ಅಮೆರಿಕದಲ್ಲಿ ಯಕ್ಷಯಾನ

Team Udayavani, Sep 22, 2019, 5:09 AM IST

ಅಮೆರಿಕದಲ್ಲಿ ಕನ್ನಡ ಭಾಷೆ-ಸಂಸ್ಕೃತಿಯನ್ನು ಜೀವಂತ ವಾಗಿರಿಸಿಕೊಂಡು ಅಲ್ಲಲ್ಲಿ “ಪುಟ್ಟ ಕರ್ನಾಟಕ’ಗಳನ್ನೇ ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಆ ಮಹಾದೇಶದಲ್ಲಿ ತೆಂಕುತಿಟ್ಟು ಯಕ್ಷಗಾನ ಕಲಾವಿದರು ಸಂಯೋಜಿಸಿದ “ಯಕ್ಷಯಾನ’ ಕನ್ನಡತನವನ್ನು ಕಾಪಿಡುವ ಆಶಯಕ್ಕೆ ಪೂರಕವಾಗುತ್ತಿದೆ !

ಸಾಗರವನ್ನು ಲಂಘಿಸುವ ಹನುಮಂತನ ಸಾಹಸದ ಕಥಾನಕವನ್ನು ಯಕ್ಷಗಾನದಲ್ಲಿ ತುಂಬ ಸಲ ಪ್ರದರ್ಶಿಸಿದ್ದೇವೆ. ರಾಮನ ಮುದ್ರಿಕೆಯನ್ನು ತನ್ನ ಶಿರದಲ್ಲಿ ಧರಿಸಿ ಸಾಗುವ ಹನುಮಂತನ ಪಾತ್ರದ ಪದ್ಯಗಳನ್ನು ಭಾಗವತನಾದ ನಾನೇ ತನ್ಮಯನಾಗಿ ಹಾಡಿದ್ದೇನೆ. ಯಕ್ಷಗಾನ ಕಲೆಯನ್ನು ಹೊತ್ತು ಸಾಗರವನ್ನು ಉತ್ತರಿಸಿ ಅಮೆರಿಕ ದೇಶದಲ್ಲಿಳಿದಾಗ ನನಗೆ ಈ ಕಥೆ ನೆನಪಾಯಿತು. ಆದರೆ, ನಾವು ಅಲ್ಲಿಗೆ ಯಕ್ಷಗಾನವನ್ನು ಒಯ್ದಿದ್ದೇವೆ ಎಂಬುದಕ್ಕಿಂತ ಯಕ್ಷಗಾನವೇ ನಮ್ಮನ್ನು ಅಲ್ಲಿಯವ ರೆಗೆ ನಡೆಯಿಸಿತು ಎಂದರೆ ಹೆಚ್ಚು ಸರಿಯಾದೀತು.

ಯಕ್ಷಗಾನ ಕಲಾವಿದರಿಗೆ ಸಮಾಜದಲ್ಲಿ ಮನ್ನಣೆಯಿಲ್ಲದ ದಿನಗಳಿದ್ದವು. ಈಗ ಹಾಗಿಲ್ಲ. ಯಕ್ಷಗಾನ ಕಲಾವಿದರಾದ ನಾವೇ ಅಮೆರಿಕದಲ್ಲಿ ದಿಗ್ವಿಜಯ ನಡೆಸಿ ಬಂದಿದ್ದೇವೆ. ಅಲ್ಲಿಯ ಕಲಾರಸಿಕರ ಕಿವಿಗಳಲ್ಲಿ ಚೆಂಡೆಯ ಧ್ವನಿ ಅನುರಣಿಸುವಂತೆ ಮಾಡಿದ್ದೇವೆ.

ಪ್ರಸಿದ್ಧಿಯ ದೃಷ್ಟಿಯಲ್ಲಿ ಮೇಲುಸ್ತರದಲ್ಲಿರುವ ಕಲಾವಿದರಿಗೆ ಸಿಗುವ ಸೌಲಭ್ಯವು ಸಾಧಾರಣ ಕಲಾವಿದರಿಗೆ ಸಿಗುವುದಿಲ್ಲ. ಕಲೆಗಾಗಿ ಜೀವನವನ್ನೇ ಸಮರ್ಪಿಸುವ ಸಾಮಾನ್ಯ ಕಲಾವಿದನಿಗೂ ಸಾಮಾಜಿಕವಾದ ಪರಿಗಣನೆಯನ್ನು ದೊರಕಿಸುವ ಆಶಯದಲ್ಲಿ ನಾನು, ಸಹೃದಯರ ಸಹಕಾರದೊಂದಿಗೆ ಆರಂಭಿಸಿದ “ಯಕ್ಷಧ್ರುವ ಪಟ್ಲ ಫೌಂಡೇಶನ್‌’ ಇನ್ನೇನು, ಐದನೆಯ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಇದೀಗ ಫೌಂಡೇಶನ್‌ನ ಶಾಖೆಗಳನ್ನು ಅಮೆರಿಕದಲ್ಲಿ ಸ್ಥಾಪಿಸುವ ಹಂಬಲವನ್ನಿರಿಸಿಕೊಂಡು ಆ ದೂರದೇಶದ ಪ್ರಯಾಣವನ್ನು ಕೈಗೊಂಡಿದ್ದೆವು. ಅಮೆರಿಕ ದಲ್ಲಿರುವ ಪುತ್ತಿಗೆ ಮಠದ ಸಹಕಾರದಿಂದಾಗಿ ಈ ಸಲದ ನಮ್ಮ ತಿರುಗಾಟ ಯಶಸ್ವಿಯಾಗಿ ಸಂಪನ್ನಗೊಂಡಿತು. ಹಾಗೆಂದು, ಅಮೆರಿಕಕ್ಕೆ ತೆಂಕುತಿಟ್ಟಿನ ಯಕ್ಷಗಾನವನ್ನು ಒಯ್ದವರಲ್ಲಿ ನಾನು ಮೊದಲಿಗನೇನೂ ಅಲ್ಲ.

ಈಗಾಗಲೇ ದುಬೈ, ಮಸ್ಕತ್‌, ಬೆಹರಿನ್‌, ಕತಾರ್‌ ಮುಂತಾದ ದೇಶಗಳಲ್ಲಿ ಫೌಂಡೇಶನ್‌ನ ಶಾಖೆಗಳು ಸಕ್ರಿಯವಾಗಿವೆ. ಇದೀಗ ಅಮೆರಿಕ ದೇಶದ ಮಿಸೌರಿ ರಾಜ್ಯದ ಸೈಂಟ್‌ಲೂಯಿಸ್‌ ಎಂಬ ದ್ವೀಪನಗರದಲ್ಲಿ ಈ ಸಂಸ್ಥೆ ಕಾರ್ಯಾಚರಿಸುವುದರೊಂದಿಗೆ ಯಕ್ಷಗಾನ ನಿಜವಾಗಿಯೂ ದಿಗ್ವಿಜಯ ಸಾಧಿಸಿದಂತಾಗಿದೆ. ಅಮೆರಿಕದಲ್ಲಿ ಯಾವುದೇ ಸಂಸ್ಥೆ ಅಲ್ಲಿನ ನಿಯಮಗಳಿಗನುಗುಣವಾಗಿ ನೋಂದಣಿಯಾಗದೆ ಕಾರ್ಯಾಚರಿಸುವಂತಿಲ್ಲ. ವಾಷಿಂಗ್ಟನ್‌ ಯೂನಿವರ್ಸಿಟಿಯ ಪ್ರೊಫೆಸರ್‌ ಗುಂಡ್ಮಿ ಅರವಿಂದ ಉಪಾಧ್ಯರಂಥ ಸಹೃದಯರ ಮುತುವರ್ಜಿಯಿಂದಾಗಿ ಅಮೆರಿಕದಲ್ಲಿ ಯಕ್ಷಗಾನ ಸಂಸ್ಥೆ ಸ್ಥಾಪನೆಗೊಳ್ಳುವ ಕನಸು ನನಸಾಗುವಂತಾಗಿದೆ. ಈ ನಿಟ್ಟಿನಲ್ಲಿ ಪುತ್ತಿಗೆ ಮಠದ ಅರ್ಚಕರಾದ ಯೋಗೀಂದ್ರ ಭಟ್ಟರು, ಶ್ರೀಧರ ಆಳ್ವ , ಮಹಾಬಲ ಶೆಟ್ಟಿಯವರಂಥವರ ಸಹಕಾರವೂ ಮಹತ್ವದ್ದಾಗಿದೆ. ನ್ಯೂಜೆರ್ಸಿ, ಮೇರಿಲ್ಯಾಂಡ್‌, ಮಿನ್ನೆಪಾಲಿಸ್‌, ಮಿಲ್ವಾಕಿ, ಲಾಸ್‌ ಏಂಜಲೀಸ್‌, ಸಿಯಾಟಲ್‌, ಸ್ಯಾನ್‌ ಹೋಸ್‌, ಸೈಂಟ್‌ ಲೂಯಿಸ್‌, ಡೆಟ್ರಾ ಯಿಟ್‌, ಹ್ಯೂಸ್ಟನ್‌, ಡಲ್ಲಾಸ್‌, ಸಿನ್‌ ಸಿಟಿ, ಬಾಸ್ಟನ್‌- ಹೀಗೆ ಸುಮಾರು 12 ರಾಜ್ಯಗಳ 15 ನಗರಗಳಲ್ಲಿ ಪಟ್ಲ ಫೌಂಡೇಶನ್‌ ವಿಸ್ತರಿಸಿಕೊಂಡಿದೆ. ಅಲ್ಲಿನ ಕಲಾಸಕ್ತರು ಆಯಾ ಶಾಖೆಗಳ ಹೊಣೆ ಹೊತ್ತಿದ್ದಾರೆ.

ಸುದೀರ್ಘ‌ ಪರಿಶ್ರಮದ ಯಕ್ಷಯಾನ
ಅಮೆರಿಕ ದೇಶದಲ್ಲಿ ನಮ್ಮ ಯಕ್ಷಯಾನವನ್ನು ಸಂಘಟಿಸುವುದರ ಹಿಂದೆ ಸುದೀರ್ಘ‌ವಾದ ಪರಿಶ್ರಮವಿದೆ. ಕಳೆದ ಜೂನ್‌ 26ರಂದು ಚೆನ್ನೈಯಲ್ಲಿ ವಿಮಾನವೇರಿ, ಜೂನ್‌ 29ರಂದು ನ್ಯೂಜೆರ್ಸಿಯಲ್ಲಿಳಿದಿದ್ದೆವು. ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಅಂದಿನ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿಯವರ ಸಮಕ್ಷ ನಮ್ಮ ಕಾರ್ಯಕ್ರಮಕ್ಕೆ ಶುಭನಾಂದಿಯಾಯಿತು. ನಮ್ಮೊಂದಿಗೆ ಭಾರತದಿಂದ ಬಂದಿದ್ದ 40 ಮಂದಿ ಯಕ್ಷಗಾನಾಭಿಮಾನಿಗಳು ವಿವಿಧ ಕಲಾಪಗಳಲ್ಲಿ ಭಾಗವಹಿಸಿ 15 ದಿನಗಳ ಬಳಿಕ ಸ್ವದೇಶಕ್ಕೆ ಮರಳಿದರು. ಕಲಾವಿದರಾದ ನಾವು ಎಂಟು ಮಂದಿ ಎರಡೂವರೆ ತಿಂಗಳು ಅಲ್ಲಿಯೇ ಉಳಿದು ಸುಮಾರು 18 ಪ್ರದರ್ಶನಗಳನ್ನು ನೀಡಿದೆವು. ಅಮೆರಿಕದ ಜೀವನ ಕ್ರಮಕ್ಕೆ ಹೊಂದುವಂತೆ, ವಾರದ ಕೊನೆಯ ಮೂರು ದಿನಗಳಲ್ಲಿ ಮಾತ್ರ ಪ್ರದರ್ಶನಗಳಿರುತ್ತಿದ್ದವು. ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಪಯಣಿಸುವ ಮಧ್ಯೆ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ. ಸುಮಾರು ಹತ್ತು ಪೌರಾಣಿಕ ಪ್ರಸಂಗಗಳನ್ನು ಪ್ರಸ್ತುತಿಪಡಿಸಿದೆವು. ಕೆಲವು ಪ್ರದರ್ಶನಗಳನ್ನು ಗರಿಷ್ಟ 800 ಮಂದಿ ವೀಕ್ಷಿಸಿದರು.

ಯಕ್ಷಗಾನ ಪ್ರೇಮಿ ವಾಸುದೇವ ಐತಾಳ್‌ ಅವರು ನಾಲ್ಕು ಕಂಬಗಳ ರಂಗಸ್ಥಳವನ್ನು ಸಿದ್ಧಪಡಿಸಿ, ತೆರೆದ ಸ್ಥಳದಲ್ಲಿ ನಮ್ಮ ತಂಡದ ಬಯಲಾಟವನ್ನು ಸಂಘಟಿಸಿದರು. ಆ ಪ್ರದರ್ಶನಕ್ಕೆ ಸುಮಾರು 750 ಮಂದಿ ಪ್ರೇಕ್ಷಕರಿದ್ದರು. “ನಾವಿಕ’ ಕನ್ನಡ ಸಮ್ಮೇಳನದಲ್ಲಿ ನಮ್ಮ ಯಕ್ಷಗಾನವನ್ನು ಕಂಡವರು ಚೌಕಿಗೆ ಬಂದು ಕಲಾವಿದರನ್ನು ಅಭಿಮಾನದಿಂದ ಅಭಿನಂದಿಸಿದರು.

ಮತ್ತೂಂದೆಡೆ ತೆಂಕು, ಬಡಗು ಮತ್ತು ಶಾಸ್ತ್ರೀಯ ಸಂಗೀತಗಳ ತೌಲನಿಕ ಅವಲೋಕನದ ಕಾರ್ಯಕ್ರಮ ನೀಡಿದೆವು. ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿದೆವು. ಪ್ರಾತ್ಯಕ್ಷಿಕೆಗಳನ್ನು ನೀಡಿದೆವು. ಅಲ್ಲಿನ ಮಕ್ಕಳು ಕೂಡ ನಮ್ಮೊಂದಿಗೆ ಕಿರೀಟ ಕಟ್ಟಿ ಕುಣಿದರು. ಕರಾವಳಿ ಪ್ರದೇಶಕ್ಕೆ ಹೊರಗಿನವರಾದ ಮಂಡ್ಯ-ಮೈಸೂರು-ಹುಬ್ಬಳ್ಳಿ ಕಡೆಯವರು ಕೂಡ ಯಕ್ಷಗಾನ ಪ್ರದರ್ಶನ ನೋಡಿ ಬೆರಗಾದರು. ನಾವು ಕನ್ನಡದಲ್ಲಿಯೇ ಪ್ರದರ್ಶನ ನೀಡಿದ್ದರೂ ಹಿಂದಿ ಮಾತನಾಡುವ ಉತ್ತರಭಾರತದ ಮಂದಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಆನಂದಿಸಿದರು. ಯಕ್ಷಗಾನದ ಬಗ್ಗೆ ಪ್ರಪ್ರಥಮ ಬಾರಿ ಸಂಶೋಧನೆ ನಡೆಸಿದ್ದ ವಿದುಷಿ ಮಾರ್ತಾ ಆ್ಯಶ್ಚನ್‌ ನಮ್ಮದೊಂದು ಪ್ರದರ್ಶನಕ್ಕೆ ಬಂದು ಹೋದರು. ವಿವಿಧ ದೇಶಗಳ ಮಂದಿ ಅಧ್ಯಯನದ ಆಸಕ್ತಿಯಲ್ಲಿ ಯಕ್ಷಗಾನವನ್ನು ಹತ್ತಿರದಿಂದ ಕಾಣುವ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.

ಅಲ್ಲಿನವರು “ಹೈಲಿ ಎಜುಕೇಟೆಡ್‌’ ಮಂದಿ. ವಿಜ್ಞಾನಿಗಳು, ವೈದ್ಯರು, ಇಂಜಿನಿಯರರು- ಹೀಗೆ. ಆದರೆ, ಯಕ್ಷಗಾನವನ್ನು ವೀಕ್ಷಿಸುವಾಗ ತಮ್ಮ “ಪ್ರತಿಷ್ಠೆ’ಯನ್ನು ಮರೆತು ಮುಗ್ಧವಾದ ಭಾವದಲ್ಲಿರುವುದು ನನ್ನನ್ನು ತುಂಬ ತಟ್ಟಿತು. ಅಮೆರಿಕದ ಅನೇಕ ಸಹೃದಯರ ಮನೆಗಳಲ್ಲಿ ನಾವು ಉಳಿದುಕೊಂಡಿದ್ದೇವೆ. ಅವರ ಆತಿಥ್ಯ ನಮ್ಮ ಪಾಲಿಗೆ ಅವಿಸ್ಮರಣೀಯ ಅನುಭವ. ಅವರಿಂದಾಗಿ ನಮ್ಮ ತಂಡದ ಕಲಾವಿದರಿಗೆ ನಾಸಾ ಸಂಶೋಧನ ಕೇಂದ್ರ, ನಯಾಗರ ಜಲಪಾತಗಳನ್ನು ವೀಕ್ಷಿಸುವ ಸದವಕಾಶವೂ ದೊರೆಯಿತು.

ಅಮೆರಿಕದ ಮನೆಗಳಲ್ಲಿ ಸಂಸ್ಕೃತ, ಸಂಗೀತಾದಿ ಸಹೃದಯ ವಿಚಾರಗಳು ಇನ್ನೂ ಜೀವಂತವಾಗಿವೆ. ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ನಮಗಿಂತ ಹೆಚ್ಚಾಗಿ ಅವರೇ ಮಾಡುತ್ತಿದ್ದಾರೇನೋ ಅಂತ ನನಗನ್ನಿಸಿತು. ಶಾಸ್ತ್ರೀಯ ಕಲೆಗಳ ಜೊತೆಗೆ ಯಕ್ಷಗಾನವನ್ನು ಕೂಡ ಕಲಿಯುವ ಆಸಕ್ತಿಯನ್ನು ಅಮೆರಿಕದ ಮಕ್ಕಳು ತೋರಿಸಿದರೆ, ನಮ್ಮ “ಯಕ್ಷಯಾನ ’ ಸಾರ್ಥಕವಾದಂತೆ. ಜೊತೆಗೆ, ಯಕ್ಷಗಾನದ ಮೂಲಕ ಕನ್ನಡ ಭಾಷೆಯ ಪುನಶ್ಚೇತನಕ್ಕೂ ಇಂಬು ದೊರಕಿದಂತಾಗುತ್ತದೆ.

ಆರಂಭದಲ್ಲಿ ನಮ್ಮ ಕಾರ್ಯಕ್ರಮದ ಉದ್ಘಾಟನೆಯ ಪ್ರಯುಕ್ತ ಸ್ವಾಮೀಜಿ ಮತ್ತು ಮುಖ್ಯಮಂತ್ರಿಗಳು ಬಂದು ಸೇಬು ಗಿಡಗಳನ್ನು ನೆಟ್ಟರು. ಆ ಸೇಬು ಗಿಡಗಳು ಹೇಗೆ ಬೆಳೆದು, ಶಾಖೆಗಳಲ್ಲಿ ಹಬ್ಬಿ, ಹಣ್ಣು ನೀಡಿ ಕೃತಾರ್ಥಗೊಳ್ಳುತ್ತದೋ ಹಾಗೆಯೇ ಅಮೆರಿಕದಲ್ಲಿ ಯಕ್ಷಗಾನವೆಂಬ ಬೀಜ ಮೊಳೆತು, ವೃಕ್ಷವಾಗಿ ಬೆಳೆದು, ನವರಸ ಫ‌ಲಗಳನ್ನು ನೀಡುವಂತಾಗಬೇಕೆಂಬ ಆಶಯ ನನ್ನದು.

ಪಟ್ಲ ಸತೀಶ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೇಘಾಲಯ ರಾಜ್ಯವು ಹಿಮಾಲಯದ ವಿಶೇಷ ಅನುಗ್ರಹಕ್ಕೊಳಗಾದ ಸುಮಸುಂದರ ತರುಲತೆಗಳ ನಾಡು. ಈ ರಾಜ್ಯದ ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯೇ...

  • ಪಾಶ್ಚಾತ್ಯ ವಾದ್ಯಕ್ಕೆ ಭಾರತೀಯ ಸಂಸ್ಕಾರ ಕೊಟ್ಟವರು ಕದ್ರಿ ಗೋಪಾಲನಾಥರು ವಿದ್ಯಾ ಭೂಷಣ ನಮ್ಮ ಊರಿನವರು. ಅಂದರೆ, ದಕ್ಷಿಣಕನ್ನಡ ಜಿಲ್ಲೆಯವರು ಎಂದು ಹೇಳುವುದಕ್ಕೆ...

  • ಅಮರ್ತ್ಯ ಸೇನ್‌ ಅವರಂತೆ ಅಭಿಜಿತ್‌ ಬ್ಯಾನರ್ಜಿ ಅವರದ್ದು ಕೂಡ ಅಭಿವೃದ್ಧಿ ಕೇಂದ್ರಿತ ಸಂಶೋಧನೆ. ಕೊನೆಗೂ ಈ ಅಭಿವೃದ್ಧಿಯನ್ನು ಸಾಧಿಸುವ ಭಾಗವಾಗಿ ನಡೆಯುವ ಬಡತನ...

  • ಆ ಮುದಿಬ್ರಾಹ್ಮಣ ತನ್ನ ಕೈಗಳಲ್ಲಿ ಕರ್ಣನಿಂದ ದಾನವಾಗಿ ಪಡೆದ ಕರ್ಣಕುಂಡಲವನ್ನು ಹಿಡಿದುಕೊಂಡು ನಿಧಾನವಾಗಿ ಹೆಜ್ಜೆಗಳನ್ನು ಊರುತ್ತ ಹೋಗುತ್ತಿದ್ದ. ಅವನ ಹಣ್ಣು...

  • ನಮ್ಮ ಲೇಔಟಿನ ಚಿಕ್ಕ ದಾರಿಯ ಪಕ್ಕದಲ್ಲೊಂದು ಪುಟ್ಟ ಗಿಡ ದೊಡ್ಡದಾಯಿತು. ಹಸು, ಕುರಿ, ಮೇಕೆಗಳು ಗಿಡದ ರೆಂಬೆಗಳನ್ನು ತಿಂದು ಹಾಕಿದರೂ, ಸರಿಯಾಗಿ ನೀರುಣಿಸುವವರು...

ಹೊಸ ಸೇರ್ಪಡೆ