CONNECT WITH US  

ಮಿತವ್ಯಯ ನಮ್ಮ ಸಾಧನೆ

ಇಸ್ರೋದಲ್ಲಿ ನನ್ನ ವೃತ್ತಿಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದವರು ಡಾ| ವಿಕ್ರಮ್‌ ಸಾರಾಭಾಯ್. 1975ರಲ್ಲಿ ನಾನು ಇಸ್ರೋ ಸೇರಿದಾಗ ಅವರ ದೇಹಾಂತವಾಗಿತ್ತು; ಆದರೂ ಸಂಸ್ಥೆಯ ಮೇಲೆ ಅವರ ಪ್ರಭಾವ, ವಿಚಾರಧಾರೆ, ಅವರ ಚಟುವಟಿಕೆಗಳ ಬಗ್ಗೆ ಅವರಿವರಿಂದ ಕೇಳಿ ತಿಳಿದದ್ದು ನನ್ನ ವಿಚಾರಧಾರೆ ಮತ್ತು ವೃತ್ತಿ ಬದುಕಿನ ಮೇಲೆ ಬಹುವಾಗಿ ಪರಿಣಾಮ ಬೀರಿದೆ. ಯಾವುದೇ ಒಂದು ಅನುಭವ ವ್ಯಕ್ತಿಗತವಾದದ್ದು. ಅದರಿಂದ ಪಡೆಯುವ ಸ್ಫೂರ್ತಿ ನಮ್ಮನ್ನು ರೂಪಿಸುತ್ತದೆ.

ನೂರನಾಲ್ಕು ಉಪಗ್ರಹಗಳನ್ನು ಒಂದೇಟಿಗೆ ನಭಕ್ಕೇರಿಸಿದ ಸಾಧನೆಯ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದೊಂದು ವಿಶ್ವದಾಖಲೆ ನಿಜ. ಆದರೆ ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳ ಉದ್ದೇಶ ಯಾವತ್ತೂ ದಾಖಲೆಗಳನ್ನು ಬರೆಯುವುದು ಅಲ್ಲ. ಲಭ್ಯ ತಂತ್ರಜ್ಞಾನಗಳ ಸದುಪಯೋಗವನ್ನು ಸಮಾಜಕ್ಕೆ ಒದಗಿಸುವುದು ಇಸ್ರೋದ ಉದ್ದೇಶ. ಇವತ್ತು ನಾವು ಚಂಡಮಾರುತ ಉಂಟಾಗುವ ಸಾಧ್ಯತೆಯನ್ನು ನಿಖರವಾಗಿ ಕಂಡುಕೊಳ್ಳಬಲ್ಲೆವು ಮತ್ತು ಜನರನ್ನು ರಕ್ಷಿಸಬಲ್ಲೆವು, ರೈತರು ಮತ್ತು ಮೀನುಗಾರರು ಅತ್ಯಂತ ಸ್ಪಷ್ಟ ಹವಾಮಾನ ಮುನ್ಸೂಚನೆಯ ಲಾಭ ಪಡೆಯುತ್ತಿದ್ದಾರೆ - ಇದೆಲ್ಲ ಇಸ್ರೋ ಹಾರಿಬಿಟ್ಟ ಉಪಗ್ರಹಗಳು ಮಾಡುತ್ತಿರುವ ಉಪಕಾರ. ಲಭ್ಯ ತಂತ್ರಜ್ಞಾನಗಳ ಸದುಪಯೋಗ ಮತ್ತು ಅಲಭ್ಯವಾದವುಗಳನ್ನು ಸ್ವದೇಶೀಯವಾಗಿ ಅಭಿವೃದ್ಧಿಪಡಿಸುವುದು ನಮ್ಮ ಗುರಿ. ನಮ್ಮ ಜನರ ಒಳಿತಿಗಾಗಿ ಇಸ್ರೋದ ಸಾಮರ್ಥ್ಯವನ್ನು ಬೆಳೆಸಲು ನಾವು ಸದಾ ಪ್ರಯತ್ನಿಸುತ್ತಿದ್ದೇವೆ. 

ಪಿಎಸ್‌ಎಲ್‌ವಿಯ ವಿಶ್ವಾಸಾರ್ಹತೆ 
ಜಾಗತಿಕ ಸನ್ನಿವೇಶದಲ್ಲಿ ನೋಡಿದರೆ, ನಾವು ಬಾಹ್ಯಾಕಾಶ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ವಿವಿಧ ಸ್ಥಾನಗಳನ್ನು ಹೊಂದಿದ್ದೇವೆ. ನಮ್ಮ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್ಸ್‌ ಅಥವಾ ಪಿಎಸ್‌ಎಲ್‌ವಿಗಳು ಅತ್ಯಂತ ವಿಶ್ವಾಸಾರ್ಹ ಉಡ್ಡಯನ ವಾಹನಗಳಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಒಂದೇ ಉಡ್ಡಯನದಲ್ಲಿ ಹಲವು ಉಪಗ್ರಹಗಳನ್ನು ವಿವಿಧ ಕಕ್ಷೆಗಳಿಗೆ ಸೇರಿಸುವ ಸಾಮರ್ಥ್ಯ ನಮ್ಮ ಪಿಎಸ್‌ಎಲ್‌ವಿಗಳಿಗಿದೆ. ಸ್ವದೇಶೀ ಕ್ರೋಜೆನಿಕ್‌ ತಂತ್ರಜ್ಞಾನ ಆವಿಷ್ಕಾರದ ಸಾಧನೆ ಮಾಡಿದ್ದೇವೆ. ನಾವು ಕೇವಲ ಏಳು ಉಪಗ್ರಹಗಳ ಮೂಲಕ ಭಾರತ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಕಣ್ಗಾವಲು ಇರಿಸಲು ಶಕ್ತರಾಗಿದ್ದರೆ, ಇದೇ ಕಾರ್ಯಕ್ಕೆ ಇನ್ನಿತರ ದೇಶಗಳು 24ರಷ್ಟು ಉಪಗ್ರಹಗಳನ್ನು ಬಳಸಿಕೊಳ್ಳುತ್ತಿವೆ. 

ಬಾಹ್ಯಾಕಾಶ ತಂತ್ರಜ್ಞಾನವನ್ನು ಸಾಮಾಜಿಕ ಒಳಿತಿಗಾಗಿ ಉಪಯೋಗಿಸುವ ದೇಶಗಳಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಅತ್ಯಂತ ಗಮನಾರ್ಹ ಸಂಗತಿ ಏನು ಗೊತ್ತಾ? ಇದನ್ನೆಲ್ಲ ನಾವು ಸಾಧಿಸಿರುವುದು ಅತ್ಯಂತ ಮಿತ ವೆಚ್ಚದಲ್ಲಿ! ಆರಂಭದಿಂದ ಇಲ್ಲಿಯವರೆಗೆ ನಮ್ಮ ಈ ಎಲ್ಲ ಬಾಹ್ಯಾಕಾಶ ಯೋಜನೆಗಳ ಒಟ್ಟು ವೆಚ್ಚ ನಾಸಾದ ಒಂದು ವರ್ಷದ ಬಜೆಟ್‌ಗಿಂತಲೂ ಕಡಿಮೆ!

ಯುವ ಪೀಳಿಗೆಗೆ ಸದವಕಾಶ
ಬಾಹ್ಯಾಕಾಶ ವಿಜ್ಞಾನ ಎಂಬುದು ಮಹಾ ಸಾಗರ. ಅದೊಂದು ಅವಕಾಶಗಳ ಗಣಿ. ಸ್ಪೇಸ್‌ ಟ್ರಾವೆಲ್‌, ಸ್ಪೇಸ್‌ ಟೂರಿಸಂ ಮತ್ತು ಸ್ಪೇಸ್‌ ಅಡ್ವೆಂಚರ್‌ನಂತಹ ಹೊಸ ಪರಿಕಲ್ಪನೆಗಳು ಉದಯಿಸುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಜನಾಂಗಕ್ಕೆ ಬಾಹ್ಯಾಕಾಶ ಅಪಾರ ಸಾಧ್ಯತೆಗಳನ್ನು ತೆರೆಯಲಿದೆ. ನ್ಯಾವಿಗೇಶನ್‌, ಕಮ್ಯುನಿಕೇಶನ್‌, ಭೂಸರ್ವೇಕ್ಷಣೆಯಂತಹ ಚಟುವಟಿಕೆಗಳಿಗೂ ಬಾಹ್ಯಾಕಾಶ ವಿಪುಲ ಅವಕಾಶ ಹೊಂದಿದೆ. ಈ ನಿಟ್ಟಿನಲ್ಲಿ ಭಾರತದ ಅನೇಕ ಇಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು ಕಿರು ಉಪಗ್ರಹಗಳನ್ನು ತಯಾರಿಸುತ್ತಿರುವುದು, ಇಸ್ರೋ ಮೂಲಕ ಹಾರಿಬಿಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಆದರೆ, ಇನ್ನೊಂದು ವಾಸಯೋಗ್ಯ ಗ್ರಹದ ಹುಡುಕಾಟ, ಬಾಹ್ಯಾಕಾಶದಲ್ಲಿ ಸೌರಶಕ್ತಿಯ ಉಪಯೋಗ, ರಾಕೆಟ್‌ ಉಡಾವಣೆ ವ್ಯವಸ್ಥೆಗಳ ಪರಿಷ್ಕಾರ, ಕಪ್ಪುಕುಳಿಗಳು ಮೊದಲಾದ ಕೆಲವು ಸಂಕೀರ್ಣ ಬಾಹ್ಯಾಕಾಶ ಕ್ಷೇತ್ರಗಳಿವೆ. ಭವಿಷ್ಯದ ಪೀಳಿಗೆಗಳಿಗೆ ಇಲ್ಲೂ ಉತ್ತಮ ಅವಕಾಶಗಳಿವೆ. ಈ ಅವಕಾಶಗಳಿಗೆ ಯುವ ಜನಾಂಗವನ್ನು ತಯಾರು ಮಾಡುವ ಕೆಲಸವೂ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕಾಗಿದೆ. 

ವಿದ್ಯಾರ್ಥಿಗಳು ತಮಗೆ ಒದಗುವ ಎಲ್ಲ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಯಾಕೆ ಅಂದರೆ, ಅವು ಮತ್ತೆ ಮತ್ತೆ ಬಾಗಿಲು ಬಡಿಯುವುದಿಲ್ಲ. ನೀವೇನು ಅವಕಾಶ, ಸವಲತ್ತು ಪಡೆದಿದ್ದೀರೋ ಅಷ್ಟನ್ನೂ ಪಡೆಯದ ನೂರಾರು ಮಂದಿ ಈ ದೇಶದಲ್ಲಿದ್ದಾರೆ ಎಂದು ನೆನಪಿಡಿ. ಹಾಗಾಗಿ ನಾವಷ್ಟೇ ಅವಕಾಶ ಪಡೆಯುವುದು, ಬಳಸಿಕೊಳ್ಳುವುದು ಮಾತ್ರ ಅಲ್ಲ; ಸಮಾಜಕ್ಕೂ ಉಪಕಾರ ಮಾಡುವ ಬಗ್ಗೆ ಯೋಚಿಸಬೇಕು. 

ಸದುಪಯೋಗದ ಸಂತೃಪ್ತಿ
ಬಾಹ್ಯಾಕಾಶ ವಿಜ್ಞಾನಿಯಾಗಿ ಬದುಕಿನ ಅತ್ಯಂತ ಸ್ಮರಣಾರ್ಹ ಘಳಿಗೆ ಯಾವುದು ಎಂದು ಅನೇಕರು ನನ್ನನ್ನು ಕೇಳುತ್ತಾರೆ. ಸ್ಮರಣಾರ್ಹ ಕ್ಷಣಕ್ಕಿಂತಲೂ ನಾವು ಮಾಡಿದ ಕೆಲಸ ಜನೂಪಯೋಗಿಯಾದಾಗ ಸಿಗುವ ತೃಪ್ತಿ, ಸಮಾಧಾನ ಬಹಳ ದೊಡ್ಡದು ಎಂದು ನಂಬಿದವನು ನಾನು. ಇಸ್ರೋದ ಉಪಗ್ರಹಗಳು ಒದಗಿಸುವ ನಿಖರ ಹವಾಮಾನ ಮುನ್ಸೂಚನೆಯಿಂದಾಗಿ  ಚಂಡಮಾರುತದ ಅಪಾಯದಲ್ಲಿದ್ದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಅನ್ನುವುದು ಒದಗಿಸುವ ಸಂತೃಪ್ತಿ ವೈಯಕ್ತಿಕ ಪ್ರಶಸ್ತಿ ಪುರ ಸ್ಕಾರಗಳಿಗೆ ಸಾಟಿಯಾಗದು. ನಾನಂತೂ ಇಂತಹ ತೃಪ್ತಿ, ಸಮಾಧಾನಕ್ಕಾಗಿ ಹಪಹಪಿಸುವವನು.

ತಂತ್ರಜ್ಞಾನದ ಮುನ್ನಡೆಯ ಪ್ರಯೋಜನ ಸಮಾಜದ ಕಟ್ಟಕಡೆಯ ಜನವರ್ಗಗಳನ್ನೂ ತಲುಪಬೇಕು. ಈ ನಿಟ್ಟಿನ ಇಸ್ರೋದ ಪ್ರಯತ್ನಗಳ ಮುಂದುವರಿಕೆಯಾಗಿ ಹಳ್ಳಿಗಳನ್ನು ತಲುಪುವುದಕ್ಕಾಗಿ ಅಂಚೆ ಇಲಾಖೆಯ ಜತೆಗೆ ಸಹಯೋಗ ನಡೆಸುತ್ತಿದ್ದೇವೆ. ಇದು 'ಸ್ಪೇಸ್‌ ಬೇಸ್ಡ್ ಇನ್‌ಫಾರ್ಮೇಶನ್‌ ಸಿಸ್ಟಮ್‌ ಫಾರ್‌ ಡಿಸೆಂಟ್ರಲೈಸ್ಡ್ ಪ್ಲಾನಿಂಗ್‌' ಎಂಬ ಯೋಜನೆ. ಇದು ಗ್ರಾಮ ಮಟ್ಟದ ಸಂಪನ್ಮೂಲಗಳ ಅಂಕಿಅಂಶ ಇತ್ಯಾದಿ ದಾಖಲಿಸಿ ಡೇಟಾಬೇಸ್‌ ರೂಪಿಸುವ ಪ್ರಯತ್ನ. ಈ ಡೇಟಾಬೇಸ್‌ ಹಳ್ಳಿಯ ಮುಖ್ಯಸ್ಥರಿಗೆ ಗ್ರಾಮದ ಭವಿಷ್ಯದ ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗುತ್ತದೆ. ಅತ್ಯಂತ ಪ್ರಾಥಮಿಕ ಮಟ್ಟದಲ್ಲಿಯೇ ಮಾಹಿತಿ ಸಂಗ್ರಹ ಮತ್ತು ಅದು ದಕ್ಷ ಆಡಳಿತ, ಅಭಿವೃದ್ಧಿಗಾಗಿ ಮೂಲ ಹಂತದ ಯೋಜನೆಗಳ ನಿರ್ಮಾತೃಗಳಿಗೆ ಕೂಡ ಒದಗುವಂತೆ ಮಾಡು ವುದು ಇಡೀ ಯೋಜನೆಯ ಮೂಲ ಉದ್ದೇಶ. ಬಾಹ್ಯಾಕಾಶ ಎಂಬುದು ಮಾಹಿತಿ ಅಭಿವೃದ್ಧಿ, ಸಂಗ್ರಹಣೆಯ ಅನಂತ ಅವಕಾಶಗಳನ್ನು ಹೊಂದಿದೆ. ಸಂಗ್ರಹಿತ ಮಾಹಿತಿ ಎಲ್ಲರಿಗೂ ಲಭ್ಯವಾಗಬೇಕು ಮತ್ತು ಸದುಪಯೋಗವಾಗ ಬೇಕು. ಇದು ಬಹಳ ಮುಖ್ಯ ವಿಚಾರ.   

ಡಾಕ್ಟರಾಗಬೇಕಿದ್ದವನು!
ನಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದು ಹಾಸನದಲ್ಲಿ. ಡಾಕ್ಟರಾಗಬೇಕು ಅನ್ನುವುದು ನನ್ನ ಇರಾದೆಯಾಗಿತ್ತು, ಹಾಗಾಗಿ ನನ್ನ ಪದವಿಪೂರ್ವ ಕಾಲೇಜು ವಿದ್ಯಾಭ್ಯಾಸದ ದಿನಗಳಲ್ಲಿ ಫಿಸಿಕ್ಸ್‌, ಕೆಮೆಸ್ಟ್ರಿ, ಬಯಾಲಜಿ ಅಭ್ಯಾಸ ಮಾಡಿದ್ದೆ. ಪಿಸಿಬಿಯಲ್ಲಿ ಅತಿಹೆಚ್ಚು ಅಂಕಗಳನ್ನೂ ಗಳಿಸಿದ್ದೆ, ಆದರೆ ಮೆಡಿಕಲ್‌ ಕಾಲೇಜು ಸೇರಲು ಕನಿಷ್ಠ ವಯೋಮಿತಿ ಪೂರೈಸದ ಕಾರಣ ವೈದ್ಯಕೀಯ ವಿದ್ಯಾಭ್ಯಾಸದ ಕನಸು ಕೈಗೂಡಲಿಲ್ಲ. ಬೆಂಗಳೂರಿನ ಹೆಸರಾಂತ ನ್ಯಾಶನಲ್‌ ಕಾಲೇಜು ಸೇರಬೇಕು ಅನ್ನುವುದು ಆ ದಿನಗಳ ನನ್ನ ಮಹದಾಸೆಯಾಗಿತ್ತು. ಅಲ್ಲಿ ಫಿಸಿಕ್ಸ್‌ ಆನರ್ಸ್‌ ಅದಾಗ ತಾನೇ ಪುನರಾರಂಭವಾಗಿತ್ತು. ನಾನು ಫಿಸಿಕ್ಸ್‌ ಆನರ್ಸ್‌ ಸೇರಿಕೊಂಡೆ. ಒಂದು ವರ್ಷ ನ್ಯಾಶನಲ್‌ ಕಾಲೇಜಿನಲ್ಲಿ ಕಲಿತ ಬಳಿಕ ಮೆಡಿಕಲ್‌ಗೆ ಹಾರಿದರಾಯಿತು ಅಂದುಕೊಂಡಿದ್ದೆ. ಆದರೆ, ನ್ಯಾಶನಲ್‌ ಕಾಲೇಜಿನಲ್ಲಿದ್ದ ಹೆಸರಾಂತ ವಿಜ್ಞಾನ ಬರಹಗಾರ, ವಿಚಾರವಾದಿ ಎಚ್‌. ನರಸಿಂಹಯ್ಯ ಅವರ ವ್ಯಕ್ತಿತ್ವ ನನ್ನನ್ನು ಭೌತಶಾಸ್ತ್ರದಲ್ಲಿ ಹಿಡಿದಿಟ್ಟಿತು! ನಾವಿದ್ದ ಹಾಸ್ಟೆಲ್‌ನಲ್ಲಿಯೇ ಅವರೂ ಇದ್ದುದು. 1969ರಲ್ಲಿ ಚಂದ್ರನ ಮೇಲೆ ಮನುಷ್ಯನ ಮೊತ್ತಮೊದಲ ಪಾದಾರ್ಪಣೆಯ ಸುದ್ದಿಯನ್ನು ರೇಡಿಯೋದಲ್ಲಿ ಕೇಳಿದ್ದು ಮತ್ತಿತರ ಘಟನೆಗಳು ಫಿಸಿಕ್ಸ್‌ನತ್ತ ನನ್ನನ್ನು ಆಕರ್ಷಿಸಿದವು. ನಾನು ಎಂಟೆಕ್‌ ಮಾಡಿದ್ದು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ನಡುವಣ ಸೇತುಬಂಧವಾಗಿರುವ ಫಿಸಿಕಲ್‌ ಎಂಜಿನಿಯರಿಂಗ್‌ನಲ್ಲಿ. ನಾನು ಪಿಕ್ಚರ್‌ ಪ್ರೊಸೆಸಿಂಗ್‌ ಮತ್ತು ಸೆನ್ಸರ್‌ ಡೆವಲಪ್‌ಮೆಂಟ್‌ ಕ್ಷೇತ್ರದಲ್ಲಿ ಪರಿಣಿತ. ನ್ಯಾಶನಲ್‌ ಕಾಲೇಜಿನಲ್ಲಿದ್ದಾಗ ಎಕ್ಸ್‌ ರೇ ಫಿಲ್ಮ್ ಎನ್‌ಹ್ಯಾನ್ಸ್‌ಮೆಂಟ್‌ ಆಧರಿಸಿ ತಯಾರಿಸಿದ ಒಂದು ಪ್ರೊಜೆಕ್ಟ್ ಮೂಲಕ ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ. ಬಿಎಸ್‌ಸಿ ಆನರ್ಸ್‌ ಮುಗಿಸುವ ಮುನ್ನವೇ ನಾನು ಇಸ್ರೋದ ಅಂಗಸಂಸ್ಥೆಯಾಗಿರುವ ಸ್ಪೇಸ್‌ ಅಪ್ಲಿಕೇಶನ್‌ ಸೆಂಟರ್‌ನಲ್ಲಿ ಉದ್ಯೋಗ ನೇಮಕಾತಿ ಪಡೆದಿದ್ದೆ!

ನಾಸಾ ಕೂಡ ನಮ್ಮ ಬಳಿಗೆ
ನಾವು ನಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಲೇ ಹೋಗಬೇಕು. ಹಾಗೆ ಮಾಡಿದಾಗ ಬಾಹ್ಯಾಕಾಶ ವಿಜ್ಞಾನದಂತಹ ಕ್ಷೇತ್ರದಲ್ಲಿ ಕೆಲಸ ಮಾಡುವ ಇನ್ನಿತರ ಸಂಸ್ಥೆಗಳ ನಮ್ಮ ಜತೆಗೆ ಕೈಗೂಡಿಸಲು ಮುಂದೆ ಬರುತ್ತವೆ ಅಥವಾ ಅಂತಾರಾಷ್ಟ್ರೀಯ ಸಂಬಂಧವನ್ನು ಹೆಚ್ಚಿಸಿಕೊಳ್ಳುವ ಮೂಲಕ ಮಿತವ್ಯಯದ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತವೆ. ನಾವು ರಾಡಾರ್‌ ಇಮೇಜಿಂಗ್‌ ಉಪಗ್ರಹ, ಚಂದ್ರಯಾನ ಮಿಶನ್‌ಗಳಲ್ಲಿ ಯಶಸ್ವಿಯಾದ ಬಳಿಕ ನಾಸಾ ಕೂಡ ಈಗ ನಮ್ಮ ಜತೆಗೆ ಕೈಗೂಡಿಸಲು ಮುಂದೆ ಬಂದಿದೆ. 2021ರಲ್ಲಿ ಎನ್‌ಐಎಸ್‌ಎಆರ್‌ ಮಿಶನ್‌ ಉಡಾವಣೆಗಾಗಿ ಕೆಲಸ ನಡೆಯುತ್ತಿದೆ. ಕೆಲವೇ ವರ್ಷಗಳ ಹಿಂದೆ ನಾಸಾದಂತಹ ಸಂಸ್ಥೆಗಳು ಜಂಟಿ ಮಿಶನ್‌ ಬಗ್ಗೆ ಮಾತುಕತೆ ನಡೆಸುವುದಕ್ಕೆ ಕೂಡ ನಿರಾಕರಿಸುತ್ತಿದ್ದವು. ಜಾಗತಿಕ ಮಟ್ಟದಲ್ಲಿ ಸಂಗತವಾಗಿರುವ ಬಾಹ್ಯಾಕಾಶ ಚಟುವಟಿಕೆ ನಡೆಸಲು ನಾವು ಸಮರ್ಥರಿದ್ದೇವೆ, ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳು ನಮ್ಮ ಜತೆಗೆ ಕೈಗೂಡಿಸುವಂಥ ಸ್ಥಾನಮಾನ ಹೊಂದಿದ್ದೇವೆ ಎಂಬುದನ್ನು ಇಸ್ರೋ ತೋರಿಸಿಕೊಟ್ಟಿದೆ.

- ಕೆ. ಎಸ್‌. ಕಿರಣ್‌ಕುಮಾರ್‌ ; ಇಸ್ರೋ ಅಧ್ಯಕ್ಷ


Trending videos

Back to Top