ಜನರ ನಾಡಿಮಿಡಿತದ ಅರಿವಲ್ಲಿದೆ ಗೆಲುವಿನ ಮೂಲ

Team Udayavani, Jun 8, 2019, 6:00 AM IST

ಕಾಂಗ್ರೆಸ್‌ನಲ್ಲಿ ಕಾರ್ಯಕ್ರಮಗಳೇ ಇಲ್ಲ. ಕಾರ್ಯಕ್ರಮಗಳಿಲ್ಲದ ಯಾವುದೇ ಸಂಘಟನೆ ಹೆಚ್ಚು ಕಾಲ ಚಟುವಟಿಕೆಯಲ್ಲಿ ಇರುವುದು ಸಾಧ್ಯವಿಲ್ಲ. ಯುವ ಜನರಿಗೆಲ್ಲಿಂದ ಆಸಕ್ತಿ ಬರಬೇಕು? ಚುನಾವಣೆ ಬಂದಾಗ ಕೈ ಮುಗಿದರೆ ಜನಸಾಮಾನ್ಯರು ಮತ ನೀಡುತ್ತಾರೆ ಎಂಬ ಭಾವನೆಯೇ ಕಾಂಗ್ರೆಸ್ಸಿನ ಅವನತಿಗೆ ಮತ್ತೂಂದು ಕಾರಣವಾಯಿತು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸಂಸತ್ತಿಗೆ ನಡೆದ ಲೋಕ ಸಮರದ ಫ‌ಲಿತಾಂಶ ಹೊರಬಿದ್ದು ಆಗಲೇ ದಿನಗಳುರುಳಿದವು. ನರೇಂದ್ರ ಮೋದಿ ಮತ್ತೂಮ್ಮೆ ದೇಶದ ಪ್ರಧಾನಿಯಾಗಿದ್ದಾರೆ. ಈಗಲೂ ಚುನಾವಣೆಯ ಸೋಲು ಗೆಲುವಿನ ಅವಲೋಕನಗಳು, ವಿಮರ್ಶೆ ವಿಶ್ಲೇಷಣೆಗಳು ನಡೆಯುತ್ತಲೇ ಇವೆ. ಯಾರು ಗೆದ್ದರು, ಯಾರು ಸೋತರು ಎನ್ನುವುದಕ್ಕಿಂತ ಏಕೆ ಸೋತರು, ಏಕೆ ಗೆದ್ದರು ಎನ್ನುವ ಬಗೆಗಿನ ವಿಮರ್ಶೆಗಳೇ ಪ್ರಮುಖವಾಗುತ್ತವೆ. ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಭಾರತೀಯ ಜನತಾ ಪಾರ್ಟಿಗಳ ಜಿದ್ದಾಜಿದ್ದಿನ ನಡುವೆ ಹತ್ತಾರು ಪ್ರಾದೇಶಿಕ ಪಕ್ಷಗಳೂ ಸದ್ದು ಮಾಡಿದವಾದರೂ, ಏಕಮೇವಾದಿತ್ವ ಸಾಧಿಸಿದ್ದು ಬಿಜೆಪಿಯೇ. ಬಿಜೆಪಿ ಮತ್ತು ಕಾಂಗ್ರೆಸ್‌ ಹಣಾಹಣಿಯಲ್ಲಿ ಮುಗಿಲು ಮುಟ್ಟಿದವರು ಮತ್ತು ನೆಲ ಕಚ್ಚಿದವರ ಸೋಲು ಗೆಲುವಿನ ಲೆಕ್ಕಾಚಾರವೇ ಆಸಕ್ತಿದಾಯಕ.

ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆ ಬಿಜೆಪಿಗರೆಲ್ಲರೂ ತಮ್ಮ ಸ್ವಂತ ವರ್ಚಸ್ಸಿನಿಂದೇನೂ ಗೆದ್ದಿಲ್ಲ. ಮೋದಿ ಮೇನಿ ಯಾದಲ್ಲಿ ಚಳಿ ಕಾಯಿಸಿದವರೇ ಹೆಚ್ಚು. ಹಾಗಂತ ವೈಯಕ್ತಿಕ ವಿಚಾರಗಳೂ ಗಣನೆಗೆ ಬಂದಿಲ್ಲ ಎನ್ನುವಂತೆಯೂ ಇಲ್ಲ. ಬಿಜೆಪಿಯ ಮಾಸ್ಟರ್‌ ಮೈಂಡ್‌, ಸಂಘಟನಾ ಶಕ್ತಿ ಆರ್‌ಎಸ್‌ಎಸ್‌ ಯೋಜನೆ, ಯೋಚನೆಗಳೂ ಇವರ ಗೆಲುವಿನ ಮೂಲದಲ್ಲಿವೆ.

ವಾಕ್‌ ಪ್ರವೀಣ, ನರೇಂದ್ರ ಮೋದಿ ದಿಟ್ಟ ನಿರ್ಧಾರಗಳಿಗೂ ಹೆಸರಾಗಿದ್ದಾರೆ. ಸ್ವಾತಂತ್ರ್ಯಾ ನಂತರದ ಎಪ್ಪತ್ತು ವರ್ಷಗಳಲ್ಲಿ ಕೇವಲ ಓಟ್ ಬ್ಯಾಂಕ್‌ ರಾಜಕಾರಣದಿಂದಲೇ ದಿನ ದೂಡುತ್ತಿದ್ದ ಜಾತ್ಯತೀತರಿಗೆ ಪರ್ಯಾಯವಾಗಿ ತನ್ನ ಚುರುಕಿನ, ದಿಟ್ಟ ನಡವಳಿಕೆಗಳಿಂದಾಗಿ ಯುವ ಮನಸ್ಸುಗಳನ್ನು ಗೆಲ್ಲುವಲ್ಲಿ ಮೋದಿ ಯಶಸ್ವಿಯಾದರು.

ಯುವ ಜನರ ನಾಡಿ ಮಿಡಿತವನ್ನು ಅರಿತು ಪ್ರೇರಕ ಶಕ್ತಿಯಾಗಿದ್ದಾರೆ. ವಿದ್ಯಾವಂತ ಯುವ ಜನರು ಇಂದು ಬದುಕುವುದಕ್ಕಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಏನನ್ನಾದರೂ ಮಾಡಿಕೊಳ್ಳುತ್ತಾರೆ. ಅವರಿಗೆ ಖುಷಿ ಕೊಡುವ ವಾತಾವರಣ ಬೇಕಾಗಿದೆ. ಧನಾತ್ಮಕವೋ, ಋಣಾತ್ಮಕವೋ, ಅದೀಗ ಬಿಜೆಪಿಯಲ್ಲಿ ಸಿಗುತ್ತದೆ.

ಪಕ್ಷ ಸಂಘಟನೆಯಲ್ಲಿ ಆರ್‌ಎಸ್‌ಎಸ್‌ನ ಶಿಸ್ತು ಅಳವಡಿಸಿಕೊಂಡಿರುವ ಬಿಜೆಪಿ, ದೇಶದ ಪ್ರತಿಯೊಬ್ಬ ಪ್ರಜೆಯೊಂದಿಗೂ ನಿಕಟ, ಸಂಪರ್ಕ ಸಂವಹನ ಹೊಂದಿದೆ. ಸಮಯ ಸಿಕ್ಕಾಗಲೆಲ್ಲ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವ ಮೋದಿ, ಕಾರ್ಯಕರ್ತರ ಪಾಲಿಗೆ ಕೈಗೆಟಕುವ ಐಶ್ವರ್ಯವೇ ಆಗಿ ಹೋಗಿದ್ದಾರೆ. ಸಾಮಾನ್ಯ ಕಾರ್ಯಕರ್ತನೂ ಜನಸಾಮಾನ್ಯರೊಂದಿಗೆ ಅದೇ ನೀತಿಯನ್ನು ಅನುಸರಿಸುತ್ತಾನೆ. ಮೋದಿಯ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡಿಸುತ್ತಾನೆ. ಕಾರ್ಯಕರ್ತರ ಅದೇ ನಗುಮೊಗವು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹೆಗಲಿಗೆ ಕೈ ಹಾಕಿ, ತೀರಾ ನಿಕಟವರ್ತಿಯಾಗಿ ಮಾತನಾಡಿಸುತ್ತಾರೆ. ಇದೇ ಬಿಜೆಪಿ ಗೆಲುವಿಗೆ ಮೂಲ ಕಾರಣವಾಗಿರುತ್ತದೆ.

ರಾಷ್ಟ್ರೀಯ ಕಾಂಗ್ರೆಸ್‌ನಲ್ಲೂ ನರೇಂದ್ರ ಮೋದಿಯಂತಹ ವರ್ಚಸ್ಸಿನ ನಾಯಕರಿಗೇನೂ ಕೊರತೆಯಿಲ್ಲ. ಆದರೆ ಅವರು ಮುನ್ನೆಲೆಗೆ ಬರುತ್ತಿಲ್ಲ ಅಥವಾ ಬರಲು ಪಟ್ಟಭದ್ರರು ಬಿಡುತ್ತಿಲ್ಲ. ಅದೇ ಹಳೆ ಸಂಪ್ರದಾಯಗಳಡಿ ನರಳುತ್ತಿರುವ ಕಾಂಗ್ರೆಸಿಗರ ಅಹಂಕಾರ, ಸ್ವಾರ್ಥಗಳೇ ಪಕ್ಷವನ್ನು ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಜಾತಿ ರಾಜಕಾರಣ; ವಂಶಾಡಳಿತ ಪದ್ಧತಿಗಳಿಂದ ಜನ ರೋಸಿ ಹೋಗಿರುವುದನ್ನು ಇವರು ಗ್ರಹಿಸಿಯೇ ಇಲ್ಲದಿ ರುವುದು ಇಂದಿನ ಈ ಸ್ಥಿತಿಗೆ ಕಾರಣ. ಬದಲಾದ ಯುವ ಜನತೆಯ ಮಾನಸಿಕ ಸ್ಥಿತಿಯನ್ನು ಅರಿಯುವಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ಎಡವಿದೆ.

ಬಿಜೆಪಿಯಲ್ಲಿ ಹಿಂದೂ ಸಮಾಜೋತ್ಸವ, ರಕ್ಷಾಬಂಧನ, ಸ್ವಚ್ಛ ಭಾರತ ಮುಂತಾದ ಕಾರ್ಯಕ್ರಮಗಳು ಯುವಜನರನ್ನು ಸದಾ ಸಕ್ರಿಯರನ್ನಾಗಿ ಮಾಡುತ್ತದೆ. ಕಾಂಗ್ರೆಸ್‌ನಲ್ಲಿ ಕಾರ್ಯ ಕ್ರಮಗಳೇ ಇಲ್ಲ. ಕಾರ್ಯಕ್ರಮಗಳಿಲ್ಲದ ಯಾವುದೇ ಸಂಘಟನೆ ಹೆಚ್ಚು ಕಾಲ ಚಟುವಟಿಕೆಯಲ್ಲಿ ಇರುವುದು ಸಾಧ್ಯವಿಲ್ಲ. ಯುವ ಜನರಿಗೆಲ್ಲಿಂದ ಆಸಕ್ತಿ ಬರಬೇಕು? ಚುನಾವಣೆ ಬಂದಾಗ ಕೈ ಮುಗಿದರೆ ಜನಸಾಮಾನ್ಯರು ಮತ ನೀಡುತ್ತಾರೆ ಎಂಬ ಅಹಂಕಾರದ ನಡೆಯೇ ಕಾಂಗ್ರೆಸ್ಸಿನ ಅವನತಿಗೆ ಮತ್ತೂಂದು ಕಾರಣ. ಹೆಗಲಿಗೆ ಕೈ ಹಾಕುವುದು ಬಿಡಿ; ಎದುರು ಸಿಕ್ಕರೆ ಮಂದಹಾಸ ಬೀರಲೂ ಸಮಯವಿಲ್ಲದವರ ನಡೆಗೆ ಜನಮಾನ್ಯರು ಯಾಕೆ ಮರುಳಾಗಬೇಕು?

ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿ, ಶೀಲಾ ದೀಕ್ಷಿತ್‌ ದಿಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಬಿಟ್ಟರೆ ಕಾಂಗ್ರೆಸ್‌ ಸರಕಾರದಲ್ಲಿ ಮಹಿಳೆಯರಿಗೆ ಹೇಳಿಕೊಳ್ಳುವಂಥ ಜವಾಬ್ದಾರಿಗಳನ್ನು ನೀಡಲಾಗಿಲ್ಲ. ಆದರೆ ಮೋದಿ ತನ್ನ ಸರಕಾರ ದಲ್ಲಿ ರಾಷ್ಟ್ರ ರಕ್ಷಣೆಯ ಹೊಣೆಗಾರಿಕೆಯನ್ನು, ಜವಳಿ ಸಚಿವಾಲಯವನ್ನು, ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಮಹಿಳೆಯರಿಗೆ ನೀಡುವ ಮೂಲಕ ಗೌರವದ ಸ್ಥಾನಮಾನ ಒದಗಿಸಿತ್ತು(ನಿರ್ಮಲಾ ಸೀತಾರಾಮನ್‌, ಸ್ಮತಿ ಇರಾನಿ, ಸುಷ್ಮಾ ಸ್ವರಾಜ್‌. ಈಗ ನಿರ್ಮಲಾ ಸೀತಾರಾಮನ್‌ ಮತ್ತು ಸ್ಮತಿ ಇರಾನಿಯವರಿಗೆ ಮಂತ್ರಿಗಿರಿ ಸಿಕ್ಕಿದೆ). ಬಿಜೆಪಿಗೆ ಇದೂ ಒಂದು ಪ್ಲಸ್‌ ಪಾಯಿಂಟ್.

ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಕಳಪೆ ಫ‌ಲಿತಾಂಶ ಅನುಭವಿಸಲು ಜೆಡಿಎಸ್‌ನೊಂದಿಗೆ ಕೈ ಜೋಡಿಸಿರುವುದೂ ಒಂದು ಕಾರಣ ಎಂದರೆ ತಪ್ಪಾಗದು. ಈಗಂತೂ ಹಾಸನ, ರಾಮನಗರ ಬಿಟ್ಟರೆ ಕರ್ನಾಟಕದೆಲ್ಲೆಡೆ ಹೆಸರೇ ಇಲ್ಲದ ಪಕ್ಷವಾಗಿದೆ ಜೆಡಿಎಸ್‌. ಅಪ್ಪ, ಮಕ್ಕಳು, ಮೊಮ್ಮಕ್ಕಳ ಈ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅವರ ಷರತ್ತುಗಳಿಗೆ ತಲೆಬಾಗಬೇಕಾಗಿ ಬಂದಿರುವುದು ನೂರ ಮೂವತ್ತು ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಕಾಂಗ್ರೆಸಿಗೆ ಒದಗಿರುವ ದುರ್ದೈವ. ರಾಷ್ಟ್ರ, ರಾಜ್ಯ ಮಟ್ಟದ ನಾಯಕರು ಮೈತ್ರಿ ಮಾಡಿ ಕೊಂಡರೂ, ತಳಮಟ್ಟದ ಕಾರ್ಯಕರ್ತರು ಅದನ್ನು ಒಪ್ಪಿಕೊಂಡಿಲ್ಲ ಎನ್ನುವುದು ಇದೀಗ ಸ್ಪಷ್ಟವಾಗಿದೆ. ಆಗಲೇ ಯಡಿಯೂರಪ್ಪರಿಗೆ ಸಿಎಂ ಪಟ್ಟ ಬಿಟ್ಟುಕೊಟ್ಟು, ವಿರೋಧ ಪಕ್ಷದ ಸಾಲಲ್ಲಿ ಕೂತಿದ್ದರೆ ಅವರ ಆಡಳಿತವನ್ನಾದರೂ ಆಧಾರವಾಗಿಟ್ಟುಕೊಂಡು ಚರ್ಚಿಸಬಹುದಿತ್ತು.

ರಾಜ್ಯದಲ್ಲಿ ಇಪ್ಪತ್ತೆಂಟರಲ್ಲಿ ಕನಿಷ್ಟ ಎರಡಂಕಿಯ ಎಂಪಿ ಸ್ಥಾನಗಳನ್ನೂ ಗೆಲ್ಲಲಾಗದ ಸ್ಥಿತಿ ತಂದುಕೊಂಡಿತು. ಇಲ್ಲಿ ಕಾಂಗ್ರೆಸ್‌ ಮೇಲೇಳಬೇಕಾದರೆ ಮೈತ್ರಿಯಿಂದ ಹೊರಬಂದು ಮತ್ತೆ ಸ್ವತಂತ್ರವಾಗಿ ಚುನಾವಣೆಗೆ ತಾಲೀಮು ಶುರು ಮಾಡಬೇಕೇನೋ ಎಂದೆನಿಸುತ್ತಿದೆ. ಸಮಯ ಸಾಧಕರಿಗೆ ಹೊರದಾರಿ ತೋರಿಸಬೇಕು, ಪಕ್ಷ ಸಂಘಟನೆಗೆ ಒತ್ತು ನೀಡಿ ಜನಸಾಮಾನ್ಯರೊಂದಿಗೆ ಬೆರೆಯುವ ಕಾರ್ಯಕರ್ತರ ತಂಡಗಳ ರಚನೆಯಾಗಬೇಕು.

ಕನಿಷ್ಟ ಚೆನ್ನಾಗಿ ಮಾತಾಡಬಲ್ಲ, ಕೌಶಲ್ಯವಿರುವ ಯುವ ಜನರನ್ನು ಗುರುತಿಸಿ ಸರಕಾರದ, ಪಕ್ಷದ ಅಜೆಂಡಾಗಳ ಬಗ್ಗೆ ಪ್ರಚಾರ ನಡೆಸಬೇಕು. ಎಲ್ಲಕ್ಕೂ ಮುಖ್ಯವಾಗಿ ನಾಯಕರು ಕಾರ್ಯಕರ್ತರ ಬೆನ್ನೆಲುಬು ಆಗಿರಬೇಕು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಯುವ ಜನರಿಗೆ ಆದ್ಯತೆ ನೀಡಬೇಕು. ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್‌ ಕಾರ್ಯಕಾರಿಣಿ ಬದಲಾಗಬೇಕು. ನರೇಂದ್ರ ಮೋದಿಯನ್ನು ತುಚ್ಛವಾಗಿ ಟೀಕಿಸುವ ಬದಲು ಕರಾರುವಕ್ಕಾಗಿ, ನಿರ್ದಿಷ್ಟ ವಿಷಯದ ಮೇಲೆ ಎದುರಿಸಬಲ್ಲ ಒಬ್ಬ ಸಮರ್ಥ ಸೇನಾನಿ ಪಕ್ಷದ ನೇತೃತ್ವ ವಹಿಸಿಕೊಳ್ಳಬೇಕು. ದೇಶದ ರಕ್ಷಣೆ, ದಲಿತರ, ಯುವಜನರ ಹಾಗೂ ಮಹಿಳಾ ಆಶೋತ್ತರಗಳ ಬಗ್ಗೆ ಅಭಿಮಾನ ಹಾಗೂ ಬದ್ಧತೆ ಇರುವ ವ್ಯಕ್ತಿಯಿಂದಲೇ ಪಕ್ಷವು ಮುನ್ನಡೆಯಬೇಕು. ಅದು ಮಕ್ಕಳಾಟವಾಗಬಾರದು. ಜೈ ಜವಾನ್‌, ಜೈ ಕಿಸಾನ್‌ ಜೊತೆಗೆ ಜೈ ಆದಿವಾಸಿ ಘೋಷಣೆಗೂ ಮನ್ನಣೆ ಸಿಗಬೇಕು.

-ಪಾಂಗಾಳ ಬಾಬು ಕೊರಗ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಭಾರತ ಸರ್ಕಾರದ ವತಿಯಿಂದ "ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ'(NCRB) ಸ್ವಯಂಚಾಲಿತ ಮುಖ ಗುರುತು ಪತ್ತೆ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ....

  • "ಹನಿ ಹನಿಗೂಡಿದರೆ ಹಳ್ಳ- ತೆನೆ ತೆನೆ ಕೂಡಿದರೆ ಬಳ್ಳ' (Little drops of water make a mighty ocean)ಎನ್ನುವ ಗಾದೆಯ ಆಧಾರದ ಮೇಲೆ ಈ ಠೇವಣಿಯನ್ನು ಪ್ರಾರಂಭಿಸಲಾಗಿದೆ. ಈ ಠೇವಣಿಯ ಮಹಾಶಿಲ್ಪಿ,...

  • ಕಳೆದ ಎರಡು -ಮೂರು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಹಿಂಜರಿತ ಅನುಭವಿಸುತ್ತಿದೆ. ಬ್ಯಾಂಕುಗಳಲ್ಲಿ ಗೃಹಸಾಲ ದೊಡ್ಡ ಪ್ರಮಾಣದಲ್ಲಿ ಸುಸ್ತಿಯಾಗುತ್ತಿದೆ....

  • ಜೀವನ ಅಂದರೆ ಅಲೆಗಳಂತೆ. ಇಲ್ಲಿ ಭಾವದ ಏರು-ತಗ್ಗುಗಳಿವೆ. ಸಹಿಸಲಾಗದ ದುಃಖ, ಒಬ್ಬನೇ ಸಹಿಸಿಕೊಂಡು ಅನುಭವಿಸುವ ನೋವು, ಒಂಟಿಯಾಗಿಯೇ ಸಾಗಬೇಕು, ಸಾಧಿಸಬೇಕು ಮೌನವಾಗಿಯೇ...

  • ಅಂತರ್ಜಾಲವನ್ನು ಜಾಲಾಡಲು ಬ್ರೌಸರ್‌ಗಳು ಬೇಕೇ ಬೇಕು. "ಗೂಗಲ್‌ನ ಕ್ರೋಮ್‌' ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸುತ್ತಿರುವ ಬ್ರೌಸರ್‌. ಅತಿ ವೇಗವಾಗಿ ಕಾರ್ಯಾಚರಿಸುತ್ತದೆ...