CONNECT WITH US  

ಚೆರ್ವತ್ತೂರು - ಮಂಗಳೂರು ವಿದ್ಯುತ್‌ ರೈಲು ಸಂಚಾರಕ್ಕೆ ದಿನಗಣನೆ

ವಿದ್ಯುತ್‌ ರೈಲು ಸಂಚಾರ ಸಂಬಂಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಮಹಾನಗರ: ಕರಾವಳಿ ಭಾಗದ ಮೊದಲ ಹಾಗೂ ಬಹುನಿರೀಕ್ಷಿತ ಕಾಸರಗೋಡಿನ ಚೆರ್ವತ್ತೂರು - ಮಂಗಳೂರು ವಿದ್ಯುತ್‌ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ರೈಲು ಸಂಚಾರಕ್ಕೆ ಈಗಾಗಲೇ ಅನುಮತಿ ದೊರಕಿದ್ದು, ಶೀಘ್ರವೇ ದಿನಾಂಕ ಪ್ರಕಟವಾಗಲಿದೆ. ವಿದ್ಯುತ್‌ ಸಂಪರ್ಕ ಅಳವಡಿಸಿದ ಚೆರ್ವತ್ತೂರು- ಮಂಗಳೂರು ನಡುವಿನ ಹಳಿಯಲ್ಲಿ ಪ್ರಯಾಣಿಕರ ಹಾಗೂ ಸರಕು ರೈಲು ಗಾಡಿಗಳನ್ನು ಓಡಿಸಬಹುದು ಎಂದು ದಕ್ಷಿಣ ವಲಯ ಸರ್ಕಲ್‌ ಸುರಕ್ಷಾ ಕಮಿಷನರ್‌ ಕೆ.ಎ. ಮನೋಹರನ್‌ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚೆರ್ವತ್ತೂರು ರೈಲ್ವೇ ಸಬ್‌ಸ್ಟೇಷನ್‌ನಿಂದ ವಿದ್ಯುತ್‌ ಪಡೆದು ರೈಲನ್ನು ಓಡಿಸಬಹುದಾಗಿದೆ. ಮುಂದೆ ಉಪ್ಪಳ ಸಬ್‌ಸ್ಟೇಷನ್‌ ಮೂಲಕ ವಿದ್ಯುತ್‌ ಪಡೆಯಬಹುದು. ಕೇಂದ್ರ ರೈಲ್ವೆ ಸಚಿವಾಲಯದ ಅಧೀನದ ಸೆಂಟ್ರಲ್‌ ಆರ್ಗನೈಸೇಶನ್‌ ಆಫ್ ಇಂಡಿಯನ್‌ ರೈಲ್ವೇಸ್‌ (ಕೋರ್‌) ಸಂಸ್ಥೆಯು 315 ಕಿ.ಮೀ ಉದ್ದದ ಕೇರಳದ ಶೋರ್ನೂರು -ಮಂಗಳೂರು ಮಧ್ಯೆ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿಯನ್ನು 4 ವರ್ಷಗಳ ಹಿಂದೆ ಆರಂಭಿಸಿತ್ತು. ಈ ಯೋಜನೆ 370 ಕೋಟಿ ರೂ. ಯೋಜನಾ ವೆಚ್ಚವನ್ನು ಹೊಂದಿತ್ತು. 

ಈ ಯೋಜನೆಯ ಮೊದಲ ಹಂತದಲ್ಲಿ ಶೋರ್ನೂರು-ಕಲ್ಲಾಯಿ ನಡುವಣ 84 ಕಿ.ಮೀ. ಕಾಮಗಾರಿ 2015ರಲ್ಲಿ ಪೂರ್ಣವಾಗಿತ್ತು. ಎರಡನೇ ಹಂತದಲ್ಲಿ ಕಲ್ಲಾಯಿ - ಚೆರ್ವತ್ತೂರು ನಡುವಣ 140 ಕಿ.ಮೀ. ನ ಕಾಮಗಾರಿ ನಡೆದು, 3ನೇ ಹಂತದಲ್ಲಿ 91 ಕಿ.ಮೀ. ಉದ್ದದ ಚೆರ್ವತ್ತೂರು - ಮಂಗಳೂರು ರೈಲು ಮಾರ್ಗವನ್ನು ಈಗ ಪೂರ್ಣಗೊಳಿಸಲಾಗಿದೆ. ನೇತ್ರಾವತಿ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ (2 ಕಿ.ಮೀ.) ಹಾಗೂ ಮಂಗಳೂರು ಜಂಕ್ಷನ್‌ (7 ಕಿ.ಮೀ.)ವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಮಂಗಳೂರು- ತೋಕೂರು ರೈಲ್ವೆ ಹಳಿ ದ್ವಿಗುಣ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇಲ್ಲಿಂದ ತೋಕೂರುವರೆಗಿನ ಕಾಮಗಾರಿ ವಿಳಂಬವಾಗಲಿದೆ. ಹಳಿ ದ್ವಿಗುಣ ಕಾಮಗಾರಿ ನಡೆಸುತ್ತಿರುವ ಸಂಸ್ಥೆಯವರೇ ವಿದ್ಯುದೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಮಂಗಳೂರು- ಚೆರ್ವತ್ತೂರು ಯೋಜನೆ ಗಾಗಿ, ಚೆರ್ವತ್ತೂರು, ಉಪ್ಪಳ ಹಾಗೂ ಜೋಕಟ್ಟೆಯಲ್ಲಿ ತಲಾ ಒಂದೊಂದು ವಿದ್ಯುತ್‌ ಸಬ್‌ಸ್ಟೇಶನ್‌ಗಳನ್ನು ನಿರ್ಮಿಸಲಾಗುವುದು. ಚೆರ್ವತ್ತೂರಿನಲ್ಲಿ ಸಬ್‌ಸ್ಟೇಶನ್‌ ನಿರ್ಮಾಣವಾಗಿದೆ.

ಉಪ್ಪಳ ಹಾಗೂ ಜೋಕಟ್ಟೆಯಲ್ಲಿ  ಕಾಮಗಾರಿ ಆರಂಭದ ಹಂತದಲ್ಲಿದೆ. ಬೇಕಲ್‌ ಪೋರ್ಟ್‌, ಉಳ್ಳಾಲ, ಕಾಂಞಂಗಾಡ್‌, ಕಾಸರಗೋಡು, ಕುಂಬ್ಳೆ ಹಾಗೂ ನೇತ್ರಾವತಿ ವ್ಯಾಪ್ತಿಯಲ್ಲಿ ಹೆಚ್ಚುವರಿ ಹುದ್ದೆಗಳ ನೇಮಕಾತಿ ನಡೆಯಲಿದೆ. ಚೆರ್ವತ್ತೂರು ಹಾಗೂ ಉಳ್ಳಾಲದಲ್ಲಿ ನಿರ್ವಹಣಾ ಕಚೇರಿ ಆರಂಭಿಸಲಾಗುತ್ತದೆ. ಚೆರ್ವತ್ತೂರು - ಮಂಗಳೂರು ನಡುವಣ ಮಾರ್ಗದ ತಪಾಸಣಾ ಕಾರ್ಯವನ್ನು ಬೆಂಗಳೂರಿನ ದಕ್ಷಿಣ ವೃತ್ತದ ರೈಲ್ವೇ ಸುರಕ್ಷತಾ ಕಮಿಷನರ್‌ (ಸಿಆರ್‌ಎಸ್‌) ಕೆ.ಎ. ಮನೋಹರನ್‌ ನೇತೃತ್ವದ ತಂಡ ಮಾ.11ರಂದು ನಡೆಸಿತ್ತು. ವಿಶೇಷ ರೈಲಿನಲ್ಲಿ ತಂಡವು ಸಂಚರಿಸಿ, ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳು, ತಿರುವುಗಳು, ಸುರಂಗಗಳು, ಸೇತುವೆಗಳನ್ನು ಪರಿಶೀಲನೆ ನಡೆಸಿತ್ತು.

ಇಂಧನ ಉಳಿತಾಯ, ಪರಿಸರ ಸ್ನೇಹಿ
ರೈಲು ಮಾರ್ಗ ವಿದ್ಯುದೀಕರಣದಿಂದ ಇಂಧನ ಉಳಿತಾಯವಲ್ಲದೇ ಪರಿಸರ ಸ್ನೇಹಿಯೂ ಹೌದು. ಕಲ್ಲಿದ್ದಲಿನ ಸಹಾಯದಿಂದ ರೈಲುಗಳನ್ನು ಓಡಿಸಲಾಗುತ್ತಿತ್ತು. ಡೀಸೆಲ್‌ ಚಾಲಿತ ರೈಲು ಎಂಜಿನ್‌ ಬಂದ ಬಳಿಕ ಈ 'ಉಗಿಬಂಡಿ' ಇತಿಹಾಸಕ್ಕೆ ಸೇರಿತು. ಈಗ ವಿದ್ಯುತ್‌ ಚಾಲಿತ ರೈಲುಗಳೂ ಇವೆ. ಇದ್ದಲು ಮತ್ತು ಡೀಸೆಲ್‌ನ ಹೊಗೆ ಪರಿಸರವನ್ನು ಹೆಚ್ಚು ಮಾಲಿನ್ಯಗೊಳಿಸುತ್ತಿದೆ. ವಿದ್ಯುತ್‌ ಚಾಲಿತ ರೈಲುಗಳಲ್ಲಿ ಈ ಸಮಸ್ಯೆ ಇಲ್ಲ. ಇಂಧನ ಉಳಿತಾಯ ಆಗುವುದರಿಂದ ವೆಚ್ಚದಲ್ಲೂ ಕಡಿತ ಆಗುತ್ತದೆ. ವೇಗ ವರ್ಧನೆಗೂ ವಿದ್ಯುತ್‌ ಮಾರ್ಗ ಪೂರಕ.  ದೇಶದಲ್ಲಿ ಮೊದಲ ವಿದ್ಯುತ್‌ ರೈಲು (ಎಲೆಕ್ಟ್ರಿಕ್‌ ಟ್ರೈನ್‌) 1925 ಫೆ. 3 ರಂದು ಮುಂಬಯಿನ ವಿಕ್ಟೋರಿಯಾ ಟರ್ಮಿನಸ್‌ ಮತ್ತು ಕುರ್ಲಾ ಬಂದರ್‌ ಮಧ್ಯೆ ಸಂಚಾರ ಆರಂಭಿಸಿತ್ತು. ಸ್ವಾತಂತ್ರ್ಯಾನಂತರ ಪೂರ್ವ ರೈಲ್ವೆಯ ಹೌರಾ- ಬರ್ಧ್ವಾನ್‌ ಮಧ್ಯೆ ಪ್ರಥಮ ವಿದ್ಯುತ್‌ ರೈಲು ಸಂಚಾರ ನಡೆಸಿತ್ತು.

ಇಂದು ಹೆಚ್ಚು ಓದಿದ್ದು

Trending videos

Back to Top