ಯಕ್ಷರಂಗದಲ್ಲೂ ಟ್ರೋಲ್‌ ಕಾಯಿಲೆ!

ವಿಷ್ಣುದಾಸ್ ಪಾಟೀಲ್, Apr 28, 2019, 5:24 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ : Representative Image Used

ಆರಾಧನಾ ಕಲೆಯಾಗಿರುವ ಯಕ್ಷಗಾನ ಟಿವಿ ,ಸಾಮಾಜಿಕ ಜಾಲತಾಣಗಳ ವ್ಯಾಪಕ ಪ್ರಭಾವದ ನಡುವೆಯೂ ತನ್ನದೇ ಆದ ಅಸ್ತಿತ್ವವನ್ನು ಸಾರುತ್ತಿದೆ. ಅದಕ್ಕೆ ಕಾರಣ ಶ್ರೇಷ್ಠ ಕಲಾ ಪ್ರಕಾರದಲ್ಲಿ ಅಡಗಿರುವ ಸತ್ವಗಳು.

ಶತಮಾನದ ಇತಿಹಾಸ ಹೊಂದಿರುವ ಕಾಲಕಾಲಕ್ಕೆ ಬದಲಾವಣೆ ಕಾಣುತ್ತಾ ಬಂದಿರುವ ಕಲೆಯಲ್ಲಿ ಪೌರಾಣಿಕ ಕಥಾ ವಸ್ತುವೇ ಹೆಚ್ಚಾಗಿ ಪ್ರದರ್ಶನಕಾಣುವುದು. ಆ ಪ್ರದರ್ಶನಗಳ ನಡುವೇ ಕೆಲಕಾಲದಿಂದ ಅನಗತ್ಯ ಪ್ರಸ್ತುತ ವಿದ್ಯಮಾನಗಳು ಕಂಡುಕೊಂಡು ಪ್ರೇಕ್ಷಕರಿಗೆ ಹೊಸ ಮಾದರಿಯ ಮನೋರಂಜನೆ ನೀಡಿದ ಹಲವು ಸನ್ನಿವೇಶಗಳು ಈಗಾಗಲೇ ರಂಗದಲ್ಲಿ ಬಂದು ಹೋಗಿದೆ.

ರಾಜಕೀಯ ರಂಗದ ನಾಯಕರ ಹೆಸರುಗಳನ್ನು ಪಾತ್ರಗಳ ಸಂವಾದದ ನಡುವೆ ಬಳಸಿಕೊಂಡು ಟಾಂಗ್‌ ನೀಡುವುದು ದಶಕಗಳ ಹಿಂದಿನಿಂದಲೂ ಬಂದಿದೆ ಎನ್ನುವುದು ಹಿರಿಯ ಯಕ್ಷಗಾನ ಅಭಿಮಾನಿಗಳ ಅಭಿಪ್ರಾಯ. ಕೆಲ ಖ್ಯಾತ ನಾಮ ಕಲಾವಿದರಿಂದ ಹೆಚ್ಚಾಗಿ ಬಳಕೆಗೆ ಬಂದ ಈ ಹೊಸತನ ವ್ಯಾಪಕವೆನ್ನುವಂತೆ ಯಕ್ಷರಂಗವನ್ನೂ ಆಕ್ರಮಿಸಿಕೊಂಡಿದೆ ಎಂದರೆ ತಪ್ಪಾಗಲಾರದು.

ಪೌರಾಣಿಕ ಪ್ರಸಂಗಗಳಲ್ಲಿ ಸಾಮಾಜಿಕ ವಿಚಾರಗಳನ್ನು ಸೇರಿಸಿ ಮಾತನಾಡುವುದು, ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ನೆನಪಿಸುವುದು ಕೆಲ ಪ್ರೇಕ್ಷಕರಿಗೆ ಅಪಾರ ಖುಷಿ ತರುತ್ತಿದೆ. ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆದ ವಿಚಾರವನ್ನು ಪ್ರದರ್ಶನದಲ್ಲೂ ಕಲಾವಿದರು ಅಭಿನಯಿಸುತ್ತಿದ್ದಾರೆ. ಇದಕ್ಕೊಂದು ಉದಾಹರಣೆಯಾಗಿ ಇತ್ತೀಚೆಗೆ ಭಾರೀ ಟ್ರೋಲ್‌ ಆದ ನಿಖಿಲ್‌ ಎಲ್ಲಿದ್ದಿಯಪ್ಪಪ್ಪಾ ಎನ್ನುವ ಸನ್ನಿವೇಶ.

ತೆಂಕು ತಿಟ್ಟಿನ ಮೇಳವೊಂದರ ಪ್ರದರ್ಶನದಲ್ಲಿ ಖ್ಯಾತ ಅತಿಥಿ ಕಲಾವಿದರೊಬ್ಬರು ಮಗನೇ ಎಲ್ಲಿದ್ದಿಯಪ್ಪ? ಓಹೋ.. ನಿನಗೆ ಬಿರುದು ಸಿಕ್ಕಿದ ಮೇಲೆ ಜನರೊಟ್ಟಿಗೆ ಸೇರಿಕೊಂಡು ಬಿಟ್ಟಿದ್ದೀಯ ಎನ್ನುವ ದೃಶ್ಯಾವಳಿ ವೈರಲ್‌ ಆಗಿತ್ತು. ಆ ಬಳಿಕ ಗದಾಯುದ್ಧ ಪ್ರಸಂಗ ಕೂಡಾಟವಾಗಿ ಪ್ರದರ್ಶನಗೊಳ್ಳುವ ವೇಳೆ ಭೀಮ ಪಾತ್ರಧಾರಿ, ಸರೋವರದಲ್ಲಿ ಅಡಗಿದ್ದ ಕೌರವನನ್ನು , ಕೌರವ ಎಲ್ಲಿದ್ದೀಯಪ್ಪ? ಎಂದು ಕರೆದಿದ್ದೂ ಕೂಡ ವೈರಲ್‌ ಆಗಿದೆ. ನೋಟು ನಿಷೇಧವಾದ ಸಂದರ್ಭದಲ್ಲೂ ಆ ವಿಚಾರ ಬಹುವಾಗಿ ರಂಗದಲ್ಲಿ ಪ್ರದರ್ಶನಗಳ ನಡುವೆ ಸೇರಿಕೊಂಡು ಪ್ರೇಕ್ಷಕರನ್ನು ನಗೆಗಡಲ್ಲಿ ತೇಲಿಸಿತ್ತು.

ಸಾಂದರ್ಭಿಕವಾಗಿ ಹೆಸರು ಉಲ್ಲೇಖ ಮಾಡದೇ ಪ್ರದರ್ಶನಕ್ಕೆ ಅತೀ ಎನ್ನಿಸದಂತೆ, ಚೌಕಟ್ಟು ಮೀರದಂತೆ ಪ್ರಸಕ್ತ ವಿಚಾರವನ್ನು ಸೇರಿಸುವುದೂ ಕಲಾವಿದನ ಸಾಮರ್ಥ್ಯವಾಗಿದ್ದು ಅದನ್ನು ಮಾಡಬೇಡಿ ಎನ್ನುವದು ಸರಿಯಲ್ಲ ಎನ್ನುತ್ತಾರೆ ಖ್ಯಾತ ಯುವ ಕಲಾವಿದರೊಬ್ಬರು.

ಯಕ್ಷಗಾನದಲ್ಲಿಹಿಂದೆ ಕಥಾವಸ್ತುವಿಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತಿತ್ತು, ಸಂಭಾಷಣೆಯೂ ಅದೇ ದಿಕ್ಕಿನಲ್ಲಿ ಸಾಗುತ್ತಿತ್ತು.ಆದರೆ ಈಗ ಅತೀ ಎನ್ನುವಂತೆ ಬದಲಾವಣೆಯಾಗುತ್ತಿತ್ತು, ಪ್ರೇಕ್ಷಕರಿಗಾಗಿಯೋ, ಕಲಾವಿದರೆ ಹಾಗೆಯೋ ತಿಳಿಯದು. ಕಥಾ ವಸ್ತು ಹೊರತು ಪಡಿಸಿ ಬೇರೆ ವಿಚಾರಗಳು ಅನಗತ್ಯ, ಯಕ್ಷಲೋಕದಲ್ಲಿ ಹಾಸ್ಯ ಸೇರಿದಂತೆ ನವರಸಗಳನ್ನು ಪ್ರದರ್ಶಿಸಲು ಅವಕಾಶವಿದೆ, ಅನಗತ್ಯ ವಿಚಾರಗಳೇ ಮೇಳೈಸಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ ಹಿರಿಯ ಯಕ್ಷಗಾನ ವಿಧ್ವಾಂಸರೊಬ್ಬರು.

ಯಕ್ಷಗಾನವೊಂದು ತನ್ನದೇ ಆದ ವಿಶಿಷ್ಠತೆಯನ್ನು ಹೊಂದಿರುವ ಕಲೆಯಾಗಿದ್ದು, ಟ್ರೋಲ್‌ ಆಗುವ ಸನ್ನಿವೇಶಗಳು ಕಥೆಯ ಮಧ್ಯೆಬರಬಾರದು ಎನ್ನುವದು ಅಪ್ಪಟ ಯಕ್ಷಾಭಿಮಾನಿಗಳ ಆಗ್ರಹವಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ