ಪೋಸ್ಟಲ್ ರಿಕರಿಂಗ್ ಡೆಪಾಸಿಟ್ v/s ಟರ್ಮ್ ಡೆಪಾಸಿಟ್ : ಯಾವುದು ಉತ್ತಮ ?

ಸತೀಶ್ ಮಲ್ಯ, Apr 1, 2019, 6:00 AM IST

ಜನಸಾಮಾನ್ಯರು ತಮ್ಮ ಕಷ್ಟದ ಉಳಿತಾಯದ ಹಣವನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿ ಠೇವಣಿ ಇಡಲು ಮುಂದಾದಾಗ ಅವರಿಗೆ ಥಟ್ಟನೆ ನೆನಪಿಗೆ ಬರುವುದು ಅಂಚೆ ಇಲಾಖೆಯ ಉಳಿತಾಯ – ಠೇವಣಿ ಯೋಜನೆಗಳು.

ಇದಕ್ಕೆ ಮುಖ್ಯ ಕಾರಣವೆಂದರೆ ಇತರೆಲ್ಲ ಉಳಿತಾಯ – ಠೇವಣಿ ಯೋಜನೆಗಳಿಗಿಂತ ಅತೀ ಹೆಚ್ಚು ಸುರಕ್ಷೆ ಮತ್ತು ಸುಭದ್ರತೆ ಇರುವುದು ಅಂಚೆ ಉಳಿತಾಯ ಯೋಜನೆಗಳಿಗೆ. ಈ ಸಂಗತಿ ಸಾಮಾನ್ಯರಲ್ಲಿ ಸಾಮಾನ್ಯರಿಗೆ ಕೂಡ ಗೊತ್ತಿದೆ; ಏಕೆಂದರೆ ಈ ಯೋಜನೆಗಳ ಹಿಂದೆ ನೇರವಾಗಿ ಭಾರತ ಸರಕಾರವೇ ಇದೆ !

ಅಂಚೆ ಇಲಾಖೆ ಒಟ್ಟು 9 ಬಗೆಯ ಉಳಿತಾಯ ಯೋಜನೆಗಳನ್ನು ಸಾದರಪಡಿಸುತ್ತದೆ. ಇವುಗಳಲ್ಲಿ ಅತ್ಯಂತ ಜನಪ್ರಿಯವಾಗಿರುವುದು ರಿಕರಿಂಗ್ ಡೆಪಾಸಿಟ್ ಅಥವಾ ಆರ್ ಡಿ. ಇದರ ಬಳಿಕದಲ್ಲಿ ಇರುವುದು ಟರ್ಮ್ ಡೆಪಾಸಿಟ್ ಗಳು. ಇವೆರಡರಲ್ಲಿ ಯಾವುದು ಅತ್ಯಂತ ಆಕರ್ಷಕ ಮತ್ತು ಹೆಚ್ಚು ಲಾಭದಾಯಕ ಎನ್ನುವ ಪ್ರಶ್ನೆ ಬಂದಾಗ ಆರ್ ಡಿ ಯೋಜನೆಯೇ ಹೆಚ್ಚು ತೂಕ ಪಡೆದುಕೊಳ್ಳುತ್ತದೆ. ಏಕೆಂದರೆ ಇದು ಹನಿ ಕೂಡಿ ಹಳ್ಳ, ತೆನೆ ಕೂಡಿ ಕಣಜ ಎಂಬ ಬಹು ಜನಪ್ರಿಯ ಮಾತಿಗೆ ಅನುಗುಣವಾಗಿದೆ.

ರಿಕರಿಂಗ್ ಡೆಪಾಸಿಟ್ ಸ್ಕೀಮಿನಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ತಿಂಗಳ ಕಂತಿನಲ್ಲಿ ಆರ್ ಡಿ ಖಾತೆಗೆ ಕಟ್ಟುತ್ತಾ ಹೋಗಬೇಕಾಗುತ್ತದೆ. ಎಂದರೆ ಒಂದೇ ಗಂಟಿಗೆ ಹಣವನ್ನು ಠೇವಣಿ ಇರಿಸುವ ಅಗತ್ಯ ಇರುವುದಿಲ್ಲ. ಟರ್ಮ್ ಡೆಪಾಸಿಟ್ನಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಒಂದೇ ಗಂಟಿನಲ್ಲಿ ಠೇವಣಿ ಇರಿಸಬೇಕಾಗುತ್ತದೆ. ಜನಸಾಮಾನ್ಯರಿಗೆ ತಿಂಗಳು ತಿಂಗಳು ಕಂತಿನ ರೂಪದಲ್ಲಿ ಹಣ ಕಟ್ಟಿ ಉಳಿತಾಯದ ಮೊತ್ತವನ್ನು ಹೆಚ್ಚಿಸುತ್ತಾ ಹೋಗುವುದೇ ಸುಲಭವಾಗಿರುವುದರಿಂದ ಪೋಸ್ಟಲ್ ಆರ್ ಡಿ ಹೆಚ್ಚು ಜನಪ್ರಿಯವಾಗಿದೆ.

ಆದರೆ ಆರ್ ಡಿ ಮತ್ತು ಟಿಡಿ ನಡುವೆ ಎದ್ದು ಕಾಣುವ ಒಂದು ವ್ಯತ್ಯಾಸ ಇದೆ. ಆರ್ ಡಿ ಖಾತೆಗೆ ಕಟ್ಟುವ ಕಂತಿಗೆ ಆದಾಯ ತೆರಿಗೆ ರಿಯಾಯಿತಿ ಸಿಗುವುದಿಲ್ಲ. ಆದರೆ ಐದು ವರ್ಷಗಳ ಅವಧಿಯ ಟರ್ಮ್ ಡೆಪಾಸಿಟ್ ಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ಒಂದು ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿಯು ಮಾಡುವ ಐದು ವರ್ಷಗಳ ಅವಧಿಯ 1.50 ಲಕ್ಷ ರೂ.ವರೆಗಿನ ಟರ್ಮ್ ಡೆಪಾಸಿಟ್ಗೆ ಆದಾಯ ತೆರಿಗೆ ಕಾಯಿದೆಯ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುತ್ತದೆ.

ಇದೇ ವರ್ಷ ಎಪ್ರಿಲ್ನಿಂದ ಆರಂಭಗೊಳ್ಳುವ 2019 –20ರ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರ ಜನರಿಗೆ ಆದಾಯ ತೆರಿಗೆ ವಿನಾಯಿತಿಯ ರೂಪದಲ್ಲಿ ಬಹುದೊಡ್ಡ ಗಿಫ್ಟ್ ಕೊಟ್ಟಿರುತ್ತದೆ. ಅದೆಂದರೆ ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ ಗಳಿಸುವ ಐದು ಲಕ್ಷ ರೂ ವರೆಗಿನ ಆದಾಯ ತೆರಿಗೆ ಮುಕ್ತವಾಗಿರುತ್ತದೆ. ಅನಂತರದ 1.50 ಲಕ್ಷ ರೂ. ಆದಾಯದ ಮೇಲೆ ತೆರಿಗೆ ರಿಯಾಯಿತಿ ಪಡೆಯಲು ಆತನು ಸೆ.80ಸಿ ಪ್ರಕಾರ ಆ ಮೊತ್ತವನ್ನು ನಿಗದಿತ ಯೋಜನೆಗಳಲ್ಲಿ ಹೂಡಬೇಕಾಗುತ್ತದೆ. ಆ ನಿಗದಿತ ಯೋಜನೆಗಳ ಪೈಕಿ ಪೋಸ್ಟಲ್ ಟರ್ಮ್ ಡೆಪಾಸಿಟ್ ಕೂಡ ಒಂದಾಗಿರುತ್ತದೆ. ಆದರೆ ಈ ಆಕರ್ಷಣೆ ಪೋಸ್ಟಲ್ ಆರ್ ಡಿ ಗೆ ಸಹಜವಾಗಿಯೇ ಇರುವುದಿಲ್ಲ.

ಅಂಚೆ ಇಲಾಖೆಯ ಟರ್ಮ್ ಡೆಪಾಸಿಟ್ ಮತ್ತು ಅದರ ಮೇಲಿನ ಬಡ್ಡಿ ದರ ವಿವರ ಹೀಗಿದೆ : 1. ಒಂದು ವರ್ಷ ಅವಧಿಯ ಟರ್ಮ್ ಡೆಪಾಸಿಟ್ : ವಾರ್ಷಿಕ ಶೇ.7 ಬಡ್ಡಿ, 2. ಎರಡು ವರ್ಷ ಅವಧಿಯ ಟರ್ಮ್ ಡೆಪಾಸಿಟ್ : ವಾರ್ಷಿಕ ಶೇ.7 ಬಡ್ಡಿ, 3. ಮೂರು ವರ್ಷ ಅವಧಿಯ ಟರ್ಮ್ ಡೆಪಾಸಿಟ್ : ವಾರ್ಷಿಕ ಶೇ.7 ಬಡ್ಡಿ, 4. ಐದು ವರ್ಷ ಅವಧಿಯ ಟರ್ಮ್ ಡೆಪಾಸಿಟ್ : ವಾರ್ಷಿಕ ಶೇ.7.8 ಬಡ್ಡಿ

ಪೋಸ್ಟಲ್ ರಿಕರಿಂಗ್ ಡೆಪಾಸಿಟ್ ಯೋಜನೆ ವಾರ್ಷಿಕ ಶೇ.7.3ರ ಬಡ್ಡಿಯನ್ನು ಪಡೆಯುತ್ತದೆ. ಈ ಬಡ್ಡಿಯನ್ನು ತ್ತೈಮಾಸಿಕವಾಗಿ ಚಕ್ರಬಡ್ಡಿ ರೂಪದಲ್ಲಿ ಲೆಕ್ಕ ಹಾಕಲಾಗುವುದರಿಂದ ಅಂತಿಮವಾಗಿ ಖಾತೆಯು ಮಾಗಿದಾಗ ಖಾತೆದಾರರಿಗೆ ನಂಬಲಸಾಧ್ಯ ಮೊತ್ತ ಕೈಗೆ ಸಿಗುತ್ತದೆ ಎನ್ನುವುದು ಗಮನಾರ್ಹ.

ಪೋಸ್ಟಲ್ ಆರ್ ಡಿ ಖಾತೆ ಐದು ವರ್ಷಗಳ ಅವಧಿಯದ್ದಾಗಿರುತ್ತದೆ . ತಿಂಗಳಿಗೆ ಕನಿಷ್ಠ 10 ರೂ. ಕಂತಿನ ಪ್ರಕಾರ ಕಟ್ಟುವ ಮೊತ್ತವು ಅವಧಿ ಮುಗಿದಾಗ 725.05 ರೂ. ಗೆ ಬೆಳೆದಿರುತ್ತದೆ. ಐದು ವರ್ಷ ಮುಗಿದಾಗ ಖಾತೆಯನ್ನು ವರ್ಷ ವರ್ಷ ಮುಂದುವರಿಸಿಕೊಂಡು ಹೋಗುವುದಕ್ಕೆ ಅವಕಾಶ ಇರುತ್ತದೆ.

ಕನಿಷ್ಠ 10 ರೂ. ಅಥವಾ 5 ರೂ. ಗುಣಾಕಾರದ ಮೊತ್ತದಲ್ಲಿ ಮಾಡಬಹುದಾದ ಈ ಠೇವಣಿ ಯೋಜನೆಯಡಿ ಗರಿಷ್ಠ ಮಿತಿ ಎಂಬುದಿಲ್ಲ. ಇದೇ ಲೆಕ್ಕಾಚಾರದಲ್ಲಿ ಖಾತೆದಾರನು ತನ್ನ ಆರ್ ಡಿ ಕಂತಿಗೆ ಅನುಗುಣವಾಗಿ ಖಾತೆ ಮೆಚೂÂರ್ ಆಗುವಾಗ ಕೈಗೆ ಬರುವ ಮೊತ್ತವನ್ನು ಲೆಕ್ಕ ಹಾಕಬಹುದಾಗಿದೆ.

ಅಂದ ಹಾಗೆ ನಗದು ಮತ್ತು ಚೆಕ್ ಮೂಲಕ ಪೋಸ್ಟಲ್ ಆರ್ ಡಿ ಖಾತೆ ತೆರೆಯಬಹುದಾಗಿರುತ್ತದೆ. ಖಾತೆಯನ್ನು ತೆರೆಯುವಾಗ ಅಥವಾ ತೆರೆದ ಬಳಿಕ ನಾಮಿನೇಶನ್ ಮಾಡಬಹುದಾಗಿರುತ್ತದೆ. ಆರ್ ಡಿ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ವರ್ಗಾಯಿಸುವುದಕ್ಕೆ ಅವಕಾಶ ಇರುತ್ತದೆ. ಒಬ್ಬ ವ್ಯಕ್ತಿ ಯಾವುದೇ ಅಂಚೆ ಕಚೇರಿಯಲ್ಲಿ ಎಷ್ಟೇ ಸಂಖ್ಯೆ ಆರ್ ಡಿ ಖಾತೆ ತೆರೆಯಬಹುದಾಗಿರುತ್ತದೆ.

ವಿಶೇಷವೆಂದರೆ ಮೈನರ್ ಹೆಸರಲ್ಲೂ ಆರ್ ಡಿ ಖಾತೆ ತೆರೆಯಬಹುದಾಗಿರುತ್ತದೆ. 10 ವರ್ಷ ಅಥವಾ ಅದಕ್ಕೆ ಮೇಲ್ಪಟ್ಟ ಮೈನರ್ ಖಾತೆಯನ್ನು ತೆರೆಯವುದಕ್ಕೆ, ನಿರ್ವಹಿಸುವುದಕ್ಕೆ ಅವಕಾಶವಿರುತ್ತದೆ. ಇಬ್ಬರು ಪ್ರಾಯ ಪ್ರಬುದ್ಧ ವ್ಯಕ್ತಿಗಳು ಜಂಟಿ ಹೆಸರಲ್ಲಿ ಆರ್ ಡಿ ಮಾಡುವುದಕ್ಕೆ ಅವಕಾಶವಿದೆ.

ಯಾವುದೇ ಆರ್ ಡಿ ಖಾತೆ ಮಾಸಿಕ ಕಂತು ಕಟ್ಟುವಲ್ಲಿ ವಿಫಲವಾದರೆ ಆ ಖಾತೆದಾರನು ಮೊತ್ತ ಮೊದಲಾಗಿ ಬಾಕಿ ಇರಿಸಿ ಮಾಸಿಕ ಕಂತುಗಳನ್ನು ಡಿಫಾಲ್ಟ್ ಶುಲ್ಕದೊಂದಿಗೆ ಕಟ್ಟಬೇಕು ಮತ್ತು ಅನಂತರವೇ ಹಾಲಿ ಮಾಸಿಕ ಕಂತನ್ನು ಪಾವತಿಸಬೇಕು; ಇದು ಸಿಬಿಎಸ್ ಮತ್ತು ಸಿಬಿಎಸ್ ಅಲ್ಲದ ಅಂಚೆ ಕಚೇರಿಗಳಿಗೆ ಅನ್ವಯಿಸುವ ಕ್ರಮವಾಗಿರುತ್ತದೆ.

ಆರ್ ಡಿ ಖಾತೆದಾರರು ಕನಿಷ್ಠ ಆರು ತಿಂಗಳ ಕಂತನ್ನು ಮುಂಗಡವಾಗಿ ಕಟ್ಟಿದಲ್ಲಿ ಅದಕ್ಕೆ ರಿಬೇಟ್ ಸಿಗುತ್ತದೆ. ಏಕ ವ್ಯಕ್ತಿ ಖಾತೆಯನ್ನು ಜಾಯಿಂಟ್ ಆಗಿ ಅಥವಾ ತಿರುವು ಮುರುವಾಗಿ ಪರಿವರ್ತಿಸಬಹುದಾಗಿರುತ್ತದೆ. ಮೈನರ್ ವ್ಯಕ್ತಿ ಪ್ರಾಯ ಪ್ರಬುದ್ಧನಾದಾಗ ತನ್ನ ಹೆಸರಿಗೆ ಖಾತೆಯನ್ನು ಪರಿವರ್ತಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕಾಗುತ್ತದೆ.

ಪೋಸ್ಟಲ್ ಆರ್ ಡಿ ಖಾತೆ ಐದು ವರ್ಷಗಳ ಅವಧಿಯದ್ದಾದರೂ ಖಾತೆದಾರನಿಗೆ ಹಣದ ತುರ್ತು ಎದುರಾದ ಸಂದರ್ಭದಲ್ಲಿ ಆತನು ತನ್ನ ಆರ್ ಡಿ ಖಾತೆ ಒಂದು ವರ್ಷ ಮುಗಿಸಿದ ತರುವಾಯ, ತನ್ನ ಖಾತೆಯಲ್ಲಿ ಜಮೆಯಾಗಿರುವ ಮೊತ್ತದ ಶೇ.50ರಷ್ಟು ಹಣವನ್ನು ಹಿಂಪಡೆಯುವುದಕ್ಕೆ ಅವಕಾಶ ಇರುತ್ತದೆ. ಆದರೆ ಈ ಮೊತ್ತವನ್ನು ಖಾತೆದಾರನು ತನ್ನ ಖಾತೆ ಚಾಲ್ತಿಯಲ್ಲಿರುವ ಅವಧಿಯ ಯಾವುದೇ ವೇಳೆಯಲ್ಲಿ ನಿಗದಿತ ದರದ ಬಡ್ಡಿ ಸಹಿತ ಅಸಲನ್ನು ಮರು ಪಾವತಿಸಬೇಕಾಗುತ್ತದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ