CONNECT WITH US  

ಏಕೆ ಒದ್ದಾಡುತ್ತಿದ್ದೀರಿ, ಎಲ್ಲಿ ಓಡುತ್ತಿದ್ದೀರಿ?

ಬಹಳಷ್ಟು ಜನ "ಸಾವು' ಎನ್ನುವ ಪದವನ್ನು ಬಳಸಲೂ ಹಿಂಜರಿಯುತ್ತಾರೆ!
ನಾನೆಂದಿಗೂ ನನ್ನನ್ನು "ವಿಶೇಷ ವ್ಯಕ್ತಿ' ಎಂದು ಭಾವಿಸಿಲ್ಲ. ನಾನು ನೊಬೆಲ್‌ ಪುರಸ್ಕೃತ ವ್ಯಕ್ತಿಯೆಂದೋ ಅಥವಾ "ಪರಮಪೂಜ್ಯ' ದಲೈ ಲಾಮಾ ಎಂದೂ ಅಂದುಕೊಳ್ಳುವುದಿಲ್ಲ. ನಾನೊಬ್ಬ ವಿಶಿಷ್ಟ ವ್ಯಕ್ತಿ ಎಂದು ಯೋಚಿಸಿದರೆ ನನ್ನನ್ನು ನಾನೇ ಕೈದಿಯಾಗಿಸಿದಂತೆ. ಹೀಗಾಗಿ ಈ ಎಲ್ಲಾ ಸಂಗತಿಗಳನ್ನೂ ಮರೆತು ಮುನ್ನಡೆಯುತ್ತಿದ್ದೇನೆ. ಜಗತ್ತಿನಲ್ಲಿರುವ 700 ಕೋಟಿ ಜನರಲ್ಲಿ ನಾನೂ ಒಬ್ಬನಷ್ಟೆ. ನನ್ನ ದೇಹವೂ ಎಲ್ಲ ಮನುಷ್ಯರು ಎದುರಿಸುವ ಕಷ್ಟಗಳನ್ನೇ ಎದುರಿಸುತ್ತದೆ. 

ಪರ್ವತಗಳು, ಸಾಗರಗಳು ಮತ್ತು ತಾರಾಗಣಗಳನ್ನು ನೋಡಿದಾಗ ಅವೆಲ್ಲ "ಶಾಶ್ವತವಾದುವು/ ಅವಕ್ಕೆ ಸಾವೇ ಇಲ್ಲ' ಎಂದುಕೊಳ್ಳುತ್ತೇವೆ. ಆದರೆ ಮನುಷ್ಯನಿಗಿದ್ದಂತೆಯೇ ಇವುಗಳಿಗೂ ಆರಂಭ ಮತ್ತು ಅಂತ್ಯ ಎನ್ನುವುದು ಇದ್ದೇ ಇರುತ್ತದೆ. ಇದು ಈ ಪ್ರಕೃತಿಯ ನೈಜ ಪ್ರಕ್ರಿಯೆ. ಯಾವುದಕ್ಕೆ ಆದಿಯಿರುತ್ತದೋ ಅದಕ್ಕೆ ಅಂತ್ಯವಿರಲೇಬೇಕು. ಆದರೆ ಪರ್ವತ, ಸಮುದ್ರ, ತಾರೆಗಳಿಗೆ ಮನುಷ್ಯನಂತೆ "ಅರಿವಿನ ಶಕ್ತಿ' ಇರುವುದಿಲ್ಲ. ರಾಸಾಯನಿಕ ಕ್ರಿಯೆಗಳು ಅವುಗಳಲ್ಲಿ ನಡೆಯುತ್ತವೆಯೇ ಹೊರತು ಭಾವನೆಗಳ ತಿಕ್ಕಾಟಗಳಲ್ಲ. ಭಾವನೆಗಳೇ ಇಲ್ಲದಿದ್ದ ಮೇಲೆ ಅವುಗಳಲ್ಲಿ ಮನುಷ್ಯನಂಥ ಸಚೇತನ ಜೀವಗಳು ಅನುಭವಿಸುವ "ನೋವು', "ನಲಿವು' ಇರುವುದಿಲ್ಲ. ಹೀಗಾಗಿ ಅವುಗಳಿಗೆ ಎದುರಾಗುವ ಅಂತ್ಯ, ಬರೀ ಅಂತ್ಯವಷ್ಟೆ. ಆ ಅಂತ್ಯಕ್ಕೆ ಬೇರೆ ಅರ್ಥವಿಲ್ಲ! ಇನ್ನು ಪ್ರಾಣಿಗಳು ಸಾಯುವಾಗ ದೈಹಿಕ ನೋವನುಭವಿಸುತ್ತವೆ. ಆದರೆ ಮನುಷ್ಯ? ಕೇವಲ ದೈಹಿಕ ನೋವನ್ನಷ್ಟೇ ಅಲ್ಲ, ಭೂತಕಾಲದ ಭಾರ ಮತ್ತು ಭವಿಷ್ಯದ ಕನಸನ್ನು ತಲೆಯಲ್ಲಿ ಹೊತ್ತುಕೊಂಡಿರುವ ಅವನು ಅಂತ್ಯ ಹತ್ತಿರವಾದಾಗ ಮಾನಸಿಕ ಯಾತನೆಯನ್ನೂ ಅನುಭವಿಸುತ್ತಾನೆ. ಈ ಕಾರಣಕ್ಕಾಗಿಯೇ ನಾವು ಕೇವಲ ದೇಹವನ್ನಷ್ಟೇ ಅಲ್ಲ, ಮನಸ್ಸಿನ ಕಾಳಜಿ ವಹಿಸುವುದೂ ಬಹಳ ಮುಖ್ಯ. ಬಹಳಷ್ಟು ಜನ "ಸಾವು' ಎನ್ನುವ ಪದವನ್ನು ಬಳಸಲೂ ಹಿಂಜರಿಯುತ್ತಾರೆ! ಸಾವಿಗೆ ಹೆದರುವುದಕ್ಕಿಂತಲೂ, ಅದು ಬಹಳ ಸಹಜ ಪ್ರಕ್ರಿಯೆ ಎನ್ನುವ ಸರಳ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದರ ಬಗ್ಗೆ ನಾವು ಮಾತನಾಡಬೇಕು. ವಾಸ್ತವವನ್ನು ಒಪ್ಪಿಕೊಂಡಾಗ ಮಾತ್ರ ಮಾನಸಿಕ ಯಾತನೆಯಿಂದ, ಭಯದಿಂದ ಮುಕ್ತರಾಗುತ್ತೇವೆ.  

ಸಂಗಡಿಗರೊಡನೆ ನಗರಗಳಲ್ಲಿ ಸಂಚರಿಸುವಾಗೆಲ್ಲ ನನ್ನ ಕಣ್ಣಿಗೆ ಸ್ಮಶಾನಗಳು ಕಂಡರೆ ಸಾಕು, ಅವರಿಗೆಲ್ಲ ಅತ್ತ ಕೈ ತೋರಿಸಿ ಹೇಳುತ್ತೇನೆ: ""ನೋಡಿ ನಮ್ಮ ನಿಜವಾದ ಗಮ್ಯಸ್ಥಾನಗಳವು; ದೊಡ್ಡ ದೊಡ್ಡ ಬಂಗಲೆಗಳಲ್ಲ!'' ನನ್ನ ಟಿಬೆಟ್‌ ಮೂಲದ ಗೆಳೆಯನೊಬ್ಬನಿಗೆ ಜ್ಯೋತಿಷ್ಯದಲ್ಲಿ ಬಹಳ ನಂಬಿಕೆಯಿದೆ. ನಾನಂತೂ ಅದನ್ನೆಲ್ಲ  ನಂಬುವುದಿಲ್ಲ. ಹೀಗಾಗಿ ಆ ಗೆಳೆಯನ ಕಾಲೆಳೆಯುತ್ತಾ ಒಮ್ಮೆ ಹೇಳಿದೆ. ""ಜ್ಯೋತಿಶಾÏಸ್ತ್ರವನ್ನು ಬಳಸಿಕೊಂಡು ಹುಟ್ಟು ಮತ್ತು ಸಾವಿನ ಸಮಯವನ್ನು ಬದಲಿಸಲು ಸಾಧ್ಯವಿದೆಯೇ?' ಜ್ಯೋತಿಷ್ಯದಲ್ಲಿ ಪರಮ ನಂಬಿಕೆಯಿರುವ ವ್ಯಕ್ತಿಯೊಬ್ಬನು "ಇವತ್ತು ಟೈಮ್‌ ಸರಿಯಾಗಿಲ್ಲ, ಹಾಗಾಗಿ ನಾನು ನಾಳೆ ಸಾಯುತ್ತೇನೆ' ಎಂದು ಸಾವನ್ನು ಮುಂದೂಡಬಲ್ಲನೇನು? ಸಾಧ್ಯವೇ ಇಲ್ಲ! ಸಾವು ಬಂದಾಗ ಅದಕ್ಕೆ ಶರಣಾಗಲೇಬೇಕು!''

ಸಾಯುವಾಗ ಮನುಷ್ಯನಿಗೆ ಪಶ್ಚಾತ್ತಾಪಗಳಿಲ್ಲದಿದ್ದಾಗ ಮಾತ್ರ ಆತ ನೋವಿನಿಂದ ಮುಕ್ತನಾಗಿರುತ್ತಾನೆ. ಪಶ್ಚಾತ್ತಾಪ ಇರಬಾರದು ಎಂದರೆ ಏನು ಮಾಡಬೇಕು? ಅರ್ಥಪೂರ್ಣವಾದಂಥ ಬದುಕನ್ನು ನಡೆಸಬೇಕು. ಅಂದರೆ ಪರೋಪಕಾರಿಗಳಾಗಬೇಕು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು, ಕುಟುಂಬ ವರ್ಗದವರಿಗೆ ನಿಷ್ಕಲ್ಮಶ ಪ್ರೀತಿಯನ್ನು ಧಾರೆಯೆರೆಯಬೇಕು. ಮನುಷ್ಯನಲ್ಲಿರುವ ಈ ಅಪರೂಪದ ಗುಣಗಳು ಅನ್ಯ ಪ್ರಾಣಿಗಳಲ್ಲಿಲ್ಲ. ಇದ್ದರೂ ಅದಕ್ಕೆ ಒಂದು ಮಿತಿಯಿರುತ್ತದೆ. ಇದರರ್ಥವಿಷ್ಟೆ. ಕೇವಲ "ತನಗಾಗಿ' ಬದುಕಿದ ಮನುಷ್ಯ ಮಾತ್ರ ಏಕಾಂಗಿಯಾಗಿ ನೋವನುಭವಿಸುತ್ತಾನೆ. ಅನ್ಯರಿಗಾಗಿ ಬದುಕಿದವ ಕೊನೆಗಾಲದಲ್ಲಿ ""ಅರ್ಥಪೂರ್ಣ ಜೀವನ ನಡೆಸುವುದಕ್ಕಾಗಿ ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದೆ, ಯಾರಿಗೂ ಅನ್ಯಾಯ ಮಾಡಲಿಲ್ಲ. ಜೀವನ ಅಂತ್ಯವಾಗುತ್ತಿದೆ ಎನ್ನುವುದಕ್ಕೆ ಬೇಸರವಿದೆಯಾದರೂ ಈ ಬದುಕಿನ ಬಗ್ಗೆ ಯಾವ ಪಶ್ಚಾತ್ತಾಪಗಳೂ ಇಲ್ಲ'' ಎಂಬ ಶಾಂತ ಚಿತ್ತದೊಂದಿಗೆ ಅಂತ್ಯವನ್ನು ಅಪ್ಪಿಕೊಳ್ಳುತ್ತಾನೆ. 

ನಾನೂ ನಿಮ್ಮಂತೆಯೇ ಒಬ್ಬ
ಸಂತೋಷದ ಸ್ಥಿತಿ ಎಂದರೆ ಮನಸ್ಸು ಕುಣಿದು ಕುಪ್ಪಳಿಸುವುದು ಎಂದರ್ಥವಲ್ಲ. ನನ್ನ ಪ್ರಕಾರ, ಸಂತೋಷ ಎಂದರೆ "ತೃಪ್ತಿ'ಯಿಂದ ಇರುವುದು. ನಾನು ಸಂತೋಷದಿಂದ ಇದ್ದೇನೆ. ನನ್ನಲ್ಲಿ ಸಂತಸ ಮೂಡಿಸುವ ಸಂಗತಿಯೇನು ಎಂದು ಕೆಲವರು ಕೇಳುತ್ತಾರೆ. ಮನಶಾÏಂತಿಯೇ ಸಂತಸದ ಮೂಲ ಎನ್ನುತ್ತೇನೆ. ಆದರೆ ಈ ಮನಶಾÏಂತಿಯು ದಯಾಮಯತೆ-ಸೌಹಾರ್ದತೆಯಿಂದ ಉಗಮವಾಗುತ್ತದೆ. ಎದುರಿನ ವ್ಯಕ್ತಿಗಳನ್ನು ಕಂಡು ಕರುಬುವುದು, ಅವರಿಗೆ ಕೆಡುಕನ್ನು ಬಯಸುವುದರಿಂದ ಮನಶಾÏಂತಿ ಹೇಗೆ ತಾನೇ ಬಂದೀತು?

ನಾನೆಂದಿಗೂ ನನ್ನನ್ನು ನಾನು "ವಿಶೇಷ ವ್ಯಕ್ತಿ' ಎಂದು ಭಾವಿಸಿಲ್ಲ. ನಾನು ನೊಬೆಲ್‌ ಪುರಸ್ಕೃತ ವ್ಯಕ್ತಿಯೆಂದೋ ಅಥವಾ ನಾನು "ಪರಮಪೂಜ್ಯ' ದಲೈ ಲಾಮಾ ಎಂದೂ ಅಂದುಕೊಳ್ಳುವುದಿಲ್ಲ. ನಾನು ವಿಶಿಷ್ಟ ವ್ಯಕ್ತಿ ಎಂದು ಯೋಚಿಸಿದರೆ ನನ್ನನ್ನು ನಾನೇ ಕೈದಿಯಾಗಿಸಿದಂತೆ. ನಾನು ಈ ಎಲ್ಲಾ ಸಂಗತಿಗಳನ್ನೂ ಮರೆತು ಮುನ್ನಡೆಯುತ್ತಿದ್ದೇನೆ. ಜಗತ್ತಿನಲ್ಲಿರುವ 700 ಕೋಟಿ ಜನರಲ್ಲಿ ನಾನೂ ಒಬ್ಬನಷ್ಟೆ. ನನ್ನ ದೇಹವೂ ಎಲ್ಲ ಮನುಷ್ಯರು ಎದುರಿಸುವ ಕಷ್ಟಗಳನ್ನೇ ಎದುರಿಸುತ್ತದೆ. 

ಖುಷಿಯಾಗಿರಲು ಏನು ಬೇಕು?
ನಾವೆಲ್ಲ ಮನಶಾಂತಿಯನ್ನೂ ಎಲ್ಲೋ ಹುಡುಕುತ್ತಿರುತ್ತೇವೆ. ಮನಶಾಂತಿ ಇರುವುದು ಮನಸ್ಸಿನಲ್ಲೇ ಅಲ್ಲವೇ? ಅದನ್ನು ನಾವು ಹುಡುಕಬೇಕಾದದ್ದು ಅಲ್ಲಿಯೇ ಹೊರತು, ಹೊರಗಿನ ಪ್ರಪಂಚದಲ್ಲಲ್ಲ. ಜೀವನಕ್ಕೊಂದು ಅರ್ಥಪೂರ್ಣ ಉದ್ದೇಶವಿದ್ದರೆ, ಆ ಉದ್ದೇಶ ಸಾಧನೆಗಾಗಿ ನೀವು ಶ್ರಮವಹಿಸುತ್ತಿದ್ದರೆ ನಿಮ್ಮ ಮನಸ್ಸು ಶಾಂತವಾಗುತ್ತದೆ. ಸಂತಸದ ಮೂಲವಿರುವುದು ನಮ್ಮೊಳಗೆ ಎಂದು ಆಗಲೇ ಹೇಳಿದೆನಲ್ಲವೇ? 

ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಸುತ್ತ ಇರುವವರೆಲ್ಲ "ಜೀವನ ಮೌಲ್ಯ'ಗಳ ಬಗ್ಗೆಯೇ ಮಾತನಾಡುತ್ತಿದ್ದರು. ಆದರೆ ಈಗ ಮನುಷ್ಯನ ಮಾತು ಎಲ್ಲೋ ತಿರುಗುತ್ತಿದೆ. ಬರೀ ನ್ಪೋರ್ಟ್ಸ್, ರಾಜಕಾರಣ, ಹಣದ ಸುತ್ತಲೇ ಜನರ ಮಾತು ಕೇಂದ್ರಿತವಾಗಿಬಿಟ್ಟಿದೆ. ಟೆಲಿವಿಷನ್‌, ಪತ್ರಿಕೆಗಳು ನಿಮಗೆ ಕಲಿಸುತ್ತಿರುವುದೇನು? ಯಾವ ವಸ್ತುವನ್ನು ಖರೀದಿಸಬೇಕು, ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ವಿಚಾರಗಳನ್ನಷ್ಟೇ. ನಮ್ಮ ಜಗತ್ತು ಇಂದು ಬರೀ ಜಾಹೀರಾತುಗಳಿಂದಲೇ ತುಂಬಿಹೋಗಿದೆ. ಯಾರೂ ಕೂಡ ಹೃದಯ ವೈಶಾಲ್ಯತೆಯ ಬಗ್ಗೆ, ಪರಹಿತ ಚಿಂತನೆಯ ಬಗ್ಗೆ, ಆತ್ಮ ವಿಶ್ಲೇಷಣೆಯ ಬಗ್ಗೆ ಮಾತನಾಡುತ್ತಲೇ ಇಲ್ಲ. 

ನಿಜ, ಜಗತ್ತಿನಲ್ಲಿಂದು ಅನೇಕ ಕೆಟ್ಟ ಘಟನೆಗಳು ನಡೆಯುತ್ತಿವೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಇದೆಲ್ಲದರ ನಡುವೆಯೇ ಅತ್ಯುತ್ತಮ ಸಂಗತಿಗಳೂ ಘಟಿಸುತ್ತಲಿವೆ. ನಾವು ಸರಿಯಾದ ದಿಕ್ಕಿನಲ್ಲಿ ನೋಡುತ್ತಿಲ್ಲವಷ್ಟೆ. ಇಂದು ನಮಗೆ ಎದುರಿನ ವ್ಯಕ್ತಿಯನ್ನು ನೋಡಿ ಅನುಮಾನ ಪಡುವುದನ್ನು, ಹೆದರುವುದನ್ನು ಹೇಳಿಕೊಡಲಾಗುತ್ತಿದೆ. ಇದರಿಂದಾಗಿ ಮನುಷ್ಯನ ಮೂಲಭೂತ ಅಂಶವಾದ ಮನಶಾಂತಿಗೆ ಹೊಡೆತ ಬೀಳುತ್ತಿದೆ. 

ನಾವೆಲ್ಲ ಸಂಘಜೀವಿಗಳು. ಸ್ನೇಹವೇ ನಮ್ಮ ಒಗ್ಗಟ್ಟಿನ ಮೂಲ ಬಿಂದು. ಆ ಸ್ನೇಹದ ಬುನಾದಿಯೇ ನಂಬಿಕೆ. ಭಯ, ಅನುಮಾನವಿರುವ ಜಾಗದಲ್ಲಿ ನಂಬಿಕೆ ಮತ್ತು ಸ್ನೇಹಕ್ಕೆ ಜಾಗ ಎಲ್ಲಿಂದ ಸಿಗಬೇಕು. ಸ್ನೇಹಕ್ಕೆ ಜಾಗವಿಲ್ಲ ಎಂದರೆ ಅರ್ಥವಾಯಿತಲ್ಲ? ಏಕಾಂಗಿಯಾಗಿ ಬದುಕುವುದು! 

ನಾನು ಗಮನಿಸಿದ್ದೇನೆ. ದೊಡ್ಡ ದೊಡ್ಡ ನಗರಗಳಲ್ಲಿ ಕೋಟ್ಯಂತರ ಜನ ವಾಸಿಸುತ್ತಿರುತ್ತಾರೆ. ಆದರೆ ಹತ್ತಿರದಲ್ಲಿದ್ದರೂ ಅವರೆಲ್ಲ ಪರಸ್ಪರರಿಗೆ ಬಹಳ ದೂರವಿರುತ್ತಾರೆ. ಎಲ್ಲರೂ ಬರೀ ತಮ್ಮ ತಮ್ಮ ಬಗ್ಗೆಯಷ್ಟೇ ಯೋಚಿಸುತ್ತಾರೆ. ಬದುಕು ಹೀಗೆ ಸ್ವಾರ್ಥಮಯವಾಗುತ್ತಾ ಹೋದರೆ ಪ್ರೀತಿ ಎಲ್ಲಿಂದ ಹುಟ್ಟಬೇಕು? ಇದರ ಜೊತೆಗೆ ಜನರ ನಡುವೆ ಅತಿ ಪೈಪೋಟಿ ಏರ್ಪಟ್ಟುಬಿಟ್ಟಿದೆ. ಒಬ್ಬರ ಬಗ್ಗೆ ಒಬ್ಬರು ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ನನ್ನ ಜೀವನ ಎದುರಿನವನಿಗಿಂತ ಉತ್ತಮವಾಗಿರಬೇಕು ಎಂದು ಎಲ್ಲರೂ ಓಡುತ್ತಲೇ ಇದ್ದಾರೆ. ಉತ್ತಮ ಜೀವನವೆಂದರೆ ಎದುರಿನ ವ್ಯಕ್ತಿಗಳಿಗಿಂತ ಹೆಚ್ಚು ಐಶ್ವರ್ಯವಿರುವುದು ಎಂದು ತಪ್ಪಾಗಿ ನಂಬಿದ್ದಾರೆ. 

ಹೊಟ್ಟೆಯಲ್ಲಿ ಉರಿಯಿದ್ದಾಗ ಮನಸ್ಸು ಶಾಂತವಾಗುವುದಕ್ಕೆ ಸಾಧ್ಯವೇನು? ಸಮಷ್ಟಿ ಪ್ರಜ್ಞೆಯೇ ಇಲ್ಲದ ಮೇಲೆ, ಏಕಾಂಗಿ ಭಾವ ಕಾಡುವುದು ಸಹಜ. ಹೀಗಾಗಿ, ನೋವು ಅಥವಾ ಏಕಾಂತ ಭಾವಕ್ಕೆ ಸುತ್ತಲಿನ ಪರಿಸರ ಕಾರಣವಲ್ಲ. ಆ ಪರಿಸರವನ್ನು ನಾವು ಗ್ರಹಿಸುವ ರೀತಿಯೇ ಕಾರಣ.  ಅಂದರೆ ನಮ್ಮ ಮನಸ್ಸೇ ಎಲ್ಲದಕ್ಕೂ ಮೂಲ ಎಂದಾಯಿತು. 

ಇಷ್ಟು ಅಮೂಲ್ಯ ಜೀವನ ಗದ್ದಲದಲ್ಲಿ ಕಳೆದುಹೋಗಬಾರದು. ಬದಲಾಗುವುದಕ್ಕೆ ಕಾಲ ಇನ್ನೂ ಮಿಂಚಿಲ್ಲ. ಈಗಲೇ, ಈ ಕ್ಷಣದಲ್ಲಿ ಹೀಗೆ ಪ್ರಮಾಣ ಮಾಡಿ: ""ನಾನು ಹೊಸ ವ್ಯಕ್ತಿಯಾಗಿ ಬದುಕುತ್ತೇನೆ. ಜೀವನವನ್ನು ಹೆಚ್ಚು ಆಳವಾಗಿ ಅರ್ಥ ಮಾಡಿಕೊಳ್ಳುತ್ತೇನೆ''. 

ಮನಸ್ಸು ಬದಲಾದರೆ ನಮ್ಮ ಜಗತ್ತೂ ಬದಲಾಗುತ್ತದೆ!

- ದಲೈ ಲಾಮಾ ಬೌದ್ಧ ಧರ್ಮಗುರು
 

ಇಂದು ಹೆಚ್ಚು ಓದಿದ್ದು

ಧಾರವಾಡ: ನಗರದ ಬಿಬಿಎ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಆರ್‌.ಆರ್‌. ಬಿರಾದಾರ ಮಾತನಾಡಿದರು.

Dec 12, 2018 05:26pm

Trending videos

Back to Top