ಮತಯಂತ್ರ ದೂಷಣೆ: ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ 

Team Udayavani, Jan 24, 2019, 12:30 AM IST

ಮತಯಂತ್ರ ಕುರಿತಾದ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಸೈಯ್ಯದ್‌ ಶುಜಾ ಎಂಬ ವ್ಯಕ್ತಿ ವಿದೇಶದಲ್ಲಿದ್ದುಕೊಂಡು ಸ್ಕೈಪ್‌ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರಗಳನ್ನು ಹ್ಯಾಕ್‌ ಮಾಡಲಾಗಿತ್ತು. ಈ ತಂಡದಲ್ಲಿ ನಾನೂ ಇದ್ದೆ. ನನ್ನ ತಂಡದಲ್ಲಿದ್ದ ಇತರ ಸದಸ್ಯರನ್ನು ಸಾಯಿಸಲಾಗಿದೆ. ನಾನು ಪಾರಾಗಿ ಬಂದು ವಿದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದೇನೆ ಎಂದಿದ್ದಾನೆ. ಈ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಕೂಡಾ ಉಪಸ್ಥಿತರಿದ್ದರು. ಈ ಕಾರಣಕ್ಕೆ ಶುಜಾ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮತಯಂತ್ರದ ಮೇಲಿನ ಆರೋಪ ಇಂದು ನಿನ್ನೆಯದ್ದಲ್ಲ. ಪ್ರತಿ ಚುನಾವಣೆಯಲ್ಲಿ ಸೋತ ಪಕ್ಷಗಳು ತಮ್ಮ ಸೋಲಿಗೆ ಮತಯಂತ್ರಗಳನ್ನು ತಿರುಚಿದ್ದೇ ಕಾರಣ ಎಂದು ದೂಷಿಸುವುದು ಮಾಮೂಲಿಯಾಗಿದೆ. ಆದರೆ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಾಗ ಮಾತ್ರ ಯಾರಿಗೂ ಮತಯಂತ್ರಗಳಲ್ಲಿ ದೋಷ ಕಾಣಿಸಿರಲಿಲ್ಲ. 

ಸೈಯ್ಯದ್‌ ಶುಜಾ ಎಂಬ ವ್ಯಕ್ತಿ ಇನ್ನೊಂದು ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿರುವಾಗ ದಿಢೀರ್‌ ಎಂದು ಕಾಣಿಸಿಕೊಂಡು ಮತಯಂತ್ರಗಳ ಮೇಲೆ ದೋಷಾರೋಪ ಹೊರಿಸಿದ್ದು ಏಕೆ? ಹಾಗೊಂದು ವೇಳೆ 2014ರಲ್ಲಿ ಮತಯಂತ್ರಗಳನ್ನು ತಿರುಚಲಾಗಿದ್ದರೆ ಆಗಲೇ ಅದನ್ನು ಬಹಿರಂಗ ಪಡಿಸಬಹುದಿತ್ತಲ್ಲವೆ? ಈ ಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕ ಏಕೆ ಉಪಸ್ಥಿತರಿದ್ದರು? ಇದಕ್ಕೆಲ್ಲ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಮೇಲ್ನೋಟಕ್ಕೆ ಇದು ಒಂದು ರಾಜಕೀಯ ಷಡ್ಯಂತ್ರದಂತೆ ಕಾಣಿಸುತ್ತಿದೆಯಷ್ಟೆ. 

2014 ಲೋಕಸಭಾ ಚುನಾವಣೆಯ ಐತಿಹಾಸಿಕ ಫ‌ಲಿತಾಂಶಕ್ಕೆ ಕಾರಣ ಏನು ಎನ್ನುವುದರ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಬಲವಾಗಿ ಬೀಸಿದ ಆಡಳಿತ ವಿರೋಧಿ ಅಲೆ ಮತ್ತು ಮೋದಿಯವರ ಚರಿಷ್ಮಾ ಕಾಂಗ್ರೆಸ್‌ ನೇತೃತ್ವದ ಯುಪಿಎಯನ್ನು ಧೂಳೀಪಟ ಮಾಡಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಇನ್ನೊಂದು ಚುನಾವಣೆ ಹತ್ತಿರವಾಗುತ್ತಿರು ವಾಗಲಾದರೂ ವಿಪಕ್ಷಗಳು ಹಿಂದಿನ ಸೋಲಿಗೆ ಕಾರಣ ಏನು ಎನ್ನುವುದರ ಕುರಿತು ಆತ್ಮಾವಲೋಕನ ಮಾಡುವುದು ಬಿಟ್ಟು, ಈ ರೀತಿ ಕಾಗಕ್ಕ -ಗುಬ್ಬಕ್ಕ ಕತೆ ಕಟ್ಟಿ ಅದನ್ನು ಪ್ರಚಾರ ಮಾಡಲು ನಾನಾ ಗಿಮಿಕ್‌ಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್‌ನಂಥ ಪಕ್ಷ ಈ ರೀತಿಯ ಸ್ಟಂಟ್‌ಗಳ ಮೊರೆ ಹೋಗುವುದನ್ನು ಬಿಟ್ಟು ಆಡಳಿತ ಪಕ್ಷದ ವಿರುದ್ಧ ತಳಮಟ್ಟದ ತಯಾರಿ ಮಾಡಿಕೊಳ್ಳುವುದರತ್ತ ಗಮನ ಹರಿಸುವುದರಲ್ಲಿ ಅದರ ಭವಿಷ್ಯವಿದೆ. 

ಭಾರತದ ಚುನಾವಣಾ ಆಯೋಗ ಬಳಸುತ್ತಿರುವ ಮತಯಂತ್ರ ಸಂಪೂರ್ಣ ಸುರಕ್ಷಿತ ಎನ್ನುವುದು ಒಂದಕ್ಕಿಂತ ಹೆಚ್ಚು ಸಲ ಸಾಬೀತಾಗಿದೆ. ನ್ಯಾಯಾಲಯಗಳು ಕೂಡಾ ಮತಯಂತ್ರಗಳ ಸುರಕ್ಷತೆಯ ಬಗ್ಗೆ ಯಾವ ಅನುಮಾನವನ್ನೂ ಹೊಂದಿಲ್ಲ. ಮತಯಂತ್ರಗಳ ಮೇಲೆ ಓತಪ್ರೋತವಾಗಿ ಆರೋಪಗಳನ್ನು ಮಾಡಿದ ವಿಪಕ್ಷಗಳೂ ನ್ಯಾಯಾಲಯದಲ್ಲಿ ತಿರುಚಿ ತೋರಿಸುವ ಪ್ರಾತ್ಯಕ್ಷಿಕೆಯನ್ನು ನಡೆಸುವ ಸವಾಲು ಸ್ವೀಕರಿಸುವ ದಿಟ್ಟತನವನ್ನು ತೋರಿಸಿಲ್ಲ. ಹೀಗಿರುವಾಗ ಚುನಾವಣೆ ಸನ್ನಿಹಿತವಾಗುತ್ತಿರುವಾಗ ಮತ್ತೆ ಹಳೇ ಆರೋಪವನ್ನು ಪುನರಾವರ್ತಿಸುವುದರ ಮರ್ಮ ಏನೆಂದು ಅರಿಯದಷ್ಟು ಮುಗ್ಧರಲ್ಲ ಮತದಾರರು. 

ಸುಮಾರು 20 ದೇಶಗಳಲ್ಲಿ ಮತಯಂತ್ರಗಳನ್ನು ಬಳಸಲಾಗುತ್ತದೆ. ಈ ಎಲ್ಲ ಮತಯಂತ್ರಗಳಿಗಿಂತ ಭಾರತದ ಮತಯಂತ್ರ ಹೆಚ್ಚು ಸುರಕ್ಷಿತ ಎಂದು ಸಾಬೀತಾಗಿದೆ. ಕೆಲವು ದೇಶಗಳು ನಮ್ಮ ಮತಯಂತ್ರಗಳ ತಂತ್ರಜ್ಞಾನವನ್ನೂ ಕೇಳಿವೆ. ಹಾಗೆಂದು ನಮ್ಮ ಮತಯಂತ್ರಗಳು ಪರಿಪೂರ್ಣ ಎನ್ನುವುದು ಸರಿಯಲ್ಲ. ಮತಯಂತ್ರಗಳನ್ನು ತಿರುಚಿ ಚುನಾವಣೆ ಫ‌ಲಿತಾಂಶವನ್ನು ಬದಲಾಯಿಸುವುದು ಸಾಧ್ಯವಿಲ್ಲ ಎನ್ನುವುದು ನಿಜವಾಗಿದ್ದರೂ ಮತದಾನದ ಸಂದರ್ಭದಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್‌ಗಳಲ್ಲಿ ಕಾಣಿಸಿಕೊಳ್ಳುವ ತಾಂತ್ರಿಕ ದೋಷಗಳನ್ನು ಸರಿಪಡಿಸಲೇಬೇಕಾದ ಅನಿವಾರ್ಯತೆ ಇದೆ. ಇವೆಲ್ಲ ಸರಳವಾಗಿ ಸರಿಪಡಿಸಬಹುದಾದ ತಾಂತ್ರಿಕ ದೋಷಗಳು. ಅದೇ ರೀತಿ ಮತಯಂತ್ರಗಳ ನಿರ್ವಹಣೆಯನ್ನೂ ಗಂಭೀರವಾಗಿ ಪರಿಗಣಿಸಬೇಕು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮತಯಂತ್ರವೊಂದು ರಸ್ತೆ ಬದಿಯಲ್ಲಿ ಸಿಕ್ಕಿದ್ದು, ಮತಯಂತ್ರ ಇಟ್ಟಿದ್ದ ಕೊಠಡಿ ಸಮೀಪ ಸಂಶಯಾಸ್ಪದ ವ್ಯಕ್ತಿಗಳು ಸುಳಿದಾಡಿದ್ದು ಈ ಮಾದರಿಯ ಪ್ರಕರಣಗಳು ಪಾರದರ್ಶಕ ಮತ್ತು ಮುಕ್ತ ಚುನಾವಣೆ ನಡೆಸುವ ಪ್ರಕ್ರಿಯೆಯ ಮೇಲೆ ಸಂಶಯದ ನೆರಳು ಬೀಳುವಂತೆ ಮಾಡುತ್ತವೆೆ. ಇಂಥ ತಾಂತ್ರಿಕ ದೋಷಗಳನ್ನೇ ಮತಯಂತ್ರವನ್ನು ತಿರುಚುವ ಪ್ರಯತ್ನ ಎನ್ನುವವರು ರಾಷ್ಟ್ರೀಯ ಹಿತಾಸಕ್ತಿ, ಪ್ರಜಾತಂತ್ರ ವ್ಯವಸ್ಥೆ ಎರಡಕ್ಕೂ ಅಪಾಯ ತಂದೊಡ್ಡುತ್ತಿದ್ದಾರೆ. ಇಂದು ಮತಯಂತ್ರ ಸರಿಯಿಲ್ಲ ಎನ್ನುವವರು ನಾಳೆ ಮತಪತ್ರಗಳ ಮೇಲೂ ದೋಷಾರೋಪ ಹೊರಿಸಬಹುದು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಇಡೀ ಜಗತ್ತೇ ಗಾಢನಿದ್ರೆಯಲ್ಲಿರುವ ಈ ಅಪರಾತ್ರಿಯಲ್ಲಿ ಭಾರತವು ಹೊಸ ಸ್ವಾತಂತ್ರ್ಯ ಮತ್ತು ಬದುಕಿನತ್ತ ತೆರೆದುಕೊಳ್ಳಲಿದೆ...'' ಅದು 1947 ಆಗಸ್ಟ್‌ 14ರ ಅಪರಾತ್ರಿ....

 • ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ಮಾಡಿದ 73ನೇ ಸ್ವಾತಂತ್ರ್ಯೋತ್ಸವ ಭಾಷಣ ನವಭಾರತ ನಿರ್ಮಾಣ ಕುರಿತು ಅವರು ಹೊಂದಿರುವ ಚಿಂತನೆಗಳ ಹೊಳಹನ್ನು ನೀಡಿದೆ....

 • ದೇಶದ ವಾಹನ ಉದ್ಯಮ ತೀವ್ರ ಬಿಕ್ಕಟ್ಟಿನಲ್ಲಿದೆ. ಭಾರತೀಯ ವಾಹನ ಉತ್ಪಾದಕರ ಒಕ್ಕೂಟ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳು ಈ ಉದ್ಯಮದ ನಿರಾಶಾದಾಯಕ ಚಿತ್ರಣವನ್ನು...

 • 73ನೇ ಸ್ವಾತಂತ್ರ್ಯೋತ್ಸವ ದೇಶದ ಪಾಲಿಗೆ ಹಲವು ಕಾರಣಗಳಿಂದ ಮಹತ್ವದ್ದಾಗಿದೆ. ಸ್ವಾತಂತ್ರ್ಯದ ಹರಿಕಾರರಲ್ಲಿ ಒಬ್ಬರಾಗಿರುವ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ...

 • ರಾಜ್ಯದ 17 ಜಿಲ್ಲೆಗಳ 86 ತಾಲೂಕುಗಳಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹದಿಂದ 2217 ಗ್ರಾಮಗಳು ಮುಳುಗಡೆಯಾಗಿ 41,915 ಮನೆಗಳು ಕುಸಿದಿವೆ. ಇದೀಗ ರಾಜ್ಯ ಸರ್ಕಾರಕ್ಕೆ ಪುನರ್ವಸತಿ...

ಹೊಸ ಸೇರ್ಪಡೆ

 • ಪ್ರತಿ ಅಡಿಯ ಗಣಪತಿಗೆ 1.5ರಿಂದ 2 ಕೆ.ಜಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಬಳಕೆಯಾಗುತ್ತದೆ. ಇನ್ನು ಸರಾಸರಿ 5 ಅಡಿ ಗಣಪನಿಗೆ ಕನಿಷ್ಠ 20 ಕೆಜಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌...

 • ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ತಕ್ಷಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಲಂಟಾನ ತೆರವುಗೊಳಿಸಬೇಕು, ಬಿದಿರು ಬೆಳೆಯಲು ಕ್ರಮ...

 • ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿರುವ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಲು ನಿರ್ಧರಿಸಿದ್ದು, ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ...

 • ಬೆಂಗಳೂರು: ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದು ರಾಜಕೀಯ ಮುಖಂಡರು ಮಾತ್ರವಲ್ಲದೆ, ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳಲ್ಲಿ...

 • ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳೀಗ ಪ್ಲಾಸ್ಟಿಕ್‌ ಬಳಕೆಯಿಂದ ಮುಕ್ತವಾಗಿವೆ. ವಿದ್ಯಾರ್ಥಿಗಳನ್ನು...

 • ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಭಾನುವಾರ ಪ್ರಹ್ಲಾದರಾಜರ ರಥೋತ್ಸವ ಅಸಂಖ್ಯ ಭಕ್ತರ...