆಯಾಗುವುದಷ್ಟೇ ಮುಖ್ಯ. ಉಳಿದದ್ದು ಗೌಣ’ ಎಂದು ನಾನು ನನಗೆ ತಿಳಿದಂತೆ ಅವರಿಗೆ ಮನದಟ್ಟು ಮಾಡಿದೆ.

ಫ್ರಾನ್ಸ್‌ ಮತ್ತು ಅಲ್ಲಿಂದ ಅನ್ಯ ದೇಶಗಳ ಮಂದಿ ನಮ್ಮನ್ನು ಎಂಥ ಪ್ರೀತಿಯಿಂದ ನೋಡಿಕೊಂಡರೆಂಬುದನ್ನು ಎಷ್ಟು ಹೇಳಿದರೂ ಕಡಿಮೆಯೇ. ಒಬ್ಟಾತ- ಆತನಿಗೆ ಇಂಗ್ಲಿಶ್‌ ಬರುತ್ತಿತ್ತು- ಒಂದು ರುಮಾಲನ್ನು ನನಗೆ ಉಡುಗೊರೆಯಾಗಿ ನೀಡಿ ಬಾಗಿ ವಂದಿಸಲು ಬಂದ. ಆತ ಯಾವುದೋ ಇಸ್ಲಾಂ ದೇಶದ ಕಲಾವಿದ. ಆತನಿಗೆ ನನ್ನನ್ನು ನೋಡಿದಾಗ ತಂದೆಯಂಥ ಗೌರವ ಹುಟ್ಟಿತಂತೆ! ಆ ರುಮಾಲು ಕೂಡ ಆತನ ತಂದೆಯದ್ದಂತೆ. ಆತ ಅಂಥ ಅಭಿಮಾನದಲ್ಲಿ ಕೊಡುವಾಗ ಬೇಡವೆನ್ನುವುದಾದರೂ ಹೇಗೆ ! ಅದನ್ನು ನಾನು ನನ್ನ ಬದುಕಿನ ಅಮೂಲ್ಯ ಉಡುಗೊರೆಯಾಗಿ ಸ್ವೀಕರಿಸಿ ಜೋಪಾನವಾಗಿರಿಸಿಕೊಂಡೆ.

ಇನ್ನೇನು ಭಾರತಕ್ಕೆ ಹೊರಡುವುದಕ್ಕೆ ಕೆಲವೇ ಗಂಟೆಗಳು ಉಳಿದಿದ್ದವು. ನಮ್ಮನ್ನು ಬೀಳ್ಕೊಡಲು ಬಂದವರ ಮುಖ ಸಣ್ಣದಾಗಿತ್ತು. ಸ್ವದೇಶಕ್ಕೆ ಮರಳುತ್ತಿದ್ದೇನೆ ಎಂಬ ಸಂತೋಷ ನಮ್ಮಲ್ಲಿದ್ದರೂ ಅವರ ಸುಹೃದ್‌ಸಂಮಾನ ನಮ್ಮನ್ನು  ಇಪ್ಪತ್ತುಮೂರು ದಿನ ಕಾಲ ಅವರ ಕುಟುಂಬದ ಸದಸ್ಯನಂತೆ ಕಟ್ಟಿಹಾಕಿತ್ತು. ಈಗ ಬಿಟ್ಟು ಬರುವುದಾದರೂ ಹೇಗೆ? ಮರಳಿ ಬರುವಾಗ ಪ್ಯಾರಿಸ್‌ನ ಗಗನಚುಂಬಿ ಗೋಪುರದ ಬಗ್ಗೆ ಯಾರೋ ಮಾತನಾಡುವು ದನ್ನು ಕೇಳಿದೆ. ಫ್ರೆಂಚ್‌ ಮಂದಿಯ ಕಲಾಪ್ರೀತಿ, ಭಾಷಾಪ್ರೀತಿ, ಜನಪ್ರೀತಿಯೂ ಆ ಗೋಪುರದಷ್ಟೇ ಉನ್ನತವಾದುದು!

ಬನ್ನಂಜೆ ಸಂಜೀವ ಸುವರ್ಣ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.