ಮೋದಿ ಅಲೆಯಲ್ಲಿ ಅನಿರೀಕ್ಷಿತ ಗೆಲುವಿನ ದೋಣಿ

Team Udayavani, May 25, 2019, 5:00 AM IST

ಲೋಕಸಭೆ ಚುನಾವಣೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಕೆಲವು ಕಡೆ ಅನಿರೀಕ್ಷಿತ ಹಾಗೂ ಆಘಾತಕಾರಿ ಫ‌ಲಿತಾಂಶ ನೀಡಿದ್ದು, ರಾಜಕೀಯವಾಗಿ ಎಚ್ಚರಿಕೆ ಸಂದೇಶ ನೀಡಿದೆ. ಸೋಲನ್ನೇ ಕಾಣದವರಿಗೆ ಸೋಲಿನ ರುಚಿ ಉಣಿಸಿದೆ. ಸೋಲಿನ ಕಹಿ ಅನುಭವಿಸುತ್ತಿದ್ದವರಿಗೆ ಗೆಲುವಿನ ಸಿಹಿ ಕರುಣಿಸಿದೆ. ಮೋದಿ ಅಲೆ ವಿಪಕ್ಷಗಳ ಅಸ್ತಿತ್ವವೇ ಇಲ್ಲದಂತೆ ಮಾಡಿದೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿನ ನಾಲ್ಕು ಕ್ಷೇತ್ರಗಳ ಅನಿರೀಕ್ಷಿತ ಹಾಗೂ ಆಘಾತಕಾರಿ ಫ‌ಲಿತಾಂಶದ ಹಿಂದಿನ ಕಾರಣಗಳ ಅವಲೋಕನ ಇಲ್ಲಿದೆ.

ಮೋದಿ ಅಲೆಯಲ್ಲಿ ನಗೆ ಬೀರಿದ ನಾರಾಯಣ!: ರಾಜಕೀಯ ವಿರೋಧಿಗಳು ಒಪ್ಪಬಹುದಾದ ಸಂಭಾವಿತ ವ್ಯಕ್ತಿ ಹಾಗೂ ಉತ್ತಮ ಕೆಲಸಗಾರ ಎಂದೇ ಪರಿಗಣಿಸುವ ಕೋಟೆನಾಡು ಚಿತ್ರದುರ್ಗದ ಮೈತ್ರಿ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಎರಡು ಕ್ಷೇತ್ರಗಳ ಮೇಲಿದ್ದ ಅತಿಯಾದ ವಿಶ್ವಾಸವೇ ಮುಳುವಾಯಿತು.

2014ರಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿ.ಎನ್‌.ಚಂದ್ರಪ್ಪ, ಉತ್ತಮ ಸಂಸದ ಎಂಬ ಖ್ಯಾತಿ ಪಡೆದಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಆನೇಕಲ್‌ ನಾರಾಯಣಸ್ವಾಮಿ ವಿರುದ್ಧ ಸುಮರು 80,178 ಮತಗಳ ಅಂತರದ ಸೋಲಿನೊಂದಿಗೆ ಆಘಾತ ಅನುಭವಿಸಿದ್ದಾರೆ.

ಬಿಜೆಪಿಯಿಂದ ಭೋವಿ ಸಮಾಜದವರಿಗೆ ಟಿಕೆಟ್‌ ನೀಡಬೇಕೆಂಬ ಬಹುದೊಡ್ಡ ಒತ್ತಡ, ಪ್ರತಿರೋಧದ ನಡುವೆಯೂ ಆನೇಕಲ್‌ ನಾರಾಯಣಸ್ವಾಮಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆಯಲ್ಲಿ ಇವರಿಗೆ ತೀವ್ರ ಪ್ರತಿರೋಧ ಎದುರಾಗಬಹುದೆಂಬ ಲೆಕ್ಕಾಚಾರಗಳನ್ನೆಲ್ಲ ಬುಡಮೇಲು ಮಾಡಿದ್ದು ಮೋದಿ ಅಲೆ ಎಂಬುದು ಸ್ಪಷ್ಟ.

ಚಿತ್ರದುರ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ , ಹಿರಿಯೂರು, ಮೊಣಕಾಲ್ಮೂರು ಕ್ಷೇತ್ರಗಳಲ್ಲಿ ಸಮಬಲ ಹೋರಾಟ ಬಂದರೂ ತಮಗೆ ಪಾವಗಡ ಮತ್ತು ಶಿರಾ ಕ್ಷೇತ್ರಗಳು ಹೆಚ್ಚಿನ ಲೀಡ್‌ ತಂದು ಕೊಡಲಿದ್ದು, ಆ ಲೀಡ್‌ನಿಂದಲೇ ಗೆಲುವು ಸಾಧ್ಯವಾಗಲಿದೆ ಎಂದು ಮೈತ್ರಿ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ನಂಬಿದ್ದರು. ಆದರೆ, ಈ ಎರಡು ಕ್ಷೇತ್ರಗಳು ನಿರೀಕ್ಷೆ ಹುಸಿಗೊಳಿಸಿವೆ.

ಥರಗುಟ್ಟಿದ ಬಿ.ವಿ.ನಾಯಕ!: ರಾಯಚೂರು ಲೋಕಸಭೆ ಕ್ಷೇತ್ರ ಕಾಂಗ್ರೆಸ್‌ ಪಾಲಿಗೆ ಭದ್ರಕೋಟೆ ಎಂದೇ ಬಿಂಬಿತವಾಗಿದೆ. 1952ರಿಂದ 2018ರವರೆಗೆ ನಡೆದ ಸುಮಾರು 16 ಚುನಾವಣೆಗಳಲ್ಲಿ 13 ಬಾರಿ ಕಾಂಗ್ರೆಸ್‌ ಗೆದ್ದಿದೆ. ರಾಯಚೂರು ಕ್ಷೇತ್ರ ಸಂಸದರಾಗಿದ್ದ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಅವರ ತಂದೆ ವೆಂಕಟೇಶ ನಾಯಕ ಸತತ ಮೂರು ಬಾರಿ ಇದೇ ಕ್ಷೇತ್ರದಿಂದ ಸಂಸದರಾಗಿದ್ದರು. ಒಟ್ಟಾರೆ ನಾಲ್ಕು ಬಾರಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

2009ರಲ್ಲಿ ಬಿಜೆಪಿಗೆ ಹೋಗಿದ್ದ ಕ್ಷೇತ್ರವನ್ನು ಕಸಿದುಕೊಂಡು ಕಾಂಗ್ರೆಸ್‌ಗೆ ನೀಡುವಲ್ಲಿ ಬಿ.ವಿ.ನಾಯಕ ಯಶಸ್ವಿಯಾಗಿದ್ದರು. ಆದರೆ, 2019ರ ಚುನಾವಣೆಯಲ್ಲಿ ಬಿಜೆಪಿಯ ಅಮರೇಶ್ವರ ನಾಯಕ ವಿರುದ್ಧ ಸುಮಾರು 1,17,716 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಸಂಸದರಾಗಿದ್ದರೂ ಏನೊಂದು ಸಾಧನೆ ತೋರಿಲ್ಲ ಎಂಬ ಅಸಮಾಧಾನ, ಆಡಳಿತ ವಿರೋಧಿ ಅಲೆ ಜತೆಗೆ ಮೋದಿ ಅಲೆ ಸೇರಿದ್ದರಿಂದ ನಿರೀಕ್ಷೆಗೂ ಮೀರಿದ ಸೋಲಿನ ಆಘಾತ ಕಾಂಗ್ರೆಸ್‌ಗೆ ಉಂಟಾಗಿದೆ. ಜತೆಗೆ ಕಾಂಗ್ರೆಸ್‌ ಪಕ್ಷದಲ್ಲಿನ ಗುಂಪುಗಾರಿಕೆ, ಆಂತರಿಕ ಭಿನ್ನಾಭಿಪ್ರಾಯವೂ ಮೈತ್ರಿ ಅಭ್ಯರ್ಥಿ ಸೋಲಿಗೆ ತನ್ನದೇ ಕೊಡುಗೆ ನೀಡಿದೆ ಎನ್ನಲಾಗಿದೆ.

ಜೆಡಿಎಸ್‌ನೊಂದಿಗೆ ಮೈತ್ರಿಯಾಗಿದ್ದರೂ ಕ್ಷೇತ್ರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ನೆರವಿಗೆ ಬಂದಿಲ್ಲ. ಮಾನ್ವಿಯಲ್ಲಿ ಜೆಡಿಎಸ್‌ ಶಾಸಕರಿದ್ದರೂ ಕಾಂಗ್ರೆಸ್‌ನ ಕೆಲ ನಾಯಕರೊಂದಿಗೆ ಇರುವ ಅಸಮಾಧಾನ ಸಕ್ರಿಯತೆ ತೋರದಂತೆ ಮಾಡಿದೆ. ಕೆಲವೊಂದು ಕಡೆಗಳಲ್ಲಿ ಜೆಡಿಎಸ್‌ನವರು ತಟಸ್ಥ ಧೋರಣೆ ತಾಳಿದ್ದರು. ಬಿ.ವಿ.ನಾಯಕ ಅವರಿಗೆ ದೇವದುರ್ಗ ಒಂದು ಕ್ಷೇತ್ರದಲ್ಲಿ ಮಾತ್ರ ಸುಮಾರು 5 ಸಾವಿರ ಮತಗಳ ಲೀಡ್‌ ನೀಡಿದ್ದು, ಇಲ್ಲಿ ಬಿಜೆಪಿ ಶಾಸಕರಿದ್ದಾರೆ.

ಬಿಜೆಪಿ ಅಭ್ಯರ್ಥಿಗೆ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದ್ದು, ಮತದಾನ ಪ್ರಮಾಣ ಹೆಚ್ಚಳ, ಹೊಸ ಮತದಾರರು ಬಹುತೇಕರು ಮೋದಿಗೆ ಜೈ ಅಂದಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರದಲ್ಲಿನ ರಾಜರ ಮನೆತನದ ರಾಜಕೀಯ ಮುಖಂಡರು ರಾಜಾ ಅಮರೇಶ್ವರ ನಾಯಕ ಪರವಾಗಿ ನಿಂತಿದ್ದು ಎಲ್ಲವೂ ಸೇರಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಅವರ ಎರಡನೇ ಬಾರಿ ಲೋಕಸಭೆ ಪ್ರವೇಶ ಕನಸನ್ನು ನುಚ್ಚು ನೂರು ಮಾಡಿವೆ.

ಕತ್ತಿ ನಂಬಿ ಕಂಗೆಟ್ಟ ಹುಕ್ಕೇರಿ; ಅಣ್ಣಾ ಬೆನ್ನಿಗೆ ನಿಂತ ರಮೇಶ!: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿದ್ದ ಪ್ರಕಾಶ ಹುಕ್ಕೇರಿ ತಮ್ಮದೇ ಪ್ರಭಾವ, ಹಿಡಿತ ಹೊಂದಿದ್ದರಾದರೂ ಈ ಬಾರಿಯ ಚುನಾವಣೆ ಸೋಲಿನ ಜತೆಗೆ ಹೆಚ್ಚಿನ ಮತಗಳ ಅಂತರದ ಸೋಲು ಆಘಾತ ತರಿಸಿದೆ. ಬಿಜೆಪಿಯಿಂದ ಟಿಕೆಟ್‌ಗೆ ಅಪ್ಪಾಸಾಹೇಬ್‌ ಜೊಲ್ಲೆ ಹಾಗೂ ರಮೇಶ ಕತ್ತಿ ನಡುವೆ ತೀವ್ರ ಪೈಪೋಟಿ ನಡೆದಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರೋಧದ ನಡುವೆಯೂ ಆರ್‌ಎಸ್‌ಎಸ್‌ ಕೃಪಾಶೀರ್ವಾದದೊಂದಿಗೆ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಅಣ್ಣಾಸಾಹೇಬ್‌ ಜೊಲ್ಲೆ, ಎಲ್ಲ ಲೆಕ್ಕಾಚಾರಗಳನ್ನು ಮೀರಿ ಮೈತ್ರಿ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ವಿರುದ್ಧ 1,18,897 ಮತಗಳ ಅಂತರದ ಗೆಲುವಿನೊಂದಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಕತ್ತಿ ಕುಟುಂಬದ ಅಸಮಾಧಾನದ ನಡುವೆಯೂ ಮೋದಿ ಅಲೆಯೊಂದಿಗೆ ಜೊಲ್ಲೆ ದಿಗ್ವಿಜಯರಾಗಿದ್ದಾರೆ.

ಈ ಹಿಂದೆ ಪ್ರಕಾಶ ಹುಕ್ಕೇರಿ ಪುತ್ರ ಗಣೇಶ ಹುಕ್ಕೇರಿ ವಿರುದ್ಧ ಸೋಲುಂಡ ಸೇಡನ್ನು ಇದೀಗ ತೀರಿಸಿಕೊಂಡಿದ್ದಾರೆ. ಪ್ರಕಾಶ ಹುಕ್ಕೇರಿ ಅವರ ಕುರಿತಾಗಿ ಕಾಂಗ್ರೆಸ್‌ನ ಶಾಸಕರು ಹಾಗೂ ಮಾಜಿ ಶಾಸಕರಿಗೆ ಅಸಮಾಧಾನವಿದೆ. ವಿಧಾನಸಭೆ ಚುನಾವಣೆಯಲ್ಲಿ ಪ್ರಕಾಶ ಹುಕ್ಕೇರಿ ತಮ್ಮ ಪರ ಸರಿಯಾಗಿ ಕೆಲಸ ಮಾಡಲಿಲ್ಲ ಎಂಬ ಸಿಟ್ಟು ಒಂದು ಕಡೆಯಾದರೆ, ಸಂಸದರಾಗಿ ಅನುದಾನ ಹಂಚಿಕೆಯನ್ನು ಸರಿಯಾಗಿ ಮಾಡಲಿಲ್ಲ. ತಮ್ಮ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟರು ಎಂಬ ಕೊರತು ಕಾಂಗ್ರೆಸ್‌ನ ಅನೇಕರಲ್ಲಿದೆ.

ಕಾಂಗ್ರೆಸ್‌ ಶಾಸಕರಾಗಿದ್ದರೂ ಪಕ್ಷದೊಂದಿಗಿನ ಭಿನ್ನಮತದೊಂದಿಗೆ ರಮೇಶ ಜಾರಕಿಹೊಳಿ ಅವರು ಚಿಕ್ಕೋಡಿ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಇರುವ ನಿಪ್ಪಾಣಿ, ರಾಯಭಾಗ ಇನ್ನಿತರ ಕಡೆಗಳಲ್ಲಿ ತಮ್ಮ ಬೆಂಬಲಿಗರಿಗೆ ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿರುವುದು, ಬಿಜೆಪಿಯಲ್ಲಿ ಟಿಕೆಟ್‌ ದೊರೆಯದೆ ಅಸಮಾಧಾನಗೊಂಡಿರುವ ಕತ್ತಿ ಸಹೋದರರು ತಮ್ಮ ಪರವಾಗಿ ಹೆಚ್ಚಿನ ರೀತಿಯಲ್ಲಿ ಕೈ ಹಿಡಿಯಲಿದ್ದಾರೆ ಎಂದು ಅತಿಯಾಗಿ ನಂಬಿದ್ದು ಪ್ರಕಾಶ ಹುಕ್ಕೇರಿ ಸೋಲಿಗೆ ಕಾರಣವಾಯಿತು.

“ಉಗ್ರಪ್ಪ’ರನ್ನು ಮುಳುಗಿಸಿದ ಕಾಂಗ್ರೆಸ್‌ ಕಚ್ಚಾಟ’: ಸೋನಿಯಾ ಗಾಂಧಿ ಗೆಲ್ಲಿಸಿದ ಕ್ಷೇತ್ರವೆಂಬ ಹಣೆಪಟ್ಟಿ ಹೊತ್ತಿದ್ದ ಬಳ್ಳಾರಿ ಕ್ಷೇತ್ರ 2004ರಿಂದ ಕೈತಪ್ಪಿ ಬಿಜೆಪಿ ಹಿಡಿತಕ್ಕೆ ಸಿಲುಕಿತ್ತು. 2018ರ ಉಪ ಚುನಾವಣೆಯಲ್ಲಿ ಮತ್ತೆ ಪಕ್ಷಕ್ಕೆ ಕ್ಷೇತ್ರವನ್ನು ತಂದು ಕೊಡುವಲ್ಲಿ ವಿ.ಎಸ್‌.ಉಗ್ರಪ್ಪ ಯಶಸ್ವಿಯಾಗಿದ್ದರು. ಕೈ ಜಾರಿದ್ದ ಕ್ಷೇತ್ರ ಮತ್ತೆ ಸಿಕ್ಕಿದೆ ಎಂಬ ಸಂತಸ ಕಾಂಗ್ರೆಸ್‌ಗೆ ಬಹಳ ದಿನ ಉಳಿಯಲಿಲ್ಲ. ಕೇವಲ ಆರು ತಿಂಗಳಲ್ಲಿಯೇ ಕಾಂಗ್ರೆಸ್‌ ಕ್ಷೇತ್ರ ಕಳೆದುಕೊಂಡಿದೆ.

ಒಂದು ಕಾಲಕ್ಕೆ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಗಣಿ ನಾಡು ಬಳ್ಳಾರಿಯಲ್ಲಿ 2004, 2009, 2014 ಹಾಗೂ 2018ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2018ರಲ್ಲಿ ಶ್ರೀರಾಮುಲು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಉಗ್ರಪ್ಪ ಸುಮಾರು 2.43 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು ಕಂಡಿದ್ದರು.

ಕೇವಲ ಆರು ತಿಂಗಳ ಅವಧಿಯ ಉಪ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಉಗ್ರಪ್ಪ ಮತ್ತೂಮ್ಮೆ ಪೂರ್ಣಾವಧಿಗೆ ಲೋಕಸಭೆ ಪ್ರವೇಶದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಕ್ಷೇತ್ರದಲ್ಲಿ ಆರು ಜನ ಕಾಂಗ್ರೆಸ್‌ ಶಾಸಕರು, ಇಬ್ಬರು ಸಚಿವರು, ವಿಧಾನ ಪರಿಷತ್‌ ಸದಸ್ಯರು, ಇದು ಸಾಲದು ಎನ್ನುವಂತೆ ಡಿ.ಕೆ.ಶಿವಕುಮಾರ ಅವರ ಉಸ್ತುವಾರಿ ಇದೆಲ್ಲದ್ದರಿಂದ ತಮ್ಮ ಗೆಲುವು ಸುಲಭ ಎಂದುಕೊಂಡಿದ್ದರು.

ಕಾಂಗ್ರೆಸ್‌ನಲ್ಲಿದ್ದು, ಕೊನೆ ಗಳಿಗೆಯಲ್ಲಿ ಬಿಜೆಪಿ ಸೇರಿ ಲೋಕಸಭೆಗೆ ಸ್ಪರ್ಧಿಸಿದ್ದ ವೈ.ದೇವೇಂದ್ರಪ್ಪ ಅವರು, ಉಗ್ರಪ್ಪಗೆ ತೀವ್ರ ಸ್ಪರ್ಧೆಯೊಡ್ಡಲಾರರು ಎಂದೇ ಭಾವಿಸಲಾಗಿತ್ತು. ಆದರೆ, ಕೇವಲ ಆರು ತಿಂಗಳ ಹಿಂದೆಯಷ್ಟೇ ಸುಮಾರು 2.43 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ವಿ.ಎಸ್‌.ಉಗ್ರಪ್ಪ ಅವರನ್ನು 55,707 ಮತಗಳ ಅಂತರದಿಂದ ಸೋಲಿಸುವ ಮೂಲಕ ದೇವೇಂದ್ರಪ್ಪ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಪಡೆದಿದ್ದಾರೆ.

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಶಾಸಕರ ನಡುವಿನ ಕಿತ್ತಾಟ, ಪಕ್ಷದೊಂದಿಗೆ ಇರುವ ಭಿನ್ನಾಭಿಪ್ರಾಯ, ಆಪರೇಶನ್‌ ಕಮಲಕ್ಕೆ ಬಲಿಯಾಗಲಿದ್ದಾರೆ ಎಂಬ ಗುಲ್ಲು, ಪಕ್ಷದ ಮುಖಂಡರು ನಿರೀಕ್ಷಿತ ರೀತಿಯಲ್ಲಿ ಸಾಥ್‌ ನೀಡದಿರುವುದು ಉಗ್ರಪ್ಪ ಸೋಲಿಗೆ ಪ್ರಮುಖ ಕಾರಣ. ಶ್ರೀರಾಮುಲು ಸೇರಿದಂತೆ ಬಿಜೆಪಿ ಅನೇಕ ಸ್ಥಳೀಯ ಮುಖಂಡರು, ಪಕ್ಷದ ವಿವಿಧ ನಾಯಕರು ಸಂಘಟಿತ ಕಾರ್ಯ ತೋರಿದ್ದರಲ್ಲದೆ, ಆಘಾತಕಾರಿ ರೀತಿಯಲ್ಲಿ ಕೈ ತಪ್ಪಿದ್ದ ಕ್ಷೇತ್ರವನ್ನು ಮತ್ತೆ ಮರುವಶ ಪಡಿಸಿಕೊಳ್ಳಲೇಬೇಕೆಂಬ ಛಲ, ಮೋದಿ ಅಲೆ ಮೈತ್ರಿ ಅಭ್ಯರ್ಥಿಯನ್ನು ಮಣಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

* ಅಮರೇಗೌಡ ಗೋನವಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ