ಅರ್ಥವಾಗದ ತರ್ಕದೊಳಗೆ ಎಲ್ಲವೂ ನಿಶ್ಯಬ್ಧ

ಚಿತ್ರ ವಿಮರ್ಶೆ

Team Udayavani, Jun 2, 2019, 3:00 AM IST

“ನಾನು ಸುಮ್ನೆ ಇದ್ರೆ ನಿಶ್ಯಬ್ಧ, ತಿರುಗಿ ಬಿದ್ರೆ ಬರೀ ಯುದ್ಧ…’ ಪೊಲೀಸ್‌ ಅಧಿಕಾರಿ ವಿಚಾರಣೆ ವೇಳೆ ಇಂಥದ್ದೊಂದು ಖಡಕ್‌ ಡೈಲಾಗ್‌ ಹೊಡೆಯುತ್ತಿದ್ದಂತೆ, ಯಾವುದು ನಿಶ್ಯಬ್ಧ, ಯಾವುದು ಯುದ್ಧ, ನಿಶ್ಯಬ್ಧದೊಳಗಿನ ಯುದ್ಧ ಹೇಗಿರುತ್ತದೆ ಎನ್ನುವುದು ಅರ್ಥವಾಗದಿದ್ದರೂ, ಒಂದೊಂದಾಗಿ ತೆರೆದುಕೊಳ್ಳುತ್ತ ಹೋಗುತ್ತದೆ. ಹಾಗಾದರೆ, ಇಡೀ ಚಿತ್ರದಲ್ಲಿ ಯಾವುದು ನಿಶ್ಯಬ್ಧ, ಯಾವುದು ಯುದ್ಧ ಅಂಥ ಗೊತ್ತಾಗಬೇಕಾದರೆ ತಾಳ್ಮೆ ಕಳೆದುಕೊಳ್ಳದೆ ಕ್ಲೈಮ್ಯಾಕ್ಸ್‌ವರೆಗೆ ಕಾಯಬೇಕು.

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ, ನಿಶ್ಯಬ್ಧ ಮತ್ತು ಯುದ್ಧ ಎರಡೂ ಕೂಡ ಪರಸ್ಪರ ವಿರುದ್ದ ಸಂಗತಿಗಳು. ಎರಡನ್ನೂ ಒಟ್ಟಿಗೆ ಕಾಣಲು ಸಾಧ್ಯವಿಲ್ಲ. ಹಾಗೂ ಕಾಣಬಹುದು ಎಂದರೆ ಅದು “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಚಿತ್ರದಲ್ಲಿ ಮಾತ್ರ ಸಾಧ್ಯ! ಹೌದು, ಶ್ರೀಮಂತ ಕುಟುಂಬ ಹುಡುಗನೊಬ್ಬ ಮಾತು ಬಾರದ, ಕಿವಿ ಕೇಳದ ಹುಡುಗಿಯೊಬ್ಬಳನ್ನು ಪ್ರೇಮಿಸುತ್ತಾನೆ. ಎಂದಿನಂತೆ ಶ್ರೀಮಂತ ಅಪ್ಪ ಮಗನ ಪ್ರೀತಿಗೆ ಅಡ್ಡಗಾಲು ಹಾಕುತ್ತಾನೆ.

ಅದರ ನಡುವೆ ಒಂದಷ್ಟು ಅನಿರೀಕ್ಷಿತ ಅಡೆ-ತಡೆಗಳು. ಅಂತಿಮವಾಗಿ ಈ ಎಲ್ಲಾ ಅಡೆ-ತಡೆಗಳನ್ನು ದಾಟಿ ಇಬ್ಬರ ಪ್ರೀತಿ ಯಶಸ್ವಿಯಾಗುತ್ತಾ? ಹಾಗಾದರೆ, ಇಡೀ ಚಿತ್ರದಲ್ಲಿ ಎಲ್ಲಿ ನಿಶ್ಯಬ್ಧ, ಎಲ್ಲಿ ಯುದ್ಧ ಅನ್ನೋದೆ ಚಿತ್ರ. ಚಿತ್ರದ ಕಥೆಯಲ್ಲಾಗಲಿ, ಚಿತ್ರಕಥೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಎಲ್ಲೂ ಹೊಸತನ ಹುಡುಕುವಂತಿಲ್ಲ. ಈಗಾಗಲೇ ಕನ್ನಡ ಮತ್ತಿತರ ಭಾಷೆಗಳಲ್ಲಿ ಬಂದು ಹೋದ ಹತ್ತಾರು ಚಿತ್ರಗಳ “ಚಿತ್ರನ್ನ’ದ ಫ್ಲೇವರ್‌ ಇಲ್ಲೂ ಮುಂದುವರೆದಿದೆ.

ಅದೇ ದಶಕಗಳಷ್ಟು ಹಳೆಯದಾದ ಕಥೆಗೆ, ಒಂದಷ್ಟು ಸಸ್ಪೆನ್ಸ್‌-ಥ್ರಿಲ್ಲರ್‌ ಅಂಶಗಳನ್ನು ಜೋಡಿಸಿ, ಹೊಸಥರ ಟೇಸ್ಟ್‌ ಕೊಡಲು ಹೊರಟ ನಿರ್ದೇಶಕರು ಆರಂಭದಲ್ಲೇ ಮುಗ್ಗರಿಸಿದ್ದಾರೆ. ಕೆಲವೊಂದು ಸೈಕಲಾಜಿಕಲ್‌ ಎಲಿಮೆಂಟ್ಸ್‌ ಹೇಳಲು ಹೊರಟರೂ, ಅರ್ಥವಿಲ್ಲದ ತರ್ಕ ಪ್ರೇಕ್ಷಕರಿಗೆ ತಲೆ ನೋವು ತರಿಸುತ್ತವೆ. ಅನೇಕ ಕಡೆಗಳಲ್ಲಿ ನೋಡುಗರಿಗೆ ಚಿತ್ರದ ದೃಶ್ಯಗಳೇ ಅಭಾಸವಾಗಿ ಕಾಣುತ್ತವೆ.

ಇನ್ನು ಚಿತ್ರದ ನಾಯಕ ಪ್ರಭು ಅಭಿನಯದಲ್ಲಿ ಸಾಕಷ್ಟು ಪಳಗಬೇಕಿದೆ. ಪ್ರೀತಿ, ರೋಷ – ಆವೇಶ, ಭಯ ಯಾವುದಕ್ಕೂ ವ್ಯತ್ಯಾಸವಿಲ್ಲದಂತೆ ಪ್ರಭು ಅಭಿನಯಿಸಿದ್ದಾರೆ. ನಾಯಕನ ಪಾತ್ರಕ್ಕೆ ಬೇರೆಯವರ ಹಿನ್ನೆಲೆ ಧ್ವನಿ ಕೂಡ ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ. ನಾಯಕಿ ಸಂಯುಕ್ತಾ ಹೆಗಡೆ ಮೂಕಿ ಮತ್ತು ಕಿವುಡು ಹುಡುಗಿಯಾಗಿ ಕಾಣಿಸಿಕೊಂಡಿರುವುದರಿಂದ ಅವರಿಗೆ ಚಿತ್ರದಲ್ಲಿ ಮಾತಿಲ್ಲ-ಕಥೆಯಿಲ್ಲ.

ಉಳಿದಂತೆ ಹಿರಿಯ ನಟ ರಾಮಕೃಷ್ಣ, ಎಡಕಲ್ಲು ಗುಡ್ಡ ಚಂದ್ರಶೇಖರ್‌, ಸ್ವಾತಿ ಮೊದಲಾದ ಕಲಾವಿದರು ಗಮನಸೆಳೆದರೂ, ಉಳಿದಂತೆ ಚಿತ್ರದಲ್ಲಿ ಕಾಣುವ ಹತ್ತಾರು ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಇನ್ನು ತಾಂತ್ರಿಕವಾಗಿ ಕಲ್ಯಾಣ್‌ ಸಮಿ ಛಾಯಾಗ್ರಹಣ ಉತ್ತಮವಾಗಿದೆ. ಸಂಕಲನ ಕಾರ್ಯ ಅಷ್ಟೇ ಮಂದವಾಗಿದೆ.

ಕಿರಣ್‌ ವಾರಣಾಸಿ ಸಂಗೀತ ಸಂಯೋಜಿಸಿರುವ ಒಂದೆರಡು ಮೆಲೋಡಿ ಟ್ರ್ಯಾಕ್‌ ಮಧ್ಯದಲ್ಲಿ ಪ್ರೇಕ್ಷಕರನ್ನ 3-4 ನಿಮಿಷ ರಿಲ್ಯಾಕ್ಸ್‌ ಮೂಡ್‌ಗೆ ಕರೆದೊಯ್ಯುತ್ತದೆ. ಅದನ್ನು ಹೊರತುಪಡಿಸಿದರೆ ಹಿನ್ನೆಲೆ ಸಂಗೀತ, ಡಬ್ಬಿಂಗ್‌, ರೀ-ರೆಕಾರ್ಡಿಂಗ್‌ ಯಾವ ಕೆಲಸಗಳಲ್ಲೂ ಗುಣಮಟ್ಟವಿಲ್ಲ. ಒಟ್ಟಾರೆ “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಎಂಬ ಹೊಸಬರ ಚಿತ್ರದಲ್ಲಿ ಹೊಸತನವಿರಬಹುದು ಎಂಬ ನಿರೀಕ್ಷೆಯಲ್ಲಿ ನೋಡಲು ಹೊರಟರೆ ನಿರಾಶರಾಗುವುದರಲ್ಲಿ ಅನುಮಾನವಿಲ್ಲ.

ಚಿತ್ರ: ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ
ನಿರ್ಮಾಣ: ರೋಲಿಂಗ್‌ ಡ್ರೀಮ್ಸ್‌ ಎಂಟರ್‌ಟೈನ್ಮೆಂಟ್ಸ್‌
ನಿರ್ದೇಶನ: ಶ್ರೀನಾಗ್‌
ತಾರಾಗಣ: ಪ್ರಭು, ಸಂಯುಕ್ತಾ ಹೆಗ್ಡೆ, ರಾಮಕೃಷ್ಣ, “ಎಡಕಲ್ಲು ಗುಡ್ಡ’ ಚಂದ್ರಶೇಖರ್‌, ಅರವಿಂದ್‌ರಾವ್‌, ಸುಶ್ಮಿತಾ, ಸ್ವಾತಿ ಇತರರು.

* ಜಿ.ಎಸ್‌ ಕಾರ್ತಿಕ ಸುಧನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ