ಇದು ಎಲ್ಲರ ಬಾಲ್ಯ ಕಂಡ ‘ಅಟ್ಲಾಸ್ ಸೈಕಲ್’ ಪ್ರಾರಂಭವಾದ ರೋಚಕ ಯಶೋಗಾಥೆ..

ಜಗತ್ತು ಗೆದ್ದ ಅಟ್ಲಾಸ್ ಶುರುವಾದದ್ದು ಒಬ್ಬನ ಅಲೋಚನೆಯಿಂದ...

ಸುಹಾನ್ ಶೇಕ್, Feb 12, 2020, 6:29 PM IST

ಕಾಲ ಬದಲಾಗಿದೆ. ಕಾಲದೊಟ್ಟಿಗೆ ಜನ ಜೀವನ, ಆಚಾರ-ವಿಚಾರ, ಸೊಗಡು, ಸಂಪ್ರದಾಯ, ಸಂಸ್ಕಾರ, ಆಯ್ಕೆ ಎಲ್ಲವೂ ಮಿಂಚಿನ ವೇಗದಲ್ಲಿ ಬದಲಾಗುತ್ತಿದೆ. ಆಧುನಿಕತೆ ಎನ್ನುವ ಅಂಬಾರಿಯ ಹೊಳಪು ದಿನ ಕಳೆದಂತೆ ಹೆಚ್ಚುತ್ತಾ ಹೋಗುತ್ತಿದೆ. ನಡೆದುಕೊಂಡು ಹೋಗುವ ಕಾಲುಗಳಿಗೆ, ಕೂತುಕೊಂಡು ಎಲ್ಲಿಯಾದರೂ ಸಂಚರಿಸುವ ಬಹು ಚಕ್ರದ ವಾಹನಗಳು ರಸ್ತೆ ಬೀದಿ ಉದ್ದಕ್ಕೂ ಕಾಣ ಸಿಗುತ್ತವೆ. ಬೈಕ್, ಕಾರು, ಬಸ್ ಗಳ ಪಯಣ ಜನ ಸಾಮಾನ್ಯರಿಗೆ ಅನಿವಾರ್ಯತೆಯ ಆಯ್ಕೆಗಳಾಗಿವೆ.

ಆದರೆ ಅದೊಂದು ಕಾಲವಿತ್ತು. ನಮ್ಮ ನಿಮ್ಮ ಅಪ್ಪಂದಿರ ಕಾಲ. ಗತಿಸಿ ಹೋದ ಹಿರಿಯರ ಕಾಲ. ಅದು ದೂರದಲ್ಲಿ ಪುಟ್ಟ ಮಗವೊಂದು ನಿಂತು ರಸ್ತೆಯ ಅಂಚನ್ನು ನೋಡುತ್ತಾ, ‘ಸೈಕಲ್’ ತುಳಿಯುತ್ತಾ ದಣಿದು ಬರುವ ಅಪ್ಪನನ್ನು ಕಾಯುವ ಕಾಲ. ಸೈಕಲ್ ಮೇಲೆ ಕೂತು ಒಂದು ಸುತ್ತು ಊರು ತಿರುಗಿಸುತ್ತಿದ್ದ ಅಪ್ಪನ ಆ ‘ಅಟ್ಲಾಸ್ ಸೈಕಲ್’ ಮತ್ತೆ ಮತ್ತೆ ನೆನಪಾಗುತ್ತಿದೆ. ಅಂದಿನ ಅಟ್ಲಾಸ್ ಸೈಕಲ್ ಇಂದಿಗೂ ಮರೆಯಾಗದೆ ಅಚ್ಚಾಗಿ ಉಳಿಯಲು ಕಾರಣ, ಆ ಸೈಕಲ್ ಕೊಟ್ಟ ಅವಿಸ್ಮರಣೀಯ ಕ್ಷಣಗಳು. ಎಲ್ಲರಿಗೂ ಸೈಕಲ್ ಅಂದ ಕ್ಷಣ ಒಮ್ಮೆ ಕಷ್ಟಪಟ್ಟು ಅಪ್ಪನ ಸೈಕಲ್ ತುಳಿಯುವ ಸಾಹಸವನ್ನು ಮಾಡಿ ಗಾಯ ಮಾಡಿಕೊಂಡ ಘಟನೆಗಳು ನೆನಪಾಗುತ್ತದೆ.

ಅಟ್ಲಾಸ್ ಸೈಕಲ್ ಹುಟ್ಟಿದ್ದು ಹೀಗೆ : ಹರಿಯಾಣದ ಸೋನಿಪತ್ ನ ಶ್ರೀ ಜಾನಕಿ ದಾಸ್ ಕಪೂರ್ ಕಡಿಮೆ ಬೆಲೆಯ, ಅಧಿಕ ಕಾಲ ಬಾಳಿಕೆ ಬರುವ ಸೈಕಲ್ ವೊಂದನ್ನು ದೇಶದ ಜನರಿಗಾಗಿ ನಿರ್ಮಿಸಬೇಕೆನ್ನುವ ಕನಸಿನ ಮಾತನ್ನು ನೆರವೇರಿಸಲು ಕಾತುರತೆಯಿಂದೆ ಯೋಚಿಸುತ್ತಾ ಇರುತ್ತಾರೆ. ಈ ಯೋಚನೆ ಕೆಲ ಸಮಯದ ನಂತರ ಕಾರ್ಯ ರೂಪಕ್ಕೆ ಬರಲು ಸಿದ್ಧವಾಗುತ್ತದೆ. 1951 ರಲ್ಲಿ ಹರಿಯಾಣದ ಸೋನಿಪತ್ ನಲ್ಲಿ ತನ್ನ ಸೈಕಲ್ ನಿರ್ಮಾಣದ ಕಾಯಕಕ್ಕಾಗಿ 25 ಎಕರೆ ಭೂಮಿಯನ್ನು ಪಡೆದು ಕೇವಲ ಒಂದು ವರ್ಷದದೊಳಗೆ ಬೃಹತ್ ಸೈಕಲ್ ಕಾರ್ಖಾನೆವೊಂದನ್ನು ಸ್ಥಾಪಿಸುತ್ತಾರೆ. ಇದು ಎಲ್ಲರ ಬಾಲ್ಯಕ್ಕೆ ರೆಕ್ಕೆ ಮೂಡಿಸಿದ ‘ ಅಟ್ಲಾಸ್ ಸೈಕಲ್ ‘ನ ಪ್ರಾರಂಭಿಕ ಹೆಜ್ಜೆ.

ಇದಾದ ಬಳಿಕ, ಅಟ್ಲಾಸ್ ಎನ್ನುವ ಸೈಕಲ್ ಎಷ್ಟರ ಮಟ್ಟಿಗೆ ಜನಪ್ರಿಯವಾಗುತ್ತದೆ ಎಂದರೆ, ಉತ್ತಮ ಗುಣಮಟ್ಟ ಹಾಗೂ ಹೆಚ್ಚು ಬಾಳಿಕೆ, ಕಡಿಮೆ ಬೆಲೆಯಿಂದ ಅಟ್ಲಾಸ್ ಸೈಕಲ್ ಜನ ಸಾಮಾನ್ಯರ ಮನಸ್ಸಿಗೆ ತೀರ ಹತ್ತಿರವಾಗುತ್ತದೆ. ಅಟ್ಲಾಸ್ ಸೈಕಲ್  ಪ್ರಾರಂಭವಾಧ ಮೊದಲ ವರ್ಷದಲ್ಲಿ 12 ಸಾವಿರ ಸೈಕಲ್ ಗಳನ್ನು ತಯಾರಿಸುತ್ತದೆ. 1958 ರಿಂದ ಅಟ್ಲಾಸ್ ಸೈಕಲ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿ, ವಿದೇಶಗಳಿಗೂ ರಫ್ತು ಆಗುತ್ತದೆ. ಭಾರತದ ಅತ್ಯಂತ ದೊಡ್ಡ ಸೈಕಲ್ ತಯಾರಕ ಸಂಸ್ಥೆ ಎನ್ನುವ ಹೆಗ್ಗಳಿಕೆ ಅಟ್ಲಾಸ್ ಸೈಕಲ್ ಪಡೆದುಕೊಳ್ಳುತ್ತದೆ.

ಬೆಳೆದ ಮಾರುಕಟ್ಟೆ ; ವಿಶ್ವಾಸ ಹಣೆಪಟ್ಟಿ : ಪ್ರತಿನಿತ್ಯ 120 ಸೈಕಲ್ ಗಳನ್ನು ಅಟ್ಲಾಸ್ ತಯಾರಿಸಲು ಶುರು ಮಾಡುತ್ತದೆ. ಹೆಚ್ಚಿನ ಬೇಡಿಕೆ, ಉತ್ತಮ ಗುಣಮಟ್ಟದಿಂದ ಅಟ್ಲಾಸ್ ಸೈಕಲ್ ಭಾರತಾದ್ಯಂತ ತನ್ನ ಶಾಖೆಯನ್ನು ಪ್ರಾರಂಭಿಸುತ್ತದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅಟ್ಲಾಸ್ ಹೊಸ ಪ್ರಯೋಗಗಳಿಗೆ ಮುಂದಾಗುತ್ತದೆ. 1978 ರ ವೇಳೆಯಲ್ಲಿ ಅಟ್ಲಾಸ್ ತನ್ನ ಮೊದಲ ರೇಸಿಂಗ್ ಬೈಸಿಕಲ್ ಅನ್ನು ಭಾರತದ ಮಾರುಕಟ್ಟೆಗೆ ತರುತ್ತದೆ. ಇದು ಸಹ ವೇಗವಾಗಿ ಜನರಿಗೆ ಹತ್ತಿರವಾಗುತ್ತದೆ.

ಅಟ್ಲಾಸ್ ಲೋಗೋ ಎಲ್ಲಿಂದ ಬಂತು ಗೊತ್ತಾ ? : ಅಟ್ಲಾಸ್ ಲೋಗೊವನ್ನು ಗ್ರೀಕ್ ದೇವರ ರೂಪದಿಂದ ಪಡೆಯಲಾಗಿದೆ, ಪೌರಾಣಿಕ ನಾಯಕನು ಜಗತ್ತನ್ನು ತನ್ನ ಹೆಗಲ ಮೇಲೆ ಹಿಡಿದಿಟ್ಟುಕೊಂಡಿರುವ ಈ ಚಿತ್ರ, ಅಟ್ಲಾಸ್ ಸೈಕಲ್ ನ ಜನಪ್ರಿಯತೆಯಲ್ಲೊಂದು.

ಪ್ರಶಸ್ತಿ ಮತ್ತು ಗೌರವ :  ಅಟ್ಲಾಸ್ ಸೈಕಲ್ ಜನಪ್ರಿಯತೆಯನ್ನು ಮನಗಂಡು ಹತ್ತಾರು ಸಂಸ್ಥೆಗಳು ಪ್ರಶಸ್ತಿ ಹಾಗೂ ಗೌರವವನ್ನು ನೀಡಲು ಆರಂಭಿಸುತ್ತಾರೆ. ಉತ್ತಮ ಕೈಗಾರಿಕ ಸಂಬಂಧವನ್ನು ಹೊಂದಿದ್ದ ಕಾರಣಕ್ಕಾಗಿ ಅಟ್ಲಾಸ್ ಸೈಕಲ್ ಎಫ್.ಸಿ.ಸಿ.ಐ ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಟ್ಲಾಸ್ ಸೈಕಲ್ ಇಟಲಿಯ ‘GOLD MERCURY’ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತದೆ. ಇದಾದ ಬಳಿಕ ಸೈಕಲ್ ರಫ್ತಿಗಾಗಿ ಹಾಗೂ ಇತರ ಆಕರ್ಷಣೆಗಾಗಿ ‘ಎಪಿಕ್ ‘ ಪ್ರಶಸ್ತಿ ದಕ್ಕುತ್ತದೆ.

1982 ರಲ್ಲಿ ದಿಲ್ಲಿಯಲ್ಲಿ ನಡೆದ ಏಷ್ಯಾಡ್ ಗೇಮ್ಸ್ ನಲ್ಲಿ ಅಟ್ಲಾಸ್  ಅಧಿಕೃತ ಸೈಕಲ್ ಸರಬರಾಜು ಆಗುತ್ತದೆ. ಮುಂದೆ ಅಟ್ಲಾಸ್ ಟ್ಯೂಬ್ ಹಾಗೂ ಸ್ಟೀಲ್ ಪೂರೈಕೆಗಾಗಿ ಗುರಗಾಂವ್ ನಲ್ಲಿ ದೊಡ್ಡ ಕಾರ್ಖಾನೆಯೊಂದನ್ನು ಸ್ಥಾಪಿಸುತ್ತದೆ.

ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯ : ಅಟ್ಲಾಸ್ ಜನಮಾನಸದಲ್ಲಿ ಉಳಿದು ಸುಮ್ಮನೆ ಕೂರಲಿಲಲ್ಲ. ಹತ್ತು ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು ನೀಡಿದೆ.ದೇವನ್  ಹರನಾಮ್ ಸರಸ್ವತಿ ಟ್ರಸ್ಟ್, ಶ್ರೀ ನರಸಿಂಗ್ ದಾಸ್ ಹೀರಾ ದೇವಿ ಟ್ರಸ್ಟ್, ಹೀಗೆ ಇವುಗಳ ಮೂಲಕ ಧಾರ್ಮಿಕ ಪ್ರವಚನ, ಕಾರ್ಯಕ್ರಮಗಳನ್ನು ಮಾಡುತ್ತಿದೆ. ನ್ಯೂ ದಿಲ್ಲಿ ಮತ್ತು ಧರ್ಮಶೈಲಾ ಕ್ಯಾನ್ಸರ್ ಫೌಂಡೇಶನ್, ಶ್ರೀ ಸ್ವಾಮಿ ಸತ್ಯನಾಂದ್ ಟ್ರಸ್ಟ್, ಧರ್ಮಾತ್  ಟ್ರಸ್ಟ್ ಮೂಲಕ ಸೋನಿಪತ್ ನಲ್ಲಿ ಸುಸಜ್ಜಿತ ಆಸ್ಪತ್ರೆ ಹಾಗೂ ಶಾಲೆಯನ್ನು ನಡೆಸುತ್ತಿದೆ. ಬಡವರ ಹಾಗೂ ಹಿಂದುಳಿದ ವರ್ಗಕ್ಕೆ ಸಹಾಯವನ್ನು ಅಟ್ಲಾಸ್ ಸಂಸ್ಥೆ ಮಾಡುತ್ತಿದೆ.

ಒಬ್ಬನ ಯೋಚನೆಯಿಂದ ಆರಂಭವಾದ ಅಟ್ಲಾಸ್ ಸೈಕಲ್ ಇಂದು ವರ್ಷಕ್ಕೆ 4 ಮಿಲಿಯನ್ ಸೈಕಲ್ ಗಳನ್ನು ತಯಾರಿಸುತ್ತಿದೆ. ಹಳ್ಳಿಯಿಂದ ದಿಲ್ಲಿ, ದಿಲ್ಲಿಯಿಂದ ವಿದೇಶದ ಬೀದಿಯಲ್ಲೂ ಅಟ್ಲಾಸ್ ಚಕ್ರದ ಅಚ್ಚು ಬಾಲ್ಯದ ಅದ್ಭುತವಾಗಿ ಕಾಣಿಸುತ್ತದೆ.

 

ಸುಹಾನ್ ಶೇಕ್

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ