CONNECT WITH US  

ಇಂಥದ್ದೆಲ್ಲ ನಡೆಯೋಕೆ ಸಾಧ್ಯವೇ ಇಲ್ಲಿ? 

ಸರಕಾರಿ ಶಾಲೆಗೆ ಜನಪ್ರತಿನಿಧಿಗಳ ಮಕ್ಕಳು..!

ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳ ಕೈಯಲ್ಲಿವೆ. ಜನಹಿತಕ್ಕಾಗಿ ಅವರು ಸ್ವಹಿತ ಬಲಿಕೊಡಲು ಸಿದ್ಧರಿರುವರೆ? ಸರ್ಕಾರಿ ಶಾಲೆಗಳ ಸಬಲೀಕರಣವು ಖಾಸಗಿ ಶಾಲೆಗಳಿಗೆ ಅಡ್ಡಿಯಾಗುವ ಸಂಭವವಿದೆ. ಹಾಗಾಗಿ ಹೊಸ ಕಾಯ್ದೆ ರೂಪಿಸಲು ಉದ್ದೇಶಿಸಿರುವ ಸರ್ಕಾರವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಜನಪ್ರತಿನಿಧಿಗಳು ಬೆಂಬಲಿಸುವರೆ?

ಆರ್‌ಟಿಇ ಜಾರಿಗೊಂಡ ಮೇಲೆ ಖಾಸಗಿ ಶಾಲೆಗಳು ಬೆಳೆಯುತ್ತಿವೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದನ್ನು ಕಡ್ಡಾಯಗೊಳಿಸುವ ವಿಧೇಯಕ ಸಿದ್ಧಪಡಿಸಿ ಮುಂದಿನ ವಿಧಾನಸಭಾ ಅಧಿವೇಶನದಲ್ಲೇ ಕಾನೂನು ರೂಪಿಸಲು ಸರಕಾರ ಉದ್ದೇಶಿಸಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಅಪೇಕ್ಷಣೀಯ. ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿದರೆ ಆ ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚುವುದು. ಅಲ್ಲಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗುವುದು ಎಂಬುದು ಈ ಚಿಂತನೆಯ ಹಿಂದಿರುವ ನಿರೀಕ್ಷೆ. ಆದರೆ ಇಂಥದ್ದೆಲ್ಲಾ ನಡೆಯಲು ಸಾಧ್ಯವೇ ಇಲ್ಲಿ ಎಂಬುದೇ ಪ್ರಶ್ನೆ. 

ವೈದ್ಯ ವಿಧೇಯಕ
ಖಾಸಗಿ ಶಾಲೆಗಳನ್ನು ಬೆಳೆಸುತ್ತಿರುವ ಆರ್‌ಟಿಇಗೆ ಕಡಿವಾಣ ಹಾಕಲು ಮುಂದಾದ ಹಾಗೆ ಈ ಹಿಂದೆ ಖಾಸಗಿ ವೈದ್ಯರು ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೂ ಕಡಿವಾಣ ಹಾಕಲು ಸರ್ಕಾರ ಚಿಂತೆನೆ ನಡೆಸಿತ್ತು. ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮಂಡನೆಗೆ ಮುಂದಾಗಿತ್ತು. ಇದನ್ನು ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ ನಡೆದು 60ಕ್ಕೂ ಅಧಿಕ ಜನರ ಸಾವು ಸಂಭವಿಸಿತು. ಆರಂಭದಲ್ಲಿ ವಿಧೇಯಕ ಮಂಡಿಸಿದ್ದ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಬದ್ಧತೆ ಮೆರೆದರು. ವಿಧೇಯಕ ವಾಪಸಾತಿಯ ಪ್ರಶ್ನೆಯೇ ಇಲ್ಲವೆಂದು ಪಟ್ಟು ಹಿಡಿದರು. ಮುಷ್ಕರ ಬಿಗಿಗೊಳ್ಳುತ್ತಾ ಹೋದಂತೆಲ್ಲ ಸಚಿವರ ನಿಲುವು ಸಡಿಲವಾಗತೊಡಗಿತು. ಖಾಸಗಿ ವೈದ್ಯಕೀಯ ಸಂಸ್ಥೆಗಳೊಂದಿಗೆ ಸಂಧಾನ ನಡೆದು ತಿದ್ದುಪಡಿ ಯೊಂದಿಗೆ ವಿಧೇಯಕ ವಿಧಾನಸಭೆಯಲ್ಲಿ ಮತ್ತೆ ಮಂಡನೆ ಗೊಂಡಿತು. ವೈದ್ಯರ ಬೇಡಿಕೆಯಂತೆ ಜೈಲು ಶಿಕ್ಷೆ ಹಾಗೂ ಸಂಪೂರ್ಣ ದರ ನಿಗದಿ ಪ್ರಸ್ತಾವಗಳನ್ನು ಕೈಬಿಡಲಾಯಿತು. ಜನಪರ ವಿಧೇಯಕವಾಗಿದ್ದರೂ ಅಂದುಕೊಂಡಂತೆ ಆಗಲಿಲ್ಲ. ಕಾರಣವಿಷ್ಟೆ ಬಹುತೇಕ ಖಾಸಗಿ ವೈದ್ಯಕೀಯ ಸಂಸ್ಥೆಗಳು ರಾಜಕಾರಣಿಗಳಿಗೆ ಸೇರಿದ್ದು. ಮುಖ್ಯಮಂತ್ರಿಗಳ ಸುಪುತ್ರರೇ ಖಾಸಗಿ ವೈದ್ಯರು. ವಿಧೇಯಕದ ಹೆಸರಲ್ಲಿ ಯಾರೇ ಆಗಲಿ ತಮಗೆ ತಾವೇ ಗುಂಡಿ ತೋಡುವುದುಂಟೆ?

ಮದ್ಯ ನಿಷೇಧ
ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ ಇಂದು ನಿನ್ನೆಯದಲ್ಲ. ಈ ಬಗ್ಗೆ ಆಗಿಂದಾಗ್ಗೆ ಚರ್ಚೆಯೂ ನಡೆದಿದೆ. ಮದ್ಯ ನಿಷೇಧ ಅಸಾಧ್ಯ ವೆಂದು ಮೊನ್ನೆ ಮೊನ್ನೆಯಷ್ಟೇ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿ ದ್ದಾರೆ. ಈ ಹಿಂದಿದ್ದ ಸಮ್ಮಿಶ್ರ ಸರ್ಕಾರವು ಸಾರಾಯಿ ನಿಷೇಧಿಸಿ ದ್ದರಿಂದಲೇ ಇದೀಗ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದವರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಮದ್ಯಪಾನದಿಂದ ಯಾರೊಬ್ಬರೂ ಬೀದಿಗೆ ಬಿದ್ದಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಸ್ವತಃ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರೂ ಮುಖ್ಯಮಂತ್ರಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಅಕ್ರಮ ಮದ್ಯ ಮಾರಾಟಕ್ಕೆ ಆಕ್ಷೇಪವಿದೆಯೇ ಹೊರತು ಮದ್ಯ ಸೇವನೆಗೆ ಸರ್ಕಾರದ ಆಕ್ಷೇಪವಿದ್ದಂತಿಲ್ಲ. ಆಕ್ಷೇಪವಿರುವುದಾದರೂ ಹೇಗೆ? ಕ್ಷೀರಭಾಗ್ಯ, ಅನ್ನಭಾಗ್ಯಾದಿ ಭಾಗ್ಯಗಳನ್ನು ಕರುಣಿಸುವ ಸರ್ಕಾರಕ್ಕೆ ಧನಭಾಗ್ಯ ಕರುಣಿಸುವುದು ಈ ಮದ್ಯ! ಅರ್ಥಾತ್‌ ರಾಜ್ಯದ ಆದಾಯ ಮೂಲಗಳಲ್ಲಿ ಅದೂ ಒಂದು. ರಾಜ್ಯದ ಬೊಕ್ಕಸದ ಬಹುಪಾಲು ತುಂಬುವುದೇ ಅಬಕಾರಿ ಸುಂಕದಿಂದ. ಅಷ್ಟೇ ಏಕೆ ಸಚಿವ ಸಂಪುಟದಲ್ಲಿ ಅದಕ್ಕೆಂದೇ ಪ್ರತ್ಯೇಕ ಖಾತೆಯೇ ಇದೆಯಲ್ಲ. ಹೀಗಿರುವಾಗ ಮದ್ಯ ನಿಷೇಧ ಮಾಡುವುದುಂಟೇ? ನಿಷೇಧ ಹೇರಿ ಜೇಬಿಗೆ ಕತ್ತರಿ ಹಾಕಿಕೊಳ್ಳುವುದುಂಟೇ?

ಲೋಕಾಯುಕ್ತ ವಿಚಾರ
ಲೋಕಾಯುಕ್ತ ಬಲಪಡಿಸುವ ವಿಚಾರದಲ್ಲೂ ಹೀಗೆಯೇ. ಭ್ರಷ್ಟಾಚಾರ ತಡೆಗೆ ಬಲಿಷ್ಟ ಲೋಕಾಯುಕ್ತದ ಅಗತ್ಯವಿದೆ. ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಸಾಕಷ್ಟು ವಿಳಂಬ ನೀತಿ ಅನುಸರಿಸಿ ಕೊನೆಗೆ ಕಂಡುಕೊಂಡ ಪರ್ಯಾಯ ವ್ಯವಸ್ಥೆ ಎಸಿಬಿ ನೇಮಕ. ಅದೊಂದು ಸರ್ಕಾರದ ಅಧೀನ ವ್ಯವಸ್ಥೆಯಾಗಿರುವುದ ರಿಂದ ಬರೀ ಹಲ್ಲು ಕಿತ್ತ ಹಾವಷ್ಟೆ. ಏನು ಮಾಡೋಣ? ಬಹುತೇಕ ರಾಜಕಾರಣಿಗಳ ಹಿಂದೆಯೂ ಒಂದಲ್ಲ ಒಂದು ಹಗರಣ ಇದ್ದೇ ಇರುತ್ತದೆ. ರಾಜಕೀಯ ದ್ವೇಷಕ್ಕಾದರೂ ಒಂದಲ್ಲ ಒಂದು ದಿನ ಅದು ಬಯಲಿಗೆ ಬಂದೇ ಬರುತ್ತದೆ. ಹೀಗಿರುವಾಗ ಕಾನೂನು ಬಿಗಿಗೊಳ್ಳುವುದು ಯಾರಿಗೆ ಬೇಕಿದೆ? ಲೋಕಾಯುಕ್ತ ಬಲಗೊಳಿಸಿ ನಾಳೆ ತಮ್ಮ ಕೈಗೆ ತಾವೇ ಕೋಳ ತೊಡಿಸಿಕೊಳ್ಳುವುದುಂಟೇ?

ಸರ್ಕಾರಿ ಶಾಲೆ ಬಲಪಡಿಸುವ ಚಿಂತನೆ
ಇದೀಗ ಸರ್ಕಾರಿ ಶಾಲೆಗಳನ್ನು ಬಲಪಡಿಸಲುದ್ದೇಶಿಸಿರುವ ಸರ್ಕಾರ ಅದಕ್ಕೆ ತೊಡಕಾಗಿರುವ ಆರ್‌ಟಿಇಯನ್ನು ರದ್ದು ಪಡಿಸುವ ಯೋಚನೆಯನ್ನು ಹೊಂದಿದೆ. ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕುವ ಅಗತ್ಯವಿರುವಂತೆ ಕನ್ನಡ ಮಾಧ್ಯಮ ಶಾಲೆಯ ಉಳಿವಿಗಾಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಡಿವಾಣ ಹಾಕುವ ಅಗತ್ಯವೂ ಇದೆ. ಆದರೆ ಅದು ಸಾಧ್ಯವೆ? ಖಾಸಗಿ ಶಾಲೆ, ಆಂಗ್ಲ ಮಾಧ್ಯಮ ಶಾಲೆ ಎಂಬುದೆಲ್ಲಾ ಹುಟ್ಟುತ್ತಲೇ ಶಿಕ್ಷಣವು ಒಂದು ಉದ್ದಿಮೆಯ ಸ್ವರೂಪ ಪಡೆದುಕೊಳ್ಳತೊಡಗಿದೆ. ಉದ್ದಿಮೆ ಎಂದ ಮೇಲೆ ಒಂದಿಷ್ಟು ಲಾಭವಿಲ್ಲವೆಂದ ಮೇಲೆ ಹೇಗೆ? ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳ ಕೈಯಲ್ಲಿವೆ. ಜನಹಿತಕ್ಕಾಗಿ ಅವರು ಸ್ವಹಿತ ಬಲಿಕೊಡಲು ಸಿದ್ಧರಿರುವರೆ? ಸರ್ಕಾರಿ ಶಾಲೆಗಳ ಸಬಲೀ ಕರಣವು ಖಾಸಗಿ ಶಾಲೆಗಳಿಗೆ ಅಡ್ಡಿಯಾಗುವ ಸಂಭವವಿದೆ. ಹಾಗಾಗಿ ಹೊಸ ಕಾಯ್ದೆ ರೂಪಿಸಲು ಉದ್ದೇಶಿಸಿರುವ ಸರ್ಕಾರವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಜನಪ್ರತಿನಿಧಿಗಳು ಬೆಂಬಲಿಸುವರೆ? ಸಿಇಟಿ ಸೀಟು ಹಂಚಿಕೆ,ಫೀಸು ನಿಗದಿ ವಿಚಾರ ಬಂದಾಗಲೂ ಇದೇ ಸಮಸ್ಯೆ. ಬಹುತೇಕ ಇಂಜಿನಿ ಯರಿಂಗ್‌ ಕಾಲೇಜುಗಳೂ ಎಂಪಿ,ಎಮ್ಮೆಲ್ಲೆಗಳ ಕೈಯಲ್ಲಿವೆ. ನಿಯಂತ್ರಣ ಹೇರಲು ಹೋಗಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಚಪ್ಪಡಿ ಎಳೆದು ಹಾಕಿಕೊಳ್ಳುವುದುಂಟೆ?

ಪ್ಲಾಸ್ಟಿಕ್‌ ನಿಷೇಧ
ಮದ್ಯ ನಿಷೇಧದಂತೆ ಪ್ಲಾಸ್ಟಿಕ್‌ ನಿಷೇಧವೂ ಸುಲಭದ ಮಾತಲ್ಲ. ಅದು ಇಷ್ಟರಲ್ಲೇ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಹೋಗಿದೆ ಎಂಬುದಷ್ಟೇ ಇದಕ್ಕೆ ಕಾರಣವಲ್ಲ. ಅನೇಕ ಪ್ಲಾಸ್ಟಿಕ್‌ ಕಂಪೆನಿಗಳೂ ಪ್ಲಾಸ್ಟಿಕ್‌ ಅವಲಂಬಿತ ಉದ್ದಿಮೆಗಳೂ ನಮ್ಮ ಜನಪ್ರತಿನಿಧಿಗಳ ಕೈಯ ಲ್ಲಿಲ್ಲವೆ? ಕಡಿವಾಣ ಹಾಕುವವರಾರು? ಬಹುತೇಕ ಯೊಜ ನೆಗಳೂ ಹೀಗೆಯೇ ಜನಪರವೇನೋ ಆಗಿರುತ್ತವೆ. ಆದರೆ ಜನ ಪ್ರತಿ ನಿಧಿಗಳೇ ಅವಕ್ಕೆ ತೊಡರುಗಾಲು ಹಾಕುತ್ತಾರೆ. ಅವರ ಸ್ವಹಿತದ ಮುಂದೆ ಜನಹಿತಕ್ಕೆಲ್ಲಿದೆ ಬೆಲೆ? ಜೊತೆಗೆ ಇಚ್ಛಾಶಕ್ತಿಯ ಕೊರ ತೆಯೂ ಕಾಡಿದಾಗ ಹೇಳುವುದೇನಿದೆ? ಜಾರಿಗೊಂಡು ತಿಂಗ ಳೊಳಗೇ ಹಳ್ಳದ ಹಾದಿ ಹಿಡಿದ ಉದಾಹರಣೆಗಳಿವೆ. ಬೆಳಗಾವಿ ಯಲ್ಲಿ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಶಾಸಕರ ಕನಿಷ್ಠ ಹಾಜರಾತಿಯೇ ರಾಜ್ಯ ಹಿತಕ್ಕಿಂತ ನಮ್ಮವರಿಗೆ ಸ್ವಹಿತ, ಪಕ್ಷಹಿತವೇ ಮುಖ್ಯ ಎಂಬುದಕ್ಕೆ ಸಾಕ್ಷಿ. ಅಧಿವೇಶನಕ್ಕೆ ಹೋಗುವ ಬದಲು ಕೆಲವರು ಯಾತ್ರೆಗೆ ಹೋಗಿದ್ದಾರೆ. ಇದೀಗ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರ ಹಾಗೂ ಜನಪ್ರತಿನಿಧಿಗಳ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗಳಿಗೆ ಕಳುಹಿಸುವಂತೆ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ಸಹಜವಾಗಿವೇ ಕಾಡುವ ಪ್ರಶ್ನೆಯಿದು ಇಂಥದ್ದೆಲ್ಲಾ ನಡೆಯೋಕೆ ಸಾಧ್ಯಾನಾ ಇಲ್ಲಿ?

ರಾಂ ಎಲ್ಲಂಗಳ


Trending videos

Back to Top