ಕಾಂಚಿಪುರ: ನಲುವತ್ತು ವರ್ಷಗಳಿಗೊಮ್ಮೆ ಹೊರಬರುವ ಅತ್ತಿ ವರದ

Team Udayavani, Jul 7, 2019, 5:00 AM IST

ಕಾಂಚಿಯ ವರದರಾಜಸ್ವಾಮಿಯ ಮೂಲ ವಿಗ್ರಹ ನೋಡಲು ಚೆಂದ. ಅತ್ತಿ ಮರದ ವಿಗ್ರಹ ಪ್ರತಿ ನಲವತ್ತು ವರ್ಷಕ್ಕೊಮ್ಮೆ ಸರೋವರದಿಂದ ಹೊರತೆಗೆಯಲಾಗುತ್ತದೆ. 48 ದಿನಗಳ ಕಾಲ ಪೂಜಿಸಿದ ಮೇಲೆ ಮತ್ತೆ ನೀರಿನೊಳಗೆ. ಅದೇ ಇಲ್ಲಿಯ ವಿಶೇಷ. ಈ ಆಗಸ್ಟ್‌ 17 ರೊಳಗೆ ನೋಡದಿದ್ದರೆ ಮತ್ತೆ 2059 ರವರೆಗೆ ಕಾಯಬೇಕು !

“ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ ಅವಂತಿಕಾ ಪುರಿ ದ್ವಾರಾವತೀ ಚೈವ ಸಪೆತೇ ಮೋಕ್ಷದಾಯಕಾಃ’ ಎಂಬ ಉಕ್ತಿ ಪ್ರಸಿದ್ಧ. ಇವು ಏಳು ಕ್ಷೇತ್ರಗಳು ಮೋಕ್ಷದಾಯಕ ಎಂಬುದು ಇದರ ಅರ್ಥ.

ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕಾಂಚಿ ತಮಿಳುನಾಡು ರಾಜ್ಯದಲ್ಲಿದೆ. ಕಾಂಚಿಯ ವರದರಾಜಸ್ವಾಮಿ ದೇವಸ್ಥಾನ ಈ ಮಹತ್ವದ ಉಕ್ತಿಗೆ ಕಾರಣ. ಈಗ ಅಲ್ಲಿ ಕಿಕ್ಕಿರಿದ ಜನಸಂದಣಿ. ರಸ್ತೆಗಳು ಸಾಲದೆಂಬಂತೆ ವಾಹನಗಳ ದಟ್ಟಣೆ ಬೇರೆ. ನೂರಾರು ಪೊಲೀಸರು ಶ್ರಮಿಸುತ್ತಿರುವುದು ಈ ಜನಸಂದಣಿ ನಿಯಂತ್ರಿಸಲು. ಕಾರಣವಿಷ್ಟೆ, ಇಲ್ಲಿನ ಮೂಲ ವಿಗ್ರಹವನ್ನು 40 ವರ್ಷಗಳಿಗೊಮ್ಮೆ ಸರೋವರದಿಂದ ಹೊರತೆಗೆಯಲಾಗುತ್ತದೆ. 1979 ರ ಬಳಿಕ ಈಗ ಅವಕಾಶ. ಮತ್ತೆ 2059 ಕ್ಕೆ !

9 ಅಡಿ ಎತ್ತರದ ದಾರು ಶಿಲ್ಪದ ವಿಗ್ರಹ
ಸುಮಾರು 9 ಅಡಿ ಉದ್ದದ ವರದರಾಜಮೂರ್ತಿಯ ಇತಿಹಾಸ ಪೌರಾಣಿಕ ಕಾಲದ್ದು. ಇದು ಕೃತಯುಗದಲ್ಲಿ ಚತುರ್ಮುಖ ಬ್ರಹ್ಮ ಕರಾರ್ಚಿತವಾದುದು ಎಂಬ ನಂಬಿಕೆ ಇದೆ. ಅಶ್ವಮೇಧ ಯಾಗ ಮಾಡಿದ ಸಂದರ್ಭ ಈ ಮೂರ್ತಿ ಯ ನ್ನು ದೇವಶಿಲ್ಪಿ ವಿಶ್ವಕರ್ಮ ನಿರ್ಮಿಸಿದ ಎಂಬ ನಂಬಿಕೆಯೂ ಇದೆ. ಇದು ಅತ್ತಿ ಮರದಿಂದ ರಚಿಸಿದ ಮೂರ್ತಿಯಾದ ಕಾರಣ “ಅತ್ತಿ ವರದ’ ಎಂದೇ ಪ್ರಸಿದ್ಧ.

40 ವರ್ಷಗಳ ಹಿನ್ನೆಲೆ
ಮೂಲಗಳ ಪ್ರಕಾರ 16ನೆಯ ಶತಮಾನದವರೆಗೆ ಈ ವಿಗ್ರಹ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆಗೊಳ್ಳುತ್ತಿತ್ತು. ಪರಕೀಯರ ಆಕ್ರಮಣದ ವೇಳೆ ವಿಗ್ರಹ ವನ್ನು ಹಾಳುಗೆಡವಬಾರದೆಂದು ಧರ್ಮದರ್ಶಿಗಳು ಪುಷ್ಕರಿಣಿಗೆ ಹಾಕಿದರು. ಆಗ 40 ವರ್ಷ ದೇವಸ್ಥಾನದಲ್ಲಿ ಪೂಜೆಯೇ ನಡೆಯಲಿಲ್ಲ. ಈ ಮಧ್ಯೆ ಆ ಧರ್ಮ ದರ್ಶಿಗಳು ಕಾಲವಾದರು. ಬಳಿಕ ವಿಗ್ರಹವನ್ನು ತಾತಾಚಾರ್ಯ ವಂಶಸ್ಥರು ಹುಡುಕಿದರೂ ಸಿಗಲಿಲ್ಲ. ಆಗ ಕಾಂಚಿಗೆ 30 ಕಿ.ಮೀ. ದೂರದಲ್ಲಿರುವ ಶ್ರೀವರಂ ಬೆಟ್ಟದ ಶಿಲೆಯಿಂದ ವಿಗ್ರಹ ಮಾಡಿ, ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸಿದರು.

ಎರಡು ಶತಮಾನಗಳ ಹಿಂದೆ
ದೇವಸ್ಥಾನದ ಶಿಲಾಶಾಸನದಲ್ಲಿನ ಮಾಹಿತಿಯಂತೆ ಶಾಲಿವಾಹನ ಶಕೆ 1703ರ ಪ್ಲವ ಸಂವತ್ಸರದ ಆಷಾಢ ಮಾಸ ಶುಕ್ಲ ಪಕ್ಷದ ದಶಮಿಯಂದು ಸರೋವರದ ನೀರು ಒಣಗಿ ಹೋದಾಗ ಮೂಲ ವಿಗ್ರಹ ಗೋಚರಿಸಿತು. ಇದು ಕ್ರಿ.ಶ. 1779 ರಲ್ಲಿ. ಆಗ ಈ ವಿಗ್ರಹವನ್ನು ಹೊರತೆಗೆದು 48 ದಿನಗಳ ಕಾಲ ಪೂಜಿಸಿದರು.

ಅಪೂರ್ವ ಅವಕಾಶ
ವಿಗ್ರಹವನ್ನು ಸರೋವರಕ್ಕೆ ಹಾಕಿದ ಮೇಲೆ ಸುಮಾರು 40 ವರ್ಷ ವಿಗ್ರಹವಿಲ್ಲದ ಕಾರಣ ಪ್ರತಿ 40 ವರ್ಷಕ್ಕೆ ಒಮ್ಮೆ ವಿಗ್ರಹವನ್ನು ನೀರಿನಿಂದ ಹೊರ ತೆಗೆದು ಪೂಜಿಸುವ ಕ್ರಮ ಆರಂಭಗೊಂಡಿತು. 1779 ರ ನಂತರ ಆರು ಬಾರಿ ಇಂತಹ ದರ್ಶನಾವಕಾಶ ಲಭಿಸಿದೆ. ಈಗಿನದು ಏಳನೇ ಬಾರಿ. ಜೂ. 27ರಂದು ವಿಗ್ರಹವನ್ನು ಹೊರ ತೆಗೆದು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ, ಜುಲೈ 1ರಿಂದಆಗಸ್ಟ್‌ 17 ರವರೆಗೆ ಭಕ್ತರಿಗೆ ದರ್ಶನ ಪಡೆಯಬಹುದು. ಮೊದಲ 40 ದಿನ ಮಲಗಿಸಿದ ಸ್ಥಿತಿಯಲ್ಲಿ ವಿಗ್ರಹವನ್ನು ಇರಿಸಿದರೆ, ಕೊನೆಯ ಎಂಟು ದಿನ ನಿಲ್ಲಿಸಿದ ಭಂಗಿಯಲ್ಲಿಟ್ಟು ಪೂಜಿಸಲಾಗುತ್ತದೆ. 1979 ರಲ್ಲಿಯೂ ಜು. 1ರಂದೇ ಸಾರ್ವಜನಿಕ ದರ್ಶನ ಆರಂಭಗೊಂಡಿತ್ತು ಎನ್ನುತ್ತಾರೆ ಸ್ಥಳೀಯರು.

ನಿತ್ಯ ಬೆಳಗ್ಗೆ 5ರಿಂದ ರಾತ್ರಿ 8 ಗಂಟೆವರೆಗೆ ದರ್ಶನಾವಕಾಶವಿದೆ. ಸ್ಥಳೀಯರು ಮತ್ತು ಪರಸ್ಥಳೀಯರಿಗೆ ಎಂದು ದಿನಾಂಕವಾರು, ದೈನಂದಿನ ಸಮಯವಾರು ನಿಗದಿ ಮಾಡಿದರೂ ಇದಾವುದೂ ಜನಸಂದಣಿಯ ನೂಕುನುಗ್ಗಲಿನಲ್ಲಿ ಲೆಕ್ಕಕ್ಕೆ ಬರುತ್ತಿಲ್ಲ. ಜೀವನದಲ್ಲಿ ಹೆಚ್ಚೆಂದರೆ 2 ಬಾರಿ ನೋಡುವ ಅವಕಾಶವಿದ್ದರೂ ಬಹುತೇಕರಿಗೆ ಒಂದೇ ಬಾರಿ ಸಿಗುವ ಕಾರಣ ಭಕ್ತರ ಸಂಖ್ಯೆ ಹೆಚ್ಚಿದೆ. ನಿತ್ಯವೂ ಬೆಳಗ್ಗೆ 4 ಗಂಟೆಗೆ ಜನರು ಸಾಲುಗಟ್ಟುತ್ತಾರೆ. ಬೆಳಗ್ಗೆ 5 ಗಂಟೆಗೆ ದರ್ಶನಾವಕಾಶ ಆರಂಭವಾದರೆ ಕನಿಷ್ಠ ಎರಡೂವರೆ ಗಂಟೆ ಸುಮಾರು 2-3 ಕಿ.ಮೀ ಉದ್ದದ ಸರತಿಸಾಲಿನಲ್ಲಿ ನಿಲ್ಲಬೇಕು. ಏತನ್ಮಧ್ಯೆ ವಿವಿಐಪಿಗಳ ದರ್ಶನದ ಹೊತ್ತಿಗೆ ಸರತಿ ಸಾಲಿನಲ್ಲಿದ್ದವರು ಸುಮ್ಮನೆ ನಿಲ್ಲಬೇಕು. ಇಷ್ಟೊಂದು ಜನರನ್ನು ನಿಭಾಯಿಸಲು ಕಾಂಚೀಪುರಂ ಜಿಲ್ಲಾಡಳಿತ ಮತ್ತು ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಶ್ರಮ ವಹಿಸುತ್ತಿದೆ. ಚೆನ್ನೈನಿಂದ ವಿಶೇಷ ರೈಲು ಮತ್ತು ಬಸ್ಸುಗಳನ್ನು ಓಡಿಸಲಾಗುತ್ತಿದೆ. ಮೊದಲ 10-15 ದಿನ, ಕೊನೆಯ 10 ದಿನ ಕಾಂಚಿಗೆ ಬರುವುದು ಬೇಡ, ಮಧ್ಯದ ಅವಧಿಯಲ್ಲಿ ಬರಬಹುದು ಎಂಬ ಸಲಹೆಯನ್ನೂ ನೀಡಲಾಗುತ್ತಿದೆ.

“1979 ರಲ್ಲಿ ಈ ಉತ್ಸವ ನಡೆದಾಗ ದೇವಸ್ಥಾನದ ಆವರಣದೊಳಗೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದರು. ಆಗ ನನ್ನ ತಾಯಿ ಎಸ್‌. ಜಾನಕಿಯವರು ದರ್ಶನ ಮಾಡಿದ್ದರು. ಈಗ ದೇವಸ್ಥಾನದ ಆವರಣದ ಹೊರಗಿನಿಂದಲೇ ಜನಜಂಗುಳಿ ಕಂಡುಬರುತ್ತಿದೆ. ಸೌರ ಮಿಥುನ ಮಾಸದ ಶ್ರವಣ ನಕ್ಷತ್ರದ ದಿನ ಮೂಲವಿಗ್ರಹಕ್ಕೆ ವಿಶೇಷ ಅಭಿಷೇಕವನ್ನು ನಡೆಸಲಾಗುತ್ತದೆ. ಇದಾದ ಬಳಿಕ 40 ದಿನ ಉತ್ಸವ ಇರುವುದಿಲ್ಲ. ಇದೇ ವೇಳೆ ಅತ್ತಿ ವರದ ವಿಗ್ರಹವನ್ನು ಹೊರತೆಗೆದು ಪೂಜಿಸಲಾಗುತ್ತದೆ. ಅಭಿಷೇಕಕ್ಕೂ ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಎರಡೆರಡು ಕಾರಣದಿಂದ ಜನಸಂದಣಿ ಉಂಟಾಗಬಾರದೆಂದು ಈ ಕ್ರಮ ಚಾಲ್ತಿಗೆ ಬಂದಿರಬಹುದು ಎನ್ನುತ್ತಾರೆ ಕಾಂಚಿ ಸಮೀಪದ ನಾವಲಪಾಕಂ ಮೂಲದವರಾದ ಶೃಂಗೇರಿ ರಾಜೀವ್‌ ಗಾಂಧಿ ಪರಿಸರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಮೀಮಾಂಸ ವಿಭಾಗದ ಪ್ರಾಧ್ಯಾಪಕ ಡಾ| ವೆಂಕಟೇಶ ತಾತಾಚಾರ್ಯರು.

ಮಟಪಾಡಿ ಕುಮಾರಸ್ವಾಮಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಣಿಪಾಲ: ಭಯೋತ್ಪಾದನೆಯ ಮಾಸ್ಟರ್‌ ಮೈಂಡ್‌, 26/11 ಮುಂಬಯಿ ದಾಳಿಯ ರೂವಾರಿ ಹಫೀಜ್‌ ಸಯೀದ್‌ನನ್ನು ಪಾಕಿಸ್ಥಾನ ಸರಕಾರ ಬುಧವಾರ ಹಠಾತ್ತನೆ ಬಂಧಿಸಿದೆ. ಈತ ಅಮೆರಿಕ...

  • ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಮತ್ತೂಮ್ಮೆ ಭಾರತದ ಪರ ತೀರ್ಪು ನೀಡಿದೆ. ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸಬೇಕು ಎಂದು...

  • ತಾಂತ್ರಿಕ ದೋಷ ಎದುರಾದ ಕಾರಣ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಉಡಾವಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅನೇಕರು ಈ ಅಡಚಣೆಯಿಂದಾಗಿ ನಿರಾಸೆಗೊಂಡಿರುವುದು...

  • ಆಧುನಿಕ ಯುಗದಲ್ಲಿ ಹೀಮ್ಯಾನ್‌, ಸ್ಪೈಡರ್‌ಮ್ಯಾನ್‌ಗಳನ್ನು ಕಂಡಿದ್ದೆವು. ಪಿಜ್ಜಾಮ್ಯಾನ್‌ಗಳು ಬದಿಗೆ ಸರಿದು ಫ‌ುಡ್‌ ಮ್ಯಾನ್‌ಗಳಿಗೆ ದಾರಿ ಬಿಡುತ್ತಿದ್ದಾರೆ....

  • ಮಣಿಪಾಲ: 2014ರಲ್ಲಿ ಭಾರತದ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಪರಿಚಯಿಸಲಾಯಿತು. ಟೋಲ್‌ಗ‌ಳಲ್ಲಿ ಟ್ರಾಫಿಕ್‌ ಸಮಸ್ಯೆ ಕಂಡು ಬರುತ್ತಿರುವುದನ್ನು...

ಹೊಸ ಸೇರ್ಪಡೆ