CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಒಳ್ಳೆಯ ನಿರೀಕ್ಷೆ ಹುಟ್ಟಿಸಿದೆ ಮುಂಗಾರು, ಸುಭಿಕ್ಷೆ ಉಂಟಾಗಲಿ

ಮುಂಗಾರು ಸರಿಯಾದ ಸಮಯಕ್ಕೆ ಅಥವಾ ತುಸು ಬೇಗನೆ ಆರಂಭವಾದರೆ ರೈತರಿಗೆ ಒಳ್ಳೆಯದು ಅನ್ನುವುದು ಮೇಲ್ನೋಟಕ್ಕೆ ಕಾಣಿಸುವ ಸತ್ಯ. ಆದರೆ, ಸರಿಯಾದ ಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾದರೆ ಎಲ್ಲ ಕ್ಷೇತ್ರಗಳಲ್ಲೂ ಎಲ್ಲರಿಗೂ ಸುಭಿಕ್ಷೆ. ಈ ಮಳೆಗಾಲ ಅಂಥ ನಿರೀಕ್ಷೆ ಹುಟ್ಟಿಸಿದೆ. 

ಬಹಳ ವರ್ಷಗಳ ಬಳಿಕ ವರುಣ ದೇವ ದೇಶಕ್ಕೆ ಧಾರಾಳ ಕೃಪಾದೃಷ್ಟಿ ಹರಿಸುವ ನಿರೀಕ್ಷೆ ಹುಟ್ಟಿದೆ. ಮೇ ತಿಂಗಳ ಆರಂಭದಿಂದಲೇ ಸರಕಾರಿ ಮತ್ತು ಖಾಸಗಿ ಹವಾಮಾನ ವೀಕ್ಷಣಾ ಸಂಸ್ಥೆಗಳು ಶುಭ ಸುದ್ದಿಯನ್ನು ಬಿತ್ತರಿಸುತ್ತಿವೆ. ಈ ವರ್ಷ ವಾಡಿಕೆಯಂತೆ ಮಳೆಯಾಗಲಿದೆ ಹಾಗೂ ಕೆಲವು ದಿನ ಮೊದಲೇ ಮುಂಗಾರು ಆಗಮನವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಸಂಸ್ಥೆಗಳು ಭವಿಷ್ಯ ನುಡಿದಿದ್ದವು. ಅದು ನಿಜವಾಗುವ ಲಕ್ಷಣ ಗೋಚರಿಸಿದೆ. ಹವಾಮಾನ ತಜ್ಞರು ನಿರೀಕ್ಷಿಸಿದಂತೆ ಮೇ 15ಕ್ಕೂ ಮೊದಲೇ ಅಂಡಮಾನ್‌-ನಿಕೋಬಾರ್‌ಗೆ ನೈಋತ್ಯ ಮುಂಗಾರು ತಲುಪಿದೆ. ಅಂದರೆ ನಾಲ್ಕು ದಿನಗಳ ಮೊದಲೇ ಮುಂಗಾರು ಬಂದಂತಾಗಿದೆ. ಸಾಮಾನ್ಯವಾಗಿ ಅಂಡಮಾನ್‌ಗೆ ಬಂದ ಮುಂಗಾರು 12 ದಿನಗಳಲ್ಲಿ ಶ್ರೀಲಂಕಾ ಹಾದು ಕೇರಳ ಪ್ರವೇಶಿಸಬೇಕು. ಈ ಲೆಕ್ಕಾಚಾರದ ಪ್ರಕಾರ ಹೇಳುವುದಾದರೆ ಮೇ 14ರಂದು ಅಂಡಮಾನ್‌ಗೆ ಬಂದಿರುವ ಮುಂಗಾರು ಮೇ 26 ಅಥವಾ 27ಕ್ಕೆ ಕೇರಳ ಪ್ರವೇಶಿಸಬೇಕು. ಇದಾದ ಎರಡು ದಿನಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಮಳೆಯಾಗಬೇಕು.ಅಂದರೆ ಮೇ 29 ಅಥವಾ 30ರೊಳಗೆ ಕರ್ನಾಟಕಕ್ಕೆ ಅಧಿಕೃತವಾಗಿ ಮಳೆಗಾಲ ಪದಾರ್ಪಣೆ ಮಾಡಬೇಕು. ಹೀಗಾದರೆ ವಾಡಿಕೆಗಿಂತ ನಾಲ್ಕೈದು ದಿನ ಮೊದಲೇ ಮಳೆಗಾಲ ಶುರುವಾಗಲಿದೆ ಎಂಬ ಹವಾಮಾನ ವರದಿ ನಿಜವಾಗಲಿದೆ. 

ಹಾಗೆಂದು ಹವಾಮಾನ ಸಂಸ್ಥೆಗಳ ವರದಿಗಳು ಶತ ಪ್ರತಿಶತ ನಿಜವಾಗುತ್ತವೆ ಎನ್ನುವಂತಿಲ್ಲ. ಕಳೆದ ವರ್ಷ ಹೆಚ್ಚಿನೆಲ್ಲ ಸಂಸ್ಥೆಗಳು ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ಭವಿಷ್ಯ ನುಡಿದಿದ್ದವು. ಆದರೆ ಕೊನೆಗೆ ನೋಡಿದಾಗ ಬಹಳ ಕಡಿಮೆ ಮಳೆಯಾಗಿತ್ತು. ಅದರಲ್ಲೂ ದಕ್ಷಿಣ ಭಾರತದಲ್ಲಿ ದಶಕದಲ್ಲೇ ಗರಿಷ್ಠ ಮಳೆ ಕೊರತೆಯಾಗಿತ್ತು. ಇದರ ಪರಿಣಾಮವನ್ನು ಈ ಬೇಸಿಗೆಯಲ್ಲಿ ಜನರು ಅನುಭವಿಸಿದ್ದಾರೆ.  ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣದ ಬಹುತೇಕ ರಾಜ್ಯಗಳು ಸತತವಾಗಿ ಬರದಿಂದ ಕಂಗಾಲಾಗಿವೆ. ಉತ್ತರದಲ್ಲಿ ಕಳೆದ ಮಳೆಗಾಲದಲ್ಲಿ ಉತ್ತಮ ಮಳೆಯಾಗಿದ್ದರೂ ಈ ಸಲ ಬಿಸಿಲಿನ ಬೇಗೆ ತೀವ್ರವಾಗಿತ್ತು. ಮಳೆಯನ್ನೇ ಅವಲಂಬಿಸಿರುವ ರೈತಾಪಿ ವರ್ಗಕ್ಕೆ ಮಳೆ ಬೇಗ ಬಂದಷ್ಟು ಒಳ್ಳೆಯದು.

ಬಿತ್ತನೆ ಮತ್ತಿತರ ಕೃಷಿ ಕಾರ್ಯಗಳು ಸಮಯಕ್ಕೆ ಸರಿಯಾಗಿ ಶುರುವಾದರೆ, ಸಕಾಲಕ್ಕೆ ಕೊಯ್ಲು ಆಗಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಶೈಕ್ಷಣಿಕ ವರ್ಷ ಪ್ರಾರಂಭವಾಗಲು ಕೂಡ ಮಳೆ ಸಕಾಲಕ್ಕೆ ಪ್ರಾರಂಭವಾಗುವುದು ಅಗತ್ಯ. ಬೇಸಿಗೆ ಮುಂದುವರಿದರೆ ತೀವ್ರ ಸೆಖೆ ಮತ್ತು ಕುಡಿಯುವ ನೀರಿನ ಕೊರತೆಯಿಂದಾಗಿ ಜೂನ್‌ ಮೊದಲ ವಾರದಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಕಷ್ಟವಾಗುತ್ತದೆ. ಹೀಗಾಗಿ ಹವಾಮಾನ ಇಲಾಖೆಯ ವರದಿಗಳು ಮಳೆಗಾಲಕ್ಕೂ ಮೊದಲೇ ಎಲ್ಲ ವರ್ಗಕ್ಕೂ ತಂಪೆರೆದಿವೆ.  ಎಲ್‌ ನಿನೊ ಪ್ರಭಾವದಿಂದಾಗಿ ಕಳೆದ ವರ್ಷ ಮಳೆ ಕಡಿಮೆಯಾದ ಪರಿಣಾಮವಾಗಿ ಕರ್ನಾಟಕ, ಕೇರಳ, ಮತ್ತು ತಮಿಳುನಾಡು ತೀವ್ರವಾಗಿ ತತ್ತರಿಸಿವೆ. ಕುಡಿಯುವ ನೀರಿಗೂ ತತ್ವಾರವಾಗಿದೆ. ಆದರೆ ಈ ನಡುವೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬೇಸಿಗೆ ಮಳೆಯಾಗಿ ಪರಿಸ್ಥಿತಿ ತುಸು ಸುಧಾರಿಸಿದೆ. ಕೇರಳದ ಕೆಲವು ಜಿಲ್ಲೆಗಳಲ್ಲೂ ಬೇಸಿಗೆ ಮಳೆಯಾಗಿದ್ದರೂ ನೀರಿನ ಕೊರತೆ ಮಾತ್ರ ನೀಗಿಲ್ಲ. ಮುಂಗಾರನ್ನು ಸ್ವಾಗತಿಸುವ ರಾಜ್ಯವೆಂಬ ಹಿರಿಮೆ ಹೊಂದಿರುವ ಕೇರಳದ ಈ ವರ್ಷದ ಬರ ಪರಿಸ್ಥಿತಿ ಆತಂಕವುಂಟು ಮಾಡಿದೆ. 

ಈ ಹಿನ್ನೆಲೆಯಲ್ಲಿ ಈ ಸಲ ವಾಡಿಕೆಯಂತೆ ಮಳೆಯಾಗಲಿದೆ ಎಂಬ ಭವಿಷ್ಯವಾಣಿ ರೈತರೂ ಸೇರಿದಂತೆ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಎಂದಿನಂತೆ ಮಳೆಯ ಅಬ್ಬರ ಜೋರಾಗಿರಬಹುದು. ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣ ತುಸು ಕಡಿಮೆಯಾಗುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ ಶೇ. 96ರಿಂದ ಶೇ. 97ರಷ್ಟು ಮಳೆಯಾಗಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಹೀಗಾದರೆ ಬಹಳ ವರ್ಷಗಳ ಅನಂತರ ಸಾಮಾನ್ಯವಾದ ಮಳೆಗಾಲವನ್ನು ನೋಡುವ ಭಾಗ್ಯ ಜನರಿಗಿದೆ ಎಂದಾಯಿತು. 
ಅನೇಕ ವರ್ಷಗಳ ಬಳಿಕ ಉತ್ತಮ ಮಳೆಯಾಗುವ ಲಕ್ಷಣವೊಂದು ಕಾಣಿಸಿದೆ. ಸುರಿದ ಪ್ರತಿಯೊಂದು ಹನಿಯನ್ನೂ ರಕ್ಷಿಸಿ ಭವಿಷ್ಯಕ್ಕೆ ಕಾಪಿಡುವ ಕೆಲಸವನ್ನು ಮಾಡಲು ಇದು ಸಕಾಲ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಇದರಿಂದಾಗಿ ಕೃಷಿಯ ಮೇಲೆ ಮಾತ್ರವಲ್ಲದೆ ಒಟ್ಟಾರೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಮಳೆಯ ನೀರನ್ನು ಇಂಗಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಮಾತ್ರವಲ್ಲ ಜನರು ಕೂಡ ಕಾರ್ಯಪ್ರವೃತ್ತರಾಗಬೇಕು.

Back to Top