ಚಿತ್ರೋತ್ಸವದಲ್ಲಿ ಮೌನದ ಮಾತು


Team Udayavani, Mar 22, 2020, 5:07 AM IST

ಚಿತ್ರೋತ್ಸವದಲ್ಲಿ ಮೌನದ ಮಾತು

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಎಂದರೆ ಇಡೀ ಜಗತ್ತು ಮಾಯಾನಗರಿಗೆ ಲಗ್ಗೆ ಇಟ್ಟಂತೆ! ಜಾಗತಿಕ ಚಲನಚಿತ್ರ ಕ್ಷೇತ್ರದ ಎಲ್ಲ ಆಯಾಮಗಳು, ಸಂವೇದನೆಗಳು- ಇಲ್ಲಿನ ಕಲಾವಿದರು, ನಿರ್ದೇಶಕರು, ತಂತ್ರಜ್ಞರೊಂದಿಗೆ ಮುಖಾಮುಖಿಯಾಗಲು ಈ ಸಿನಿಮೋತ್ಸವ ಪ್ರಮುಖ ವೇದಿಕೆಯಾಗಿರುವುದಂತೂ ಸತ್ಯ.

ಬೆಂಗಳೂರಿನ ಒರಾಯನ್‌ ಮಾಲ್‌ ಚಿತ್ರೋತ್ಸವದ ಪ್ರಮುಖ ಆಕರ್ಷಣೀಯ ತಾಣ. ಹತ್ತಾರು ತೆರೆಗಳ ಮೇಲೆ ಏಕಕಾಲಕ್ಕೆ ನೂರಾರು ಚಿತ್ರಗಳ ಪ್ರದರ್ಶನ, ಸ್ಪರ್ಧೆ, ಚಿತ್ರಜಗತ್ತಿನ ವಸ್ತುಸ್ಥಿತಿಯ ಪರಾಮರ್ಶೆ, ಕಲೆ ಮತ್ತು ವ್ಯಾಪಾರ ಕುರಿತ ಚಿಂತನ-ಮಂಥನ, ಚಿತ್ರ ಪ್ರೇಕ್ಷಕರಿಗೆ ನೆಚ್ಚಿನ ನಟ-ನಿರ್ದೇಶಕರ ದರ್ಶನ… ಹೀಗೆ ಬೆಳ್ಳಿತೆರೆಯ ಸೆಳೆತಕ್ಕೆ ಸಿಲುಕಿದವರಿಗೆ ಒಂದು ವಾರ ಕಾಲ ಹಬ್ಬವೋ ಹಬ್ಬ! ಹೀಗಿರುತ್ತದೆ ಸಿನಿಮೋತ್ಸವದ ಸಂಭ್ರಮ.

ಫೆಬ್ರವರಿ 26ರಿಂದ ಮಾರ್ಚ್‌ 4ರ ವರೆಗೆ ಚಿತ್ರೋತ್ಸವ ನಡೆಯಿತು. ಒರಾಯನ್‌ ಮಾಲ್‌ನಲ್ಲಿರುವ ಪಿವಿಆರ್‌ನ 11 ತೆರೆಗಳಷ್ಟೇ ಅಲ್ಲ ನವರಂಗ್‌ ಚಿತ್ರಮಂದಿರ, ಸುಚಿತ್ರಾ ಫಿಲಂ ಸೊಸೈಟಿ, ಡಾ. ರಾಜ್‌ಕುಮಾರ್‌ ಭವನ ಸೇರಿದಂತೆ ಒಟ್ಟು 14 ತೆರೆಗಳಲ್ಲಿ ಜಾಗತಿಕ, ದೇಶೀಯ ಹಾಗೂ ಪ್ರಾದೇಶಿಕ ನೂರಾರು ಚಿತ್ರಗಳು ಪ್ರದರ್ಶನ ಕಂಡವು. ಹಲವು ವಿಭಾಗಗಳ ಪ್ರಶಸ್ತಿಗಾಗಿ ಸ್ಪರ್ಧೆಯೊಡ್ಡಿದವು. ಇದರೊಂದಿಗೆ ಚಿತ್ರರಂಗದ ವಿದ್ವಾಂಸರು, ಗಣ್ಯರ ಸಮ್ಮುಖದಲ್ಲಿ ಸಭೆ-ಸಂವಾದಗಳು ಕೂಡ ನಡೆದವು.

ಈ ಬಾರಿಯ ಸಿನಿಮೋತ್ಸವದಲ್ಲಿ ಕನ್ನಡದ ಮಟ್ಟಿಗೆ ಅತ್ಯಂತ ಹೆಚ್ಚು ಪ್ರೇಕ್ಷಕರನ್ನು ಸೆಳೆದ, ಕುತೂಹಲ ಮೂಡಿಸಿದ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ ಚಿತ್ರ. 14 ತೆರೆಗಳಲ್ಲಿ ಬೇರೆ ಬೇರೆ ಚಿತ್ರಗಳು ಪ್ರದರ್ಶನ ಕಾಣುವ ಸಂದರ್ಭದಲ್ಲಿ ಶೇ. 80ರಷ್ಟು ಪ್ರೇಕ್ಷಕರು ಈ ಚಿತ್ರ ವೀಕ್ಷಿಸುವ ಕುತೂಹಲ ವ್ಯಕ್ತಪಡಿಸಿದರು. ಈ ಚಿತ್ರ ಪ್ರದರ್ಶನವಾಗಲಿದ್ದ ಪಿವಿಆರ್‌ನ 9ನೇ ಸಂಖ್ಯೆಯ ತೆರೆಯ ಮುಂದೆ ಪ್ರೇಕ್ಷಕರು ಪ್ರವೇಶಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದರು. ಆದರೆ, ಪ್ರವೇಶ ಸಿಕ್ಕಿದ್ದು ಮಾತ್ರ ಚಿತ್ರಗೃಹ ತುಂಬುವಷ್ಟು ಜನರಿಗೆ ಮಾತ್ರ. ಚಿತ್ರಗೃಹ ತುಂಬಿದ ಮೇಲೂ ಸಾಲಿನಲ್ಲಿ ನಿಂತಿದ್ದ ನೂರಾರು ಜನರಿಗೆ ನಿರಾಶೆ ಕಾಡಿತು. ಚಿತ್ರ ವೀಕ್ಷಿಸಲು ತಮಗೂ ಅವಕಾಶ ಮಾಡಿಕೊಡುವಂತೆ ಒತ್ತಡ ಹಾಕುತ್ತಿದ್ದ ಜನರನ್ನು ನಿಯಂತ್ರಿಸಲು ಆಯೋಜಕರು ಸಾಹಸಪಡಬೇಕಾಯಿತು. ಪ್ರಾಯಶಃ ಇದು ಗಿರೀಶ್‌ ಕಾಸರವಳ್ಳಿ ಅವರ ಚಿತ್ರದ ಮಾಂತ್ರಿಕ ಶಕ್ತಿ ಎನ್ನಬೇಕು!

ಪರ್ಯಾಯ ಚಿತ್ರ ಜಗತ್ತಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕನ್ನಡದ ಪ್ರಮುಖ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ಈವರೆಗೆ 14 ಚಿತ್ರಗಳನ್ನು ಮಾಡಿ, 16 ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರು. ಕೂರ್ಮಾವತಾರ ಚಿತ್ರದ ಬಳಿಕ 9 ವರ್ಷಗಳ ಕಾಲ ತಟಸ್ಥವಾಗಿದ್ದು, ಈ ದೀರ್ಘ‌ ಕಾಲದ ನಂತರ ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ ಚಿತ್ರದೊಂದಿಗೆ ಮತ್ತೂಮ್ಮೆ ತಮ್ಮ ಅಸ್ತಿತ್ವವನ್ನು ತೋರ್ಪಡಿಸಿದ್ದಾರೆ. ಹೀಗೆ ಸುಮಾರು 40 ವರ್ಷಗಳ ಕಾಲದ ಅವರ ಸಿನಿಯಾತ್ರೆ ಪ್ರೇಕ್ಷಕರ ಮನದಲ್ಲಿ ದಟ್ಟವಾದ ಪ್ರಭಾವ ಸೃಷ್ಟಿಸಿದ್ದೇ ವಿಶಿಷ್ಟ ಮಾಂತ್ರಿಕ ಶಕ್ತಿಯ ಮೂಲ ಎನ್ನಬಹುದು!

ಕಾಸರವಳ್ಳಿಯವರ ಎಲ್ಲ ಚಿತ್ರಗಳನ್ನು ಮೌಲ್ಯಮಾಪನದ ತಕ್ಕಡಿಯಲ್ಲಿಟ್ಟು ತೂಗಿದಾಗ ಒಡಮೂಡುವ ತೂಕ ಮಾನವೀಯತೆಯ ಶೋಧ ಮತ್ತು ಜಗತ್ತಿನ ಮನುಕುಲ ವಿಕಾಸದ ಒಟ್ಟೊಟ್ಟಿಗೇ ತಳುಕು ಹಾಕಿಕೊಂಡ ಸಂಕೀರ್ಣ ಸಮಸ್ಯೆಗಳ ಸೂಕ್ಷ್ಮವಾದ ದರ್ಶನ. ಹಾಗಾಗಿ, ಕಾಸರವಳ್ಳಿಯವರ ಚಿತ್ರಗಳಲ್ಲಿ ಮಾತುಗಳಿಗಿಂತ ಮೌನವೇ ಹೆಚ್ಚು ಮಾತನಾಡುತ್ತದೆ. ಅದು ಎಷ್ಟರಮಟ್ಟಿಗೆ ಎಂದರೆ ಪ್ರೇಕ್ಷಕರ ತಾಳ್ಮೆಯನ್ನೂ ಪರೀಕ್ಷಿಸುವ ಮಟ್ಟಕ್ಕೆ. ಹಾಗಾಗಿ, ಪ್ರೇಕ್ಷಕ ಇವರ ಚಿತ್ರಗಳನ್ನು ವೀಕ್ಷಿಸುವ ಕ್ರಮವೊಂದನ್ನು ರೂಢಿಸಿಕೊಳ್ಳಬೇಕಾಗುವುದು. ಒಂದು ಮೌನ ಧ್ವನಿಸಬಹುದಾದ ಅರ್ಥವ್ಯಾಪ್ತಿ; ಆ ಮೌನದಲ್ಲಿ ಒಂದು ಪಾತ್ರ ವ್ಯಕ್ತಪಡಿಸಬಹುದಾದ ಭಾವತೀವ್ರತೆಯನ್ನು ಅರಗಿಸಿಕೊಳ್ಳಬಹುದಾದ ಪ್ರೇಕ್ಷಕನಿಗೆ, ಇವರ ಚಿತ್ರಗಳನ್ನು ವೀಕ್ಷಿಸುವ ಕ್ರಮ ಹೇಗೆ ಎಂಬುದನ್ನು ಹೇಳಿಕೊಡಬೇಕಾಗಿಲ್ಲ. ಇದೊಂದು ರೀತಿ ಬೆಟ್ಟ ಕೊರೆದು, ಬಂಡೆ ಕರಗಿಸಿ, ಅದರಲ್ಲಿ ಬೆರೆತಿರುವ ಚಿನ್ನವನ್ನು ಶೋಧಿಸಿ ತೆಗೆದಂತೆ! ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ ಚಿತ್ರವನ್ನು ಕೂಡ ಇದೇ ನೆಲೆಗಟ್ಟಿನಲ್ಲಿ ವೀಕ್ಷಿಸಿ, ಅವಲೋಕಿಸಬೇಕಿದೆ.

ಕಥೆಗಾರ ಜಯಂತ್‌ ಕಾಯ್ಕಿಣಿ ಅವರ ಹಾಲಿನ ಮೀಸೆ ಸಣ್ಣಕಥೆ ಆಧರಿಸಿ, ಕಾಸರವಳ್ಳಿ ಅವರೇ ಅದರ ಕಥಾವ್ಯಾಪ್ತಿಯನ್ನು ಚಿತ್ರಕಥೆಗೆ ಅಗತ್ಯವಿರುವಷ್ಟು ವಿಸ್ತರಿಸಿ ರೂಪಿಸಿರುವ ಚಿತ್ರ ಇದು. ಶೀರ್ಷಿಕೆಯೇ ಹೇಳುವಂತೆ ಮನುಷ್ಯನ ಸಂದಿಗ್ಧ ಸ್ಥಿತಿಯನ್ನು ತೆರೆದಿಡುವ ಕಥನ ಇಲ್ಲಿದೆ. ಅರವತ್ತರ ದಶಕದ ಕಾಲಘಟ್ಟದಲ್ಲಿ ಕರಾವಳಿ ಪ್ರದೇಶದಲ್ಲಿ ನಡೆಯುವ ಕತೆ ಇದು. ಆಧುನಿಕತೆಯ ಸ್ಪರ್ಶವಿಲ್ಲದ, ಸಾಂಪ್ರದಾಯಿಕ ಕಟ್ಟಳೆ ಮತ್ತು ಯಜಮಾನಿಕೆಯ ಅಂಧಕಾರದಲ್ಲಿ ಸಿಲುಕಿರುವ ಇಬ್ಬರು ಅಮಾಯಕರು ದ್ವೀಪದ ಊರು ಕುದ್ರುವನ್ನು ದಾಟಿ, ನಗರದಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ಪಡುವ ಪಾಡು ಕತೆಯಲ್ಲಿ ಪರಿಣಾಮಕಾರಿಯಾಗಿ ದಾಖಲಾಗಿದೆ. ಇಲ್ಲಿ ಕಾಸರವಳ್ಳಿ ಅವರು ಮನುಷ್ಯ ಸಂಬಂಧಗಳ ವೈರುಧ್ಯ, ವರ್ತನೆಗಳ ಸೂಕ್ಷ್ಮಗಳನ್ನು ದಟ್ಟವಾಗಿ ಕಟ್ಟಿಕೊಟ್ಟಿದ್ದಾರೆ.

ಬದುಕು ಕಟ್ಟಿಕೊಳ್ಳಲು ಮನುಷ್ಯ ವಲಸೆ ಹೋಗಬೇಕಿರುವುದು ಜಗತ್ತಿನ ಹಲವು ಮೂಲೆಗಳಲ್ಲಿ ಉದ್ಭವಿಸಿರುವ ಪ್ರಮುಖ ಸಮಸ್ಯೆ. ಅದಕ್ಕೆ ಕಾರಣಗಳು ಅನೇಕವಿದ್ದರೂ ಅದು ಅನಿವಾರ್ಯ. ಇರುವುದೆಲ್ಲ ಬಿಟ್ಟು ಇನ್ನೇನೊ ಪಡೆದುಕೊಳ್ಳುವ ಹೊಸ ನಿರೀಕ್ಷೆಗಳೊಂದಿಗೆ ಕೆಲವರು ತಾವು ಹುಟ್ಟಿಬೆಳೆದ ಪರಿಸರ ಬಿಟ್ಟು ಹೊರಡುತ್ತಾರೆ. ತಮ್ಮ ಮೂಲದಿಂದ ದೂರವಾಗುತ್ತಾರೆ. ಇನ್ನು ಕೆಲವರಿಗೆ ತಾವು ಬಿಟ್ಟುಬಂದ ತಮ್ಮ ಮೂಲಕ್ಕೆ ಹಿಂದಿರುಗುವ ತುಡಿತ. ಹಿಂದಿರುಗುವ ತುಡಿತವಿದ್ದರೂ ಆ ಹೊತ್ತಿಗೆ ಕಟ್ಟಿಕೊಂಡ ತಮ್ಮದು ಎಂಬುದೆಲ್ಲವನ್ನೂ ಕಳೆದುಕೊಳ್ಳುವ ಭಯ. ಹೀಗೆ ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೇ ಜೀವನ ಎಂಬ ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲಿನಂತೆ, ಇಲ್ಲಿರಲೂ ಆಗದೇ ಅಲ್ಲಿಗೂ ಹೋಗಲಾಗದೇ ಅತೃಪ್ತ ಸ್ಥಿತಿಯಲ್ಲೇ ಕಳೆದುಹೋಗುವ ವಲಸೆಗಾರರ ಸಂದಿಗ್ಧ ಜೀವನ, ಅವರ ಭಾವನೆಗಳ ತಾಕಲಾಟ, ತಲ್ಲಣಗಳನ್ನು ದರ್ಶಿಸುವ ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ ಚಿತ್ರ ಪ್ರೇಕ್ಷಕನಲ್ಲಿ ವಿಷಾದದ ಅಲೆ ಎಬ್ಬಿಸುತ್ತದೆ.

ಇಂತಹ ಗಟ್ಟಿ ಸತ್ವಗಳನ್ನು ಒಳಗೊಂಡ ಈ ಚಿತ್ರ ಸಿನಿಮೋತ್ಸವದಲ್ಲಿ ಪ್ರೇಕ್ಷಕರನ್ನು ಸೆಳೆದಿರುವುದರಲ್ಲಿ ಅಚ್ಚರಿಯೇನಿಲ್ಲ. ಕಾರಣ ಉತ್ತಮ ಚಿತ್ರಗಳನ್ನು ಪ್ರೇಕ್ಷಕರು ಯಾವ ಕಾಲಕ್ಕೂ ಪ್ರೀತಿಸುತ್ತಾರೆ, ಆದರಿಸುತ್ತಾರೆ. ತಮ್ಮ ಜೀವಮಾನದ ಅರ್ಧಕ್ಕಿಂತಲೂ ಹೆಚ್ಚು ಕಾಲವನ್ನು ಚಿತ್ರಲೋಕದಲ್ಲಿ ವ್ಯಯಿಸಿರುವ ಕಾಸರವಳ್ಳಿ ಅವರು ಶ್ರೇಷ್ಠ ಪ್ರೇಕ್ಷಕರ ನಾಡಿಮಿಡಿತ ಅರಿತಿದ್ದಾರೆ. ಈ ಅರಿವು, ಸಾಹಿತ್ಯದ ತಲಸ್ಪರ್ಶಿ ಅಧ್ಯಯನ, ಜಾಗತಿಕ ದೃಷ್ಟಿ ಅವರನ್ನು ಸಮರ್ಥ ಮತ್ತು ಶ್ರೇಷ್ಠ ನಿರ್ದೇಶಕನನ್ನಾಗಿಸಿದೆ. ಜಾಗತಿಕ ಚಿತ್ರ ವಿಮರ್ಶಕರು, ಪ್ರಾಜ್ಞರು ಕನ್ನಡದ ಪರ್ಯಾಯ ಚಿತ್ರಲೋಕದತ್ತ ದೃಷ್ಟಿ ಹಾಕುವಂತೆ ಮಾಡಿದೆ.

ಕುಮಾರ ಬೇಂದ್ರೆ

ಟಾಪ್ ನ್ಯೂಸ್

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

HDK

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

lahari

ಲಹರಿ: ಮದುವೆ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

12-sadsad

Davanagere ವೃದ್ಧರೊಬ್ಬನ್ನು ಅಪಹರಿಸಿ ಭಾರಿ ಹಣಕ್ಕೆ ಬೇಡಿಕೆ; ಐವರ ಬಂಧನ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ