CONNECT WITH US  

ಕಣ್‌ ತೆರೆದು ನೋಡಿ

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು!

ಉಪಗ್ರಹಗಳು ಮಾಡುವ ಕೆಲಸವನ್ನು ಪ್ರಾಣಿಗಳು ಮಾಡುತ್ತವೆ!

ಮನುಷ್ಯ ತಾಂತ್ರಿಕವಾಗಿ ಎಷ್ಟೇ ಮುಂದಕ್ಕೆ ಸಾಗುತ್ತಿದ್ದರೂ, ಸುಧಾರಿತ ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಿದ್ದರೂ ಪ್ರಕೃತಿಯ ಮುಂದೆ ನಾವು ಶೂನ್ಯವೇ. ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಬ್ಬಬ್ಟಾ ಎಂದರೆ ವಿಕೋಪ ಘಟಿಸುವ ಮುನ್ನವೇ ತಿಳಿದುಕೊಳ್ಳಬಹುದಷ್ಟೇ. ಅದೂ, ಸ್ವಲ್ಪವೇ ಸಮಯಕ್ಕೆ ಮುಂಚಿತವಾಗಿ. ಈಗ ಇದಕ್ಕೆ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದ್ದೇವಷ್ಟೆ, ಬಹಳ ಹಿಂದೆ ಯಾವ ತಂತ್ರಜ್ಞಾನಗಳು ಇಲ್ಲದಿದ್ದ ಸಮಯದಲ್ಲಿ ಮನುಷ್ಯ ಪ್ರಾಕೃತಿಕ ವಿಕೋಪಗಳನ್ನು ಮುಂಚೆಯೇ ಪತ್ತೆಹಚ್ಚುತ್ತಿದ್ದನಂತೆ. ಪ್ರಕೃತಿಯೊಂದಿಗೆ ಉತ್ತಮ ಬಾಂಧವ್ಯ, ಸಂಬಂಧವಿದ್ದುದರಿಂದ ಅದು ಸಾಧ್ಯವಾಗಿತ್ತು. ಆದರೆ ಆ ಸಂಬಂಧದಿಂದ ಮನುಷ್ಯ ಎಷ್ಟೋ ದೂರ ಸಾಗಿ ಬಂದಿದ್ದಾನೆ. ಆದರೆ ಪ್ರಾಣಿಗಳಲ್ಲಿ ಈ ಬಾಂಧವ್ಯ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿಯೇ ಪ್ರಾಕೃತಿಕ ವಿಕೋಪಗಳನ್ನು ಮುಂಚಿತವಾಗಿಯೇ ಕಂಡುಹಿಡಿಯಬಲ್ಲವು. 

ಚೀನಾದ ನಾನಿಂಗ್‌ ಎಂಬ ಪ್ರಾಂತ್ಯದಲ್ಲಿ ಭೂಕಂಪ ಸರ್ವೇಸಾಮಾನ್ಯ. ಅಲ್ಲಿನ ವಿಜ್ಞಾನಿಗಳು ಭೂಕಂಪವನ್ನು ಮುಂಚಿತವಾಗಿ ಗ್ರಹಿಸಲು ಹೊಸದೊಂದು ಮಾರ್ಗವನ್ನು ಕಂಡುಹಿಡಿದಿದ್ದಾರೆ. ಹೊಸ ಉಪಕರಣವನ್ನು ಆವಿಷ್ಕರಿಸಿರಬಹುದು ಎಂದುಕೊಂಡರೆ ನಿಮ್ಮ ಉತ್ತರ ತಪ್ಪಾಗುತ್ತದೆ. ಅಲ್ಲಿನ ವಿಜ್ಞಾನಿಗಳು ಹಾವುಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಹಾವು ಮಾತ್ರ ಅಲ್ಲ, ಆನೆ, ಜಿಂಕೆ ಮುಂತಾದ ಪ್ರಾಣಿಗಳ ಮೇಲೂ ನಿಗಾ ವಹಿಸಿದ್ದಾರೆ. ಇದಕ್ಕಾಗಿ ಸುಮಾರು 143 ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ. ಅವರ ಸಂಶೋಧನೆಯ ಪ್ರಕಾರ ಹಾವುಗಳು ಭೂಕಂಪವನ್ನು ಹೆಚ್ಚೆಂದರೆ 5 ದಿನಗಳಿಗೂ ಮುಂಚಿತವಾಗಿಯೇ ಗ್ರಹಿಸುತ್ತವಂತೆ. ಈ ಸಮಯದಲ್ಲಿ ಅವು ವಿಚಿತ್ರವಾಗಿ ವರ್ತಿಸಲು ಶುರುಮಾಡುತ್ತವಂತೆ. ಹೊರಗಡೆ ಚಳಿ ಇದ್ದರೂ ಗೂಡಿನಿಂದ ಹೊರಬರುವುದು, ಹರಿದಾಡುವ ರಭಸದಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆಯುತ್ತಾ ಇರುವುದು... ಇನ್ನೂ ಹಲವು ವಿಚಿತ್ರ ಸ್ವಭಾವಗಳನ್ನು ವಿಜ್ಞಾನಿಗಳು ಪಟ್ಟಿ ಮಾಡಿದ್ದಾರೆ. ಹವಾಮಾನವನ್ನು, ವಾತಾವರಣದ ಮೇಲೆ ನಿಗಾ ಇಡಲು ಅಂತರಿಕ್ಷಕ್ಕೆ ಉಪಗ್ರಹಗಳನ್ನು ಹಾರಿಬಿಡುವ ಕಾಲದಲ್ಲಿ ನಾವು ಅದೇ ವಿಷಯವಾಗಿ ಪ್ರಾಣಿಗಳ ಮೇಲೆ ಅವಲಂಬಿತರಾಗಿರುವುದು ಸೋಜಿಗವಲ್ಲವೇ?!

ಸಂಗಾತಿಯನ್ನು ಆಕರ್ಷಿಸಲು ಸೆಂಟು ಹಾಕುತ್ತೆ

ಸುಗಂಧದ ಕುರಿತು ನಮಗಿರುವ ಕಾಳಜಿಯ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಮಾರುಕಟ್ಟೆಯಲ್ಲಿರುವ ಥರಹೇವಾರಿ ಸುಗಂಧದ್ರವ್ಯಗಳತ್ತ ಕಣ್ಣು ಹಾಯಿಸಿದರೆ ಸಾಕು. ನಾವು ಯಾರ ಹತ್ತಿರ ಹೋದರೂ ನಮ್ಮ ಸುತ್ತ ಚೆನ್ನಾದ ಸುವಾಸನೆ ಗಾಳಿಯಲ್ಲಿ ಹರಡಬೇಕು. ಇನ್ನೊಬ್ಬರು ತಮ್ಮ ಸುವಾಸನೆಯನ್ನು ಮೆಚ್ಚಿ ತಲೆದೂಗಬೇಕು. ಇಂಥ ಆಸೆಯನ್ನು ಮನುಷ್ಯರು ಮಾತ್ರವೇ ಇಟ್ಟುಕೊಳ್ಳಬಲ್ಲರು ಎಂದುಕೊಂಡರೆ ಮತ್ತೂಮ್ಮೆ ಯೋಚಿಸಿ ಹೇಳಿ. ಏಕೆಂದರೆ ತಾವು ಚೆನ್ನಾಗಿ ಸುವಾಸನೆ ಬೀರಬೇಕೆಂದುಕೊಳ್ಳುವವರಲ್ಲಿ ಮನುಷ್ಯರು ಮಾತ್ರವೇ ಅಲ್ಲ, ಆಡುಗಳೂ ಇವೆ.  ಮನುಷ್ಯರು ಕಂಕುಳ ಕೆಳಗೆ, ಕೈಗಳಿಗೆ, ಕುತ್ತಿಗೆ ಬಳಿ ಸುಗಂಧ ದ್ರವ್ಯ ಪೂಸಿಕೊಳ್ಳುವಂತೆ ಆಡುಗಳು ಸುಗಂಧ ದ್ರವ್ಯವನ್ನು ತಮ್ಮ ತಲೆಯ ಮೇಲೆ ಪೂಸಿಕೊಳ್ಳುತ್ತವಂತೆ. ಇಷ್ಟಕ್ಕೂ ಸಂಗಾತಿಯನ್ನು ಆಕರ್ಷಿಸಲು ಅವುಗಳು ತಮ್ಮ ತಲೆಯ ಮೇಲೆ ಪೂಸಿಕೊಳ್ಳುವ ಆ ದ್ರವ್ಯ ಯಾವುದೆಂದು ತಿಳಿದರೆ ನಾವು ನೀವು ಮೂಗುಕೊಳ್ಳಬೇಕಾದೀತು. ಏಕೆಂದರೆ ಅವು ಮೂತ್ರವನ್ನೇ ಸುಗಂಧ ದ್ರವ್ಯದಂತೆ ಪೂಸಿಕೊಳ್ಳುವುದು. ನಾವು ಮನುಷ್ಯರು ಗಮನಿಸಬೇಕಾದ ಒಂದು ವಿಚಾರ ಇಲ್ಲಿದೆ. ಆಡುಗಳು ಮೂತ್ರವನ್ನು ಪೂಸಿಕೊಳ್ಳುವುದು ಮನುಷ್ಯರನ್ನು ಆಕರ್ಷಿಸಲು ಅಲ್ಲ, ಅದರ ಸಂಗಾತಿಗೆ ಅದು ಸುವಾಸನೆಯೇ!  

ಹರ್ಷ


Trending videos

Back to Top