ಕತೆ: ಚಿಕ್ಕಮ್ಮತ್ತೆ


Team Udayavani, Feb 2, 2020, 5:11 AM IST

kat-34

ಸಾಂದರ್ಭಿಕ ಚಿತ್ರ

ಅಮ್ಮ ಫೋನ್‌ ಮಾಡಿದ್ದಳು. “”ಚಿಕ್ಕಮ್ಮತ್ತೆ ಏನೇನೋ ಮಾತಾಡುತ್ತಿದ್ದಾರೆ. ಯಾಕೋ ಇತ್ತೀಚೆಗೆ ಅವರು ಈ ಲೋಕದಲ್ಲಿ ಇದ್ದವರ ಹಾಗೇ ಇಲ್ಲಪ್ಪ. ನೀ ಒಮ್ಮೆ ಬಂದು ಹೋಗು”.

ಎದೆಯೊಳಗೆ ಪುಕು ಪುಕು ಶುರುವಾಗಿ ಅದು ಹೊಟ್ಟೆಯೊಳಗೂ ಕಾಣಿಸಿಕೊಂಡು ಯಾಕೋ ಪಾಯಿಖಾನೆಗೆ ಓಡಿಯೇ ಬಿಡೋಣ ಅನ್ನಿಸಿ “”ಅಮ್ಮಾ… ನಿನಗೆ ಆಮೇಲೆ ಫೋನ್‌ ಮಾಡುತ್ತೇನೆ” ಎಂದು ಫೋನಿಟ್ಟೆ. ಹೆದರಿಕೆಯಾದಾಗಲೆಲ್ಲ ಹೊಟ್ಟೆಯೊಳಗೆ ಏನೇನೋ ತಳಮಳವಾಗಿ ನನಗೆ ಪಾಯಿಖಾನೆಗೆ ಹೋಗಬೇಕು ಅನ್ನಿಸುವುದು ಮೊದಲಿನಿಂದಲೂ ಇದ್ದ ಖಯಾಲಿ. ಅದು ಚಿಕ್ಕಮ್ಮತ್ತೆಯಿಂದಲೇ ಬಂದ ಉಡುಗೊರೆ. “”ಇನ್ನು ತಡ ಮಾಡುವುದು ಬೇಡ, ಇಂದೇ ಹೊರಟು ಬಿಡುತ್ತೇನೆ” ಎಂದು ಗಂಡನಿಗೆ ಹೇಳಿ ಬಸ್‌ ಟಿಕೆಟ್‌ ಮಾಡಿಸಿ ಸಂಜೆ ಆಗುವುದನ್ನೇ ಕಾಯುತ್ತ ಒಂದಷ್ಟು ಬಟ್ಟೆಬರೆಗಳನ್ನು ಜೋಡಿಸಿಟ್ಟುಕೊಂಡೆ. “”ಚಿಕ್ಕಮ್ಮತ್ತೆಗೆ ಏನಾಯಿತು? ಆರು ತಿಂಗಳ ಹಿಂದೆ ಹೋದಾಗ ಸರಿ ಇದ್ದರಲ್ಲ! ನಾ ಸತ್ತು ನಿನ್ನ ಹೊಟ್ಟೆಲಿ ಹುಟ್ಟುತೀನಿ ಕೂಸೆ…” ಎಂದು ಬೊಚ್ಚುಬಾಯಿ ಅಗಲಿಸಿ ನಕ್ಕಿದ್ದರು. ಈಗ ಎಂತ ಆಯ್ತು? ಎಲ್ಲಿಯಾದ್ರೂ ಕೃಷ್ಣಾರ್ಜುನ ಕಾಳಗ ನೋಡಿ ಬಂದ್ರಾ? ಹೀಗೆ ಏನೇನೋ ಯೋಚನೆಗಳು ಮನದಲ್ಲಿ ಗಿರಕಿ ಹೊಡೆಯಲು ಶುರುಮಾಡಿದವು.

ಸಂಜೆ ಬಸ್‌ ಏರಿದವಳಿಗೆ ನಿದ್ದೆ ಮಾತ್ರ ಕಣ್ಣಿಗೆ ಹತ್ತಲೇ ಇಲ್ಲ. ಬಸ್‌ ತನ್ನ ಪಾಡಿಗೆ ವೇಗ ಜಾಸ್ತಿ ಮಾಡಿಕೊಂಡು ಹೆಬ್ಟಾವು ಹರಿದಂತಿದ್ದ ರಸ್ತೆಯಲ್ಲಿ ಆಗಾಗ ನಿಲ್ಲುತ್ತ, ಮತ್ತೂಮ್ಮೆ ವೇಗ ಹೆಚ್ಚಿಸಿಕೊಳ್ಳುತ್ತ ಹೋಗುತ್ತಿತ್ತು. ಕಿಟಕಿಯತ್ತ ಕಣ್ಣು ಆನಿಸಿದರೆ ಗವ್ವನೆ ಕತ್ತಲು, ತಂಪಾದ ಗಾಳಿ ಬೀಸುತ್ತಲೇ ಚಿಕ್ಕಮ್ಮತ್ತೆಯ ಫ್ಲ್ಯಾಶ್‌ಬ್ಯಾಕ್‌ ಕೂಡ ಹಾಗೇ ತೆರೆದುಕೊಳ್ಳುತ್ತ ಹೋಯ್ತು.

ಚಿಕ್ಕಮ್ಮತ್ತೆ. ಹೌದು. ನಾನು ಅವರನ್ನು ಕರೆಯುತ್ತಿದ್ದುದೇ ಹಾಗೆ. ನಾನಂತಲ್ಲ , ಮನೆಯಲ್ಲಿದ್ದ ಎಲ್ಲಾ ಪಿಳ್ಳೆಗಳು ಕರೆಯುತ್ತಿದ್ದುದೇ ಹಾಗೆ. ಮನೆಯಲ್ಲಿದ್ದ ದೊಡ್ಡವರು ಕೂಡ ಮಕ್ಕಳ ಬಳಿ, “”ಚಿಕ್ಕಮ್ಮತ್ತೆನಾ ಕರಿ, ಚಿಕ್ಕಮ್ಮತ್ತೆಗೆ ಅದು ಕೊಡು, ಇದು ಕೊಡು” ಅನ್ನುತ್ತಿದ್ದರೇ ಹೊರತು, ಯಾರೂ ಕೂಡ ಅವರ ಹೆಸರೆತ್ತಿ ಕರೆಯುತ್ತಿರಲಿಲ್ಲ. ನನಗೂ ಅವರ ಹೆಸರು ಗೊತ್ತಾಗಿದ್ದು ತೀರಾ ಇತ್ತೀಚೆಗೆ. ಅಮ್ಮ ನೆನಪಿನ ಮೂಟೆಯಿಂದ ಅರಸಿ ತೆಗೆದವಳಂತೆ “ರುಕ್ಮಿಣಿ’ ಎಂದು ಹೇಳಿದ್ದಳು. ಅರೆ! ಎಷ್ಟು ಚೆಂದದ ಹೆಸರು ಅಲ್ವಾ ಅನಿಸಿತ್ತು. ಅದಕ್ಕೆ ಚಿಕ್ಕಮ್ಮತ್ತೆ ಸದಾ ಕೃಷ್ಣನ ಧ್ಯಾನ ಮಾಡುವುದಾ… ಎಂದು ಮನಸ್ಸಿನಲ್ಲಿ ನಕ್ಕಿದ್ದೆ.

ನಮ್ಮದು ಅವಿಭಕ್ತ ಕುಟುಂಬವಾಗಿದ್ದರಿಂದಲೋ ಏನೋ ಊರಿನವರಿಗೆಲ್ಲ ನನ್ನ ಅಪ್ಪನ ಮೇಲೆ ಭಾರೀ ಗೌರವ. ಊರಲ್ಲಿ ಜಾಗಕ್ಕಾಗಿ ಆಗುವ ಗಲಾಟೆ, ಗಂಡ ಹೆಂಡತಿ ಜಗಳ, ಗ್ರಾಮದೇವರ ರಥೋತ್ಸವ, ಮಾರಿ- ಹೀಗೆ ಏನೇ ಒಳ್ಳೆಯದ್ದು-ಕೆಟ್ಟದ್ದು ಇದ್ದರೆ ನಮ್ಮ ಮನೆಯ ಜಗುಲಿಯಲ್ಲಿಯೇ ಹಿರಿಯರೆಲ್ಲ ಕೂತು ನಿರ್ಧಾರ ಮಾಡುತ್ತಿದ್ದರು. ಊರವರೆಲ್ಲರ ವ್ಯಾಜ್ಯ ಬಗೆಹರಿಸುವ ಅಪ್ಪ, ಚಿಕ್ಕಮ್ಮತ್ತೆ ಹತ್ತಿರ ಮಾತಾಡದೇ ಅದೆಷ್ಟೋ ಸಂವತ್ಸರಗಳೇ ಮಾಸಿ ಹೋಗಿದ್ದವೋ ತಿಳಿಯದು. ಅಮ್ಮನ ಬಳಿ ಇದನ್ನು ಕೇಳಿದ್ರೆ, ಉರಿಶೀತ ಬಂದವಳಂತೆ ಸೀರೆ ಸೆರಗಿನಲ್ಲಿ ಶೀತ ಒರೆಸಿಕೊಳ್ಳುತ್ತಲೇ, “ನಿನ್ನಪ್ಪ ಜಗಮೊಂಡ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾಳೆ. ನನಗೆ ಮೊದಲಿನಿಂದಲೂ ಚಿಕ್ಕಮ್ಮತ್ತೆ ಜತೆ ಸಲಿಗೆ ಜಾಸ್ತಿ. ವರುಷಕ್ಕೊಂದು ಎಂಬಂತೆ ಹೇರುತ್ತಿದ್ದ ಅಮ್ಮನಿಗೆ ಬಾಣಂತನ ಮಾಡುತ್ತಿದ್ದ ಚಿಕ್ಕಮ್ಮತ್ತೆ, ಏಳು ಹೆಣ್ಣುಮಕ್ಕಳಲ್ಲಿ ನಾನೇ ಕೊನೆಯವಳು. “”ಇನ್ನು ಹೆರಲಾರೆ” ಎಂದು ಅಮ್ಮ ಮುಷ್ಕರ ಮಾಡಿದ್ದಳ್ಳೋ ಅಥವಾ ಅವಳ ದೇಹಕ್ಕೆ ಆ ಶಕ್ತಿಯೇ ಇಲ್ಲವಾಯಿತೋ ಗೊತ್ತಿಲ್ಲ, ನನ್ನ ನಂತರ ಅಮ್ಮನಿಗೆ ಬಸಿರೇ ನಿಂತಿಲ್ಲ. ಅದಕ್ಕೆ ನನ್ನನ್ನು ಕಂಡರೆ ಮನೆಯವರಿಗೆ ತುಸು ತಾತ್ಸಾರ. ಅದರಲ್ಲೂ ಅಪ್ಪನಿಗೆ ತುಸು ಜಾಸ್ತಿ. “”ಗಂಡು ಹುಟ್ಟುವ ಬದಲು ಗಂಡುಬೀರಿ ಹುಟ್ಟಿದೆ” ಎಂದು ಆವಾಗಾವಾಗ ಮಾತಿನ ಸೂಜಿಯಿಂದ ಚುಚ್ಚುತ್ತಿದ್ದ. ಆವಾಗೆಲ್ಲ ನಾನು ಚಿಕ್ಕಮ್ಮತ್ತೆಯ ಸೆರಗಿನಲ್ಲಿ ಕಿವಿ ಮುಚ್ಚಿ ಕೊಂಡು ನನಗೇನೂ ಕೇಳಿಸಿಯೇ ಇಲ್ಲದಂತೆ ಅವಳ ಮಡಿಲೊಳಗೆ ಬೆಚ್ಚಗೆ ಕುಳಿತುಕೊಳ್ಳುತ್ತಿ¨ªೆ. ಅಮ್ಮನ ಮಡಿಲಲ್ಲೂ ಸಿಕ್ಕದ ಪ್ರೀತಿ, ವಾತ್ಸಲ್ಯ, ನನಗೆ ಚಿಕ್ಕಮ್ಮತ್ತೆ ಮಡಿಲಲ್ಲಿ ಸಿಗುತ್ತಿತ್ತು. ಅಂಟುವಾಳಕಾಯಿಯ ನೀರಿನಲ್ಲಿ ನೆನೆಸಿ ಒಗೆದ ಹಿತವಾದ ಘಮ ಸೂಸುತ್ತಿದ್ದ ಅವಳ ಆ ಸೀರೆ, ಸುಕ್ಕುಗಟ್ಟಿದ ಕೈ, ಅದಕ್ಕಂಟಿದ ಪಾರಿಜಾತ ಹೂವಿನ ಘಮಲು ನನ್ನನ್ನು ನಿದ್ದೆಗೆ
ದೂಡುತ್ತಿತ್ತು.

ಯಾವುದೇ ಬಣ್ಣಗಳ ಮೋಹವಿಲ್ಲದ ಚಿಕ್ಕಮ್ಮತ್ತೆ ಗಂಜಿ ಹಾಕಿದ ಕಾಟನ್‌ ಸೀರೆಯನ್ನು ನೀಟಾಗಿ ನೆರಿಗೆ ಹಿಡಿದು ಉಟ್ಟಳೆಂದರೆ, ಆಹಾ! ಅವಳ ಅಂದದಿಂದ ಸೀರೆಗೂ ಒಂದು ಬಗೆಯ ಸೊಬಗು. “”ಅವಳ ಥರಾನೇ ನಾನು ಸೀರೆ ಉಡಬೇಕು” ಎಂದು ಎಷ್ಟೋ ಸಲ ಅವಳಿಗೆ ಗೊತ್ತಿಲ್ಲದಂತೆ ಬಚ್ಚಲು ಮನೆಯಲ್ಲಿ ಅವಳು ಬಿಚ್ಚಿಟ್ಟ ಸೀರೆಯನ್ನು ಯಾರಿಗೂ ಗೊತ್ತಾಗದ ಹಾಗೇ ಅಟ್ಟದಲ್ಲಿರುವ ಕೋಣೆಗೆ ತೆಗೆದುಕೊಂಡು ಹೋಗಿ ನೆರಿಗೆ ತೆಗೆಯುವುದಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿದ್ದೆ. ಕೊನೆಗೆ ಬೆರಳುಗಳ ಮಧ್ಯೆ ನೋವು ಬಂದು ಸೀರೆಯನ್ನೆಲ್ಲ ಒಟ್ಟು ಸೇರಿಸಿ ಸುತ್ತಿಕೊಂಡು ನಾನೇ ಚಿಕ್ಕಮ್ಮತ್ತೆ ಅನ್ನುವ ಹಾಗೇ ಬೀಗುತ್ತಿದ್ದೆ. ಇದನ್ನೆಲ್ಲ ಅವಳು ತೆರೆಮರೆಯಲ್ಲಿ ನೋಡಿ “ಹುಚ್ಚು ಕೂಸೇ’ ಎಂದು ನಕ್ಕು ಹೋಗುತ್ತಿದ್ದಳು.

ಚಿಕ್ಕ ಕನ್ನಡಿಯನ್ನು ಕಾಲ ಬೆರಳುಗಳ ಮಧ್ಯೆ ಸಿಕ್ಕಿಸಿಕೊಂಡು ಎರಡು ಬದಿ ಹಲ್ಲಿರುವ ಬಾಚಣಿಗೆ ತೆಗೆದುಕೊಂಡು ತಲೆಗೆ ಒಂದಿಷ್ಟು ಹರಳೆಣ್ಣೆ ಹಾಕಿ, ನೆತ್ತಿಯಲ್ಲೊಂದು ಬೈತಲೆ ತೆಗೆದು ಕೂದಲೆಲ್ಲ ಒಟ್ಟು ಸೇರಿಸಿ ಸೂಡಿ ಕಟ್ಟುತ್ತಿದ್ದಳು. ತಲೆಗೆ ಹಾಕಿ ಮಿಕ್ಕಿದ ಕೈಯಲ್ಲಿದ್ದ ಎಣ್ಣೆಯನ್ನೆಲ್ಲ ಮುಖಕ್ಕೆ ಸವರಿಕೊಂಡು ಸಣ್ಣದೊಂದು ಗಿಣಾಲಿನಲ್ಲಿ ಗಟ್ಟಿಯಾಗಿ ಅಂಟಿಕೊಂಡಿದ್ದ ಗಂಧಕ್ಕೆ ಸ್ವಲ್ಪ ನೀರು ಸೇರಿಸಿ, ಹಣೆಗೆ ಚಿಕ್ಕ ಬೊಟ್ಟು ಇಟ್ಟು ಕೊರಳಿಗೊಂದು ರುದ್ರಾಕ್ಷಿ ಮಣಿ ಸರ, ಅದರಲ್ಲೊಂದು ಕಿರುಗೆಜ್ಜೆ. ಆ ಗೆಜ್ಜೆಯನ್ನು ಎದೆಯ ಭಾಗಕ್ಕೆ ಬರುವಂತೆ ಮಾಡಿಕೊಂಡು ಅದೇನೋ ಪಠಿಸುತ್ತ ಮನೆಯ ಹಿತ್ತಲಿನ ಪಾರಿಜಾತದ ಮರದ ಬುಡದಲ್ಲಿ ಭಗವದ್ಗೀತೆ ಓದುವುದಕ್ಕೆ ಶುರುಮಾಡಿಬಿಟ್ಟಳೆಂದರೆ ಅವಳಿನ್ನೂ ಎರಡುಗಂಟೆ ಯಾರಿಗೂ ಸಿಗದವಳೆಂದೇ ಅರ್ಥ.

ದೇವತೆಯಂಥ ಈ ಚಿಕ್ಕಮ್ಮತ್ತೆ ಜತೆ ಮಾತನಾಡದ ಅಪ್ಪ, ನನಗೆ ದೊಡ್ಡ ಶತ್ರು ಥರ ಕಾಣುತ್ತಿದ್ದ. ಅಪ್ಪನ ಬಗ್ಗೆ ನಾನು ಸಾಕಷ್ಟು ಬಾರಿ ಚಿಕ್ಕಮ್ಮತ್ತೆ ಎದುರೇ ದೂರಿದ್ದೆ, ಕೋಪದ ಭರದಲ್ಲಿ ಒಮ್ಮೆ, “”ಅಪ್ಪ ಬೇಗ ಸತ್ತು ಹೋದರೆ ಮನೆ ದೇವರಿಗೆ ಒಂದು ರೂಪಾಯಿ ಹಾಕುತ್ತೇನೆ” ಎಂದು ಹೇಳಿಬಿಟ್ಟೆ. ಆವತ್ತು ನಾನು ಚಿಕ್ಕಮ್ಮತ್ತೆ ಮುಖದಲ್ಲಿ ಕೋಪ ನೋಡಿದ್ದೆ. “”ಕೂಸೇ. ಬಾಯುಚ್ಚು” ಎಂದು ಜೋರಾಗಿ ಕೂಗಿದ್ದಳು. ಅಪ್ಪ ಸಾಯಲಿ ಎಂದು ನಾ ಹೇಳಿದ್ದರ ಹಿಂದೆ ಅಮ್ಮ ಮತ್ತು ಚಿಕ್ಕಮ್ಮತ್ತೆಯ ಕಣ್ಣೀರಿನ ಗೋಳಿತ್ತು. ನಾ ಮತ್ತೆ ಯಾವತ್ತೂ ಅಪ್ಪನ ಸಾವಿನ ವಿಚಾರ ಮಾತಾಡಿಲ್ಲ. ಅವಳು ಅದರ ಬಗ್ಗೆ ಕೆದಕಲಿಲ್ಲ. ಆದರೆ, “”ನೀ ಹೀಂಗಾವುದಕ್ಕೆ ಅಪ್ಪನೇ ಕಾರಣ ಹೌದೋ ಅಲ್ವೋ…” ಎಂದು ನಾ ತುಸು ಜೋರಾಗಿಯೇ ಕಣ್ಣಲ್ಲಿ ನೀರು ತುಂಬಿಸಿಕೊಂಡು ಕೇಳಿದ್ದಕ್ಕೆ ಮಾತ್ರ ಅವಳು ಅರೆಕ್ಷಣ ತಲ್ಲಣಿಸಿಬಿಟ್ಟಿದ್ದಳು. “”ನಂಗೆ ಗೊತ್ತಿದೆ. ನೀ ಯಾರನ್ನೋ ಪ್ರೀತಿ ಮಾಡಿದ್ದಿ. ಅಪ್ಪ ಅದಕ್ಕೆ ಕಲ್ಲು ಹಾಕಿದ ಎಂದು ನೀ ಹೀಗೆ ಮದುವೆ ಆಗದೇ ಕುಳಿತಿದಿದ್ದು. ನಿನಗೆ ಆಗ ಮನೆಬಿಟ್ಟು ಹೋಗುವುದಕ್ಕೆ ಏನಾಗಿತ್ತು?” ಎಂದು ಅವಳಿಗೆ ತಡೆದುಕೊಳ್ಳುವುದಕ್ಕೂ ಆಗದ ಹಾಗೇ ನಾ ಎಲ್ಲವನ್ನೂ ಒಂದೇ ಉಸಿರಿನಲ್ಲಿ ವದರಿದೆ. “ಕೃಷ್ಣ ಕೃಷ್ಣ’ ಎಂದಷ್ಟೇ ಹೇಳಿ ಅವಳು ಸೆರಗು ಕೊಡವಿಕೊಂಡು ಪಾರಿಜಾತದ ಮರದ ಕಟ್ಟೆ ಮೇಲೆ ಹೋಗಿ ಕುಂತು ಬಿಟ್ಟಳು. ಆಮೇಲೆ ಎಷ್ಟೋ ಹೊತ್ತಿಗೆ ಬಾವಿಕಟ್ಟೆಗೆ ಬಂದ ಚಿಕ್ಕಮ್ಮತ್ತೆ, ನಾಲ್ಕಾರು ಬಿಂದಿಗೆ ನೀರು ತಲೆಮೇಲೆ ಸುರಿದುಕೊಂಡ ಸದ್ದಾಯಿತು. “ಹೇಳಬಾರದ್ದನ್ನೆಲ್ಲ ಹೇಳಿಬಿಟ್ಟೆ’ ಎಂದು ಒದ್ದಾಡಿದ್ದೆ ನಾ ಆ ಕ್ಷಣ. ಗೆಳತಿ ನಿರ್ಮಲಾಳ ಮಾತು ಕಿವಿಯಲ್ಲಿ ಗುಂಯ್‌ಗಾಟ್ಟಿದ್ದರಿಂದ ಅದನ್ನೆಲ್ಲ ಕಕ್ಕಿದ್ದೆ. “”ನಿನ್ನ ಚಿಕ್ಕಮ್ಮತ್ತೆ ಯಾರೋ ಯಕ್ಷಗಾನದ ವೇಷಧಾರಿಯನ್ನು ಇಷ್ಟಪಟ್ಟಿದ್ದರಂತೆ. ನಿನ್ನ ಅಪ್ಪ ಒಪ್ಪದೇ ಇದ್ದಕ್ಕೆ ಅವನು ಸತ್ತ. ಇವೆಲ್ಲ ನಿಂಗೆ ಗೊತ್ತಿಲ್ವಾ ?”ಎಂದು ಕಣ್ಣು ಹುಬ್ಬು ಹಾರಿಸಿಕೊಂಡೇ ಹೇಳಿದ್ದಳು.

ಚಿಕ್ಕಮ್ಮತ್ತೆಯ ಬದುಕಿನ ಇನ್ನೊಂದು ಮಗ್ಗಲಿನ ಬಗ್ಗೆ ನನಗೆ ಗೊತ್ತೇ ಇರಲಿಲ್ಲವೆಂದೇನೂ ಅಲ್ಲ. ಅಷ್ಟೋ ಇಷ್ಟೋ ಗೊತ್ತಿತ್ತು. ಎಲ್ಲಾದರೂ ಯಕ್ಷಗಾನ ಇತ್ತೆಂದರೆ ಚಿಕ್ಕಮ್ಮತ್ತೆ ಒಂದೊಂದು ಸಲ ಖುಷಿಯಲ್ಲಿದ್ದವಳ ಹಾಗೇ ಕಾಣುತ್ತಿದ್ದಳು. ಊರ ಕಡೆ ದೀಪಾವಳಿ ಮುಗಿದು ನಂತರ ಬರುವ ಸಂಕ್ರಾಂತಿಗೆ ಮೇಳದವರು ಹರಕೆ ಬಯಲಾಟವನ್ನು ಆಡುವುದಕ್ಕೆ ಶುರುಮಾಡುತ್ತಿದ್ದರು. ಊರಲ್ಲಿ ಯಾರ ಮನೆಯಲ್ಲಾದರೂ ಹರಕೆ ಬಯಲಾಟವಿದ್ದರೆ, ಅದರ ಹೇಳಿಕೆ ಕಾಗದ ನಮ್ಮನೆಗೂ ಬಂದಿರುತ್ತಿತ್ತು. ಆದರೆ, ಅಮ್ಮ ಅದನ್ನು ಚಿಕ್ಕಮ್ಮತ್ತೆ ಕಣ್ಣಿಗೆ ಕಾಣದ ಹಾಗೇ ಮುಚ್ಚಿಡುತ್ತಿದ್ದಳು. ಅಪ್ಪನೂ ಇದನ್ನೆಲ್ಲ ಕಂಡೂಕಾಣದಂತೆ ಇರುತ್ತಿದ್ದ. ನಾನು ಮಾತ್ರ ಇದನ್ನೆಲ್ಲಾ ಚಿಕ್ಕಮ್ಮತ್ತೆಗೆ ವರದಿ ಒಪ್ಪಿಸುತ್ತಿದ್ದೆ. ಶಾಲೆ ಬಿಟ್ಟು ಸಂಜೆ ಬಂದವಳೇ, ಕೈಕಾಲು ಮುಖ ತೊಳೆದು ಅಮ್ಮ ಕೊಟ್ಟ ಒಗ್ಗರಣೆ ಅವಲಕ್ಕಿ ಹೊಟ್ಟೆಗಿಳಿಸಿಕೊಂಡು ಚಿಕ್ಕಮ್ಮತ್ತೆಯ ಪಾರಿಜಾತದ ಕಟ್ಟೆಗೆ ಹೋಗಿ, “”ಇವತ್ತು ಇವರ ಮನೆಯಲ್ಲಿ ಕೃಷ್ಣ ಸಂಧಾನ, ನಾಡಿದ್ದು ಅವರ ಮನೆಯಲ್ಲಿ ಅಭಿಮನ್ಯು ಕಾಳಗ ” ಎಂದೆಲ್ಲ ಹೇಳುತ್ತಿದ್ದೆ.

ನನಗೋ ಚಿಕ್ಕಮ್ಮತ್ತೆ ಜತೆ ಯಕ್ಷಗಾನಕ್ಕೆ ಹೋಗುವುದೇ ಒಂದು ದೊಡ್ಡ ಹಬ್ಬ. ಅಮ್ಮನ ಹತ್ತಿರ, “”ಆಟಕ್ಕೆ ಕರೆದುಕೊಂಡು ಹೋಗು” ಎಂದರೆ , “”ನಿನ್ನ ಅಪ್ಪನ ಆರ್ಭಟವೇ ಮನೆಯಲ್ಲಿ ಜಾಸ್ತಿಯಾಗಿದೆ. ಇನ್ನು ಅಲ್ಲಿ ಆಟ ನೋಡಿಕೊಂಡು ನಿದ್ರೆ ಬಿಟ್ಟರೆ ಬೆಳಿಗ್ಗೆ ಮನೆಕೆಲಸ ಯಾರು ಮಾಡ್ತಾರೆ” ಎಂದು ಒಂದೇ ಸಮನೆ ವಟಗುಟ್ಟುತ್ತಿದ್ದಳು. ಚಿಕ್ಕಮ್ಮತ್ತೆ ಯಾವತ್ತೂ ನನಗೆ ಬೈದಿಲ್ಲ. ಚೌಕಿಯಲ್ಲಿ ಗಣಪತಿ ಪೂಜೆ ಶುರುವಾಗುವುದಕ್ಕೆ ಮೊದಲೇ ನಾನೂ- ಚಿಕ್ಕಮ್ಮತ್ತೆ ಅಲ್ಲಿ ಹಾಜರಿರುತ್ತಿದ್ದೆವು. ಚಿಕ್ಕಮ್ಮತ್ತೆ ಕಾಟನ್‌ ಸೀರೆಯೊಂದನ್ನು ಅರ್ಧ ಹರಿದು ನನಗೆ ಹೊದ್ದುಕೊಳ್ಳುವುದಕ್ಕೆಂದೇ ಹಿಡಿದುಕೊಳ್ಳುತ್ತಿದ್ದಳು. ಜತೆಗೆ ಬಾಯಾಡಿಸುವುದಕ್ಕೆ ಹುರಿದ ಶೇಂಗಾ ಕೂಡ ಅವಳ ಎಲೆಚೀಲದಲ್ಲಿ ತುಂಬಿಸಿಕೊಳ್ಳುತ್ತಿದ್ದಳು. ಚಿಕ್ಕಮ್ಮತ್ತೆಗೆ ಯಾವಾಗಲೂ ಗಂಟಲು ಕೆರೆತ, ಹೊಡಿಕೆಮ್ಮು ಕಾಟ ಕೊಡುತ್ತಿತ್ತು. ಆಟಕ್ಕೆ ಹೊರಟಳೆಂದರೆ ಒಂದು ಮುಷ್ಟಿ ಕಾಳಮೆಣಸನ್ನು ಹಿಡಿದುಕೊಂಡೇ ಹೋಗುತ್ತಿದ್ದಳು. ಇನ್ನು ಚಿಕ್ಕಮ್ಮತ್ತೆ ಬಂದಳೆಂದರೆ ಎಲ್ಲರೂ ಒಂದು ರೀತಿಯ ಗೌರವ ಕೊಡುತ್ತಿದ್ದರಿಂದ ನನಗೂ ಒಳಗೊಳಗೆ ಖುಷಿ. ತೆಂಗಿನ ಗರಿ ಹಾಸಿದ ನೆಲದ ಮೇಲೆ ಕುಳಿತು ಆಟ ನೋಡುವುದಕ್ಕೆ ಕುಳಿತ ಸ್ವಲ್ಪ ಹೊತ್ತಿನಲ್ಲಿ, ನಿದ್ರಾದೇವಿ ನನ್ನನ್ನು ಆವರಿಸಿಬಿಡುತ್ತಿದ್ದಳು. ಬಾಲವೇಷ, ಒಡ್ಡೋಲಗ ಮಾತ್ರವೇ ನಾನು ಸರಿಯಾಗಿ ನೋಡುವುದು. ಆಮೇಲೆ ಕೃಷ್ಣ ವೇಷ ಬಂದಾಗ ಚಿಕ್ಕಮ್ಮತ್ತೆ ನನ್ನ ಎಬ್ಬಿಸಿಬಿಡುತ್ತಿದ್ದಳು. “”ನೋಡೆ ಕೂಸೆ, ಎಷ್ಟು ಚೆಂದ ಇದೆ” ಎಂದರೆ ನಾ ಮಾತ್ರ ಅವಳ ಸೀರೆಯನ್ನೇ ಮೈ ತುಂಬಾ ಹೊದ್ದುಕೊಂಡು ಕಣ್ಣೆರಡು ಮಾತ್ರ ತೋರುವ ಹಾಗೇ ರಂಗಸ್ಥಳದತ್ತ ನೋಡುತ್ತಿದ್ದೆ. ಆಟ ಮುಗಿದು ಒಂದು ವಾರವಾದರೂ ಚಿಕ್ಕಮ್ಮತ್ತೆ ಅದೇ ಗುಂಗಿನಲ್ಲಿ ಇರುತ್ತಿದ್ದಳು. ಅಪ್ಪಯ್ಯನಿಗಂತೂ ಅವಳ ಈ ಇರಾದೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. “”ಆಟದವನ ಹಿಂದೆ ಹೋದವಳು ತಾನೇ” ಎಂದು ಮಜ್ಜಿಗೆಹುಳಿಯನ್ನು ಸೊರ ಸೊರ ಎಂದು ಬಾಯಿಗಿಳಿಸುತ್ತಲೇ ಅಮ್ಮನ ಎದುರು ಹೂಂಕರಿಸುತ್ತಿದ್ದ. ಅಪ್ಪನ “ಹೂಂ’ಕಾರ ಕೇಳಿದ ಚಿಕ್ಕಮ್ಮತ್ತೆ, “ಎಲವೋ ದುರುಳ’ ಎಂದಾಗ ಅಪ್ಪ ಬಾಲ ಮುದುರಿದ ನಾಯಿ ತರ ಅಡುಗೆಮನೆಯಿಂದ ಸೀದಾ ಅಂಗಳಕ್ಕೆ ಬಂದು ಚಪ್ಪಲಿ ಮೆಟ್ಟಿಕೊಂಡು ಕೊಡೆ ಹಿಡಿದು ಹೊರಟು ಬಿಡುತ್ತಿದ್ದ. ಮತ್ತೆ ಬರುವುದು ಬೆಳಕು ಹರಿದ ಮೇಲೆಯೇ. ಹಾಗೇ ಹೊರಟ ಅಪ್ಪನನ್ನು ಸೌಮ್ಯ ಸ್ವಭಾವದಂತಿದ್ದ ಚಿಕ್ಕಮ್ಮತ್ತೆ, ರಾಮಕೃಷ್ಣ ಮೈಮೇಲೆ ಬಂದಾಗ ವ್ಯಂಗ್ಯದ ನಗೆ ನಕ್ಕೇ ಕೊಲ್ಲುತ್ತಿದ್ದಳು. “”ಕಟ್ಟಿಕೊಂಡವಳನ್ನು ಬಿಟ್ಟು ಸೂಳೇರ ಸಿದ್ದು ತೆಕ್ಕೆಯಲ್ಲಿ ಮಲಗೋದಕ್ಕೆ ಹೊಂಟ ನೋಡು” ಎಂದು ಗಹಗಹಿಸಿ ನಗುತ್ತಿದ್ದಳು. ಅಪ್ಪನ ಪುರಾಣವೆಲ್ಲ ಗೊತ್ತಿದ್ದ ಅಮ್ಮ ಮಾತ್ರ ನಮಗೆಲ್ಲ ಬೇಗ ಅಡುಗೆ ಮಾಡಿ ನಮ್ಮ ಹೊಟ್ಟೆಗೊಂದಿಷ್ಟು ಹಾಕಿ, ಒಂದು ಹಿತ್ತಾಳೆ ಚೊಂಬಿನಲ್ಲಿ ನೀರು, ಅದಕ್ಕೊಂದು ತುಳಸಿ ಕದಿರು ಹಾಕಿ ಚಿಕ್ಕಮ್ಮತ್ತೆ ಕೋಣೆಯಲ್ಲಿಟ್ಟು ಬಂದು ಸೆರಗಿನ ತುದಿಯಲ್ಲಿ ಕಣ್ಣೊರೆಸಿಕೊಳ್ಳುತ್ತ ಮಲಗುತ್ತಿದ್ದಳು. ಆ ದಿನ ನನಗೆ ಚಿಕ್ಮಮ್ಮತ್ತೆ ಕೋಣೆಯಲ್ಲಿ ಮಲಗಲು ಅವಕಾಶವಿಲ್ಲ! ಅಮ್ಮನ ಬಳಿ ಹಟ ಹಿಡಿದರೆ, “”ಅವರ ಮೈಮೇಲೆ ರಾಮಕೃಷ್ಣ ಬಂದಿದ್ದಾನೆ ನೀ ಅಲ್ಲಿ ಹೋಗಬೇಡ. ಜಾಸ್ತಿ ಮಾತಾಡಿದ್ರೆ ಒಳತೊಡೆಗೆ ಬರೆ ಎಳಿತೇನೆ” ಎಂದು ಬೈಯುತ್ತಿದ್ದಳು. ರಾತ್ರಿ ಸುಮಾರು ಹೊತ್ತಿನವರೆಗೂ ಚಿಕ್ಕಮ್ಮತ್ತೆ ಯಕ್ಷಗಾನದ ಪದ ಹೇಳುವುದು, ಗೆಜ್ಜೆ ಕಟ್ಟಿಕೊಂಡು ಕುಣಿಯುವುದು, ಅಳುವುದು ಕೊನೆಗೆ “ಗಯಾನನ್ನು ಕೊಂದೇ ತಿರುತ್ತೇನೆ’ ಎಂದು ಆರ್ಭಟಿಸುವುದು. ಈ ಗಯಾ ಎಂದರೆ ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ಬರುವ ಕುಬೇರನ ಮಗ. ಪ್ರತೀ ಸಲ ಚಿಕ್ಕಮ್ಮತ್ತೆ “ಗಯಾ ಗಯಾ’ ಎಂದು ಕೂಗುವಾಗ ನನಗೆ ಅಪ್ಪನ ಹೆಸರನ್ನೇ ಕರೆದಂತೆ ಆಗುತ್ತಿತ್ತು.

ಇದೇ ಕಾರಣಕ್ಕೆ ಅಪ್ಪ ಮನೆಬಿಟ್ಟು ಹೋಗುವುದು ಎಂದು ಅನಿಸುತ್ತಿತ್ತು. ಅಂತಹ ದಿನ ಅಪ್ಪ ಮನೆಯಲ್ಲಿದ್ದರೆ, ನಾಳೆ ಅಪ್ಪನ ಹೆಣ ಸುಡುವುದಕ್ಕೆ ಕೆರೆ ದಂಡೆ ಹತ್ತಿರ ಇರುವ ಕಾಟು ಮಾವಿನ ಮರ ಕಡಿಬೇಕಾಗುತ್ತೆ ಎಂದು ಎಷ್ಟೋ ಸಲ ನನ್ನೊಳಗೆ ನಕ್ಕು ಸುಮ್ಮನಾಗುತ್ತಿದ್ದೆ. ಮರುದಿನ ಬೆಳಿಗ್ಗೆ ಚಿಕ್ಮಮ್ಮತ್ತೆ ಮಾತ್ರ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಬೆಳಿಗ್ಗೆ ಒಂದು ಲೋಟ ಜೀರಿಗೆ ನೀರು ಕುಡಿದು ದೇವಸ್ಥಾನದ ಕೆರೆ ಬಳಿ ಹೋದರೆ ಮತ್ತೆ ಹಿಂದಿರುವುದು ಮಟ ಮಟ ಮಧ್ಯಾಹ್ನಕ್ಕೆ. ಆಗೆಲ್ಲಾ ಈ ಚಿಕ್ಕಮ್ಮತ್ತೆ ಎಲ್ಲಿ ಕೆರೆಗೆ ಬಿದ್ದು ಸಾಯ್ತಾರೇನೋ ಎಂದು ತುಂಬ ಸಲ ಅನಿಸಿ ನನಗೆ ಪಾಯಿಖಾನೆ ಬರುವುದುಂಟು. ಶಾಲೆಯಲ್ಲಿ ಕುಳಿತರೂ ನನ್ನ ತಲೆಪೂರ್ತಿ ಚಿಕ್ಕಮ್ಮತ್ತೆ, ಅವಳ ಮೈಮೇಲೆ ಬರುವ ಆ ರಾಮಕೃಷ್ಣ ತುಂಬಿರುತ್ತಿದ್ದ.

ಯಕ್ಷಗಾನ ಮೇಳದಲ್ಲಿ ಕೃಷ್ಣ ಪಾತ್ರಧಾರಿ ವೇಷ ಹಾಕುತ್ತಿದ್ದ ಕಲಾವಿದ ರಾಮಕೃಷ್ಣ. ಮನೆ ಹತ್ತಿರ ಇರುವ ದೇವಸ್ಥಾನದ ಕೆರೆ ದಾಟಿದ ಕೂಡಲೇ ಅವನ ಮನೆ ಇತ್ತು. ನೋಡುವುದಕ್ಕೂ ಅಷ್ಟೇ ಚೆಂದವಿದ್ದನಂತೆ. ಅಮ್ಮ ಅವನ ರೂಪವನ್ನು ಒಂದು ದಿನ ಅಪ್ಪನ ಮೇಲೆ ಸಿಟ್ಟಾದಾಗ ವರ್ಣಿಸಿದ್ದಳು. “ಒಳ್ಳೆ ಢೆಕ್ಕೆರ ಮಗನ‌ ಹಾಗೇ ಇದ್ದ’ ಎಂದು. ಢೆಕ್ಕೆಬಲಿ ಎಂದರೆ ನಮ್ಮ ದಕ್ಷಿಣಕನ್ನಡದಲ್ಲಿ ನಡೆಯುವ ಒಂದು ಆಚರಣೆ. ಈ ಢೆಕ್ಕೆಯ ಗಂಡಸರು ಅಷ್ಟು ಚೆಂದವಂತೆ.

ಹಾಗಾಗಿ, ನಮ್ಮ ಕಡೆ ಯಾರಾದರೂ ಹಣ್ಣುಕೆಂಪು ಬಣ್ಣದವರಿದ್ದರೆ ಅವರನ್ನು “ಒಳ್ಳೆ ಢೆಕ್ಕೆಯರ ಮಕ್ಕಳ ತರಾ ಇದ್ದ’ ಅನ್ನುವುದು ರೂಢಿ. ಚಿಕ್ಕಮ್ಮತ್ತೆಗೂ ಕೂಡ “ಸಿಂಗಾರದ ಹೂವಿನ ಗೊನೆಯಂಥ ಚೆಂದದ ಹೆಂಗಸು’ ಎಂದು ಅಮ್ಮ ಹೇಳುತ್ತಿದ್ದಳು. ಮನೆಬಿಟ್ಟು ಎಲ್ಲೂ ಹೋಗದ ಚಿಕ್ಕಮ್ಮತ್ತೆಗೆ ಮೊದಲಿನಿಂದಲೂ ಅಜ್ಜನ ಕಡೆಯಿಂ¨ ಬಂದ‌ ಬಳುವಳಿಯೆಂದರೆ ಯಕ್ಷಗಾನದ ಹುಚ್ಚು. ಎಲ್ಲಿಯೇ ಯಕ್ಷಗಾನವಿದ್ದರೂ ಅವಳು ಅಲ್ಲಿ ಹಾಜರ್‌. ಗಣಪತಿ ಪೂಜೆ ಸಮಯದಲ್ಲಿ ಈ ಢೆಕ್ಕೆರ ಮಕ್ಕಳ ಹಾಗೇ ಇದ್ದ ರಾಮಕೃಷ್ಣಂಗೂ ಸಿಂಗಾರದ ಹೂವಿನ ಗೊನೆಯಂತಿದ್ದ ಚಿಕ್ಕಮ್ಮತ್ತೆಗೂ ಪರಿಚಯವಾಗಿ, ಅದೂ ಪ್ರೀತಿಗೂ ತಿರುಗಿಬಿಟ್ಟಿತು. ಮೇಳದಲ್ಲಿದ್ದರಿಂದ ಊರಿಂದೂರಿಗೆ ಹೋಗುವ ರಾಮಕೃಷ್ಣ, ನಮ್ಮ ಊರಲ್ಲಿ ಯಕ್ಷಗಾನವಿರುವಾಗ ತಪ್ಪದೇ ಚಿಕ್ಕಮ್ಮತ್ತೆಗೆ ಸಂದೇಶ ಕಳುಹಿಸುತ್ತಿದ್ದ. ಅವನ ವೇಷ ನೋಡುವುದಕ್ಕಾಗಿಯೇ ಚಿಕ್ಕಮ್ಮತ್ತೆ ಮುಂದಿನ ಸಾಲಿನಲ್ಲಿ ಕುಳಿತಿರುತ್ತಿದ್ದಳಂತೆ. ಕೃಷ್ಣಾರ್ಜುನ ಕಾಳಗದಲ್ಲಿ ರಾಮಕೃಷ್ಣ ಕೃಷ್ಣ ಪಾತ್ರಧಾರಿಯಾಗಿರುತ್ತಿದ್ದ. “ಸೂರ್ಯದೇವನಿಗೆ ಅಘ್ಯ ಕೊಡುವ ಸಂದರ್ಭ ಅಘ್ಯದ ನೀರನ್ನು ಮಲಿನಗೊಳಿಸಿದ ಕುಬೇರನ ಮಗ ಗಯನ ಕುತ್ತಿಗೆಯನ್ನು ಎಂಟು ದಿನದೊಳಗೆ ಕತ್ತರಿಸುತ್ತೇನೆ. ಇಲ್ಲದಿದ್ದರೆ ಅಗ್ನಿಪ್ರವೇಶ ಮಾಡುತ್ತೇನೆ’ ಎಂದು ಶಪಥ ಮಾಡುತ್ತಾನೆ. ಕೃಷ್ಣನ ಪಾತ್ರಧಾರಿಯಾಗಿ ಮಿಂಚಿದ್ದ ರಾಮಕೃಷ್ಣನನ್ನು ಊರೆಲ್ಲ ಹೊಗಳಿತ್ತಂತೆ. ಚಿಕ್ಕಮ್ಮತ್ತೆಯಂತೂ ರಾಮಕೃಷ್ಣನನ್ನು , ಸಾಕ್ಷಾತ್‌ ಕೃಷ್ಣನೇ ಎಂಬಂತೆ ಆರಾಧಿಸಿದ್ದಳಂತೆ. ಮೊದಮೊದಲು ಗುಟ್ಟಾಗಿದ್ದ ಇವರ ಪ್ರೀತಿ, ಕೊನೆಗೆ ಮನೆಯಲ್ಲೆಲ್ಲ ಗೊತ್ತಾಗಿ ದೊಡ್ಡ ರಾಮಾಯಣವೇ ನಡೆಯಿತಂತೆ. “ಯಾವನೋ ವೇಷ ಕಟ್ಟುವವನನ್ನು ಮದುವೆಯಾಗ್ತಿಯಾ? ಅದು ನಮ್‌ ಜಾತಿಯಲ್ಲದವನು ಅವನು’ ಎಂದು ಮನೆಗೆ ಹಿರಿ ಮಗನಾಗಿದ್ದ ನನ್ನಪ್ಪ ಜೋರುದನಿಯಲ್ಲಿಯೇ ಕೂಗಿದ್ದನಂರೆ. ಅಜ್ಜ ಅಜ್ಜಿ ಬೇಗ ತೀರಿ ಹೋಗಿದ್ದರಿಂದ ಅಪ್ಪನೇ ಮನೆಯ ಯಜಮಾನ ಪಟ್ಟ ಗಿಟ್ಟಿಸಿಕೊಂಡಿದ್ದ. ಅಪ್ಪನ ಆಜ್ಞೆ ಇಲ್ಲದೇ ಹುಲ್ಲುಕಡ್ಡಿಯೂ ಆಚೀಚೆ ಹೋಗುವಂತಿರಲಿಲ್ಲ. ಹಾಗಂತ ಅಪ್ಪನೇನೂ ಸಾಚಾನಲ್ಲ! ಊರ ಹೊರಗಿರುವ ಸೂಳೇರ ಸಿದ್ದು ಮನೆಗೆ ಅಪ್ಪ ಮೊದಲಿನಿಂದಲೂ ಹೋಗಿ ಬರುತ್ತಿದ್ದ. ತನ್ನ ಈ ಚಪಲವನ್ನು ಯಾರಾದರೂ ಆಡಿಕೊಂಡಾರೇನೋ ಎಂದು ಮಾತಿಗೂ ಮೊದಲೇ ಸಿಟ್ಟಾಗುವುದು, ಗಂಡಸರಿಗೆ ಯಾವುದೇ ಅಣೆಕಟ್ಟುಗಳಿಲ್ಲ ಎಂಬಂತೆ ವರ್ತಿಸುವುದು ಅವನ ಸ್ವಭಾವ. ಇಂಥ ಅಪ್ಪನ ಮುಂದೆ ಚಿಕ್ಕಮ್ಮತ್ತೆಯ ಪ್ರೀತಿ ಯಾವ ಲೆಕ್ಕ? ಇದೇ ವಿಷಯಕ್ಕೆ ಅಪ್ಪನಿಗೂ, ಚಿಕ್ಕಮ್ಮತ್ತೆಗೂ ಸಾಕಷ್ಟು ಬಾರಿ ಜಗಳವಾಗಿ, ಇದರ ಬಿಸಿ ರಾಮಕೃಷ್ಣನಿಗೂ ಮುಟ್ಟಿತ್ತು. ಅಪ್ಪ ಯಾರ ಬಳಿಯೋ ಹೇಳಿಸಿ ಅವನನ್ನು ಮೇಳದಿಂದ ತೆಗೆದು ಹಾಕುವುದಕ್ಕೆ ಶಿಫಾರಸು ಮಾಡಿದ್ದನಂತೆ. “ಬಡ್ಡಿಮಗ ಒಪ್ಪತ್ತು ಉಣ್ಣುವುದಕ್ಕೆ ಇಲ್ಲದಿದ್ದರೆ ದಾರಿಗೆ ಬರ್ತಾನೆ’ ಎಂದು ಮೇಳದಿಂದ ಅವನನ್ನು ಹೊರಗಟ್ಟಿ, ಅವನ ಮನೆಯವರಿಗೆ ಊರಿಂದ ಆಚೆ ಹೋಗುವುದಕ್ಕೆ ಬಹಿಷ್ಕಾರ ಕೂಡ ಹೇರಿ, ಸಾಕಷ್ಟು ಗೋಳು ಹೊಯ್ದುಕೊಂಡಿದ್ದ. ಗೃಹಬಂಧನದಲ್ಲಿದ್ದ ಚಿಕ್ಕಮ್ಮತ್ತೆಯನ್ನು ಮನೆಯಲ್ಲಿದ್ದವರು ಸರ್ಪಗಾವಲಿನಂತೆ ಒಬ್ಬರಲ್ಲ ಒಬ್ಬರು ಕಾಯುತ್ತಿದ್ದರಂತೆ. ಎಷ್ಟೇ ಅತ್ತು ಕರೆದರೂ ಯಾರೊಬ್ಬರೂ ಅವಳ ಸಹಾಯಕ್ಕೆ ಬರಲಿಲ್ಲ. ತಿಂಗಳಾನುಗಟ್ಟಲೇ ಮನೆಯಲ್ಲಿಯೇ ಇದ್ದ ಚಿಕ್ಕಮ್ಮತ್ತೆಗೆ ಒಂದು ದಿನ ರಾಮಕೃಷ್ಣ ಕೆರೆಗೆ ಹಾರಿ ಸತ್ತ ಎಂಬ ವಿಷಯ ಮಾತ್ರ ಬರಸಿಡಿಲು ಎರಗಿದಂತಾಗಿತ್ತು. ಹೇಗೆ ಸತ್ತ? ಯಾಕೆ ಸತ್ತ? ಎಂದು ಚಿಕ್ಕಮ್ಮತ್ತೆ ಕೂಡ ಕಾರಣ ಕೇಳಲಿಲ್ಲವಂತೆ. ಕೆರೆ ಹತ್ತಿರ ಇದ್ದ ಅವನ ಮನೆಯವರು ಖಾಲಿ ಮಾಡಿಕೊಂಡು ಯಾವುದೋ ಹಳ್ಳಿಗೆ ಹೊರಟು ಹೋದರು ಎಂಬ ಸುದ್ದಿಯು ಎಲ್ಲ ಕಡೆ ಹರಿದಾಡಿತ್ತು.

ಇವೆಲ್ಲ ತಣ್ಣಗಾದ ಮೇಲೆ ಒಂದು ದಿನ ಅಪ್ಪ ಚಿಕ್ಕಮ್ಮತ್ತೆ ಬಳಿ ಮದುವೆ ಪ್ರಸ್ತಾಪ ಮುಂದಿಟ್ಟಾಗ, ಚಿಕ್ಕಮ್ಮತ್ತೆ ಮೈಮೇಲೆ ಯಾರೋ ಬಂದವರ ಹಾಗೇ ಹೂಂಕರಿಸುತ್ತ ಯಕ್ಷಗಾನದಲ್ಲಿ ಕಾಲಿಗೆ ಕಟ್ಟಿಕೊಳ್ಳುವ ಗೆಜ್ಜೆಯನ್ನು ತೆಗೆದು ಅಪ್ಪನ ಮುಖದ ಮೇಲೆ ಬಿಸಾಡಿಬಿಟ್ಟಳಂತೆ. ಅಂದಿನಿಂದ ಅಪ್ಪ ಮತ್ತು ಚಿಕ್ಕಮ್ಮತ್ತೆ ನಡುವೆ ಮಾತುಕತೆ ನಿಂತು ಹೋಗಿತ್ತು. ಅಪ್ಪನೇ ಜನ ಮಾಡಿಸಿ, ರಾಮಕೃಷ್ಣನನ್ನು ಹೊಡೆದು ಕೊಂದ ಎಂದು ಊರವರೆಲ್ಲ ಮಾತನಾಡುತ್ತಿದ್ದರು. ಅದು ಚಿಕ್ಕಮ್ಮತ್ತೆಗೂ ಗೊತ್ತಾಗಿರಬೇಕು. ಆ ಗೆಜ್ಜೆ ಎಲ್ಲಿ ಸಿಕ್ಕಿತು, ಹೇಗೆ ಸಿಕ್ಕಿತು ಎಂಬುದನ್ನು ಮಾತ್ರ ಚಿಕ್ಕಮ್ಮತ್ತೆ ಯಾರ ಬಳಿಯೂ ಹೇಳಿರಲಿಲ್ಲ. ಅದರಲ್ಲಿ ಉದುರಿ ಹೋಗಿದ್ದ ಒಂದು ಕಿರುಗೆಜ್ಜೆಯನ್ನು ಅವಳ ಸರಕ್ಕೆ ಕಟ್ಟಿಕೊಂಡಿದ್ದಳು. ಊರಲ್ಲಿ ಯಕ್ಷಗಾನವಿದ್ದ ದಿನ ಅವಳು ನೋಡುವುದಕ್ಕೆ ಹೋದರೆ, ಮಾರನೆಯ ದಿನ ರಾಮಕೃಷ್ಣ ಮೈಮೇಲೆ ಬಂದವರ ಹಾಗೇ ಮಾಡುವುದು ಮಾತ್ರ ತಪ್ಪುತ್ತಿರಲಿಲ್ಲ. ಬೇರೆಲ್ಲ ದಿನ ಸರಿ ಇರುವ ಚಿಕ್ಕಮ್ಮತ್ತೆ ಈ ಸಮಯದಲ್ಲಿ ತಲೆಕೆಟ್ಟವರ ಹಾಗೇ ಮಾಡುತ್ತಿದ್ದಳು. ಎದೆಯಲ್ಲಿದ್ದ ಅಷ್ಟೂ ನೋವನ್ನು ಅವಳು ಆ ದಿನ ಹೊರ ಹಾಕುತ್ತಿದ್ದಳು. ಹಾಗೇ ಅಪ್ಪನ ಜನ್ಮ ಕೂಡ ಜಾಲಾಡುತ್ತಿದ್ದಳು.

ನನಗೆ ಪ್ರಾಯ ಬಂದು, ಅಪ್ಪ ಮದುವೆಗೆ ಗಂಡು ಹುಡುಕುತ್ತಿದ್ದಾಗ, ಚಿಕ್ಕಮ್ಮತ್ತೆ ಅವತ್ತೂಂದು ದಿನ ಅಟ್ಟದ ಮೇಲೆ ಕರೆದು ಸೀರೆ ಉಡುವುದನ್ನು ಕಲಿಸಿದ್ದಳು. ಕನ್ನಡಿ ಮುಂದೆ ನಿಂತು ನಾನು ಸೀರೆ ಸೆರಗನ್ನು ಹಿಡಿದು ಏನೋ ಹುಚ್ಚಾಟವಾಡುತ್ತಿದ್ದ ನನ್ನ ನೋಡಿ, ತನ್ನ ಕಣ್ಣಾಲಿಗಳನ್ನು ತುಂಬಿಸಿಕೊಂಡು, “ತುಂಬಾ ಚೆಂದ ಕಾಣಿ¤ಯಾ ಕೂಸೆ’ ಎಂದು ಅಪ್ಪಿ ಹಿಡಿದಿದ್ಲು. ನನಗೂ ಅಳು ತಡೆಯೋಕೆ ಆಗದೇ, “ನಾ ಮದುವೆಯಾಗಲ್ಲ. ನಿನ್ನ ಬಿಟ್ಟು ಎಲ್ಲೂ ಹೋಗಲ್ಲ’ ಎಂದು ಬಿಕ್ಕಳಿಸಿ ಬಿಕ್ಕಳಿಸಿ ಅತ್ತುಬಿಟ್ಟೆ. “ಹಾಗೆಲ್ಲ ಹೇಳಬಾರದು ಕೂಸೆ. ಯಾವ ಕಾಲದಲ್ಲಿ ಏನು ಆಗಬೇಕು, ಅದು ಆದರೇನೆ ಚೆಂದ. ನನ್ನ ತರಹದ ಬಾಳು ನಾಯಿಪಾಡು ಆಗಬಾರದು’ ಎಂದು ನನ್ನ ಕೆನ್ನೆ ಒರೆಸಿ ಹಣೆಗೊಂದು ಮುತ್ತು ಕೊಟ್ಟಿದ್ದಳು. ಎಲ್ಲೋ ಒಂದು ಕಡೆ ಚಿಕ್ಕಮ್ಮತ್ತೆನಾ ಕಳೆದುಕೊಳ್ತೇನೆ ಎಂಬ ನೋವು ನನ್ನ ತುಂಬಾ ಕಾಡಿತ್ತು. ಇವೆಲ್ಲ ಆದ ಕೆಲವೇ ತಿಂಗಳುಗಳಲ್ಲಿ ನನ್ನ ಮದುವೆಗೆ ಗಳಿಗೆ ಕೂಡಿ ಬಂದಿತ್ತು. ಹುಡುಗ ಮೈಸೂರಿನವನು. ಮದುವೆ ತಯಾರಿಯಲ್ಲಿ ಮನೆಮಂದಿ ಜತೆ ನಾನೂ ಕಳೆದುಹೋಗಿದ್ದೆ. ಮದುವೆ ಹಿಂದಿನ ದಿನ ಯಾಕೋ ಒಂಥರಾ ಹೆದರಿಕೆ ಶುರುವಾದಂತಾಗಿ ಎರಡು-ಮೂರು ಸಲ ಪಾಯಿಖಾನೆಗೆ ಓಡಾಡಿ ಸುಸ್ತಾಗಿ ಬಿಟ್ಟಿದ್ದೆ. ಬಿಸಿನೀರಿಗೆ ಜೀರಿಗೆಪುಡಿ ಹಾಕಿ, ಕುದಿಸಿದ ಕಷಾಯ ಹಿಡಿದುಕೊಂಡು ಬಂದ ಚಿಕ್ಕಮ್ಮತ್ತೆ ಮನಸ್ಸಿನಲ್ಲಿ ಇರುವುದನ್ನು ಹೇಳಿಕೊಳ್ಳುವುದಕ್ಕೆ ಆಗದೇ ಒದ್ದಾಡುತ್ತಿದ್ದಂತೆ ಕಾಣುತ್ತಿತ್ತು. ಆ ದಿನ ನಾನೇ ಅವಳ ಕೈಹಿಡಿದು ಅಟ್ಟದ ಮೇಲೆ ಕರೆದುಕೊಂಡು ಹೋಗಿದ್ದೆ. “ಇನ್ನೇನು ಮುಚ್ಚಿಡಬೇಡ, ನಾಳೆಯಿಂದ ನಾ ಇರಲ್ಲ ಇಲ್ಲಿ . ಮತ್ತೆ ಯಾವಾಗ ಬರ್ತಿನೋ ಗೊತ್ತಿಲ್ಲ. ಹೇಳುವುದನ್ನೆಲ್ಲಾ ಹೇಳಿಬಿಡು ಮನಸ್ಸು ಹಗುರ ಆಗುತ್ತೆ’ ಎಂದು ಅವಳನ್ನ ಹಾಗೇ ಮಡಿಲಿಗೆ ಎಳೆದುಕೊಂಡುಬಿಟ್ಟೆ. ಗುಬ್ಬಿಮರಿಯಂತೆ ನನ್ನ ಮಡಿಲಿನಲ್ಲಿ ಮಲಗಿದ್ದ ಚಿಕ್ಕಮ್ಮತ್ತೆಯನ್ನ ನೋಡಿ ಕರುಳು ಚುರುಕ್‌ ಅನಿಸಿ, ಗುಮ್ಮ ನೋಡಿ ಹೆದರಿದ ಮಗುವನ್ನು ಸಂತೈಸುವ ತಾಯಿಯ ಹಾಗೇ ನಾನು ಆವತ್ತು ಅವಳನ್ನು ತಬ್ಬಿ ಹಿಡಿದಿದ್ದೆ. ಅವಳಂದು ಏನು ಹೇಳಿದಳು- ಅವೆಲ್ಲವೂ ಅವಳ ಮತ್ತು ನನ್ನ ನಡುವೆ ಮಾತ್ರ ಗೌಪ್ಯವಾಗಿತ್ತು.

ಬಸ್‌ನಲ್ಲಿದ್ದವರೆಲ್ಲ ನಿದ್ದೆಗೆ ಜಾರಿದ್ದರು. ಕತ್ತಲನ್ನೇ ಸೀಳಿಕೊಂಡು ಹೋಗುತ್ತಿದ್ದ ಬಸ್‌ನ ವೇಗ ನನ್ನೆಲ್ಲ ಯೋಚನೆಗಳಿಗೆ ಬ್ರೇಕ್‌ ಹಾಕಿಬಿಟ್ಟಿತ್ತು. ಪಕ್ಕದಲ್ಲಿದ್ದ ಸೀಟು ಖಾಲಿ ಆಗಿದ್ದರಿಂದ ಯಾವುದೇ ರಗಳೆ ಇಲ್ಲದೇ ಕಿಟಕಿ ಬಾಗಿಲಿನಿಂದ ನುಗ್ಗುತ್ತಿದ್ದ ಗಾಳಿಗೆ ಮುಖವೊಡ್ಡಿ ಕುಳಿತೆ. ಸ್ಟಾಪ್‌ ಬಂದಾಗ ಯಾರ ಬರುವಿಕೆಗೂ ಕಾಯದೇ ಸೀದಾ ಮನೆಕಡೆ ಓಡುವ ರೀತಿಯೇ ಹೋಗಿದ್ದೆ. ಅಲ್ಲಿ ಆಗಲೇ ಜನ ಜಮಾಯಿಸಿದ್ದರು. ಮನೆ ಹತ್ತಿರ ಹೋಗುತ್ತಲೇ ಯಾರೋ ಹೇಳುತ್ತಿದ್ದ ಮಾತು ಕಿವಿಗೆ ಬೀಳುತ್ತಿತ್ತು. ಬೆಳಿಗ್ಗೆಯಿಂದ ಕೆರೆ ಹತ್ತಿರ ಹತ್ತಾರು ಸಲ ಹೋಗಿದ್ದರಂತೆ. ಅಲ್ಲಿ ಕುಳಿತು ಮಾತಾಡಿ, ಅತ್ತು ಜೋರಾಗಿ ನಕ್ಕು, ಮನೆಗೆ ಬಂದವರೇ ಚೊಂಬಿಗೆ ತುಳಸಿದಳ ಹಾಕಿಕೊಂಡು ಆ ನೀರು ಕುಡಿದು ಮಲಗಿಬಿಟ್ಟಿದ್ದರಂತೆ.

ನನಗೆ ದುಃಖ ಉಮ್ಮಳಿಸಿಬಂತು. ಸೀದಾ ಬಾವಿಕಟ್ಟೆಗೆ ಹೋದವಳೇ ತಲೆಮೇಲೆ ಒಂದು ಬಿಂದಿಗೆ ನೀರು ಸುರಿದುಕೊಂಡು ಅಡುಗೆ ಮನೆಯಲ್ಲಿ ಬಟ್ಟೆ ಬದಲಿಸಿ, ಸೀದಾ ಅಟ್ಟಕ್ಕೆ ಹೋದೆ. ಅಮ್ಮ ನನ್ನ ನೋಡಿ ಕರೆಯುವ ಮೊದಲೇ, ನಾನು ಅಟ್ಟದ ಮೆಟ್ಟಿಲು ಹತ್ತಿ ಚಿಕ್ಕಮ್ಮತ್ತೆ ಪೆಟ್ಟಿಗೆಯಲ್ಲಿದ್ದ ಚಿಕ್ಕದೊಂದು ಗಣಪತಿಮೂರ್ತಿ ಹಾಗೂ ಗೆಜ್ಜೆಯನ್ನು ಚಾವಡಿಗೆ ತಂದಿದ್ದೆ. ಕಂಬಕ್ಕೊರಗಿ ಕುಳಿತುಕೊಂಡಿದ್ದ ಅಪ್ಪ, ಮೊದಲ ಬಾರಿಗೆ ತೀರಾ ಸೋತವನಂತೆ ಕಾಣುತ್ತಿದ್ದ. ಚಿಕ್ಕಮ್ಮತ್ತೆ ಪಕ್ಕ ಕುಳಿತವಳೇ ಗೆಜ್ಜೆ ಮತ್ತು ಗಣಪತಿನ ಅವಳ ಕೈಯಲ್ಲಿಟ್ಟು “ಕೃಷ್ಣಾರ್ಪಣಮಸ್ತು’ ಎಂದೆ. ಚಿಕ್ಕಮ್ಮತ್ತೆ ಮತ್ತೆ ಕಣ್ಣು ತೆರೆಯಲಿಲ್ಲ.

ಪವಿತ್ರಾ ಶೆಟ್ಟಿ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.