ಶಬರಿಮಲೆ: ತೀರ್ಪಿನ ತಕ್ಕಡಿಯಲ್ಲಿ ಸಂಪ್ರದಾಯ vs ಸಮಾನತೆ

Team Udayavani, Nov 14, 2019, 6:30 AM IST

ಕೆಲವೇ ದಿನಗಳ ಹಿಂದೆ ಅಯೋಧ್ಯೆ ವಿಚಾರದಲ್ಲಿ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ಇಂದು ಶಬರಿಮಲೆ ವಿಚಾರದಲ್ಲೂ ಮಹತ್ತರ ತೀರ್ಪು ನೀಡುವ ನಿರೀಕ್ಷೆಯಿದೆ. ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಹೆಣ್ಣುಮಕ್ಕಳೂ ಪ್ರವೇಶಿಸಬಹುದು ಎಂದು ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ತೀವ್ರ ವಿವಾದಕ್ಕೆ-ಗದ್ದಲಕ್ಕೆ ಕಾರಣವಾಗಿತ್ತು, ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳಾದವು. ತೀರ್ಪನ್ನು ಅನುಷ್ಠಾನಕ್ಕೆ ತರಲು ಮುಂದಾದ ಪಿಣರಾಯಿ ಸರಕಾರದ ವಿರುದ್ಧ ಸಾವಿರಾರು ಮಹಿಳೆಯರೂ ರಸ್ತೆಗಿಳಿದು ಪ್ರತಿಭಟಿಸಿದರು. ಈಗ ಮರುಪರಿಶೀಲನಾ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ನೀಡಲಿರುವ ಹೊತ್ತಲ್ಲೇ, ಅತ್ತ ಮಂಡಲ ಮಕರವಿಳಕ್ಕು ವಾರ್ಷಿಕ ಪೂಜಾ ಕಾರ್ಯಗಳ ಅಂಗವಾಗಿ ನವೆಂಬರ್‌ 17ರಂದು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆಯಲು ಸಿದ್ಧತೆಗಳು ನಡೆದಿವೆ. ಹೀಗಾಗಿ ತೀರ್ಪಿನ ಕುರಿತು ರಾಜಕೀಯ ಪಕ್ಷಗಳಿಗೆ, ಮಹಿಳಾಪರ ಹೋರಾಟಗಾರರಿಗೆ, ಭಕ್ತಾದಿಗಳಿಗೆ ತೀವ್ರ ಕುತೂಹಲ ಎದುರಾಗಿದೆ…

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 10-50 ವಯೋಮಿತಿ ಸೇರಿದಂತೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್‌ ಸೆ. 28, 2018ರಂದು ಐತಿಹಾಸಿಕ ತೀರ್ಪು ನೀಡಿತ್ತು. ಆ ಮೂಲಕ ಶತಮಾನಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಟನ್‌ ನಾರಿಮನ್‌, ಎ.ಎಂ. ಖಾನ್ವಿಲ್ಕರ್‌, ಡಿ. ವೈ. ಚಂದ್ರಚೂಡ್‌ ಮತ್ತು ಇಂದೂ ಮಲ್ಹೋತ್ರಾ ಅವರಿದ್ದ ನ್ಯಾಯಪೀಠ 4:1 ತೀರ್ಪು ನೀಡಿತ್ತು. “”ದೈವಭಕ್ತಿಯಲ್ಲಿ ತಾರತಮ್ಯ ಸಲ್ಲದು. 10-50 ವಯೋಮಾನದ ಹೆಣ್ಣುಮಕ್ಕಳನ್ನು ಹೊರಗಿಡುವುದು ದೇವಾಲಯಕ್ಕೆ ಅನಿವಾರ್ಯವಾದ ಧಾರ್ಮಿಕ ಆಚರಣೆಯಲ್ಲ” ಎಂದು ನ್ಯಾ| ದೀಪಕ್‌ ಮಿಶ್ರಾ ಹಾಗೂ ನ್ಯಾ| ಖಾನ್ವಿಲ್ಕರ್‌ ಹೇಳಿದರೆ, “”ಈ ನಿರ್ಬಂಧಗಳು ಮುಕ್ತ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯವನ್ನು ಕಲ್ಪಿಸುವ ಸಂವಿಧಾನದ 25ನೇ ವಿಧಿಗೆ ವಿರುದ್ಧವಾಗಿದೆ” ಎಂದಿದ್ದರು ನ್ಯಾ| ನಾರಿಮನ್‌. ಇನ್ನುಡಿ.ವೈ. ಚಂದ್ರಚೂಡ ಅವರು “”ನಿಷೇಧದಲ್ಲಿ ಶತಮಾನಗಳ ತಾರತಮ್ಯದ ನೆರಳು ಕಾಣಿಸುತ್ತಿದೆ. ಸ್ತ್ರೀಯರಿಗೆ ಪ್ರವೇಶ ನಿರಾಕರಿಸುವುದು ಅಪ್ಪಟ ಅಸಾಂವಿಧಾನಿಕ” ಎಂದಿದ್ದರು.

ಸಂಪ್ರದಾಯದ ಪರ ಇಂದೂ ಮಲ್ಹೋತ್ರಾ
ಗಮನಾರ್ಹ ಸಂಗತಿಯೆಂದರೆ, ಪೀಠದಲ್ಲಿದ್ದ ಏಕೈಕ ಮಹಿಳೆ ನ್ಯಾ| ಇಂದೂ ಮಲ್ಹೋತ್ರಾ ಮಾತ್ರ ಮಂದಿರದ ಧಾರ್ಮಿಕ ಹಕ್ಕಿನ ಪರ ಮಾತನಾಡಿದ್ದರು. “ಧಾರ್ಮಿಕ ವಿಚಾರಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ತೀರ್ಪು ಇತರೆ ಧಾರ್ಮಿಕ ಕ್ಷೇತ್ರಗಳ ಮೇಲಿನ ಆಚರಣೆಗಳ ಮೇಲೂ ಪರಿಣಾಮ  ಬೀರುತ್ತದೆ” ಎಂದಿದ್ದರು ಮಲ್ಹೋತ್ರಾ.

ತೀರ್ಪಿನ ನಂತರ ಹೆಚ್ಚಾದ ವಿವಾದ
ಶಬರಿಮಲೆ ದೇವಸ್ಥಾನದಲ್ಲಿ ನಿರ್ದಿಷ್ಟ ವಯೋಮಾನದವರ ಪ್ರವೇಶಕ್ಕಿದ್ದ ನಿಷೇಧವನ್ನು ಸರ್ವೋಚ್ಚ ನ್ಯಾಯಾಲಯ ತೆರವುಗೊಳಿಸಿದ ನಂತರ, ಕೆಲವು ದಶಕಗಳಿಂದ ಇದ್ದ ವಿವಾದ ಬಗೆಹರಿಯುವ ಬದಲು ಮತ್ತೆ ಬೆಳೆದು ನಿಂತಿತು. ಸುಪ್ರೀಂನ ತೀರ್ಪಿನಂತೆ ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರಕಾರ ಮಹಿಳೆಯರಿಗೆ ಮಂದಿರ ಪ್ರವೇಶ ಕಲ್ಪಿಸಲು ಮುಂದಾಯಿತು. ಪೊಲೀಸರ ರಕ್ಷಣೆಯಲ್ಲಿ ಕೆಲವು ಮಹಿಳೆಯರು ಅಯ್ಯಪ್ಪನ ದರ್ಶನವನ್ನೂ ಪಡೆದರು. ಆದರೆ ಈ ವಿಚಾರದಲ್ಲಿ ಅಯ್ಯಪ್ಪ ಭಕ್ತಾದಿಗಳಿಂದ ತೀವ್ರ ವಿರೋಧ ಎದುರಾಯಿತು. ಬಿಜೆಪಿ ಮತ್ತು ಕಾಂಗ್ರೆಸ್‌ ಭಕ್ತಾದಿಗಳ ಪರ ನಿಂತರೆ, ಪಿಣರಾಯಿ ಸರಕಾರ ತೀರ್ಪಿನ ಪರ ನಿಂತಿತು. ಒಟ್ಟಲ್ಲಿ ಈ ವಿಚಾರವನ್ನು ಈ ಮೂರೂ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಬಳಸಿಕೊಂಡವು ಎಂದು ಟೀಕಿಸಲಾಗುತ್ತದೆ. ಕೇರಳ ಆಗಷ್ಟೇ ತೀವ್ರ ನೆರೆ ಸಂಕಷ್ಟಕ್ಕೆ ಈಡಾಗಿತ್ತು, ಪರಿಹಾರ ಕಾರ್ಯಗಳಲ್ಲಿನ ತನ್ನ ಲೋಪವನ್ನು ಮುಚ್ಚಿಕೊಳ್ಳಲು ಪಿಣರಾಯಿ ಸರಕಾರ ವಿವಾದ ಸೃಷ್ಟಿಸುತ್ತಿದೆ ಎಂದು ಬಿಜೆಪಿ-ಕಾಂಗ್ರೆಸ್‌ ವಾದಿಸಿದರೆ, ಇವೆರಡೂ ಪಕ್ಷಗಳೂ ಮಹಿಳಾ ವಿರೋಧಿಯಾಗಿದ್ದು, ಚುನಾವಣೆಯ ದೃಷ್ಟಿಯಿಂದ ಶಬರಿಮಲೆ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಪಿಣರಾಯಿ ಸರಕಾರ ಪ್ರತಿವಾದ ಮಾಡಿತು.

ಕೋರ್ಟ್‌ ತೀರ್ಪಿಗೆ ಮಹಿಳೆಯರಿಂದಲೇ ವಿರೋಧ
ಮಹಿಳಾ ಪರ ಎಂದು ಕೊಂಡಾಡಲಾದರೂ ತೀರ್ಪಿಗೆ ಸಾವಿರಾರು ಮಹಿಳೆಯರಿಂದಲೇ ಪ್ರತಿರೋಧ ಎದುರಾಯಿತು. ಧಾರ್ಮಿಕ ಸಂಪ್ರದಾಯದಲ್ಲಿ ಮೂಗು ತೂರಿಸದಂತೆ ಪಿಣರಾಯಿ ಸರಕಾರಕ್ಕೆ ಇವರೆಲ್ಲ ಎಚ್ಚರಿಸಿದರು. ಸ್ತ್ರೀಯರ ಈ ಹೋರಾಟಕ್ಕೆ ಕೇರಳದ ಪಂದಳ ರಾಜಮನೆತನವೂ ಬೆಂಬಲ ಸೂಚಿಸಿದ್ದು ಪಿಣರಾಯಿ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ದೇಗುಲ ಪ್ರವೇಶಿಸಿದ್ದ ಜಯಮಾಲಾ
ಶಬರಿಮಲೆ ದೇಗುಲ ಪ್ರವೇಶದ ವಿಚಾರ ಕರ್ನಾಟಕದಲ್ಲಿ ಎರಡು ದಶಕಗಳಿಂದ ಚರ್ಚೆಯಲ್ಲಿರುವ ವಿಷಯ. ಇದಕ್ಕೆ ಬಹುಮುಖ್ಯ ಕಾರಣ ನಟಿ, ಮಾಜಿ ಸಚಿವೆ ಜಯಮಾಲಾ ಅವರು. ತಾವು 28 ವರ್ಷದವರಿದ್ದಾಗ ಸಿನೆಮಾ ಚಿತ್ರೀಕರಣವೊಂದರ ಸಮಯದಲ್ಲಿ ಅಯ್ಯಪ್ಪ ದೇಗುಲವನ್ನು ಪ್ರವೇಶಿಸಿದ್ದಷ್ಟೇ ಅಲ್ಲದೇ, ಮೂರ್ತಿಯನ್ನೂ ಸ್ಪರ್ಶಿಸಿದ್ದಾಗಿ ಜಯಮಾಲಾ 2006ರಲ್ಲಿ ಹೇಳಿದ್ದರು. ಈ ವಿಷಯ ಆ ಸಮಯದಲ್ಲಿ ಭಾರೀ ವಿವಾದ ಸೃಷ್ಟಿಸಿತ್ತು, ಆಗ ಅರ್ಚಕರು ದೇಗುಲದ ಶುದ್ಧೀಕರಣ ಕೈಗೊಂಡಿದ್ದರು. ಇದರಿಂದ ಕೋಪಗೊಂಡ ಮಹಿಳಾ ಸಂಘಟನೆಗಳು ಮತ್ತು ಮಹಿಳಾ ವಕೀಲರು, 2006ರಲ್ಲೇ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ಎಲ್ಲ ವಯೋಮಾನದ ಮಹಿಳೆಯರಿಗೂ ಅಯ್ಯಪ್ಪನ ದರ್ಶನಕ್ಕೆ ಮುಕ್ತಪ್ರವೇಶ ದೊರಕಿಸಬೇಕು ಎಂದು ಅರ್ಜಿ ಸಲ್ಲಿಸಿದರು.

ಸದ್ದು ಮಾಡಿದ್ದ ತೃಪ್ತಿ ದೇಸಾಯಿ, ರೆಹಾನಾ ಫಾತಿಮಾ
ಭೂಮಾತಾ ಬ್ರಿಗೇಡ್‌ ಸ್ಥಾಪಕಿ ತೃಪ್ತಿ ದೇಸಾಯಿ ಅಯ್ಯಪ್ಪನ ದರ್ಶನ ಪಡೆಯಲು ಪುಣೆಯಿಂದ ಕೊಚ್ಚಿ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದರು. ಆಕ್ರೋಶಿತರಾಗಿದ್ದ ಅಯ್ಯಪ್ಪ ಭಕ್ತರು ವಿಮಾನ ಭಾರೀ ಸಂಖ್ಯೆಯಲ್ಲಿ ನೆರೆದು ಪ್ರತಿಭಟಿಸಿದ್ದರು. ಕೊನೆಗೂ ತೃಪ್ತಿಗೆ ದೇಗುಲ ಪ್ರವೇಶಿಸಲು ಆಗಲಿಲ್ಲ. ದೇಶದ ಹಲವಾರು ದೇಗುಲಗಳಿಗೆ ಮಹಿಳೆಯರಿಗೆ ಪ್ರವೇಶ ಸಿಕ್ಕಿರುವ ವಿಚಾರದಲ್ಲಿ ತೃಪ್ತಿ ದೇಸಾಯಿ ಪಾತ್ರವಿದೆ. ಮುಂಬಯಿಯ ಹಾಜಿ ಅಲಿ ದರ್ಗಾ, ಶನಿ ಶಿಂಗಣಾಪುರ ದೇಗುಲಗಳಲ್ಲಿ ಮಹಿಳೆಯರಿಗೆ ಪ್ರವೇಶ ಸಿಗುವಲ್ಲಿ ತೃಪ್ತಿ ದೇಸಾಯಿ ಹೋರಾಟ ಕಾರಣ. ಇನ್ನು ಅಯ್ಯಪ್ಪ ದರ್ಶನದ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿದ್ದೆಂದರೆ ರೆಹಾನಾ ಫಾತಿಮಾ ಎಂಬ ಮುಸ್ಲಿಂ ಯುವತಿ. ಆದರೆ, ರೆಹಾನಾ ಫಾತಿಮಾ ಹಿಂದೂಗಳಷ್ಟೇ ಅಲ್ಲದೆ, ಮುಸ್ಲಿಂ ಸಮಾಜದಿಂದಲೂ ತೀವ್ರ ವಿರೋಧ ಎದುರಿಸಬೇಕಾಯಿತು. “”ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಕಾರಣ ಆಕೆಯನ್ನು ಮುಸ್ಲಿಂ ಸಮಾಜದಿಂದ ಹೊರಹಾಕಲಾಗಿದೆ” ಎಂದು ಕೇರಳದ ಮುಸ್ಲಿಂ ಜಮಾತ್‌ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿತ್ತು.

ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದರು
ಇದೇ ವರ್ಷದ ಜನವರಿ 1ರಂದು ಕನಕದುರ್ಗ ಮತ್ತು ಬಿಂದು ಎಂಬ 40ರ ವಯೋಮಾನದ ಇಬ್ಬರು ಮಹಿಳೆಯರು ಕೇರಳ ಪೊಲೀಸ್‌ ಬಿಗಿ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದರು. ದೇಗುಲ ಪ್ರವೇಶಕ್ಕೂ ಮೊದಲು ಬಿಂದು ಮತ್ತು ಕನಕದುರ್ಗ ಪೊಲೀಸರ ಜತೆಗೂಡಿ ಏಳು ದಿನಗಳ ಕಾಲ ಯೋಜನೆ ರೂಪಿಸಿದ್ದರು. ಇಬ್ಬರೂ ಒಂದೇ ಸ್ಥಳದಲ್ಲಿ ಇರದೆ, ಆಗಾಗ ನೆಲೆ ಬದಲಿಸುತ್ತಾ, ಯಾರಿಗೂ ಅನುಮಾನ ಬರದಂತೆ ಜಾಗರೂಕತೆ ವಹಿಸಿದ್ದರು ಎನ್ನಲಾಗಿದೆ. ಬಿಂದು ಮತ್ತು ಕನಕದುರ್ಗ ರಾತ್ರಿ 1 ಗಂಟೆ ಸುಮಾರಿಗೆ ಪಂಪಾ ನದಿ ತೀರದಿಂದ ನಡೆದುಕೊಂಡು ಯಾತ್ರೆ ಆರಂಭಿಸಿದ್ದರು. ಕಪ್ಪು ವಸ್ತ್ರ ಧರಿಸಿದ್ದ ಈ ಮಹಿಳೆಯರು ಮುಖವನ್ನು ಮುಚ್ಚಿಕೊಂಡಿದ್ದರು. ಬೆಳಗಿನ ಜಾವ 3.48ರ ಸುಮಾರಿಗೆ ದೇಗುಲ ಪ್ರವೇಶಿಸಿ ಅಯ್ಯಪ್ಪ ದರ್ಶನ ಪಡೆದು ವಾಪಸಾದರು. “ಬಿಂದುವಿಗೂ ನಮಗೂ ಸಂಬಂಧವಿಲ್ಲ ‘ ಎಂದು ಅವರ ಕುಟುಂಬದವರು ಸಂಬಂಧವನ್ನೇ ನಿರಾಕರಿಸಿದರೆ, ಇತ್ತ ಕನಕದುರ್ಗ ಅಂತೂ ಅತ್ತೆ ಮತ್ತು ಮನೆಯವರಿಂದಲೇ ದಾಳಿಗೊಳಗಾಗಿ ಆಸ್ಪತ್ರೆ ಸೇರಿದ್ದರು.

ಕಾನೂನು ಹೋರಾಟದ ಟೈಮ್‌ಲೈನ್‌
1990 “ಶಬರಿಮಲೆ ಮಂದಿರದಲ್ಲಿ ಟ್ರಾವನ್‌ಕೋರ್‌ ದೇವಸ್ವಂ ಸಮಿತಿಯ ಕಮೀಶನರ್‌ರ ಮಹಿಳಾ ಸಂಬಂಧಿಕರು ಕಾಣಿಸಿಕೊಂಡಿದ್ದಾರೆ, ಹೀಗಾಗಿ, ಮಂದಿರದಿಂದ 10-50ರ ವಯೋಮಾನದ ಹೆಣ್ಣುಮಕ್ಕಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದು ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ ಎಸ್‌.ಮಹೇಂದ್ರನ್‌ ಎನ್ನುವ ಅರ್ಜಿದಾರ.

1991
ನಿರ್ದಿಷ್ಟ ವಯೋಮಾನದ ಹೆಣ್ಣುಮಕ್ಕಳು ದೇಗುಲ ಪ್ರವೇಶಿಸಬಾರದು ಎಂಬ ಹಳೆಯ ಸಂಪ್ರದಾಯವನ್ನೇ ಎತ್ತಿ ಹಿಡಿದ ಕೇರಳ ಹೈಕೋರ್ಟ್‌.

ಆ. 4, 2006 ಕನ್ನಡ ಚಿತ್ರನಟಿ ಜಯಮಾಲಾ ಅವರು ತಾವು 28 ವರ್ಷದವರಿದ್ದಾಗ ಸಿನೆಮಾ ಚಿತ್ರೀಕರಣದ ವೇಳೆಯಲ್ಲಿ ಅಯ್ಯಪ್ಪ ದೇವಸ್ಥಾನದ ಒಳಗೆ ಪ್ರವೇಶಿದ್ದಾಗಿ, ಅಲ್ಲದೇ, ಅರ್ಚಕರ ಅನುಮತಿಯೊಂದಿಗೆ ಅಯ್ಯಪ್ಪನ ಮೂರ್ತಿಯನ್ನೂ ಸ್ಪರ್ಷಿಸಿದ್ದಾಗಿ ಹೇಳಿದರು. ಈ ಸುದ್ದಿ ರಾಷ್ಟ್ರಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಯಿತು. ಆಗ ಮಂದಿರವನ್ನು ಶುದ್ಧೀಕರಣ ಮಾಡಲಾಯಿತು. ಮಂದಿರದ ಈ ನಡೆಯಿಂದಾಗಿ ಕ್ರುದ್ಧರಾದ ಮಹಿಳಾ ಸಂಘಟನೆಗಳು ಮತ್ತು ಮಹಿಳಾ ವಕೀಲರು, 2006ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ಹೆಣ್ಣುಮಕ್ಕಳಿಗೆ ಮುಕ್ತಪ್ರವೇಶ ದೊರಕಿಸಬೇಕು ಎಂದು ಅರ್ಜಿ ಸಲ್ಲಿಸಿದರು.

2008 ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬೆಂಬಲಿಸಿ ಅಫಿದವಿತ್‌ ಸಲ್ಲಿಸಿದ ಆಗಿನ ಎಲ್‌ಡಿಎಫ್ ಸರಕಾರ.

ಜ. 11, 2016 ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠ, ಮಹಿಳೆಯರಿಗೆ ದೇಗುಲ ಪ್ರವೇಶ ನಿಷೇಧ ಎಷ್ಟು ಸರಿ? ಎಂದು ಪ್ರಶ್ನಿಸಿತು.

ಫೆ. 6, 2016 ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠ, ಮಹಿಳೆಯರಿಗೆ ದೇಗುಲ ಪ್ರವೇಶ ನಿಷೇಧ ಎಷ್ಟು ಸರಿ? ಎಂದು ಪ್ರಶ್ನಿಸಿತು.

ಫೆ. 6, 2016 ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಸರಕಾರ, “ಭಕ್ತರ ಧಾರ್ಮಿಕಹಕ್ಕುಗ ಳನ್ನು ಕಾಪಾಡುವುದು ತನ್ನ ಜವಾಬ್ದಾರಿ’ ಎಂದು ಸುಪ್ರೀಂ ಗೆ ಹೇಳಿತು.

ಮೇ , 2016 ಕೇರಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಅನ್ನು ಮಣಿಸಿ ಅಧಿಕಾರಕ್ಕೆ ಏರಿದ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಸರಕಾರ

ನ , 2016 ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಅಫಿದವಿತ್‌ ಸಲ್ಲಿಸಿದ ಎಲ್‌ಡಿಎಫ್ ಸರಕಾರ, ತಾನು ಎಲ್ಲಾ ವಯೋಮಾನದ ಮಹಿಳೆಯರಿಗೂ ದೇಗುಲ ಪ್ರವೇಶವನ್ನು ಬೆಂಬಲಿಸುವುದಾಗಿ ಹೇಳಿತು.

ಅ ,2017 ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

ಸೆ.28 , 2018 ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 10-50ರ ವಯೋಮಿತಿ ಸೇರಿದಂತೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌.

ಅ. ನ. ಡಿ , 2018 ತೀರ್ಪಿನ ಮರುಪರಿಶೀಲನೆ ಕೋರಿ 56 ಅರ್ಜಿಗಳು ಹಾಗೂ ಹಲವು ರಿಟ್‌ ಅರ್ಜಿಗಳು ಸಲ್ಲಿಕೆ. ವಿಚಾರಣೆಯನ್ನು ಫೆ. 6ಕ್ಕೆ ಮುಕ್ತಾಯಗೊಳಿಸಿ, ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಮಾ.22ರಂದು ಜನತಾ ಕರ್ಫ್ಯೂ ವಿಧಿಸುವ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಕ್ಷಣದಿಂದಲೇ ದೇಶಾದ್ಯಂತ 21...

  • ಪ್ರಿಯ ಓದುಗರಲ್ಲಿ ಅರಿಕೆ... ದಿನಪತ್ರಿಕೆಗಳು, ನಿಯತಕಾಲಿಕ ಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೋತಕ. ಸ್ವಾತಂತ್ರ್ಯ ಹೋರಾಟದಿಂದ...

  • ಆರಂಭಿಕ ಸಮಯದಲ್ಲಿ ಕೋವಿಡ್-19 ಅಪಾಯವನ್ನು ಹಗುರವಾಗಿ ಪರಿಗಣಿಸಿದ ಇಟಲಿ, ಜರ್ಮನಿ, ಅಮೆರಿಕ, ಆಸ್ಟ್ರೇಲಿಯಾ ಈಗ ಪಶ್ಚಾತ್ತಾಪ ಪಡುತ್ತಿವೆ. ಮುಖ್ಯವಾಗಿ ಲಾಕ್‌ ಡೌನ್‌ಗಳ‌ನ್ನು...

  • ಕೋವಿಡ್- 19  ಜಗತ್ತಿನಾದ್ಯಂತ ತನ್ನ ವ್ಯಾಘ್ರ ನರ್ತನವನ್ನು ಹೆಚ್ಚಿಸಿದೆ. ಜನತೆಯ ಆತಂಕ ದೂರವಾಗಿಸಲು ಪ್ರಧಾನಿ ಮೋದಿ ಅವರು ಒಂದು ದಿನದ ಜನತಾ ಕರ್ಫ್ಯೂ ಹಾಗೂ ಒಂದು...

  • ಶುಕ್ರವಾರ ಬೆಳಗಿನ ಜಾವ 5:30 ಗಂಟೆಗೆ ತಿಹಾರ್‌ ಜೈಲಿನಲ್ಲಿ ಅಪರಾಧಿಗಳಾದ ಮುಕೇಶ್‌, ವಿನಯ್‌, ಪವನ್‌, ಅಕ್ಷಯ್‌ ಅವರನ್ನು ಗಲ್ಲಿಗೆ ಏರಿಸಿರುವುದನ್ನು ಇಡೀ ದೇಶ ಸ್ವಾಗತಿಸಿದೆ....

ಹೊಸ ಸೇರ್ಪಡೆ