ಲೋಕಸಭಾ ಚುನಾವಣೆ: ಕುತೂಹಲ ಕೆರಳಿಸಿರುವ 5 ಕ್ಷೇತ್ರಗಳು

Team Udayavani, Mar 25, 2019, 5:24 PM IST

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನಿರುವುದು ಎರಡೇ ದಿನ. ಈ ಹಂತದಲ್ಲಿ ರಾಜ್ಯದ ಹಲವು ಕ್ಷೇತ್ರಗಳು ಘಟಾನುಘಟಿಗಳ ಆಡುಂಬೊಲವಾಗಿದೆ. ಒಂದೊಂದು ಕ್ಷೇತ್ರ ಒಂದೊಂದು ಕುತೂಹಲವನ್ನು ಮಡಿಲಲ್ಲಿ ಇಟ್ಟುಕೊಂಡು ರಾಜಕೀಯ ಆಸಕ್ತರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಸದ್ಯಕ್ಕೆ ರಾಜ್ಯದ ಕುತೂಹಲ ಕೆರಳಿಸಿರುವ ಐದು ಕ್ಷೇತ್ರಗಳನ್ನು ಇಲ್ಲಿ ನೀಡಲಾಗಿದ್ದು, ಈ ಕ್ಷೇತ್ರಗಳಲ್ಲಿ ರಾಜಕೀಯ ಬೆಳವಣಿಗೆಗಳು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇವೆ. ಅಲ್ಲಿನ ದಿನ ದಿನದ ಬೆಳವಣಿಗೆಗಳನ್ನು ನಿಮ್ಮ ಮುಂದಿಡಲಿದೆ.

ಮಂಡ್ಯ
ಕಳೆದ ಹದಿನೈದು ದಿನಗಳಿಂದ ಬಿಸಿಯೇರುತ್ತಿರುವ ಕದನ ಕಣ ಸೋಮವಾರದಿಂದ ಮತ್ತಷ್ಟು ಹಾಟ್‌ ಆಗಲಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಒಂದು ಹಂತದ ಪ್ರಚಾರ ಮುಗಿಸಿಯಾಗಿದೆ. ಸೋಮವಾರ ಜೆಡಿಎಸ್‌ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ.

ರವಿವಾರ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಕ್ಷೇತ್ರ ದೈವ ಶ್ರೀಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿದರು. ಈಚೆಗೆ ಸುಮಲತಾ ನಡೆಸಿರುವ ರ್ಯಾಲಿಗೆ ಸಡ್ಡು ಹೊಡೆದು ಪ್ರತಿರ್ಯಾಲಿ ನಡೆಸಲು ಜೆಡಿಎಸ್‌ ಆಯೋಜಿಸಿದೆ. ಇದರ ಸಿದ್ಧತೆಯ ನೇತೃತ್ವವನ್ನು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಾರಿಗೆ ಸಚಿವ ತಮ್ಮಣ್ಣ ವಹಿಸಿದ್ದಾರೆ.

ಹಾಸನ
ಈ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್‌ ನಿಂದ ರೇವಣ್ಣ ಪುತ್ರ ಪ್ರಜ್ವಲ್‌ ಅವರು ನಾಮಪತ್ರ ಸಲ್ಲಿಸಿಯಾಗಿದೆ. ದೇವೇಗೌಡರು ತಮ್ಮ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟ ಕಾರಣಕ್ಕೆ ರಾಜ್ಯದ ಗಮನ ಸೆಳೆದಿರುವ ಈ ಕ್ಷೇತ್ರದಲ್ಲಿ ರಾಜಕೀಯ ಬಿಸಿ ಏರುತ್ತಲೇ ಇದೆ. ಮಾಜಿ ಸಚಿವ ಎ. ಮಂಜು ಈಗ ಬಿಜೆಪಿ ಸೇರಿಕೊಂಡು ಕದನ ಕಣದ ರಂಗೇರಿಸಿದ್ದಾರೆ. ಸೋಮವಾರ ಮಂಜು ಅವರು ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮೊದಲು ಕಾರ್ಯಕರ್ತರನ್ನು ಉದ್ದೇಶಿಸಿ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ಮುಖಂಡ ವಿ.ಶ್ರೀನಿವಾಸ್‌ ಪ್ರಸಾದ್‌ ಮತ್ತು ಬಿಜೆಪಿ ಮುಖಂಡರು ಭಾಷಣ ಮಾಡುವರು. ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಸೋಮವಾರ ಮತ್ತೂಂದು ಸೆಟ್‌ ನಾಮಪತ್ರ ಸಲ್ಲಿಸುವರು.


ತುಮಕೂರು

ತುಮಕೂರು ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡ ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರ ಇಡೀ ದೇಶದ ಗಮನ ಸೆಳೆಯುತ್ತಿದೆ. ಬಿಜೆಪಿ
ಅಭ್ಯರ್ಥಿ  ಜಿ.ಎಸ್‌. ಬಸವರಾಜ್‌ ಅವರು ಪೈಪೋಟಿ ನೀಡಲಿದ್ದಾರೆ. ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಆಕ್ರೋಶಗೊಂಡಿರುವ ಹಾಲಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಸೋಮವಾರ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ದೇವೇಗೌಡರನ್ನು ಗೆಲ್ಲಿಸುವ ಹೊಣೆ ಹೊತ್ತಿರುವ ಡಿಸಿಎಂ ಡಾ| ಜಿ. ಪರಮೇಶ್ವರ್‌, ದೇವೇ ಗೌಡರು ಈ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಇನ್ನೊಮ್ಮೆ ಮನವಿ ಮಾಡಿರುವುದು ಕುತೂಹಲಕಾರಿ ಬೆಳವಣಿಗೆ. ಮುದ್ದಹನುಮೇಗೌಡ ಬೆಂಬಲಿತ ಕಾಂಗ್ರೆಸ್‌ ಕಾರ್ಯಕರ್ತರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ
ರಾಜ್ಯದಲ್ಲಿಯೇ ಹೈವೋಲ್ಟೆಜ್‌ ಕ್ಷೇತ್ರವಾಗಿರುವ ಕಲಬುರಗಿ ಕ್ಷೇತ್ರದಲ್ಲಿ ಚುನಾವಣೆ ಕಾವು ಬಿಸಿಲಿನಂತೆ ಪ್ರಖರಗೊಳ್ಳುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ್‌ ರವಿವಾರ ಕ್ಷೇತ್ರದಲ್ಲಿರದೆ ಇದ್ದರೂ ಕಾರ್ಯಕರ್ತರ ಮೂಲಕ ಪ್ರಚಾರ ಚುರುಕುಗೊಳಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಟಿಕೆಟ್‌ ಪಟ್ಟಿ ಅಂತಿಮಗೊಳಿಸುವುದರ ಜತೆಗೆ ಮಹಾರಾಷ್ಟ್ರದ ಎಐಸಿಸಿ ಉಸ್ತುವಾರಿ ಇರುವುದರಿಂದ ಆ ರಾಜ್ಯದ ಟಿಕೆಟ್‌ ಪಟ್ಟಿ ಅಂತಿಮಗೊಳಿಸಲು ದಿಲ್ಲಿಯಲ್ಲಿ ಬಿಡಾರ ಹೂಡಿದ್ದಾರೆ. ಬಿಜೆಪಿ ಅಭ್ಯರ್ಥಿ, ಶಾಸಕ ಡಾ| ಉಮೇಶ ಜಾಧವ್‌ ಅವರಿಗೆ ಮಾ. 24 ಜನ್ಮ ದಿನ. ಹೀಗಾಗಿ ಬೆಂಗಳೂರಿನಲ್ಲಿಯೇ ಸರಳವಾಗಿ ಜನ್ಮದಿನ ಆಚರಿಸಿಕೊಂಡರು.

ಬೆಂಗಳೂರು ದಕ್ಷಿಣ
ಪ್ರತಿ ಸಲವೂ ತುರುಸಿನ ಸ್ಪರ್ಧೆಗೆ ಹೆಸರಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಈ ಸಲ ಮತ್ತಷ್ಟು ಕುತೂಹಲ ಕೆರಳಿಸಿದೆ. ಕೇಂದ್ರದಲ್ಲಿ ಸಚಿವರಾಗಿದ್ದ ಅನಂತ ಕುಮಾರ್‌ ನಿಧನದ ಅನಂತರ ಅವರ ಪತ್ನಿ ತೇಜಸ್ವಿನಿ ಇಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬಿಜೆಪಿಯ ಮೊದಲ ಪಟ್ಟಿಯಲ್ಲಿ ಇವರ ಹೆಸರಿಲ್ಲದ ಕಾರಣ ಕುತೂಹಲ ಮತ್ತಷ್ಟು ಕೆರಳಿತು. ಈ ನಡುವೆ, ಸ್ವತಃ ಪ್ರಧಾನಿ ಮೋದಿ ಅವರೇ ಇಲ್ಲಿ ಕಣಕ್ಕಿಳಿಯುತ್ತಾರೆ ಎಂಬ ವರದಿಗಳು ಈ ಕ್ಷೇತ್ರವನ್ನು ಮತ್ತಷ್ಟು ಹಾಟ್‌ ಮಾಡಿದೆ. ಮೋದಿ ಬದಲು ಮತ್ತೋರ್ವ ಸರ್‌ ಪ್ರೈಸ್‌ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ರವಿವಾರ ಹರಿದಾಡುತಿತ್ತು. ಈ ಬೆನ್ನಲ್ಲೇ, ಕಾಂಗ್ರೆಸ್‌ ರವಿವಾರ ಬಿ.ಕೆ. ಹರಿಪ್ರಸಾದ್‌ ಅವರನ್ನು ಕಣಕ್ಕಿಳಿಸಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸ್ಪರ್ಧೆಯಲ್ಲಿರುವ ಇಬ್ಬರು ನಾಯಕರು ಸಮಬಲರೇ ಆಗಿರುವ  ಅತ್ಯಂತ ಹಾಟ್‌ ಲೋಕಸಭಾ ಕ್ಷೇತ್ರಗಳು ಇವು ಅಮೇಠಿ (ಉತ್ತರ ಪ್ರದೇಶ) ರಾಹುಲ್‌ ಗಾಂಧಿ (ಕಾಂಗ್ರೆಸ್‌) Vs ಸ್ಮತಿ...

  • ರಾಹುಲ್‌ ಗಾಂಧಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ಪಕ್ಷವು ಹಿರಿಯರನ್ನು ಗೌರವಿಸುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ...

  • ಹರ್ಯಾಣದ ಹಿಸಾರ್‌ ಲೋಕಸಭಾ ಕ್ಷೇತ್ರವು ಮೂರು ರಾಜಕೀಯ ಕುಟುಂಬಗಳ ನಡುವಿನ ಅಖಾಡವಾಗಿ ಬದಲಾಗಿದ್ದು, ಈ ತಿಕ್ರೋನ ಸ್ಪರ್ಧೆಯು ಹರ್ಯಾಣದ ಅತಿದೊಡ್ಡ ಕುಟುಂಬ ರಾಜಕಾರಣದ...

  • ಹಝಾರಿಭಾಗ್‌ ಜಾರ್ಖಂಡ್‌ನ‌ ಅತ್ಯಂತ ಪ್ರಮುಖ ಲೋಕಸಭಾ ಕ್ಷೇತ್ರ. ಸದ್ಯ ಬಿಜೆಪಿಯ ಮಾಜಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮೂರು ಬಾರಿ ಪ್ರತಿನಿಧಿಸಿದ್ದ...

  • ಲೋಕಜನ ಶಕ್ತಿ ಪಕ್ಷದ ನಾಯಕ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಪ್ರತಿನಿಧಿಸುವ ಕ್ಷೇತ್ರವೇ ಹಾಜಿಪುರ. ಈ ಕ್ಷೇತ್ರದಿಂದ ಪ್ರಸಕ್ತ ಸಾಲಿನಲ್ಲಿ...

ಹೊಸ ಸೇರ್ಪಡೆ