ಲಾಲ್ ಚೌಕ್ ರಾಜಕೀಯ ವೇದಿಕೆಯಲ್ಲ

ಕಾಶ್ಮೀರ ಶಾಂತವಾಗಿದೆ, ರಾಹುಲ್ಗೆ ತಪ್ಪು ಮಾಹಿತಿ ಸಿಕ್ಕಿದೆ

Team Udayavani, Aug 16, 2019, 5:36 AM IST

ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ ಎನ್ನುತ್ತಾರೆ ರಾಜ್ಯಪಾಲ ಸತ್ಯಪಾಲ್ ಮಲಿಕ್‌. ‘ಕಾಶ್ಮೀರಕ್ಕೆ ಬಂದು ನಿಜ ಸ್ಥಿತಿಯನ್ನು ನೋಡಿ’ ಎಂದು ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ದ ಮಲಿಕ್‌ ಅವರು, ನಂತರ ತಾವೇಕೆ ಆ ಆಹ್ವಾನವನ್ನು ರದ್ದುಗೊಳಿಸಿಸಬೇಕಾಯಿತು ಎಂಬ ಬಗ್ಗೆ ದ ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆರವುಗೊಂಡು ಹಲವು ದಿನ ಕಳೆದಿವೆ. ಈಗ ಹೇಗಿದೆ ಪರಿಸ್ಥಿತಿ? ಹೇಗನಿಸುತ್ತಿದೆ?

ಪರಿಸ್ಥಿತಿಯ ಬಗ್ಗೆ ನನಗಂತೂ ತುಂಬಾ ತೃಪ್ತಿಯಿದೆ. ಇದಕ್ಕಾಗಿ ನಾನು ಜಮ್ಮು-ಕಾಶ್ಮೀರದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಹಿಂದೆ ಎದುರಾಗುತ್ತಿದ್ದ ಪರಿಸ್ಥಿತಿಗಳನ್ನು ನೋಡಿದವರು ಖಂಡಿತ ನನ್ನ ಈ ಮಾತನ್ನು ಒಪ್ಪುತ್ತಾರೆ. 2016ರಲ್ಲಿ ಬುರ್ಹನ್‌ ವಾನಿಯ ಹತ್ಯೆಯ ಒಂದು ವಾರದಲ್ಲೇ 40 ಮಂದಿ ಸಾವಿಗೀಡಾದರು. ಇಂಥ ಸಂದರ್ಭಗಳಲ್ಲೆಲ್ಲ ತುಂಬಾ ರಕ್ತಪಾತಗಳು ಆಗಿಹೋಗಿವೆ. ಆದರೆ ಈ ಬಾರಿ ಪೊಲೀಸರು ಬೆತ್ತ ಕೂಡ ಬೀಸಲಿಲ್ಲ. ಆದರೆ ಒಂದು ಸಂದರ್ಭದಲ್ಲಿ ಮಾತ್ರ, ವಿಪರೀತ ಕಲ್ಲು ತೂರಾಟ ಮಾಡುತ್ತಿದ್ದ ನಾಲ್ಕು ಹುಡುಗರನ್ನು ತಡೆಯಲು ಪೆಲೆಟ್ಗಳನ್ನು ಬಳಸಲಾಗಿದೆ. ಆ ಹುಡುಗರ ಕಾಲುಗಳಿಗೆ ಗಾಯವಾಗಿವೆ. ಆದರೆ, ಎಲ್ಲೂ ಫೈರಿಂಗ್‌ ಆಗಲಿ, ಲಾಠಿಚಾರ್ಜ್‌ ಆಗಲಿ ಅಥವಾ ಅಶ್ರುವಾಯು ಪ್ರಯೋಗವಾಗಲಿ ನಡೆದಿಲ್ಲ.

∙ ಕಾಶ್ಮೀರಕ್ಕೆ ಭೇಟಿ ನೀಡಿ ಎಂದು ನೀವು ರಾಹುಲ್ಗಾಂಧಿಯವರಿಗೆ ನೀಡಿದ ಆಹ್ವಾನದ ವಿಚಾರವೇ ನಾಯಿತು?

ನೋಡಿ, ಅವರಿಗೆ ತಪ್ಪು ಮಾಹಿತಿ ಸಿಕ್ಕಿದೆ. ಗಡಿಯಾಚೆಗಿಂದ ಹರಡಲಾಗುವ ಅಪಪ್ರಚಾರದ ಆಧಾರದಲ್ಲಿ ಅವರು ಮಾತನಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ, ಕಾಶ್ಮೀರದಲ್ಲಿ ಪರಿಸ್ಥಿತಿ ಹೇಗಿದೆ ಎಂದು ನೀವೇ ಬಂದು ನೋಡಿ ಎಂದು ಅವರಿಗೆ ಆಹ್ವಾನ ನೀಡಿದ್ದೆೆ. ಆದರೆ ತಮ್ಮ ಭೇಟಿಗೆ ಅವರು ಕೆಲವು ಕಂಡೀಷನ್‌ ಹಾಕಿದರು. ಒಂದು ನಿಯೋಗದೊಂದಿಗೆ ಅವರು ಕಾಶ್ಮೀರಕ್ಕೆ ಬಂದು, ನಂತರ ಗೃಹ ಬಂಧನದಲ್ಲಿರುವ ರಾಜಕಾರಣಿಗಳನ್ನು ಭೇಟಿಯಾಗುತ್ತಾರಂತೆ. ಹೀಗೆ ಮಾಡಲು ಸಾಧ್ಯವೇ? ನಾನು ಅವರನ್ನು ಆಹ್ವಾನಿಸುವಾಗ ಈ ಷರತ್ತುಗಳಿಗೆ ಒಪ್ಪಿಕೊಂಡಿರಲಿಲ್ಲ. ಈ ಕಾರಣಕ್ಕಾಗಿಯೇ ಆಹ್ವಾನವನ್ನು ರದ್ದುಗೊಳಿಸಿದೆ. ಕಳೆದ ವಾರವಷ್ಟೇ, 20ಕ್ಕೂ ಹೆಚ್ಚು ಭಾರತೀಯ ಸುದ್ದಿವಾಹಿನಿಗಳು ಇಲ್ಲಿ ಇದ್ದವು. ರಾಹುಲ್ ಗಾಂಧಿ ಈ ಮಾಧ್ಯಮಗಳನ್ನು ಮಾತನಾಡಿಸಿ, ಕಣಿವೆಯಲ್ಲಿನ ನಿಜ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲಿ.

∙ ಸ್ವಾತಂತ್ರ್ಯ ದಿನದಂದು ಲಾಲ್ಚೌಕದಲ್ಲಿ ಅಮಿತ್‌ ಶಾ ಧ್ವಜಾರೋಹಣ ಮಾಡುತ್ತಾರೆ ಎಂಬ ಸುದ್ದಿ ಇತ್ತಲ್ಲ?

ನಿಜಕ್ಕೂ ಇದೊಂದು ಅಸಂಬದ್ಧ ವದಂತಿ. ಗೃಹ ಸಚಿವರಿಗೆ ಇಂಥದೊಂದು ವಿಚಾರ ತಲೆಯಲ್ಲೂ ಇಲ್ಲ. ಲಾಲ್ಚೌಕ್‌ ಏನು ಲಾಲ್ ಕಿಲಾನಾ(ಕೆಂಪುಕೋಟೆಯೇ?). ಶ್ರೀನಗರದಲ್ಲಿ ಲಾಲ್ಚೌಕಕ್ಕೆ ತನ್ನದೇ ಆದ ಮಹತ್ವವಿದೆ. ಆದರೆ ರಾಜಕೀಯ ಸಂದೇಶಕಳುಹಿಸುವುದಕ್ಕಾಗಿ ಈ ಜಾಗದಿಂದ ನಾವು ರಾಷ್ಟ್ರಧ್ವಜ ಹಾರಿಸಲಾಗದು.

∙ ಅಕ್ಟೋಬರ್‌ ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಮೊದಲ ಹೂಡಿಕೆದಾರರ ಸಮಾವೇಶವನ್ನು ಏರ್ಪಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆಯಲ್ಲ?

ನಾನು ಈ ರಾಜ್ಯಕ್ಕೆ ಮೊದಲ ಬಾರಿ ಬಂದಾಗ, ಶ್ರೀನಗರದಲ್ಲಿನ ಅನೇಕ ಸ್ನೇಹಿತರೊಂದಿಗೆ ಮಾತನಾಡಿದೆ. ಜಮ್ಮು-ಕಾಶ್ಮೀರ ಪ್ರದೇಶಕ್ಕೆ ಸಮೃದ್ಧಿಯನ್ನು ತರಬೇಕೆಂದರೆ ಈ ರೀತಿಯ ಶೃಂಗಸಭೆಯನ್ನು ಆಯೋಜಿಸಲೇಬೇಕು ಎಂದು ಹೋಟೆಲ್ ಮತ್ತು ಪ್ರವಾಸೋದ್ಯಮದಲ್ಲಿ ಇರುವವರು ಸಲಹೆ ನೀಡಿದರು. ಕೇಂದ್ರದ ನಿರ್ಣಯವು ಇದೆಲ್ಲದರ ಫ‌ಲ. ಈಗ ಬದಲಾದ ಪರಿಸ್ಥಿತಿಯಲ್ಲಿ, ಬಹಳಷ್ಟು ಜನರು ತಾವು ಹೂಡಿಕೆ ಮಾಡಲಿಚ್ಛಿಸಿರುವುದಾಗಿ ಮುಂದೆ ಬರುತ್ತಿದ್ದಾರೆ. ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಖೇಶ್‌ ಅಂಬಾನಿ, ತಾವು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ. ಉದ್ಯಮಿ ಸಂಜಯ್‌ ದಾಲ್ಮಿಯಾರಿಂದಲೂ ನನಗೆ ಸಂದೇಶ ಬಂದಿದ್ದು, ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಉದ್ಯೋಗ ಸೃಷ್ಟಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ತಾವು ಶಿಕ್ಷಣ ವಲಯದಲ್ಲಿ ಹೂಡಿಕೆ ಮಾಡುವುದಾಗಿ ಅವರು ಹೇಳಿದ್ದಾರೆ. ಈ ವಿಷಯವನ್ನು ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೂ ಹಂಚಿಕೊಂಡಿದ್ದಾರೆ. ಇನ್ನು, ಕಾಂಟಿ ನೆಂಟಲ್ ಟಯರ್ಸ್‌ ಸಂಸ್ಥೆಯ ಬಿ.ಕೆ. ಮೋದಿಯವರೂ ಸಹ ತಮ್ಮ ಹೂಡಿಕೆಯ ಪ್ಲ್ರಾನ್‌ ಅನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಅಕ್ಟೋಬರ್‌ ತಿಂಗಳಲ್ಲಿನ ಹೂಡಿಕೆದಾರರ ಸಮಾವೇಶ ಯಶಸ್ವಿಯಾಯಿತೆಂದರೆ, ಜಮ್ಮು-ಕಾಶ್ಮೀರದ ಚಹರೆಯೇ ಬದಲಾಗಲಿದೆ.

∙ ಜಮ್ಮು-ಕಾಶ್ಮೀರದಲ್ಲಿ ಕೆಲವು ದಿನಗಳಿಂದ ಜಾರಿಯಿರುವ ನಿರ್ಬಂಧಗಳನ್ನು ಸಡಿಲಿಸುವ ಯೋಚನೆಯಿದೆಯೇ?

ಸ್ವಾತಂತ್ರ್ಯೋತ್ಸವದ ನಂತರದಿಂದ ಟ್ರಾಫಿಕ್‌ ಮತ್ತು ಜನರ ಓಡಾಟವನ್ನು ಸಡಿಲಿಸಲು ಆಗಲೇ ಸೂಚಿಸಿಲಾಗಿತ್ತು. ಇನ್ನು ಟೆಲಿಫೋನ್‌ ಮತ್ತು ಇಂಟರ್ನೆಟ್ ವಿಚಾರಕ್ಕೆ ಬರುವುದಾದರೆ, ಕಾಶ್ಮೀರ ಕಣಿವೆಯಲ್ಲಿ ಇವು ‘ಶತ್ರುಗಳ ಪಾಲಿನ ಅಸ್ತ್ರಗಳು. ಶಾಂತಿಯನ್ನು ಕದಡಲು ಬಯಸುವವರು, ಯುವ ಜನಾಂಗದ ಬ್ರೇನ್‌ ವಾಶ್‌ ಮಾಡಿ, ಅವರನ್ನು ಒಂದುಗೂಡಿಸಲು ಬಯಸುವವರೆಲ್ಲ ಈ ಅಸ್ತ್ರಗಳನ್ನು ಬಳಸುತ್ತಾರೆ. ಹೀಗಾಗಿ ಪರಿಸ್ಥಿತಿ ತಿಳಿಗೊಳ್ಳುವ ವರೆಗೆ ನಾವು ಈ ವಿಷಯದಲ್ಲಿ ಜಾಗರೂಕರಾಗಿರಲು ನಿರ್ಧರಿಸಿದ್ದೇವೆ. ಇನ್ನೊಂದು ವಾರ ಅಥವಾ ಹತ್ತು ದಿನದಲ್ಲಿ ಎಲ್ಲವೂ ಸರಿಯಾಗುತ್ತದೆ. ನಂತರ ನಿಧಾನಕ್ಕೆ ಸಂವಹದನ ದ್ವಾರಗಳನ್ನು ತೆರೆಯಲಿದ್ದೇವೆ.

∙ ಈ ರೀತಿಯ ನಿರ್ಬಂಧಗಳಿಂದ ಜನರ ನಡುವಿನ ಸಂವಹನಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಟೀಕಾಕಾರರು ಹೇಳುತ್ತಿದ್ದಾರಲ್ಲ?

ಯಾವುದು ಮುಖ್ಯ ಎನ್ನುವುದನ್ನು ನಾವು ನಿರ್ಧರಿಸಬೇಕಾಗುತ್ತದಲ್ಲವೇ? ನಮಗೆ ನಾಗರಿಕರ ಬದುಕು ಹೆಚ್ಚು ಮುಖ್ಯ. ಯಾವ ಸಾವುನೋವೂ ಸಂಭವಿಸದೇ, ಯಾವುದೇ ರೀತಿಯ ಹಿಂಸೆಗಳೂ ಎದುರಾಗದಂತೆ ಈ ಘಟ್ಟವು ಮುಗಿಯಲಿ ಎಂಬುದು ನಮ್ಮ ಬಯಕೆ. ಫೋನ್‌ನಲ್ಲಿ ಮಾತನಾಡುವುದೋ ಅಥವಾ ಇಂಟರ್ನೆಟ್ ಬಳಸುವುದೇ ಬದುಕಲ್ಲ. ಎಲ್ಲರೂ ಶಾಂತಿಯಿಂದ ಬದುಕುವಂತೆ ಮಾಡುವುದು ಅಗತ್ಯ. ನಾವು ಈ ಕ್ರಮಗಳನ್ನು ಸಾಮಾಜಿಕ ಶಾಂತಿ ಮತ್ತು ಹಿತರಕ್ಷಣೆಯ ದೃಷ್ಟಿಯಿಂದ ಮಾಡಿದ್ದೇವೆ.

∙ ಕಾಶ್ಮೀರಿಗಳ ಹೃದಯ ಮತ್ತು ಮನಸ್ಸನ್ನು ಹೇಗೆ ಗೆಲ್ಲಬಲ್ಲಿರಿ?

ಸ್ವಾತಂತ್ರ್ಯೋತ್ಸವದ ನಂತರದಿಂದ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದೇವೆ. ರಾಜ್ಯದ ಮರುರಚನೆಯ ಪ್ರಯೋಜನಗಳೇನು, ಕೇಂದ್ರಾಡಳಿತ ಪ್ರದೇಶಗಳಿಂದ ಆಗುವ ಲಾಭವೇನು ಎನ್ನುವ ಮಾಹಿತಿಯನ್ನೆಲ್ಲ ಉರ್ದು, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟಿಸಲಿದ್ದೇವೆ. ಇನ್ನು ಸರ್ಕಾರದಲ್ಲಿ ಎಷ್ಟು ಉದ್ಯೋಗಗಳು ಖಾಲಿ ಇವೆ ಎನ್ನುವ ಖಚಿತ ಅಂಕಿ ನೀಡುವಂತೆ ನಾನು ನನ್ನ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ಯಾವುದೇ ಸಂದರ್ಶನಗಳನ್ನು ನಡೆಸದೇ ಮಾರ್ಕ್‌ಶೀಟ್‌ನ ಆಧಾರದ ಮೇಲೆ ನಾವು ಯುವಕರಿಗೆ ಉದ್ಯೋಗ ಕೊಡುತ್ತೇವೆ.

∙ ಅಭಿವೃದ್ಧಿ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬರಬಲ್ಲವೇನು?
ನಾವು 52 ಕಾಲೇಜುಗಳನ್ನು ಸ್ಥಾಪಿಸಿದ್ದೇವೆ. ಮುಂದಿನ ಎರಡು ತಿಂಗಳಲ್ಲಿ, ಇನ್ನೂ 15 ಕಾಲೇಜುಗಳನ್ನು ಸ್ಥಾಪಿಸಲಿದ್ದೇವೆ. 238 ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲಾ ಮಟ್ಟಕ್ಕೆ ವಿಸ್ತರಿಸಿದ್ದೇವೆ. ಪುಲ್ವಾಮಾದಲ್ಲಿ ಏಮ್ಸ್‌ನ ಮೇಲೆ ಕೆಲಸಗಳು ನಡೆಯುತ್ತಿವೆ. ಐಐಟಿಗಳ ಸ್ಥಾಪನೆಯ ತಯ್ನಾರಿಯೂ ನಡೆದಿದೆ. ಸುಮಾರು 800 ವೈದ್ಯರಿಗೆ ತರಬೇತಿ ನೀಡುತ್ತಿದ್ದೇವೆ. ಕಾರ್ಗಿಲ್ ವಿಮಾನನಿಲ್ದಾಣಕ್ಕಾಗಿ 200 ಕೋಟಿ ರೂಪಾಯಿ ಅನುದಾನ ನೀಡಿದ್ದೇವೆ.

ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಖೇಶ್‌ ಅಂಬಾನಿ, ತಾವು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ. ಉದ್ಯಮಿ ಸಂಜಯ್‌ ದಾಲ್ಮಿಯಾರಿಂದಲೂ ನನಗೆ ಸಂದೇಶ ಬಂದಿದ್ದು, ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಉದ್ಯೋಗ ಸೃಷ್ಟಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ತಾವು ಶಿಕ್ಷಣ ವಲಯದಲ್ಲಿ ಹೂಡಿಕೆ ಮಾಡುವುದಾಗಿ ಅವರು ಹೇಳಿದ್ದಾರೆ. ಈ ವಿಷಯವನ್ನು ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೂ ಹಂಚಿಕೊಂಡಿದ್ದಾರೆ. ಅಕ್ಟೋಬರ್‌ ತಿಂಗಳಲ್ಲಿನ ಹೂಡಿಕೆದಾರರ ಸಮಾವೇಶ ಯಶಸ್ವಿಯಾಯಿತೆಂದರೆ, ಜಮ್ಮು-ಕಾಶ್ಮೀರದ ಚಹರೆಯೇ ಬದಲಾಗಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ