CONNECT WITH US  

ಬರಕ್ಕೆ ದನಿಯಾದ ಕ್ಷಾಮ ಡಂಗುರ 

ಮಳೆಯಲ್ಲಿ ನೀರಿನ ಧ್ಯಾನ ಶುರುವಾಗಬೇಕು. ಮಣ್ಣು, ಬೆಳೆ ವಿಧಾನ, ನೀರಿನ ಬಳಕೆ ಗಮನಿಸಿಕೊಂಡು ನೀರಿನ ಆಡಿಟ್‌ ಮಾಡಿದರೆ ನಾವು ಕನ್ನ ಹಾಕುತ್ತಿರುವ ಅಂತರ್ಜಲ ಸಂಪತ್ತಿನ ಸ್ಥಿತಿ ಗೊತ್ತಾಗುತ್ತದೆ. ಹಳಿತಪ್ಪಿದ ಕೃಷಿ ಸೂತ್ರಗಳು ಅರ್ಥವಾಗುತ್ತವೆ. 

""ಗುಡ್ಡವನ್ನು ಬೋಳಿಸಬೇಕು. ಕಡಿದಾದ ನೆಲೆಯಲ್ಲಿ ಸ್ವಲ್ಪವೂ ಮಳೆ ನೀರು ನಿಲ್ಲದಂತೆ, ಮರ ಗಿಡ ಬೆಳೆಯದಂತೆ ಜಾಗೃತಿ ವಹಿಸಬೇಕು. ಒಮ್ಮೆ ನೈಸರ್ಗಿಕವಾಗಿ ಗಿಡ ಬೆಳೆದರೂ ಕತ್ತರಿಸಿ ನಾಶ ಪಡಿಸಬೇಕು. ಬೇಸಿಗೆಯಲ್ಲಿ ಗುಡ್ಡಕ್ಕೆ ಬೆಂಕಿ ಹಾಕುವುದರಿಂದ ಗಿಡಗಳು ನಾಶವಾಗಿ, ಮಣ್ಣಿನ ಸವಕಳಿಗೆ ಅನುಕೂಲವಾಗುತ್ತದೆ. ಇದರಿಂದ ಮಳೆಗಾಲದಲ್ಲಿಯೂ ಸ್ವಲ್ಪ ಮಳೆ ಸುರಿಯದೇ ನಮ್ಮ ನಾಡನ್ನು ಅತ್ಯುತ್ತಮ ಮರುಭೂಮಿಯಾಗಿ, ಜಲಕ್ಷಾಮದ ನಾಡಾಗಿ ಬೆಳೆಸಬಹುದು. ಭೂಮಿಯಲ್ಲಿ ಮನುಷ್ಯ ಮಾತ್ರ ಬದುಕಬೇಕು. ಕೋಣ, ಹುಲಿ, ಜಿಂಕೆ ಇವುಗಳಿಗಾಗಿ ಕಾಡು ಉಳಿಸುವುದರಲ್ಲಿ ಅರ್ಥ(?)ವೇ ಇಲ್ಲ!.''

ಈ ಪ್ಯಾರಾದ ವಾಕ್ಯಗಳನ್ನು ಓದುತ್ತಿದ್ದಂತೆ ಆತಂಕದ ಪ್ರಶ್ನೆಗಳು ಗೂಡು ಕಟ್ಟಲು ಆರಂಭಿಸುತ್ತವೆ. ಇದನ್ನು ಸಾಮಾಜಿಕ ಜಾಲತಾಣದ ಗೋಡೆಯಲ್ಲಿ ಅಂಟಿಸಿದ ಶಿವಾನಂದ ಕಳವೆ ಹೇಳುತ್ತಾರೆ, ""ಬಹು ಕಾಲದಿಂದ ಕನ್ನಾಡಿನ ನೀರಿನ ಯೋಧರು ನೆಲ, ಜಲ ಸಂರಕ್ಷಣೆಯ ಕುರಿತು ಅರಿವಿನ ದನಿಯನ್ನು ಎಬ್ಬಿಸುತ್ತಾ  ಬಂದಿದ್ದಾರೆ. ಬೇಸಿಗೆ ಬಂದಾಗ ಮಾತ್ರ ಜನರು ನೀರಿಗೆ ದನಿಯಾಗುತ್ತಾರೆ. ಮಳೆಗಾಲ ಬಂದಾದ ಮತ್ತದೇ ಆಕಳಿಕೆ. ನೀರಿನ ಪಾಠ ಕೇಳಿಸಿಕೊಂಡವರು, ನೀರಿನ ಅಗತ್ಯವನ್ನು ಮನಗಂಡ ಹಲವಾರು ಮಂದಿಯ ಆಲಸ್ಯ ನೋಡಿ ಹೀಗನ್ನದೆ ಹೇಗನ್ನಲಿ?'' ಕಾಲು ಶತಮಾನದಿಂದ ಕಳವೆ ಸೇರಿದಂತೆ ಕನ್ನಾಡಿನ ಜಲಯೋಧರು ಜಲಸಂರಕ್ಷಣೆಯ ವಿಧಾನಗಳನ್ನು ಜನಮನದಲ್ಲಿ ಬಿತ್ತುತ್ತಾ ಬಂದವರು.

ಕನ್ನಾಡಿನಾದ್ಯಂತ ಓಡಾಡಿ ಬರದ ಸ್ಥಿತಿಯನ್ನು ಕಳವೆ ದಾಖಲಿಸುತ್ತಾರೆ. ಇದುವರೆಗೆ ಕಾಣದಂತಹ ನೀರಿನ ಬರವನ್ನು ಅನುಭವಿಸಬೇಕಾದ ದುಃಸ್ಥಿತಿಯನ್ನು ವಿವರಿಸುತ್ತಾರೆ. ಈಚೆಗೆ ಪ್ರಕಟವಾದ ಅವರ "ಕ್ಷಾಮ ಡಂಗುರ' ಕನ್ನಾಡಿನ ನೀರಿನ ಬರಕ್ಕೆ ಕನ್ನಡಿಯಾಗಿ ನಮ್ಮೆದುರಿಗಿದೆ. ಒಂದು ಲೋಟ ಕುಡಿಯುವ ನೀರಿಗೂ ಪರಿತಪಿಸಬೇಕಾದ ಬದುಕಿಗೆ ಕನ್ನಾಡಿನ ಗ್ರಾಮೀಣತೆ ವಾಲಿದೆ. ಕೋಟಿಗಟ್ಟಲೆ ಅನುದಾನದ‌ ಫೈಲ್‌ಗ‌ಳು ಮಂಜೂರುಗೊಳ್ಳುತ್ತಿದ್ದರೂ, ಫ‌ಲಾನುಭವಿಗೆ ತಲುಪುವ ಹೊತ್ತಿಗೆ ಬರಿದಾಗಿರುತ್ತವೆ! 

ಬರದ ತಾಜಾ ಸ್ಥಿತಿಗೆ ಕಳವೆ ಎದುರಿದ್ದಾರೆ. ಅವರು ದಾಖಲಿಸಿದ "ಕ್ಷಾಮ ಡಂಗುರ' ಕೈಯಲ್ಲಿದೆ. ಓದುತ್ತಿದ್ದಂತೆ ಕೈ ನಡುಗುತ್ತದೆ. ನಾಲಗೆಯ ಪಸೆ ಆರುತ್ತದೆ. ನಮ್ಮ ಆಡಳಿತ ವ್ಯವಸ್ಥೆಗಳು ಕಳವೆಯವರ ವರದಿಯನ್ನು ಒಪ್ಪದಿರಬಹುದು. ಯಾಕೆ ಹೇಳಿ, ಯಾವುದೇ ಫ‌ಂಡಿನ ಹಿಂದೆ ಅವರು ಹೋಗಿಲ್ಲ! ಹಾಗಾಗಿ ಧೈರ್ಯದಿಂದ ವಾಸ್ತವವನ್ನು ಹೇಳಲು ಸಾಧ್ಯವಾಗಿದೆ, ""ಬರದ ನೆಲ ಸುತ್ತಾಡಿ ಬರಹಕ್ಕೆ ಕುಳಿತಿದ್ದೆ. ಯಾರಿಗಾಗಿ ಬರೆಯಬೇಕು? ಪ್ರಶ್ನೆ ಎದುರಿದೆ. ಮಳೆ ಸುರಿಯಲು ಆರಂಭವಾದ ತತ್‌ಕ್ಷಣ ಜಲಕ್ಷಾಮದ ಕಷ್ಟಗಳನ್ನು ಜನ ಮರೆತಿರಬಹುದು. ಬೇಸಿಗೆಯಲ್ಲಿ ಭರ್ತಿ ಟ್ಯಾಂಕರ್‌ ನೀರಿನಲ್ಲಿ ಜೀವ ಉಳಿಸಿಕೊಂಡವರು ಸುರಿಯುವ ಮಳೆ ನೀರು ಹಿಡಿಯಲು ಮುಂದಾಗುತ್ತಿಲ್ಲ. ಆಡಳಿತವಂತೂ ಜಲಸಂರಕ್ಷಣೆಯ ಕಾರ್ಯಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಎಲ್ಲರಿಗೂ ಟ್ಯಾಂಕರ್‌ ನೀರು ಇಷ್ಟವೆಂಬಂತೆ ವರ್ತನೆ ಕಾಣಿಸುತ್ತಿದೆ. ಬರ ಬಂದಿದ್ದೂ ಭೂಮಿಗಷ್ಟೇ ಅಲ್ಲ, ರಚನಾತ್ಮಕ ಕಾರ್ಯಕ್ಕೂ ಅವರಿಸಿದೆ.''

ಒಂದೆಡೆ ಕಾಡಿಗೆ ಅವಿರತ ಕಿಚ್ಚು. ಮತ್ತೂಂದೆಡೆ ಹಸಿರು ಕೊಡೆಗಳಿಗೆ ಮಚ್ಚು. ಒಂದೆರಡು ದಿವಸಗಳಲ್ಲಿ ಮಳೆ ಎಂದು ಪತ್ರಿಕೆಯಂಚಿನ ವರದಿ ಕಂಡಾಗ ಆಗುವ ಪುಳಕಕ್ಕೆ ಕೋಟಿ ಮೌಲ್ಯವೂ ಕಡಿಮೆ. ಕಲಬುರ್ಗಿಯ ಉಷ್ಣಾಂಶವನ್ನು ಕಳವೆ ವಿವರಿಸುವುದು, ""ಹೀಗೆ ರಾತ್ರಿ ವಿದ್ಯುತ್‌ ಹೋದಾಗ ಕಿಟಕಿಯಲ್ಲಿ ಹಚ್ಚಿಟ್ಟ ಮೇಣದ ಬತ್ತಿ ಮರುದಿವಸ ಮಧ್ಯಾಹ್ನ ನಾಪತ್ತೆ! ಇನ್ನೂ ಅರ್ಧ ಉರಿಯದ ಅದು ಕಿಟಕಿಯಲ್ಲಿ ನಿಂತಿದ್ದನ್ನು ಬೆಳಿಗ್ಗೆ ಗಮನಿಸಿದವರಿಗೆ ಯಾರೋ ಕದ್ದೊಯ್ದಿರುವ ಅನುಮಾನ ಕಾಡುವುದು ಸಹಜ. ಆದರೆ ನಲವತ್ತನಾಲ್ಕು ಡಿಗ್ರಿ ಉಷ್ಣಾಂಶ ಅಳೆಯಲು ಇಲ್ಲಿ ಮೇಣದಬತ್ತಿಯೇ ಮಾಪಕ. ಬಿಸಿಲಿನ ಝಳಕ್ಕೆ ಮನೆಯೊಳಗಿನ ಮೇಣದ ಬತ್ತಿ ಕರಗಿ ಕಟ್ಟಕಡೆಗೆ ಅದರ ದಾರ ಮಾತ್ರ ಉಳಿಯುತ್ತದೆಂದರೆ ಬಿಸಿಲಿನ ತಾಪದ ಪ್ರಮಾಣ ಅರ್ಥವಾಗಬಹುದು.'' 

ಈ ಮಧ್ಯೆ ಚಿತ್ರದುರ್ಗದ ಜಲತಜ್ಞ ದೇವರಾಜ ರೆಡ್ಡಿ ನೀರಿನ ಕತೆಯ ಪುಟವನ್ನು ತೆರೆಯುತ್ತಾರೆ, ""ಚಿತ್ರದುರ್ಗದ ಯಾವ ಹಳ್ಳಿಗೆ ಹೋದರೂ ಕೊಳವೆ ಬಾವಿ ಕೊರೆಯುವ ದೃಶ್ಯ ಸಹಜ. ಕೊರೆಯಂತ್ರಕ್ಕೆ ಬೇಸಿಗೆ, ಮಳೆಗಾಲದ ವ್ಯತ್ಯಾಸವಿಲ್ಲ. ಕೋಲಾರದಲ್ಲಿ ಅತಿ ಹೆಚ್ಚು ಕೊಳವೆ ಬಾವಿಗಳಿವೆ ಎಂದು ಗುರುತಿಸುತ್ತಿದ್ದೆವು. ಈಗ ಚಿತ್ರದುರ್ಗವಷ್ಟೇ ಅಲ್ಲ, ಕರಾವಳಿಯ ಉಡುಪಿಯಲ್ಲಿ ಒಂದು ಸಾವಿರ ಇನ್ನೂರು ಅಡಿ ಬಾವಿ ಕೊರೆದ ಉದಾಹರಣೆಗಳಿವೆ. ಮಲೆನಾಡಿನಲ್ಲಿ ತೆಗೆದ ಬಾವಿಗಳಲ್ಲಿ ಶೇ.20ರಷ್ಟು ಬಾವಿಗಳೂ ನೀರು ನೀಡುತ್ತಿಲ್ಲ. ಬರ ಪ್ರವಾಹಕ್ಕೆ ಭಯಗೊಂಡವರು ಕೊಳವೆ ಬಾವಿಗೆ ಮೊರೆ ಹೋಗುತ್ತಿದ್ದಾರೆ.''

ಮಲೆನಾಡು, ಕರಾವಳಿಯ ಹಳ್ಳಿಗಳಲ್ಲಿ ಶಿವಾನಂದ ಕಳವೆ ಓಡಾಡಿದ್ದಾರೆ. ಸುಮಾರು ಹದಿನೆಂಟು ವರುಷಗಳಿಂದ ನೀರಿನ ಯೋಜನೆಗಳ ಫ‌ಲಾಫ‌ಲವನ್ನು ನೋಡಿದ್ದಾರೆ, ""ಕುಡಿಯುವ ನೀರಿನ ಬೃಹತ್‌ ಯೋಜನೆಗಳಿಗೆ ಕೋಟಿ ಕೋಟಿ ಹಣ ಖರ್ಚು ಮಾಡುವ ನಾವು ಮಳೆನೀರು ಉಳಿಸಲು ಒಂದು ರೂಪಾಯಿ ವ್ಯಯಿಸಿಲ್ಲ. ಕೆರೆಗಳ ಹೂಳು ತೆಗೆಯುವ, ಅತಿಕ್ರಮಣ ಬಿಡಿಸುವ ಸಾಹಸಕ್ಕೆ ಮುಂದಾಗಿಲ್ಲ. ನೀರಿನ ಬಳಕೆ ಹೆಚ್ಚಿಸುತ್ತ ಕೋಟಿ ರೂಪಾಯಿ ಯೋಜನೆಗಳಿಂದ ಎಲ್ಲರಿಗೂ ನೀರು ನೀಡುತ್ತೇವೆಂದು ಹೇಳುತ್ತಾ ಬಂದಿದ್ದೇವೆ. ಸಾಲು ಸಾಲು ಯೋಜನೆಗಳು ಸೋತ ಬಳಿಕವೂ ಮತ್ತದೇ ಕಾಯಕದಲ್ಲಿ ಮುಳುಗಿದ್ದೇವೆ. ಮಲೆನಾಡಿನ ಒಂದು ಎಕರೆಯಲ್ಲಿ ಎಪ್ಪತ್ತು ಲಕ್ಷದಿಂದ ಒಂದು ಕೋಟಿ ಲೀಟರ್‌ ಮಳೆ ನೀರು ಸುರಿಯುತ್ತದೆ. ಇವನ್ನು ಗುಡ್ಡದ ಕೆರೆಗಳಲ್ಲಿ ಹಿಡಿಯುವ ತಂತ್ರ ಅನುಸರಿಸದೇ ಮಲೆನಾಡಿನ ಜಲಭವಿಷ್ಯ ರೂಪಿಸಲು ಖಂಡಿತ ಸಾಧ್ಯವಿಲ್ಲ.''

ಮರಗಳ ಕಡಿತಲೆಗೆ ಆದೇಶವಾದರೆ ಇಡೀ ಮರವನ್ನು ನುಂಗುವ ಮಂದಿಯನ್ನು ಕನ್ನಾಡು ನೋಡಿದೆ. ಬಯಲು ಸೀಮೆಯ ಮರದ ಕುರಿತ ಮನಃಸ್ಥಿತಿ ನೋಡಿ - ಬಯಲು ಸೀಮೆಗೆ ಹಸಿರು ಬೆಳೆಸಲು ಬಂದ ಐನೂರ ಅರುವತ್ತೆçದು ಕೋಟಿ ರೂಪಾಯಿಯ ಜಪಾನ್‌ ನೆರವಿನ ಯೋಜನೆ ಮುಗಿದು ದಶಕಗಳಾಗಿವೆ. ಯೋಜನೆಯಲ್ಲಿ ಬೆಳೆಸಿದ ಸಸ್ಯಗಳೂ ಎಷ್ಟು ಮರವಾಗಿ ಉಳಿದಿವೆ? ಅವಲೋಕನ ನಡೆಯಬೇಕು. ನೀರಾವರಿ ಕ್ಷೇತ್ರಗಳಲ್ಲಿ ಕಬ್ಬು, ಭತ್ತ ಬಿಟ್ಟರೆ ಬೇರೆ ಬೆಳೆಯಿಲ್ಲ. ಭೂಮಿಗೆ ನೀರು ನಿಂತ ಬಳಿಕ ಬೇವು, ಕರಿಜಾಲಿಗಳು ಸಾವನ್ನಪ್ಪಿವೆ. ಮರವಿದ್ದರೆ ಇಳುವರಿ ಕಡಿಮೆಯಾಗುತ್ತದೆಂದು ಸತಃ ರೈತರೇ ಕಡಿದಿದ್ದಾರೆ. ಜಲಾಶಯ, ಕಾಲುವೆ ನಿರ್ಮಾಣಕ್ಕೆ ಅಪಾರ ಪ್ರಮಾಣದ ಅರಣ್ಯ ನಾಶ ಮಾಡಿದ್ದೇವೆ. ಬರದ ನೋವಿನಲ್ಲಿ ಮರದ ಬೆಲೆ ತಿಳಿಯದಿದ್ದರೆ ಹೇಗೆ?

ಕನ್ನಾಡಿನ ಎಲ್ಲ ಹಳ್ಳಿಗಳ ನೋವು -ಒಂದೇ ನೀರಿಲ್ಲ. ಇದಕ್ಕೆ ಪರಿಹಾರವಿಲ್ವೇ? ಕಳವೆ ಹೇಳುತ್ತಾರೆ, ""ಪರಿಹಾರ ಇಲ್ಲದೆ ಏನು? ಲಕ್ಷ ಲಕ್ಷ ಲೀಟರ್‌ ಮಳೆನೀರು ಹೊಲ, ಕಾಡುಗಳಲ್ಲಿ ಸುರಿಯುತ್ತಿದ್ದರೂ ಅದನ್ನು ಶೇಖರಿಸಲು ಪಾತ್ರೆಗಳಿಲ್ಲದ ಬಡತನ ನಮ್ಮದು. ರಾಜ ಮಹಾರಾಜರು ಮಾಡಿಸಿದ ಕೆರೆಗಳನ್ನು ಸುಸ್ಥಿತಿಯಲ್ಲಿಡಲಿಲ್ಲ. ಹೊಸ ಕೆರೆಗಳನ್ನು ಮಾಡಿಸಲಿಲ್ಲ. ಕೊಳವೆ ಬಾವಿ ಕೊರೆಸುತ್ತಾ ನೀರಿನ ಬಳಕೆ ಜಾಸ್ತಿ ಮಾಡುತ್ತಾ ಹೋದರೆ ಮುಂದೇನು? ಮಳೆಯಲ್ಲಿ ನೀರಿನ ಧ್ಯಾನ ಶುರುವಾಗಬೇಕು. ನಮ್ಮ ಮಳೆ, ಮಣ್ಣು, ಬೆಳೆ ವಿಧಾನ, ನೀರಿನ ಬಳಕೆ ಗಮನಿಸಿಕೊಂಡು ನೀರಿನ ಆಡಿಟ್‌ ಮಾಡಿದರೆ ನಾವು ಕನ್ನ ಹಾಕುತ್ತಿರುವ ಅಂತರ್ಜಲ ಸಂಪತ್ತಿನ ಸ್ಥಿತಿ ಗೊತ್ತಾಗುತ್ತದೆ. ಹಳಿತಪ್ಪಿದ ಕೃಷಿ ಸೂತ್ರಗಳು ಅರ್ಥವಾಗುತ್ತವೆ. ಹೊಲದ ಬದುವಿನಲ್ಲಿ ಮರ ಬೆಳೆಸಿ, ಐದಾರು ಎಕರೆಗೊಂದು ವಿಶಾಲ ಕೆರೆ ರೂಪಿಸುವ ಸಂಕಲ್ಪದಿಂದ ಕಾರ್ಯೋನ್ಮುಖರಾದರೆ ಬರವನ್ನು ಗೆಲ್ಲಬಹುದು.'' "ಕ್ಷಾಮ ಡಂಗುರ' ಪುಸ್ತಕವು ಕನ್ನಾಡಿನ ನೀರಿನ ಬರದ ವಾಸ್ತವ ಸ್ಥಿತಿಗೆ ಕನ್ನಡಿ.

ಮಾಜಿ ರಾಷ್ಟ್ರಪತಿ ಕೀರ್ತಿಶೇಷ ಡಾ| ಅಬ್ದುಲ್‌ ಕಲಾಂ 2070ರಲ್ಲಿ ಬರೆದ ಒಂದು ಪತ್ರ (ಊಹೆ) ಬರಹ ಮತ್ತು ಈ ವಿಚಾರದ ವೀಡಿಯೋದಲ್ಲಿ ನೀರಿನ ಪರಿಸ್ಥಿತಿ ಎಪ್ಪತ್ತನೇ ಇಸವಿಗಾಗುವಾಗ ಎಲ್ಲಿಗೆ ತಲುಪಹುದೆಂದು ಊಹಿಸಿ ಹೇಳಿದ್ದರು. ನೀರಿರುವ ಸ್ಥಳಗಳನ್ನು ಸಶಸ್ತ್ರ ಯೋಧರು ಕಾವಲು ಕಾಯುತ್ತಿದ್ದಾರೆ. ನೀರು ಚಿನ್ನ ಮತ್ತು ವಜ್ರಕ್ಕಿಂತ ಅಪರೂಪದ ವಸ್ತು. ಒಂದು ಕೊಡ ನೀರಿಗಾಗಿ ಬೀದಿಗಳಲ್ಲಿ ಯುದ್ಧಗಳೇ ಆಗುತ್ತದೆ ಎಂದು ಬಣ್ಣಿಸಿದ್ದರು. 2070 ಹಾಗಿರಲಿ, ಈಗಲೇ ಇಂತಹ ಘಟನೆಗಳು ರಾಜ್ಯದಲ್ಲಿ ಘಟಿಸಲು ಆರಂಭವಾಗಿವೆ.

ನಾ. ಕಾರಂತ ಪೆರಾಜೆ


Trending videos

Back to Top