CONNECT WITH US  

ಅಭಿವೃದ್ಧಿಗೆ ಆದ್ಯತೆ ಬೇಕು, ಹಿಂದುಳಿಯಿತೇಕೆ ರಾಜ್ಯ ಪ್ರವಾಸೋದ್ಯಮ? 

ನೈಸರ್ಗಿಕ, ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸಿ ತಾಣಗಳು ಇಂದು ಉದ್ಯೋಗಾವಕಾಶ ಸೃಷ್ಟಿಗೆ ಇರುವ ಸಾಧ್ಯತೆಗಳು. ರಾಜ್ಯದಲ್ಲೂ ಇದಕ್ಕೆ ಇರುವ ಅವಕಾಶಗಳು ವಿಪುಲ. ಆದರೆ ಇದನ್ನು ಬಳಸಿಕೊಳ್ಳುವಲ್ಲಿ ನಾವು ಪಟ್ಟ ಪರಿಶ್ರಮ ಎಷ್ಟು ಎನ್ನುವುದಕ್ಕೆ ನೆರೆಯ ರಾಜ್ಯಗಳನ್ನು ಹೋಲಿಸಿದರೆ ಸಾಕು; ಬೇರಾವ ಉದಾಹರಣೆಗಳೂ ಬೇಕಿಲ್ಲ. ಕೇರಳ ಮತ್ತು ತಮಿಳುನಾಡು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಮೂಲಕ ಸ್ಥಳೀಯ ಸಂಪನ್ಮೂಲ ಕ್ರೋಡೀಕರಣಕ್ಕೆ ಮಾರ್ಗವನ್ನು ಹುಡುಕಿಕೊಂಡಿವೆ. ಈ ಎರಡೂ ರಾಜ್ಯಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಹೊರತುಪಡಿಸಿದರೆ ಇರುವುದು ಬೆರಳೆಣಿಕೆಯ ಬೀಚ್‌ಗಳು, ಹಿನ್ನೀರಿನ ತಾಣಗಳಷ್ಟೇ. ಇರುವ ತಾಣಗಳ ಕಾಳಜಿ ವಹಿಸಿರುವುದು ಇಲ್ಲಿ ಉಲ್ಲೇಖನೀಯ. ಕೆಲವೆಡೆ ಗರಿಷ್ಠ ಮತ್ತು ಇನ್ನೂ ಕೆಲವೆಡೆ ಕನಿಷ್ಠ ಮೂಲ ಸೌಕರ್ಯವನ್ನಾದರೂ ಕಲ್ಪಿಸಿವೆ. ಗೋವಾ ರಾಜ್ಯವಂತೂ ಕಡಲ ಕಿನಾರೆಯನ್ನೇ ವ್ಯಾಪಕವಾಗಿ ಬಳಸಿಕೊಂಡಿದೆ. ಈ ಕಡಲ ಕಿನಾರೆಗಳೇ ಜಾಗತಿಕ ನಕ್ಷೆಯಲ್ಲಿ ಜಾಗ ಕಲ್ಪಿಸಿವೆ. 

ಇವೆಲ್ಲವನ್ನು ಕಂಡಾಗ ನಮ್ಮ ರಾಜ್ಯ ಯಾವುದಕ್ಕೂ ಕಡಿಮೆ ಇಲ್ಲ. ವಾಸ್ತವವಾಗಿ ರಾಜ್ಯದ್ಲಲಿದ್ದಷ್ಟು ವೈವಿಧ್ಯಮಯ ಪ್ರವಾಸಿ ತಾಣಗಳು ಬೇರೆಡೆ ಇಲ್ಲ. ಕೇವಲ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿಸದೇ ಇದನ್ನೊಂದು ಉದ್ಯಮವನ್ನಾಗಿ ಪರಿಗಣಿಸಬೇಕು. ಆ ನಿಟ್ಟಿನಲ್ಲೇ ಆದ್ಯತೆವಾರು ಮೂಲಸೌಕರ್ಯಗಳ ವೃದ್ಧಿಗೆ ಒತ್ತು ನೀಡಿದ್ದಲ್ಲಿ ರಾಜ್ಯವೂ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುತ್ತಿತ್ತು. ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ರಾಜ್ಯದ 500ಕ್ಕೂ ಅಧಿಕ ಸ್ಮಾರಕಗಳು ಸ್ಥಾನ ಪಡೆದಿವೆ. ವಿಶ್ವ ಪರಂಪರೆಯ ತಾಣಗಳ ಯಾದಿಯಲ್ಲೂ ಕೆಲವು ತಾಣಗಳಿವೆ. ನೈಸರ್ಗಿಕ ಪ್ರವಾಸಿ ತಾಣಗಳಲ್ಲಿ ಪಶ್ಚಿಮಘಟ್ಟ ಶ್ರೇಣಿ ಮುಂಚೂಣಿಯಲ್ಲಿದೆ.

ಮಲೆನಾಡು, ಅರೆ ಮಲೆನಾಡು ಮತ್ತು ಕರಾವಳಿ ಪ್ರದೇಶದುದ್ದಕ್ಕೂ ನೋಡಲಿಕ್ಕೆ ದೊಡ್ಡ ಪಟ್ಟಿಯೇ ಇದೆ. ಈ ಪ್ರದೇಶಗಳಲ್ಲಿನ ಜಲಪಾತಗಳೂ ಸೊಬಗಿನ ಸಿರಿಯೇ. ಧಾರ್ಮಿಕ ತಾಣಗಳೂ ಕಡಿಮೆ ಇಲ್ಲ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ, ದೇಶಗಳಿಂದಲೂ ಭಕ್ತರನ್ನು ತಮ್ಮತ್ತ ಸೆಳೆಯುತ್ತಿವೆ. ಉತ್ತರ ಕರ್ನಾಟಕದಲ್ಲಿನ ಹಲವು ಐತಿಹಾಸಿಕ ಸ್ಥಳಗಳು ನಮ್ಮ ಇತಿಹಾಸದ ಪಳೆಯುಳಿಕೆಗಳಂತಿದ್ದು ಇಂದಿನ ಪೀಳಿಗೆಗೆ ಚರಿತ್ರೆಯ ಪಾಠ ಮಾಡುತ್ತವೆ. ಅಭಯಾರಣ್ಯ, ವನ್ಯಧಾಮಗಳಿಗೂ ಕೊರತೆ ಇಲ್ಲ. ದೇಶದ ಯಾವುದೇ ರಾಜ್ಯಕ್ಕೆ ಹೋಲಿಸಿದಲ್ಲಿ ಕರ್ನಾಟಕ ಸರ್ವ ಋತು ಪ್ರವಾಸೋದ್ಯಮ ರಾಜ್ಯ. ಬಹುತೇಕ ರಾಜ್ಯಗಳಲ್ಲಿರುವ ಪ್ರವಾಸಿ ಕೇಂದ್ರಗಳು ಕೆಲ ಋತುಗಳಿಗೆ ಸೀಮಿತ. ಕರ್ನಾಟಕದಲ್ಲಿ ಎಲ್ಲ ಋತು ಗಳಲ್ಲಿಯೂ ಪ್ರವಾಸಿಗರ ಮನ ತಣಸಿಬಲ್ಲ ತಾಣಗಳಿವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇಷ್ಟೊಂದು ಹೇರಳ ಅವಕಾಶಗಳಿದ್ದರೂ ಸಮರ್ಥವಾಗಿ ಸರಕಾರಗಳು ಬಳಸಿಕೊಳ್ಳದಿರುವುದೇ ವಿಪರ್ಯಾಸ. ಪ್ರವಾಸಿ ಸ್ಥಳಗಳಲ್ಲಿ ಸಮರ್ಪಕವಾದ ಮೂಲ ಸೌಕರ್ಯ ಇಲ್ಲದಿರುವುದು ಕಳಾಹೀನವಾಗಿಸಿವೆ. 

ಪ್ರವಾಸೋದ್ಯಮದಿಂದ ಸ್ಥಳೀಯ ಜನರಿಗೆ ಉದ್ಯೋಗಾವಕಾಶ, ಆರ್ಥಿಕ ಚಟುವಟಿಕೆ, ಸಂಪನ್ಮೂಲ ಕ್ರೋಢೀಕರಣ ಎಲ್ಲವೂ ಸಾಧ್ಯ. ಸರಕಾರದ ಬೊಕ್ಕಸಕ್ಕೂ ಅಪಾರ ಪ್ರಮಾಣದ ಹಣ ಹರಿದು ಬಂದೀತು. ಮುಂದಿನ ದಶಕವನ್ನು ಪ್ರವಾಸೋದ್ಯಮ ದಶಕ ಎಂದು ಪರಿಗಣಿಸಲಾಗುತ್ತಿದೆ.

ಆದಕಾರಣ ಸರಕಾರ ಈಗಿನಿಂದಲೇ ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈಗಾಗಲೇ ಗುರುತಿಸಿರುವ ಪ್ರವಾಸಿ ತಾಣಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ಜತೆಯಲ್ಲೇ ಪ್ರವಾಸಿಗರನ್ನು ಆಕರ್ಷಿಸುವ ಕೆಲಸವನ್ನೂ ಮಾಡಬೇಕು. ಇದರ ಜತೆಯಲ್ಲಿ ರಾಜ್ಯದಲ್ಲಿ ಇನ್ನೂ ಎಲೆಮರೆಯಲ್ಲೇ ಇರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಮುಂದಾಗಬೇಕು. ಇದರೊಂದಿಗೆ ಸರಕಾರ ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರ, ನೈಸರ್ಗಿಕ ಸಂರಚನೆ, ಸಂಸ್ಕೃತಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ತಾಣಗಳಲ್ಲಿ ಸ್ವಚ್ಛತೆ , ಪರಿಸರ ಸಂರಕ್ಷಣೆಯಂಥ ಮೂಲಪಾಠಗಳ ಅನುಷ್ಠಾನ ಮತ್ತು ಪಾಲನೆಗೆ ಪ್ರವಾಸಿಗರಲ್ಲೂ ಪಾಲ್ಗೊಳ್ಳುವಿಕೆಯ ಮನೋಭಾವವನ್ನು ಮೂಡಿಸುವುದು ಸರಕಾರದ ಆದ್ಯ ಕರ್ತವ್ಯ. ಇವೆಲ್ಲವೂ ಜತೆಗೂಡಿದಲ್ಲಿ ಮಾತ್ರ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾರ್ಗದರ್ಶಿ ಸ್ಥಾನದಲ್ಲಿ ನಿಲ್ಲಬಹುದು. 

Trending videos

Back to Top