ವಿವಾದಗಳು

Team Udayavani, May 30, 2019, 6:00 AM IST

ವಿಶ್ವಕಪ್‌ ಎನ್ನುವುದು ಕೇವಲ ಕ್ರಿಕೆಟ್‌ ಅಷ್ಟೇ ಅಲ್ಲ, ವಿವಾದಗಳ ಕಣವೂ ಹೌದು. ಇಂಥ ಕೆಲವು ಘಟನೆಗಳತ್ತ ಕಿರು ನೋಟ…

2003
ಶೇನ್‌ ವಾರ್ನ್ಗೆ ನಿಷೇಧ
ಇದು 2003ರ ವಿಶ್ವಕಪ್‌ನಲ್ಲಿ ಸಂಭವಿಸಿದ ಘಟನೆ. ಆಸ್ಟ್ರೇಲಿಯ ಪ್ರಶಸ್ತಿ ಉಳಿಸಿಕೊಳ್ಳಲು ಸಕಲ ಯೋಜನೆ ರೂಪಿಸಿತ್ತು. ಈ ನಡುವೆ ವಾರ್ನ್ ನಿಷೇಧಿತ ದ್ರವ್ಯ “ಮೊಡುರೆಟಿಕ್‌’ ಸೇವಿಸಿರುವುದು ಪತ್ತೆಯಾಗಿ ಸಿಕ್ಕಿಬಿದ್ದರು. ಅವರನ್ನು ತವರಿಗೆ ಕಳುಹಿಸಲಾಯಿತಲ್ಲದೇ ಒಂದು ವರ್ಷ ನಿಷೇಧಕ್ಕೂ ಒಳಗಾದರು. ವಾರ್ನ್ ಅವರ ಹಠಾತ್‌ ನಿರ್ಗಮನದಿಂದ ಆಸ್ಟ್ರೇಲಿಯದ ಯೋಜನೆ ಹಳಿ ತಪ್ಪುವ ಸಾಧ್ಯತೆಯಿತ್ತು. ಆದರೆ ಆಸ್ಟ್ರೇಲಿಯ ಯಾವುದೇ ಗೊಂದಲಕ್ಕೆ ಒಳಗಾಗದೇ ಸಂಘಟಿತ ಹೋರಾಟ ನೀಡಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು.

2007
ಬಾಬ್‌ ವೂಲ್ಮರ್‌ ನಿಗೂಢ ಸಾವು
2007ರ ವಿಶ್ವಕಪ್‌ ಕೂಟ ಕೆರಿಬಿಯನ್‌ನಲ್ಲಿ ಸಾಗುತ್ತಿತ್ತು. ಕಳಪೆ ನಿರ್ವಹಣೆಯಿಂದ ಪಾಕಿಸ್ಥಾನ ಬೇಗನೇ ಕೂಟದಿಂದ ಹೊರಬಿತ್ತು. ಈ ನಡುವೆ ಕೋಚ್‌ ಬಾಬ್‌ ವೂಲ್ಮರ್‌ ಅವರ ನಿಗೂಢ ಸಾವಿನಿಂದ ಕ್ರಿಕೆಟ್‌ ವಿಶ್ವ ತಲ್ಲಣಗೊಂಡಿತು. ಸಾವು ಹೇಗಾಯಿತೆಂಬ ಬಗ್ಗೆ ಅನುಮಾನ, ಆರೋಪ ಹೆಚ್ಚಾಯಿತು. ಕೊನೆಗೂ ಸಹಜ ಕಾರಣದಿಂದ ಅವರು ನಿಧನರಾದರೆಂದು ತನಿಖೆಯಿಂದ ಮನದಟ್ಟಾಯಿತು.

1996
ಪಂದ್ಯ ತ್ಯಜಿಸಿದ ಆಸೀಸ್‌, ವಿಂಡಿಸ್‌
ಕೊಲಂಬೋದ ಸೆಂಟ್ರಲ್‌ ಬ್ಯಾಂಕ್‌ ಹತ್ತಿರ ಎಲ್‌ಟಿಟಿಇ ಬಾಂಬ್‌ ದಾಳಿ ನಡೆಸಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಆಸ್ಟ್ರೇಲಿಯ ಮತ್ತು ವೆಸ್ಟ್‌ಇಂಡೀಸ್‌ ಶ್ರೀಲಂಕಾಕ್ಕೆ ಪ್ರಯಾಣಿಸಲು ಹಿಂದೇಟು ಹಾಕಿದವು.
ಲೀಗ್‌ ಪಂದ್ಯ ತ್ಯಜಿಸಿದ್ದರಿಂದ ಶ್ರೀಲಂಕಾಕ್ಕೆ ಲಾಭವಾಯಿತು. ಬಣದ ಅಗ್ರಸ್ಥಾನಕ್ಕೇರಿ ಮುನ್ನಡೆದ ಶ್ರೀಲಂಕಾ ಒಂದೊಂದೇ ಹೆಜ್ಜೆ ಮುದಿಡುತ್ತ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನೇ ಸೋಲಿಸಿ ಪ್ರಶಸ್ತಿ ಗೆದ್ದು ಬೀಗಿತು.

2003
ಫ್ಲವರ್‌, ಒಲೊಂಗ ಪ್ರತಿಭಟನೆ
ಜಿಂಬಾಬ್ವೆಯಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಎಂದು ಆ್ಯಂಡಿ ಫ್ಲವರ್‌ ಮತ್ತು ಹೆನ್ರಿ ಒಲೊಂಗ ಭಾರೀ ಪ್ರತಿಭಟನೆಗೆ ಮುಂದಾದರು. ಪಂದ್ಯದ ವೇಳೆ ಕಪ್ಪು ಆರ್ಮ್ಬ್ಯಾಂಡ್‌ ಧರಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆಟಗಾರರ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಸಿಕ್ಕಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಾರಣ ವಿಶ್ವಕಪ್‌ ಬಳಿಕ ಇವರಿಬ್ಬರೂ ಕ್ರಿಕೆಟ್‌ ಆಟದಿಂದಲೇ ದೂರ ಆಗಬೇಕಾಯಿತು.

1992
ಮಳೆ ನಿಯಮಕ್ಕೆ ದ. ಆಫ್ರಿಕಾ ಬಲಿ
ಮಳೆ ನಿಯಮದಿಂದಾಗಿ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಹಂತದಲ್ಲಿ ಮುಗ್ಗರಿಸಿದ ಈ ಘಟನೆ 1992ರ ವಿಶ್ವಕಪ್‌ನಲ್ಲಿ ನಡೆದಿತ್ತು. ಮಳೆ ಬಂದ ಹಂತದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 13 ಎಸೆತಗಳಲ್ಲಿ 23 ರನ್‌ ಬೇಕಿತ್ತು. ಮಳೆ ನಿಂತು ಆಟಗಾರರು ಮತ್ತೆ ಮೈದಾನಕ್ಕೆ ಇಳಿದಾಗ 7 ಎಸೆತಗಳಲ್ಲಿ 22 ರನ್‌ ತೆಗೆಯುವಂತೆ ಸ್ಕೋರ್‌ಬೋರ್ಡ್‌ ಸೂಚಿಸುತ್ತಿತ್ತು. ಬಳಿಕ ಮಳೆ ನಿಯಮದಂತೆ ಒಂದು ಎಸೆತದಲ್ಲಿ 22 ರನ್‌ ಗಳಿಸುವ ಅಸಾಧ್ಯ ಗುರಿಯೆಂದು ಸ್ಪಷ್ಟಪಡಿಸಲಾಯಿತು.

1996
ಈಡನ್‌ನಲ್ಲಿ ಪ್ರೇಕ್ಷಕರ ದಾಂಧಲೆ
ಭಾರತ ಮತ್ತು ಶ್ರೀಲಂಕಾ ನಡುವಣ ಸೆಮಿಫೈನಲ್‌ ಹೋರಾಟದಲ್ಲಿ. ಭಾರತ ಗೆಲ್ಲಲು 252 ರನ್‌ ಗಳಿಸಬೇಕಾಗಿತ್ತು. ತೆಂಡುಲ್ಕರ್‌ ಕ್ರೀಸ್‌ನಲ್ಲಿ ಇರುವವರೆಗೆ ಎಲ್ಲವೂ ಶಾಂತವಾಗಿತ್ತು. ತೆಂಡುಲ್ಕರ್‌ ಔಟಾಗುತ್ತಲೇ ವಿಕೆಟ್‌ಗಳು ಉರುಳಿದಾಗ ಪ್ರೇಕ್ಷಕರ ಸಹನೆಯ ಕಟ್ಟೆಯೊ ಡೆಯಿತು. ಬೃಹತ್‌ ಸೋಲು ಖಚಿತ ವಾಗುತ್ತಲೇ ಬಾಟಲಿ ಸಹಿತ ಕೈಗೆ ಸಿಕ್ಕಿದ ವಸ್ತುಗಳು ಅಂಗಣಕ್ಕೆ ಬೀಳತೊಡಗಿದವು. ಕೊನೆಗೆ ಶ್ರೀಲಂಕಾ ವಿಜಯಿಯೆಂದು ಘೋಷಿಸಲಾಯಿತು.

1999
ಕ್ರೋನಿಯೆ ವಿವಾದ
1999ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ನಾಯಕ ಹ್ಯಾನ್ಸಿ ಕ್ರೋನ್ಯೆ ಮತ್ತು ಕೋಚ್‌ ಬಾಬ್‌ ವೂಲ್ಮರ್‌ ಮಾಡಿರುವ ತಂತ್ರ ವಿವಾದಕ್ಕೆ ಕಾರಣವಾಯಿತು. ಮೈದಾನದಲ್ಲಿದ್ದ ಕ್ರೋನಿಯೆ ಕಿವಿಗೆ ಹಾಕಿದ ಇಯರ್‌ಪೀಸ್‌ ಮೂಲಕ ವೂಲ್ಮರ್‌ ಅವರ ಸೂಚನೆಯನ್ನು ಪಾಲಿಸುತ್ತಿದ್ದರು. ಇದನ್ನು ಗಮನಿಸಿದ ಗಂಗೂಲಿ ಅಂಪಾಯರ್‌ಗಳ ಗಮನಕ್ಕೆ ತಂದರು. ಮ್ಯಾಚ್‌ ರೆಫ್ರಿ ಸಲಹೆಯಂತೆ ಅಂಪಾಯರ್ ಇಯರ್‌ಪೀಸ್‌ ತೆಗೆಯುವಂತೆ ಕ್ರೋನ್ಯೆಗೆ ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ