Udayavni Special

ನೆರೆ ಕೆರೆ

ಕೆರೆ ಅಳಿ ಯಿತು ನೆರೆ ಉಕ್ಕಿತು ಥೈ ಥಕ ಥೈ!

Team Udayavani, Aug 25, 2019, 5:38 AM IST

r 6

ಕರ್ನಾಟಕದ ಹೆಚ್ಚಿನ ಕಡೆ ನೆರೆ ಹಾವಳಿ ಸುದ್ದಿಯಾಗಿದೆ. ಸರಾಗವಾಗಿ ನೀರು ಹರಿದುಹೋಗುವ ಅವಕಾಶವಿಲ್ಲದಿದ್ದರೆ ಇನ್ನೇನಾಗುತ್ತದೆ! ಊರ ನಡುವಿನ ಕೆರೆಗಳನ್ನು ಮುಚ್ಚಿ ಅದರ ಮೇಲೆ ಮನೆ ನಿವೇಶನಗಳನ್ನು ಮಾಡಿದರೆ ಏನಾಗುತ್ತದೆ? ಊರಿನ ಕೆರೆಗಳನ್ನು ಅಭಿವೃದ್ಧಿಪಡಿಸದೆ ಮಳೆಕೊಯ್ಲಿನಂಥ ವಿಧಾನಗಳನ್ನಷ್ಟೇ ಅನುಸರಿಸಿದರೆ ಏನಾಗುತ್ತದೆ? ಪ್ರಾಚೀನ ಕಾಲದಿಂದಲೂ ಕೆರೆಗಳು ಜನಜೀವನದ ಭಾಗಗಳೇ ಆಗಿವೆ. ಎಲ್ಲ ಸಂಸ್ಕೃತಿಗಳ ಕಥನಗಳು ಸಂಭವಿಸುವುದು ಪುಷ್ಕರಣಿ, ಸರೋವರ, ಜಲಕುಂಡಗಳ ಸುತ್ತವೇ. ಕೆರೆಗಳಿಲ್ಲದ ಊರಿನಲ್ಲಿ ನೆರೆ ಬರದೆ ಇನ್ನೇನಾದೀತು!

ಹದಿನೈದು ದಿನಗಳ ಹಿಂದೆ ಅರ್ಧ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿದೆ. ಕಾವೇರಿ ಉಕ್ಕೇರಿದ್ದು, ಕೃಷ್ಣಾ ಆರ್ಭಟಿಸಿದ್ದು ಗಮನಿಸಿದ್ದೇವೆ. ಮಳೆ ಕೊರತೆಯಿಂದ ಬಳಲುತ್ತಿದ್ದ ರಾಜ್ಯ ಹತ್ತೇ ಹತ್ತು ದಿನಗಳಲ್ಲಿ ಸಾವಿರಾರು ಮಿಲಿಮೀಟರ್‌ ಪಡೆದು ಸರಕಾರೀ ಲೆಕ್ಕದಲ್ಲಿ ಮಳೆ ಕೊರತೆ ಕಡಿಮೆಯಾಗಿದೆ. ತುಂಗಭದ್ರಾ, ಅಘನಾಶಿನಿ, ಶರಾವತಿ, ಗಂಗಾವಳಿ, ಸೀತಾ, ಸೌಪರ್ಣಿಕಾ ಮುಂತಾದ ನದಿನಾಡಿಗೆಲ್ಲ ಪ್ರವಾಹ ಭೀಕರ ಗಾಯಮಾಡಿ ಮಳೆ ಮಾಯವಾಗಿದೆ. ಮಳೆ ವಿವಿಧ ನಕ್ಷತ್ರಗಳಲ್ಲಿ ಹೇಗೆ ಸುರಿಯುತ್ತದೆಂಬ ನುಡಿಗಟ್ಟುಗಳಿವೆ. ಹುಬ್ಬೆ ಮಳೆ ಅಂದ್ರೆ ಅಬ್ಬೆ ಹಾಲು ಕುಡಿದಂತೆ. ಆರದಂತೆ ಸುರಿಯುವ ಆರದೆ ಎಂದೆಲ್ಲ ಗುರುತಿಸಿದ್ದೇವೆ. ಮಳೆ ನಾಡಿನ ಮಲೆನಾಡು ಕೂಡಾ ಈಗ ಹಾಗಿಲ್ಲ. ಮಳೆಗಾಲದಲ್ಲಿ ಮಳೆಯ ಮುನ್ಸೂಚನೆ ಆಲಿಸುತ್ತಿದೆ. ನಾಲ್ಕಾರು ದಿನ ಜಾತ್ರೆ ನಡೆಸಿದಂತೆ ಅಬ್ಬರಿಸಿ ಊರುಕೇರಿಗಳನ್ನು ಸೂರೆ ಹೊಡೆದು ಹೋಗುತ್ತಿದೆ. ಗುಡ್ಡ ಕುಸಿತ, ಜೀವಹಾನಿ, ಕೃಷಿ ನೆಲೆಗಳನ್ನು ನುಂಗುವುದು ಮಾಮೂಲಿಯಾಗಿ ‘ಮಳೆ ಭಯ’ ಆವರಿಸಿದೆ.

ಮಳೆ ಸುರಿದಿದೆಯೆಂದರೆ ಸಾಕಷ್ಟು ನೀರಾಗಿದೆಯೆಂದು ಅರ್ಥವಲ್ಲವೆಂದು ನಾವು ಜಲಕಾರ್ಯಕರ್ತರು ದಶಕಗಳಿಂದ ಹೇಳುತ್ತಿದ್ದೇವೆ. ಛಾವಣಿಯಲ್ಲಿ ಸುರಿದ ಮಳೆನೀರು ಮನೆಯೆದುರು ಕಾಲುವೆಗೆ ಬಿದ್ದು ಹರಿದು ಓಡುವಾಗ ನೋಡುತ್ತ ಕೂತಿರುವುದು, ಬೇಸಿಗೆಯಲ್ಲಿ ನೀರಿಲ್ಲವೆಂದು ಕೊಳವೆ ಬಾವಿ ಕೊರೆಸುವುದು ಸಾಮಾನ್ಯ ವರ್ತಮಾನ. ಮೊನ್ನೆ ಅಬ್ಬರದ ಮಳೆ ಯಾವ ಯಾವ ಪ್ರದೇಶದಲ್ಲಿ ಸುರಿದಿದೆಯೆಂದು ಗುರುತಿಸುತ್ತ ಹೋಗಬೇಕು. ಇವುಗಳಲ್ಲಿ ಸಾವಿರಾರು ಗ್ರಾಮಗಳು ಕಳೆದ ಬೇಸಿಗೆಯಲ್ಲಿ ಟ್ಯಾಂಕರ್‌ ನೀರು ಪಡೆದವರು. ಹದಿನೈದು ದಿನಕ್ಕೊಮ್ಮೆ ನಗರಸಭೆಯ ನಲ್ಲಿ ನೀರು ಕಂಡವರು. ಕೆರೆ, ನದಿ ನುಂಗಿದವರು, ಕಾಡು ಕಬಳಿಸಿದವರು ಇಲ್ಲಿ ಸಿಗುತ್ತಾರೆ. ಟ್ಯಾಂಕರ್‌ ನೀರು ಕಳಿಸಿದ ಆಡಳಿತವೇ ಈಗ ನೆರೆ ಪರಿಹಾರಕ್ಕೆ ನಿಂತಿದೆ! ಆಡಳಿತದ ಮಿದುಳು ಮಾಯವಾಗಿ ಜಲಕ್ಷಾಮಕ್ಕೂ ಪರಿಸರ ಪರಿಸ್ಥಿತಿಗೂ ಸಂಬಂಧವೇ ಇಲ್ಲದಂತೆ ಬದುಕುವ ಶೈಲಿ ಅಭ್ಯಾಸವಾಗಿದೆ. ‘ಅವಕಾಶ ಕಳಕೊಂಡವರು’ ಎಂದು ಈ ಸಮೂಹವನ್ನು ಸರಳಕ್ಕೆ ಕರೆಯಬಹುದು. ಕಣ್ಣೆದುರು ನೀರು ಹರಿಯುವಾಗ ಕೆರೆಕಟ್ಟೆ , ಬಾವಿ, ಕೊಳವೆ ಬಾವಿ ಭರ್ತಿಗೆ ಮಾರ್ಗ ಹುಡುಕದೇ ಹೋದದ್ದು ನೆರೆಹಾವಳಿಯ ದುಃಖಕ್ಕೆ ನೆರವಾಗಿರಬಹುದಲ್ಲವೇ?

ಮಹಾಮಳೆಗೆ ಮಹಾಪಾತ್ರವೇ ಬೇಕು
ಪ್ರಕೃತಿಯ ಎದುರು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಬದುಕುವ ಪ್ರಯತ್ನ ಮಾಡುವುದಕ್ಕೆ ಅವಕಾಶವಿದೆ. ನೆರೆಯ ಹಾನಿ ಕಡಿಮೆ ಮಾಡಿಕೊಂಡು ನಾಳಿನ ನೀರಿಗಾಗಿ ಯೋಚಿಸುವ ತುರ್ತು ಎದುರಿದೆ. ನಿಜ, ಎಕರೆಯಲ್ಲಿ ಹತ್ತಾರು ದಿನಗಳಲ್ಲಿ ಸುರಿದ ನೀರು ಹಿಡಿಯಲು ದೊಡ್ಡ ಪಾತ್ರೆಗಳು ಬೇಕು. ಒಂದು ಬೃಹತ್‌ ಅಣೆಕಟ್ಟೆಯಲ್ಲಿ ನೂರಾರು ಟಿಎಮ್‌ಸಿ ಹಿಡಿಯಲು ಹೊರಟರೆ ಲಕ್ಷಾಂತರ ಹೆಕ್ಟೇರ್‌ ಜಲಾಶಯಕ್ಕೆ ಮುಳುಗುತ್ತದೆ. ಬಿದ್ದ ಹನಿಯನ್ನು ಬಿದ್ದಲ್ಲಿ ಉಳಿಸುವ ತಂತ್ರ ಸರ್ವವ್ಯಾಪ್ತಿಯಾದರೆ, ಸಾಗರ ಸೇರುವ ಒಂದಿಷ್ಟು ಜಲಸಂಪತ್ತು ನಮ್ಮದಾಗುತ್ತದೆ, ಇಲ್ಲಿ ಮುಳುಗಡೆ ಪ್ರಶ್ನೆ ಇಲ್ಲ. ಕಣ್ಣಿರುವವರೆಲ್ಲ ಒಮ್ಮೆ ಗ್ರಾಮದ ವಿಶಾಲ ಕೆರೆ ನೋಡಬೇಕು, ಹಿರಿಯರು ಮಾಡಿಟ್ಟ ಜಲಪಾತ್ರೆ ಹಾಳಾಗಿ ಹೋಗಿದೆ. ಅವುಗಳ ಹೂಳು ತೆಗೆದು ಸುಸ್ಥಿತಿಯಲ್ಲಿದ್ದರೆ ನಮ್ಮ ನೀರು ನಮ್ಮೂರಲ್ಲಿ ನಗುತ್ತಿತ್ತು. ಅಬ್ಬರದ ಮಳೆಯ ಸಂಪೂರ್ಣ ನೀರು ಹಿಡಿಯುವ ಸಾಮರ್ಥ್ಯ ಯಾವತ್ತೂ ನಮಗಿಲ್ಲ. ಅದರ ಅಗತ್ಯವೂ ಇಲ್ಲ. ಆದರೆ ಕ್ಷೀರ ಸಾಗರದವರು ಬೆಣ್ಣೆಗೆ ಹುಡುಕುವ ಪರಿಸ್ಥಿತಿ ನಮ್ಮದಾಗಬಾರದು. ದಿನಕ್ಕೆ ನೂರು ಮಿಲಿಲೀಟರ್‌ ಮಳೆ ಸುರಿಯಿತೆಂದರೆ ಒಂದು ಚದರಮೀಟರ್‌ ಜಾಗದಲ್ಲಿ ನೂರು ಲೀಟರ್‌ ಮಳೆನೀರು ಬಂತೆಂದು ಅರ್ಥ. ನೂರಾರು ಎಕರೆಯಲ್ಲಿ ಸುರಿಯುವ ಲಕ್ಷಾಂತರ ಲೀಟರ್‌ ಮಳೆ ಹಳ್ಳವಾಗಿ ಇಳಿಜಾರಿಗೆ ಓಡುವುದು ಸಹಜವಿದೆ. ಓಡುವ ಮುಂಚೆ ಮೂಗುದಾರ ಹಾಕಿ ಎತ್ತರದ ನೆಲೆಯ ಕೆರೆಗಳಲ್ಲಿ ಒಂದಿಷ್ಟು ಉಳಿಸಬಹುದು. ಹೆಚ್ಚುವರಿ ನೀರನ್ನು ಇನ್ನೊಂದು ಕೆರೆಗೆ ಜೋಡಿಸುತ್ತ ಪ್ರವಾಹ ರೂಪ ಪಡೆಯುವ ಮುಂಚೆ ಜಲಸಂಪತ್ತನ್ನು ಸಮುದಾಯದ ಕೆರೆ ಖಜಾನೆಯಲ್ಲಿ ಶೇಖರಿಸಬಹುದು. ನೀರಾವರಿ, ಅಂತರ್ಜಲ ಹೆಚ್ಚಿಸಲು ಇದು ಸಹಾಯಕವಾಗುತ್ತದೆ. ಅಬ್ಬರದ ಮಳೆಯನ್ನು ಎದುರಿಸುವ ಸಾಧ್ಯತೆಯಿದು.

ನೆರೆಯಿಂದ ಸೇತುವೆ ಮೇಲೆ ನೀರು ಹರಿದಿದ್ದು, ಹಳ್ಳಿ ಕೃಷಿ ನೆಲವನ್ನು ಕಬಳಿಸಿದ್ದು, ಮನೆಗಳು ಉರುಳಿ ನಿರಾಶ್ರಿತರ ಕರುಳು ಹಿಂಡುವ ಆಕ್ರಂದನದ ನೋಟಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈಗ ನದಿ ನೀರಿನ ಹರಿವು ಕಡಿಮೆಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಒರತೆ ಜಲದಿಂದ ರಭಸದಲ್ಲಿ ನುಗ್ಗುತ್ತಿದ್ದ ಆವೇಶವೂ ತಣ್ಣಗಾಗಿದೆ. ನದಿ ಕಣಿವೆಯ ನಾಡಿನಲ್ಲಿ 70 ಅಡಿ ಆಳದ ಬಾವಿ ಭರ್ತಿ ನೀರು ನೋಡಿದವರಿಗೆ ವಾರದಲ್ಲಿ ಹತ್ತಿಪ್ಪತ್ತು ಅಡಿ ಕುಸಿದದ್ದು ಅನುಭವಕ್ಕೆ ಬರುತ್ತಿದೆ. ಅಣೆಕಟ್ಟೆಗಳು ಭರ್ತಿಯಾಗಿದ್ದರಿಂದ ನೀರಿನ ಸಮಸ್ಯೆ ಬಗೆಹರಿಯಿತೆಂದು ಲೆಕ್ಕ ಹಾಕಿದ್ದೇವೆ. ಮೇಘಸ್ಫೋಟದ ಹೊಡೆತಕ್ಕೆ ಅತಿವೇಗದಲ್ಲಿ ನೀರು ಭರ್ತಿಯಾದ ಜೊತೆಗೆ ಹೂಳು ಜಾಸ್ತಿ ಬಂದಿದೆಯೆಂದು ಮೊದಲು ಅರಿಯಬೇಕು. ಗುಡ್ಡದಲ್ಲಿ ತಂಗುತ್ತ ಇಂಗುತ್ತ ಹರಿಯಬೇಕಾದ ನೀರು ಹನಿಗೂಡಿ ಪ್ರವಾಹವಾಗಿದೆ. ಸಾಗರಕ್ಕೆ ಜಮೆಯಾಗಿದೆ.

ಸರಣಿ ಕೆರೆಯಲ್ಲಿ ಪ್ರವಾಹ ತಡೆಯುವ ತಂತ್ರ
ವಿಜಯಪುರದ ಲ್ಲೆಯ ತಂಗಡಗಿ ನಿರಾಶ್ರಿತರ ಕೇಂದ್ರಕ್ಕೆ ಬಳ್ಳಾರಿಯ ಕೊಟ್ಟೂರಿನ ಹುಡುಗರು ರೊಟ್ಟಿ ಒಯ್ದಿದ್ದರು. ಕೂಡ್ಲಿಗಿಯ ಚೌಡಾಪುರ, ಉಗ್ರೇಶ ಗ್ರಾಮದ ಇವರಿಗೆ ಪ್ರವಾಹದ ಅಗಾಧ ಜಲರಾಶಿ ನೋಡಿ ಅಚ್ಚರಿಯಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಿಲ್ಲದೇ ಇಲ್ಲಿನ ಕೆರೆಗಳಲ್ಲಿ ಹನಿ ನೀರಿಲ್ಲ. ಪ್ರವಾಹದ ನೀರು ಕೂಡ್ಲಿಗಿ, ಕೊಟ್ಟೂರು, ಚಳ್ಳಕೆರೆ, ಮೊಳಕಾಲ್ನೂರು, ಜಗಳೂರು, ಪಾವಗಡ ಮುಂತಾದ ಕೆರೆ ತುಂಬಲು ನೆರವಾಗಿದ್ದರೆ ಅನುಕೂಲವೆಂದು ಮಂಜುನಾಥ ಮೇಷ್ಟ್ರು ಹೇಳುತ್ತಾರೆ. ನಮ್ಮ ಯೋಜನೆಗಳು ಹರಿಯುವ ನದಿಯ ಕ್ಯೂಸೆಕ್ಸ್‌ ಅಳೆದು ರೂಪುಗೊಳ್ಳುತ್ತವೆ. ಅಕಾಲಿಕ ಪ್ರವಾಹ ಯೋಜನೆಯ ಸುಸ್ಥಿರತೆಗೆ ಆಧಾರವಾಗುವುದಿಲ್ಲ. ಆದರೆ ನೂರಾರು ವರ್ಷದ ಮಳೆ, ನದಿ ಹರಿವು ಅಳೆದು ತಯಾರಿಸಿದ ಯೋಜನೆಗಳು ಸೋಲುವ ಕಾಲದಲ್ಲಿ ನಾವಿದ್ದೇವೆ. ಇತಿಹಾಸದ ಪುಟ ತೆಗೆದರೆ ಕಾವೇರಿ ನದಿ ಪ್ರವಾಹದ ನೀರು ಬಳಸಿ ಕೃಷಿ ಗೆಲ್ಲಿಸಲು ಕಲ್ಲಣೆ, ಸರಣಿ ಕೆರೆಗಳು ನಿರ್ಮಾಣವಾದ ದಾಖಲೆ ಸಿಗುತ್ತದೆ. ಕ್ರಿ.ಶ. 1924ರ ಪ್ರವಾಹದ ತಲ್ಲಣದ ನಂತರದಲ್ಲಿ ಅಣೆಕಟ್ಟೆಯಲ್ಲಿ ನೀರು ಹಿಡಿದು ಗೆಲ್ಲುವ ಸೂತ್ರಗಳು ಜನಪ್ರಿಯವಾಗಿವೆ. ಇದಕ್ಕಿಂತ ಮುಖ್ಯವಾಗಿ ಇದೇ ಕಾವೇರಿ ಕಣಿವೆಯ ಮೈಸೂರು ಸೀಮೆಯಲ್ಲಿ ಮೇಜರ್‌ ಸ್ಯಾಂಕಿಯ ವರದಿಯ ಪ್ರಕಾರ ಕ್ರಿ.ಶ. 1866ರಲ್ಲಿ 14,803 ಕೆರೆ ಹೂಳೆತ್ತುವ ಯೋಜನೆ ರೂಪಿಸಲಾಗಿದೆ. ಸರಣಿ ಕೆರೆಗಳಿಗೆ ಮೈಸೂರು ಸೀಮೆಯ ನೀರಾವರಿ ವಿಶ್ವದ ಗಮನ ಸೆಳೆದಿದೆ. ಪ್ರವಾಹ ನಿಯಂತ್ರಣ ತಂತ್ರ ಅಳವಡಿಸಲು ಇದಕ್ಕಿಂತ ಸೂಕ್ತ ಮಾದರಿಗಳು ಬೇಕೆ? ಕೆರೆಗಳನ್ನು ಸರಿಯಾಗಿ ನಿರ್ವಹಿಸಿದ ಫ‌ಲವನ್ನು ನಾವು ಜಲಕ್ಷಾಮ, ಪ್ರವಾಹದ ಮೂಲಕ ಅನುಭವಿಸುವಂತಾಗಿದೆ.

ಮಾಯದಂಥ ಮಳೆಯು ಬಂತಣ್ಣ…
ಉತ್ತರ ಕನ್ನಡದ ಬೇಡ್ತಿ ಪ್ರವಾಹದಿಂದ ಯಲ್ಲಾಪುರ, ಅಂಕೋಲಾ ತಾಲೂಕಿನ ಹಲವು ಹಳ್ಳಿಗಳು ಸಂಕಷ್ಟ ಅನುಭವಿಸಿವೆ. ತಡಸ, ಹುಬ್ಬಳ್ಳಿ , ಧಾರವಾಡ, ಕಲಘಟಗಿ, ಮುಂಡಗೋಡ ಪ್ರದೇಶಗಳಲ್ಲಿ ಸುರಿದ ಮಳೆ ಇದೇ ಬೇಡ್ತಿಯಲ್ಲಿ ಹರಿಯುತ್ತಿದೆ. ಈ ಪ್ರದೇಶಗಳಲ್ಲಿ ಅರೆಮಲೆನಾಡು, ಬಯಲು ಸೀಮೆಯಲ್ಲಿದೆ. ಬರ, ಜಲಕ್ಷಾಮದಿಂದ ಹತ್ತಾರು ವರ್ಷಗಳಿಂದ ತತ್ತರಿಸುತ್ತಿರುವ ನೆಲೆಗಳು. ಯಲ್ಲಾಪುರ, ಅಂಕೋಲಾ ಸೀಮೆಯಲ್ಲಿ ಸುರಿದಂತೆ ಅಬ್ಬರದ ಮಳೆ ಏಕಕಾಲಕ್ಕೆ ಸುರಿದಿದ್ದು ಪ್ರವಾಹಕ್ಕೆ ಕಾರಣವಾಗಿದೆಯೆಂದು ವಿಶ್ಲೇಷಿಸಬಹುದು. ಕ್ರಿ.ಶ. 1962ರಲ್ಲಿ ಪ್ರವಾಹ ಬಂದಾಗಲೂ ನದಿ ಇದೇ ಮಟ್ಟದಲ್ಲಿ ಉಕ್ಕೇರಿತ್ತಾದರೂ ಆಗ ಜನಸಂಖ್ಯೆ, ಕೃಷಿ ವಿಸ್ತರಣೆಯಿಲ್ಲದ್ದರಿಂದ ಹಾನಿಯ ಪ್ರಮಾಣ ಇಷ್ಟಿರಲಿಲ್ಲ. ಇದೇ ಹೊತ್ತಿಗೆ ಮುಂಡಗೋಡದ ಚಿಗಳ್ಳಿ ಜಲಾಶಯ ಭರ್ತಿಯಾಗಿ ರೈತರು ಖುಷಿಯಲ್ಲಿದ್ದರು. ಆದರೆ ಕಿಡಿಗೇಡಿಗಳ ಕೃತ್ಯ, ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ದಂಡೆ ಒಡೆದು ಈಗ ಪುನಃ ಕೆರೆ ಖಾಲಿಯಾಗಿ ನೀರಿಗಾಗಿ ಅಳುವಂತಾಗಿದೆ.

ತಡಸದಿಂದ ಕಲಘಟಗಿ ಸೀಮೆಯಲ್ಲಿ ಕೆರೆಗಳ ಸರಣಿಗಳಿವೆ. ಒಂದು ಕೆರೆ ತುಂಬಿದ ನಂತರ ಇನ್ನೊಂದು ಕೆರೆಗೆ ನೀರು ಹರಿಯುವಂತೆ ಶತಮಾನಗಳ ಹಿಂದೆ ಕೆರೆ ಸರಣಿ ರಚನೆಯಾಗಿದೆ. ಹತ್ತರಿಂದ ಐವತ್ತು ಎಕರೆ ವಿಶಾಲ ಕೆರೆಗಳಿವೆ. ತಡಸ ಸನಿಹದ ಬಡಗಿ ಹಳ್ಳದ ಮೂಲಕ ಹರಿಯುವ ನೀರು ಬೈಲಗೇರಿ ಕೆರೆ, ಬಿ. ಯಲ್ಲಾಪುರ ಕೆರೆ, ಹೊನ್ನಾಳಿ ಕೆರೆ, ಕಾಮಶೆಟ್ಟಿ ಕೆರೆ, ಗಂಜಿಗಟ್ಟಿ ಕೆರೆ, ಬಗಡಗೇರಿ ಕೆರೆ, ಹಿಂಡಸಗೇರಿ ಕೆರೆ ಮೂಲಕ ಹರಿಯುತ್ತದೆ. ಸರಣಿ ಕೆರೆಗಳು ಪಾರಂಪರಿಕ ನೀರಾವರಿ ವ್ಯವಸ್ಥೆಯ ತಜ್ಞತೆಯ ಸಾಕ್ಷಿಯಾಗಿವೆ.

ಈಗ ಕೆರೆಗಳು ಆಟದ ಬಯಲಿನಂತಾಗಿವೆ. ಪ್ರದೇಶದ ಅಂತರ್ಜಲ, ಕೃಷಿ, ಕುಡಿಯುವ ನೀರಿಗೆ ಉಪಯುಕ್ತವಾದ ಜಲಪಾತ್ರೆಗಳು ಹಾಳುಬಿದ್ದಿವೆ. ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯತ್‌ ಅಧೀನದಲ್ಲಿರುವ ಇವುಗಳ ಪರಿಸ್ಥಿತಿ ಹೀನಾಯವಾಗಿದೆ. ಅತಿಕ್ರಮಣ, ಹೂಳು, ಕಳೆ ಸಸ್ಯಗಳಿಂದ ಆವರಿಸಿವೆ. ಮಣ್ಣು ಅಗೆಯುವವರ, ಇಟ್ಟಿಗೆ ಭಟ್ಟಿಗಳ ಖಾಯಂ ನೆಲೆಯಾಗಿದೆ. ಸರಿಯಾಗಿ ಒಂದು ಮಳೆ ಸುರಿದರೆ ನೀರು ಭರ್ತಿಯಾಗಿ ಕೋಡಿ ಬೀಳುತ್ತದೆ. ಇಷ್ಟು ಮಳೆ ಸುರಿದರೂ ಈ ವರ್ಷ ನವೆಂಬರ್‌ ಹೊತ್ತಿಗೆ ಬಹುತೇಕ ಕೆರೆಗಳು ಮತ್ತೆ ಒಣಗುತ್ತವೆ. ಕೆರೆ ನಿರ್ವಹಣೆ ಸರಿಯಾಗಿದ್ದರೆ ಪ್ರವಾಹದ ಒಂದಿಷ್ಟು ನೀರನ್ನು ಸಂರಕ್ಷಿಸಿ ಬೇಸಿಗೆಯ ಕೃಷಿ ಭವಿಷ್ಯ ರೂಪಿಸಬಹುದಿತ್ತಲ್ಲವೇ? ಪ್ರವಾಹ, ನೆರೆ ಹಾವಳಿ ನೆಲೆಗಳಲ್ಲಿ ಮುಂದಿನ ವರ್ಷ ಮಾರ್ಚ್‌ ನಿಂದ ಟ್ಯಾಂಕರ್‌ ನೀರು ಸರಬರಾಜಿನ ಸಿದ್ಧತೆ ಶುರುಮಾಡ ಬಹುದು! ಕಳೆದ 60 ವರ್ಷಗಳ ನಿಷ್ಕಾಳಜಿಯ ಫ‌ಲವಿದು.

ಅರಣ್ಯ ಸಂರಕ್ಷಣೆ, ಕೃಷಿ ಭೂಮಿಯಲ್ಲಿ ಕೃಷಿ ಹೊಂಡ, ಕೆರೆ, ಬದು ರಚನೆಗಳು ಬಿದ್ದ ಹನಿ ಉಳಿಸುವ ಸರಳ ತಂತ್ರಗಳು. ಇಂಥ ಮಾದರಿಗಳು ವಿಸ್ತರಿಸಿದರೆ ಪ್ರವಾಹ ಹಾನಿಯ ಬಳಿಕವೂ ಬೇಸಿಗೆಯ ಬದುಕು ಗೆಲ್ಲಲು ಅವಕಾಶವಿದೆ. ಗದಗ, ಯಲಬುರ್ಗಾ ಸೀಮೆಗಳಲ್ಲಿ ಹತ್ತು ವರ್ಷಕ್ಕೆ ಒಮ್ಮೆಯೂ ಸರಿಯಾಗಿ ಮಳೆ ಸುರಿಯುವುದಿಲ್ಲ. ಒಮ್ಮೆ ವಿಶಾಲ ಕೆರೆ ತುಂಬಿದರೆ ಎರೆಮಣ್ಣಿನ ಈ ನೆಲೆಯಲ್ಲಿ ಎರಡು-ಮೂರು ವರ್ಷ ನೀರಿನ ಸಮಸ್ಯೆಯಿಲ್ಲ. ಕರಾವಳಿಯಲ್ಲಿ ಪ್ರವಾಹ ಎದುರಿಸಿ ಮಳೆಯಲ್ಲಿ ಬದುಕುವುದು ಸವಾಲು. ಮಳೆ ಮುಗಿದ ನಂತರ ನವೆಂಬರ್‌- ಡಿಸೆಂಬರ್‌ ಸಮಯಕ್ಕೆ ಹರಿವ ಹಳ್ಳಗಳಿಗೆ ಒಡ್ಡು ರೂಪಿಸುವುದು ಕರಾವಳಿಯ ಜಲಕ್ಷಾಮ ಓಡಿಸಲು ಅನುಕೂಲವಾಗುತ್ತದೆ. ಹೀಗೆ ಪ್ರಾದೇಶಿಕ ವಿಶೇಷಗಳನ್ನು ಗಮನಿಸಿಕೊಂಡು ಜನಮನದಲ್ಲಿ ಜಲಸಂರಕ್ಷಣೆಯ ಅರಿವು ಮೂಡಿಸುವ ಕೆಲಸ ನಡೆಯಬೇಕು. ಇಷ್ಟು ವರ್ಷ ಏನು ಮಾಡಿಲ್ಲ ಎಂಬುದಕ್ಕಿಂತ ಮುಂದೇನು ಮಾಡಬೇಕೆಂದು ಯೋಚಿಸಿ, ಯೋಜಿಸಬೇಕು. ಹಿಂದಿನ ಸರಕಾರ ಪ್ರಸ್ತುತ 2019ನ್ನು ಜಲವರ್ಷವೆಂದು ಘೋಷಿಸಿದೆ. ಜಲಾಮೃತ ಕಾರ್ಯಕ್ರಮವನ್ನು ಜಲಜಾಗೃತಿಗೆ ಅಧಿಕಾರೀ ಕೇಂದ್ರೀಕೃತವಾಗಿ ರೂಪಿಸಿ ಕಾರ್ಯಾಗಾರ, ದಾಖಲೆಗಳನ್ನು ಶೇಖರಿಸುವ ಕಾರ್ಯಶೈಲಿಗೆ ಅಂಟಿದೆ. ಕೇಂದ್ರ ಸರಕಾರ ಕೂಡಾ ಜಲಶಕ್ತಿ ಕಾರ್ಯಕ್ರಮ ನಡೆಸುತ್ತಿದೆ. ಎಲ್ಲರಿಗೂ ಜಿಲ್ಲಾ ಪಂಚಾಯತ್‌, ಗ್ರಾಮ ಪಂಚಾತ್‌ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಬಿಂದು. ಸರಕಾರಿ ಕಡತಗಳಲ್ಲಿ ಜಲಜಾಗೃತಿ ಕಾರ್ಯಕ್ರಮ ಸಂಘಟಿಸಿದ ವರದಿ ಬರೆಯುವುದರಿಂದ ರಾಜ್ಯ ಯಾವತ್ತೂ ಉದ್ಧಾರವಾಗುವುದಿಲ್ಲ. ಒಮ್ಮೆ ಕಳೆದ 20 ವರ್ಷಗಳಿಂದ ನೀರಿನ ವಿಚಾರದ ಸರಿತಪ್ಪುಗಳನ್ನು ಅವಲೋಕಿಸಿ ನಡೆದಿದ್ದರೆ ಉತ್ತಮವಾಗುತ್ತಿತ್ತು. ಏನು ಮಾಡೋಣ? ಸರಕಾರೀ ವ್ಯವಸ್ಥೆಯಲ್ಲಿ ಕೆರೆಗಿಂತ ಜಾಸ್ತಿ ಹೂಳು ಭರ್ತಿಯಾಗಿದೆ. ನೀರಿನ ವಿಚಾರದಲ್ಲಿ ಪ್ರತಿ ಹಳ್ಳಿಗರೂ ಸ್ವಾರ್ಥಿಗಳಾಗಿ ಕೆರೆಕಟ್ಟೆಗಳಲ್ಲಿ ಶೇಖರಿಸಲು ಮುಂದಾದರೆ ಬದಲಾವಣೆ ಸಾಧ್ಯವಿದೆ.

ಶಿವಾನಂದ ಕಳವೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ ದೊಡ್ಡಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಸೀಲ್ ಡೌನ್

ಉಡುಪಿ ದೊಡ್ಡಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಸೀಲ್ ಡೌನ್

ಸಿದ್ದು ಸ್ವಾರ್ಥ ರಾಜಕಾರಣದಿಂದ 17 ಜನ ಶಾಸಕರು ಹೊರ ಬಂದಿದ್ದು: ಬಿ ಸಿ ಪಾಟೀಲ್

ಸಿದ್ದು ಸ್ವಾರ್ಥ ರಾಜಕಾರಣದಿಂದ 17 ಜನ ಶಾಸಕರು ಹೊರ ಬಂದಿದ್ದು: ಬಿ ಸಿ ಪಾಟೀಲ್

ಅತ್ಯುತ್ತಮ ನಾಯಕರೆಂದರೆ ಹೀಗೆ.. ಗಂಭೀರ್ ನಾಯಕತ್ವವನ್ನು ನೆನೆದ ಉತ್ತಪ್ಪ

ಅತ್ಯುತ್ತಮ ನಾಯಕರೆಂದರೆ ಹೀಗೆ.. ಗಂಭೀರ್ ನಾಯಕತ್ವವನ್ನು ನೆನೆದ ಉತ್ತಪ್ಪ

jio

ಜಿಯೋದ ಶೇ 1.85 ಪಾಲನ್ನು 9,000 ಕೋಟಿಗೆ ಖರೀದಿಸಿದ ಅಬುಧಾಬಿ ಮೂಲದ ಮುಬದಲಾ ಸಂಸ್ಥೆ

ಎಂಪಿಎಲ್‌ನಿಂದ ಭಾರತದ ಪ್ರಥಮ ದೇಶೀಯ ಶೂಟರ್ ಗೇಮ್ ರೋಗ್ ಹೀಸ್ಟ್ ಬಿಡುಗಡೆ

ಎಂಪಿಎಲ್‌ನಿಂದ ಭಾರತದ ಪ್ರಥಮ ದೇಶೀಯ ಶೂಟರ್ ಗೇಮ್ ರೋಗ್ ಹೀಸ್ಟ್ ಬಿಡುಗಡೆ

ಹೇಮಗುಡ್ಡದ ಬಳಿ ರಸ್ತೆ ಅಪಘಾತದಲ್ಲಿ ಹೆಣ್ಣು ಚಿರತೆ ಸಾವು

ಹೇಮಗುಡ್ಡದ ಬಳಿ ರಸ್ತೆ ಅಪಘಾತದಲ್ಲಿ ಹೆಣ್ಣು ಚಿರತೆ ಸಾವು

ವಿಜಯಪುರ: ಕೊನೆಗೂ ಸೆರೆ ಸಿಕ್ಕಿತು ಪ್ರಾಣಿ ಭಕ್ಷಕ ಚಿರತೆ

ವಿಜಯಪುರ: ಕೊನೆಗೂ ಸೆರೆ ಸಿಕ್ಕಿತು ಪ್ರಾಣಿ ಭಕ್ಷಕ ಚಿರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ಕಸ ವಿಲೇವಾರಿ ಡಬ್ಬಿವಿತರಣೆ

ಕಸ ವಿಲೇವಾರಿ ಡಬ್ಬಿವಿತರಣೆ

5-June-01

ಹೊಸ ಪ್ರಕರಣವಿಲ್ಲ: ಗುರುವಾರ ನಿರಾಳ

ಕೋವಿಡ್ ಹರಡದಂತೆ ಕ್ರಮ: ನಾಗರಾಳ

ಕೋವಿಡ್ ಹರಡದಂತೆ ಕ್ರಮ: ನಾಗರಾಳ

ಉಡುಪಿ ದೊಡ್ಡಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಸೀಲ್ ಡೌನ್

ಉಡುಪಿ ದೊಡ್ಡಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಸೀಲ್ ಡೌನ್

ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ

ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.