ಕಾಶ್ಮೀರದ ಕೊರೆಯುವ ಚಳಿಯಲ್ಲಿ ಜ| ತಿಮ್ಮಯ್ಯ ಪಡೆ ಪರಾಕ್ರಮ


Team Udayavani, Feb 6, 2021, 6:15 AM IST

ಕಾಶ್ಮೀರದ ಕೊರೆಯುವ ಚಳಿಯಲ್ಲಿ ಜ| ತಿಮ್ಮಯ್ಯ ಪಡೆ ಪರಾಕ್ರಮ

20-10-1947ರಂದು ಬೆಟ್ಟಸೀಮೆಯ ಮುಸಲ್ಮಾನರು ಗಡಿದಾಟಿ ಕಾಶ್ಮೀರದೊಳಗೆ ಬಂದೇಬಿಟ್ಟರು. ಮುಜಾಫ‌ರಾಬಾದ್‌ನಲ್ಲಿ ತಂಡೋ ಪತಂಡಗಳಾಗಿ ಜಮಾಯಿಸಿಬಿಟ್ಟರು. ಮುಜಾಫ‌ರಾಬಾದಿನ ಪೂರ್ವಕ್ಕೆ ತಿತ್ವಾಲ್‌ ಪಾಸ್‌ (ಕಣಿವೆ) ಇದೆ. ಈ ಕಣಿವೆಯನ್ನು ಪ್ರಯಾಣಕ್ಕೆ ಹೆಚ್ಚಾಗಿ ಬಳಸುತ್ತಿರಲಿಲ್ಲ. ಮುಜಾಫ‌ರಾಬಾದಿನ ಪೂರ್ವ ಮತ್ತು ದಕ್ಷಿಣಕ್ಕೆ ತುಂಬಾ ಬಳಕೆಯಲ್ಲಿದ್ದ ಉರಿ ಕಣಿವೆ ಇದೆ. ಇದೇ

ಶ್ರೀನಗರದ ಪೂರ್ವಕ್ಕೆ ಹೋಗುವ ಮುಖ್ಯರಸ್ತೆ (ಹೈವೇ), ಬೆಟ್ಟಗುಡ್ಡಗಾಡು ಜನರು, ತಿತ್ವಾಲ್‌ ಕಣಿವೆ ಮಾರ್ಗವಾಗಿ ನುಗ್ಗಿ, ಉರಿಕಣಿವೆ ಸಮೀಪದ ಹೆದ್ದಾರಿಗೆ ಬಂದುಬಿಟ್ಟರು. ಅಲ್ಲಿ ಅಡ್ಡಗಟ್ಟಿದ ಮಹಾರಾಜನ ಸೈನ್ಯವನ್ನು ನಾಶಮಾಡಿ, ಹೆದ್ದಾರಿಯ ಪೂರ್ವಕ್ಕೆ ಬಂದು ಶ್ರೀನಗರದಿಂದ 20 ಮೈಲಿ ದೂರದ “ಬಾರಾಮುಲ್ಲಾ’ಕ್ಕೆ ತಲುಪಿ, ನರಮೇಧ, ಸುಲಿಗೆ, ಅತ್ಯಾಚಾರ ಮತ್ತು ಊರೂರನ್ನೇ ಬೆಂಕಿ ಹಚ್ಚಿ ದಹಿಸಲು ಪ್ರಾರಂಭಿಸಿದರು.ಅದೇ ಸಮಯಕ್ಕಾಗಿ ಕಾದಿದ್ದ ಬೇರೆ ಗುಡ್ಡಗಾಡಿನ ಜನ ಕಾಶ್ಮೀರ ಕಣಿವೆಯ ಉತ್ತರದಲ್ಲಿನ “ಗುರಾಯಿಸ್‌’ ನಿಂದ ರಜಾªನಾಂಗನ್‌ ಕಣಿವೆ ತನಕ ದಾಳಿ ಮಾಡಿಬಿಟ್ಟರು. ಲಡಾಖೀನ ಉತ್ತರದ ಕಾರ್ಗಿಲ್‌ಗ‌ೂ ನುಗ್ಗಿಬಿಟ್ಟರು. ಕಾರ್ಗಿಲ್‌ನಿಂದ ಪಶ್ಚಿಮದ “ಜೋಜಿಲಾ ಪಾಸ್‌’ ಗೂ ಬಂದು ಶ್ರೀನಗರದ ಮೇಲ್ಭಾಗದ ಕಾಶ್ಮೀರ ಕಣಿವೆಯನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದರು.

ಈ ದಾಳಿಕೋರರು ಮೂರು ಕಡೆಗಳಿಂದ ಬಂದು, ಸಂಪೂರ್ಣ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಸೂಚನೆ ದೊರೆತಾಗ, ಮಹಾರಾಜನಿಗೆ ದಿಕ್ಕುತೋಚದಾಯಿತು. ಅನ್ಯಮಾರ್ಗವಿಲ್ಲದೆ ಆತ ಭಾರತದೊಡನೆ ವಿಲೀನಗೊಂಡ. ಆಗ ಭಾರತೀಯ ಸೇನೆಯು ಇದನ್ನು ಭಾರತದ ಮೇಲಿನ ಆಕ್ರಮಣವೆಂದು ಪರಿಗಣಿಸಿ, ರಾತ್ರಿ ಬೆಳಗಾಗುವುದರೊಳಗೆ ವಿಮಾನದಲ್ಲಿ ಶ್ರೀನಗರದಲ್ಲಿ ಇಳಿಯಿತು.

ಭಾರತದ ಸೇನೆ ಬಂದಿಳಿದಾಗ, ಶತ್ರುಪಡೆ ಮೂರು ಭಾಗವಾಗಿ ವಿಭಜನೆಗೊಂಡು, ಎರಡು ಕಡೆಗಳಿಂದ ಶ್ರೀನಗರವನ್ನು ಸುತ್ತುವರಿ ಯಿತು , ಮತ್ತೂಂದು ಭಾಗ ವಿಮಾನ ನಿಲ್ದಾಣವನ್ನು ವಶಪಡಿಸಿ ಕೊಳ್ಳಲು ಸಜ್ಜಾಯಿತು. ಭಾರತದಿಂದ ಕಾಶ್ಮೀರಕ್ಕೆ ಹೋಗುವ ಸಂಪರ್ಕ ರಸ್ತೆ ಮನುಷ್ಯರು ನಡೆದಾಡಲು ಕೂಡ ಯೋಗ್ಯವಾಗಿರಲಿಲ್ಲ ಯುದ್ದೋಪಕರಣಗಳನ್ನು ಆ ರಸ್ತೆಯಲ್ಲಿಯೇ ಸಾಗಿಸದೆ ಬೇರೆಮಾರ್ಗ ವಿರಲಿಲ್ಲ. ಸೈನ್ಯಕ್ಕೆ ಮಾತ್ರ ಆ ರಸ್ತೆಯಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಆಗ ಸಾಕಷ್ಟು ವಿಮಾನಗಳೂ ಇರಲಿಲ್ಲ. ಇದ್ದಷ್ಟೇ ಸೈನಿಕರು, ವಿಮಾನ ನಿಲ್ದಾಣದ ರಕ್ಷಣೆಗಾಗಿ ವೀರಾವೇಶದಿಂದ ಹೋರಾಡುತ್ತಿದ್ದರು. ತಿಮ್ಮಯ್ಯನವರ ಬೆಟಾಲಿಯನ್‌ 4ನೇ ಕುಮಾಂವೊನಿಸ್‌ ಭಾರೀ ಕಷ್ಟ ನಷ್ಟಗಳನ್ನು ಸಹಿಸುತ್ತಾ ವಾಯುನೆಲೆಯನ್ನು ಶತ್ರುಗಳಿಗೆ ಬಿಟ್ಟುಕೊಡದೆ ಹೆಚ್ಚಿನ ಸೇನಾಬಲ ಬರುವ ತನಕವೂ ರಕ್ಷಣೆ ಮಾಡಿತು.

ಸಿಕ್ಖ್ ಬೆಟಾಲಿಯನ್‌ ಶ್ರೀನಗರದ ಪಶ್ಚಿಮದಲ್ಲಿ ಹೆದ್ದಾರಿಯಲ್ಲಿ “ಶಾಲೆಟಾಂಗ್‌’ ಕಾಲುವೆಯ ಬದಿಯಲ್ಲಿ ಭಾರೀ ಪ್ರಮಾಣದ ಯುದ್ಧದಲ್ಲಿ ನಿರತರಾಗಿ, ಶತ್ರುಗಳು ಪ್ರವೇಶಿಸದಂತೆ ತಡೆಯೊಡ್ಡಿತು. ಅಷ್ಟರಲ್ಲಿ ಭಾರತದಿಂದ ಮತ್ತಷ್ಟು ಯುದ್ದೋಪಕರಣಗಳು ಬಂದು ತಲುಪಿದವು. ಇಂಡಿಯನ್‌ ಫೋರ್ಸಿನ ಬ್ರಿಗೇಡಿಯರ್‌ ಎಲ್.ಪಿ ಸೇನ್‌ ಕಮಾಂಡ್‌ ಮಾಡುತ್ತಿದ್ದರು. ಯುದ್ದೋಪಕರಣ ಮತ್ತು ಸೈನ್ಯ ಪಶ್ಚಿಮದಿಂದ ಬಂದುದು ಶತ್ರುಗಳಿಗೆ ತಿಳಿಯಲೇ ಇಲ್ಲ. ಅವರೆಲ್ಲ ಆ ಕಡೆಯಿಂದ ಬಂದ ಶಸ್ತ್ರಸಜ್ಜಿತ ಸೈನ್ಯವನ್ನು ಕಂಡು, ತಮ್ಮ ನೆರವಿಗೆ ಪಾಕಿಸ್ಥಾನಿ ಸೈನ್ಯ ಬಂದು ತಲಪಿತೆಂದು ಭಾವಿಸಿ ಕುಣಿದು ಕೂಗಾಡುತ್ತಾ “ಪಾಕಿಸ್ಥಾನ್‌ ಜಿಂದಾಬಾದ್‌’ ಎಂದು ಸ್ವಾಗತಿಸಲು ಓಡಿ ಬಂದರು. ಆದರೆ ತಮ್ಮತ್ತ ಮಶೀನ್‌ಗನ್‌ಗಳಲ್ಲಿ ಗುಂಡು ಸಿಡಿಯುವುದನ್ನು ಕಂಡು, “ನಾವು ಮೋಸಹೋದೆವಲ್ಲಾ’ ಎಂದು ದಿಕ್ಕಾಪಾಲಾಗಿ ಓಡಿದರು. ಒಂದು ಗಂಟೆಯೊಳಗೆ ಭಾರತೀಯ ಪಡೆಯು ಪಶ್ಚಿಮ ಭಾಗದ ಶತ್ರುಗಳನ್ನು ಚದುರಿಸಿ ಬೆನ್ನಟ್ಟಿತು. ಉತ್ತರ ಮತ್ತು ದಕ್ಷಿಣದಿಂದ ಮುತ್ತಿಗೆ ಹಾಕಿದವರು ಹಿಂದಕ್ಕೆ ಓಡಿದರು. ಭಾರತದ ಸೈನ್ಯಕ್ಕೆ ನೆಲ ಮಾರ್ಗದಲ್ಲಿ ಸಾಗಲು ಕಷ್ಟವಿತ್ತಾದ್ದರಿಂದ ವಾಯುದಳವೇ ಶತ್ರುಗಳ ವಾಹನಗಳನ್ನೆಲ್ಲ ಪುಡಿಗೈದಿತು. ಶತ್ರುಗಳನ್ನೆಲ್ಲ ಓಡಿಸಿ ಬ್ರಿಗೇಡಿಯರ್‌ ಸೇನ್‌ “ಉರಿ’ಯನ್ನು ಹೆಡ್‌ಕ್ವಾರ್ಟರ್ಸ್‌ ಮಾಡಿಕೊಂಡರು.

ಕಾಶ್ಮೀರ ಕಣಿವೆ ಮತ್ತು ಪಾಕಿಸ್ಥಾನದ ನಡುವಿನ ಗುಡ್ಡಗಾಡು ಜನರ ಸಂಖ್ಯೆಯೂ ಹೆಚ್ಚಾಗುತ್ತಾ ಬರುತ್ತಿತ್ತು. ಅವರ ಜತೆಗೆ ಕಾಶ್ಮೀರದ ಮುಸಲ್ಮಾನರೂ ಸೇರಿಕೊಂಡರು. ಆಗ ಮತ್ತೂಂದು ಇಂಡಿಯನ್‌ ಬ್ರಿಗೇಡ್‌ ಬಂತು. ಇದನ್ನು ಜನರಲ್‌ ಕುಲವಂತ್‌ ಸಿಂಗ್‌ ಕಮಾಂಡ್‌ ಮಾಡಿದರು. ಇದು ಬ್ರಿಟಿಷ್‌ ಜನರಲ್‌ ರಸಲ್‌ರ ಕಮಾಂಡಿನಲ್ಲಿತ್ತು. ಕೆಲವೇ ದಿವಸಗಳಲ್ಲಿ ಈ ಕಮಾಂಡನ್ನು ಜ| ಕಾರ್ಯಪ್ಪ ವಹಿಸಿ ಕೊಂಡರು. 1948ರ ಎಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಫೋರ್ಸಿನ ಕಮಾಂಡನ್ನು ಜ| ಕುಲವಂತ್‌ ಸಿಂಗ್‌ರಿಂದ ತಿಮ್ಮಯ್ಯ ವಹಿಸಿ ಕೊಂಡರು.

ತಿಮ್ಮಯ್ಯನವರ ಗುರಿ ಕಾಶ್ಮೀರ ಕಣಿವೆಗೆ ಶತ್ರು ಪ್ರವೇಶ ಮಾಡದಂತೆ ತಡೆಯುವುದು ಮತ್ತು ಮುಜಾಫ‌ರಾಬಾದನ್ನು ಸ್ವಾಧೀನಪಡಿಸಿಕೊಳ್ಳುವುದೂ ಆಗಿತ್ತು. ತಿಮ್ಮಯ್ಯನವರು ಜಮ್ಮುವಿಗೆ ಬಂದಾಗ, ಸೇನೆ ಸರಿಯಾದ ವ್ಯವಸ್ಥೆಯಲ್ಲಿದ್ದದ್ದು ಕಂಡು ಬರಲಿಲ್ಲ. ಹೀಗಾಗಿ ಅವರು ಇಡೀ ಸೈನ್ಯವನ್ನು ಎರಡು ಭಾಗ ಮಾಡಿ ಒಂದನ್ನು ಕಾಶ್ಮೀರ ಕಣಿವೆ ಭಾಗಕ್ಕೂ ಗೊತ್ತುಮಾಡಿ, ಕಾಶ್ಮೀರ ಕಣಿವೆಯ ಜವಾಬ್ದಾರಿ ತಾನೇ ವಹಿಸಿಕೊಂಡರು. ತಿಮ್ಮಯ್ಯನವರು ತಮ್ಮ ಯೂನಿಟ್ಟಿಗೆ “ಶ್ರೀ ಡಿವ್‌’ ಎಂದು ಹೆಸರಿಟ್ಟರು. ಇದರಲ್ಲಿ ಕೇವಲ 3 ಬ್ರಿಗೇಡ್‌ಗಳು ಮಾತ್ರ ಇದ್ದವು. ಅದು ಎಲ್ಲಿಗೂ ಸಾಲದು. ಮುಂದೆ ತಿಮ್ಮಯ್ಯ, “ಉರಿ’ ಪ್ರದೇಶಕ್ಕೆ ಹೋದರು. ಏಕೆಂದರೆ ಅಲ್ಲಿ ಸುಮಾರು 1,500 ಮಂದಿ ದಾಳಿಕೋರರು ಹೆ¨ªಾರಿಯನ್ನೆ ತಡೆದುಬಿಟ್ಟಿದ್ದರು. “ಉರಿ’ಯ ಉತ್ತರಕ್ಕೆ ಕಠಿನ ಭೂಪ್ರದೇಶವಾದ “ತಿತ್ಪಾಲ್‌ ಪಾಸ್‌’ ಇದೆ. ಅಲ್ಲಿಂದ ಮುಜಾಫ‌ರಾ ಬಾದಿಗೆ ನೇರ ದಾರಿಯಿತ್ತು. ಈಗ ದಾಳಿಕೋ ರರು ಹೆ¨ªಾರಿ ತಡೆದುಬಿಟ್ಟಿದ್ದರಿಂದ, ಅತೀ ಪ್ರಯಾಸದ ಬೆಟ್ಟವೇರಿ “ನಸ್ಟಾಚರ್‌ ಪಾಸ್‌’ಗೆ ತಲುಪಬೇಕಿತ್ತು. ಆದರೆ ಅವಶ್ಯವಿರುವ ಸಾಮಗ್ರಿ ಸಮೇತ ಬೆಟ್ಟವೇರಲು ಇನ್ನೂ ಒಂದು ಬ್ರಿಗೇಡಿನ ಆವಶ್ಯಕತೆಯಿತ್ತು. ತಿಮ್ಮಯ್ಯನವರು ಎಷ್ಟೇ ಬೇಡಿಕೆ ಸಲ್ಲಿಸಿದರೂ ಹೆಚ್ಚುವರಿ ಸೇನಾಬಲ ದೊರಕದೇ ಹೋಯಿತು.

ಆದರೆ ಅತ್ತ ತಿಮ್ಮಯ್ಯನವರು ಭೂಪಟವನ್ನೆಲ್ಲ ಅಭ್ಯಾಸ ಮಾಡಿ ಹೊರಟೇಬಿಟ್ಟರು. ತುಂಬಾ ಯಾತನಾಮಯ ಪಯಣದಿಂದ ತಿತ್ಪಾಲ್‌ ಪಾಸ್‌ ತಲುಪುವಷ್ಟರಲ್ಲಿ ಸೈನಿಕರು ಬಳಲಿ ಬೆಂಡಾದರು. ಸರಿಯಾಗಿ ಆಹಾರ ಸರಬರಾಜಿಲ್ಲದೆ ಅವರು ದಣಿದಾಗ ವಿಮಾನದಲ್ಲಿ ತಂದು ಎಸೆಯಲಾದ ಆಹಾರ ಪೊಟ್ಟಣಗಳಿಂದ ಪ್ರಾಣವುಳಿ ಸಿಕೊಂಡರು. ಕೊನೆಗೆ ದಂಗೆಕೋರರ ಮೇಲೆ ತಿಮ್ಮಯ್ಯ ಅವರ ತಂಡ ದಾಳಿ ಮಾಡಿತು. ಅಷ್ಟರಲ್ಲೇ ಶತ್ರುಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚುತ್ತಲೇ ಇತ್ತು. ಅವರ ಹೋರಾಟ ತುಂಬಾ ಬಲವಾಗಿತ್ತು. ಆದರೆ ಭಾರತೀಯ ಸೇನೆ ಹಿಂದೊಮ್ಮೆ ಬೆಟ್ಟದ ಮೇಲಣ ಯುದ್ಧದಲ್ಲಿ ಬಳಸಿದ ತಂತ್ರಗಳನ್ನೆಲ್ಲ ಬಳಸಿ, ಎರಡು ದಿವಸ ಹಗಲಿರುಳು ಹೋರಾಡಿ, ಮುಜಾಫ‌ರಾಬಾದ್‌ ಉತ್ತರಕ್ಕೆ ಹೋಗುವ ರಸ್ತೆಯನ್ನು ವಶಪಡಿಸಿಕೊಂಡಿತು! ಅಷ್ಟರಲ್ಲಿ ತಿತ್ಪಾಲ್‌ನಲ್ಲಿದ್ದ ಬ್ರಿಗೇಡ್‌ ಸಹ ಅನ್ನಾಹಾರವಿಲ್ಲದೆ ಉಪವಾಸ ಬಿದ್ದಿದ್ದರೂ ಹಸಿದ ಹೆಬ್ಬುಲಿಗಳಂತೆ ಹೋರಾಡಿ ಆ ಕಣಿವೆಯನ್ನು ಸ್ವಾಧೀನ ಪಡಿಸಿಕೊಂಡುಬಿಟ್ಟರು. ಈಗ ಮುಜಾಫ‌ ರಾಬಾದಿಗೆ ಪೂರ್ವದಿಂದಲೂ ದಕ್ಷಿಣದಿಂದಲೂ ನುಗ್ಗುವ ಅವಕಾಶ ದೊರೆ ಯಿತು. ಅಷ್ಟರಲ್ಲಿ ಮುಜಾಫ‌ರಾಬಾದಿನ ರಕ್ಷಣೆಗೆ ಪಾಕಿಸ್ಥಾನದಿಂದ ಒಂದು ಡಿವಿಜನ್‌ ಬಂದು ತಲಪಿತು. ತಿಮ್ಮಯ್ಯ ತಿತ್ಪಾಲ್‌ ಮತ್ತು “ಉರಿ’ಯನ್ನು ಸರಿ ಯಾದ ಭದ್ರತೆಯಲ್ಲಿ ಹಿಡಿದಿಟ್ಟರು. ಸ್ವಲ್ಪವೇ ಸೈನಿಕ ಬಲದಿಂದ ಅಷ್ಟು ದೊಡ್ಡ ಸಾಧನೆ ಮಾಡಿದ್ದ ರಿಂದಾಗಿ ಭಾರತೀಯ ಜವಾನರ ಮನೋಬಲ ಗಗನಕ್ಕೇರಿತ್ತು.

ಜೋಜಿಲಾ ಪಾಸನ್ನು ವಶಪಡಿಸಿಕೊಳ್ಳುವುದೇ ತಿಮ್ಮಯ್ಯನವರ ಅಂತಿಮ ಗುರಿಯಾಗಿತ್ತು. ಚಳಿಗಾಲದಲ್ಲಿ ಆ ಪ್ರದೇಶವೆಲ್ಲ ಹಿಮದಿಂದ ಮುಚ್ಚಿಹೋಗುತ್ತದೆ. ಲೇಹ್‌ನಲ್ಲಿ ತಿಮ್ಮಯ್ಯನವರ ಬೆಟಾಲಿಯನ್‌ ಬೀಡುಬಿಟ್ಟಿತ್ತು. ಅದು ತುಂಬಾ ಅಪಾಯದ ಸ್ಥಳ. ನಾಲ್ಕು ಮೈಲು ಎತ್ತರಕ್ಕೆ ಅಗತ್ಯ ವಸ್ತುಗಳನ್ನು ವಿಮಾನದಲ್ಲಿ ಸಾಗಿಸಬೇಕು. ಚಳಿಗಾಲ ಪ್ರಾರಂಭವಾಗುವ ಮೊದಲು ಆ ಹನ್ನೊಂದು ಸಾವಿರ ಅಡಿಗಳ ಮೇಲಿನ ಪ್ರದೇಶವನ್ನು ವಶಪಡಿಸಿಕೊಳ್ಳದೆ ಹೋದರ ಸೇನೆ ಬೋನಿ ನೊಳಗೆ ಸಿಲುಕಿದ ಇಲಿಗಳಂತಾಗಿ, ಗುಡ್ಡಗಾಡು ಜನರ ದಾಳಿಯಿಂದ ಸರ್ವನಾಶ ಆಗುತ್ತಿತ್ತು. ಅದೂ ಅಲ್ಲದೆ ಕಾಶ್ಮೀರದ ತನಕ ಎಲ್ಲ ಪ್ರದೇಶವೂ ಶತ್ರುಗಳ ವಶವಾಗಿ ಹೋಗುತ್ತಿತ್ತು.

ಈಗ ತಿಮ್ಮಯ್ಯನವರ ಎದುರಿದ್ದ ದಾರಿ ಒಂದೆ. ಹೇಗಾದರೂ ಮಾಡಿ 11,000 ಅಡಿ ಎತ್ತರದ ಶಿಖರಕ್ಕೆ ಯುದ್ಧ ಟ್ಯಾಂಕನ್ನು ಹೊತ್ತೂ ಯ್ಯಬೇಕು! ಇಳಿಜಾರು ಬೆಟ್ಟವನ್ನು ತರಿದು ಹೇರ್‌ ಪಿನ್‌ ಥರದ ತಿರುವುಗಳಲ್ಲಿ ಟ್ಯಾಂಕ್‌ಗಳನ್ನು ಸಾಗಿಸಬೇಕು. ಒಂದಿಂಚು ಅತ್ತಿತ್ತವಾದರೂ ಸಾವಿರಾರು ಅಡಿ ಆಳದ ಪ್ರಪಾತಕ್ಕೆ ಉರುಳಿ ನಾಶ ಆಗುವುದಂತೂ ಸತ್ಯ. ಇಂಥದ್ದೊಂದು ಯುದ್ಧ ಪ್ರಪಂಚದ ಚರಿತ್ರೆ ಯಲ್ಲಿ ಹಿಂದೆಂದೂ ನಡೆದಿರಲಿಲ್ಲ. ಆಳವಾದ ಕಂದಕಗಳನ್ನು ತೋಡಿ ರಕ್ಷಣ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಶತ್ರುಗಳನ್ನು ಹೊಡೆದು ರುಳಿಸಲು ವಿಮಾನ ದಾಳಿಯಿಂದ ಸಾಧ್ಯವಿರಲಿಲ್ಲ. ಹೀಗಾಗಿ ಶತ್ರುಗಳನ್ನು ಅನಿರೀಕ್ಷಿತ ದಾಳಿಯಿಂದ ಕಂಗೆಡಿಸುವುದೊಂದೇ ಮಾರ್ಗವಾಗಿತ್ತು. ಏರ್‌ ಕಮಾಂಡರ್‌ ಮೆಹರ್‌ಸಿಂಗ್‌ ಎರಡನೇ ಮಹಾಯುದ್ಧ ಕಾಲದಲ್ಲಿ ಬಳಸಿದ ಒಂದು ಹಳೆಯ ವಿಮಾನವನ್ನು 23,000 ಅಡಿ ಎತ್ತರದ ಬೆಟ್ಟದ ಶಿಖರಕ್ಕೆ ಹಾರಿಸಿ, “ಲೇಹ್‌’ ಪ್ರದೇಶವನ್ನೆಲ್ಲ ಸುತ್ತು ಹಾಕಿ ಒಳ್ಳೆ ಆಯಕಟ್ಟಿನ ಸ್ಥಳಗಳನ್ನೆಲ್ಲ ಗುರುತಿಸಿಕೊಂಡು ಬಂದರು. ಜೋಜಿಲಾ ಪಾಸ್‌ ವಶಪಡಿಸಿಕೊಳ್ಳಬೇಕಾದರೆ ಆರ್ಟಿಲರಿ ಯಾಗಲಿ, ವಿಮಾನ ದಾಳಿಯಾಗಲೀ ಪ್ರಯೋಜನವಿರಲಿಲ್ಲ. ಬೆಟ್ಟದ ತಳ ಭಾಗದಲ್ಲಿ ಉತ್ತಮ ರಕ್ಷಣ ವ್ಯವಸ್ಥೆ ಮಾಡಿಕೊಂಡಿದ್ದ ಶತ್ರುಗಳನ್ನು ಸಮತಟ್ಟಾದ ಬಯಲಿಗೆ ಓಡಿಸಿದ ಮೇಲೆ ಮಾತ್ರ ವಿಮಾನ ದಾಳಿ ಪರಿಣಾಮಕಾರಿಯಾಗಬಹುದಿತ್ತು.

ಆದರೆ ಶತ್ರುಗಳು ಆ ಬೆಟ್ಟ ಪ್ರದೇಶದ ಹವಾಮಾನದಲ್ಲೇ ಹುಟ್ಟಿ ಬೆಳೆದವರು. ಪ್ರತೀ ಸ್ಥಳವೂ ಅವರಿಗೆ ಚಿರಪರಿಚಿತ. ನಮ್ಮವರ ಪೈಕಿ ಗೂರ್ಖ ಮತ್ತು ಕುಮಾಂವೂನಿಯರನ್ನು ಹೊರತುಪಡಿಸಿದರೆ ಉಳಿದ ವರೆಲ್ಲ ಭಾರತದ ಬಯಲು ಸೀಮೆಯವರು. ಬೆಟ್ಟದ ಮೇಲೆ ಉಸಿರಾಟಕ್ಕೆ ಆಮ್ಲಜನಕವಿಲ್ಲ. ಹಿಮಕ್ಕೆ ತಕ್ಕ ಬಟ್ಟೆಬರೆಗಳಿಲ್ಲ. ಅವಶ್ಯ ವಾದ ತಿಂಡಿ ತಿನಿಸಿಲ್ಲ. ವಾಹನಗಳಿಗೆ ಪೆಟ್ರೋಲ್‌ ಇಲ್ಲ. ಬೆಂಕಿ ಉರಿಸಲು ಸೌದೆಯಿಲ್ಲ. ಯಾವುದಾದರೂ ಮರದ ಬೇರನ್ನು ಆಯ್ದು ತಂದು ಬೆಂಕಿ ಉರಿಸಿದರೆ ಒಂದು ಕಪ್‌ ಚಹಾ ಬಿಸಿಯಾಗಬೇಕಾದರೆ 5.30 ಗಂಟೆ ಸಮಯ ಬೇಕು! ಮಾಡಿದ ತಿಂಡಿಯೆಲ್ಲ ಕ್ಷಣಮಾತ್ರದಲ್ಲಿ ಕಲ್ಲಿನಂತಾಗಿಹೋಗುವ ಚಳಿಯದು!

ಇಂತಹ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡ ಜನರನ್ನು ಕಟ್ಟಿಕೊಂಡು, ಟ್ಯಾಂಕುಗಳನ್ನು ಎಳೆಯುತ್ತಲೂ ದೂಡುತ್ತಲೂ, ಹೇಸರ ಕತ್ತೆಗಳ ಮೇಲೆ ಬಿಡಿಭಾಗಗಳನ್ನು ಹೇರುತ್ತಲೂ ಜೋಜಿಲಾ ಪಾಸ್ಗೆ ಸೇನೆ ತಲಪಿಬಿಟ್ಟಿತು. 1,000 ಅಡಿ ಎತ್ತರದ ಮೇಲಿನ ಹಿಮಗಿರಿಯಿಂದ ಒಂದೇ ಸಲಕ್ಕೆ ನಮ್ಮವರಿಂದ ಟ್ಯಾಂಕ್‌ಗಳ ಅಬ್ಬರ, ಬಾಂಬುಗಳ ಆರ್ಭಟ, ಗುಂಡಿನ ಶಬ್ದ, ಭಾರತೀಯ ಸೈನಿಕರ ಕೂಗು ಕೇಳಿದಾಗ, ಏನಾಗುತ್ತಿದೆ ಎಂದು ಶತ್ರುಗಳಿಗೆ ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಾಗದೇ ಹೋಯ್ತು. ಸುರಕ್ಷಿತವಾಗಿ ಅವಿತಿದ್ದ ಶತ್ರುಗಳು ಬೆದರಿ ಯಾವ ರಕ್ಷಣ ವ್ಯವಸ್ಥೆಯನ್ನೂ ಮಾಡಿಕೊಳ್ಳದೆ ಬಂಕರುಗಳಿಂದ ಹೊರಬಿದ್ದು ಸಮತಟ್ಟು ಸ್ಥಳದಲ್ಲಿ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಆಗ ತಿಮ್ಮಯ್ಯರ ನಿರ್ದೇಶನದಲ್ಲಿ ವಾಯು ಪಡೆ ಶತ್ರುಗಳ ಮೇಲೆ ದಾಳಿ ಮಾಡಿತು! ಸಂಜೆಯ ವೇಳೆಗೆ ಯುದ್ಧ ರಂಗದ ಚರಿತ್ರೆಯನ್ನೇ ಕಂಡರಿಯದಂಥ ಪವಾಡ ನಡೆಯಿತು. ಜೋಜಿಲಾ ಕಣಿವೆ ತಿಮ್ಮಯ್ಯನವರ ನೇತೃತ್ವದ ಸೇನೆಯ ಕೈವಶವಾಯಿತು! ಆದರೆ ಸಮಯವನ್ನು ಸ್ವಲ್ಪವೂ ವ್ಯರ್ಥ ಮಾಡದ ತಿಮ್ಮಯ್ಯನವರು ಬಳಲಿ ಬೆಂಡಾದ ಸೈನ್ಯವನ್ನು ಪೂರ್ವದ ಕಾರ್ಗಿಲ್‌ಗೆ ಕಳುಹಿಸಿದರು. ಅಲ್ಲಿ ಸುರಕ್ಷಿತ ನೆಲೆಯಿಂದ ಯುದ್ಧ ಮಾಡುತ್ತಲಿದ್ದ ಶತ್ರುಗಳನ್ನು ಸಂಹಾರ ಮಾಡಲಾಯಿತು. ಭಾರತೀಯ ಸೈನಿಕರ ಪೆಟ್ಟು ತಾಳಲಾರದ ಶತ್ರು ಸೈನ್ಯ “ಸ್ಕರ್ದು’ ಎಂಬ ಪ್ರದೇಶದತ್ತ ಪಲಾಯನ ಮಾಡಿತು. ಜೋಜಿಲ, ದ್ರಾಸ್‌, ಕಾರ್ಗಿಲ್‌ಗ‌ಳನ್ನು ಹಾಗೂ ಲಡಾಖ್‌ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಾಗ ತಿಮ್ಮಯ್ಯನವರ ಕೀರ್ತಿ ಹಿಮಾಲಯದೆತ್ತರಕ್ಕೆ ಬೆಳೆದುಹೋಯಿತು!

ದುರದೃಷ್ಟವಶಾತ್‌ ಚಳಿಗಾಲ ಪ್ರಾರಂಭವಾಯಿತು. ತತ್ಕಾಲಕ್ಕೆ ಸೈನಿಕ ಕಾರ್ಯಾಚರಣೆ ಸ್ಥಗಿತಗೊಳ್ಳಬೇಕಾಯಿತು. ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿದ್ದರಿಂದಾಗಿ ಯುದ್ಧ ನಿಂತಹೋಯಿತು. ಅರ್ಜೆಂಟೀನಾ, ಕೊಲಂಬಿಯಾ, ಜೆಕೊಸ್ಲೋವಾಕಿಯ, ಬೆಲ್ಜಿಯಂ, ಅಮೆರಿಕ ಸೈನ್ಯಗಳನ್ನೊಳಗೊಂಡ ಶಾಂತಿಪಡೆ ಜಮ್ಮು-ಕಾಶ್ಮೀರಕ್ಕೆ ಬಂದು ತಲಪಿತು! ಇದರಿಂದಾಗಿ ತಿಮ್ಮಯ್ಯನವರ ಕೈಗಳನ್ನು ಕಟ್ಟಿಹಾಕಿದಂತಾ ಯಿತು. ಕೈಗೆ ಬಂದ ತುತ್ತು ಬಾಯಿಗೆ ದೊರಕದಾಯಿತು. ತಿಮ್ಮಯ್ಯ ಕೆಲವು ದಿವಸಗಳ ರಜೆ ಪಡೆದುಕೊಂಡರು. ತಿಮ್ಮಯ್ಯರಂಥ ಗಂಡು ಗಲಿಯನ್ನು ಪಡೆದಿದ್ದರೂ ನಮ್ಮ ರಾಜಕಾರಣಿಗಳು ವಿಶ್ವಸಂಸ್ಥೆಯ ಪಾದಕ್ಕೆರಗಿ, ಕೈಚೆಲ್ಲಿದ್ದು ನಮ್ಮ ದೇಶದ ದುರದೃಷ್ಟ!

(ಕೃಪೆ: ಸಮರವೀರ ಜ| ತಿಮ್ಮಯ್ಯ. ಮೂಲ ಹಂಫ್ರಿ ಇವಾನ್ಸ್‌, ಕನ್ನಡಕ್ಕೆ: ಬಾಚರಣಿಯಂಡ ಪಿ. ಅಪ್ಪಣ್ಣ -ಹೇಮಂತ ಸಾಹಿತ್ಯ)

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.