ಸಮರ್ಥ ಸಂಪುಟ

Team Udayavani, Jun 1, 2019, 6:00 AM IST

ನರೇಂದ್ರ ಮೋದಿಯ ಎರಡನೇ ಅವಧಿಯ ಸಂಪುಟವೂ ಕೆಲವೊಂದು ಅಚ್ಚರಿಗಳಿಂದ ಕೂಡಿದೆ. ಪ್ರತಾಪ್‌ ಚಂದ್ರ ಸಾರಂಗಿ, ಜೈ ಶಂಕರ್‌, ನಿರ್ಮಲಾ ಸೀತಾರಾಮನ್‌, ಅಮಿತ್‌ ಶಾ ಈ ಪೈಕಿ ಕೆಲವು ಅಚ್ಚರಿಗಳು. ಚುನಾವಣೆ ಮುಗಿಯುವ ತನಕ ಅಮಿತ್‌ ಶಾ ಕೇಂದ್ರ ಸಂಪುಟ ಸೇರಬಹುದು ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಅದೇ ರೀತಿ ಫ‌ಲಿತಾಂಶ ಪ್ರಕಟವಾಗುವ ತನಕ ಪ್ರತಾಪ್‌ ಚಂದ್ರ ಸಾರಂಗಿ ಎಂಬ ವ್ಯಕ್ತಿಯ ಹೆಸರನ್ನು ಒಡಿಶಾ ಹೊರತುಪಡಿಸಿ ದೇಶದ ಉಳಿದೆಡೆಗಳ ಜನರು ಕೇಳಿರುವ ಸಾಧ್ಯತೆ ವಿರಳ. ವಿದೇಶಾಂಗ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದ ಜೈ ಶಂಕರ್‌ ಸರಕಾರಿ ಸೇವೆಯಿಂದ ನಿರ್ಗಮಿಸಿದ ಕೆಲವೇ ತಿಂಗಳಲ್ಲಿ ತಾನು ಸೇವೆಯಲ್ಲಿದ್ದ ಇಲಾಖೆಗೇ ಸಚಿವನಾಗಿ ಬರುತ್ತಾರೆಂದು ಸ್ವತಹ ಊಹಿಸಿರಲಿಕ್ಕಿಲ್ಲ. ಇಂಥ ಪುಟ್ಟ ಪುಟ್ಟ ಅಚ್ಚರಿಗಳನ್ನು ಕೊಡುವುದು ಮೋದಿಯ ವೈಶಿಷ್ಟé.

ಯಾವ ದಿಕ್ಕಿನಿಂದ ನೋಡಿದರೂ ಎಲ್ಲ ಸಚಿವರು ಅವರ ಪಡೆದುಕೊಂಡಿರುವ ಹುದ್ದೆಗಳಿಗೆ ಅರ್ಹತೆ ಹೊಂದಿದ್ದಾರೆ ಎಂಬ ಭಾವನೆ ಸಾರ್ವತ್ರಿಕವಾಗಿದೆ.ಧರ್ಮೆದ್ರ ಪ್ರಧಾನ್‌, ಸದಾನಂದ ಗೌಡ, ನಿತಿನ್‌ ಗಡ್ಕರಿ, ರಾಮ್‌ವಿಲಾಸ್‌ ಪಾಸ್ವಾನ್‌, ಸ್ಮತಿ ಇರಾನಿ, ಪ್ರಕಾಶ್‌ ಜಾಬ್ಡೇಕರ್‌ ಈ ಮುಂತಾದ ದಿಗ್ಗಜರು ಮರಳಿ ಮಂತ್ರಿಯಾಗುವುದು ಬಹುತೇಕ ಖಾತರಿಯಿತ್ತು. ಈ ಪೈಕಿ ಕೆಲವರಿಗೆ ಹಿಂದೆ ನಿಭಾಯಿಸುತ್ತಿದ್ದ ಖಾತೆಗಳನ್ನು ಕೊಡಲಾಗಿದೆ. ಇದರ ಅರ್ಥ ಇಷ್ಟೇ ಅವರು ಈ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು. ಅಂತೆಯೇ ಕೆಲವು ಮಂದಿಯನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡಲಾಗಿದೆ. ಖಾತೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಮುಲಾಜಿಲ್ಲದೆ ಕಿತ್ತು ಹಾಕಲಾಗುವುದು ಎಂಬ ಪರೋಕ್ಷ ಸಂದೇಶ ಇದು. ಇದೇ ವೇಳೆ ರಾಜ್ಯವರ್ಧನ್‌ ರಾಠೊಡ್‌ರಂಥ ಕೆಲವು ಸಮರ್ಥರನ್ನು ಅನಿವಾರ್ಯವಾಗಿ ಕೈಬಿಡಬೇಕಾಗಿ ಬಂದಿರುವುದು ಮಾತ್ರ ಬೇಸರದ ಸಂಗತಿ.

ಸಚಿವರಲ್ಲಿ ಅತಿ ಹೆಚ್ಚು ಗಮನ ಸೆಳೆದವರು ಪ್ರತಾಪ್‌ ಚಂದ್ರ ಸಾರಂಗಿ. ಅತಿ ಸಣ್ಣ, ಸಣ್ಣ, ಮಧ್ಯಮ ಉದ್ದಿಮೆ, ಪಶು ಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ ಖಾತೆಗಳ ಸಹಾಯಕ ಸಚಿವರಾಗಿರುವ ಸಾರಂಗಿಯ ರಾಜಕೀಯ ಬದುಕು ಒಂದು ವಿಸ್ಮಯ. ಸಾರಂಗಿ ಈ ಸಲ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದು ಬಂದ ಬಳಿಕ ಭಾರೀ ಜನಪ್ರಿಯರಾಗಿದ್ದಾರೆ. ಇದಕ್ಕೆ ಕಾರಣ ಅವರ ಬಡತನದ ಹಿನ್ನೆಲೆ ಮತ್ತು ಸರಳತೆ. ಸೈಕಲ್‌ನಲ್ಲಿ ಸಂಚರಿಸುವ, ಗುಡಿಸಲು ವಾಸಿಯಾಗಿರುವ ಸಾರಂಗಿಯನ್ನು ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡದ್ದು ಮಾತ್ರವಲ್ಲದೆ ಸಚಿವರನ್ನಾಗಿಯೂ ಮಾಡುವ ಮೂಲಕ ಪ್ರಜಾಪ್ರಭುತ್ವದ ನೈಜ ತಾಕತ್ತು ಏನು ಎಂಬುದನ್ನು ಬಿಜೆಪಿ ನಾಯಕತ್ವ ದೇಶಕ್ಕೆ ತೋರಿಸಿಕೊಟ್ಟಿದೆ. ಹಾಗೆಂದು ಸಾರಂಗಿ ರಾಜಕೀಯಕ್ಕೆ ಹೊಸಬರೇನೂ ಅಲ್ಲ. ಎರಡು ಸಲ ಶಾಸಕರಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ಜೈ ಶಂಕರ್‌ ಸಚಿವರಾಗುತ್ತಾರೆ ಎಂದು ಘೋಷಣೆಯಾದಾಗಲೇ ಅವರಿಗೆ ಯಾವ ಖಾತೆ ಸಿಗಬಹುದು ಎನ್ನುವುದನ್ನು ಹೆಚ್ಚಿನವರು ಊಹಿಸಿದ್ದರು. ಈ ರೀತಿ ಸಮರ್ಥ ಅಧಿಕಾರಿಗಳನ್ನು ಕರೆ ತಂದು ಆಡಳಿತದ ಚುಕ್ಕಾಣಿ ಕೊಡುವ ಪರಂಪರೆ ಉತ್ತಮ ನಡೆ. ಅಧಿಕಾರಿಗಳಾಗಿ ಗಳಿಸಿರುವ ಅನುಭವದ ಲಾಭ ದೇಶಕ್ಕೆ ಸಿಗುತ್ತದೆ ಎನ್ನುವುದು ಒಂದು ಕಾರಣವಾದರೆ ಅಧಿಕಾರಿಗಳು ನಿಗದಿಪಡಿಸಿದ ಗುರಿಯನ್ನು ತಲುಪುವ ಸ್ವಭಾವವನ್ನು ಹೊಂದಿರುತ್ತಾರೆ.ಈ ಪ್ರಯೋಗವನ್ನು ಮೊದಲ ಅವಧಿಯಲ್ಲೂ ಮಾಡಲಾಗಿತ್ತು. ಈ ಪೈಕಿ ಜನರಲ್‌ ವಿ. ಕೆ. ಸಿಂಗ್‌ ಹೊರತುಪಡಿಸಿ ಉಳಿದವರಿಂದ ನಿರೀಕ್ಷಿಸಿದಷ್ಟು ಫ‌ಲಿತಾಂಶ ಪಡೆದುಕೊಳ್ಳಲು ಮೋದಿಗೆ ಸಾಧ್ಯವಾಗಿಲ್ಲ. ಅದಾಗ್ಯೂ ಅವರು ಇನ್ನೊಂದು ಪ್ರಯತ್ನವನ್ನು ಮಾಡಿದ್ದಾರೆ.ಅತ್ಯಂತ ಮಹತ್ವದ ವಿದೇಶಾಂಗ ಖಾತೆಯ ನಿಭಾವಣೆಯಲ್ಲಿ ಜೈಶಂಕರ್‌ಗೆ ಅವರ ಅನುಭವ ಸಹಾಯಕ್ಕೆ ಬರಬಹುದು.

ಹಣಕಾಸು ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿರುವ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್‌ ಮುಂದೆ ಭಾರೀ ದೊಡ್ಡ ಸವಾಲು ಇದೆ. ಚುನಾವಣೆ ಸಂದರ್ಭದಲ್ಲಿ ಹಾಗೂ ಅದಕ್ಕೂ ಮೊದಲು ಘೋಷಿಸಿರುವ ಅನೇಕ ಸಮಾಜ ಕಲ್ಯಾಣ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಅವರು ತನ್ನೆಲ್ಲ ಅನುಭವ ಮತ್ತು ಜಾಣ್ಮೆಯನ್ನು ಬಳಸಿಕೊಳ್ಳಬೇಕಾಗಬಹುದು. ವಾಣಿಜ್ಯ ಸಚಿವೆಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ನಿರ್ಮಲಾ ಸೀತಾರಾಮನ್‌ ಹಣಕಾಸು ಇಲಾಖೆಯಲ್ಲೂ ಯಶಸ್ವಿಯಾಗುತ್ತಾರೆ ಎಂಬ ನಿರೀಕ್ಷೆಯಿದೆ.

ಕೇಂದ್ರದಲ್ಲಿ ಪ್ರಧಾನಿಯ ಅನಂತರದ ಸ್ಥಾನ ಗೃಹ ಸಚಿವರದ್ದು ಎನ್ನುವುದು ಲಾಗಾಯ್ತಿಯಿಂದ ಪಾಲನೆಯಾಗುತ್ತಿರುವ ಕ್ರಮ. ಹೀಗೊಂದು ಲಿಖೀತ ನಿಯಮ ಇಲ್ಲದಿದ್ದರೂ ಬಹುತೇಕ ಸರಕಾರಗಳಲ್ಲಿ ಗೃಹ ಸಚಿವರೇ ಪ್ರಧಾನಿ ಅನಂತರದ ಪ್ರಮುಖ ವ್ಯಕ್ತಿಯಾಗಿದ್ದಾರೆ. ಇದೀಗ ಮೊದಲ ಸಲ ಲೋಕಸಭೆಗೆ ಆಯ್ಕೆಯಾಗಿ ಬಂದಿರುವ ಅಮಿತ್‌ ಶಾ ಅವರಿಗೆ ಈ ಹುದ್ದೆ ಸಿಕ್ಕಿದೆ. ಮೋದಿ ಮತ್ತು ಶಾ ನಡುವಿನ ಕೆಮಿಸ್ಟ್ರಿ ಚೆನ್ನಾಗಿದೆ. ಬಹಳ ಪ್ರಜ್ಞಾವಂತಿಕೆಯಿಂದಲೇ ಅಮಿತ್‌ ಶಾ ಅವರನ್ನು ಈ ಹುದ್ದೆಗೆ ಆರಿಸಲಾಗಿದೆ. ಅಂತೆಯೇ ಅವರ ಎದುರು ಇರುವ ಸವಾಲು ಕೂಡ ದೊಡ್ಡದೇ. ಚಾಣಕ್ಯನೆಂದೇ ಅರಿಯಲ್ಪಡುವ ಶಾ ಈ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ದೇಶೀಯ ಕಾರ್ಪೊರೇಟ್‌ ಕಂಪನಿಗಳ ಮತ್ತು ಹೊಸ ಉತ್ಪಾದಕ ಕಂಪೆನಿಗಳ ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸುವ ಮೂಲಕ ಹಣಕಾಸು ಸಚಿವೆ...

  • ಸೈದ್ಧಾಂತಿಕ‌ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ...

  • ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

  • ಹೂಸ್ಟನ್‌ ಕಾರ್ಯಕ್ರಮ ಪಾಕ್‌ ಹಾಗೂ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ಮಾಡಿ ದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ...

ಹೊಸ ಸೇರ್ಪಡೆ