ಪೊಲೀಸ್‌ ಇಲಾಖೆಗೆ ಕಾಯಕಲ್ಪದ ಅಗತ್ಯ

ಸಂಪಾದಕೀಯ, Jul 9, 2019, 5:21 AM IST

ದೇಶಾದ್ಯಂತ ಪೊಲೀಸ್‌ ಇಲಾಖೆ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವುದು ಹೊಸ ವಿಚಾರವೇನಲ್ಲ. ಇದೀಗ ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದೆ. ವರದಿಯ ಪ್ರಕಾರ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸ್‌ ಇಲಾಖೆಗಳಲ್ಲಿ 5 ಲಕ್ಷಕ್ಕೂ ಅಧಿಕ ಸಿಬ್ಬಂದಿ ಕೊರತೆಯಿದೆ. ಮಂದಗತಿಯ ನೇಮಕಾತಿ, ನಿವೃತ್ತಿಯಾದವರ ಜಾಗಕ್ಕೆ ಮರು ನೇಮಕಾತಿ ವಿಳಂಬವಾಗುವುದು ಮತ್ತು ಸಿಬ್ಬಂದಿಗಳ ಅಕಾಲಿಕ ಮರಣ ಇವೇ ಮುಂತಾದ ಕಾರಣಗಳಿಂದ ಪೊಲೀಸ್‌ ಇಲಾಖೆಗಳಲ್ಲಿ ಅಗತ್ಯದಷ್ಟು ಸಿಬ್ಬಂದಿಗಳು ಇಲ್ಲ. ನಿರ್ದಿಷ್ಟವಾಗಿ ಕಾನ್‌ಸ್ಟೆಬಲ್ ಮತ್ತು ಇನ್ಸ್‌ಪೆಕ್ಟರ್‌ ಮಟ್ಟದಲ್ಲಿರುವ ಸಿಬ್ಬಂದಿ ಕೊರತೆ ಪೊಲೀಸರ ಕಾರ್ಯವೈಖರಿಯ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಅತಿ ಹೆಚ್ಚು ಪೊಲೀಸ್‌ ಸಿಬ್ಬಂದಿ ಕೊರತೆಯಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ಈ ರಾಜ್ಯಕ್ಕೆ 4.14 ಲಕ್ಷ ಪೊಲೀಸ್‌ ಸಿಬ್ಬಂದಿಗಳ ಮಂಜೂರಾತಿ ಇದ್ದರೂ ಈಗ ಇರುವುದು 2.85 ಲಕ್ಷ ಮಾತ್ರ. ಈ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಏಕೆ ಅಧಿಕ ಎನ್ನುವುದಕ್ಕೆ ಇಲ್ಲಿಯೇ ಉತ್ತರವಿದೆ. ಅನಂತರದ ಸ್ಥಾನಗಳಲ್ಲಿರುವುದು ಬಿಹಾರ ಮತ್ತು ಪಶ್ಚಿಮ ಬಂಗಾಳ. ಕರ್ನಾಟದಲ್ಲೂ ಸುಮಾರು 22 ಸಾವಿರ ಸಿಬ್ಬಂದಿಗಳ ಕೊರತೆಯಿದೆ. ದೇಶದಲ್ಲಿ ತಲಾ 1 ಲಕ್ಷ ಜನಸಂಖ್ಯೆಗೆ ಅಪರಾಧಗಳ ಸಂಖ್ಯೆಯಲ್ಲಿ ಶೇ. 28 ಹೆಚ್ಚಳವಾಗಿದೆ. 1 ಲಕ್ಷ ಜನಸಂಖ್ಯೆಗೆ 180 ಪೊಲೀಸ್‌ ಸಿಬ್ಬಂದಿಗಳಿರಬೇಕಿದ್ದರೂ ಈಗಿರುವ 135 ಮಾತ್ರ. ವಿಶ್ವಸಂಸ್ಥೆಯ ಪ್ರತಿ ಲಕ್ಷ ಜನರಿಗೆ 222 ಪೊಲೀಸ್‌ ಇರಬೇಕು ಎಂಬ ಮಾನದಂಡಕ್ಕಿಂತ ನಾವು ಬಹಳ ಹಿಂದಿ ಇದ್ದೇವೆ. ಸಿಬ್ಬಂದಿಗಳ ಕೊರತೆಯಿಂದಾಗಿ ಕಾನೂನು ಮತ್ತು ವ್ಯವಸ್ಥೆ ಪಾಲನೆ ಬಾಧಿತವಾಗುತ್ತಿದೆ ಎನ್ನುವುದನ್ನು ಈ ಅಂಕಿಅಂಶಗಳೇ ಸ್ಪಷ್ಟಪಡಿಸುತ್ತವೆ.

ಜನಜೀವನದೊಂದಿಗೆ ನೇರ ಸಂಪರ್ಕ ಹೊಂದಿರುವ ಇಲಾಖೆಗಳಲ್ಲಿ ಪೊಲೀಸ್‌ ಇಲಾಖೆಯೂ ಒಂದು. ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುವ ಪೊಲೀಸ್‌ ಇಲಾಖೆ ಎಲ್ಲ ರಾಜ್ಯಗಳಲ್ಲೂ ಸಿಬ್ಬಂದಿ ಕೊರತೆ ಮಾತ್ರವಲ್ಲದೆ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೋಮು ಗಲಭೆ, ರಾಜಕೀಯ ಹಿಂಸಾಚಾರ, ಗುಂಪು ಘರ್ಷಣೆ ಈ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಾಗ ಪೊಲೀಸರು ಮಹತ್ವಪೂರ್ಣ ಪಾತ್ರ ನಿಭಾಯಿಸಬೇಕಾಗುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಪೊಲೀಸರು ಅಸಹಾಯಕರಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ದೇಶದ ಆಂತರಿಕ ಭದ್ರತೆಯಲ್ಲಿ ಪೊಲೀಸರು ಅತಿ ಮುಖ್ಯ ಪಾತ್ರ ನಿಭಾಯಿಸುತ್ತಾರೆ. ಭಯೋತ್ಪಾದನೆ, ಜನಾಂಗೀಯ ಘರ್ಷಣೆ, ಧಾರ್ಮಿಕ ಮೂಲಭೂತವಾದ ಇವೇ ಮುಂತಾದ ಆಂತರಿಕ ಭದ್ರತೆಗೆ ಸವಾಲಾಗುವ ಸನ್ನಿವೇಶಗಳನ್ನು ನಿಭಾಯಿಸಲು ದಕ್ಷ ಮತ್ತು ಸಮರ್ಥ ಪೊಲೀಸರ ಅಗತ್ಯವಿದೆ. ಅಲ್ಲದೆ ತಂತ್ರಜ್ಞಾನದ ಅಭಿವೃದ್ಧಿಯ ಜೊತೆಗೆ ಕಾಣಿಸಿರುವ ಸೈಬರ್‌ ಅಪರಾಧ, ಬ್ಯಾಂಕ್‌ ವಂಚನೆ, ಸಂಘಟಿತ ಅಪರಾಧಗಳು, ಹ್ಯಾಕಿಂಗ್‌ ಈ ಮುಂತಾದ ಕೃತ್ಯಗಳ ಜೊತೆ ವ್ಯವಹರಿಸಲು ತಾಂತ್ರಿಕ ತರಬೇತಿ ಹೊಂದಿರುವ ಸಿಬ್ಬಂದಿಗಳ ಅಗತ್ಯ ಬಹಳ ಹೆಚ್ಚಿದೆ. ಆದರೆ ಪೊಲೀಸರು ಮಾತ್ರ ಮೂಲಸೌಕರ್ಯ ಕೊರತೆ, ಶಸ್ತ್ರಾಸ್ತ್ರಗಳ ಕೊರತೆ, ತರಬೇತಿ ಮತ್ತು ಅನುಭವದ ಕೊರತೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಿಬ್ಬಂದಿಗಳ ಕೊರತೆಯಿಂದಾಗಿ ಪೊಲೀಸರ ಕೆಲಸದ ಹೊರೆ ವಿಪರೀತ ಹೆಚ್ಚಾಗಿದೆ ಎನ್ನುವ ದೂರು ಇಂದು ನಿನ್ನೆಯದ್ದಲ್ಲ. ಇದು ಪೊಲೀಸರ ದಕ್ಷತೆ ಮತ್ತು ಸಾಮರ್ಥ್ಯವನ್ನು ಕುಂಠಿತಗೊಳಿಸುವುದು ಮಾತ್ರವಲ್ಲದೆ ವಿವಿಧ ರೀತಿಯ ಮಾನಸಿಕ ಒತ್ತಡಗಳಿಗೂ ಕಾರಣವಾಗುತ್ತಿದೆ. ಈ ಕಾರಣಗಳಿಂದಾಗಿಯೇ ಪೊಲೀಸರಲ್ಲೂ ಆತ್ಮಹತ್ಯೆ ಪ್ರಮಾಣ ಕಳವಳಕಾರಿಯಾಗಿ ಹೆಚ್ಚುತ್ತಿದೆ.

ದೇಶದ ಪೊಲೀಸ್‌ ವ್ಯವಸ್ಥೆ ಪುರಾತನ ಕಾಲದ ನೇಮಕಾತಿ ಪ್ರಕ್ರಿಯೆಯನ್ನೇ ಈಗಲೂ ಅವಲಂಬಿಸಿಕೊಂಡಿದೆ. ಕಾನ್‌ಸ್ಟೆಬಲ್ ದರ್ಜೆಯಿಂದ ಹಿಡಿದು ಸಬ್‌ ಇನ್ಸ್‌ಪೆಕ್ಟರ್‌ ದರ್ಜೆಯವರೆಗಿನ ನೇಮಕಾತಿಗೆ ಇದರಿಂದ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾಗುತ್ತಿದೆ. ತರಬೇತಿಯಲ್ಲೂ ದೈಹಿಕ ಕ್ಷಮತೆಗೇ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ವಿಧಿವಿಜ್ಞಾನ, ಕಾನೂನು ಅರಿವು, ಸೈಬರ್‌ ಅಪರಾಧ, ಹಣಕಾಸು ಅಪರಾಧಗಳಂಥ ಆಧುನಿಕ ಅಪರಾಧ ಕೃತ್ಯಗಳನ್ನು ಮಟ್ಟ ಹಾಕುವ ಸಮರ್ಪಕ ತರಬೇತಿ ಅವರಿಗೆ ಸಿಗುವುದಿಲ್ಲ. ಪೊಲೀಸರಿಗೆ ಸಿಗುತ್ತಿರುವ ತರಬೇತಿ ತೀರಾ ಕೆಳಮಟ್ಟದಲ್ಲಿದೆ ಎಂಬ ಅಂಶವನ್ನು ಹಿಂದೊಮ್ಮೆ ಮಹಾಲೇಖಪಾಲರೇ ತಮ್ಮ ವರದಿಯಲ್ಲಿ ಉಲ್ಲೇಖೀಸಿದ್ದರು.

ಪೊಲೀಸ್‌ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದಂತೆ ದಶಕಗಳಿಂದ ಚರ್ಚೆಯಾಗುತ್ತಿದ್ದರೂ ಫ‌ಲಿತಾಂಶ ಮಾತ್ರ ನಿರೀಕ್ಷಿಸಿದಷ್ಟಿಲ್ಲ. ಈ ಸಂಬಂಧ ಹಲವು ಸಮಿತಿಗಳನ್ನೂ ಆಯೋಗಗಳನ್ನೂ ನೇಮಿಸಲಾಗಿದೆ ಹಾಗೂ ಅವುಗಳ ವರದಿಗಳು ಧೂಳು ತಿನ್ನುತ್ತಿವೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಪೊಲೀಸ್‌ ಇಲಾಖೆಗೆ ಕಾಯಕಲ್ಪ ನೀಡಬೇಕಾದರೆ ಪ್ರಬಲ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಪೊಲೀಸ್‌ ವ್ಯವಸ್ಥೆ ದುರ್ಬಲವಾದರೆ ದೇಶದ ಸುರಕ್ಷೆ ಮತ್ತು ಸಮಗ್ರತೆ ದುರ್ಬಲವಾಗುತ್ತದೆ ಎನ್ನುವುದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅರಿತುಕೊಳ್ಳಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ