ದ್ವಿಚಕ್ರ ವಾಹನ ಕಳ್ಳರ ಬಂಧನ
Team Udayavani, Apr 9, 2019, 3:00 AM IST
ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ರಸ್ತೆ ನಿವಾಸಿ ದಿನೇಶ್ (21), ಮಹೇಶ್ (24), ಪ್ರವೀಣ್ ಕುಮಾರ್(32) ಹಾಗೂ ಷರೀಫ್(21) ಬಂಧಿತರು. ಆರೋಪಿಗಳಿಂದ 28 ಲಕ್ಷ ರೂ. ಮೌಲ್ಯದ 55 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ವಿಜಯನಗರ, ಮಾಗಡಿರಸ್ತೆ, ನಾಯಂಡಹಳ್ಳಿ ಸೇರಿ ನಗರದ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನ ಹಾಗೂ ಆಟೋಗಳನ್ನು ನಕಲಿ ಕೀ ಬಳಸಿ ಕ್ಷಣಾರ್ಧದಲ್ಲಿ ಕಳ್ಳತನ ಮಾಡುತ್ತಿದ್ದರು.
ಆರೋಪಿಗಳ ಪೈಕಿ ಮಹೇಶ್ ಹಾಗೂ ಪ್ರವೀಣ್ ಕಳವು ಮಾಡಿದ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ನಂತರ ಪರಿಚಯಸ್ಥರು ಹಾಗೂ ಇತರರಿಗೆ ಮಾರಾಟ ಮಾಡುತ್ತಿದ್ದರು. ಬಂದ ಹಣವನ್ನು ನಾಲ್ವರು ಹಂಚಿಕೊಂಡು ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.