CONNECT WITH US  

ಕಣ್‌ ತೆರೆದು ನೋಡಿ

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು!

ಚಿಂಪಾಂಜಿಗಳೂ ನಶೆ ಏರಿಸಿಕೊಳ್ಳುತ್ತವೆ

ಚಿಂಪಾಂಜಿಗಳು ಮನುಷ್ಯನನ್ನು ಹೋಲುವ ಪ್ರಾಣಿ. ಅವನ್ನು ನಮ್ಮ ಪೂರ್ವಜರು ಅಂತಲೂ ಕರೆಯಲಾಗುತ್ತೆ. ಅಂದರೆ ವಿಕಾಸ ಪಥದ ಹಾದಿಯಲ್ಲಿ ಯಾವುದೋ ಒಂದು ಹಂತದಲ್ಲಿ ಒಂದು ಪಂಗಡ ಮಾತ್ರ ವಿಕಸನಗೊಂಡವು. ಆದರೆ ಉಳಿದವು ಮಾತ್ರ ಹಾಗೆಯೇ ಉಳಿದುಕೊಂಡು ಬಿಟ್ಟವು. ಈ ಪ್ರಕ್ರಿಯೆ ನಡೆದು ಲಕ್ಷಾಂತರ ವರ್ಷಗಳೇ ಕಳೆದಿವೆ. ಹೀಗಿದ್ದೂ ಮನುಷ್ಯರಿಗೂ ಚಿಂಪಾಜಿಗಳಿಗೂ ಅನೇಕ ಸಾಮ್ಯತೆಗಳು ಈ ತನಕವೂ ಉಳಿದುಕೊಂಡುಬಿಟ್ಟಿದೆ. ಮನುಷ್ಯರು ನಶೆಯೇರಿಸಿಕೊಳ್ಳಲು ಮದ್ಯದ ಮೊರೆ ಹೋಗುವುದು ತಿಳಿದೇ ಇರುತ್ತೆ. ಅದೇ ರೀತಿ ಚಿಂಪಾಂಜಿಗಳು ನಶ್‌ ಏರಿಸಿಕೊಳ್ಳಲು ಮದ್ಯದ ಮೊರೆ ಹೋಗುತ್ತವೆ ಎನ್ನುವುದು ಆಶ್ಚರ್ಯವಾದರೂ ಸತ್ಯ. ಈ ವಿದ್ಯಮಾನ ಕಂಡುಬಂದಿರುವುದು ಗಿನಿಯಾದಲ್ಲಿರುವ ಚಿಂಪಾಂಜಿಗಳಲ್ಲಿ. ಹಾಗೆಂದ ಮಾತ್ರಕ್ಕೆ ಅವುಗಳು ಬಾಟಲಿಗಳಲ್ಲಿ ಮದ್ಯವನ್ನು ಕುಡಿಯುತ್ತವೆ ಎಂದು ತಿಳಿಯಬೇಡಿ. ಅವುಗಳು ಕುಡಿಯೋದು ತಾಳೆಮರದಲ್ಲಿ ಶೇಖರಣೆಗೊಳ್ಳುವ ದ್ರವ ತುಂಬಾ ಸಮಯದ ನಂತರ ಮದ್ಯವಾಗಿ ಪರಿವರ್ತಿತವಾಗುತ್ತದೆ. ಆಗ ಚಿಂಪಾಂಜಿಗಳು ಅವನ್ನು ಕುಡಿದು ಮತ್ತೇರಿಸಿಕೊಳ್ಳುತ್ತವೆ. ಈ ವಿಷಯದಲ್ಲಿ ಅವು ಮನುಷ್ಯರಿಗೂ ಕಂಪನಿ ಕೊಡಬಲ್ಲವು ಏನಂತೀರಾ?

ಕೈಗಳನ್ನು ಕ್ಲೀನ್‌ ಮಾಡಿಕೊಳ್ಳೋ ಕೋತಿ

ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕೇ ತಾನೇ ಬಾಯಾರಿಕೆಯಾಗದಿದ್ದರೂ ದಿನಕ್ಕೆ ಕನಿಷ್ಠ ಪಕ್ಷ 3 ಲೀ. ನೀರನ್ನು ಕುಡಿಯಬೇಕು ಎನ್ನುತ್ತಾರೆ ವೈದ್ಯರು. ನೀರು ಜೀವಜಲ ಭೂಮಿ ಮೇಲಿನ ಜೀವರಾಶಿ ಅವಲಂಬಿಸಿರುವುದೇ ನೀರನ್ನು. ನಮಗಂತೂ ನೀರಿಲ್ಲದ ಬದುಕನ್ನು ಊಹಿಸಿಕೊಳ್ಳಲಾಗುವುದೇ ಇಲ್ಲ. ನಮ್ಮೆ ದಿನನಿತ್ಯದ ಕೆಲಸಗಳಿಗೂ ನೀರು ಬೇಕು. ನಮ್ಮ ಮೈ ಕೈ ಸ್ವತ್ಛವಾಗಿರಿಸಿಕೊಳ್ಳಲು ನೀರು ಅತ್ಯವಶ್ಯ. ಮೈಕೈ ಸ್ವತ್ಛವಾಗಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ ವಿಚಾರವೊಂದು ಜೀವ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಅದೇನು ಅಂತ ತಿಳಿದರೆ ನೀವೂ ಮೂಗಿನ ಮೇಲೆ ಬೆರಳಿಡುವಿರಿ. ಕಪುಚಿನ್‌ ಎಂಬ ವಾನರ ಪ್ರಭೇದವೊಂದಿದೆ. ಅದರ ಕೈಗಳು ಗಲೀಜಾದಾಗ ಮನುಷ್ಯರಂತೆಯೇ ಕೈಗಳನ್ನು ಸ್ವತ್ಛಗೊಳಿಸಿಕೊಳ್ಳುತ್ತವೆ. ಅದಕ್ಕಾಗಿ ಅವುಗಳು ಉಪಯೋಗಿಸುವುದು ನೀರನ್ನಲ್ಲ, ಮೂತ್ರವನ್ನು! ಪ್ರಾಣಿಗಳ ಜಗತ್ತಿನಲ್ಲಿ ಕಪುಚಿನ್‌ ಕೋತಿಗಳನ್ನೇ ಸುಸಂಸ್ಕೃತ ಎಂದು ಬೇಕಾದರೂ ಕರೆಯಬಹುದು. 

ಮಹಾ ಕಿಲಾಡಿ ಈ ಪಕ್ಷಿ

ಈ ಪಕ್ಷಿ ಕಿಲಾಡಿ ಅಂದರೆ ಕಿಲಾಡಿ. ಅಪಾಯ ಬಂದಾಗ, ಇತರೆ ಪಕ್ಷಿಗಳು ತನ್ನ ಮೇಲೆ ಆಕ್ರಮಣ ನಡೆಸಲಿವೆ ಎಂದು ಗೊತ್ತಾದ ತಕ್ಷಣ ಈ ಪಕ್ಷಿ ಎನು ಮಾಡುತ್ತೆ ಗೊತ್ತಾ? ಹದ್ದಿನ ಸದ್ದನ್ನು ಅನುಕರಣೆ ಮಾಡುತ್ತೆ. ಅದನ್ನು ಕೇಳಿ ಎದುರಾಳಿ ಪಕ್ಷಿಗಳು ಸುತ್ತಲೆಲ್ಲೋ ಹದ್ದು ಹೊಂಚು ಹಾಕಿ ಹಾರಾಡುತ್ತಿದೆ ಎಂದು ಭಯಗೊಂಡು ದೂರಕ್ಕೆ ಹಾರಿಹೋಗುತ್ತವೆ. ಹದ್ದಿನ ಮಿಮಿಕ್ರಿ ಮಾಡುವ ಪಕ್ಷಿಯೇ ಬ್ಲೂ ಜೇ. ಸಿನಿಮಾಗಳಲ್ಲಿ ಈ ರೀತಿಯ ದೃಶ್ಯಗಳನ್ನು ನೋಡಿರಬಹುದು. ದುಷ್ಟರು ಆಕ್ರಮಣ ನಡೆಸುವ ಸಂದರ್ಭದಲ್ಲಿ ನಾಯಕ ಸೈರನ್‌ ಸದ್ದನ್ನು ಬಾಯಿಂದ ಹೊರಡಿಸುತ್ತಾನೆ. ಪೊಲೀಸರು ಬಂದರು ಎಂದುಕೊಂಡು ದುಷ್ಟರು ಅಲ್ಲಿಂದ ಕಾಲ್ಕಿಳುತ್ತಾರೆ. ಈ ಉಪಾಯವನ್ನು ಬುದ್ಧಿ ವಿಕಸನಗೊಂಡ ಮನುಷ್ಯರು ಮಾಡಿದರೆ ವಿಶೇಷ ಅನ್ನಿಸುವುದಿಲ್ಲ. ಆದರೆ ಒಂದು ಪಕ್ಷಿ ಈ ಉಪಾಯ ಮಾಡಿದ್ದು ಅದ್ಭುತ ಅನ್ನಿಸುತ್ತೆ. ಸೃಷ್ಟಿಯಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಇನ್ನೆಷ್ಟಿವೆಯೋ?!

ಹರ್ಷ

Trending videos

Back to Top