Udayavni Special

ಕೊಣಾಜೆ ವಿಶ್ವದೊಳಗೆ ವಿಶ್ವಾಮಿತ್ರಸೃಷ್ಟಿಯ ರೂಪಕಗಳು


Team Udayavani, Dec 2, 2018, 6:00 AM IST

s-6.jpg

ಮಂಗಳೂರಿನ ಸ್ನಾತಕೋತ್ತರ ಕೇಂದ್ರವು 17 ಕಿ.ಮೀ. ದೂರದ ಕೊಣಾಜೆಯ ಸ್ವತಂತ್ರ ಕ್ಯಾಂಪಸ್‌ಗೆ ಹೋದ ಆರಂಭದಲ್ಲಿ ಅಲ್ಲಿ ಹೊಟೇಲ್‌, ಕ್ಯಾಂಟೀನ್‌ ಯಾವುದೂ ಇರಲಿಲ್ಲ. ಚಹಾ ಕುಡಿಯಲು ನಾವು ಹೋಗುತ್ತಿದ್ದದ್ದು ಕ್ಯಾಂಪಸ್‌ ಪಕ್ಕದಲ್ಲಿ ಇದ್ದ ಕೋಡಿಜಾಲ್‌ ಇಬ್ರಾಹಿಂ ಅವರ ಅಣ್ಣ ಮಹಮ್ಮದ್‌ ಕೋಡಿಜಾಲರ ಮನೆಗೆ. ಅವರು ಮನೆಯ ಮುಂದುಗಡೆಯ ಚಪ್ಪರದಲ್ಲಿ ನಮಗೆ ಚಹಾ ಕೊಡುತ್ತಿದ್ದರು. ಚಹಾ ಮಾತ್ರ ಕುಡಿದು ಊಟತಿಂಡಿ ಇಲ್ಲದೆ ಪಾಠಮಾಡಿ ಸಂಜೆ ಸ್ವಸ್ಥಾನಕ್ಕೆ ಹೋಗಿ ಉಪಾಹಾರ ಮಾಡಿದ ವನವಾಸದ ಅನುಭವಗಳು ಇವತ್ತು ಪುರಾಣದ ಕತೆಯಂತೆ ಕಾಣಿಸುತ್ತವೆ. ಕ್ಯಾಂಪಸ್‌ನಲ್ಲಿ ತಾತ್ಕಾಲಿಕವಾಗಿ ಕ್ಯಾಂಟೀನ್‌ ಆರಂಭವಾದರೂ ಅದನ್ನು ನಡೆಸುವವರು ಬದಲಾದಾಗಲೆಲ್ಲ ಅದು ಸ್ಥಗಿತಗೊಳ್ಳುತ್ತಿತ್ತು. ಆಗ ಪಕ್ಕದಲ್ಲಿ ಬಾಬು ಅನ್ನುವವರು ತಮ್ಮ ಸಣ್ಣ ಗುಡಿಸಲಿನಲ್ಲಿ ನಮಗೆ ಚಹಾ ಮತ್ತು ಊಟ ಕೊಡುತ್ತಿದ್ದರು. ಕಾಯಿಲೆ ಆದರೆ ನಾಟೇಕಲ್‌ನಲ್ಲಿ ಇದ್ದ ವೈದ್ಯ ಡಾ. ರಾಮಾನುಜಂ ಅವರಲ್ಲಿಗೆ ಹೋಗುತ್ತಿದ್ದೆವು. ನಗುಮುಖದ ಡಾ. ರಾಮಾನುಜಂ ಅವರ ಆತ್ಮೀಯ ಮಾತುಗಳೇ ಗುಣಮುಖೀಯಾಗಿದ್ದವು. 

ಮಂಗಳೂರಿನಿಂದ ಕೊಣಾಜೆಗೆ ಬಸ್ಸಿನಲ್ಲಿ ಓಡಾಡಿ, ಮಧ್ಯಾಹ್ನ ಊಟ ಇಲ್ಲದೆ, ಹಸಿದ ಹೊಟ್ಟೆಯಲ್ಲಿ ಪಂಪಭಾರತದ ಖಾಂಡವವನದಹನದ ಪಾಠಮಾಡುವುದು ಕಷ್ಟವಾಗಿ, ಕೊಣಾಜೆಯಲ್ಲಿ ವಾಸ್ತವ್ಯಕ್ಕೆ ಬಾಡಿಗೆಮನೆಯೊಂದನ್ನು ಪಡೆದೆ. ಕೊಣಾಜೆ ಗ್ರಾಮದ ಪಟ್ಟೋರಿಯ ರಮಾನಾಥ ಕಾಜವರು ವಿವಿ ಕ್ಯಾಂಪಸ್‌ ಬದಿಯಲ್ಲಿ ಮುಡಿಪು ರಸ್ತೆಯ ಪಕ್ಕದಲ್ಲಿ ತಮ್ಮ ಜಾಗದಲ್ಲಿ ನನ್ನ ಕೋರಿಕೆಯಂತೆ ಒಂದು ಮನೆಯನ್ನು ಕಟ್ಟಿಸಿದರು. ಅದರಲ್ಲಿ ನನ್ನ ವಾಸ್ತವ್ಯಕ್ಕೆ ಎರಡು ಕೋಣೆಗಳನ್ನು ಕೊಟ್ಟರು. ಉಳಿದ ಕೋಣೆಗಳನ್ನು ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಾಡಿಗೆಗೆ ಕೊಟ್ಟರು. ನನ್ನ ಪ್ರೇರಣೆಯಿಂದ ಕಾಮರ್ಸ್‌ ವಿಭಾಗದ  ಅಧ್ಯಾಪಕರು ಡಿ. ಕೆ. ಪೊದುವಾಳ್‌ ಮತ್ತು ಬಿ.ಆರ್‌. ಅನಂತನ್‌ ಅಲ್ಲಿ ವಾಸ್ತವ್ಯಕ್ಕೆ ಬಂದರು. ನಾವು ಮೂವರು ಅಧ್ಯಾಪಕರು ಆಪ್ತಸ್ನೇಹಿತರಾದೆವು. ಪೊದುವಾಳ್‌ರು ಕನ್ನಡ ಭಾವಗೀತೆಗಳನ್ನು ಹಾಡುತ್ತಿದ್ದರು; ಅನಂತನ್‌ ಲೋಕಜ್ಞಾನದ ಸಂಗತಿಗಳನ್ನು ನನಗೆ ಹೇಳುತ್ತಿದ್ದರು. ನಮ್ಮ ಊಟದ ವ್ಯವಸ್ಥೆಗಾಗಿ ಕಾಜವರು ಕೊಚ್ಚಿ ಕ್ರಿಶ್ಚನ್‌ ಕುಟುಂಬದ ಬೇಬಿ ಎಂಬ ಹುಡುಗಿ ಮತ್ತು ಅವಳ ತಾಯಿಯನ್ನು ಗೊತ್ತುಮಾಡಿದರು. ಬೇಬಿ ಮತ್ತು ಅವಳ ತಾಯಿ ಅಡುಗೆ ಮಾಡಿ ನಮಗೆ ಊಟ-ತಿಂಡಿ ಒದಗಿಸಿದ ಉಪಕಾರವನ್ನು ನಾವು ಸದಾ ನೆನೆಯುತ್ತೇವೆ. ಮಂಗಳೂರಿನಿಂದ ಬರುವ ಬೇರೆ ವಿಭಾಗಗಳ ಅಧ್ಯಾಪಕರು ಮಧ್ಯಾಹ್ನದ ಊಟಕ್ಕೆ ನಮ್ಮಲ್ಲಿಗೆ ಬರುತ್ತಿದ್ದರು. ಬಯೋಸಾಯನ್ಸ್‌ ವಿಭಾಗದ ಪ್ರಾಧ್ಯಾಪಕರಾದ ಎಂ. ಅಬ್ದುಲ್‌ ರಹಿಮಾನ್‌, ಎಂ. ಎನ್‌. ಮಧ್ಯಸ್ಥ, ಕೆ. ಎಂ. ಕಾವೇರಿಯಪ್ಪ, ಡಿ. ಸಿ. ಚೌಟ, ಎ. ಪಿ. ಮಣಿ ಮತ್ತು ಭೌತಶಾಸ್ತ್ರ ವಿಭಾಗದ ಜಯಗೋಪಾಲ ಉಚ್ಚಿಲ್‌ (ಉಚ್ಚಿಲ್‌ರು ಕೊಣಾಜೆಯಲ್ಲಿ ಅಧ್ಯಾಪಕರ ವಸತಿಗೃಹದಲ್ಲಿ ಇದ್ದರು) ಮಧ್ಯಾಹ್ನ ಊಟಕ್ಕೆ “ಬೇಬಿಮೆಸ್‌’ಗೆ ಬರುತ್ತಿದ್ದರು. ನನ್ನ ಕೋಣೆಯಲ್ಲಿ ನಾವೆಲ್ಲರೂ ಸಂತೋಷದಿಂದ ಯೋಗಕ್ಷೇಮ ವಿಚಾರಿಸುತ್ತ ಒಬ್ಬರನ್ನೊಬ್ಬರು ಸ್ನೇಹದ ತಮಾಷೆ ಮಾಡುತ್ತ ಊಟಮಾಡುತ್ತ ಕಳೆದ ದಿನಗಳು ಬರಡು ಕೊಣಾಜೆಯಲ್ಲಿ ನಮಗೆ ಓಯಸಿಸ್‌ ಆಗಿದ್ದವು, ಸಾಮೂಹಿಕ ಬದುಕಿನ ಸುಖ ಕೊಡುತ್ತಿದ್ದುವು. ಕಾಜವರ ಬಾಡಿಗೆಮನೆಯಲ್ಲಿನ ನನ್ನ ವಾಸ್ತವ್ಯದ ಉಪಉತ್ಪನ್ನವೆಂದರೆ ಅವರು ಪ್ರಸ್ತಾವಿಸಿದ ಹುಡುಗಿಯನ್ನು ನಾನು ಮದುವೆಯಾದದ್ದು ಮತ್ತು ಅದರ ಪರಿಣಾಮವಾಗಿ 1975ರ ಜೂನ್‌ನಲ್ಲಿ ಕಾಜವಮಂಜಿಲ್‌ಗೆ ವಿದಾಯ ಹೇಳಿದ್ದು !

ಮಲ್ಪೆ ಶಂಕರನಾರಾಯಣ ಸಾಮಗ ಮತ್ತು ಅಳಕೆ ರಾಮಯ್ಯ ರೈ ಅವರ ಸಂಮಾನ ಸಮಾರಂಭದ ಕರೆಯೋಲೆ

ಕೊಣಾಜೆಯ ಆವರಣದಲ್ಲಿ ಭೌತಿಕ ಸೌಲಭ್ಯಗಳ ಕೊರತೆ ಇದ್ದರೂ ನಮ್ಮ ಕನ್ನಡವಿಭಾಗದ ಚಟುವಟಿಕೆಗಳಿಗೆ ಕುಂದು ಬರಲಿಲ್ಲ. 1973 ಜನವರಿ 23ರಂದು ಮಂಗಳೂರು ಪುರಭವನದಲ್ಲಿ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟರ ಕನ್ನಡ ಕಾಳಿದಾಸ ಮಹಾಸಂಪುಟದ ಬಿಡುಗಡೆ ಸಮಾರಂಭ ಒಂದು ಐತಿಹಾಸಿಕ ಘಟನೆ. ಎಸ್‌ವಿಪಿ ಅವರು ಈ ಗ್ರಂಥದ ಮುದ್ರಣ ವೆಚ್ಚಕ್ಕಾಗಿ ಸಿಂಡಿಕೇಟ್‌ಬ್ಯಾಂಕ್‌ನಿಂದ ಹದಿನೈದು ಸಾವಿರ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಕೆ. ಕೆ. ಪೈಯವರು ಆಗ ಸಿಂಡಿಕೇಟ್‌ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಗ್ರಂಥದ ಮುಂಗಡಪ್ರತಿ ಕೊಳ್ಳಲು ತಲಾ 25 ರೂಪಾಯಿ ಕಳುಹಿಸಲು ಎಸ್‌ವಿಪಿಯವರು ಮಾಡಿದ ಮನವಿಗೆ 1700 ಮಂದಿ ಸ್ಪಂದಿಸಿದ ಪರಿಣಾಮವಾಗಿ, 34 ಸಾವಿರ ರೂಪಾಯಿ ಮುಂಗಡ ಹಣ ಬಂದು, ಗ್ರಂಥ ಬಿಡುಗಡೆಗೆ ಮೊದಲೇ ಎಸ್‌ವಿಪಿ ಸಿಂಡಿಕೇಟ್‌ ಬ್ಯಾಂಕ್‌ನ ಸಾಲ ತೀರಿಸಿದರು. ಬಿಡುಗಡೆ ಕಾರ್ಯಕ್ರಮದಲ್ಲಿ ಕೆ. ಕೆ. ಪೈಯವರು ತಮಾಷೆಯಾಗಿ ಹೇಳಿದರು: “”ಇಂಥ ಯಶಸ್ವಿ ಕವಿ ಸಾಲಗಾರರು ಸಿಕ್ಕಿದರೆ ನಮಗೆ ಪ್ರಯೋಜನವೇನು!” ಅಧ್ಯಕ್ಷತೆ ವಹಿಸಿದ್ದ ವಿ. ಕೃ. ಗೋಕಾಕರು “ಇವರು ಎಸ್‌ವಿಪಿ ಅಲ್ಲ; ಯಸ್‌ ವಿಐಪಿ’ ಎಂದು ಕೊಂಡಾಡಿದರು. 

ಕನ್ನಡ ಸಂಘ, ಮಂಗಳಗಂಗೋತ್ರಿಯಿಂದ ಶೇಣಿ ಗೋಪಾಲಕೃಷ್ಣ ಭಟ್ಟರ ಸನ್ಮಾನದ ಬಳಿಕ ನಡೆದ ಮಹತ್ವದ ಯಕ್ಷಗಾನ ಕಲಾವಿದರ ಸನ್ಮಾನ ಕಾರ್ಯಕ್ರಮ ಮಲ್ಪೆ ಶಂಕರನಾರಾಯಣ ಸಾಮಗ ಮತ್ತು ಅಳಕೆ ರಾಮಯ್ಯ ರೈ ಅವರದ್ದು. ಈ ಅಪೂರ್ವ ಕಾರ್ಯಕ್ರಮವು 1973 ಜುಲೈ 21ರಂದು ಮಂಗಳೂರು ಪುರಭವನದಲ್ಲಿ ನಡೆಯಿತು. ಅಧ್ಯಕ್ಷತೆ-ದೇರಾಜೆ ಸೀತಾರಾಮಯ್ಯ. ಸನ್ಮಾನಿತರಿಗೆ ಅಭಿನಂದನಾ ಭಾಷಣ ಮಾಡಿದವರು: ಶೇಣಿ ಗೋಪಾಲಕೃಷ್ಣ ಭಟ್ಟ, ಅಮೃತ ಸೋಮೇಶ್ವರ, ಎಂ. ಪ್ರಭಾಕರ ಜೋಶಿ. ಬಳಿಕ ನರಕಾಸುರ ಮೋಕ್ಷ, ದಮಯಂತಿಯ ಪುನಃಸ್ವಯಂವರ ಮತ್ತು ಭೀಷ್ಮ ಪರ್ವ ಎಂಬ ಮೂರು ಪ್ರಸಂಗಗಳ ಬಯಲಾಟ ಕಾರ್ಯಕ್ರಮ ನಡೆಯಿತು (ಆಮಂತ್ರಣಪತ್ರಿಕೆಯಲ್ಲಿ ವಿವರ ಇದೆ). 

ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಧ್ಯಕ್ಷತೆಯ ಪಂಜೆ ಮಂಗೇಶರಾವ್‌ ಶತಮಾನೋತ್ಸವ ಸಮಿತಿಯ ಆಶ್ರಯದಲ್ಲಿ 1974 ಫೆಬ್ರವರಿ 8, 9 ಮತ್ತು 10ರಂದು ನಡೆದ ಪಂಜೆ ಶತಮಾನೋತ್ಸವ ಕಾರ್ಯಕ್ರಮವು ನಾನು ಕಂಡ ಹಾಗೆ ಒಂದು ಅಪೂರ್ವ ಸಾಹಿತ್ಯಸಮ್ಮೇಳನವೇ ಆಗಿತ್ತು. ಪಂಜೆಯವರು ವಾಸ್ತವ್ಯ ಇದ್ದ ಬಂಟ್ವಾಳದಲ್ಲಿ ಫೆಬ್ರವರಿ ಎಂಟರಂದು ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕೇಂದ್ರ ಸಚಿವರಾದ ಟಿ. ಎ. ಪೈ ಅವರು ಉದ್ಘಾಟನೆ ಮಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ಮರಣಸಂಚಿಕೆ ಬಿಡುಗಡೆಮಾಡಿದರು. ಹಿರಿಯ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ವಿ. ಸೀತಾರಾಮಯ್ಯ, ಜಿ.ಪಿ. ರಾಜರತ್ನಂ, ಕುಲಪತಿ ದೇ. ಜವರೇಗೌಡ, ಎಚ್‌. ಎಲ್‌. ನಾಗೇಗೌಡ, ಶಿಕ್ಷಣ ಸಚಿವರಾಗಿದ್ದ ಬದರೀನಾರಾಯಣ, ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಜಿ. ನಾರಾಯಣ ಅತಿಥಿಗಳಾಗಿ ಭಾಗವಹಿಸಿದರು. ಏರ್ಯರಿಂದ ಸ್ವಾಗತ ಮತ್ತು ಪ್ರಸ್ತಾವನೆ. ಪಂಜೆಯವರ ಮಕ್ಕಳಾದ ಗೋಪಾಲರಾಯರು ಮತ್ತು  ಮುಕುಂದರಾಯರು ಮೂರೂ ದಿನಗಳ ಕಾರ್ಯಕ್ರಮಗಳಲ್ಲಿ ಪಾಲುಗೊಂಡರು. ಫೆಬ್ರವರಿ 9 ಮತ್ತು 10ರ ಕಾರ್ಯಕ್ರಮಗಳು ಮಂಗಳೂರಿನಲ್ಲಿ ಗಣಪತಿ ಹೈಸ್ಕೂಲಿನಲ್ಲಿ ಜರುಗಿದವು. ಈ ಎರಡು ದಿನಗಳಲ್ಲಿ ಮೂರು ವಿಚಾರಗೋಷ್ಠಿಗಳು, ಕವಿಗೋಷ್ಠಿ ಮತ್ತು ಸಮಾರೋಪ ಸಮಾರಂಭ ನಡೆದುವು. ವಿಚಾರಗೋಷ್ಠಿಗಳು ಮತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಿದ ಸಾಹಿತಿಗಳು ಮತ್ತು ಕವಿಗಳು : ಶಿವರಾಮ ಕಾರಂತ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಕೆ. ಎಸ್‌. ನರಸಿಂಹಸ್ವಾಮಿ, ಗೌರೀಶ ಕಾಯ್ಕಿಣಿ, ಎಸ್‌.ವಿ. ಪರಮೇಶ್ವರ ಭಟ್ಟ, ಹಾ. ಮಾ. ನಾಯಕ, ಜಿ.ಎಸ್‌. ಶಿವರುದ್ರಪ್ಪ, ಕಯ್ನಾರ ಕಿಞ್ಞಣ್ಣ ರೈ, ಕೋ ಚನ್ನಬಸಪ್ಪ, ಕಳ್ಳಿಗೆ ಮಹಾಬಲ ಭಂಡಾರಿ, ನಿಸಾರ್‌ ಅಹಮ್ಮದ್‌, ಬನ್ನಂಜೆ ಗೋವಿಂದಾಚಾರ್ಯ, ಚಂದ್ರಶೇಖರ ಕಂಬಾರ, ಸು.ರಂ. ಎಕ್ಕುಂಡಿ, ರಾಮಚಂದ್ರ ಉಚ್ಚಿಲ, ಅಮೃತ ಸೋಮೇಶ್ವರ, ಅ. ಗೌ. ಕಿನ್ನಿಗೋಳಿ, ಪಿ. ಕೆ. ನಾರಾಯಣ, ಎಂ. ರಾಮಚಂದ್ರ, ರಾಮದಾಸ್‌, ಕೆ. ವಿ. ತಿರುಮಲೇಶ್‌, ಪದ್ಮಾ ಶೆಣೈ, ಕೀಕಾನ ರಾಮಚಂದ್ರ ಮುಂತಾದವರು. ಸಮಾರೋಪ ಸಮಾರಂಭದಲ್ಲಿ ಜಿ. ಪಿ. ರಾಜರತ್ನಂ ಸಮಾರೋಪ ಭಾಷಣ ಮಾಡಿದರು. ಅತಿಥಿಗಳಾಗಿ ಮಾಸ್ತಿ, ಎಸ್‌ವಿಪಿ, ತೆಕ್ಕುಂಜ ಮತ್ತು ಪಂಜೆಯವರ ಮಕ್ಕಳು ಭಾಗವಹಿಸಿದ್ದರು. ಪಂಜೆ ಶತಮಾನೋತ್ಸವದಲ್ಲಿ ಎಸ್‌ವಿಪಿ ಅವರ ಹಿರಿತನದಲ್ಲಿ ನಾವು ಮಂಗಳಗಂಗೋತ್ರಿಯ ಕನ್ನಡ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲುಗೊಂಡಿದ್ದೆವು. 

ಕನ್ನಡ ವಿಭಾಗದ ಹಳೆಯ ವಿದ್ಯಾರ್ಥಿಗಳ ಕಿರುಹೊತ್ತಗೆಗಳು ಕನ್ನಡಸಂಘ, ಮಂಗಳಗಂಗೋತ್ರಿಯ ಮಂಗಳಮಾಲೆಯಲ್ಲಿ ಬೆಳಕು ಕಂಡವು. ಇವು ಮೈಸೂರು ವಿವಿ ಪ್ರಸಾರಾಂಗದ ಉಪನ್ಯಾಸಮಾಲೆಯ ಮಾದರಿಯವು. ಮಂಗಳಮಾಲೆಯ ಕೃತಿಗಳು: ವರ್ಜಿಲ್‌: ಎಡ್ವರ್ಡ್‌ ನೊರೊನ್ಹಾ; ಪೇಜಾವರ ಸದಾಶಿವರಾಯರು: ಮುರಳೀಧರ ಉಪಾಧ್ಯ; ಬೋಳಂತಕೋಡಿ ಶಂಕರ ಭಟ್ಟರು: ಎಂ. ಮಾಧವ ಪೈ; ಪ್ರಾಧ್ಯಾಪಕ ಮರಿಯಪ್ಪ ಭಟ್ಟರು: ಕೆ. ವಿ. ಚಂದ್ರಕಲಾ; ಕುಮಾರ ವಾಲ್ಮೀಕಿ: ಕೆ. ಜಿ. ನಾರಾಯಣಪ್ರಸಾದ್‌; ಡಾಂಟೆ : ಎಂ. ಜಯಕುಮಾರ್‌.

ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟರು ಮೈಸೂರು ವಿವಿಯ ಸೇವೆಯಿಂದ 1974 ಫೆಬ್ರವರಿ 8ರಂದು ಅಧಿಕೃತವಾಗಿ ನಿವೃತ್ತರಾದರು. ಅವರು ಆ ಶೈಕ್ಷಣಿಕ ವರ್ಷದ ಕೊನೆ  ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಕೇಂದ್ರದ ನಿರ್ದೇಶಕರಾಗಿ ಅಪೂರ್ವ ಕ್ರಿಯಾಶೀಲ ಬಹುಮುಖೀ ಚಟುವಟಿಕೆಗಳ ಮೂಲಕ ಐತಿಹಾಸಿಕ ದಾಖಲೆಯನ್ನು ನಿರ್ಮಾಣಮಾಡಿದರು. ಅವರಿಗೆ ಕೃತಜ್ಞತೆಯ ಅನೇಕ ಸನ್ಮಾನಗಳು ಬಹುಬಗೆಗಳಲ್ಲಿ ನಡೆದುವು. ಮಂಗಳಗಂಗೋತ್ರಿಯ ಕನ್ನಡವಿಭಾಗದಲ್ಲಿ, ಸ್ನಾತಕೋತ್ತರ ಕೇಂದ್ರದಲ್ಲಿ, ಮಂಗಳೂರಿನಲ್ಲಿ ಸಾರ್ವಜನಿಕರ ನೆಲೆಯಲ್ಲಿ, ಅನೇಕ ಸಂಘಸಂಸ್ಥೆ ಗಳಿಂದ ಹತ್ತುಹಲವು ಬಗೆಯ ಪ್ರೀತಿ-ಅಭಿಮಾನದ ಸಮಾರಂಭಗಳು ಸಂಭವಿಸಿದುವು. ಅವರು ತಮ್ಮ ನಿವೃತ್ತಿಯ ವೇಳೆ ತಮ್ಮ ಬರಹಗಳ ಆಯ್ದ ಸಂಕಲನ ಅರುವತ್ತರ ಅರಳು ಗ್ರಂಥವನ್ನು ಪ್ರಕಟಿಸಿದರು; ಅದನ್ನು “ಕರಾವಳಿಯ ಕನ್ನಡಿಗರಿಗೆ’ ಅರ್ಪಣೆ ಮಾಡಿದರು.  

     ಕನ್ನಡ ಎಂಎ ವಿದ್ಯಾರ್ಥಿಗಳಿಗೆ ಪಾಠಮಾಡಲು ನನಗೆ ದೊರೆತ ವಿಷಯಗಳು ಆಕಸ್ಮಿಕ. ಅಂತಹ ಆಕಸ್ಮಿಕಗಳೇ ಮುಂದೆ ಒಂದು ಜ್ಞಾನಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಲು, ಪರಿಣತಿಯನ್ನು ಪಡೆಯಲು, ಬದುಕಿನಲ್ಲಿ ಒಂದು ತಣ್ತೀವಾಗಿ, ಜೀವನವಿಧಾನವಾಗಿ ರೂಪುಗೊಳ್ಳಲು ಕಾರಣವಾದುವು. ಮೈಸೂರು ವಿವಿಯ ಪಾಠಪಟ್ಟಿಯೇ ಮಂಗಳೂರು ಸ್ನಾತಕೋತ್ತರ ಕೇಂದ್ರದ ಕನ್ನಡ ಎಂಎಗೂ ಅನ್ವಯವಾಗುತ್ತಿದ್ದದ್ದು. 1972-73 ಶೈಕ್ಷಣಿಕ ವರ್ಷದಲ್ಲಿ “ಜಾನಪದ’ ಎಂಬ ವಿಷಯವು ಐಚ್ಛಿಕವಾಗಿ ಕನ್ನಡ ಎಂಎ ಪಾಠಪಟ್ಟಿಯಲ್ಲಿ ಸೇರ್ಪಡೆಯಾಗಿ ನಮ್ಮ ಮಂಗಳೂರು ಕೇಂದ್ರಕ್ಕೂ ಅನ್ವಯವಾಯಿತು. ಅದರಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಮೂರು ಪತ್ರಿಕೆಗಳು ಅಧ್ಯಯನಕ್ಕೆ ಇದ್ದುವು. ಮೊದಲನೆಯ ವರ್ಷ ಸಂಸ್ಕೃತಿಯ ಅಧ್ಯಯನ ಎಂಬ ಒಂದು ಪತ್ರಿಕೆ. ಎರಡನೆಯ ವರ್ಷ ಜಾನಪದ ಸಿದ್ಧಾಂತಗಳು ಮತ್ತು ವಿಧಾನಗಳು ಮತ್ತು ಕನ್ನಡ ಜನಪದ ಸಾಹಿತ್ಯ ಎಂಬ ಎರಡು ಪತ್ರಿಕೆಗಳು. ಪ್ರೊಫೆಸರ್‌ ಎಸ್‌ವಿಪಿ ಅವರು ಈ ವಿಷಯಗಳನ್ನು ಪಾಠಮಾಡಲು ನನಗೆ ತಿಳಿಸಿದರು. ನಾನು “ಜಾನಪದ’ ಸಹಿತ ಈ ಯಾವುದೇ ವಿಷಯಗಳನ್ನು ಎಂಎಯಲ್ಲಿ ಅಧ್ಯಯನ ಮಾಡಿರಲಿಲ್ಲ; ಮಾತ್ರವಲ್ಲದೆ ಅವುಗಳ ಬಗ್ಗೆ ಶೈಕ್ಷಣಿಕವಾಗಿ ನನಗೆ ಏನೂ ಗೊತ್ತಿರಲಿಲ್ಲ. ಮೊದಲನೆಯ ವರ್ಷದ ಪತ್ರಿಕೆ “ಸಂಸ್ಕƒತಿಯ ಅಧ್ಯಯನ’ದ ಸಿಲೆಬಸ್‌ ವಿವರಗಳು ಸಂಪೂರ್ಣವಾಗಿ “ಸಾಂಸ್ಕೃತಿಕ ಮಾನವ ವಿಜ್ಞಾನ’ ವಿಷಯದವು. ನನಗೆ ಆಂತ್ರಪಾಲಜಿ ಬಗ್ಗೆ ಯಾವ ಜ್ಞಾನವೂ ಇರಲಿಲ್ಲ, ಆ ಕುರಿತು ಒಂದೇ ಒಂದು ಪುಸ್ತಕ ಓದಿರಲಿಲ್ಲ. ಸಿಲೆಬಸ್‌ನಲ್ಲಿ ಸೂಚಿಸಿದ ಪುಸ್ತಕಗಳು ಇಂಗ್ಲಿಷ್‌ನವು. ಅವು ಎಲ್ಲಿ ಸಿಗುತ್ತವೆ ಎಂದು ಗೊತ್ತಿರಲಿಲ್ಲ. ತುಂಬಾ ಆತಂಕಕ್ಕೆ ಒಳಗಾದೆ. 

ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದ ರಾಘವೇಂದ್ರ ಪ್ರಭು ಅವರು ಆಕಸ್ಮಿಕವಾಗಿ ಪರಿಚಯವಾಗಿ ಕೆಲವು ಪುಸ್ತಕಗಳ ಹೆಸರು ಸೂಚಿಸಿ, ಮೈಸೂರಿನ ಗೀತಾ ಬುಕ್‌ಹೌಸ್‌ನಿಂದ ತರಿಸಬಹುದು ಎಂದು ಹೇಳಿದರು. ನಾನು ಮೈಸೂರಿಗೆ ಪತ್ರ ಬರೆದು ವಿಪಿಪಿ ಮೂಲಕ ಮೊದಲ ಬಾರಿ ತರಿಸಿದ ಮೂರು ಇಂಗ್ಲಿಷ್‌ ಪುಸ್ತಕಗಳು: Anthropology: A.L.Kroeber; An Introduction to Anthropology: Ralph L Beals and Harry Hoijer; Introduction to Cultural and Social Anthropology: Peter Hammond. ಮೈಸೂರು ವಿವಿಯ ಇಂಗ್ಲಿಷ್‌-ಕನ್ನಡ ನಿಘಂಟುವನ್ನು ಪಕ್ಕದಲ್ಲಿ ಇಟ್ಟುಕೊಂಡು ಈ ಮೂರು ಇಂಗ್ಲಿಷ್‌ ಪುಸ್ತಕಗಳನ್ನು ಓದಿ, ಕನ್ನಡದಲ್ಲಿ ಅವುಗಳ ಟಿಪ್ಪಣಿ ಮಾಡಿಕೊಂಡು, ಎಂಎ ತರಗತಿಯಲ್ಲಿ ಕನ್ನಡದಲ್ಲಿ ವಿವರಿಸಲು ತೊಡಗಿದೆ. ಅಧ್ಯಾಪನದಲ್ಲಿ ಬಳಸಿಕೊಂಡ ಆ ಸಿಲೆಬಸ್‌ನ ವಿಷಯಗಳು: ಸಂಸ್ಕೃತಿಯ ಭಿನ್ನ ವ್ಯಾಖ್ಯೆಗಳು, ಸಂಸ್ಕೃತಿಯ ವಿಕಾಸವಾದದ ಚರ್ಚೆಗಳು, ಸಂಸ್ಕೃತಿ ಮತ್ತು ನಾಗರಿಕತೆ, ಸಂಸ್ಕೃತಿ ಮತ್ತು ಜನಾಂಗದ ಸಂಬಂಧ, ವಿವಾಹ, ಕುಟುಂಬ, ಬಂಧುತ್ವ, ಕುಲ, ಕುಲದೇವತಾರಾಧನೆ, ಧರ್ಮದ ವ್ಯಾಖ್ಯೆಗಳು, ಧರ್ಮದ ಉಗಮದ ಸಿದ್ಧಾಂತಗಳು, ಧರ್ಮದ ಕಾರ್ಯಗಳು, ನಿಷಿದ್ಧತೆ, ಪ್ರಾಚೀನ ಸಮಾಜಗಳಲ್ಲಿ ಆರ್ಥಿಕ ವ್ಯವಸ್ಥೆ. ಈ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಇಂಗ್ಲಿಷ್‌ನಲ್ಲಿ ಇದ್ದ ಇನ್ನಷ್ಟು ಮಾನವವಿಜ್ಞಾನ ಮತ್ತು ಸಮಾಜವಿಜ್ಞಾನ ಪುಸ್ತಕಗಳನ್ನು ಗ್ರಂಥಾಲಯಕ್ಕೆ ತರಿಸಿಕೊಂಡು ಅಧ್ಯಯನಮಾಡಿದೆ. ಅಲ್ಲಿನ ವಿಷಯಗಳನ್ನು ಕೇವಲ ಪಾಠಮಾಡುವುದಕ್ಕೆ ಮಾತ್ರ ಸೀಮಿತಮಾಡದೆ, ನನ್ನ ಪರಿಸರದ ಸಂಸ್ಕೃತಿಯ ಜೊತೆಗೆ ಅನುಸಂಧಾನ ಮಾಡಲು, ಸೂಕ್ಷ್ಮವಾಗಿ ಅವಲೋಕನಮಾಡಲು ತೊಡಗಿದೆ. ಧರ್ಮದ ಉಗಮ ಮತ್ತು ಕಾರ್ಯವನ್ನು ಕುರಿತ ಆಲೋಚನೆಗಳನ್ನು ನಾನು ಬೆಳೆದುಕೊಂಡು ಬಂದ ಮತ್ತು ಬದುಕುತ್ತಿರುವ ಸಮಾಜದ ಒಳಗಿನಿಂದ ನೋಡಲು ಸುರುಮಾಡಿದಂತೆಲ್ಲ “ಸಂಸ್ಕೃತಿ’ ಎಂದು ಕರೆಯುವ ಪರಿಭಾಷೆಯ ಬಹುರೂಪತೆ ಗೋಚರವಾಗುತ್ತ ಬಂತು. ನಂಬಿಕೆ ಮತ್ತು ಆಚರಣೆಯೆಂಬ ತಾತ್ತಿಕ ಮತ್ತು ಕ್ರಿಯಾತ್ಮಕ ಘಟಕಗಳು ಇರುವ ಧರ್ಮವನ್ನು ಸ್ಥಾವರಕ್ಕಿಂತ ಭಿನ್ನವಾಗಿ ಮನೋದೇಹಿಯಾದ ಮನುಷ್ಯರ ಸೃಷ್ಟಿಕ್ರಿಯೆಗಳ ಅಪಾರ ಸಾಧ್ಯತೆಗಳಲ್ಲಿ ಕಾಣಲು ತೊಡಗಿದೆ.

ಈ ಹಿನ್ನೆಲೆಯಲ್ಲಿಯೇ ನಾನು ತುಳು ಜಾನಪದದ ಬಗ್ಗೆ ಅಧ್ಯಯನ ನಡೆಸಲು ಆರಂಭಿಸಿದ್ದು. ಒಂದು ಸಂಸ್ಕೃತಿಯನ್ನು ಅಧ್ಯಯನ ಮಾಡುವಾಗ ಸಂಸ್ಕೃತಿಯ ಒಳಗಿನಿಂದ ನೋಡುವುದು ಮತ್ತು ಹೊರಗಿನಿಂದ ನೋಡುವುದು ಎನ್ನುವ ವೈಚಾರಿಕ ಪಾತಳಿಗಳು ಇವೆ. ಸಂಸ್ಕೃತಿಯ ಒಳಗಿನವರು ಕೂಡ ತಮ್ಮ ಸಂಸ್ಕೃತಿಯನ್ನು ಹೊಸತಾಗಿ ನೋಡಲು ತೊಡಗಿದಾಗ, ಅಪರಿಚಿತ ಎಂದು ಕಾಣಲು ತೊಡಗಿದಾಗ ಅನೇಕ ಹೊಸ ಹೊಳಹುಗಳನ್ನು ಕಾಣಲು ಸಾಧ್ಯ ಎನ್ನುವ ಸತ್ಯದರ್ಶನ ನನಗೆ ಆದದ್ದು ನನ್ನದೇ ತುಳು ಸಂಸ್ಕೃತಿಯನ್ನು ನಾನು ಅಧ್ಯಯನಮಾಡಲು ತೊಡಗಿದಾಗ. 

ಪಂಜೆ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಜಿ. ಪಿ. ರಾಜರತ್ನಂ ಸಮಾರೋಪ ಭಾಷಣ ಮಾಡುತ್ತಿರುವುದು. ಎಡದಿಂದ ಬಲಕ್ಕೆ ಏರ್ಯ ವೆಂಕಟೇಶ್ವರ ಆಳ್ವ , ಪಂಜೆಯವರ ಮಕ್ಕಳಾದ ಗೋಪಾಲ ರಾಯರು ಮತ್ತು ಮುಕುಂದ ರಾಯರು, ಮಾಸ್ತಿ ವೆಂಕಟೇಶ ಅಯ್ಯಂಗಾರರು, ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು, ಎಸ್‌. ವಿ. ಪರಮೇಶ್ವರ ಭಟ್ಟರು…

ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

Untitled-2

ಭಿಕ್ಷೆ ಬೇಡುವ ನೆಪದಲ್ಲಿ ಕಳ್ಳತನ

Untitled-2

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪಡಿಕ್ಕಲ್‌ ಸತತ ಶತಕ; ಕೇರಳವನ್ನು ಕಾಡಿದ ಕರ್ನಾಟಕ

Untitled-2

ಉಳ್ಳಾಲ: ಹಳೆ ವೈಷಮ್ಯ , ಯುವಕನಿಗೆ ಹಲ್ಲೆ

Nimishamba temple

ನಾಳೆ ಮಾಘ ಶುದ್ಧ ಹುಣ್ಣಿಮೆ : ನಿಮಿಷಾಂಬದಲ್ಲಿ ಭರದ ಸಿದ್ಧತೆ

Mandya Temple

ಕಾಲಯಮನ ಗರ್ಭಕ್ಕೆ ಸೇರುತ್ತಿರುವ ಜನಾರ್ದನ ದೇಗುಲ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

Untitled-2

ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಹೊಸ ಸೇರ್ಪಡೆ

ಕರಾವಳಿಯಲ್ಲಿ ಹೈಟೆಕ್‌ ಮೀನು ಪಾರ್ಕ್‌, ಹೆಮ್ಮಕ್ಕಳ ಕ್ರೀಡಾ ಹಾಸ್ಟೆಲ್‌

ಕರಾವಳಿಯಲ್ಲಿ ಹೈಟೆಕ್‌ ಮೀನು ಪಾರ್ಕ್‌, ಹೆಮ್ಮಕ್ಕಳ ಕ್ರೀಡಾ ಹಾಸ್ಟೆಲ್‌

Untitled-2

ಭಿಕ್ಷೆ ಬೇಡುವ ನೆಪದಲ್ಲಿ ಕಳ್ಳತನ

ಮೂಗಿ-ಕಿವುಡಿ ಅತ್ಯಾಚಾರ: 15 ವರ್ಷ ಜೈಲು

ಮೂಗಿ-ಕಿವುಡಿ ಅತ್ಯಾಚಾರ: 15 ವರ್ಷ ಜೈಲು

Untitled-2

ಕಾಡಾನೆ ದಾಳಿ: ಯುವಕ ಸಾವು

Untitled-2

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪಡಿಕ್ಕಲ್‌ ಸತತ ಶತಕ; ಕೇರಳವನ್ನು ಕಾಡಿದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.