ಇಂಡೋನೇಷ್ಯಾದ ಕತೆ: ಹಂದಿಯಾದ ಹೆಂಗಸು

Team Udayavani, Feb 10, 2019, 12:30 AM IST

ಸಮುದ್ರ ತೀರದಲ್ಲಿ ಒಬ್ಬ ಮೀನುಗಾರ ವಾಸವಾಗಿದ್ದ. ಅವನ ಹೆಸರು ಅಪಾಯಿ ಗುಮೋಕೆ. ಅವನ ಹೆಂಡತಿ ದೇಹಾಕೃತಿಯಲ್ಲಿ ಪರ್ವತದ ಹಾಗೆ ಕೊಬ್ಬಿದ್ದಳು. ದೇಹಕ್ಕೆ ತಕ್ಕಂತೆ ಅವಳಿಗೆ ಬೆಟ್ಟದಷ್ಟು ಹಸಿವು. ಗುಮೋಕೆ ದಿನವಿಡೀ ದೋಣಿಯಲ್ಲಿ ಕುಳಿತು ಬಲೆಯೊಂದಿಗೆ ಸಮುದ್ರದಲ್ಲಿ ಸಂಚರಿಸಿ ಮೀನುಗಳನ್ನು ಹಿಡಿದು ತರುತ್ತಿದ್ದ. ಅವನು ಮೀನು ತರುವುದನ್ನೇ ಹೆಂಡತಿ ಕಾದಿರುತ್ತಿದ್ದಳು. ಬುಟ್ಟಿ ತುಂಬ ಮೀನುಗಳನ್ನು ಬೇಯಿಸಿ ಗಬಗಬನೆ ತಿನ್ನುತ್ತಿದ್ದಳು. ಆದರೂ ಅವಳ ಹಸಿವೆ ಇಂಗುತ್ತಿರಲಿಲ್ಲ. “”ಏನು, ದಿನವಿಡೀ ದುಡಿದು ಇಷ್ಟು ಕಡಿಮೆ ಆಹಾರ ತಂದಿದ್ದೀಯಾ! ಇದರಿಂದ ನನಗೆ ಅರೆಹೊಟ್ಟೆಯೂ ತುಂಬುವುದಿಲ್ಲ. ನಿನ್ನಂತಹ ಸೋಮಾರಿಯೊಂದಿಗೆ ಸಂಸಾರ ಮಾಡುವುದು ಹೇಗೆ?” ಎಂದು ಕೂಗಾಡಿ ಜಗಳ ಮಾಡುತ್ತಿದ್ದಳು.

ಹೆಂಡತಿಯನ್ನು ಸಮಾಧಾನಪಡಿಸಲು ಗುಮೋಕೆ ಮತ್ತೆ ಹೊರಗೆ ಹೋಗಿ ಹಕ್ಕಿಗಳನ್ನು ಹಿಡಿದು ತರುತ್ತಿದ್ದ. ಆದರೂ ಅವಳಿಗೆ ಸಾಲುತ್ತಿರಲಿಲ್ಲ. ತಿಂದ ಕೂಡಲೇ ಜಗಳ ಮಾಡುವಳು. ದಿನವೂ ಈ ಪರಿಸ್ಥಿತಿಯನ್ನೆದುರಿಸಿ ಅವನಿಗೆ ಬೇಸರ ಬಂದಿತು. ಗೆಳೆಯರೊಂದಿಗೆ, “”ಎಂಥ ಹೆಂಡತಿಯನ್ನು ಕಟ್ಟಿಕೊಂಡೆ ನೋಡಿ. ದುಡಿದು ತಂದ ಎಲ್ಲವನ್ನೂ ಅವಳೊಬ್ಬಳೇ ತಿಂದು ನಾನು ಕೈಲಾಗದವನೆಂದು ಜರೆಯುತ್ತಾಳೆ. ಅವಳ ಜೊತೆಗೆ ಬದುಕುವ ಬದಲು ಸಾಯುವುದೇ ಮೇಲು ಅನಿಸುತ್ತದೆ” ಎಂದು ತನ್ನ ದುಃಖವನ್ನು ತೋಡಿಕೊಂಡ. ಗೆಳೆಯರ ಪೈಕಿ ವಯಸ್ಸಿನಲ್ಲಿ ಹಿರಿಯವನೂ ಅನುಭವಿಯೂ ಆದ ಒಬ್ಬನಿದ್ದ. ಅವನು, “”ಅವಳ ದೇಹದ ಆಕೃತಿ ನೋಡಿದರೆ ಸಹಜವಾದುದಲ್ಲ ಅನಿಸುತ್ತದೆ. ಯಾವುದೋ ಪಿಶಾಚಿ ದೇಹವನ್ನು ಪ್ರವೇಶಿಸಿ ಹೀಗೆ ಆಹಾರದ ರಾಶಿಯನ್ನೇ ನುಂಗುತ್ತಿರಬಹುದು. ನೀನು ಪಕ್ಕದ ಕಾಡಿಗೆ ಹೋಗು. ಅಲ್ಲಿ ಮಾಟಗಾತಿಯರು ಅಲೆದಾಡುತ್ತ ಇರುತ್ತಾರೆ. ನಿನ್ನ ಸಮಸ್ಯೆಯನ್ನು ನಿವಾರಿಸಿ ಹೆಂಡತಿಯನ್ನು ಸಾಮಾನ್ಯಳಂತೆ ಮಾಡುವ ಶಕ್ತಿ ಅವರಿಗೆ ಇರುತ್ತದೆ, ಅವರಲ್ಲಿ ಕೇಳಿಕೋ” ಎಂದು ಸಲಹೆ ನೀಡಿದ.

ಗುಮೋಕೆ ಮಾಟಗಾತಿಯರನ್ನು ಹುಡುಕಿಕೊಂಡು ಕಾಡಿಗೆ ಬಂದ. ಆಗ ಜಡೆಗಟ್ಟಿದ ಕೂದಲಿನ ಕಪ್ಪು$ಮೈವರ್ಣದ ಕುರೂಪಿಯಾದ ಒಬ್ಬ ಮಾಟಗಾತಿ ಅವನೆದುರಿಗೆ ಬಂದಳು. ಅವನು ಅವಳ ಬಳಿ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡು ತನಗೆ ಸಹಾಯ ಮಾಡಬೇಕೆಂದು ಪ್ರಾರ್ಥಿಸಿದ. ಮಾಟಗಾತಿಯು ಅವನಿಗೆ ನೆರವಾಗುವ ಬದಲು, “”ಹೆಂಡತಿ ನಿನಗೆ ಅನುಕೂಲಳಲ್ಲ ಎಂಬುದು ನಿಜ ತಾನೆ? ಅವಳೊಂದಿಗೆ ಸಂಸಾರ ಮಾಡಬೇಡ. ನನ್ನನ್ನು ಮದುವೆಯಾಗಿ ಇಲ್ಲಿಯೇ ಸುಖವಾಗಿರು” ಎಂದು ಹೇಳಿದಳು.

ಈ ಮಾತು ಕೇಳಿ ಗುಮೋಕೆ ಹೌಹಾರಿದ. “”ಏನಿದು ಮಾತು? ನನಗೆ ಈಗಾಗಲೇ ಮದುವೆಯಾಗಿ ಹೆಂಡತಿಯಿದ್ದಾಳೆ. ಹೀಗಿರುವಾಗ ನಿನ್ನನ್ನು ಮದುವೆಯಾಗುವುದು ಹೇಗೆ ಸಾಧ್ಯ?” ಎಂದು ಕೋಪದಿಂದ ಕೇಳಿದ. ಮಾಟಗಾತಿ ಜೋರಾಗಿ ನಕ್ಕಳು. “”ಅದರ ಬಗೆಗೆ ಚಿಂತಿಸಬೇಡ. ನಮ್ಮ ದಾರಿಗೆ ನಿನ್ನ ಹೆಂಡತಿ ಮುಳ್ಳಾಗುವುದಿಲ್ಲ. ಯಾಕೆಂದರೆ, ನನ್ನ ಮಂತ್ರದ ಶಕ್ತಿಯಿಂದ ನೀನು ಮನೆಗೆ ಹೋಗಿ ನೋಡಿದಾಗ ಅವಳು ಮನೆಯೊಳಗಿರುವುದಿಲ್ಲ. ಬದಲಾಗಿ ಮೈತುಂಬ ಕಪ್ಪು$ ಚುಕ್ಕೆಗಳಿರುವ ಗುಲಾಬಿ ಬಣ್ಣದ ಒಂದು ಹಂದಿಯಾಗಿ ಅಂಗಳದಲ್ಲಿರುತ್ತಾಳೆ. ಮುಂದೆ ನೀನು ಅವಳಿಗೆ ಆಹಾರ ತರುವ ಅಗತ್ಯವಿರುವುದಿಲ್ಲ. ಅವಳೇ ಹೊಲಸು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ. ನೀನು ಈಗಲೇ ಮನೆಗೆ ತೆರಳಿ ಪರೀಕ್ಷಿಸು. ನನ್ನ ಮಾತು ನಿಜವಾಗಿರುವುದು ಗೊತ್ತಾಗುತ್ತದೆ. ಆಗ ನೀನಾಗಿಯೇ ನನ್ನ ಬಳಿಗೆ ಬಂದು ನನ್ನೊಂದಿಗೆ ಮದುವೆಯಾಗುತ್ತೀಯಾ. ತಪ್ಪಿದರೆ ನನ್ನ ಮಂತ್ರದಿಂದ ನೀನು ಎಲ್ಲಿದ್ದರೂ ಕರೆದು ತರಲು ನನಗೆ ಸಾಧ್ಯವಿದೆ” ಎಂದು ಮಂತ್ರದಂಡವನ್ನು ಒಂದು ಸಲ ಝಳಪಿಸಿದಳು.

ಗುಮೋಕೆ ಮನೆಗೆ ಬಂದ. ಮಾಟಗಾತಿಯ ಮಾತು ಸುಳ್ಳಾಗಿರಲಿಲ್ಲ. ಹೆಂಡತಿ ಮನೆಯೊಳಗಿರಲಿಲ್ಲ. ಅಂಗಳದಲ್ಲಿ ಮೈಯಲ್ಲಿ ಚುಕ್ಕೆಗಳಿದ್ದ ಹಂದಿ ಕಾಣಿಸಿತು. ಮನಸ್ಸು ಮಾಡಿದರೆ ಮಾಟಗಾತಿ ತನಗೂ ಕೇಡು ಮಾಡಬಹುದು ಎಂಬುದು ಅವನಿಗೆ ಮನದಟ್ಟಾಯಿತು. ಕಾಡಿಗೆ ಓಡಿದ. ಮಾಟಗಾತಿಯನ್ನು ಭೇಟಿ ಮಾಡಿದ. “”ನೀನು ಹೇಳಿದ ಮಾತು ನಿಜವೇ ಆಗಿದೆ. ನಿನಗಿರುವ ಶಕ್ತಿ ಕಂಡು ಅಚ್ಚರಿಯೂ ಆಗಿದೆ. ಆದರೆ ಹೆಂಡತಿಯನ್ನು ಕಳೆದುಕೊಂಡ ದುಃಖದಲ್ಲಿದ್ದೇನೆ. ಆದ ಕಾರಣ ಈ ಶೋಕದಿಂದ ಹೊರಬಂದ ಬಳಿಕ ನಾವಿಬ್ಬರೂ ಮದುವೆಯಾಗಬಹುದು. ಆ ವರೆಗೂ ನನಗೆ ಕೆಲವು ದಿನಗಳ ಅವಕಾಶ ಕೊಡಬೇಕು” ಎಂದು ಕೇಳಿಕೊಂಡ.

ಮಾಟಗಾತಿಯು, “”ಒಂದು ವಾರದ ಅವಕಾಶ ಕೊಡುತ್ತೇನೆ. ಸಮುದ್ರ ತೀರದಲ್ಲಿ ನಮಗಿಬ್ಬರಿಗೂ ಮದುವೆಯಾಗುತ್ತದೆ. ಅಲ್ಲಿಗೆ ಹಂದಿಯಾಗಿರುವ ನಿನ್ನ ಹೆಂಡತಿಯನ್ನೂ ಕರೆತರಬೇಕು. ನಾನು ನಿನಗೆ ಮಂತ್ರಜಲ ತುಂಬಿದ ಒಂದು ಪಾತ್ರೆಯನ್ನು ಕೊಡುತ್ತೇನೆ. ನಾನು ಸಮುದ್ರದಲ್ಲಿ ಸ್ನಾನ ಮಾಡಿ ಮೇಲೆ ಬಂದ ಕೂಡಲೇ ನೀನು ಅದರಲ್ಲಿರುವ ಮಂತ್ರಿಸಿದ ನೀರನ್ನು ನನ್ನ ಮೈಗೆ ಹಾಕಬೇಕು. ಅದರಿಂದ ನಾನು ಪರಮ ಸುಂದರಿಯಾಗಿ ಬದಲಾಗುತ್ತೇನೆ. ಎರಡನೆಯ ಸಲದ ನೀರನ್ನು ನಿನ್ನ ಹೆಂಡತಿಯ ಮೇಲೆ ಸುರುವಿಬಿಡು. ಅದರಿಂದ ಅವಳು ಶಿಲೆಯಾಗಿ ಬಿಡುತ್ತಾಳೆ. ತಪ್ಪಿ ಕೂಡ ಎರಡನೆಯ ಸಲದ ನೀರನ್ನು ನನ್ನ ಮೈಗೆ ಹಾಕಬೇಡ. ನಿನ್ನೊಂದಿಗೆ ಒಂದು ವಾರ ಸಂಸಾರ ಮಾಡಿದ ಮೇಲೆ ನಾನು ನಿನ್ನನ್ನು ತಿಂದು ಮರಳಿ ಕಾಡಿಗೆ ಹೋಗುತ್ತೇನೆ. ಹೀಗೆ ನಾನು ಅನೇಕ ಸಲ ಮದುವೆಯಾಗಿ ಅವರನ್ನೆಲ್ಲ ತಿಂದು ಜೀರ್ಣಿಸಿಕೊಂಡಿದ್ದೇನೆ” ಎಂದು ಹೇಳಿದಳು.

ಗುಮೋಕೆ ಮಾಟಗಾತಿಯ ಮಾತಿನಂತೆಯೇ ನಡೆಯುವುದಾಗಿ ಮಾತು ಕೊಟ್ಟು ಮನೆಗೆ ಬಂದ. ಮದುವೆಯಾಗಿ ಒಂದು ವಾರದಲ್ಲಿ ತಾನು ಮಾಟಗಾತಿಗೆ ಆಹಾರವಾಗಲಿರುವುದನ್ನು ಕೇಳಿ ಅವನಿಗೆ ಅನ್ನಾಹಾರಗಳು ಸೇರಲಿಲ್ಲ. ನಿದ್ರೆ ಬರಲಿಲ್ಲ. ಸೊರಗಿ ಕಡ್ಡಿಯಾದ. ಗೆಳೆಯರೆಲ್ಲ ಅವನನ್ನು ನೋಡಲು ಬಂದರು. “”ಅಯ್ಯೋ ಏನಾಯಿತೋ ನಿನಗೆ? ಎಷ್ಟೊಂದು ಚಂದವಾಗಿ ಜೀವನ ಮಾಡಿಕೊಂಡಿದ್ದೆಯಲ್ಲ! ಈಗ ನೋಡಿದರೆ ನೀನು ಬತ್ತಿ ಹೋಗಿದ್ದೀ. ನಿನ್ನ ಹೆಂಡತಿಯೂ ಕಾಣುವುದಿಲ್ಲ. ಏನು ನಡೆಯಿತು ಹೇಳು” ಎಂದು ಕೇಳಿದರು.

ಗುಮೋಕೆ ಕಣ್ಣೀರು ತುಂಬಿಕೊಂಡು, “”ಇರುವ ಪರಿಸ್ಥಿತಿಯಲ್ಲೇ ಮನುಷ್ಯ ತೃಪ್ತಿ ಪಟ್ಟುಕೊಂಡು ಬದುಕಲು ಕಲಿತರೆ ಏನೂ ಆಗುವುದಿಲ್ಲ. ನಾನು ಹೆಂಡತಿಯನ್ನು ಬದಲಾಯಿಸಲು ಹೋಗಿ ಮಾಟಗಾತಿಯ ಬಲೆಗೆ ಸಿಲುಕಿಬಿಟ್ಟಿದ್ದೇನೆ. ಈಗ ಕೈ ಹಿಡಿದ ಹೆಂಡತಿ ಶಿಲೆಯಾಗುತ್ತಾಳೆ. ಮಾಟಗಾತಿಯ ಗಂಡನಾಗಿ ಒಂದು ವಾರದಲ್ಲಿ ಅವಳಿಗೆ ಆಹಾರವಾಗುತ್ತೇನೆ. ಇದರಿಂದ ಪಾರಾಗುವ ದಾರಿಯಾದರೂ ಏನಿದೆ ಎಂದು ತಿಳಿಯದೆ ಕಂಗಾಲಾಗಿದ್ದೇನೆ” ಎಂದು ನಡೆದ ವಿಷಯವನ್ನು ಗೆಳೆಯರಿಗೆ ಹೇಳಿದ.

ಗೆಳೆಯರಲ್ಲಿ ಅನುಭವಿಯಾದ ಹಿರಿಯ, “”ಅಪಾಯವನ್ನು ಉಪಾಯದಿಂದ ನಿವಾರಿಸಿಕೊಳ್ಳಬೇಕು. ನಾನು ಹೇಳಿದಂತೆ ಮಾಡಿದರೆ ನಿನಗೆ ಒಳ್ಳೆಯದೇ ಆಗುತ್ತದೆ” ಎಂದು ಮಾಡಬೇಕಾದ ಕೆಲಸವನ್ನು ಅವನಿಗೆ ಕಿವಿಯಲ್ಲಿ ಹೇಳಿದ. ಇದರಿಂದ ಗುಮೋಕೆಯ ಮುಖ ಅರಳಿತು. ಕಷ್ಟದಿಂದ ಪಾರಾಗುವ ಧೈರ್ಯ ಮೂಡಿತು. ಮಾಟಗಾತಿ ಹೇಳಿದ ದಿನ ಸಮುದ್ರ ತೀರಕ್ಕೆ ಹೋದ. ಜೊತೆಗೆ ಹಂದಿಯಾಗಿರುವ ಹೆಂಡತಿಯನ್ನೂ ಕರೆದುಕೊಂಡಿದ್ದ. ಮಾಟಗಾತಿ ಮಂತ್ರಜಲ ತುಂಬಿದ ಪಾತ್ರೆಯೊಂದಿಗೆ ಅಲ್ಲಿಗೆ ಬಂದು ಅವನ ಕೈಗೆ ಅದನ್ನು ಕೊಟ್ಟಳು. “”ನೆನಪಿದೆ ತಾನೆ? ನಾನು ಸಮುದ್ರದಲ್ಲಿ ಮುಳುಗಿ ಸ್ನಾನ ಮುಗಿಸಿ ಬಂದ ಕೂಡಲೇ ಮೇಲ್ಭಾಗದ ಮಂತ್ರದ ನೀರನ್ನು ನನ್ನ ಮೈಗೇ ಚಿಮುಕಿಸಬೇಕು. ನಾನು ಅಪ್ಸರೆಯಂತಹ ಸುಂದರಿಯಾಗುತ್ತೇನೆ. ಉಳಿದ ನೀರು ಹಂದಿಯಾದ ಹೆಂಡತಿಗೆ. ಅವಳು ಶಾಶ್ವತವಾಗಿ ಇಲ್ಲೇ ಶಿಲೆಯಾಗಿ ಬಿದ್ದಿರಲಿ” ಎಂದು ಹೇಳಿದಳು.

“”ನನಗೆ ಎಲ್ಲ ಮಾತುಗಳೂ ನೆನಪಿವೆ. ನೀನು ಸ್ನಾನ ಮುಗಿಸಿ ಬಾ” ಎಂದು ಗುಮೋಕೆ ಹೇಳಿದ. ಮಾಟಗಾತಿ ಸಮುದ್ರದಲ್ಲಿ ಸ್ನಾನ ಮುಗಿಸಿ ಬರುತ್ತಿದ್ದಂತೆ ಪಾತ್ರೆಯಲ್ಲಿರುವ ಮೇಲ್ಭಾಗದ ನೀರನ್ನು ತನ್ನ ಹೆಂಡತಿಯ ಮೈಗೆ ಸುರುವಿದ. ಕೋಪದಿಂದ ಮಾಟಗಾತಿ ಹಲ್ಲು ಕಡಿಯುತ್ತ, “”ಅವಿವೇಕಿ, ಏನು ಅವಾಂತರ ಮಾಡಿದೆ? ನನ್ನ ಮಂತ್ರದಿಂದ ನಿನ್ನನ್ನು ಸರ್ವನಾಶ ಮಾಡುತ್ತೇನೆ” ಎಂದು ಗರ್ಜಿಸಿದಳು. ಗುಮೋಕೆ ಬೆದರದೆ ಪಾತ್ರೆಯಲ್ಲಿರುವ ತಳಭಾಗದ ನೀರನ್ನು ಮಾಟಗಾತಿಯ ಮೈಮೇಲೆ ಎರಚಿದ. ಅವಳ ಕೂಗು ನಿಂತೇಹೋಯಿತು. ಅವಳು ದೊಡ್ಡ ಶಿಲೆಯಾಗಿ ಮಾರ್ಪಟ್ಟಳು. ಮಂತ್ರಜಲದ ಮಹಿಮೆಯಿಂದ ಗುಮೋಕೆಯ ಹೆಂಡತಿ ಮರಳಿ ಮನುಷ್ಯಳಾದಳು. ಆದರೆ ತೆಳ್ಳಗೆ, ಬೆಳ್ಳಗೆ ಸುಂದರಿಯಾಗಿ ಬದಲಾಗಿದ್ದ ಅವಳಿಗೆ ಮೊದಲಿನಂತೆ ಹಸಿವೆಯೂ ಇರಲಿಲ್ಲ. ಗಂಡನೊಂದಿಗೆ ಸುಖವಾಗಿದ್ದಳು.

ಪ. ರಾಮಕೃಷ್ಣ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

  • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

  • ಸರಕಾರದ ಅನುದಾನ ಪಡೆದು ಕಾರ್ಯಕ್ರಮ ನಡೆಸುವುದೇ ಒಂದು ಕೌಶಲ. ಇಂಥ ಕೌಶಲವಿಲ್ಲದೆಯೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ನಡೆಸುವ ಎಷ್ಟೋ ಸಂಸ್ಥೆಗಳಿಲ್ಲವೆ?...

  • ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ ಮುಂತಾದ ಅಷ್ಟಲಕ್ಷ್ಮಿಯರ ಬಗ್ಗೆ ನೀವೆಲ್ಲ ತಿಳಿದಿರಬಹುದು. ಆದರೆ ಮೇಲೆ ಹೇಳಿರುವುದು ತುಂಬಾ ಮುಖ್ಯವಾದ ಎಲ್ಲೆಡೆಯೂ ಅವಗಣಿಸಲ್ಪಟ್ಟ...

  • ಸುಖಾಂತ್ಯ'ವೆಂಬುದು- ಎಲ್ಲವೂ ಸುಖಾಂತ್ಯಗೊಳ್ಳುವುದೆಂಬುದು- ಸಾಂಸಾರಿಕವಾದ ಒಂದು ಕಲ್ಪನೆ ಅಥವಾ ಎಣಿಕೆಯಾಗಿದೆ. ಮನೆಬಿಟ್ಟುಹೋದ ಮಗ, ಮರಳಿ ಮನೆಗೆ ಬಂದೇ ಬರುವನೆಂಬ...

ಹೊಸ ಸೇರ್ಪಡೆ