ಕಾಣೆಯಾದ ಪುಟಕ್ಕೆ ಇನ್ನಿಲ್ಲದ ಹುಡುಕಾಟ

Team Udayavani, Nov 17, 2018, 12:08 PM IST

ಸುತ್ತಮುತ್ತ ಹಚ್ಚ ಹಸಿರಿನಿಂದ ಕೂಡಿದ ಪರಿಸರದಲ್ಲಿರುವ ಸುಂದರ ಮನೆ. ಆ ಮನೆಯೊಡತಿ ವೈಷ್ಣವಿ ನಿಗೂಢವಾಗಿ ಕೊಲೆಯಾಗಿರುತ್ತಾಳೆ. ಈ ನಿಗೂಢ ಕೊಲೆಯ ತನಿಖೆಗಾಗಿ ಬರುವ ಪೊಲೀಸ್‌ ಅಧಿಕಾರಿ ಜೆ.ಕೆ, ಮನೆ ಮಾಲೀಕ ಶ್ರೀಜತಿಯ ಜೊತೆ ತನಿಖೆಗಾಗಿ ಮುಖಾಮುಖೀಯಾಗಿ ಕೂರುತ್ತಾನೆ. ರಾತ್ರಿ 8 ಗಂಟೆಗೆ ಶುರುವಾಗಿ 10 ಗಂಟೆಗೆ ಮುಗಿಯುವ ಈ ತನಿಖೆಯಲ್ಲಿ, ಪೊಲೀಸ್‌ ಅಧಿಕಾರಿ ನಡೆದಿರುವ ಕೊಲೆಯ ಹಿನ್ನೆಲೆ, ಕಾರಣಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತಾನೆ.

ತನಿಖೆ ಮುಗಿಯುವ ವೇಳೆಗೆ ಕೊಲೆಯ ಅಪರಾಧಿ ಸಿಕ್ಕಿಬೀಳುತ್ತಾನೆ. ಕೊಲೆಯ ಹಿಂದಿನ ನಿಗೂಢ ಕಾರಣ ಮತ್ತು ಸತ್ಯ ಎರಡೂ ಬಯಲಾಗುತ್ತದೆ. ಹಾಗಾದರೆ, ಆ ಕೊಲೆಯ ಅಪರಾಧಿ ಯಾರು ಎಂಬ ನಿಗೂಢ ರಹಸ್ಯವನ್ನು ಬಯಲು ಮಾಡುವುದೇ “ಪುಟ 109′ ಎಂಬ ಮಿಸ್ಸಿಂಗ್‌ ಪೇಜ್‌! ಇದು “ಪುಟ 109′ ಚಿತ್ರದ ಕಥೆಯ ಒಂದು ಎಳೆ. ಸಸ್ಪೆನ್ಸ್‌, ಥ್ರಿಲ್ಲರ್‌, ಮರ್ಡರ್‌ ಮಿಸ್ಟರಿ ಎಲ್ಲವೂ ಚಿತ್ರದಲ್ಲಿದ್ದರೂ, ಮಾತು ಮತ್ತು ಮೌನದ ಮೂಲಕವೇ ವೈಲೆಂಟ್‌ ಸ್ಟೋರಿಯನ್ನೂ ಸೈಲೆಂಟಾಗಿ ಹೇಳಿದ್ದಾರೆ ದಯಾಳ್‌.

ಚಿತ್ರದ ಟೈಟಲ್‌ ಹೇಳ್ಳೋ ಹಾಗೆ ಫೋರೆನ್ಸಿಕ್‌ ಅನ್ನೋ ಪುಸ್ತಕದಲ್ಲಿ ಕಾಣೆಯಾದ 109ನೇ ಪುಟದಲ್ಲಿ ಏನಿದೆ ಅನ್ನೋದೆ ಚಿತ್ರದ ಕೇಂದ್ರ ಬಿಂದು. ಚಿತ್ರದ ಮೊದಲರ್ಧ ಮಂದಗತಿಯಲ್ಲಿ ಸಾಗಿದರೆ, ದ್ವಿತಿಯಾರ್ಧ ಚಿತ್ರಕಥೆ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ. ಚಿತ್ರಕಥೆಯ ನಿರೂಪಣೆ ಇನ್ನಷ್ಟು ಮೊನಚಾಗಿದ್ದರೆ, ಚಿತ್ರದ ಕೌತುಕ ಇನ್ನಷ್ಟು ಹೆಚ್ಚುತ್ತಿತ್ತು. ತನಿಖೆಯ ವೇಳೆ ನಡೆಯುವ ರೋಚಕತೆಯನ್ನು ತೋರಿಸುವ ಭರದಲ್ಲಿ ನಿರ್ದೇಶಕರು ಕಣ್ಣಿಗೆ ಕಾಣುವ ಕೆಲವು ಚಿಕ್ಕ ಸಂಗತಿಗಳನ್ನು ಮರೆತಂತಿದೆ.

ಆರಂಭದಿಂದ ಅಂತ್ಯದವರೆಗೂ ಒಂದಷ್ಟು ಜರ್ಕ್‌ ಗಳ ನಡುವೆ “ಪುಟ 109′ ತಣ್ಣಗೆ ನೋಡಿಸಿಕೊಂಡು ಹೋಗುತ್ತದೆ. ಕೆಲವೊಂದು ಅಂಶಗಳನ್ನು ಬದಿಗಿಟ್ಟು ನೋಡುವುದಾದರೆ, “ಪುಟ 109′ ಒಂದೊಳ್ಳೆ ಪ್ರಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ಚಿತ್ರದ ಬಹುಭಾಗ ತನಿಖಾಧಿಕಾರಿ (ಜೆ.ಕೆ) ಮತ್ತು ನವೀನ್‌ ಕೃಷ್ಣ (ಶ್ರೀಜತಿ) ನಡುವೆ ನಡೆಯುತ್ತದೆ. ಇಬ್ಬರೂ ಮುಖಾಮುಖೀಯಾಗಿ ಕೂತೂ, ಪ್ರೇಕ್ಷಕರನ್ನೂ ಹಿಡಿದು ಕೂರಿಸುತ್ತಾರೆ.

ಉಳಿದಂತೆ ಚಿತ್ರದಲ್ಲಿ ವೈಷ್ಣವಿ ಮೆನನ್‌, ಅನುಪಮಾ ಅವರು ಹಾಗೆ ಬಂದು ಹೀಗೆ ಹೋಗುವುದರಿಂದ, ಅವರದ್ದು ಆಟಕ್ಕುಂಟು – ಲೆಕ್ಕಕ್ಕಿಲ್ಲ ಎಂಬ ಪಾತ್ರ ಎನ್ನಬಹುದು. ಚಿತ್ರದ ತಾಂತ್ರಿಕ ಅಂಶಗಳ ಬಗ್ಗೆ ಹೇಳುವುದಾದರೆ, ಪಿಕೆಹೆಚ್‌ ದಾಸ್‌ ಛಾಯಾಗ್ರಹಣ ಮತ್ತು ಶ್ರೀ ಕ್ರೇಜಿ ಮೈಂಡ್ಸ್‌ ಸಂಕಲನ, ಗಣೇಶ್‌ ನಾರಾಯಣ್‌ ಹಿನ್ನೆಲೆ ಸಂಗೀತ ಚಿತ್ರದ ಮೂರು ಪ್ಲಸ್‌ ಪಾಯಿಂಟ್ಸ್‌ ಎನ್ನಬಹುದು. 

ಚಿತ್ರ: ಪುಟ 109
ನಿರ್ಮಾಣ-ನಿರ್ದೇಶನ: ದಯಾಳ್‌ ಪದ್ಮನಾಭನ್‌
ತಾರಾಗಣ: ಜಯರಾಮ್‌ ಕಾರ್ತಿಕ್‌ (ಜೆ.ಕೆ), ನವೀನ್‌ ಕೃಷ್ಣ, ವೈಷ್ಣವಿ ಮೆನನ್‌, ಶ್ರೀ ಕ್ರೇಜಿಮೈಂಡ್ಸ್‌, ಅನುಪಮಾ ಗೌಡ, ಮತ್ತಿತರರು

* ಜಿ.ಎಸ್‌.ಕಾರ್ತಿಕ ಸುಧನ್‌


ಈ ವಿಭಾಗದಿಂದ ಇನ್ನಷ್ಟು

  • ಪ್ರತಿಯೊಬ್ಬರು ತಾವು ಮಾಡಿದ ಕರ್ಮಗಳಿಗೆ ಫ‌ಲಾಫ‌ಲಗಳನ್ನು ಪಡೆಯಲೇ ಬೇಕು. ಒಳ್ಳೆಯ ಕೆಲಸ ಮಾಡಿದರೆ, ಒಳ್ಳೆಯ ಫ‌ಲ, ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಫ‌ಲ ಕಟ್ಟಿಟ್ಟ...

  • "ಅರ್ಜುನ್‌ ನೀನು ಹೇಳಿದಂಗೆ ಈ ಕಾರನ್ನ ತಗೊಂಡ್‌ ಹೋದ್ರೆ ಹತ್ತುಕೋಟಿ ಸಿಗುತ್ತಾ... ' - ಸನಾ ಅಲಿಯಾಸ್‌ ಸೃಷ್ಟಿ ಆ ದಟ್ಟ ಕಾಡಿನ ನಡುವೆ ಈ ಡೈಲಾಗ್‌ ಹೇಳುವ ಹೊತ್ತಿಗೆ,...

  • ಅದೊಂದು ಶ್ರೀಮಂತ ಕುಟುಂಬದ ಮನೆ. ಒಮ್ಮೆ ವಾರಾಂತ್ಯದಲ್ಲಿ ಆ ಮನೆಯಲ್ಲಿರುವವರೆಲ್ಲರೂ ಬೇರೆ ಬೇರ ಕಾರಣಗಳಿಂದ ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬರುತ್ತದೆ....

  • ಸದಭಿರುಚಿ ಸಿನಿಮಾ ಮಾಡೋದಕ್ಕೆ ಒಂದು ಒಳ್ಳೆಯ ಕಥೆಯನ್ನು ಹುಡುಕಿ, ಆಯ್ಕೆ ಮಾಡಿಕೊಳ್ಳುವುದು, ಅದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಮೇಲೆ ಕಟ್ಟಿಕೊಡೋದೇ...

  • ಆತ ಒಳ್ಳೆಯ ಹುಡುಗ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡೇ ಶಿಕ್ಷಣ ಮುಗಿಸಿದ ಆತನಿಗೆ ಸರ್ಕಾರಿ ನೌಕರಿಯೂ ಸಿಗುತ್ತದೆ. ಅದೆಷ್ಟೋ ಹುಡುಗಿಯರು ಪ್ರೀತಿ, ಪ್ರೇಮ,...

ಹೊಸ ಸೇರ್ಪಡೆ