ಮೊಬೈಲಲ್ಲೂ ಇದೆ ಮಾದಕ ದ್ರವ್ಯ!


Team Udayavani, Dec 3, 2018, 12:30 AM IST

techaddict.jpg

ಸದ್ಯ ಈ ಸ್ಮಾರ್ಟ್‌ಫೋನ್‌ ಎಂಬ ಗೀಳು ನಮ್ಮನ್ನು ಕಾಡುತ್ತಿದೆ. ಇದು ಅನುಕೂಲದ ಜೊತೆಗೆ ಅನನುಕೂಲವನ್ನೂ ಮಾಡಿದೆ ಎಂಬುದೇನೂ ಹೊಸತಲ್ಲ. ಈ ಅನನುಕೂಲವನ್ನೇ ತಮ್ಮ ಅನುಕೂಲವನ್ನಾಗಿಸಿಕೊಂಡವರೂ ಇದ್ದಾರೆ. ಅಂದರೆ ಡಿಜಿಟಲ್‌ ಡಿಟಾಕ್ಸ್‌ ಎಂಬ ಹೊಸ ಕಲ್ಪನೆಯೊಂದು ಹುಟ್ಟಿಕೊಂಡಿದೆ.  ಅದೇನೆಂದರೆ ,  ಸ್ಮಾರ್ಟ್‌ಫೋನಿನ ಗೀಳನ್ನು ಚಿವುಟಿ ಹಾಕುವುದು! 

ಕೆಲವೇ ವರ್ಷಗಳ ಹಿಂದಿನವರೆಗೂ ಜನರು ಮೊಬೈಲ್‌ ಮಾಯೆ ಎಂದು ಹೇಳುತ್ತಿದ್ದರು. ಮೊಬೈಲ್‌ ಎಂಬುದು ಸ್ಮಾರ್ಟ್‌ಫೋನ್‌ ರೂಪ ತಾಳುತ್ತಿದ್ದಂತೆಯೇ ಅದು ಜನರಿಗೆ ಗೀಳು, ಚಟವಾಗಿ ಬದಲಾಯಿತು. ಈಗಂತೂ ಅದೊಂದು ಅಲ್ಕೋಹಾಲ್‌ನಂತೆ, ಸಿಗರೇಟಿನಂತೆ, ಗಾಂಜಾ, ಅಫೀಮಿನಂತಾಗಿದೆ! ಒಂದು ಕ್ಷಣ ಕೈಯಲ್ಲಿ ಮೊಬೈಲಿಲ್ಲದಿದ್ದರೆ ಚಡಪಡಿಸುತ್ತೇವೆ. ಜಗತ್ತಿನೊಂದಿಗೆ ನಾವು ಸಂಪರ್ಕವನ್ನೇ ಕಡಿದುಕೊಂಡುಬಿಟ್ಟೆವೇನೋ ಎಂಬಂತೆ ಕಂಗಾಲಾಗುತ್ತೇವೆ. ಟಾಯ್ಲೆಟ್‌ ಸೀಟ್‌ನ ಮೇಲೆ ಕೂತಾಗಲೂ ನಮಗೆ ಮೊಬೈಲ್‌ ಬೇಕು! ಊಟಕ್ಕೆ ಕುಳಿತಾಗಲೂ ಒಂದು ಕೈಯಲ್ಲಿ ಮೊಬೈಲ್‌ ಬೇಕು! ಇದು ವಾಸ್ತವವಂತೂ ಹೌದು. ಆದರೆ ಚಿಂತೆಗೀಡು ಮಾಡುವಷ್ಟು, ಇದರಿಂದ ನಾವು ಹೊರಬರಲೇ ಬೇಕು ಎನ್ನುವಷ್ಟು ಕೆಟ್ಟ ಗೀಳೇ ಎಂಬುದು ಇನ್ನೂ ಚರ್ಚೆಯ ವಿಷಯ.

ಸ್ಮಾಟ್‌ಫೋನ್‌ ಬರುವುದಕ್ಕೂ ಮೊದಲು ಒಂದಲ್ಲ ಒಂದು ಗ್ಯಾಜೆಟ್‌ ಬಗ್ಗೆ ಇಂಥದ್ದೇ ದೂರುಗಳಿದ್ದವು. ತುಂಬ ಹಿಂದೇನೂ ಹೋಗಬೇಕಿಲ್ಲ. ಕೆಲವೇ ವರ್ಷಗಳ ಹಿಂದೆ ಟಿವಿ ನೋಡುವ ನಮ್ಮ ಹುಚ್ಚಿನ ಬಗ್ಗೆ ನಾವು ಎಷ್ಟು ತಲೆಕೆಡಿಸಿಕೊಂಡಿರಲಿಲ್ಲ? ಈಗಲೂ ಹೆಂಗಸರು ಮನೆಗೆ ಬಂದವರನ್ನು ಮಾತನಾಡಿಸುವುದನ್ನು ಬಿಟ್ಟು ಟಿವಿ ನೋಡಲು ಕೂರುತ್ತಾರೆ ಎಂಬ ಹಾಸ್ಯ ಆಗಾಗ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುತ್ತದೆ. ಅದಕ್ಕೂ ಹಿಂದೆ ಟ್ರಾನ್ಸಿಸ್ಟರುಗಳನ್ನು ಕಿವಿಗೆ ಆನಿಸಿಕೊಂಡೇ ಓಡಾಡುತ್ತಿರುವ ಎಷ್ಟು ಜನರನ್ನು ನಾವು ನೋಡಿಲ್ಲ. ಟಿವಿ ಬರುತ್ತಿದ್ದಂತೆಯೇ ಅದೊಂದು ಹಳೆಯ ನೆನಪಾಗಿ ಮೂಲೆ ಸೇರಿತು. ಹಾಗೆ ಕಾಲಕಾಲಕ್ಕೆ ನಾವು ಒಂದೊಂದು ಗ್ಯಾಜೆಟ್ಟಿಗೆ ಅಂಟಿಕೊಂಡೇ ಇರುತ್ತೇವೆ. ಒಂದಷ್ಟು ವರ್ಷ ಕಳೆದಂತೆ ಆ ಗ್ಯಾಜೆಟ್‌ ನಮ್ಮ ಹಳೆಯ ಕಾಲದ ನೆನಪಾಗಿ ಮೂಲೆಗೆ ಸರಿಯುತ್ತದೆ.

ಸದ್ಯ ಈ ಸ್ಮಾರ್ಟ್‌ಫೋನ್‌ ಎಂಬ ಗೀಳು ನಮ್ಮನ್ನು ಕಾಡುತ್ತಿದೆ. ಇದು ಅನುಕೂಲದ ಜೊತೆಗೆ ಅನಾನುಕೂಲವನ್ನೂ ಮಾಡಿದೆ ಎಂಬುದೇನೂ ಹೊಸತಲ್ಲ. ಈ ಅನಾನುಕೂಲವನ್ನೇ ತಮ್ಮ ಅನುಕೂಲವನ್ನಾಗಿಸಿಕೊಂಡವರೂ ಇದ್ದಾರೆ. ಅಂದರೆ ಡಿಜಿಟಲ್‌ ಡಿಟಾಕ್ಸ್‌ ಎಂಬ ಹೊಸ ಕಲ್ಪನೆಯೊಂದು ಹುಟ್ಟಿಕೊಂಡಿದೆ. ನಾವು ಅಂಟಿಸಿಕೊಂಡ ಈ ಡಿಜಿಟಲ್‌, ಸ್ಮಾರ್ಟ್‌ಫೋನಿನ ಗೀಳನ್ನು ಚಿವುಟಿ ಹಾಕುವುದು! ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮದ್ಯ ಸೇವನೆಯ ಚಟವನ್ನು ಹತ್ತಿಸಿಕೊಂಡವರಿಗೆ ಮದ್ಯ ಸೇವನೆ ಬಿಡಿಸುವ ಕೇಂದ್ರಗಳಿದ್ದಂತೆ. ನಾವು ಸ್ಕ್ರೀನ್‌ ಕಡೆಗೆ ನೋಡುವ ನಮ್ಮ ಸಮಯವನ್ನು ಕಡಿಮೆ ಮಾಡುತ್ತಾ ಒಂದು ದಿನ ಫೋನನ್ನೇ ಬದಿಗಿರಿಸುವಂತೆ ಸಲಹೆ ಮಾಡುತ್ತವೆ. ಆದರೆ ನಮಗೆ ಸ್ಮಾರ್ಟ್‌ಫೋನ್‌ ಆಗಲೀ ಅಥವಾ ಇತರ ಗ್ಯಾಜೆಟ್‌ ಬೇಡವೇ ಎಂಬ ಪ್ರಶ್ನೆಯೂ ಮೂಡುತ್ತದೆ. ಇನ್ನೊಂದೆಡೆ ನಾವು ಸ್ಕ್ರೀನ್‌ ನೋಡುವ ಸಮಯವನ್ನು ಲೆಕ್ಕ ಮಾಡುವ ಅಪ್ಲಿಕೇಶನ್‌ಗಳೂ ಇವೆ. ಇವು ದಿನಕ್ಕೆ ಇಷ್ಟು ಸಮಯ ನೀವು ಸ್ಕ್ರೀನ್‌ ನೋಡುತ್ತೀರಿ ಎಂಬುದನ್ನು ಹೇಳುತ್ತವೆ. ನಿಗದಿಗಿಂತ ಹೆಚ್ಚು ಹೊತ್ತು ನೋಡಿದರೆ ಎಚ್ಚರಿಸುತ್ತದೆ. ಇತ್ತೀಚೆಗೆ ಆ್ಯಪಲ್‌ ಐಫೋನ್‌ನಲ್ಲಿ ಸ್ಕ್ರೀನ್‌ ಟೈಮ್‌ ಲೆಕ್ಕ ಹಾಕುವ ಆಯ್ಕೆ ನೀಡಲಾಗಿದೆ. ಇನ್ನು ಆಂಡ್ರಾಯ್ಡ ಸ್ಮಾರ್ಟ್‌ಫೋನ್‌ಗಳಲ್ಲಂತೂ ಹಲವು ಅಪ್ಲಿಕೇಶನ್‌ಗಳಿವೆ.

ಇತ್ತೀಚೆಗೆ ಶುರುವಾದ ಇನ್ನೂ ಒಂದು ಹೊಸ ಡಿಜಿಟಲ್‌ ಡಿಟಾಕ್ಸ್‌ ಮಾದರಿಯೆಂದರೆ ಕುಗ್ರಾಮಗಳು ಅಥವಾ ನೆಟ್‌ವರ್ಕ್‌ ಇಲ್ಲದ ಪ್ರದೇಶಗಳಿಗೆ ಜನರನ್ನು ಕರೆದೊಯ್ಯುವುದು. ಇದು ಡಿಜಿಟಲ್‌ ಡಿಟಾಕ್ಸ್‌ ಎನ್ನುವುದಕ್ಕಿಂತ ಹೆಚ್ಚಾಗಿ ಪರಿಸರ ಪ್ರವಾಸೋದ್ಯಮದ ರೂಪದಲ್ಲಿ ಚಾಲ್ತಿಯಲ್ಲಿದೆ. ಅಂದರೆ ನೀವು ಒಂದೆರಡು ದಿನ ಯಾವುದೋ ಕುಗ್ರಾಮಕ್ಕೆ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗ್ಳನ್ನು ಬಿಟ್ಟೇ ಹೋಗುತ್ತೀರಿ. ಇದು ಅಷ್ಟೂ ದಿನಗಳವರೆಗೆ ನಮ್ಮ ಡಿಜಿಟಲ್‌ ವ್ಯಾಮೋಹವನ್ನು ಬಿಟ್ಟು ಪರಿಸರವನ್ನು ಆಸ್ವಾದಿಸುವ ಖುಷಿ ಕೊಡುವುದಂತೂ ನಿಜ. ಈ ಎಲ್ಲ ವಿಷಾಂಶ ಹೊರಹಾಕುವ (ಡಿಟಾಕ್ಸ್‌) ತಂತ್ರಗಳು ಒಂದು ಹಂತಕ್ಕೆ ಸಹಾಯಕಾರಿಯೇನೋ ಹೌದು. ಆದರೆ ಎಲ್ಲವುಗಳಿಗೂ ತಮ್ಮದೇ ಮಿತಿಯೂ ಇದೆ. ಯಾಕೆಂದರೆ ಸದ್ಯದ ನಮ್ಮ ಕೆಲಸ ಹಾಗೂ ಜೀವನ ಶೈಲಿಯೇ ಡಿಜಿಟಲ್‌ಗೆ ಅಂಟಿಕೊಂಡಿದೆ. ಯಾವುದೇ ಕಚೇರಿಗೆ ಹೋದರೂ ಕಂಪ್ಯೂಟರುಗಳಲ್ಲೇ ಕೆಲಸ ನಡೆಯುತ್ತದೆ. ಬಹುಶಃ ಸರ್ಕಾರಿ ಕಚೇರಿಗಳಂತಹ ಕೆಲವೇ ಕಡೆಗಳಲ್ಲಿ ಕಡತಗಳು ಅಸ್ತಿತ್ವದಲ್ಲಿವೆ. ಇನ್ನು ಸ್ಮಾರ್ಟ್‌ಫೋನ್‌ಗಳಂತೂ ಸರ್ಕಾರಿ ಸೇವೆಗಳಿಂದ ಹಿಡಿದು ಎಲ್ಲ ಅಗತ್ಯ ಕೆಲಸಗಳಿಗೂ ನೆರವಾಗುತ್ತವೆ. ಇದರಿಂದ ದೂರವಾಗುವುದಂತೂ ಅನಗತ್ಯದ ಮಾತು.

ಆದರೆ ನಮ್ಮ ಸ್ಮಾಟ್‌ಫೋನ್‌ಗಳು ನಮ್ಮನ್ನು ಗೀಳಿಗೆ ಹೆಚ್ಚುವಂತೆಯೇ ತಯಾರಾಗಿರುತ್ತವೆ. ಪ್ರಖರ ಬೆಳಕು, ಆಕರ್ಷಕ ಬಣ್ಣಗಳಿರುತ್ತವೆ, ಯೂಟ್ಯೂಬ್‌ನಲ್ಲಿ ಯಾವುದೇ ವೀಡಿಯೋ ಪ್ಲೇ ಮಾಡಿದರೆ ಆಕರ್ಷಕವಾಗಿ ಕಾಣಿಸುತ್ತವೆ. ಕಣ್ಣು ನೆಟ್ಟರೆ ಅಲ್ಲಿಂದ ಕಣ್ಣು ಕೀಳುವುದು ಕಷ್ಟವಾಗುವಷ್ಟು ಮೋಹ ಅಲ್ಲಿದೆ. ಫೇಸ್‌ಬುಕ್‌ನಂತಹ ಸೋಷಿಯಲ್‌ ಮೀಡಿಯಾ, ವಾಟ್ಸ್‌ಆ್ಯಪ್‌ನಂತಹ ಚಾಟ್‌ ಅಪ್ಲಿಕೇಶನ್‌ಗಳು ನಮ್ಮನ್ನು ಇಡೀ ದಿನ ಮುಳುಗಿಸಿಬಿಡಬಲ್ಲವು. ಫೇಸ್‌ಬುಕ್‌ನಲ್ಲಿ ಸೊðàಲ್‌ ಮಾಡಿ ಮುಗಿಸಲು ಸಾಧ್ಯವೇ ಇಲ್ಲ. ವಾಟ್ಸಾಪ್‌ನಲ್ಲಿ ಆತ್ಮೀಯರು ಚಾಟ್‌ಗೆ ಸಿಕ್ಕರಂತೂ ಮುಗಿದೇ ಹೋಯಿತು. ಇದರ ಹೊರತಾಗಿ ನಮ್ಮ ಮನಸಲ್ಲೇ ಗೀಳಿಗೆ ಬೀಳುವ ಜಾಳು ಇರುತ್ತದೆ. ಅಂದರೆ ನಾವು ಎಂದಿಗೂ ಯಾವುದನ್ನೋ ತ್ಯಜಿಸಲು ಇನ್ನೇನನ್ನೋ ಹುಡುಕಿಕೊಳ್ಳುತ್ತೇವೆ. ಅದು ನಮ್ಮ ಸುಪ್ತಮನಸಿನ ಗುಣ. ನಮ್ಮೊಳಗಿನ ಖನ್ನತೆಯನ್ನೋ ಅಥವಾ ಇನ್ಯಾವುದೋ ಅಂಶವನ್ನು ದೂರ ಮಾಡಲು ನಾವು ಇಂಥ ಗ್ಯಾಜೆಟ್‌ಗಳಿಗೆ ಮೊರೆಹೋಗುತ್ತೇವೆ. ಕಾಲಕ್ರಮೇಣ ಇವೇ ನಮ್ಮೊಳಗೆ ಖನ್ನತೆ ಹುಟ್ಟುಹಾಕುತ್ತವೆ.

ಡಿಜಿಟಲ್‌ ಡಿವೈಸ್‌ಗಳು ಆರೋಗ್ಯಕರವಲ್ಲ ಎಂಬುದು ಒಂದಷ್ಟರ ಮಟ್ಟಿಗೆ ಹೌದು. ಅಂದರೆ ನಾವು ವಿಪರೀತವಾಗಿ, ನಮ್ಮ ಅಗತ್ಯಕ್ಕಿಂತ ಹೆಚ್ಚು ಡಿಜಿಟಲ್‌ ಗ್ಯಾಜೆಟ್‌ಗಳನ್ನು ಬಳಸುವುದು ಅನಾರೋಗ್ಯಕರ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಡಿಜಿಟಲ್‌ ಡಿಟಾಕ್ಸ್‌ನ ಅಗತ್ಯ ಹುಟ್ಟಿಕೊಂಡಿದ್ದೇ ಸಾಮಾಜಿಕ ಮಾಧ್ಯಮಗಳು ಜನಪ್ರಿಯವಾದ ನಂತರ ಎಂದರೆ ನೀವು ನಂಬಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದು. ಆದರೆ ಇದರ ವಿಪರೀತ ಬಳಕೆ ನಮ್ಮಲ್ಲಿ ಉದ್ವೇಗ, ಏಕಾಗ್ರತೆ ಕೊರತೆ, ಖನ್ನತೆ ಹಾಗೂ ಸಿನಿಕತೆ ಮೂಡುವಂತೆ ಮಾಡುತ್ತದೆ. ಇದು ಹಲವು ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲೂ ತಿಳಿದುಬಂದಿದೆ. ದಿನಕ್ಕೆ ಒಟ್ಟಾರೆ ಮೂರರಿಂದ ನಾಲ್ಕು ತಾಸು ನಾವು ಫೇಸ್‌ಬುಕ್‌ನಂತಹ ಸೋಷಿಯಲ್‌ ಮೀಡಿಯಾ ಅಪ್ಲಿಕೇಶನ್‌ನಲ್ಲಿ ಕಾಲ ಕಳೆಯುತ್ತೇವೆ.

ಸೋಷಿಯಲ್‌ ಮೀಡಿಯಾಗಳೆಂದರೆ ನಮ್ಮ ಸುತ್ತಲಿರುವ ಕಲ್ಪನೆಗಿಂತ ಹೊಸದೇನೂ ಅಲ್ಲ. ಪಕ್ಕದ ಮನೆಯವರ ಬಳಿ ಕುಳಿತುಕೊಂಡು ಮಾತನಾಡುವ ಸಮಯವನ್ನೇ ನಾವು ಈಗ ಫೇಸ್‌ಬುಕ್‌ನಲ್ಲಿ ಕಳೆಯುತ್ತಿದ್ದೇವೆ. ಹಳ್ಳಿಗಳಲ್ಲಿ ಮುಸ್ಸಂಜೆ ಹೊತ್ತು ಅಂಗಡಿ ಮುಂಗಟ್ಟಿನ ಮೇಲೋ, ಹರಟೆಕಟ್ಟೆಯ ಮೇಲೋ ಕೂತು ಕಳೆಯುವ ಕಾಲವನ್ನೇ ನಾವು ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುತ್ತಿದ್ದೇವೆ. ಆದರೆ ಆಗಲೂ ಇಡೀ ದಿನ ಹರಟೆಕಟ್ಟೆಯಲ್ಲಿ ಕುಳಿತು ಪಟ್ಟಾಂಗ ಹೊಡೆಯುವವರಿದ್ದಂತೆ, ಈಗಲೂ ಇಡೀ ದಿನ ಮೊಬೈಲ್‌ ಹಿಡಿದು ಕೂರುವವರಿದ್ದಾರೆ.
 
ಇನ್ನೂ ಆಸಕ್ತಿಕರ ಅಂಶವೆಂದರೆ ನಮಗೆ ಈ ಟೆಕ್‌ ಗೀಳು ಹಿಡಿಸಿದ ತಂತ್ರಜ್ಞಾನ ದೈತ್ಯರ ಕುಟುಂಬದ ಕಥೆ ಬೇರೆಯದೇ ಸಂಗತಿ ಹೇಳುತ್ತವೆ. ನಾವು ನಮ್ಮ ಮಕ್ಕಳು ಎರಡು ವರ್ಷಕ್ಕೂ ಮೊದಲೇ ಮೊಬೈಲ್‌ ಹಿಡಿದು ಯೂಟ್ಯೂಬ್‌ನಲ್ಲಿ ಕಾಟೂìನ್‌ ಪ್ಲೇ ಮಾಡಿಕೊಂಡು ನೋಡುವುದನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತೇವೆ. ಆದರೆ ಆ್ಯಪಲ್‌ನಂಥ ಸಾಧನವನ್ನು ನಮ್ಮ ಕೈಗೆ ಕೊಟ್ಟ ಸ್ಟೀವ್‌ ಜಾಬ್ಸ್ ತನ್ನ ಮಕ್ಕಳಿಗೆ 14 ವರ್ಷವಾಗುವವರೆಗೂ ಮೊಬೈಲನ್ನೇ ಕೊಟ್ಟಿರಲಿಲ್ಲ. ಅವರು ಮೊಬೈಲ್‌ ಬಳಸಲೂ ಬಿಟ್ಟಿರಲಿಲ್ಲ! ನಮ್ಮಲ್ಲಿ ಕೆಲವರಂತೂ ಮಗುವಿಗೆ ಮೂರು ವರ್ಷವಾಗುತ್ತಿದ್ದಂತೆ ಆ್ಯಪಲ್‌ ಫೋನನ್ನೇ ಕೊಡಿಸುವವರಿದ್ದಾರೆ! ಆದರೆ ಮಕ್ಕಳನ್ನು ಈ ಡಿಜಿಟಲ್‌ ಗೀಳಿನಿಂದ ದೂರವಿಟ್ಟಷ್ಟೂ ಒಳ್ಳೆಯದು.

ಫೋನ್‌ ಮತ್ತು ಲೈಫ್ ಮಧ್ಯೆ ಸಮತೋಲನ ಸಾಧಿಸುವುದೇ ನಮಗಿರುವ ಸಂಯಮವನ್ನು ಹೇಳುತ್ತದೆ. ನಾನು ವಿಪರೀತ ಫೋನ್‌ ನೋಡುತ್ತಿದ್ದೇನೆ ಎಂದುಕೊಂಡು ಫೇಸ್‌ಬುಕ್ಕನ್ನೋ, ವಾಟ್ಸ್‌ಆ್ಯಪನ್ನೋ ಡಿಲೀಟ್‌ ಮಾಡುವುದು ಹಾಗೂ ಇಡೀ ದಿನ ಫೇಸ್‌ಬುಕ್‌ನಲ್ಲಿ ಕಾಲ ಕಳೆಯುವುದು… ಇವೆರಡೂ ಅತಿರೇಕಗಳು! ನಮ್ಮ ನಿತ್ಯ ಜೀವನದ ಮೇಲೆ ನಮ್ಮ ಡಿಜಿಟಲ್‌ ಚಟುವಟಿಕೆಗಳು ಪರಿಣಾಮ ಬೀರದಂತೆ ಕಾಯ್ದುಕೊಳ್ಳುವುದೇ ಸ್ವಯಂ ಡಿಜಿಟಲ್‌ ಡಿಟಾಕ್ಸ್‌ನ ಮುಖ್ಯ ಅಂಶ. ತಕ್ಷಣದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಲು ನಮಗೆ ಅವಕಾಶ ನೀಡುತ್ತದೆಯಾದರೂ, ಅದನ್ನು ನಾವು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಬಳಸಿಕೊಳ್ಳಬೇಕು. ನೀವು ವಿಪರೀತವಾಗಿ ಡಿಜಿಟಲ್‌ ಸಾಧನಗಳಿಗೆ ಅಂಟಿಕೊಂಡಿದ್ದೀರಿ ಎಂದಾದರೆ ಕೆಲವು ಸುಲಭ ಕ್ರಮಗಳನ್ನು ಕೈಗೊಳ್ಳಬಹುದು. 

ವಿಪರೀತವಾಗಿ ಫೇಸ್‌ಬುಕ್‌ ನೋಡುತ್ತಿದ್ದೀರಿ ಎಂದಾದರೆ ಫೇಸ್‌ಬುಕ್‌ ಐಕಾನ್‌ ಅಡಗಿಸಿಡಿ. ಫೇಸ್‌ಬುಕ್‌ನಿಂದ ಬರುವ ಎಲ್ಲ ನೊಟಿಫಿಕೇಶನ್‌ಗಳನ್ನೂ ಮ್ಯೂಟ್‌ ಮಾಡಿ. ನೊಟಿಫಿಕೇಶನ್‌ ಸೌಂಡ್‌ ಕೇಳುತ್ತಿದ್ದಂತೆಯೇ ನಮಗೆ ಫೋನ್‌ ಕೈಗೆತ್ತಿಕೊಳ್ಳಬೇಕು ಎನಿಸುವ ಆಕರ್ಷಣೆಯನ್ನು ಇದು ಕಡಿಮೆ ಮಾಡುತ್ತದೆ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಫೋನ್‌ ಹಿಡಿದು ನೋಡುವ ಹವ್ಯಾಸ ಹೊಂದಿರುತ್ತಾರೆ. ಗಂಟೆ ನೋಡುವ ನೆಪದಲ್ಲಿ ಸ್ಮಾರ್ಟ್‌ಫೋನ್‌ ಕೈಗೆತ್ತಿಕೊಂಡರೆ ಗಂಟೆ ಹೋದದ್ದೇ ಗೊತ್ತಾಗುವುದಿಲ್ಲ. ತಲೆ ಮೇಲ್ಭಾಗದಲ್ಲೊಂದು ಗಡಿಯಾರ ತಂದಿಟ್ಟುಕೊಳ್ಳಿ. ಮೊಬೈಲನ್ನು ಹಾಲ್‌ನಲ್ಲೇ ಬಿಸಾಕಿಡಿ. ಇವೆಲ್ಲ ನಮ್ಮಲ್ಲಿ ಇನ್ನಷ್ಟು ಸಂಯಮವನ್ನು ಕಲಿಸುತ್ತವೆ. ಇನ್ನೂ ಅಗತ್ಯವಿದ್ದರೆ ಧ್ಯಾನ ಯೋಗಾಸನದ ಮೊರೆ ಹೋಗಬಹುದು.

– ಕೃಷ್ಣ ಭಟ್‌

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.