ಕೆಮ್ಮೋ ಕೆಮ್ಮು!

Team Udayavani, Sep 1, 2019, 5:35 AM IST

ಮೊನ್ನೆ ಅಂದರೆ ಮಳೆಗಾಲದ ಕೊಂಚ ಮೊದಲ ದಿನಗಳ ಬಿಸಿಲಿಗೆ ನಮ್ಮ ಅಪಾರ್ಟ್‌ಮೆಂಟ್‌ ಯಾವ ಪರಿ ಕಾದಿತ್ತೆಂದರೆ ಮನೆಯೊಳಗಿರುವ ರಬ್ಬರ್‌ ಬ್ಯಾಗುಗಳು ತನ್ನಿಂತಾನೆ ಕರಗಿ ಹೋಗತೊಡಗಿದ್ದವು. ಇನ್ನೊಂದು ವಾರ ಮಳೆ ಬರಲಿಲ್ಲ ಎಂದರೆ ನಾವು ಮನುಷ್ಯರು ಸಹ ಒಂದು ಕಡೆಯಿಂದ ಕರಗಿ ಹೋಗುತ್ತೇವೇನೋ ಎಂಬಂಥ ಬಿಸಿಲಿತ್ತು. ಉಡುಪಿಯಲ್ಲಿ ಕಪ್ಪೆಗಳ ಮದುವೆ, ರಾಯಚೂರಿನಲ್ಲಿ ಕತ್ತೆಗಳ ಮದುವೆ ಹೀಗೆ ಅನೇಕ ಮದುವೆಗಳಾದ ಬಳಿಕ ಶುರುವಾದ ಮಳೆಗಾಲ ತಂಪನ್ನೂ ತಂದಿತು, ಭಯವನ್ನೂ ಉಂಟು ಮಾಡಿತು.

ಪ್ಲಾಸ್ಟಿಕ್‌ಗಳು ಕರಗುವುದು ನಿಂತಿತು. ಮಳೆಗಾಲ ಅಂದ ಬಳಿಕ ಹಳ್ಳಿಗಳಲ್ಲಿ ತಯಾರಿಯೇ ಬೇರೆ. ತೋಟದವರಿಗೆ ಹನಿಹಿಡಿಯುವ ದಿನದ ತಯಾರಿ. ಹಳ್ಳಿಯವರು ಮಳೆಯನ್ನು ಕಂಡು ಗೊಣಗುವುದಿಲ್ಲ. ಈ ಸಲ ಹುಬ್ಬೆ ಮಳೆ ಬಂದು ಅಬ್ಬೆ ಹಾಲು ಉಣಿಸಿತ್ತು ಎಂಬ ಗಾದೆಗಳನ್ನು ನೆನಪಿಸಿಕೊಳ್ಳುತ್ತ ಮಳೆ ಹಬ್ಬ ಮಾಡುತ್ತಾ ಚಟಗರಿಗೆ ಕಾಯಿ ಒಡೆಯುತ್ತಾರೆ. ಹಾಲು ಪಾಯಸ ಮಾಡಿ ಉಣ್ಣುತ್ತಾರೆ. ದಕ್ಷಿಣಕನ್ನಡದಲ್ಲಿ ಹಾಲೆ ಕಷಾಯ ಕುಡಿದು ಆಟಿ ಅಮಾವಾಸ್ಯೆ ಆಚರಿಸುತ್ತಾರೆ. ಮಳೆಗೇನು ಹಳ್ಳಿ-ನಗರ ಎಂದು ಭೇದವಿಲ್ಲ. ಬಂದರೆ ಬಂದೇ ಬರುತ್ತದೆ. ಕೊಚ್ಚಿ ಕೊಂಡು ಹೋಗು ವಂಥ ಪ್ರವಾಹ ಉಂಟುಮಾಡುತ್ತದೆ. ಬರದಿದ್ದರೆ ಬಾಯಿ ಬಡಿಸುತ್ತದೆ. ಯಾವ ಪೂಜೆ ಯಾವ ಮದುವೆಗೂ ಕೇರ್‌ ಮಾಡದೆ ಮಾಯವಾಗಿ ಬಿಡುತ್ತದೆ.

ಅಂತೂ ಈ ಸಲ ಜೂನ್‌ ತಿಂಗಳಲ್ಲಿ ಮಳೆಗಾಲದ ತಯಾರಿಗಾಗಿ ನಾನು ಮಗಳೊಟ್ಟಿಗೆ ಹಂಪನಕಟ್ಟೆಗೆ ಹೋಗಿ “ಮಳೆಗಾಲದ ಚಪ್ಪಲಿ ಕೊಡಿ’ ಎಂದೆ. ನಾನಂತೂ ಮಕ್ಕಳೊಂದಿಗೆ ಆಡಲು ಹೋಗಿ ಬಿದ್ದು ಕಾಲು ಮುರಿಸಿಕೊಂಡ ಬಳಿಕ ಮೊದಲ ಬಾರಿಗೆ ಶಾಪಿಂಗ್‌ಗೆಂದು ಹೊರಗೆ ಬಂದುದಾಗಿತ್ತು. ನನ್ನ ಕುಂಟು ಕಾಲಿನ ನಿಧಾನ ಎಳೆತವನ್ನು ನೋಡಿದ ಚಪ್ಪಲಿ ಅಂಗಡಿ ಮಾಲೀಕ, “ನಮ್ಮಲ್ಲಿ ಕುಂಟು ಕಾಲಿಗಾಗುವ ಚಪ್ಪಲಿಗಳು ಇವೆ ಮೇಡಂ, ನೋಡ್ತೀರಾ?” ಅಂದ. “ಡಾಕ್ಟರ್‌ಗಳು ಔಷಧಿ ಬರೆದು ಕೊಟ್ಟ ಹಾಗೆ ಚಪ್ಪಲಿ ಬರೆದುಕೊಡುತ್ತಾರೆ. ಅವರೆಲ್ಲ ಇಲ್ಲೇ ಬರುವುದು” ಎಂದೆಲ್ಲ ಹೇಳಿ ಬೇರೊಂದು ಮೂಲೆಗೆ ಕರೆದೊಯ್ದ. ಮೊಣಕಾಲು ಪೆಟ್ಟಿಗೆ, ಕಾಫ್ ಮಸಲ್ಸ… ನೋವಿಗೆ, ಕಾಲಿನ ಬೆರಳುಗಳ ಪೆಟ್ಟಿಗೆ, ಆ್ಯಂಕಲ್‌ ನೋವಿನ ಪರಿಹಾರಕ್ಕೆ ಹೀಗೆ ವಿವಿಧ ನೋವಿಗೆ ವಿವಿಧ ಬಗೆಯ ಪಾದ ಭಂಗಿಯನ್ನು ನೀಡುವ ಪಾದುಕೆಗಳು ಅಲ್ಲಿದ್ದವು.

“ಈಗೇನೋ ಕೆಳ ಹಿಮ್ಮಡಿ ಕಟ್ಟಾಗಿದೆ. ಒಂದು ಚಪ್ಪಲಿ ಅದಕ್ಕಿರಲಿ. ಮುಂದೆ ಬರಬಹುದಾದ ಉಳಿದ ನೋವುಗಳಿಗೂ ಕೆಲವು ಇರಲಿ” ಎಂದು ನಾಲ್ಕಾರು ಜತೆ ಚಪ್ಪಲಿ ಖರೀದಿಸಿ ಮಗಳಿಗೊಂದು ಮಳೆಗಾಲದ ಚಪ್ಪಲಿ, ಕೊಡೆ ಖರೀದಿಸಿ ಅಂಗಡಿಯಿಂದ ಕೆಳಕ್ಕಿಳಿಯುತ್ತಿದ್ದೆವು, ಎದುರಿನಿಂದ ಬರುತ್ತಿರುವ ಯುವತಿಯೋರ್ವಳು ನನ್ನನ್ನು ನೋಡಿದವಳೇ ಏನನ್ನೋ ಜ್ಞಾಪಿಸಿಕೊಂಡು ಗೊಳ್ಳೆಂದು ನಗುತ್ತ ಮುಂದೆ ಸಾಗಿದಳು.
ಜನಸಾಗರದ ನಡುವೆ ನೀವು ನಿಮ್ಮ ಕುಟುಂಬದ ಜೂನಿಯರ್‌ ಸಿಟಿಜನ್‌ಗಳನ್ನು ಅವರ ಶಾಪಿಂಗ್‌ ಡಿಮಾಂಡ್‌ಗಳನ್ನು ನಿಭಾಯಿಸುತ್ತಾ ಮುಂದೆ ತಳ್ಳಿಕೊಂಡು ಸಾಗುತ್ತಿದ್ದಾಗ ಹೀಗೆ ಎದುರಿಗೆ ಬಂದ ವ್ಯಕ್ತಿಯೊಂದು ನಿಮ್ಮನ್ನು ನೋಡಿ ಕಿಲಕಿಲಾಂತ ನಗುತ್ತ, “”ಹಲೋ, ನಾವೆಲ್ಲೋ ಭೇಟಿ ಆದಂತಿದೆ ಅಲ್ಲವೆ?’ ಎನ್ನುತ್ತ ನಕ್ಕು ಮುಂದೆ ಹೋದರೆ ನಿಮಗೆ ಹೇಗಾದೀತು? ನನಗೂ ಹಾಗೇ ಆಯಿತು. ನೆನಪು ಮಾಡಿಕೊಳ್ಳುತ್ತ ಹೆಜ್ಜೆ ಇಡತೊಡಗಿದೆ. ಯಾರೆಂದು ನೆನಪಾಗುತ್ತಿಲ್ಲ! ನನ್ನ ವಿದ್ಯಾರ್ಥಿ ಸಂಕುಲದಲ್ಲಿ ಒಬ್ಬಳಾಗಿರಬಹುದೆ? ನೀವು ಹೀಗೆ ಡ್ಯಾನ್ಸ್‌ ಮಾಡಿಕೊಂಡಿದ್ದರೆ ಈ ಬಾರಿ ಪಾಸ್‌ ಆದ ಹಾಗೆ ಎಂದು ನನ್ನಿಂದ ಬೈಸಿಕೊಂಡು ಈಗ ಫ‌ಸ್ಟ್‌ ಕ್ಲಾಸ್‌ ಪಾಸ್‌ ಆಗಿ ನನ್ನ ಬಳಿ, “”ಏನಂತೀರಿ ಮೇಡಂ?” ಎಂದು ಕೇಳುವ ರೀತಿ ಇದಾಗಿರಬಹುದೆ ! ನೆನಪುಗಳನ್ನು ಕೆದಕುತ್ತ ಹೋದೆ.

ಎರಡು ದಶಕಗಳ ಹಿಂದೆ ಮಂಗಳೂರಿನಲ್ಲಿ “ಧೋ’ ಎಂದು ಸುರಿಯುವ ಮಳೆ ಐದಾರು ತಿಂಗಳು ಬಾರಿಸುತ್ತಿತ್ತು. ಮಳೆಯ ಜತೆಗೆ ಥಂಡಿ, ಶೀತ, ಕೆಮ್ಮು ತಿಂಗಳುಗಟ್ಟಲೆ ಮನೆಯವರನ್ನು ಬಾಧಿಸುತ್ತಿತ್ತು. ಅತ್ತೆ, ಅಜ್ಜಿ, ಚಿಕ್ಕಮ್ಮ, ಮಗು, ನಾನು ಯಜಮಾನರು ಹೀಗೆ ಮನೆಯಲ್ಲಿ ಎಲ್ಲರೂ ಶೀತ ಬಾಧೆಗೊಳಗಾಗಿ ಭೂತ ಬಾಧೆಗೊಳಗಾದವರಂತೆ ವಿಚಿತ್ರವಾಗಿ ವ್ಯವಹರಿಸುತ್ತಿದ್ದೆವು.

ಎರಡೂ ಮೂಗಿನಲ್ಲಿ ಧಾರಾಕಾರ ಪ್ರವಾಹ. ತಲೆನೋವು, ಕೆಂಪು ಕಣ್ಣು ಮೈ ಕೈ ನೋವಿನಿಂದಾಗಿ ಸುಟ್ಟ ಸೊಟ್ಟ ಮುಖಭಾವ. ನಾನು ಮಂಗಳೂರಿಗೆ ಬಂದ ಹೊಸದರಲ್ಲಿ ಮಲೇರಿಯಾವಾಗಲಿ, ಡೆಂಗ್ಯೂ ವಾಗಲಿ ಈಗಿನಂತೆ ಹೆದರಿಸುತ್ತಿರಲಿಲ್ಲ. ಶೀತ, ಥಂಡಿ ಅಷ್ಟೆ. ವಾರಗಟ್ಟಲೆ ಕೆಮ್ಮಿ ಕೆಮ್ಮಿ ಹಗುರಾಗುತ್ತಿದ್ದೆವು.

ಥಂಡಿ ತೊಲಗಿಸಲು ಕಷಾಯದ ಮೊರೆ ಹೋಗುವು ದೊಂದೇ ಉಪಾಯ. ಮಳೆಗಾಲ ಮುಗಿಯುವಷ್ಟರಲ್ಲಿ ಕೆಜಿಗಟ್ಟಲೆ ಒಳ್ಳೆ ಮೆಣಸು, ಶುಂಠಿ ಖರ್ಚಾಗಿರುತ್ತಿತ್ತು.
ನಮ್ಮ ಮನೆಯಲ್ಲಿದ್ದುಕೊಂಡು ಎಂಬಿಬಿಎಸ್‌ ಓದುವ ವಿದ್ಯಾರ್ಥಿನಿಯೊಬ್ಬ ಳಿ ದ್ದಳು. ಆಯುರ್ವೇದ ಓದುವ ವಿದ್ಯಾರ್ಥಿಯೊಬ್ಬನಿದ್ದ. ದಿನವೂ ಸಂಜೆ ಅವರಿಬ್ಬರಲ್ಲಿ ಒಂದು ಗಂಟೆಯಾದರೂ ತಮ್ಮ ತಮ್ಮ ಪದ್ಧತಿಯ ವೈದ್ಯ ವಿಧಾನದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಚರ್ಚೆ ಹೋಗಿ ಜಗಳ ಹತ್ತಿಕೊಂಡಾಗ ನಾನು ಮಧ್ಯಪ್ರವೇಶಿಸುವುದು ಇತ್ತು. “”ಆಯುರ್ವೇದ ನಂಬಿ ಜೀವ ಕಳೆದುಕೊಳ್ಳಬೇಡಿ ಚಿಕ್ಕಮ್ಮ” ಎಂದು ಎಂಬಿಬಿಎಸ್‌ ಹುಡುಗಿ ಹೇಳಿದರೆ, “”ಅವಳು ಹೇಳಿದ ಮಾತ್ರೆ ತೆಗೆದುಕೊಂಡು ಸುಮ್ಮನೆ ಜೀವ ಕಳೆದುಕೊಳ್ಳುತ್ತೀರಿ” ಎಂದು ಆಯುರ್ವೇದ ಹುಡುಗ ಹೆದರಿಸುತ್ತಿದ್ದ. ಇಬ್ಬರಿಗೂ ಸಮಾಧಾನವಾಗುವ ರೀತಿಯಲ್ಲಿ ನಾನು ಸಾಂತ್ವನ ಹೇಳಬೇಕಿತ್ತು- ಕೆಮ್ಮುಗಳ ನಡುವೆ.

“”ಆಯುರ್ವೇದವೂ ಒಳ್ಳೆಯ ಪದ್ಧತಿ ಹೌದು ಮಾರಾಯ. ಆದರೆ ನಿಮ್ಮ ಪಥ್ಯವನ್ನು ಯಾರು ಮಾಡುತ್ತಾರೆ? ಮೊಸರು ನಿಷಿದ್ಧ, ಹಣ್ಣು ತರಕಾರಿ ಕೂಡದು, ಅದು ವಜ್ಯì, ಇದು ವಜ್ಯì. ಕಾಫಿಯನ್ನು ಮೂಸಲು ಬೇಡಿ. ಉಪ್ಪಿನಕಾಯಿಯನ್ನು ಕಣ್ಣಲ್ಲಿ ನೋಡುವ ಹಾಗಿಲ್ಲ. ಸೊಪ್ಪುಸದೆಯ ಘಾಟು ವಾಸನೆ ಮೀರುವಂತಿಲ್ಲ. ಅನ್ನುತ್ತ ಬದುಕೆ ಸಾಕು ಅನ್ನಿಸಿಬಿಡುತ್ತೀರಿ. ಅದೇ ನಮ್ಮ ಇಂಗ್ಲಿಷ್‌ ವೈದ್ಯರನ್ನು ನೋಡು, ಕಾಫಿ ಕುಡಿಯಿರಿ. ಪರವಾಗಿಲ್ಲ. ಪಥ್ಯ ಬೇಕಿಲ್ಲ. ಈ ಗುಳಿಗೆ ನುಂಗಿ ನುಂಗುತ್ತ ಇರಿ. ಇಂಜೆಕ್ಷನ್‌ ತಗೊಳ್ತಾ ಇದ್ರಾಯ್ತು…ಎಂದೇ ಉದಾರವಾದಿಗಳಾಗಿ ಹೇಳುತ್ತಿರುತ್ತಾರೆ. ಈ ಇಬ್ಬರು ವೈದ್ಯರು ನಾವು ಒಂದಲ್ಲ ಒಂದು ದಿನ ಸಾಯುವುದನ್ನು ತಪ್ಪಿಸಲಾರರು. ಅಂದ ಮೇಲೆ “ತಿನ್ನದೇ ಸಾಯಿರಿ’ ಎನ್ನುವವರಿಗಿಂತ “ತಿಂದು ಸಾಯಿರಿ’ ಎನ್ನುವವರು ಮೇಲಲ್ಲವೇ ಎಂಬ ವಿತಂಡವಾದ ಅಥವಾ ಹತಾಶವಾದ ಹೂಡಿದಾಗ ಇನ್ನು ವಾದಿಸಿ ಪ್ರಯೋಜನವಿಲ್ಲ ಎಂದು ಇಬ್ಬರೂ ಮೇಲೇಳುತ್ತಿದ್ದರು. ಆ ದಿನಕ್ಕೆ ನಾವು ಬಚ್ಚಾವ್‌! ಎರಡು ನಂಬಿಕೆಗಳ ನಡುವೆ ಬರುವ ಭಿನ್ನಾಭಿಪ್ರಾಯಗಳು ಯಾವ ರೀತಿ ಜಗಳಕ್ಕೆ ತಿರುಗಿಕೊಂಡು ಉಳಿದವರ ಪ್ರಾಣ ತಿನ್ನುತ್ತವೆ ಎಂಬುದು ನಮಗೆ ಅಭ್ಯಾಸವಾಗಿ ಹೋಗಿತ್ತು. ಹುಡುಗಿಯ ಮಾತು ಕೇಳಿ ಇಂಗ್ಲಿಷ್‌ ವೈದ್ಯರಲ್ಲಿಗೆ ಹೋಗಿ ಇಂಜೆಕ್ಷನ್‌ ಚುಚ್ಚಿಕೊಂಡು ಬಂದು ನರಳುತ್ತ ಮಲಗಿದ್ದಾಗ ಆಯುರ್ವೇದ ತಜ್ಞ ಬಂದು, “ನಾನು ಹೇಳಿದಂತೆ ಕೇಳಿದ್ದರೆ ಈ ಬಾಧೆ ಬೇಕಿತ್ತಾ ಚಿಕ್ಕಮ್ಮ’ ಎಂದು ಕೇಳಿದಾಗ “ಹೌದಪ್ಪಾ ಹೌದು’ ಎಂದು ನರಳಿದ್ದೆ
.

ಕೆಲವೇ ದಿನಗಳಲ್ಲಿ ಥಂಡಿ-ಶೀತ ಅಲ್ಲದ ಇನ್ನೇನೋ ಒಂದು ತೊಂದರೆ ಕಾಣಿಸಿಕೊಂಡಾಗ, “ಈ ಬಾರಿ ನಿನ್ನ ಆಯುರ್ವೇದ ತಜ್ಞರಲ್ಲಿ ಕರೆದುಕೊಂಡು ಹೋಗು ಮಾರಾಯ’ ಎಂದೆ. ಒಂದು ಮಲೆಯಾಳಿ ಲೇಡಿ ಡಾಕ್ಟರ್‌ರ ಆಯುರ್ವೇದ ಶಾಪಿಗೆ ಹೋದೆವು. ಹೀಗೆ ಹೀಗೆ ಮೈತುಂಬಾ ಬೆವರುತ್ತದೆ, ಕಾಲು ಅದುರುತ್ತದೆ ಎಂದು ಅಲವತ್ತುಕೊಂಡೆ. “ಕಾಪ್ರಿ ಕಾಪ್ರಿ ಆಗುತ್ತದೆಯಾ’ ಎಂದು ಕೇಳಿದಳು. ಹಾಗೆಂದರೆ ಏನೆಂದು ತಿಳಿಯದೇ ನಮ್ಮ ಚಿಕ್ಕಪ್ಪನ ಮಗನ ಮುಖ ನೋಡಿದೆ. “ನಗಬೇಡಿ’ ಎಂದು ಸನ್ನೆ ಮಾಡಿದ ಆತ, “ಗಾಬರಿ ಆಗುತ್ತಿದೆಯಾ ಎಂದು ಕೇಳುತ್ತಿದ್ದಾರೆ ಚಿಕ್ಕಮ್ಮ’ ಎಂದ. ಗಾಬರಿಗೆ ಕಾಪ್ರಿ ಎನ್ನುತ್ತಿದ್ದಾಳೆ. ಅರ್ಧ ಕಾಪ್ರಿ ಹೊರಟು ಹೋಯಿತು. ಅವಳು ನೀಡಿದ ಕಹಿ ಔಷಧಿ ಪಡೆದು ಪಥ್ಯ ಕೇಳಿಕೊಂಡು ಮನೆಗೆ ಬಂದೆ.

ಊರಿಂದ ಚಿಕ್ಕಮ್ಮ ಬರುತ್ತೇನೆಂದು ಫೋನ್‌ ಮಾಡಿದಾಗ ಖುಷಿಯಾಯಿತು. ಆದರೆ ಅವರು ಬಂದಿಳಿದಾಗ ಮಲೆನಾಡಿನ ಮಳೆಯಿಂದ ಪ್ರೇರಿತವಾದ ವಿಚಿತ್ರ ಸ್ವರದ ಕೆಮ್ಮು ಕರಾವಳಿಗೆ ಆಮದಾಗಿತ್ತು ಚಿಕ್ಕಮ್ಮ ಕೆಮ್ಮಿದಾಗ ಖಾಲಿ ಡಬ್ಬಿಯೊಂದನ್ನು ಬಡಿದ ಸಪ್ಪಳ ಬರುತ್ತಿತ್ತು. ಇದು ಸಾಧಾರಣ ಕೆಮ್ಮಾಗಿದ್ರೆ ಕಷಾಯ ಕುಡಿದು ಕಡಿಮೆ ಮಾಡಿಕೋತಿದ್ದೆ
. ಮಳೆಯೋ ಚಳಿಯೊ ಕಡಿಮೆ ಆದ ಮೇಲೆ ಕೆಮ್ಮು ನಿಲ್ಲುತ್ತಿತ್ತು. ಆದರೆ, ಈ ಬಾರಿ ನಿಲ್ಲುತ್ತಿಲ್ಲ. “ಡಬ್ಬಿ ಬಡಿದು ನಮ್ಮನ್ನೆಲ್ಲ ಎಚ್ಚರಿಸುತ್ತಿ’ ಎಂದು ಮಕ್ಕಳ ಗೊಣಗಾಟ ಜಾಸ್ತಿ ಆದ ಮೇಲೆ ಮಂಗಳೂರು ಬಸ್ಸು ಹತ್ತಿದೆ. “ಯಾವ ಡಾಕ್ಟರರಲ್ಲಿ ಕರೆದುಕೊಂಡು ಹೋಗುತ್ತೀಯಾ, ನೀನೇ ನೋಡು’ ಎಂದರು. ಆಯುರ್ವೇದವು ಅಲ್ಲದ ಇಂಗ್ಲಿಷೂ ಅಲ್ಲದ ಹೋಮಿಯೋಪತಿಯನ್ನೇಕೆ ನೋಡಬಾರದು ಎಂದು ಈ ಬಾರಿ ಹೋಮಿಯೋ ಡಾಕ್ಟರೊಬ್ಬರ ಬಳಿ ಚಿಕ್ಕಮ್ಮನನ್ನು ಕರೆದೊಯ್ದೆ.ಡಾಕ್ಟರು ಬಿಡುವಾಗಿದ್ದು ಚಿಕ್ಕಮ್ಮನ ಕೇಸ್‌ ಹಿಸ್ಟರಿ ಕೇಳಲು ಶುರು ಮಾಡಿದರು.

ಅವರ ವಿವರ, ಅವರ ಮನೆಯವರೆಲ್ಲರ ವಿವರ, ಅವರ ಮನೆಯಲ್ಲಿ ಎಲ್ಲರೂ ತಿನ್ನುವ ಆಹಾರದ ವಿವರ, ಊಟದ ಅಕ್ಕಿ ಯಾವುದು, ಖಾರ ಎಷ್ಟು ಹಾಕುತ್ತೀರಿ, ಎಮ್ಮೆ ಹಾಲು ಕುಡಿಯುತ್ತೀರಾ, ದನದ ಹಾಲಾ? ಕಾಫಿಗೆ ಸಕ್ಕರೆ ಎಷ್ಟು ಹಾಕುತ್ತೀರಿ? ಎಷ್ಟು ಹೊತ್ತಿಗೆ ಏಳುತ್ತೀರಿ? ಎದ್ದತಕ್ಷಣ ಏನು ಮಾಡುತ್ತೀರಿ? ಊಟ ಎಷ್ಟು ಹೊತ್ತಿಗೆ ಮಲಗುವುದು ಎಷ್ಟು ಹೊತ್ತಿಗೆ? ನಿದ್ದೆಯಲ್ಲಿ ಕರೆಯುತ್ತೀರಾ, ರಾತ್ರಿ ಎಷ್ಟು ಸಲ ಏಳುತ್ತೀರಿ- ಪ್ರಶ್ನೆಗಳು ಅವ್ಯಾಹತ ಪ್ರಶ್ನೆಗಳು.

ಚಿಕ್ಕಮ್ಮ ಕಂಗಾಲು. ಆದರೆ ಕೆಮ್ಮು ತೊಲಗಬೇಕಲ್ಲ! ತೇಲುಗಣ್ಣು ಮೇಲುಗಣ್ಣು ಮಾಡುತ್ತ ಎಲ್ಲ ವಿವರಗಳನ್ನು ಸಾದ್ಯಂತ ವಿವರಿಸುತ್ತ ಉತ್ತರ ಕೊಡತೊಡಗಿದರು. ನಾನು ಅಲ್ಲೇ ಕೂತರೆ ಒಂದೇ ನಕ್ಕು ಸಿಕ್ಕಿ ಹಾಕಿಕೊಳ್ಳುತ್ತೇನೆ ಇಲ್ಲವೇ ನನಗೆ ಉಸಿರು ಸಿಕ್ಕಿ ಹಾಕಿಕೊಳ್ಳುತ್ತದೆ ಎನ್ನಿಸಿತು. ಚಿಕ್ಕಮ್ಮನಲ್ಲಿ ಫೋನ್‌ ತೋರಿಸುತ್ತ, “ಕಾಲ್‌ ಬಂತು, ಈಗ ಬಂದೆ’ ಎಂದು ಹೊರಗೆ ಬಂದು ಕುಳಿತೆ. ಆದರೂ ಒಳಗಿನ ವಿಚಾರಣಾ ಪ್ರಶ್ನೆಗಳು ಕಿವಿಯ ಮೇಲೆ ಕೇಳುತ್ತಿದ್ದವು. ಆಗ ಅಲ್ಲಿ ಒಬ್ಬ ಯುವತಿ ಬಂದಳು. ಅವಳಿಗೂ ಶೀತ ಕೆಮ್ಮು. ಸಣ್ಣ ಸ್ವರದಲ್ಲಿ ಮಾತನಾಡಿಕೊಂಡೆವು. “ಇಂಗ್ಲಿಷ್‌ ಔಷಧಿಯೂ ಆಯ್ತು, ಆಯುರ್ವೇದವೂ ಆಯಿತು. ಕೆಮ್ಮು ಹೋಗುತ್ತಿಲ್ಲ . ಅದಕ್ಕೇ ಇಲ್ಲಿಗೆ ಬಂದಿದ್ದೇನೆ’ ಎಂದಳು. “ಇಲ್ಲಿ ಬಂದು ಒಳ್ಳೆಯದೇನೋ ಮಾಡಿದಿರಿ. ಆದರೆ, ಸಾವಿರ ಪ್ರಶ್ನೆಗಳನ್ನು ಉತ್ತರಿಸುವ ತಾಳ್ಮೆ ಇದ್ದರೆ ಮಾತ್ರ ಒಳಗೆ ಹೋಗಿ’ ಎಂದು ಮೌನವಾಗಿ ಹೇಳಿದೆ. ಒಳಗಿನಿಂದ ಪ್ರಶ್ನೆ ಬರುತ್ತಿತ್ತು. ನಿಮ್ಮ ಕೆಮ್ಮು “ಖಂವ್‌ ಖಂವ್‌’ ಎಂದು ಕೇಳುತ್ತದೆಯೋ “ಕೆಂಯ್‌ ಕೆಂಯ್‌’ ಎಂದು ಕೇಳುತ್ತದೆಯೋ? ಬೆಳಿಗ್ಗೆ ಹೆಚ್ಚು ಕೆಮ್ಮಾ ಮಧ್ಯಾಹ್ನವಾ? ಚಿಕ್ಕಮ್ಮ ಉತ್ತರಿಸುತ್ತಲೇ ಇದ್ದರು. ನಾನು ಆ ಯುವತಿಯ ಬಳಿ, “ಕಿವಿಯನ್ನು ಒಳಗಡೆ ಬಿಡಿ. ಇದೇ ಪ್ರಶ್ನೆಗಳು ನಿಮಗೂ ಬರುತ್ತವೆ. ಉತ್ತರ ಸಿದ್ಧಪಡಿಸಿಕೊಳ್ಳಿ’ ಎಂದು ಪಿಸುನುಡಿದೆ. ಆಕೆ ನಗುತ್ತ ತಲೆಯಾಡಿಸಿದಳು. ನಾನು ಚಿಕ್ಕಮ್ಮ ಬಂದಾಗಿನಿಂದ ಅವರ ಕೆಮ್ಮು “ಘಂವ್‌ ಘಂವ್‌’ ಎಂದೇ ಕೇಳುತ್ತಿದೆ. ಆದರೆ ಈ ವೈದ್ಯರು ಹಾಗೆಂದು ಕೇಳಿಯೇ ಇಲ್ಲ ಎಂದು ಹೇಳುತ್ತಿದ್ದಂತೆ ಆ ಯುವತಿ ನಗುತ್ತಲೇ ಇದ್ದಳು. ಚಿಕ್ಕಮ್ಮನ ಪ್ರಶ್ನೆ-ಆಘಾತಗಳು ಮುಗಿದು ಕೊನೆಗೂ ಔಷಧಿ ಪಡೆದು ಹೊರಬರುವ ತನಕವೂ ಆ ಯುವತಿಯ ಜೊತೆ ನಾನು ನಕ್ಕಿದ್ದೇ ನಕ್ಕಿದ್ದು.

ಈಗ ನೆನಪಾಯಿತು, ಚಪ್ಪಲಿ ಅಂಗಡಿಯ ಮುಂದೆ ಸಿಕ್ಕ ಯುವತಿ ಯಾರೆಂದು ಮತ್ತು ಆಕೆ ನಕ್ಕಿದ್ದು ಯಾಕೆಂದು.

-ಭುವನೇಶ್ವರಿ ಹೆಗಡೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ತರಗತಿಯೊಳಗೆ ಪಾಠಕೇಳುವ ವಿದ್ಯಾರ್ಥಿಗಳ ಹೊರತಾಗಿಯೂ ಸಾಮಾನ್ಯ ವಿದ್ಯಾರ್ಥಿಗಳು ಹಳಗನ್ನಡದ ಪಠ್ಯಗಳನ್ನು ಸ್ವಯಂ ಪರಿಶ್ರಮದಿಂದ ಓದಬೇಕೆಂದಾದರೆ ತಂತ್ರಜ್ಞಾನ...

  • ನಾಡು, ನುಡಿ, ನಾಡವರಿಗೆ ಬಿಕ್ಕಟ್ಟುಗಳು ಬಂದಾಗ ಚಳುವಳಿ ರೂಪುಗೊಳ್ಳುವ ಕಾಲ ನಿಂತು ಹೋಗಿ ಮೂರು ದಶಕಗಳೇ ಆದವು. ಬಿಕ್ಕಟ್ಟುಗಳು ಬಂದಾಗ ಪ್ರತಿಕ್ರಿಯೆ ನೀಡುವ ಸಾಹಿತಿ,...

  • ದಿಲ್ಲಿ ಉದ್ಯಾನಗಳ ನಗರಿ. ತೊಂಬತ್ತು ಎಕರೆಯಷ್ಟಿನ ವಿಶಾಲ ಭೂಮಿ. ಕಣ್ಣು ಹಾಯಿಸಿದಷ್ಟೂ ಹಚ್ಚಹಸಿರು. ಏನಿಲ್ಲವೆಂದರೂ ಸುಮಾರು ಇನ್ನೂರು ಬಗೆಯ ಸಸ್ಯ ವೈವಿಧ್ಯಗಳ,...

  • "ಕಾಗದ ಬಂದಿದೆ ಕಾಗದವು' ಎಂದು ಹಾಡುವ ಕಾಲ ಹಿಂದೆ ಉಳಿಯುತ್ತಿದೆ. ಹಸ್ತಾಕ್ಷರದ ಪತ್ರಗಳೇ ಇಲ್ಲವಾಗಿವೆ. ಪತ್ರ ಕೈಗೆತ್ತಿಕೊಂಡಾಗ ಉಂಟಾಗುವ ಭಾವಸ್ಪಂದ ಮರೆಯಾಗುತ್ತಿದೆ....

  • ಅಬ್ಬಬ್ಟಾ ! ಇದೆಂಥ ಮೋಸ ! ಹೀಗೊಂದು ವಿಷಯ ನನ್ನ ಅರಮನೆಯಲ್ಲಿಯೇ ನಡೆಯುತ್ತಿದ್ದರೂ ನನ್ನ ಗಮನಕ್ಕೇ ಬಾರದೆ ಹೋಯಿತಲ್ಲ ! ಗಂಡನಂತೆ ಗಂಡ ! ಮೆಚ್ಚಿ ಮದುವೆಯಾದದ್ದಕ್ಕೆ...

ಹೊಸ ಸೇರ್ಪಡೆ