ಉತ್ತರಾಯಣ ಪಯಣ

Team Udayavani, Jan 13, 2019, 12:30 AM IST

ಪ್ರತಿದಿನವೂ ಸಂಕ್ರಾಂತಿ ಸಂಭ್ರಮ
ಕುಂದಾಪುರ ಸಮೀಪದಲ್ಲಿ ನಮ್ಮ ಊರು. ನಮ್ಮ ಕಡೆಗಳಲ್ಲಿ ಸಂಕ್ರಾಂತಿಯನ್ನು ಇತರೆ ಹಬ್ಬಗಳಂತೆ ಒಂದು ಹಬ್ಬವಾಗಿ ಆಚರಿಸುವ ರೂಢಿಯಿದೆ. ಮಧ್ಯ ಕರ್ನಾಟಕ, ಹಳೇ ಮೈಸೂರು ಭಾಗಗಳಲ್ಲಿ ಆಚರಿಸಿದಷ್ಟು ಸಂಭ್ರಮ, ಸಡಗರ ನಮ್ಮ ಕಡೆ ಸಂಕ್ರಾಂತಿ ಹಬ್ಬದಲ್ಲಿ ಇರುವುದಿಲ್ಲ. ಇನ್ನು ನಮ್ಮ ಊರಿನಲ್ಲಿ ಸಂಕ್ರಾಂತಿ ಎಂದರೆ ಮೊದಲು ನೆನಪಾಗುವುದು ನಮ್ಮ ಊರಿನ ಹತ್ತಿರ ನಡೆಯುವ ದೊಡ್ಡ ಜಾತ್ರೆ. ಸಂಕ್ರಾಂತಿಯ ಸಂದರ್ಭದಲ್ಲೇ ಮಾರಣಕಟ್ಟೆಯಲ್ಲಿ ಬ್ರಹ್ಮಲಿಂಗೇಶ್ವರ ದೇವರ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಅದನ್ನು ನೋಡಲು ಸಾವಿರಾರು ಜನ ಸೇರುತ್ತಾರೆ. ನಮಗೂ ಕೂಡ ಚಿಕ್ಕ ವಯಸ್ಸಿನಲ್ಲಿ ಆ ಜಾತ್ರೆಗೆ ಹೋಗೋದು, ಅದನ್ನು ನೋಡೋದು ಅಂದ್ರೇನೆ ಒಂದು ಸಂಭ್ರಮ. ಚಿಕ್ಕ ವಯಸ್ಸಿನಲ್ಲಿ ಆ ಜಾತ್ರೆಗೆ ಹೋಗಲು ನಡೆಸುವ ತಯಾರಿ, ಆ ಖುಷಿ ಇನ್ನೂ ಮನಸ್ಸಿನಲ್ಲಿ ಹಾಗೇ ಇದೆ. ಆ ನಂತರ ವಿದ್ಯಾಭ್ಯಾಸ ಅಂತ ನಾನು ಹೊರಗೆ ಬಂದಿದ್ದರಿಂದ ಆ ಜಾತ್ರೆಯನ್ನು ನೋಡುವ ಅನುಭವ ಮಿಸ್‌ ಮಾಡಿಕೊಳ್ಳುತ್ತಿದ್ದೆ. 

ಇನ್ನು ಚಿತ್ರರಂಗಕ್ಕೆ ಬಂದ ಮೇಲಂತೂ ಇಲ್ಲಿನ ಕೆಲಸದ ಒತ್ತಡಗಳು, ಹಬ್ಬ-ಹರಿದಿನಗಳನ್ನೇ ಮರೆಸುತ್ತಿದ್ದವು. ಎಲ್ಲರೂ ಹಬ್ಬಗಳ ಆಚರಣೆಯಲ್ಲಿದ್ದರೆ, ನಾವು ಯಾವುದೋ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಿದ್ದೆವು. ಆ ನಂತರ ಮತ್ತೆ ಹಬ್ಬಗಳು ನೆನಪಾಗುತ್ತಿರುವುದು ಮದುವೆಯಾದ ನಂತರ. ಮದುವೆಯ ನಂತರ ಮನೆಯಲ್ಲಿ ಎಲ್ಲಾ ಹಬ್ಬಗಳ ಸಿದ್ಧತೆ ಮಾಡಿಕೊಳ್ಳುವುದು, ಅದನ್ನು ಚಾಚೂ ತಪ್ಪದೆ ಆಚರಿಸಿಕೊಳ್ಳುತ್ತ ಬರುತ್ತಿರುವುದು ನನ್ನ ಪತ್ನಿ ಪ್ರಗತಿ. ಈ ಬಾರಿಯೂ ಸಂಕ್ರಾಂತಿಗೆ ಮನೆಯಲ್ಲಿ ಒಂದಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಜ. 13ರಂದು ಮಂಗಳೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರದ 125ನೇ ದಿನದ ಸೆಲೆಬ್ರೇಷನ್‌ ನಡೆಯುತ್ತಿದೆ. ಮತ್ತೂಂದೆಡೆ ಜ. 18 ಕ್ಕೆ ನಾನು ಅಭಿನಯಿಸಿರುವ ಬೆಲ್‌ ಬಾಟಂ ಚಿತ್ರ ಕೂಡ ರಿಲೀಸ್‌ಗೆ ಆಗುವ ತಯಾರಿಯಲ್ಲಿದೆ. ಹೀಗಾಗಿ, ಈ ಬಾರಿಯ ಸಂಕ್ರಾಂತಿ ಹಬ್ಬ ಸಾಕಷ್ಟು ವಿಶೇಷತೆಗಳನ್ನು ತಂದುಕೊಡುತ್ತಿದೆ. ಎಲ್ಲರಿಗೂ ಸಂಕ್ರಾಂತಿ ಒಳ್ಳೆಯದನ್ನು ಮಾಡಲಿ.

ರಿಷಭ್‌ ಶೆಟ್ಟಿ 

ಸ್ನೇಹಕ್ಕೆ ಎಳ್ಳು ಸ್ವಾದಕ್ಕೆ ಬೆಲ್ಲ
ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ಕಾಲ ಮಕರ ಸಂಕ್ರಾಂತಿ. ಇದು ಉತ್ತರಾಯಣದ ಪರ್ವಕಾಲ. ದೇವಯಾನದ ಬಾಗಿಲು ತೆರೆಯುವ ಸಮಯ. ಕತ್ತಲೆಯ ಪ್ರಶ್ನೆಗಳಿಗೆ ಉತ್ತರ ಹೊಳೆಯುವ ಅವಸರ. ಆಚಾರನಿಷ್ಠನಿಗೆ ಪುಣ್ಯದ ಕಾಲ. ಭೂಮಿಯ ಉತ್ತರಾರ್ಧಕ್ಕೆ ಸೂರ್ಯನ ಬೆಳಕು, ಶಾಖ, ಜೀವಸಣ್ತೀಗಳು ಹೆಚ್ಚು ಮತ್ತು ಹೆಚ್ಚು ಕಾಲ ಸಿಗುವ ಸಂದರ್ಭ. ಆದುದರಿಂದ ಇದು ಬೆಳಕಿನ ಹಬ್ಬ. ಬೆಳಕು ನೀಡುವ ಸೂರ್ಯನ ಹಬ್ಬ . ಬೆಳಕನ್ನು ಬಯಸುವ “ಭಾ-ತರದ’ ಹಬ್ಬ .
ಈ ಕಾಲದಲ್ಲಿ ಚಳಿ ಎಲ್ಲವನ್ನು ಮಾಗಿಸಿ ಬಾಗಿಸುತ್ತದೆ. ಹೊಲದಲ್ಲಿ ಬೆಳೆ ಮಾಗಿ ಪೈರಾಗಿ ತುಂಬಿಕೊಳ್ಳುತ್ತದೆ. ನೀರಿನ ಹರಿವು ತಿಳಿಯಾಗಿ ತೀರ್ಥವಾಗುವ ಸಮಯ. ಹೊಲದಲ್ಲಿ ಸುಗ್ಗಿ , ಮನೆಯಲ್ಲಿ ಹುಗ್ಗಿ . ಮನದಲ್ಲಿ ಹಿಗ್ಗಿ ಎಲ್ಲರೂ ಹೂವಾಗಿ ಘಮಘಮಿಸುವ ಹಬ್ಬ ಮಕರ ಸಂಕ್ರಾಂತಿ. ಸ್ನೇಹಕ್ಕೆ ಎಳ್ಳು , ಸ್ವಾದಕ್ಕೆ ಬೆಲ್ಲ ಸ್ವೀಕರಿಸಿ ಒಳ್ಳೊಳ್ಳೆಯ ಮಾತಾಡಿದರೆ ಜಗವಾಗುವುದು ಆನಂದಧಾಮ. ಹೊರಗೆ ಬೆಳಕು; ಒಳಗೆ ಸ್ನೇಹ. ಒಳ-ಹೊರಗನ್ನು ಸೇರಿಸುವ ನಾಲಗೆಯಲ್ಲಿ ಸಿಹಿ-ಸವಿ. ಇವೇ ಈ ಹಬ್ಬದ ಪರಿ.
 ವಿದ್ವಾನ್‌ ಉಮಾಕಾಂತ ಭಟ್ಟ

ಪ್ರತೀವರ್ಷ ಅದೇ ದಿನ ಈ ಹಬ್ಬ !
ಸೂರ್ಯ ಪ್ರತಿ ತಿಂಗಳು ರಾಶಿಯಿಂದ ರಾಶಿಗೆ ತನ್ನ ಪಥ ಬದಲಿಸುತ್ತಲೇ ಇರುತ್ತಾನೆ. ಕರ್ಕಾಟಕ ಸಂಕ್ರಾಂತಿಯಿಂದ ದಕ್ಷಿಣ ದಿಕ್ಕಿಗೆ ಚಲಿಸುವ ಸೂರ್ಯನ ಮಕರ ರಾಶಿ ಪ್ರವೇಶವೆಂದರೆ ಉತ್ತರಕ್ಕೆ ಚಲನೆ ಆರಂಭವಾಗುವ ದಿನ ಅದೇ ಮಕರ ಸಂಕ್ರಮಣದ ಗಳಿಗೆ. ಮಕರ ಸಂಕ್ರಮಣ ಹದಿನಾಲ್ಕು ಅಥವಾ ಹದಿನೈದನೆಯ ತಾರೀಕಿನಂದು ಬರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಘಟನೆಯನ್ನು ಹೇಳುವುದಾದರೆ ಸೂರ್ಯ ತನ್ನ ಮಗ ಶನಿಯ ಮನೆಗೆ ಬರುವುದಂತೆ. ಅದೇ ಶಾಸ್ತ್ರದ ನಂಬಿಕೆಯಂತೆ ಅವರು ಯಾವಾಗಲೂ ಒಂದೇ ಮನೆಯಲ್ಲಿರುವುದು ದೋಷವಾಗಿ ಪರಿಣಮಿಸುತ್ತದಾದರೂ ಅಪರೂಪಕ್ಕೆ ಭೇಟಿ ಕೊಡುವುದು ಸ್ವಾಗತಾರ್ಹವೇ. ಅದೇನೇ ನಂಬಿಕೆಗಳಿದ್ದರೂ ಸೂರ್ಯ ಉತ್ತರಾಯಣಕ್ಕೆ ಕಾಲಿಡುವುದೆಂದರೆ ಮಂದತನವ ಕಳಚಿ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುವ ಪರ್ವ ದಿನ. ಇದು ಭೂಮಿಯ ಚಲನೆಯನ್ನನುಸರಿಸಿ ನಡೆಯುವ ಸೂರ್ಯನ ಹಬ್ಬ. 

ಸುಮಾರು ಒಂದು ಸಾವಿರ ವರ್ಷದ ಹಿಂದೆ ಮಕರ ಸಂಕ್ರಾಂತಿಯನ್ನು ಡಿಸೆಂಬರ್‌ 31ರಂದು ಆಚರಿಸಲಾಗುತ್ತಿತ್ತು ಎಂದು ಕೆಲವು ಮೂಲಗಳಿಂದ ತಿಳಿದು ಬರುತ್ತದೆ. ಅಂದರೆ ಭೂಮಿಯ ಚಲನೆಯ ಗತಿಗನುಗಣವಾಗಿಯೇ ಈ ದಿನದ ನಿರ್ಧಾರ. ಬೇರೆಲ್ಲ ಹಬ್ಬಗಳು ಹಿಂದುಮುಂದಾದೀತು ಆದರೆ, ಮಕರ ಸಂಕ್ರಾತಿಯೆಂಬುದು ಪುರಾತನ ಲೆಕ್ಕಾಚಾರಕ್ಕೂ ಆಧುನಿಕ ಲೆಕ್ಕಾಚಾರಕ್ಕೂ ಒಂದೇ ಉತ್ತರ ಕೊಡುವ ಗಣಿತ. ಇದು ಜಾತಿ-ಮತಗಳಿಗೆ ಸೀಮಿತವಲ್ಲದ, ಯಾರು ಒಪ್ಪಲಿ ಬಿಡಲಿ ತನಗೆ ತಾನೇ ಘಟಿಸುವ ಒಂದು ಸಹಜ ಕ್ರಿಯೆ. ಪೇಲವವಾಗಿದ್ದ ಪ್ರಕೃತಿ ಮೈ ಕೊಡವಿ ಮತ್ತೆ ಮೈ ದುಂಬಲು ತಯಾರಿ ನಡೆಸಲಾರಂಭಿಸುವ ಕಾಲ. ರೋಗ-ರುಜಿನಗಳು ಹಿಮ್ಮೆಟ್ಟುವ, ಕ್ರಿಮಿಕೀಟಗಳು ಅಂಜುವ ಕಾಲ. ರೈತಾಪಿ ಜನಗಳಿಗೆ ಸುಗ್ಗಿ ಕಾಲ. ಭೂತಾಯಿಗೆ, ಉಳುಮೆ ಸಹಕರಿಸಿದ ಜಾನುವಾರುಗಳಿಗೆ, ಸೂರ್ಯನಿಗೆ ಕೃತಜ್ಞತೆ ಸಮರ್ಪಿಸಿ ಮತ್ತೆ ಬೇಸಾಯಕ್ಕೆ ತಾಲೀಮು ನಡೆಸಲಾರಂಭಿಸುವ ಕಾಲ. ಕೆಲವೆಡೆ ರಾಸುಗಳನ್ನು ಕಿಚ್ಚಿಗೆ ಹಾಯಿಸುತ್ತಾರೆ. ಇದೊಂದು ಸಾಂಸ್ಕತಿಕ ಕ್ರೀಡೆಯಾದರೂ ಕಿಚ್ಚಿನ ಶಾಖದಿಂದ ರಾಸುಗಳ ಮೈಯಲ್ಲಿರುವ ಕ್ರಿಮಿಕೀಟಗಳು ನಾಶವಾಗುತ್ತವೆಂಬ ನಂಬಿಕೆಯೂ ಇದೆ. ಈ ಬಾರಿಯಂತೂ ಚಳಿಗೆ ತತ್ತರಿಸಿದ ಜನರಿಗೆ ಸಂಕ್ರಾಂತಿ ಹೆಚ್ಚಿನ ಸಡಗರವನ್ನೇ ತರುತ್ತಿದೆ. ಕೆಲವೆಡೆ ಸಂಕ್ರಾಂತಿ ಹಬ್ಬದಂದು ಬೆಳಗಿನ ಬಿಸಿಲಿಗೆ ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ. ಆಟದ ನೆಪದಲ್ಲಿ ಎಳೆ ಬಿಸಿಲಲ್ಲಿ ಮೀಯುವುದರಿಂದ ದೇಹಕ್ಕೆ ಬೇಕಾಗುವ ವಿಟಮಿನ್‌- ಡಿ  ದೊರೆಯುತ್ತದೆ. 

ಹಬ್ಬದ ಆಚರಣೆಯ ವಿಧಾನದಲ್ಲಿ ವೈವಿಧ್ಯ ಇದ್ದರೂ ಒಳ ತಿರುಳು ಒಂದೇ. ಈ ದಿನದ ಆಚರಣೆಯ ಅಂಗವಾಗಿ ಹಂಚುವ ಎಳ್ಳು ಬೆಲ್ಲಕ್ಕೂ ಅಷ್ಟೇ ಮಹತ್ವದ ಅರ್ಥವಿದೆ. ಎಳ್ಳು-ಬೆಲ್ಲ ಹಂಚುವವರು ಪರಸ್ಪರ ಕೊಡುಕೊಳ್ಳುವಾಗ ಆಡುವ, ಎಳ್ಳು-ಬೆಲ್ಲವ ಮೆದ್ದು ಒಳ್ಳೊಳ್ಳೆ ಮಾತಾಡಿ ಎಂಬ ಮಾತು ಚಿಪ್ಪಿನೊಳಗಿನ ಮುತ್ತಿನಂಥ ನುಡಿಗಟ್ಟು. ಎಳ್ಳು-ಬೆಲ್ಲ ಪಡಕೊಂಡವರು ತಮಗೆ ಕೊಟ್ಟವರಿಗೆ ಅದರಿಂದಲೇ ಒಂದಿಷ್ಟು ಮತ್ತೆ ಕೊಡುವ ಪದ್ಧತಿಯ ಒಳ ತಿರುಳು ಅರ್ಥಪೂರ್ಣ. ಕೆಲವೆಡೆ ಹಳ್ಳಿಗಳಲ್ಲಂತೂ ಹೆಣ್ಣು ಮಕ್ಕಳು ಸಂಕ್ರಾತಿಗೆ ವಾರವಿದೆಯೆನ್ನುವಾಗಲೇ ಸಡಗರದ ಆದರೆ ಅಷ್ಟೇ ತಾಳ್ಮೆಯ ಪರಿಶ್ರಮ ಬೇಡುವ ಸಂಕ್ರಾತಿ ಕಾಳಿನ ತಯಾರಿಗೆ ತೊಡಗಿಕೊಳ್ಳುತ್ತಾರೆ. ಈ ಕಾಳು ತಯಾರಿಗೆ ಅದರದ್ದೇ ಆದ ನಿಯಮಗಳಿವೆ. ಬೆಳಗಿನ ಚುಮುಚುಮು ಚಳಿಯಲ್ಲಿ ಎದ್ದು ಹದವಾದ ಸಕ್ಕರೆ ಪಾಕ ತಯಾರಿಸಿ, ಹುರಿದ ಎಳ್ಳನ್ನು ಅಗಲ ಬಟ್ಟಲಿಗೆ ಹಾಕಿಕೊಂಡು ಸಕ್ಕರೆ ಪಾಕವನ್ನು ಸ್ವಲ್ಪ ಸ್ವಲ್ಪವೇ ಬಟ್ಟಲಿಗೆ ಹೊಯ್ಯುತ್ತ, ಎಳ್ಳಿನ ಸುತ್ತ ಸಕ್ಕರೆ ಪಾಕ ಅಂಟಿಕೊಳ್ಳುವಂತೆ ಆ ಬಟ್ಟಲನ್ನು ಅಲುಗಿಸುತ್ತಾರೆ. ಕಾಳಿನ ಸುತ್ತ ಸಕ್ಕರೆ ಪಾಕ ಅಂಟುತ್ತ ಮುಳ್ಳು ಮುಳ್ಳಾಗಿ ರೂಪುಗೊಳ್ಳುವುದನ್ನು ನೋಡುತ್ತ ತಮ್ಮ ಕುಶಲತೆಗೆ ತಾವೇ ಸಂಭ್ರಮಿಸುತ್ತಾರೆ. ಇದು ಒಂದು ರೀತಿಯ ಕ್ರೀಡೆಯೇ. ಎಳ್ಳು-ಬೆಲ್ಲಗಳೆರಡೂ ಜಗಿದಂತೆ ರಸ ಜಿನುಗಿಸುವಂತದ್ದು. ಈ ರಸ ನಮ್ಮ ದೇಹದ ವಾತ-ಪಿತ್ತ-ಶೀತ ಪ್ರಕೋಪಗಳನ್ನು ಹತೋಟಿಯಲ್ಲಿಟ್ಟು, ರೋಗ ನಿರೋಧಕ ಪ್ರತಿರೋಧ ಬೆಳೆಸಿ, ಸಮಶೀತೋಷ್ಣವಾಗಿ ಕಾಪಿಡುವಂಥಾದ್ದು. ಎಳ್ಳು-ಬೆಲ್ಲದಂಥ ಸಮರಸದ ಬಾಳು ಬದುಕುತ್ತ, ಕಾರಿರುಳ ಹಾದಿ ದಾಟಿ ನಿಚ್ಚಳ ಪ್ರಜ್ಞೆಯೊಂದಿಗೆ ಬೆಳ್ಳಂಬೆಳಗಿನತ್ತ ಸಾಗೋಣ.

ಅನುಪಮಾ ಪ್ರಸಾದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಫೀಸು ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಗದಗಿನಲ್ಲಿ ಮೆಡಿಕಲ್‌ ಓದುತ್ತಿರುವ ಮಗಳಿಗೆ ಪೋನ್‌ ಮಾಡೋಣ ಅಂತ ಮೊಬೈಲ್‌ ತೆಗೆಯಲು ಪ್ಯಾಂಟಿನ ಬಲ ಜೇಬಿಗೆ ಕೈ ಹಾಕಿದೆ...

  • ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ ಗ್ರಂಥ ಧಾರಾವಾಹಿಯಾ ಗಿಯೂ, ಇತಿಹಾಸ ಅಧ್ಯಯನಗ್ರಂಥವಾಗಿಯೂ ತೆರೆದು ಕೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ "ಇಸಂ'...

  • ಹೊರಗಡೆ ಧೋ ಧೋ ಎಂದು ಮಳೆ ಸುರಿಯುತ್ತಿತ್ತು. ಜೋರು ಗಾಳಿ-ಮಳೆಗೆ ಕರೆಂಟ್‌ ಹೋದ ಕಾರಣ ಸೊಳ್ಳೆ ಕಾಟ ಬೇರೆ. ಸಾಲದ್ದಕ್ಕೆ ಸಿಗ್ನಲ್‌ ಸಿಗದ ಅಪ್ಪನ ರೇಡಿಯೋ "ಕುಯ್ಯೋ',...

  • ನೂರು ವರ್ಷ ದಾಟಿದರೂ ಕ್ರಿಯಾಶೀಲರಾಗಿರುವವರು ಇದ್ದಾರೆ. ಎಂಬತ್ತು ವರ್ಷದಲ್ಲಿ ಇನ್ನೆಷ್ಟು ಸಾಧಿಸುವುದಕ್ಕಿದೆ ಎಂದು ಕನಸು ಕಾಣುವವರಿದ್ದಾರೆ. ಎಪ್ಪತ್ತು ದಾಟಿದ...

  • ನಾವು ಪ್ರವಾಸ ಕಥನಗಳನ್ನು ಬರೆಯುತ್ತೇವೆ. ವಿಹಾರದ ಅನುಭವಗಳನ್ನು ಬರೆಯುತ್ತೇವೆ. ಆದರೆ, ಇಂಥಾದ್ದೊಂದು ಸಣ್ಣ ಘಟನೆ ಎಲ್ಲರ ಬದುಕಿನಲ್ಲಿಯೂ ಆಗಿರಬಹುದಲ್ಲ ! ಇದನ್ನು...

ಹೊಸ ಸೇರ್ಪಡೆ