ಶೇ. 50 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸೀಟುಗಳಿಲ್ಲ !

ಪ್ಲಸ್‌ ಟು ತೇರ್ಗಡೆಯಾದರೂ ಸಂಭ್ರಮವಿಲ್ಲ

Team Udayavani, May 15, 2019, 6:20 AM IST

ಕಾಸರಗೋಡು: ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ ಕಾಸರಗೋಡು. ಶೈಕ್ಷಣಿಕ ರಂಗದಲ್ಲಿ ಪರಿಸ್ಥಿತಿ ಇನ್ನೂ ಶೋಚನೀಯ.

ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣಕ್ಕೆ ಕರ್ನಾಟಕ ಅಥವಾ ಇತರ ಜಿಲ್ಲೆಗಳನ್ನು ಅವಲಂಬಿಸಬೇಕಾದ ದುಸ್ಥಿತಿ. ಇದೇ ಪರಿಸ್ಥಿತಿ ಈ ವರ್ಷವೂ ಕಾಡಿದೆ. ಪ್ಲಸ್‌ ಟು ತೇರ್ಗಡೆಯಾದ ವಿದ್ಯಾರ್ಥಿಗಳ ಪೈಕಿ ಕಾಸರಗೋಡು ಜಿಲ್ಲೆಯಲ್ಲಿ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಪದವಿ ಸಹಿತ ಇನ್ನಿತರ ಶಿಕ್ಷಣ ಪಡೆಯಬೇಕಾದರೆ ಕರ್ನಾಟಕ ಅಥವಾ ಕೇರಳದ ಇತರ ಜಿಲ್ಲೆಯನ್ನು ಅವಲಂಬಿಸಬೇಕಾದ ದುಃಸ್ಥಿತಿ ಎದುರಾಗಿದೆ. ಮುಂದಿನ ಶಿಕ್ಷಣಕ್ಕೆ ಸೀಟು ಲಭಿಸಿಲ್ಲ ಅಂದರೆ ಮನೆಯಲ್ಲೇ ಕುಳಿತುಕೊಳ್ಳಬೇಕಾಗಬಹುದು ಎಂಬ ಆತಂಕ ಕೂಡಾ ವಿದ್ಯಾರ್ಥಿಗಳಲ್ಲಿದೆ.

ಜಿಲ್ಲೆಯಲ್ಲಿ ತೇರ್ಗಡೆಯಾದ ಒಟ್ಟು ವಿದ್ಯಾರ್ಥಿ ಗಳ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳಿಗೆ ಮಾತ್ರವೇ ಸೀಟು ನೀಡಲು ಸಾಧ್ಯವಾಗಬಹುದು. ಈ ಕಾರಣದಿಂದ ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಇತರ ಜಿಲ್ಲೆಗಳನ್ನು ಅಥವಾ ಕರ್ನಾಟಕವನ್ನು ಅವಲಂಬಿಸಬೇಕಾದ ಪರಿಸ್ಥಿತಿಗೆ ತುತ್ತಾಗಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಐದು ಸರಕಾರಿ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜುಗಳಿವೆ. ಈ ಐದು ಕಾಲೇಜುಗಳಲ್ಲಿ ಒಟ್ಟು 948 ಸೀಟುಗಳಿವೆ. ಮೂರು ಅನುದಾನಿತ ಕಾಲೇಜುಗಳಿದ್ದು, ಇಲ್ಲಿ 657 ಸೀಟುಗಳಿವೆ. ಜಿಲೆಯಲ್ಲಿ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಒಟ್ಟು 1,705 ಸೀಟುಗಳು ಮಾತ್ರವೇ ಇವೆ. ಒಟ್ಟು 6,928 ಸೀಟುಗಳ ಪೈಕಿ 5,223 ಸೀಟುಗಳು ಅನನುದಾನಿತ ಕಾಲೇಜುಗಳಲ್ಲಿವೆ.

ಅನುದಾನರಹಿತ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜುಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 3,193 ಸೀಟುಗಳಿವೆ. ಎಂಜಿನಿಯರಿಂಗ್‌, ನರ್ಸಿಂಗ್‌, ಪಾರಾಮೆಡಿಕಲ್‌ ಸಹಿತ ಪ್ರೊಫೆಶನಲ್‌ ಕೋರ್ಸ್‌ ಗಳನ್ನು ನೀಡಲು ಜಿಲ್ಲೆಯಲ್ಲಿ ಅನನುದಾನಿತ ಕಾಲೇಜುಗಳು ಮಾತ್ರವೇ ಇದೆ. ಇಂತಹ ಅನನುದಾನಿತ ಪ್ರೊಫೆಶನಲ್‌ ಕಾಲೇಜುಗಳಲ್ಲಿ ಒಟ್ಟು 2,030 ಸೀಟುಗಳಿವೆ. 2012ರಲ್ಲಿ ಪ್ರಭಾಕರನ್‌ ಆಯೋಗ ವರದಿಯಲ್ಲಿ ಪ್ರತಿ ವರ್ಷ ಜಿಲ್ಲೆಯ 2000ದಷ್ಟು ವಿದ್ಯಾರ್ಥಿಗಳು ಪ್ರೊಫೆಶನಲ್‌ ಕೋರ್ಸ್‌ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೆಂದು ವರದಿಯಲ್ಲಿ ಸೂಚಿಸಿದೆ.

ವರದಿ ಬಂದ ಬಳಿಕವೂ ಜಿಲ್ಲೆಯಲ್ಲಿ ಪ್ರೊಫೆಶನಲ್‌ ಕಾಲೇಜುಗಳ ಸೀಟುಗಳಲ್ಲಿ ಹೆಚ್ಚಳ ಉಂಟಾಗಿಲ್ಲ. ಇಂದೂ ಕೇವಲ 2,013 ಸೀಟುಗಳು ಮಾತ್ರವೇ ಇವೆ.
ಜಿಲ್ಲೆಯ ಒಟ್ಟು ಅನನುದಾನಿತ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜುಗಳಲ್ಲಾಗಿ ಪದವಿಗೆ 3,193 ಸೀಟುಗಳು ಮಾತ್ರವೆ ಇದೆ. ಈ ಪೈಕಿ ಒಂದು ಹೆಣ್ಮಕ್ಕಳ ಕಾಲೇಜು ಮತ್ತು ಸ್ಪೆಷಲ್‌ ಕಾಲೇಜು ಇದೆ.

2015ರಿಂದ ಪದವಿ ಪ್ರವೇಶಕ್ಕೆ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ಅವಕಾಶ ಲಭಿಸುತ್ತಿದೆ. 2014ರ ಅಂಕಿಅಂಶದಂತೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಅರ್ಜಿ ಸಲ್ಲಿಸುವ ಒಟ್ಟು ವಿದ್ಯಾರ್ಥಿಗಳ ಪೈಕಿ ಕೇವಲ ಶೇ.25 ಮಂದಿಗೆ ಮಾತ್ರವೇ ಪ್ರವೇಶ ಲಭಿಸುತ್ತಿದೆ. ಇದೇ ಪರಿಸ್ಥಿತಿ ಅನುದಾನರಹಿತ ಕಾಲೇಜುಗಳಲ್ಲಿದೆ.

ಸರಕಾರಿ ಮತ್ತು ಅನನುದಾನಿತ ಕಾಲೇಜುಗಳಲ್ಲಿ ಪ್ರವೇಶ ಲಭಿಸದ ವಿದ್ಯಾರ್ಥಿಗಳು ಭಾರೀ ಮೊತ್ತ ತೆತ್ತು ಅನನುದಾನಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾದ ಪರಿಸ್ಥಿತಿಯಿದೆ. ಇದರಿಂದಾಗಿ ಬಡ ವಿದ್ಯಾರ್ಥಿಗಳು ಬಹಳಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೆಲವರು ಪ್ಯಾರಲಲ್‌ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ಯಾರಲಲ್‌ ಕಾಲೇಜುಗಳ ಮತ್ತು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಸೀಟುಗಳಲ್ಲಿ ಹೆಚ್ಚಳ ಮಾಡಿದರೂ ಪ್ಲಸ್‌ ಟು ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಸೀಟು ಲಭಿಸದು.

11,923 ವಿದ್ಯಾರ್ಥಿಗಳಿಗೆ ಕೇವಲ 6,928 ಸೀಟುಗಳು
ಜಿಲ್ಲೆಯಲ್ಲಿ ಪ್ಲಸ್‌ ಟುನಲ್ಲಿ ಒಟ್ಟು 11,923 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯ ಸರಕಾರಿ, ಅನುದಾನಿತ, ಅನನುದಾನಿತ ಕಾಲೇಜುಗಳಲ್ಲಾಗಿ ಒಟ್ಟು 6,928 ಸೀಟುಗಳಿವೆ. ಆರ್ಟ್ಸ್ ಆ್ಯಂಡ್‌ ಸಯನ್ಸ್‌, ಪ್ರೊಫೆಶ‌ನಲ್‌ ಕಾಲೇಜುಗಳ ಸಹಿತ ಇಷ್ಟು ಸೀಟುಗಳು ಪದವಿಗಿವೆ.

ತೇರ್ಗಡೆಯಾದ 11,923 ವಿದ್ಯಾರ್ಥಿಗಳು ರಾಜ್ಯ ಸರಕಾರದ ಸಿಲಬಸ್‌ನಲ್ಲಿ ತೇರ್ಗಡೆಯಾದವರು. ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್‌ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಬೇರೆ ಇದ್ದಾರೆ. ಜಿಲ್ಲೆಯಲ್ಲಿ ಪದವಿ ಕಾಲೇಜುಗಳು ಕಡಿಮೆಯಿರುವುದರಿಂದ ಅರ್ಹ ಎಲ್ಲ ವಿದ್ಯಾರ್ಥಿಗಳು ಪದವಿ ತರಗತಿಗೆ ಸೀಟು ಪಡೆಯುವಲ್ಲಿ ವಂಚಿತರಾಗಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ