CONNECT WITH US  

ಡೈಲಾಗ್‌ಗಳ ಹಿರಿಯಣ್ಣ ಮಾಸ್ಟರ್‌ ಹಿರಣ್ಣಯ್ಯ !

ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೆಲವು ದಿಗ್ಗಜರಲ್ಲಿ ಮಾಸ್ಟರ್‌ ಹಿರಣ್ಣಯ್ಯ ಅವರ ಹೆಸರು ಅಗ್ರ ಪಂಕ್ತಿಯದ್ದು. ತನ್ನ  ಅಭಿನಯ , ಖಡಕ್‌ ಡೈಲಾಗ್‌ಗಳ ಮೂಲಕ ವಿಡಂಬನಾತ್ಮಕವಾಗಿ ಎಷ್ಟೇ ಪ್ರಭಾವಿಗೂ ನೇರವಾಗಿ ರಾಜಿಯಿಲ್ಲದೆ ಟಾಂಗ್‌ ಕೊಡುವ ಸಾಹಸ ಮಾಡಿದ ಬಣ್ಣದ ಬದುಕಿನ ಬೆರಳೆಣಿಕೆಯ ಕಲಾವಿದರ ಪೈಕಿ ಮಾಸ್ಟರ್‌ ಹಿರಣ್ಣಯ್ಯ ಓರ್ವರು. 

ಮಾಸ್ಟರ್‌ ಹಿರಣ್ಣಯ್ಯ ಬಣ್ಣದ ಲೋಕದಲ್ಲೇ ಜನ್ಮವೆತ್ತಿದ ಅದ್ಭುತ ಕಲಾವಿದ. ಮೈಸೂರಿನ ಕಲ್‌ಚರ್ಡ್‌ ಕಾಮೆಡಿಯನ್‌ ಎಂದು ಆ ಕಾಲದಲ್ಲಿ ಪ್ರಖ್ಯಾತವೆತ್ತಿದ ಕೆ.ಹಿರಣ್ಣಯ್ಯ ಮತ್ತು ಶಾರದಮ್ಮ  ದಂಪತಿಗಳ ಏಕೈಕ ಪುತ್ರನಾಗಿ  ಫೆಬ್ರವರಿ 15, 1934ರಲ್ಲಿ ಜನಿಸಿದ ನರಸಿಂಹ ಮೂರ್ತಿ ಬಣ್ಣದ ಲೋಕದಲ್ಲಿ ಖ್ಯಾತವಾಗಿದ್ದು ಮಾತ್ರ ತಂದೆಯ ಹೆಸರಲ್ಲಿ ಮಾಸ್ಟರ್‌ ಸೇರಿಸಿಕೊಂಡು. 

ಬದುಕಿನ ಜಂಜಾಟದಲ್ಲಿ  ಹಿರಣ್ಣಯ್ಯ ಕುಟುಂಬ ಮದ್ರಾಸ್‌ನಲ್ಲಿ ನೆಲೆಸಿತ್ತು. ಅಲ್ಲಿ ತಮಿಳು , ತೆಲುಗು ಮತ್ತು ಇಂಗ್ಲಿಷ್‌ ಭಾಷೆಯನ್ನು ಮಾಸ್ಟರ್‌ ಹಿರಣ್ಣಯ್ಯ ನವರು ಕಲಿತುಕೊಂಡು ಬಹುಭಾಷೆಯನ್ನೂ ಬಲ್ಲವರಾದರು. 

ರಕ್ತಗತವಾಗಿಯೇ ಕಲೆಯ ಗೀಳು ಹೊಂದಿದ್ದ ಹಿರಣ್ಣಯ್ಯ ತಂದೆ ನಿರ್ದೇಶಿಸಿದ ವಾಣಿ ಚಿತ್ರದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು. ನಂತರ ನೂರಾರು ನಾಟಕ ಗಳನ್ನು ರಚಿಸಿ , ನಿರ್ದೇಶಿಸಿ, ನಟಿಸಿ ಲೋಕಖ್ಯಾತಿ ಪಡೆದರು. 

ಡೈಲಾಗ್‌ಗಳ ದಾಳಿ!
ಪಕ್ಷಾತೀತವಾಗಿ , ಜಾತ್ಯತೀತವಾಗಿ ತಮ್ಮ ನಾಟಕಗಳ ಪಾತ್ರಗಳ ಮೂಲಕ ರಾಜಕಾರಣಿಗಳನ್ನು ತೀವ್ರವಾಗಿ ಲೇವಡಿ ಮಾಡುವ ಮೂಲಕ ಜನರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಆ ಕಾಲದಲ್ಲಿ  ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿಯೂ ಬಂದು ಹತ್ತಾರು ಬಾರಿ ಕೋರ್ಟ್‌ ಮೆಟ್ಟಿಲನ್ನೂ ಹಿರಣ್ಣಯ್ಯ ಏರಿದ್ದರು. ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ತನ್ನ ನೈಜ ಕಲಾ ಸೇವೆಯ ಫ‌ಲವಾಗಿ ಗೆಲುವನ್ನೂ ಕಂಡುಕೊಂಡು ನಿಜಾರ್ಥದಲ್ಲಿ ಹಿರಿಯಣ್ಣ ಎನಿಸಿಕೊಂಡ ಸಾಹಸಿಯೂ ಇವರು.

ಕಂಚಿನ ಕಂಠ ಹೊಂದಿದ್ದ ಅವರ ಸುಸ್ಪಷ್ಟ ,ಅರ್ಥಪೂರ್ಣ ಡೈಲಾಗ್‌ಗಳಿಗೆ ಆ ಕಾಲದ ಅಭಿಮಾನಿಗಳು ಕಾದು ನಿಲ್ಲುತ್ತಿದ್ದರು. ಹಾಸ್ಯದ ಮಿಶ್ರಣದೊಂದಿಗೆ ವಿಡಂಬನಾತ್ಮಕವಾಗಿ ಅವರು ಪಾತ್ರ ಪೋಷಿಸುತ್ತಿದ್ದುದು ಅವರ ಜನಪ್ರಿಯತೆಗೆ ಕಾರಣವಾಯಿತು. ಸಾಮಾಜಿಕವಾಗಿ ಅಂಕು ಡೊಂಕುಗಳನ್ನು ಮುಚ್ಚು ಮರೆ ಇಲ್ಲದೆ ರಂಗದ ಮೇಲೆ ಪಾತ್ರವಾಗಿ ಚೆಲ್ಲುತ್ತಿದ್ದ ಹಿರಣ್ಣಯ್ಯ ಬಹುಬೇಡಿಕೆಯ ಕಲಾವಿದರಾಗಿದ್ದರು. 

ತಂದೆಯ ನಿಧನಾ ನಂತರ ಕಲಾ ಪರಂಪರೆ ಬೆಳಗಿದ ಮಾಸ್ಟರ್‌ ಅವರು ಕೆ ಹಿರಣ್ಣಯ್ಯ ಮಿತ್ರ ಮಂಡಳಿಯನ್ನು ಯಶಸ್ವಿಯಾಗಿ ಮುನ್ನೆಡೆಸಿ ನಾಡಿನಾದ್ಯಂತ ಸಂಚರಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. 

ಲಂಚಾವತಾರ ನಿತ್ಯ ನಿರಂತರ 
ಕನ್ನಡದ ನಾಟಕಗಳ ಇತಿಹಾಸದಲ್ಲೇ ಇಂದಿಗೂ ನೆನಪಿರುವ ನಾಟಕ ಲಂಚಾವತಾರ. ಜನ ಮುಗಿ ಬಿದ್ದು ನೋಡಿದ ಆ ನಾಟಕವನ್ನು ಬರೆದು, ನಿರ್ದೇಶಿಸಿ ನಟಿಸಿ ಹೊಸ ಇತಿಹಾಸ ನಿರ್ಮಿಸಿದ್ದು ಇಂದಿಗೂ ದಾಖಲೆ. ನಾಟಕ 10 ಸಾವಿರಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಿರುವುದು ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಟೈಟಲ್ಲೇ ಅತ್ಯಾಕರ್ಷಕ
ಹಿರಣ್ಣಯ್ಯ ಅವರು ತಮ್ಮ ನಾಟಕಗಳ ಹೆಸರಿನಲ್ಲೆ ಜನರನ್ನು ಸೆಳೆಯುತ್ತಿದ್ದರು. 
ಮಕ್ಮಲ್‌ ಟೋಪಿ , ಕಪಿಮುಷ್ಠಿ, ನಡುಬೀದಿ ನಾರಾಯಣ, ದೇವದಾಸಿ, ಪಶ್ಚಾತ್ತಾಪ, ಚಪಲಾವತಾರ, ಡಬ್ಬಲ್‌ ತಾಳಿ, ಲಾಟರಿ ಸರ್ಕಾರ , ಸನ್ಯಾಸಿ ಸಂಸಾರ, ಸದಾರಮೆ  , ಎಚ್ಚಮ ನಾಯಕ ಪ್ರಖ್ಯಾತ ನಾಟಕಗಳು. 

ದೇವದಾಸಿ ನಾಟಕ ಚಲನಚಿತ್ರವಾಗಿದ್ದು ಅಲ್ಲಿಯೂ ಹಿರಣ್ಣಯ್ಯ ಬಣ್ಣ ಹಚ್ಚಿ ದ್ದರು. ಕೆಲ ಧಾರಾವಾಹಿಗಳು, ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಹಿರಣ್ಣಯ್ಯ ಎಂದಿಗೂ ತಮ್ಮತನ ಬಿಟ್ಟು ಕೊಡಲಿಲ್ಲ. 

ಮೈಸೂರು ಮಹಾರಾಜರಿಂದ ನಟ ರತ್ನಾಕರ ಎಂಬ ಬಿರುದಿಗೆ ಪಾತ್ರರಾಗಿರುವ ಹಿರಣ್ಣಯ್ಯ ನಿಜವಾಗಿಯೂ ಬಿರುದು ಪಡೆಯಲು ಅರ್ಹರು. ನಾಡಿನಾದ್ಯಂತ ನೂರಾರು ಸನ್ಮಾನಗಳು, ಸರ್ಕಾರವ ವತಿಯಿಂದ ನೀಡಲಾಗುವ ಹಲವು ಪ್ರಶಸ್ತಿಗಳು ಅರ್ಹವಾಗಿಯೇ ಸಂದಿವೆ. 

ಸದಾ ನೇರ ನುಡಿಗಳಿಂದ, ಇದ್ದದ್ದನ್ನು ಇದ್ದ ಹಾಗೆ ನಿರ್ಭೀತಿಯಿಂದ ಕಲಾ ಯಾಗ ಸಾಗಿಸಿರುವ ಹಿರಣ್ಣಯ್ಯ ಅವರಿಗೀಗ 83ರ ಇಳಿ ವಯಸ್ಸಿನಲ್ಲಿ ಉತ್ಸಾಹಿಯಾಗಿದ್ದಾರೆ. ಅವರು ಇನ್ನಷ್ಟು ಕಾಲ ಉತ್ತಮ ಆರೋಗ್ಯದೊಂದಿಗೆ ನಮ್ಮೊಡನಿದ್ದು ಮಾರ್ಗದರ್ಶನ ನೀಡಲಿ ಎನ್ನುವುದು ಆಶಯ.
 

Trending videos

Back to Top