ದಂಡು ದಾಳಿಯಲ್ಲಿ ಮತ್ತೆ ನೆತ್ತರ ವಾಸನೆ

ಚಿತ್ರ ವಿಮರ್ಶೆ

Team Udayavani, Nov 2, 2019, 5:02 AM IST

“ಎಷ್ಟ್ ದಿನಾಂತ ಕುರಿ, ನರಿನಾ ಹೊಡಿತಿರಿ¤àರಾ, ಒಂದ್‌ ಆನೇನಾ ಹೊಡಿಬೇಕು, ಹೊಡಿತೀರಾ …’ ಎಂಟು ಮಂದಿಯನ್ನು ಎದುರಿಗೆ ನಿಲ್ಲಿಸಿಕೊಂಡು ಕ್ರಿಮಿನಲ್‌ ಬುದ್ಧಿಯ ಒಬ್ಟಾತ ಹೀಗೆ ಕೇಳುತ್ತಾನೆ. ಆ ಎಂಟೂ ಮಂದಿ “ಹೊಡಿತೀವಿ ಸಾಮಿ ….’ ಎನ್ನುತ್ತಾ ತಲೆಯಲ್ಲಾಡಿಸುತ್ತಾರೆ. ಇಷ್ಟು ಹೇಳಿದ ಮೇಲೆ ಇದೊಂದು ಕ್ರೈಮ್‌ ಹಿನ್ನೆಲೆಯ ಚಿತ್ರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದಕ್ಕಿಂತ ಹೆಚ್ಚಾಗಿ “ದಂಡುಪಾಳ್ಯಂ’ ಸಿನಿಮಾ ಬಗ್ಗೆ ಮಾತನಾಡುವಾಗ ಕೊಲೆ, ದರೋಡೆ, ರಕ್ತಪಾತ, ಅತ್ಯಾಚಾರ … ಇವನ್ನು ಬಿಟ್ಟು ಮಾತನಾಡುವಂತಿಲ್ಲ.

“ದಂಡುಪಾಳ್ಯಂ’ ಸೀರಿಸ್‌ನ ಸಿನಿಮಾಕ್ಕೆ ಈ ಅಂಶಗಳೇ ಬ್ರಾಂಡ್‌ ಎನ್ನುವಂತಾಗಿದೆ. ಈ ಹಿಂದೆ ಬಂದ “ದಂಡುಪಾಳ್ಯಂ’ನ ಮೂರು ಸೀರಿಸ್‌ಗಳು ಕೂಡಾ ಈ ಅಂಶದೊಂದಿಗೆ ಒಂದೊಂದು ಕಥೆಯನ್ನು ಹೇಳಿದ್ದವು. ಈಗ “ದಂಡುಪಾಳ್ಯಂ-4′ ಸರದಿ. ಈ ಚಿತ್ರ ಕೂಡಾ ಈ ಹಿಂದಿನ ಸಿನಿಮಾಗಳ ಮೂಲ ಅಂಶಗಳಿಂದ ಮುಕ್ತವಾಗಿಲ್ಲ. ಈ ಚಿತ್ರದಲ್ಲೂ ದಂಡುಪಾಳ್ಯಂ ಗ್ಯಾಂಗ್‌ ಇದೆ. ಈ ಹಿಂದಿನ ಸಿನಿಮಾಗಳಲ್ಲಿ ಬೆಚ್ಚಿ ಬೀಳಿಸಿದ ಗ್ಯಾಂಗ್‌ನಂತೆ ಭಯಂಕರವಾಗಿದೆ ಕೂಡಾ. ಕ್ರೌರ್ಯವನ್ನೇ ತಲೆಮೇಲೆ ಹೊತ್ತುಕೊಂಡು ಸಾಗುವ ಈ ಗ್ಯಾಂಗ್‌ ಕೂಡಾ ಸಾಕಷ್ಟು ಕೊಲೆ, ದರೋಡೆ, ಅತ್ಯಾಚಾರಗಳನ್ನು ಮಾಡುತ್ತಲೇ ದೊಡ್ಡದೊಂದು ಅಂಶಕ್ಕೆ ಸ್ಕೆಚ್‌ ಹಾಕುತ್ತದೆ.

ಸಹಜವಾಗಿಯೇ ಒಂದು ಕುತೂಹಲವಿತ್ತು. ಈ ಹಿಂದಿನ ಭಾಗದಲ್ಲಿ ಜೈಲು ಸೇರಿದ್ದ ಗ್ಯಾಂಗ್‌ ಮತ್ತೆ ಹೇಗೆ ಹೊರಬರುತ್ತದೆ ಎಂದು. ಆದರೆ, ನಿರ್ದೇಶಕರು ಆ ಅಂಶವನ್ನು ತುಂಬಾ ಜಾಣ್ಮೆಯಿಂದ ಹೆಣೆದಿದ್ದಾರೆ. ಮರಣದಂಡನೆ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ “ದಂಡುಪಾಳ್ಯಂ’ ಗ್ಯಾಂಗ್‌ ಅನ್ನು ಹೇಗಾದರೂ ಬಿಡಿಸಬೇಕು ಎಂದು ಪಣತೊಟ್ಟು ಹುಟ್ಟಿಕೊಂಡ ಗ್ಯಾಂಗ್‌ “ದಂಡುಪಾಳ್ಯಂ-4′. ಬಿಡಿಸಬೇಕಾದರೆ ವಕೀಲರ ಮೊರೆ ಹೋಗಬೇಕು, ಕಾಸು ಬೇಕು. ಕಾಸಿನ ಹಾದಿ ಯಾವುದು ಎಂದು ಯೋಚಿಸಿದಾಗ ಆ ಗ್ಯಾಂಗಿಗೆ ಕಾಣೋದು ಮತ್ತದೇ ಮನೆಗಳು. ಈ ಬಾರಿ ಕಥೆಯಲ್ಲಿ ಒಂದಷ್ಟು ಹೊಸ ಅಂಶಗಳನ್ನು ಸೇರಿಸಲಾಗಿದೆ.

ದಂಡುಪಾಳ್ಯಂ ಗ್ಯಾಂಗ್‌ ಅನ್ನು ರಾಜಕಾರಣಿಯಾಗುವ ಹಾದಿಯಲ್ಲಿರುವವ ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾನೆ, ಜೈಲಿನಲ್ಲಿದ್ದವರನ್ನು ಬಿಡಿಸುವ ಆಮಿಷವೊಡ್ಡಿ ಏನೇನು ಕೆಲಸ ಮಾಡಿಸುತ್ತಾರೆ ಎಂಬ ಅಂಶದೊಂದಿಗೆ ಕಥೆ ಹೆಣೆದಿದ್ದಾರೆ. ಇನ್ಸ್‌ಪೆಕ್ಟರ್‌ ಛಲಪತಿ ಪಾತ್ರವೂ ಇಲ್ಲಿ ಒಂದೆರಡು ದೃಶ್ಯಗಳಲ್ಲಿ ಬಂದು ಹೋಗುತ್ತವೆ. ಈ ವಿಷಯದಲ್ಲೂ ನಿರ್ದೇಶಕರು ಮತ್ತೆ ಜಾಣ್ಮೆ ತೋರಿದ್ದಾರೆ. “ದಂಡುಪಾಳ್ಯಂ-3’ನಲ್ಲಿನ ಕೆಲವು ದೃಶ್ಯಗಳನ್ನು ಇಲ್ಲಿ ಜೋಡಿಸಿದ್ದಾರೆ. ಹಾಗಂತ ಅದು ನಿರೂಪಣೆಗೆ ಅಡ್ಡಿಯಾಗಿಲ್ಲ. ಇದೇ ಸಿನಿಮಾದ ಒಂದು ಭಾಗದಂತೆ ಕಾಣುತ್ತದೆ.

ಚಿತ್ರದಲ್ಲಿ ಕ್ರೈಮ್‌ ಅನ್ನು ತೋರಿಸುತ್ತಲೇ ಒಂದು ಸೂಕ್ಷ್ಮ ಸಂದೇಶ ಹೇಳುವ ಪ್ರಯತ್ನ ಮಾಡಿದ್ದಾರೆ. ಅಪರಿಚಿತರನ್ನು ಮನೆಗೆ ಸೇರಿಸಬೇಡಿ ಹಾಗೂ ಏಕಾಏಕಿ ಬಾಗಿಲು ತೆಗೆಯಬೇಡಿ ಎಂಬ ಸಂದೇಶ ನೀಡಿದ್ದಾರೆ. ಇನ್ನು ಈ ಚಿತ್ರದ ಹೈಲೈಟ್‌ ಎಂದರೆ ಅದು ಕ್ಲೈಮ್ಯಾಕ್ಸ್‌. ಅದು ಏನೆಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬಹುದು. ಅಲ್ಲಿ ನಡೆಯುವ ದೃಶ್ಯಗಳು, ಕೊನೆಯ ಟ್ವಿಸ್ಟ್‌ ಕಥೆಯ ಹೈಲೈಟ್‌. ಇನ್ನು, ಚಿತ್ರದಲ್ಲಿ ಮುಮೈತ್‌ ಖಾನ್‌ ಐಟಂ ಸಾಂಗ್‌ವೊಂದು ಬರುತ್ತದೆ. ಅದರ ಅಗತ್ಯ ಚಿತ್ರಕ್ಕಿರಲಿಲ್ಲ.

ಚಿತ್ರದಲ್ಲಿ ಸುಮನ್‌ ರಂಗನಾಥ್‌ ಬಿಟ್ಟರೆ ಮಿಕ್ಕವರೆಲ್ಲರೂ ಹೊಸಬರು. ಸುಂದ್ರಿ ಪಾತ್ರದ ಮೂಲಕ ಸುಮನ್‌ ರಂಗನಾಥ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್‌ ಆಫೀಸರ್‌ ಆಗಿ ವೆಂಕಟ್‌ ಖಡಕ್‌ ಲುಕ್‌ನಲ್ಲಿ ತೆರೆಮುಂದೆ ಬಂದಿದ್ದಾರೆ. ಚಿತ್ರದಲ್ಲಿ ನಟಿಸಿದ ಇತರ ಕಲಾವಿದರು ಕೂಡಾ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಎಷ್ಟು ಭಯಂಕರವಾಗಿ ತೆರೆಮೇಲೆ ಕಾಣಿಸಿಕೊಳ್ಳಬಹುದೋ, ಅಷ್ಟೂ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಸನ್ನಿವೇಶಕ್ಕೆ ಪೂರಕವಾಗಿದೆ.

ಚಿತ್ರ: ದಂಡುಪಾಳ್ಯಂ-4
ನಿರ್ಮಾಣ: ವೆಂಕಟ್‌
ನಿರ್ದೇಶನ: ಕೆ.ಟಿ.ನಾಯಕ್‌
ತಾರಾಗಣ: ಸುಮನ್‌ ರಂಗನಾಥ್‌, ಮುಮೈತ್‌ ಖಾನ್‌, ರಾಕ್‌ಲೈನ್‌ ಸುಧಾಕರ್‌ ಮತ್ತಿತರರು.

* ರವಿ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ