ಏಷ್ಯಾದ ಅತಿ ಸ್ವಚ್ಛ ಹಳ್ಳಿ- ಮಾವ್ಲಿನ್ನಾಂಗ್‌

Team Udayavani, Nov 10, 2019, 4:58 AM IST

ಮಂಜಿನ ತೆರೆಯಲ್ಲಿ ಹಸಿರು ಗುಡ್ಡಗಳ ನಡುವೆ ಬೆಳ್ಳಿರೇಖೆಗಳಂತೆ ಜಲಪಾತಗಳನ್ನು ನೋಡುತ್ತ ಹಾವಿನಂಥ ಅಂಕುಡೊಂಕಿನ ಹಾದಿಯಲ್ಲಿ ಪಯಣ ಸಾಗಿತ್ತು. ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ನೂರು ಕಿ. ಮೀ. ದೂರದಲ್ಲಿರುವ ಮಾವ್ಲಿನ್ನಾಂಗ್‌ (Mawlynnong ) ಎಂಬ ಹಳ್ಳಿ ನಮ್ಮ ಗಮ್ಯ. ಹಾಗೇ ಗಡಿ ಪೋಸ್ಟ್‌ ಡಾವ್‌ಕಿದಾಟಿ ಪಿನರ್ಸುಲಾ ಎಂಬ ಪುಟ್ಟ ಪಟ್ಟಣದ ನಂತರ ಚಿಕ್ಕತಿರುವು. ಅಲ್ಲಿಂದ ದಾರಿಯ ಇಕ್ಕೆಲಗಳಲ್ಲಿ ಬಾಳೆಗಿಡ,ಅಡಿಕೆ ಮರ ಮತ್ತು ವೀಳ್ಯದೆಲೆ ಬಳ್ಳಿಗಳು. ಥೇಟ್‌ ನಮ್ಮ ಸಾಗರ-ಶಿರ ಸಿ ಕಡೆಯ ವಾತಾವರಣ.ಎಲ್ಲಿಂದೆಲ್ಲಿಯ ಹೋಲಿಕೆ ಎನ್ನುವಂತಿಲ್ಲ, ಅದು ಮಳೆನಾಡು, ನಮ್ಮದು ಮಲೆನಾಡು !

ಅಲ್ಲಿ ಕಣ್ಣಿಗೆ ತಂಪೆರೆಯುವ ಹಸಿರು ಮತ್ತುಹೂಗಳ ವರ್ಣವೈಭವದ ನಡುವೆ ಪವಡಿಸಿದೆ. ಮಾವ್ಲಿನ್ನಾಂಗ್‌ (ಮಾವ್‌ – ಕಲ್ಲು, ಲಿನ್ನಾಂಗ್‌- ಚೆಲ್ಲಾಪಿಲ್ಲಿ). ನದಿಪಾತ್ರದಲ್ಲಿ ನೀರು ಹರಿದು ಬಂಡೆಗಳನ್ನು ಕೊರೆದು ಪೊಳ್ಳಾದ ದೊಡ್ಡ ಕಲ್ಲುಗಳು ಈ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾದ್ದರಿಂದ ಖಾಸಿ ಭಾಷೆಯಲ್ಲಿ ಈ ಹೆಸರು! ಎಲ್ಲೋ ಮೂಲೆಯಲ್ಲಿ ತನ್ನ ಪಾಡಿಗೆ ತಾನಿದ್ದ ಈ ಹಳ್ಳಿ, 2003 ರಿಂದ ಪ್ರಪಂಚದಲ್ಲೇ ಪ್ರಸಿದ್ಧಿ ಪಡೆಯಲು ಕಾರಣ, ಡಿಸ್ಕವರ್‌ ಇಂಡಿಯಾ ಪತ್ರಿಕೆಯಿಂದ ಏಷ್ಯಾದ ಅತಿ ಸ್ವಚ್ಛ ಹಳ್ಳಿ ಎಂದುಗುರುತಿಸಲ್ಪಟ್ಟಿದ್ದು! ಇದಲ್ಲದೇ ಶೇ. ನೂರರಷ್ಟು ಸಾಕ್ಷರತೆ ಮತ್ತು ಸ್ತ್ರೀಸಬಲೀಕರಣಇಲ್ಲಿನ ಪ್ರಮುಖ ಅಂಶ. ಹೀಗಾಗಿ, ಈ ಪುಟ್ಟ ಹಳ್ಳಿಯನ್ನು, ಸ್ಥಳೀಯರು ದೇವರ ಸ್ವಂತ ಉದ್ಯಾನವನ ಎಂದು ಪ್ರೀತಿಯಿಂದ ಬಣ್ಣಿಸುವುದರಲ್ಲಿ ಅತಿಶಯೋಕ್ತಿ ಏನಿಲ್ಲ!

ಸ್ವಚ್ಛತೆ ಇಲ್ಲಿ ಜೀವನ ವಿಧಾನ!
ಸುಮಾರು ನೂರು ಮನೆಗಳಿರುವ ಈ ಹಳ್ಳಿಯ ಜನಸಂಖ್ಯೆ ಐದುನೂರು.ತೆರೆದ ಬಯಲಿನಲ್ಲಿ ಶೌಚಕ್ಕೆ ಹೋಗುವುದು ಇಲ್ಲೆಲ್ಲೂ ಇಲ್ಲ. ಮನೆ ಎಷ್ಟೇ ಸಣ್ಣದಾದರೂ ಪ್ರತೀ ಮನೆಗೂ ಶೌಚಾಲಯವಿದೆ. ಇದಲ್ಲದೇ ಪ್ರವಾಸಿಗರಿಗೆ ಸಾರ್ವಜನಿಕರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಪ್ರತಿ ಮನೆಗೆ ಮಾತ್ರವಲ್ಲ,ಬೀದಿ ಬೀದಿಗೆ ಬಿದಿರಿನಕಸದ ಬುಟ್ಟಿಗಳಿವೆ. ಕೋನಾಕೃತಿಯಲ್ಲಿಕಲಾತ್ಮಕವಾಗಿ ಹೆಣೆದ ಈ ಬುಟ್ಟಿಖೋಹ್‌ ನೋಡಿದರೆ ಆಲಂಕಾರಿಕ ವಸ್ತುವೇನೋ ಅನ್ನಿಸುವಷ್ಟು ಚೆಂದ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ದೊಡ್ಡದಾದ ಹೊಂಡಕ್ಕೆ ಹಾಕಿ ನಂತರ ಗೊಬ್ಬರವಾಗಿ ಬಳಸಲಾಗುತ್ತದೆ. ಧೂಮಪಾನ ಮತ್ತು ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ದಿನವೂ ಬೆಳಿಗ್ಗೆ ಅಥವಾ ಸಂಜೆ ಪ್ರತೀ ಮನೆಯವರು ತಮ್ಮ ಅಂಗಳವನ್ನಂತೂ ಸರಿ, ಅಕ್ಕಪಕ್ಕದ ಜಾಗ ಮಾತ್ರವಲ್ಲ, ರಸ್ತೆಯನ್ನೂಗುಡಿಸುವುದುಕಡ್ಡಾಯವಾಗಿ ಪಾಲಿಸಿಕೊಂಡು ಬಂದಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಮರಗಳಿದ್ದು ಈ ಉದುರಿದ ಎಲೆಗಳನ್ನು ನೇರವಾಗಿ ಅಲ್ಲಲ್ಲೇ ಕಟ್ಟಿದ ಬಿದಿರಿನ ಬುಟ್ಟಿಗೆ ಬೀಳುವ ವ್ಯವಸ್ಥೆ ಮಾಡಲಾಗಿದೆ. ದಿನವೂ ಶಾಲೆಗೆ ಹೋಗುವ ಮುನ್ನ ಬೀದಿ ಗುಡಿಸಿ, ಕಸವನ್ನು ಬುಟ್ಟಿಯಿಂದ ಖಾಲಿಮಾಡುವುದು ಹಳ್ಳಿಯ ಮಕ್ಕಳ ದಿನಚರಿ. ಇಲ್ಲಿನ ಜನರ ಬಗ್ಗೆ ನಮ್ಮ ಚಾಲಕ, “ಇಲ್ಲಿ ಎಲ್ಲರ‌ ಕೈಯಲ್ಲಿ ಸದಾ ಪೊರಕೆ ಮತ್ತು ಬೆನ್ನಿಗೆ ಬಿದಿರಿನ ಬುಟ್ಟಿ ಇದ್ದೇ ಇರುತ್ತದೆ’ ಎಂದು ಸ್ವಲ್ಪ ತಮಾಷೆ ಮತ್ತು ಹೆಮ್ಮೆಯಿಂದ ಹೇಳಿದ! ಅಂದರೆ ಸ್ವತ್ಛತೆ ಇಲ್ಲಿನಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೇನಾದರೂ ವಿಶೇಷ ಕಾರಣವಿದೆಯೇಎಂದುಕುತೂಹಲದಿಂದವಿಚಾರಿಸಿದಾಗ ಶತಮಾನಕ್ಕೂ ಹಿಂದೆ ಇಲ್ಲಿ ಕಾಲರಾ ಸಾಂಕ್ರಾಮಿಕವಾಗಿ ಹರಡಿ ಅನೇಕರನ್ನು ಬಲಿ ತೆಗೆದುಕೊಂಡಿತ್ತು. ಆಗ ಇದ್ದಂಥ ಬ್ರಿಟಿಷ್‌ ವೈದ್ಯರು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದರಿಂದ ತಮ್ಮ ಮಕ್ಕಳ ಸಲುವಾಗಿ ಮಹಿಳೆಯರು ಸ್ವತ್ಛತೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸಲು ಆರಂಭಿಸಿದರು ಎಂಬ ಉತ್ತರ ಸಿಕ್ಕಿತು!

ಬಿದಿರಿನ‌ ಮನೆ
ಇಲ್ಲಿ ಹೆಚ್ಚಿನವು ಮೆಟ್ಟುಗೋಲಿನ ಮೇಲೆ ಬಿದಿರನ್ನು ಬಳಸಿ ಹುಲ್ಲುಮಾಡಿನ ಮನೆಗಳು. ಮನೆ ದೊಡ್ಡ ಸಣ್ಣ ಹೇಗಿದ್ದರೂ ಅಂಗಳ, ಹಿತ್ತಲು ಎಲ್ಲೆಡೆ ಗಿಡಮರಗಳಿವೆ. ಬಳಸಿದ ನೀರು ವ್ಯರ್ಥವಾಗದಂತೆ ಗಿಡಗಳಿಗೆ ಬಳಸಲಾಗುತ್ತದೆ. ಮರಗಳ ಮೇಲಿಂದ ಅಲ್ಲಲ್ಲಿ ಚೆಂದದ ಆರ್ಕಿಡ್‌ ಹೂಗಳು ಮನಸೆಳೆಯುತ್ತವೆ.ಎಲ್ಲೂ ಕಸ -ಕಡ್ಡಿ ಇಲ್ಲದೇ ಇರುವುದರಿಂದ ನೀಟಾದ ರಸ್ತೆಯ ಪಕ್ಕದಲ್ಲಿ ಹರಿಯುವ ನೀರೂ ಶುದ್ಧವಾಗಿಯೇ ಕಾಣುತ್ತದೆ! ಪ್ರವಾಸಿಗರಿಗಾಗಿ ಎತ್ತರದ ಮರದ ಮೇಲೆ ಟ್ರೀಹೌಸ್‌ ಮಾಡಲಾಗಿದ್ದು ಪ್ರವೇಶಧನ ಇಪ್ಪತ್ತು ರೂಪಾಯಿ. ಬಿದಿರಿನ ಏಣಿ ಹತ್ತಿ ಎತ್ತರದಲ್ಲಿರುವ ಬಿದಿರಿನ ಮನೆಗೆ ಪ್ರವೇಶಿಸಬೇಕು. ಅಲ್ಲಿರುವ ಪುಟ್ಟ ಅಟ್ಟದಲ್ಲಿ ಕುಳಿತು ಬಿಡಿಸಿದ ಚಿತ್ರದಂತಿರುವ ಇಡೀ ಹಳ್ಳಿ ಮತ್ತು ದೂರದ ಬಾಂಗ್ಲಾದೇಶದ ಗದ್ದೆ-ಹಳ್ಳಿಗಳನ್ನು ಕಾಣಬಹುದು. ಹಾಗೆಯೇ ನೂರು ವರ್ಷ ಹಳೆಯದಾದ ಎಪಿಫ‌ನಿ ಚರ್ಚ್‌ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳ.

ಸ್ಥಳೀಯ ಖಾಸಿ ಜನರೇ ಹೆಚ್ಚಿರುವ ಇಲ್ಲಿ ಮಾತೃಪ್ರಧಾನ ಸಂಸ್ಕೃತಿ ಕಾಣಬಹುದು. ತಾಯಿಯಿಂದ ಹೆಣ್ಣುಮಕ್ಕಳು ತಮ್ಮ ಮನೆತನದ ಹೆಸರನ್ನು ಪಡೆಯುವುದಲ್ಲದೆ, ಎಲ್ಲರಿಗಿಂತ ಕಿರಿಯ ಮಗಳು ಆಸ್ತಿಯ ಹಕ್ಕನ್ನು ಪಡೆಯುತ್ತಾಳೆ. ಸ್ಥಳೀಯರಿಗೆ ತಮ್ಮ ಹಳ್ಳಿ ಬಗ್ಗೆ, ಅದಕ್ಕೆ ಸಿಕ್ಕಿರುವ ಪ್ರಚಾರ ಮತ್ತು ಬರುತ್ತಿರುವ ಆದಾಯದ ಕುರಿತು ಸಂತೋಷವಿದೆ. ಏಕೆಂದರೆ, ಇದೀಗ ಮೇಘಾಲಯದ ಶ್ರೀಮಂತ ಹಳ್ಳಿ! ಆದರೆ, ಅದರ ನಡುವೆಯೇ ದುಡ್ಡು ಮತ್ತು ಪ್ರವಾಸಿಗರು ಹೆಚ್ಚಾಗಿ, ತಮ್ಮಹಳ್ಳಿ ಮತ್ತುಜೀವನಶೈಲಿ ಬದಲಾದರೆ ಎಂಬ ಸಣ್ಣ ಆತಂಕವೂ ಇದೆ. ದೇವರ ಸ್ವಂತ ಉದ್ಯಾನವನ, ದುಷ್ಟ ಮನುಷ್ಯರ ಕೈಗೆ ಸಿಕ್ಕು ನರಕವಾಗದಿರಲಿ ಎಂಬ ಹಾರೈಕೆ ಅಲ್ಲಿಯವರದ್ದು ಮಾತ್ರವಲ್ಲ , ನಮ್ಮದು ಕೂಡ!

ಕೆ. ಎಸ್‌. ಚೈತ್ರಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚಿಮೂ ಎಂದೇ ಖ್ಯಾತರಾಗಿದ್ದ ಎಂ. ಚಿದಾನಂದ ಮೂರ್ತಿ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಅವರ ಪ್ರಕಾರ ಸಂಶೋಧನೆ ಎಂದರೆ ಸತ್ಯಶೋಧನೆ! ತಮ್ಮ ನಿಲುವನ್ನು ಪ್ರಕಟಿಸುವಲ್ಲಿ...

  • ಹಕ್ಕಿ ಒಂದು ರೂಪಕ, ಕಾವ್ಯ-ಶಾಸ್ತ್ರಗಳೆರಡರಲ್ಲಿಯೂ. ಮಾಂಡುಕ್ಯ ಉಪನಿಷತ್ತಿನಲ್ಲಿ ಎರಡು ಹಕ್ಕಿಗಳ ಕತೆ ಬರುತ್ತದೆ. ಒಂದು ಹಣ್ಣನ್ನು ತಿನ್ನುವ ಹಕ್ಕಿ, ಇನ್ನೊಂದು...

  • "ಹಾಯ್‌ ಹೌ ಆರ್‌ ಯೂ?' ಅವನಿಂದ ಬಂದಿದ್ದ ಮೆಸೇಜ್‌ ಇವಳ ಮೊಬೈಲ್‌ನಲ್ಲಿ ಅರ್ಧಗಂಟೆಯಿಂದ ತಣ್ಣಗೆ ಕುಳಿತಿತ್ತು. ಹರ್ಷಿಣಿ ಯಾವುದೋ ನಂಬರ್‌ ಸರ್ಚ್‌ ಮಾಡಲಿಕ್ಕೆ...

  • ಆರ್‌. ಕೆ. ಶ್ರೀಕಂಠನ್‌ ಕರ್ನಾಟಕ ಸಂಗೀತದ ಮೇರು ವಿದ್ವಾಂಸರು. ಅವರು ಇದ್ದಿದ್ದರೆ ಈ ಹೊತ್ತಿಗೆ 100 ವರ್ಷ. ಹೀಗಾಗಿ, ಆರ್‌. ಕೆ. ಶ್ರೀಕಂಠನ್‌ ಟ್ರಸ್ಟ್‌ ಒಂದು ವಾರ...

  • ಚಿಕ್ಕಂದಿನಿಂದ ನನಗೆ ಬಂಗಾಲವೆಂದರೆ ಒಂದು ರೀತಿಯ ಹುಚ್ಚು ಒಲವು. ಅಲ್ಲಿಯ ಭಾಷೆ, ಸಾಹಿತ್ಯ, ಸಂಗೀತ, ಚಲನಚಿತ್ರ, ಜನ- ಏನೇ ಬಂಗಾಲಿ ಇದ್ದರೂ ಅವೆಲ್ಲವೂ. ಮೂಲಕಾರಣ, ಶಾಲೆಯಲ್ಲಿದ್ದಾಗಲೇ,...

ಹೊಸ ಸೇರ್ಪಡೆ