ಕುಮುಧ್ವತಿ ನದಿಯಲ್ಲಿ ಮೀನುಗಳ ಮಾರಣಹೋಮ
Team Udayavani, Apr 5, 2022, 3:32 PM IST
ರಿಪ್ಪನ್‌ಪೇಟೆ: ಸಮೀಪದ ಬಿದರಹಳ್ಳಿ ಗ್ರಾಮದ ಕುಮುಧ್ವತಿ ನದಿಯಲ್ಲಿ ಕಿಡಿಗೇಡಿಗಳು ವಿಷ ಬೆರೆಸಿ ಮೀನು ಸೇರಿದಂತೆ ಪ್ರಾಣಿ ಪ್ರಬೇಧಗಳ ಮಾರಣಹೋಮ ನಡೆಸಿರುವ ಘಟನೆ ನಡೆದಿದೆ. ಬಿದರಹಳ್ಳಿ ಕುಮುಧ್ವತಿ ನದಿಯಲ್ಲಿ ಕಿಡಿಕೇಡಿಗಳು ನದಿಯ ನೀರಿಗೆ ಮೈಲುತುತ್ತ ವಿಷ ಬೆರೆಸಿ ಪ್ರಾಣಿ ಪ್ರಬೇಧಗಳ ಮಾರಣಹೋಮ ನಡೆಸಿದ್ದಾರೆ.
ಕುಮುಧ್ವತಿ ನದಿಯಲ್ಲಿ ಬೇಸಿಗೆ ಕಾರಣದಿಂದ ನೀರು ಇಂಗಿ ಹೋಗಿದ್ದು ಅಲ್ಲಲ್ಲಿ ಕೆಲ ಹೊಂಡದಲ್ಲಿ ಪ್ರಾಣಿ ಪ್ರಬೇಧಗಳು ಜೀವಿಸುತ್ತವೆ. ಇದನ್ನೇ ಗುರಿಯಾಗಿಸಿಕೊಂಡು ಕಿಡಿಕೇಡಿಗಳು ವಿಷಯುಕ್ತ ‘ಮೈಲುತುತ್ತ’ವನ್ನು ಆ ನೀರಿಗೆ ಬೆರೆಸಿ ಲಕ್ಷಾಂತರ ಪ್ರಾಣಿ ಸಂಕುಲಗಳ ಮಾರಣಹೋಮಕ್ಕೆ ಕಾರಣವಾಗಿದ್ದಾರೆ. ವಿಷ ಬೆರೆಸಿದ್ದರಿಂದ ಮೀನು, ಕಪ್ಪೆ ಹಾಗೂ ಇನ್ನಿತರ ಜೀವಿಗಳು ನದಿಯ ದಂಡೆಯ ಮೇಲೆ ಬಿದ್ದಿದ್ದು ಇದನ್ನು ತಿನ್ನುವ ಹಕ್ಕಿಗಳು ಸಹ ಸಾಯುವ ಸಾಧ್ಯತೆ ಇದೆ. ಇನ್ನು ಜಾನುವಾರುಗಳು ಕುಡಿಯಲು ಇದೇ ನೀರು ಬಳಸುವುದರಿಂದ ಅವುಗಳ ಜೀವಕ್ಕೂ ಕಂಟಕವಾಗಿದೆ.
ಈ ಬಗ್ಗೆ ಅಮೃತ ಗ್ರಾಪಂ ಪಿಡಿಒಗೆ ವಿಚಾರಿಸಿದಾಗ ವಿಷಯ ಗಮನಕ್ಕೆ ಬಂದಿದ್ದು ಕಿಡಿಕೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.