ಶಿವರಾಜಕುಮಾರ್ ಹೊಸ ಚಿತ್ರ “ಕವಚ’
Team Udayavani, Nov 22, 2017, 12:44 PM IST
ಸುಮಾರು 15 ವರ್ಷಗಳ ಹಿಂದೆ, ಇನ್ನು ಮುಂದೆ ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರು ಶಿವರಾಜಕುಮಾರ್. ಅದರಂತೆ ಅವರು ಯಾವೊಂದು ರೀಮೇಕ್ ಚಿತ್ರದಲ್ಲೂ ನಟಿಸಿರಲಿಲ್ಲ. ಈ ಮಧ್ಯೆ ಬಿಡುಗಡೆಯಾದ “ಸುಗ್ರೀವ’ ಚಿತ್ರದಲ್ಲಿ ಬೇರೆ ಚಿತ್ರಗಳ ಸ್ಫೂರ್ತಿ ಇದ್ದರೂ, ಅದು ರೀಮೇಕ್ ಎಂದು ಕರೆಯಲ್ಪಡಲಿಲ್ಲ. ಈಗ ಶಿವರಾಜಕುಮಾರ್ ಅವರು 15 ವರ್ಷಗಳ ನಂತರ ಅಧಿಕೃತವಾಗಿಯೇ ರೀಮೇಕ್ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.
ಹಾಗೆ ಶಿವರಾಜಕುಮಾರ್ ಒಪ್ಪಿರುವ ಹೊಸ ಚಿತ್ರಕ್ಕೆ “ಕವಚ’ ಎಂದು ನಾಮಕರಣ ಮಾಡಲಾಗಿದೆ. ಇದು ಮಲಯಾಳಂನ “ಒಪ್ಪಂ’ ಚಿತ್ರದ ರೀಮೇಕು. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿರುವ ಈ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಇದೀಗ ಶಿವರಾಜಕುಮಾರ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಎಚ್.ಎಂ.ಎ ಸಿನಿಮಾನಡಿ ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ. ಸಂಪತ್ ಕುಮಾರ್ ನಿರ್ಮಿಸುತ್ತಿದ್ದಾರೆ.
ಇನ್ನು ಜಿ.ವಿ.ಆರ್. ವಾಸು ಈ ಚಿತ್ರದ ನಿರ್ದೇಶಕರು. “ಕವಚ’ ಚಿತ್ರವು ನಾಳೆ ಪ್ರಾರಂಭವಾಗಲಿದ್ದು, ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರ ಜೊತೆಗೆ ಇಶಾ ಕೊಪ್ಪಿಕರ್, ರವಿ ಕಾಳೆ, ತಬಲಾ ನಾಣಿ, ವಸಿಷ್ಠ ಸಿಂಹ, ಸುಧಾ ಬೆಳವಾಡಿ, ಜಯಪ್ರಕಾಶ್, ಲಯೇಂದ್ರ ಮುಂತಾದವರು ನಟಿಸುತ್ತಿದ್ದಾರೆ. ರಾಹುಲ್ ಶ್ರೀವಾತ್ಸವ್ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ.