ಕಲ್ಲಂಗಡಿ ಧ್ವಂಸ ಪ್ರಕರಣ : ನಾಲ್ವರು ಆರೋಪಿಗಳಿಗೆ ಜಾಮೀನು
Team Udayavani, Apr 16, 2022, 9:52 PM IST
ಧಾರವಾಡ: ಇಲ್ಲಿನ ನುಗ್ಗಿಕೇರಿಯ ಆಂಜನೇಯ ದೇವಸ್ಥಾನ ಆವರಣದಲ್ಲಿ ಅನ್ಯ ಧರ್ಮದ ಜನರ ಅಂಗಡಿ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳಿಗೆ ಶನಿವಾರ ಇಲ್ಲಿನ ೪ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ, ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಧಾರವಾಡದ ನುಗ್ಗಿಕೇರಿಯ ಆಂಜನೇಯ ದೇವಸ್ಥಾನ ಆವರಣದಲ್ಲಿನ ಅನ್ಯ ಧರ್ಮದ ಜನರ ಅಂಗಡಿ ತೆರವುಗೊಳಿಸಿದ್ದಾರೆ ಎಂದು ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೈಲಾರಪ್ಪ ಗುಡ್ಡಪ್ಪನವರ, ಮಹಾನಿಂಗ ಐಗಳಿ, ಚಿಂದಾನಂದ ಕಲಾಲ, ಕುಮಾರ ಕಟ್ಟಿಮನಿ ಎಂಬುವರ ವಿರುದ್ಧ ದೂರು ದಾಖಲಾಗಿತ್ತು. ಅದರಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಹೀಗಾಗಿ ನಾಲ್ವರು ಆರೋಪಿಗಳು ಧಾರವಾಡದ ೪ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ ನ್ಯಾಯಾಲಯ, ನಾಲ್ವರು ಆರೋಪಿಗಳು ಇಬ್ಬರ ಶ್ಯೂರಿಟಿ ನೀಡಬೇಕು. ಪೊಲೀಸರು ಹಾಗೂ ನ್ಯಾಯಾಲಯ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಮುಂದೆ ಈ ತರಹದ ಘಟನೆಗಳಲ್ಲಿ ಭಾಗವಹಿಸಬಾರದು. ಅಲ್ಲದೇ ಇತರ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.