ಗಣಿಗಾರಿಕೆ ನಿಷೇಧಕ್ಕೆ ಶೀಘ್ರ ಆದೇಶ

•ಜಪ್ತಿ ಮಾಡಿದ ಮರಳು ವಿಲೇವಾರಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

Team Udayavani, Aug 25, 2019, 11:05 AM IST

ವಿಜಯಪುರ: ನಗರದ ಗಣಿ-ಭೂವಿಜ್ಞಾನ ಇಲಾಖೆ ಕಾರ್ಯದರ್ಶಿ ಪ್ರಸನ್ನಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮರಳು ನಿರ್ವಹಣಾ ಹಾಗೂ ಜಿಲ್ಲಾ ಮಟ್ಟದ ಟಾಸ್ಕ್ಪೋರ್ಸ್‌ ಸಮಿತಿ ಸಭೆ ನಡೆಯಿತು.

ವಿಜಯಪುರ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ನದಿ ಪಾತ್ರದಲ್ಲಿ ಯಾವುದೇ ರೀತಿ ಮರಳು ಗಣಿಗಾರಿಕೆ ಸಂಪೂರ್ಣ ನಿಷೇಧ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತದೆ. ಇದೇ ವೇಳೆ ಜಿಲ್ಲೆಯಲ್ಲಿ ಜಪ್ತಿ ಮಾಡಿದ ಅನಧಿಕೃತ ಮರಳು ವಿಲೇವಾರಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾದ ಪ್ರಸನ್ನಕುಮಾರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮರಳು ನಿರ್ವಹಣಾ ಹಾಗೂ ಜಿಲ್ಲಾಮಟ್ಟದ ಟಾಸ್ಕ್ಪೋರ್ಸ್‌ ಸಮಿತಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಅನಧಿಕೃತವಾಗಿ ಮರಳು ಗಣಿಗಾರಿಕೆ ತಡೆಗಟ್ಟಲು ಸೂಕ್ತ ನಿಗಾ ವಹಿಸಬೇಕು. ವಿಶೇಷವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡು ಹರಿಯುವ ನದಿ ಪಾತ್ರದಲ್ಲಿ ಯಾವುದೇ ರೀತಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಬೇಕು. ಮತ್ತೂಂದೆಡೆ ಅನಧಿಕೃತ ಮರಳು ವಿಲೆವಾರಿಗೆ ಒಂದು ವಾರದಲ್ಲಿ ಟೆಂಡರ್‌ ನೋಟಿಫಿಕೇಶನ್‌ ಹೊರಡಿಸಿ, ಎರಡನೇ ವಾರದಲ್ಲಿ ಮರಳು ಹರಾಜು ಪ್ರಕ್ರಿಯೆ ಪೂರ್ಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭೀಮಾ ನದಿ ಪಾತ್ರದಲ್ಲಿ ಈ ಹಿಂದೆ ಅವ್ಯಾಹತವಾಗಿ ಮರಳು ಗಣಿಗಾರಿಕೆ ಅನಧಿಕೃತವಾಗಿ ನಡೆದಿರುವುದು ಗಮನಕ್ಕೆ ಬಂದಿದೆ. ಅದರಂತೆ ಮಹಾರಾಷ್ಟ್ರ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಚರ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಸಂಪೂರ್ಣ ತಡೆಯಲು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಮಧ್ಯ ಪ್ರವೇಶಿಸುವ ಅವಶ್ಯಕತೆ ಇದೆ. ಇದಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಲಾಗುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಪಟ್ಟಂತೆ ಯಾವುದೇ ರೀತಿ ನಿಯಮಾವಳಿಗಳನ್ನು ಪಾಲಿಸಲಾಗಿಲ್ಲ. ಮರಳು ನೀತಿಯನ್ನು ಪರಿಪಾಲಿಸಿದ್ದಲ್ಲಿ ಯಾವುದೇ ರೀತಿ ಅಕ್ರಮಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ಹಾಗೂ ಅಕ್ರಮವಾಗಿ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ನಿಗಾ ಇಡುವ ಜೊತೆಗೆ ಕಾಲ-ಕಾಲಕ್ಕೆ ಪ್ರಕರಣಗಳನ್ನು ದಾಖಲಿಸಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದರು.

ಜಿಲ್ಲೆಯಲ್ಲಿ 72 ಕಲ್ಲು ಗಣಿಗಾರಿಕೆ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಅಧಿಕೃತವಾಗಿ ಎಲ್ಲ ಗಣಿಗಾರಿಕೆಗಳು ನಿಯಮಾವಳಿಯಂತೆ ನಡೆಯುತ್ತಿರುವ ಕುರಿತು ಪರಿಶೀಲನೆಗೆ ತಂಡ ರಚಿಸಬೇಕಿದೆ. ಕಂದಾಯ, ಪೊಲೀಸ್‌ ಇಲಾಖೆ, ಅರಣ್ಯ ಇಲಾಖೆ, ಭೂ ವಿಜ್ಞಾನ ಮತ್ತು ಗಣಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿಕೊಂಡು ನಿರಂತರ ಪರಿಶೀಲನೆ ನಡೆಸಬೇಕು. ತಪ್ಪಿತಸ್ಥರು ಕಂಡು ಬಂದಲ್ಲಿ ನೋಟಿಸ್‌ ಜಾರಿಗೊಳಿಸುವ ಜೊತೆಗೆ ಪ್ರಕರಣ ಸಹ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಪಟ್ಟಂತೆ ಅವಶ್ಯಕವಿರುವ ಮರಳನ್ನು ಸ್ಟಾಕ್‌ ಯಾರ್ಡ್‌ಗಳಲ್ಲಿ ಸಂಗ್ರಹಿಸಿ ಅವಶ್ಯಕತೆಗನುಗುಣವಾಗಿ ಕಲ್ಪಿಸಬೇಕು. ಅದರಂತೆ ಎಂ ಸ್ಯಾಂಡ್‌ ಬಳಸುವ ಕುರಿತು ಕಲ್ಲು ಗಣಿಗಾರಿಕೆ ಘಟಕಗಳು ಹಾಗೂ ಗುತ್ತಿಗೆದಾರರೊಂದಿಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಸಭೆ ನಡೆಸಿ, ಅರ್ಹತೆಗೆ ಅನುಗುಣವಾಗಿ ಕಲ್ಲುಗಣಿಗಾರಿಕೆಗೆ ಅವಕಾಶ ಒದಗಿಸಬೇಕು ಎಂದರು.

ಜಿಲ್ಲೆಯ ಇಂಡಿಯಲ್ಲಿ ಮರಳು ಸ್ಟಾಕ್‌ ಯಾರ್ಡ್‌ ಸ್ಥಾಪಿಸಬೇಕು. ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಶಾಶ್ವತವಾಗಿ ತಂಡವೊಂದನ್ನು ರಚಿಸಬೇಕು. ಅವಶ್ಯಕ ಭೂಗರ್ಭ ಶಾಸ್ತ್ರಜ್ಞರು, ಇಬ್ಬರೂ ಹೋಂಗಾರ್ಡ್‌, ಪೊಲೀಸ್‌ ಸಿಬ್ಬಂದಿಗಳ ನೆರವು ಹಾಗೂ ಅವಶ್ಯಕ ವಾಹನಗಳನ್ನು ಸಹ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಅನಧಿಕೃತವಾಗಿ ಮರಳು ಸಾಗಾಣಿಕೆಯಾಗದಂತೆ ನಿಗಾ ವಹಿಸುವಂತೆ ತಿಳಿಸಿದ ಅವರು, ಸರ್ಕಾರಿ ಯೋಜನೆಗಳಿಗೆ, ಲೈಸನ್ಸ್‌ ಹೊಂದಿದವರಿಗೆ ಮರಳು ಪೂರೈಸಬೇಕು ಎಂದು ಹೇಳಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಿರ್ದೇಶಕರು, ವಿವಿಧ ಇಲಾಖೆಗಳೊಂದಿಗೆ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅಕ್ರಮ ಮರಳು ಗಣಿಗಾರಿಕೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ವಿಕಾಸ್‌ ಸುರಳಕರ, ಎಸ್ಪಿ ಪ್ರಕಾಶ ನಿಕ್ಕಂ, ಇಂಡಿ ಉಪ ವಿಭಾಗಾಧಿಕಾರಿ ಆನಂದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಭಾರ ಹಿರಿಯ ಭೂವಿಜ್ಞಾನಿ ಮೋಹನ ಇದ್ದರು.

ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಾಣಿಕೆ ಮೇಲೆ ತೀವ್ರ ನಿಗಾ ಇಡಬೇಕು. ಪೊಲೀಸ್‌ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಅಕ್ರಮ ಮರಳು ಸಾಗಾಣಿಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ಕಲ್ಲು ಗಣಿಗಾರಿಕೆ ಸೇರಿದಂತೆ ಪರಿಸರ ಹಾನಿಗೊಳಿಸುವಂತಹ ಚಟುವಟಿಕೆಯನ್ನು ನಿಯಂತ್ರಿಸುವ ಜೊತೆಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಟಾಸ್ಕ್ಫೋರ್ಸ್‌ ಸಮಿತಿಗೆ ವರದಿ ಸಲ್ಲಿಸಲು ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ