ಬ್ಯಾಂಬೂ ಕ್ಯಾಪಿಟಲ್: ಏಕಕಾಲಕ್ಕೆ 3 ಲಕ್ಷ ಸಸಿಗಳ ನೆಡುವಿಕೆ

Team Udayavani, Jul 11, 2019, 5:26 AM IST

ಕಾಸರಗೋಡು: ಬಹು ನಿರೀಕ್ಷಿತ ಬ್ಯಾಂಬೂ ಕ್ಯಾಪಿಟಲ್ ಜನಪರ ಯೋಜನೆಯ ಉದ್ಘಾಟನೆ ಜು. 13ರಂದು ಪುತ್ತಿಗೆಯಲ್ಲಿ ನಡೆಯಲಿದೆ. ತೀವ್ರತರ ಕುಡಿಯುವ ನೀರಿನ ಬರ ಎದುರಿಸುತ್ತಿರುವ ಜಿಲ್ಲೆಯ ಸಮಗ್ರ ಚಿತ್ರಣ ಬದಲಿಸುವ ನಿಟ್ಟಿನಲ್ಲಿ, ಕಾಸರಗೋಡು ಜಿಲ್ಲೆಯನ್ನು ದಕ್ಷಿಣ ಭಾರತ ಮಟ್ಟದ ಬಿದಿರು ರಾಜಧಾನಿಯಾಗಿಸುವ ಜಿಲ್ಲಾಡಳಿತದ ಬಹುದೊಡ್ಡ ಕನಸು ಈ ಮೂಲಕ ನನಸಾಗುತ್ತಿದೆ.

ಮೊದಲ ಹಂತವಾಗಿ ಕಾಸರಗೋಡು ಮತ್ತು ಮಂಜೇಶ್ವರ ಬ್ಲಾಕ್‌ಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಪುತ್ತಿಗೆಯಲ್ಲಿ ನಡೆಯುವ ಸಮಾರಂಭವನ್ನು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ಉದ್ಘಾಟಿಸುವರು.

ಈ ಸಂಬಂಧ ಕಾಸರಗೋಡು, ಮಂಜೇಶ್ವರ ಬ್ಲಾಕ್‌ಗಳ ಅಧ್ಯಕ್ಷರ ಸಭೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದು, ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅಧ್ಯಕ್ಷತೆ ವಹಿಸಿದ್ದರು.

ಜು. 13ರಂದು ಏಕಕಾಲಕ್ಕೆ ಜಿಲ್ಲೆಯ ವಿವಿಧೆಡೆ ಯೋಜನೆಗೆ ಚಾಲನೆ ಲಭಿಸಲಿದ್ದು, ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಆಯಾ ಪಂಚಾಯತ್‌ಗಳ ಅಧ್ಯಕ್ಷರು, ವಾರ್ಡ್‌ ಮಟ್ಟದಲ್ಲಿ ಆಯಾ ವಾರ್ಡ್‌ಗಳ ಸದಸ್ಯರು, ಬ್ಲಾಕ್‌ ಪಂಚಾಯತ್‌ ಮಟ್ಟದಲ್ಲಿ ಆಯಾ ಸಂಸ್ಥೆಗಳ ಅಧ್ಯಕ್ಷರು ಯೋಜನೆಗಳಿಗೆ ಚಾಲನೆ ನೀಡುವರು. ಅಂದು ಬೆಳಗ್ಗೆ 10ರಿಂದ 11 ಗಂಟೆಯೊಳಗೆ 3 ಲಕ್ಷ ಬಿದಿರು ಸಸಿಗಳನ್ನು ನೆಡುವ ಮೂಲಕ ಈ ಯೋಜನೆ ಶುಭಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.

ತೀವ್ರ ಜಲಕ್ಷಾಮವನ್ನುಅನುಭವಿಸುತ್ತಿರುವ ಜಿಲ್ಲೆಯಲ್ಲಿ ಬಿದಿರು ಬೆಳೆ ಅಧಿಕಗೊಳ್ಳುವ ಮೂಲಕ ನೀರು ಭೂಮಿಗಿಳಿಯುವ ಪ್ರಕ್ರಿಯೆಗೆ ಪೂರಕವಾಗಲಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉದ್ದಿಮೆ ಘಟಕಗಳು ಕಡಿಮೆಯಿರುವ ಜಿಲ್ಲೆಯಲ್ಲಿ ಬಿದಿರಿನ ಉದ್ದಿಮೆ ಹೊಸ ಚೈತನ್ಯ ಒದಗಿಸಲಿದೆ. ಕಾಸರಗೋಡು ಜಿಲ್ಲೆಯ ಕೆಂಗಲ್ಲ ನೆಲ ಬಿದಿರು ಬೆಳೆಗೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.

ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು ಗುಳಿ ತೋಡುವ, ಸಸಿ ನೆಡುವ ಕಾಯಕದಲ್ಲಿ ತೊಡಗಲಿದ್ದಾರೆ. ಯೋಜನೆಗಾಗಿ ಈಗಾಗಲೇ ನೆಟ್ಟು ಬೆಳೆಸಿರುವ 3 ತಿಂಗಳ ಸಸಿಗಳು ಸಿದ್ಧವಿವೆ. ಜು. 12ರಂದು ಜಿಲ್ಲಾ ಮಣ್ಣು ಸಂರಕ್ಷಣೆ ಕಚೇರಿಯ ಮೇಲ್ನೋಟದಲ್ಲಿ ಬಿದಿರು ಯೋಜನೆ ಜಾರಿಗೊಳಿಸುವ ಪ್ರದೇಶಗಳಿಂದ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಲಾಗುವುದು. ಭೂಗರ್ಭ ಜಲ ಇಲಾಖೆ ವತಿಯಿಂದ ಇಲ್ಲಿನ ಜಲಮಟ್ಟದ ಗಣನೆಯನ್ನೂ ಸಂಗ್ರಹಿಸಲಾಗುವುದು.

ಸಭೆಯಲ್ಲಿ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷರಾದ ಸಿ.ಎಚ್. ಮಹಮ್ಮದ್‌ ಕುಂಞಿ ಚಾಯಿಂಡಡಿ, ಎ.ಕೆ.ಎಂ. ಅಶ್ರಫ್‌, ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಉದ್ಯೋಗ ಖಾತರಿ ಯೋಜನೆ ಕಾರ್ಯಕ್ರಮದ ಜತೆ ಸಂಚಾಲಕ ಕೆ. ಪ್ರದೀಪನ್‌, ಎ.ಡಿ.ಸಿ. (ಜನರಲ್) ಬೆವಿನ್‌ ಜಾನ್‌, ಹರಿತ ಕೇರಳಂ ಮಿಷನ್‌ನ ಪ್ರತಿನಿಧಿ ಎ.ಪಿ. ಅಭಿರಾಜ್‌, ಜ್ಯೂನಿಯರ್‌ ಹೈಡ್ರೋಜಲಿಸ್ಟ್‌ ಡಾ| ಕೆ.ಎ. ಪ್ರವೀಣ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ