ಬಾಟಲಿಯಿಂದ ಹೈಡ್ರಾಲಿಕ್ ನಿಯಂತ್ರಕದ ಎಫೆಕ್ಟ್!
Team Udayavani, Jun 29, 2019, 9:39 AM IST
ಕಂಪೆನಿಗಳಲ್ಲಿ ತೆರೆಯಲ್ಪಡುವ ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳಲು ಹೈಡ್ರಾಲಿಕ್ ನಿಯಂತ್ರಕಗಳನ್ನು ಬಳಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ಬಾಗಿಲಿಗೆ ನೀರಿನ ಬಾಟಲಿ ತೂಗುಹಾಕುವ ಮೂಲಕ ಕೇವಲ 2 ರೂ. ವೆಚ್ಚದಲ್ಲಿ ಬಾಗಿಲು ನಿಯಂತ್ರಕ ರೂಪಿಸಿರುವುದು ಈಗ ಅಂತರ್ಜಾಲದಲ್ಲಿ ಕಿಚ್ಚೆಬ್ಬಿಸಿದೆ.
ಬಾಗಿಲಿನ ಮೇಲೆ ಮೊಳೆಯೊಂದಕ್ಕೆ ತೂಗುಹಾಕಲಾಗಿರುವ ನೀರಿನ ಬಾಟಲಿಯ ಭಾರದಿಂದಾಗಿ ತೆರೆಯಲ್ಪಟ್ಟ ಬಾಗಿಲು ನಿಧಾನವಾಗಿ ಮುಚ್ಚಿಕೊಳ್ಳುವುದು ಇದರ ತತ್ವ. ಇಂಥ ಸಣ್ಣ ಶ್ಲಾಘನೀಯ ಪ್ರಯತ್ನವನ್ನು ಉದ್ಯಮಿ ಆನಂದ್ ಮಹಿಂದ್ರಾ ಅವರು, ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ಅದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. “ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಲಾದ ಈ ಉಪಾಯವನ್ನು ನಾವು ಹೇಗೆ ಶ್ಲಾಘನೀಯ ತಂತ್ರಜ್ಞಾನವನ್ನಾಗಿ ಬದಲಾಯಿಸಬಹುದು ಎಂಬುದನ್ನು ಆಲೋಚಿಸಬೇಕಿದೆ’ ಎಂದು ಸಾರ್ವಜನಿಕರನ್ನು ಮಹಿಂದ್ರಾ ಕೇಳಿಕೊಂಡಿದ್ದಾರೆ.