ಪಂಡಿತರಿಗೆ ಮತದಾನ ಅವಕಾಶ: ಕ್ರಾಂತಿಕಾರಿ ಕ್ರಮ

Team Udayavani, Apr 5, 2019, 6:00 AM IST

ಈ ಚುನಾವಣೆಯಲ್ಲಿ ಕಾಶ್ಮೀರ ವಿಚಾರ ಮುನ್ನೆಲೆಗೆ ಬಂದಿದೆ.ಇದಕ್ಕೆ ಪಕ್ಷವೊಂದರ ಪ್ರಣಾಳಿಕೆಯಲ್ಲಿರುವ ಸೇನೆಯ ವಿಶೇಷಾಧಿಕಾರ ಕಾಯಿದೆಯನ್ನು ಪರಿಶೀಲಿಸುವ ಭರವಸೆ ಒಂದು ಕಾರಣವಾದರೆ ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಉಮರ್‌ ಅಬ್ದುಲ್ಲ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಹೇಳಿ ವಿವಾದದ ಕಿಡಿ ಹಚ್ಚಿರುವುದು ಇನ್ನೊಂದು ಕಾರಣ. ಈ ವಿವಾದಗಳ ನಡುವೆ ಚುನಾವಣಾ ಆಯೋಗ ಕಾಶ್ಮೀರದ ನಿರಾಶ್ರಿತ ಪಂಡಿತ ಸಮುದಾಯಕ್ಕೆ ತಮ್ಮ ಕ್ಷೇತ್ರದ ಹೊರಗೆ ವಿಶೇಷ ಮತಗಟ್ಟೆಯಲ್ಲಿ ಕಾಶ್ಮೀರದ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ನೀಡಿರುವ ವಿಚಾರ ಹೆಚ್ಚು ಗಮನ ಸೆಳೆದಿಲ್ಲ.

ಮೂರು ದಶಕಗಳಿಂದ ಹುಟ್ಟೂರಿನಿಂದ ದೂರವಾಗಿ ಎಲ್ಲೆಲ್ಲೊ ನಿರಾಶ್ರಿತರಂತೆ ಬದುಕುತ್ತಿರುವ ಕಾಶ್ಮೀರಿ ಪಂಡಿತರಿಗೆ ತಮ್ಮ ಕ್ಷೇತ್ರದ ಅಭ್ಯರ್ಥಿಗೆ ಮತ ನೀಡಲು ಅವಕಾಶ ನೀಡಿರುವ ಈ ಕ್ರಮ ನಿಜಕ್ಕೂ ಕ್ರಾಂತಿಕಾರಿಯಾದದ್ದು. ಇದರ ಜತೆಗೆ ಅವರಿಗೆ ಅಂಚೆ ಮತದಾನಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಕಾಶ್ಮೀರಿ ಪಂಡಿತರನ್ನು ಮುಖ್ಯವಾಹಿನಿಗೆ ತರಲು ಚುನಾವಣಾ ಆಯೋಗ ಒಂದು ಸಕರಾತ್ಮಕ ಕ್ರಮ ಕೈಗೊಂಡಂತಾಗಿದೆ.

ಈ ಮೊದಲು ಕಾಶ್ಮೀರಿ ವಲಸಿಗರಿಗೆ ಅಂಚೆ ಮತದಾನಕ್ಕೆ ಅವಕಾಶವಿರಲಿಲ್ಲ. ಅವರು ಮತದಾನ ಮಾಡಲು ದಿಲ್ಲಿ ಅಥವಾ ಜಮ್ಮುವಿನ ವಿಶೇಷ ಮತಗಟ್ಟೆಗೆ ಹೋಗಬೇಕಾಗಿತ್ತು. ಶ್ರೀನಗರ, ಅನಂತನಾಗ್‌ ಮತ್ತು ಬಾರಾಮುಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು ಒಂದೂವರೆ ಲಕ್ಷ ಪಂಡಿತ ಸಮುದಾಯದ ಮತದಾರರಿದ್ದಾರೆ. ಆದರೆ ದೇಶದ ಎಲ್ಲೆಲ್ಲೋ ಹಂಚಿ ಹೋಗಿರುವುದರಿಂದ ಇಷ್ಟರ ತನಕ ಪ್ರಬಲ ರಾಜಕೀಯ ಧ್ವನಿಯಾಗಿರಲಿಲ್ಲ. ಅವರು ಕಾಶ್ಮೀರ ಕಣಿವೆ ಹೊರಗೆ ತಮಗಾಗಿ ಸ್ಥಾಪಿಸುವ ವಿಶೇಷ ಮತಗಟ್ಟೆಗಳಲ್ಲಿ ಮತದಾನ ಮಾಡಬೇಕಿತ್ತು. ಈ ಎಲ್ಲ ರಗಳೆಗಳು ಬೇಡ ಎಂದು ಅವರು ತಾವಿರುವ ಪ್ರದೇಶದ ಮತದಾರರಾಗಿ ನೋಂದಾವಣೆ ಮಾಡಿಕೊಳ್ಳುತ್ತಿದ್ದರು. ತಮಗೂ ಹುಟ್ಟೂರಿನ ಮತದಾನ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಎರಡು ದಶಕಗಳಿಂದ ಅವರು ಆಯೋಗವನ್ನು ಒತ್ತಾಯಿಸುತ್ತಿದ್ದರು. ಇದೀಗ ಅವರ ಈ ಬೇಡಿಕೆ ಈಡೇರಿದೆ.

ನಿರಾಶ್ರಿತ ಕಾಶ್ಮೀರಿ ವ್ಯಕ್ತಿ ಮತಪತ್ರ ಸಿಕ್ಕಿದ ಬಳಿಕ ಮತ ಚಲಾವಣೆ ಮಾಡಿ ಅದನ್ನು ಸ್ಪೀಡ್‌ಪೋಸ್ಟ್‌ ಮೂಲಕ ಕಳುಹಿಸಿಕೊಡಬೇಕು. ದೇಶದ ಯಾವುದೇ ಭಾಗದಲ್ಲಿರುವ ಚುನಾವಣಾಧಿಕಾರಿ ಕಾಶ್ಮೀರಿ ನಿರಾಶ್ರಿತರ ಮತಪತ್ರವನ್ನು ಅಂಚೆಯಲ್ಲಿ ಸ್ವೀಕರಿಸಿ ಅದನ್ನು ಜಮ್ಮುವಿನ ಸಹಾಯಕ ನಿರ್ವಚನಾಧಿಕಾರಿಗೆ ವಿದ್ಯುನ್ಮಾನ ಮಾಧ್ಯಮದ ಮೂಲಕ ರವಾನಿಸಬೇಕು. ಇದರ ವೆಚ್ಚವನ್ನು ಚುನಾವಣಾ ಆಯೋಗವೇ ಭರಿಸಲಿದೆ. ಇದರ ಜತೆಗೆ ಜಮ್ಮು, ಉಧಾಮ್‌ಪುರ ಮತ್ತು ದಿಲ್ಲಿಯ 26 ಮತಗಟ್ಟೆಗಳಲ್ಲಿ ಎ-ಫಾರ್ಮ್ಗಳ ವ್ಯವಸ್ಥೆ ಮಾಡಲೂ ಆಯೋಗ ನಿರ್ಧರಿಸಿದೆ. ಈ ಮೂಲಕ ತಂತ್ರಜ್ಞಾನವನ್ನು ಬಳಸಿಕೊಂಡು ಕಾಶ್ಮೀರಿ ನಿರಾಶ್ರಿತರ ದಶಕಗಳ ಕನಸನ್ನು ಈಡೇರಿಸಲು ಮುಂದಾಗಿರುವ ಚುನಾವಣಾ ಆಯೋಗ ಅಭಿನಂದನೆಗೆ ಅರ್ಹವಾಗುತ್ತದೆ.

ಕಾಶ್ಮೀರಿ ಪಂಡಿತರದ್ದೊಂದು ದುರಂತ ಕತೆ.ಸುಮಾರು ಮೂರು ದಶಕಗಳಿಂದ ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಬದುಕುತ್ತಿರುವ ಅವರನ್ನು ಎಲ್ಲ ರಾಜಕೀಯ ಪಕ್ಷಗಳು ಕಡೆಗಣಿಸುತ್ತಾ ಬಂದಿವೆ. 2014ರ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕಾಶ್ಮೀರಿ ಪಂಡಿತರು ಪೂರ್ಣ ಘನತೆಯೊಂದಿಗೆ , ಸುರಕ್ಷಿತವಾಗಿ ತಮ್ಮ ಪೂರ್ವಜರ ನೆಲದಲ್ಲಿ ನೆಲೆಯಾಗುವುದನ್ನು ಖಾತರಿಪಡಿಸುತ್ತೇವೆ ಎಂದಿದ್ದರೂ ಈ ಭರವಸೆಯನ್ನು ಈಡೇರಿಸಿಕೊಳ್ಳಲು ಅದರಿಂದ ಸಾಧ್ಯವಾಗಿಲ್ಲ. ಇದಕ್ಕೆ ಕಾಶ್ಮೀರದ ಸಂಕೀರ್ಣ ರಾಜಕೀಯ ಪರಿಸ್ಥಿತಿ ಮತ್ತು ಇನ್ನೂ ಶಮನವಾಗದ ಭೀತಿವಾದ ಕಾರಣವಾಗಿರಬಹುದು. ಆದರೆ ಈ ನಿಟ್ಟಿನಲ್ಲಿ ಒಂದಿಷ್ಟಾದರೂ ಪ್ರಯತ್ನ ಮಾಡುವ ಬಾಧ್ಯತೆ ಅಧಿಕಾರಕ್ಕೇರಿದ ಸರಕಾರಕ್ಕೆ ಇತ್ತು.

ಕಾನೂನು ಪ್ರಕಾರ ನಿರಾಶ್ರಿತರಿಗೆ ವಿಶೇಷ ಮತಗಟ್ಟೆಗಳಲ್ಲಿ ಮತದಾನ ಮಾಡುವ ಅವಕಾಶ ಇದ್ದರೂ ಕೆಂಪುಪಟ್ಟಿಯ ಅಡೆತಡೆಗಳು, ಅಧಿಕಾರಶಾಹಿಯ ನಿಧಾನ ಗತಿಯ ಕಾರ್ಯಶೈಲಿ ಇತ್ಯಾದಿ ಕಾರಣಗಳಿಂದ ಈ ಹಕ್ಕನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಭಾರತೀಯರಾಗಿದ್ದೂ ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಬದುಕುತ್ತಿರುವ ಕಾಶ್ಮೀರಿ ಪಂಡಿತರಿಗೆ ಅವರ ಸಂವಿಧಾನದತ್ತವಾದ ಹಕ್ಕನ್ನು ಚಲಾಯಿಸುವ ಅವಕಾಶವೂ ಇಲ್ಲದಂತಾಗಿರುವುದು ದೇಶದ ಪ್ರಜಾತಂತ್ರಕ್ಕೊಂದು ಕಳಂಕ. ಮತದಾನದ ಅವಕಾಶ ಇಲ್ಲದ ಕಾರಣ ಯಾವ ಪಕ್ಷವೂ ಇಷ್ಟರ ತನಕ ನಿರಾಶ್ರಿತ ಅಭ್ಯರ್ಥಿಗೆ ಟಿಕೇಟ್‌ ಕೊಡುವ ಔದಾರ್ಯವನ್ನು ತೋರಿಸಿರಲಿಲ್ಲ. ಅವರ ಒಂದು ರೀತಿಯಲ್ಲಿ ಅಗೋಚರ ಮತದಾರರಾಗಿ ಉಳಿದಿದ್ದರು. ಇದೀಗ ಚುನಾವಣಾ ಆಯೋಗದ ಕ್ರಮದಿಂದಾಗಿ ನಿರಾಶ್ರಿತರ ಮತಗಳಿಗೂ ಬಲ ಬಂದಿದೆ. ಕಣಿವೆಯ ಪ್ರಬಲ ರಾಜಕೀಯ ಶಕ್ತಿಯಾಗುವ ಅವಕಾಶ ಅವರಿಗೆ ಸಿಕ್ಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ