ಮಂದಿರಕ್ಕೆ “ಭದ್ರ’ ಮುಹೂರ್ತ ನಿಗದಿಪಡಿಸಿದ್ದು ಬೆಳಗಾವಿ ಗುರೂಜಿ
Team Udayavani, Aug 5, 2020, 10:08 AM IST
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆ. 5ರ ದಿನಾಂಕ ನಿಗದಿ ಮತ್ತು ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಿಸಲು ಮುಹೂರ್ತ ನಿಗದಿಪಡಿಸಿದ್ದು ಸದ್ಯ ಬೆಳಗಾವಿಯಲ್ಲಿ ನೆಲೆಸಿರುವ ಎನ್.ಆರ್. ವಿಜಯೇಂದ್ರ ಶರ್ಮಾ ಅವರು. ಶರ್ಮಾ ಅವರು ಗುರುಗಳಾದ ಹರಿದ್ವಾರದ ಭಾರತಮಾತಾ ಮಂದಿರದ ಸ್ವಾಮಿ ಗೋವಿಂದ ದೇವಗಿರೀಜಿ ಮಹಾರಾಜ ಅವರ ಕೋರಿಕೆ ಮೇರೆಗೆ ನಾಲ್ಕು ದಿನಾಂಕಗಳನ್ನು ಸೂಚಿಸಿದ್ದರು. ಈ ಮುಹೂರ್ತಗಳ ಪೈಕಿ ಆ. 5ನ್ನು ಅಂತಿಮಗೊಳಿಸಲಾಗಿತ್ತು.
ಯಾರು ವಿಜಯೇಂದ್ರ ಶರ್ಮಾ?
ವಿಜಯಪುರದವರಾದ ವಿಜಯೇಂದ್ರ ಶರ್ಮಾ ಅವರು ಗೋಪಾಲಾ ಚಾರ್ಯ ಗುರೂಜಿ ಅವರೊಂದಿಗೆ ಮುಂಬಯಿಗೆ ಹೋಗಿದ್ದರು. ಅನಂತರ ಉಡುಪಿಯ ಪಾಜಕ ಬಳಿ ನೆಲೆಸಿ ಕಾಶಿಯಲ್ಲಿಯೂ ಅನೇಕ ವರ್ಷಗಳ ಕಾಲ ವಿದ್ಯೆ ಕಲಿತಿದ್ದಾರೆ. “ಶುಭಸ್ಯ ಶೀಘ್ರಂ” ಎನ್ನುವಂತೆ ಶ್ರಾವಣ ಮಾಸ ಮತ್ತು ವಾಸ್ತು ಶ್ರೇಷ್ಠವಾದ ಮುಹೂರ್ತವನ್ನು ಸೂಚಿಸಿದ್ದೆನು. ಶತಮಾನಗಳ ಹೋರಾಟದ ಫಲವಾಗಿ ನಿರ್ಮಾಣಗೊಳ್ಳುತ್ತಿರುವ ಮಂದಿರ ಇದಾಗಿದೆ. ಈ ಹಿನ್ನೆಲೆಯಲ್ಲಿ ವಾಸ್ತು ನಿಯಮ “ಭದ್ರ’ಕ್ಕೆ ಒತ್ತು ನೀಡಿ ಸುಭದ್ರ ಮಂದಿರ ನಿರ್ಮಾಣಕ್ಕೆ ಬುನಾದಿ ಹಾಕುವ ಉದ್ದೇಶ ದೊಂದಿಗೆ ಆ. 5ರ ಮುಹೂರ್ತ ನೀಡಿದ್ದೆ ಎನ್ನುತ್ತಾರೆ ಶರ್ಮಾ.
ರಾಷ್ಟ್ರಭಕ್ತಿಯ ಸಂಕೇತವೂ ಹೌದು ಆಗಸ್ಟ್ 05
2019ರ ಆಗಸ್ಟ್ 5 ದೇಶದ ಪಾಲಿಗೆ ಚಾರಿತ್ರಿಕ ದಿನ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ಮತ್ತು 35(ಎ)ಯನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-2.0 ಸರಕಾರವು ಲೋಕಸಭೆಯಲ್ಲಿ ಅಧಿಕೃತವಾಗಿ ಘೋಷಿಸಿತು. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ಇತರ ಎಲ್ಲ ರಾಜ್ಯಗಳ ಮಾದರಿಯಲ್ಲಿಯೇ ಇಡೀ ದೇಶಕ್ಕೆ ಅನ್ವಯವಾಗುವ ಕಾನೂನು, ಕಾಯಿದೆಗಳ ವ್ಯಾಪ್ತಿಗೆ ಒಳಪಟ್ಟಿತು. ಇದೀಗ ಈ ದಿನವನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಲು ಆಯ್ಕೆ ಮಾಡಿಕೊಂಡಿದ್ದಾರೆ.
ಶ್ರೀರಾಮನ ಜನ್ಮಸ್ಥಳದಲ್ಲಿ ಭವ್ಯ ಮಂದಿರ ವೊಂದು ನಿರ್ಮಾಣಗೊಳ್ಳಬೇಕೆಂಬುದು ಕೇವಲ ಹಿಂದೂಗಳಲ್ಲದೆ ಇಡೀ ದೇಶಬಾಂಧವರ ದಶಕಗಳ ಕನಸು. ಈ ಕನಸನ್ನು ಸಾಕಾರಗೊಳಿಸಲು ಆಗಸ್ಟ್ 5 ಮುನ್ನುಡಿ ಬರೆಯಲಿದೆ. ಮಂದಿರ ನಿರ್ಮಾಣ ಕೇವಲ ಭಕ್ತಿ, ನಂಬಿಕೆಯ ವಿಚಾರ ಮಾತ್ರವಲ್ಲ ಇದು ರಾಷ್ಟ್ರಭಕ್ತಿಯ ಸಂಕೇತವೂ ಹೌದು.