ಎಲ್ಲ ಜಿಲ್ಲೆಗಳಲ್ಲೂ ಭೂಕುಸಿತ, ಎಲ್ಲೆಲ್ಲೂ ನೀರು; ಜನರಲ್ಲಿ ಆತಂಕ

Team Udayavani, Aug 11, 2019, 6:17 AM IST

ವಿದ್ಯಾನಗರ:ಒಂದು ವಾರದಿಂದ ಬಿಡದೆ ಸುರಿವ ಮಳೆಗೆ ಕೇರಳ ರಾಜ್ಯ ತತ್ತರಿಸಿ ಹೋಗಿದ್ದು ಮತ್ತೂಮ್ಮೆ ಮಹಾಪ್ರಳಯದ ಮುಷ್ಠಿಯಲ್ಲಿ ನಲುಗುತ್ತಿದೆ. ಕಳೆದ ವರ್ಷ ಆಗೋಸ್ತು 8ರಿಂದ 22ರ ತನಕ ಕೇರಳ ಕಂಡ ಕರಾಳ ದಿನಗಳು ಈ ವರ್ಷ ಅದೇ ದಿನಗಳಲ್ಲಿ ಆವರ್ತಿಸಿರುವುದು ನಾಡನ್ನು ನಡುಗಿಸುತ್ತಿದೆ. ಬಿಡದೆ ಸುರಿವ ಮಹಾಮಳೆ, ರಭಸದಿಂದ ಭೀಸುವ ಗಾಳಿ ಪರಿಹಾರ ಕಾಯ್ಗಳಿಗೂ ತಡೆಯೊಡ್ಡುತ್ತಿದ್ದು ಭೀಕರ ವಾತಾವರಣವನ್ನು ಸೃಷ್ಟಿಸಿದೆ. ಎಲ್ಲಾ 14 ಜಿಲ್ಲೆಗಳಲ್ಲೂ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ವಯನಾಡು, ಪಾಲಕ್ಕಾಡ್‌, ಕಣ್ಣೂರು, ಕಾಸರಗೋಡು ಸೇರಿದಂತೆ ಹೆಚ್ಚಿನ ಜಿಲ್ಲೆಗಳಲ್ಲೂ ಭೂಕುಸಿತ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನಾಡಿನ ಜನತೆಯನ್ನು ಕಣ್ಣೀರಲ್ಲಿ ತೋಯಿಸಿದ ಮಳೆ ಭೀಕರ ದುರಂತಕ್ಕೆ ಸಾಕ್ಷಿಯಾಗುತ್ತಿದೆ.

ಸಂತ್ರಸ್ತ ಶಿಬಿರಗಳಲ್ಲಿ ಆಶ್ರಯ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆತಂಕದ ಸ್ಥಿತಿ ಸೃಷ್ಟಿಯಾಗಿದೆ. ಬಿಡದೆ ಸುರಿವ ಮಳೆಯಿಂದಾಗಿ ಮಳೆ ನೀರಲ್ಲಿ ಸಿಲುಕಿದ ಜನರನ್ನು ಸಂತ್ರಸ್ತರ ಶಿಬಿರಗಳಿಗೆ ತಲುಪಿಸುವಿದೇ ಸವಾಲಾಗಿದ್ದು ಅರಕ್ಷಕ ಪಡೆ, ಮಿಲಿಟರಿ, ಅಗ್ನಿ ಶಾಮಕ ದಳ ಹಾಗೂ ಸಾಮಾಜಿಕ ಕಾರ್ಯಕರ್ತರು ತಮ್ಮ ಜೀವವನ್ನೂ ಲೆಕ್ಕಿಸದೆ ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ.ಸಾವಿರಾರು ಮನೆಗಳು ನೀರಿನಲ್ಲಿ ಮುಳುಗಿ ಹೋಗಿದ್ದು ಕೃಷಿ ಭೂಮಿ ಸಂಪೂರ್ಣ ನಾಶವಾಗಿದೆ.

ಕೋಟಿಗಳ ನಾಶ ನಷ್ಟ ಸಂಭವಿಸಿದ್ದು ಕಳೆದ ವರ್ಷದಂತೆ ಈ ವರ್ಷವೂ ಪ್ರಳಯದ ಆಘಾತಕ್ಕೆ ರಾಜ್ಯ ಬೆರಗಾಗಿ ಹೇಗೆ ಪ್ರತಿಕ್ರಿಯಸಬೇಕೆಂದು ತಿಳಿಯದೆ ಕಣ್ಣೀರಿಡುವಂತಾಗಿದೆ.

ಮಿಂಚಿನ ಪ್ರಳಯ (ಫ್ಲಾಶ್‌ ಫ್ಲಡ್‌)

ಕೆಲವು ಜಿಲ್ಲೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಸುರಿಯುವ ಮಳೆ ಉಂಟುಮಾಡುವ ಅನಿರೀಕ್ಷಿತ ಜಲಪ್ರಳಯ ಸದೃಶವಾದ ಸ್ಥಿತಿಯನ್ನು ಮಿಂಚಿನ ಪ್ರಳಯ ಎಂಬುದಾಗಿ ದುರಂತ ನಿವಾರಣಾ ಅಥೋರಿಟಿ ಹೆಸರಿಸಿದೆ. ಕಣ್ಣೂರು ಮತ್ತು ವಯನಾಡಿನಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಮಳೆಯಾಗಿರುವುದಾಗಿ ಸುದ್ಧಿಯಾಗಿದೆ.

3 ದಿನದಲ್ಲಿ ಒಂದು ತಿಂಗಳ ಮಳೆ

ಆಗೋಸ್ತು 7ರಿಂದ 9ರ ವರೆಗಿನ ಮೂರು ದಿನಗಳಲ್ಲಿ ಒಂದು ತಿಂಗಳು ಸುರಿವ ಮಳೆ ಸುರಿದಿರುವುದು ಮತ್ತು ಮುಂದಿನ ದಿನಗಳಲ್ಲೂ ಅದರ ಪ್ರಮಾಣ ಕಡಿಮೆಯಾಗದೇ ಇರುವುದು ಈ ದುರಂತ ಸಾಧ್ಯತೆಯನ್ನು ಹೆಚ್ಚಿಸಿದೆ. ರಾಜ್ಯದ ಪ್ರಧಾನ ನದಿಗಳಾದ ಪೆರಿಯಾರ್‌, ಭಾತರ ಹೊಳೆ ಸೇರಿದಂತೆ ಎಲ್ಲಾ ನದಿಗಳೂ ತುಂಬಿ ಅಪಾಯದಂಚನ್ನು ಮೀರಿ ಹೊರಹರಿಯುತ್ತಿವೆ.

ಹೆಚ್ಚುತ್ತಿರುವ ಜೀವಹಾನಿ

ವಿವಿಧ ಜಿಲ್ಲೆಗಳಲ್ಲಾಗಿ ಮಹಾಮಳೆಗೆ ಬಲಿಯಾದ ಜನರ ಸಂಖ್ಯೆ 50 ದಾಟಿದ್ದು ನೆರೆಪೀಡಿತ ಪ್ರದೇಶಗಳ 15000ಕ್ಕಿಂತಲೂ ಅಧಿಕ ಮಂದಿಯನ್ನು ಸುರಕ್ಷಿತ ಸಂತ್ರಸ್ತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಜಿಲ್ಲೆಯೂ ತತ್ತರ

ಕಳೆದ 5 ದಿನಗಳಿಂದ ಬಿಡದೆ ಸುರಿವ ಮಳೆಗೆ ಕಾಸರಗೋಡು ಜಿಲ್ಲೆಯೂ ತತ್ತರಿಸಿ ಹೋಗಿದೆ. ರಸ್ತೆಯ ಮೇಲೆ ಭೂಕುಸಿತ, ವಿದ್ಯುತ್‌ ವ್ಯತ್ಯಯ, ಮನೆ ಕುಸಿತ, ಧರೆಗುರುಳುವ ಮರಗಳಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವುದು ಕಂಡುಬರುತ್ತದೆ. ಹೆಚ್ಚಿನ ಭಾಗಗಳಲ್ಲೂ ಭಾರೀ ಮಳೆ ಸುರಿಯುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿವೆ.ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿ ವಿಪತ್ತು ನಿರ್ವಹಣಾ ಚಟುವಟಿಕೆಗಳು ಭರದಿಂದ ಸಾಗುತ್ತಿದೆ. ಆದರೆ ಕತ್ತಲು ಕವಿದ ವಾತಾವರಣ, ಮಳೆಯಿಂದಾಗಿ ಪರಿಹಾರ ಕಾರ್ಯಕ್ಕೆ ತಡೆ ಉಂಟಾಗುತ್ತಿದೆ ಎನ್ನಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಾಗಿ 15 ಸಂತ್ರಸ್ತ ಶಿಬಿರಗಳನ್ನು ತೆರೆಯಲಾಗಿದ್ದು ಸುಮಾರು 2000ದಷ್ಟು ಜನರನ್ನು ಸ್ಥಳಾಂತರಿಸಲಾಗಿದೆ.

ಮಳೆ: ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ

ಗಾಳಿಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ತಡೆ ಉಂಟಾಗಿರುವುದು ಜಿಲ್ಲೆಯ ಜನತೆಗೂ ಸಮಸ್ಯೆಯುಂಟುಮಾಡುತ್ತಿದೆ. ಎರಡು ದಿನಗಳಿಂದ ತರಕಾರಿ ಸೇರಿದಂತೆ ಅಗತ್ಯದ ವಸ್ತುಗಳು ಜಿಲ್ಲೆಗೆ ಬರುವಲ್ಲಿ ಉಂಟಾದ ತಡೆ ಅವುಗಳ ಬೆಲೆ ಗಗನಕ್ಕೇರುವಂತೆ ಮಾಡಿದೆ.

ಕಂಟ್ರೋಲ್ ರೂಂ

ಕಾಂಞಂಗಾಡ್‌ ತಾಲೂಕು ಕಚೇರಿಯ ಆಶ್ರಯದಲ್ಲಿ ಜಿಲ್ಲಾಧಿಕಾರಿ ಡಾ.ಸಜಿತ್‌ ಬಾಬು ಅವರ ನೇತೃತ್ವದಲ್ಲಿ ನಿಯಂತ್ರಣ ಕೊಠಡಿ ಪ್ರಾರಂಭಿಸಿದ್ದು ಪೊಲೀಸ್‌, ಅಗ್ನಶಾಮಕದಳ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹೊಸದುರ್ಗ, ವೆಲ್ಲರಿಕುಂಡು ತಾಲೂಕುಗಳ ಸಂಪೂರ್ಣ ಪರಿಹಾರ ಕಾರ್ಯಗಳಿಗಾಗಿ ಸಮನ್ವಯಗೊಳಿಸಲಾಗಿದೆ. ತಕ್ಷಣದ ಸಹಾಯಕ್ಕಾಗಿ 04672204042, 8075325955, 7510935739 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ